varthabharthi

ಸಂಪಾದಕೀಯ

ಸರಕಾರಿ ಕನ್ನಡ ಶಾಲೆಗಳನ್ನು ಕಾಪಾಡಿ

ವಾರ್ತಾ ಭಾರತಿ : 26 Sep, 2017

ಈ ನೆಲದ ಭಾಷೆ ಕನ್ನಡವನ್ನು ಉಳಿಸಿಕೊಳ್ಳಲು ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿ ದ್ದಾಗ ಕನ್ನಡ ಕಾವಲು ಸಮಿತಿಯನ್ನು ರಚಿಸಿದ್ದರು. ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಈ ಕಾವಲು ಸಮಿತಿಯ ಮೊದಲ ಅಧ್ಯಕ್ಷರಾಗಿದ್ದರು. ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಾ ಕೆಲ ಸಮಯ ಈ ಕಾವಲು ಸಮಿತಿಯ ಸಾರಥ್ಯವನ್ನು ವಹಿಸಿಕೊಂಡಿದ್ದರು. ಕನ್ನಡ ಕಾವಲು ಸಮಿತಿ ಬಳಿಕ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಎಂದು ಮರು ನಾಮಕರಣಗೊಂಡಿತು. ಈಗ ಈ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಅಧ್ಯಕ್ಷರಾಗಿದ್ದಾರೆ.

ಸಿದ್ದರಾಮಯ್ಯ ಅಧ್ಯಕ್ಷರಾಗಿರುವ ಅಭಿವೃದ್ಧಿ ಪ್ರಾಧಿಕಾರ ಇತ್ತೀಚೆಗೆ ಸರಕಾರಕ್ಕೆ ವರದಿಯೊಂದನ್ನು ನೀಡಿ ರಾಜ್ಯದಲ್ಲಿ 2010ರಿಂದ 2013ರವರೆಗಿನ ಕಾಲಾವಧಿಯಲ್ಲಿ 1,782 ಸರಕಾರಿ ಶಾಲೆಗಳಿಗೆ ಬೀಗ ಹಾಕಲಾಗಿದೆ ಎಂದು ತಿಳಿಸಿದೆ. ಇದೇ ಸಮಯದಲ್ಲಿ ರಾಜ್ಯದಲ್ಲಿ 3,186 ಖಾಸಗಿ ಶಾಲೆಗಳು ಆರಂಭವಾಗಿವೆ ಎಂದು ಕನ್ನಡ ಅಭಿವೃದ್ಧಿಪ್ರಾಧಿಕಾರ ಸರಕಾರಕ್ಕೆ ನೀಡಿದ ವರದಿಯಲ್ಲಿ ತಿಳಿಸಿದೆ. ಸರಕಾರಿ ಶಾಲೆಗಳ ಸಬಲೀಕರಣಕ್ಕಾಗಿ 21 ಶಿಫಾರಸುಗಳನ್ನು ಅದು ಮಾಡಿದೆ. ರಾಜ್ಯದಲ್ಲಿ ಕ್ಷೀಣಿಸುತ್ತಿರುವ ಕನ್ನಡದ ಪ್ರಭಾವವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಡುತ್ತಿರುವ ಪ್ರಯತ್ನ ಸ್ವಾಗತಾರ್ಹವಾಗಿದೆ. ಈ ಹಿಂದೆ ಕಾವಲು ಸಮಿತಿಗೆ ಪಾಟೀಲ ಪುಟ್ಟಪ್ಪನವರು ಅಧ್ಯಕ್ಷರಾಗಿದ್ದಾಗ ವಿಧಾನಸೌಧದಲ್ಲಿ ಐಎಎಸ್ ಅಧಿಕಾರಿಗಳ ಸಭೆ ಕರೆದು ಕನ್ನಡ ಭಾಷೆಯ ಬಗ್ಗೆ ಪಾಠ ಮಾಡುತ್ತಿದ್ದರು.

ಕನ್ನಡ ಬಾರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಆನಂತರ ಚಂದ್ರಶೇಖರ ಪಾಟೀಲ, ಬರಗೂರು ರಾಮಚಂದ್ರಪ್ಪ, ಮುಖ್ಯಮಂತ್ರಿ ಚಂದ್ರು ಅಧ್ಯಕ್ಷರಾಗಿದ್ದಾಗಲೂ ಕನ್ನಡದ ಪರವಾಗಿ ಸಾಕಷ್ಟು ಕೆಲಸಗಳಾದವು. ಈಗಿನ ಅಧ್ಯಕ್ಷ ಎಸ್.ಜಿ. ಸಿದ್ದರಾಮಯ್ಯನವರು ಸಮಾಜವಾದಿ ಹಿನ್ನೆಲೆಯಿಂದ ಬಂದವರು. ಅವರಿಗೆ ಜನಭಾಷೆಯ ಬಗ್ಗೆ ಕಾಳಜಿ ಇದೆ. ಅಂತಲೇ ಕನ್ನಡ ಭಾಷೆಯನ್ನು ಕಾಪಾಡುವ ನಿಟ್ಟಿನಲ್ಲಿ ಅತ್ಯಂತ ಮಹತ್ವವಾದ ಶಿಫಾರಸುಗಳನ್ನು ಅವರು ಸರಕಾರಕ್ಕೆ ನೀಡಿದ್ದಾರೆ. ರಾಜ್ಯದಲ್ಲಿ ಶಿಕ್ಷಣ ಹಕ್ಕು ಕಾಯ್ದೆ ಜಾರಿಯಾಗಿ ಏಳು ವರ್ಷ ಗತಿಸಿದೆ. ಆದರೂ ಸರಕಾರಿ ಶಾಲೆ ಗಳ ಸ್ಥಿತಿಗತಿ ಸುಧಾರಣೆಯಾಗಿಲ್ಲ. ವಿದ್ಯಾರ್ಥಿಗಳ ಕೊರತೆಯ ನೆಪ ಮುಂದೆ ಮಾಡಿಕೊಂಡು ಕನ್ನಡ ಶಾಲೆಗಳನ್ನು ಮುಚ್ಚಲಾಗುತ್ತಿದೆ.

ಅಷ್ಟೇ ಅಲ್ಲದೇ, ಕೆಲ ಶಾಲೆಗಳನ್ನು ಅಕ್ಕಪಕ್ಕದ ಶಾಲೆಗಳೊಂದಿಗೆ ವಿಲೀನ ಗೊಳಿಸಲಾಗುತ್ತಿದೆ. ಈ ಬಗ್ಗೆ ವಿವರವಾಗಿ ಅಧ್ಯಯನ ನಡೆಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಮಿತಿ ಕನ್ನಡ ಶಾಲೆಗಳ ಬಗ್ಗೆ ಆಕರ್ಷಣೆ ಕಡಿಮೆಯಾಗಲು ಕಾರಣ ಏನೆಂದು ವಿವರಿಸಿದೆ. ಈ ವರದಿಯ ಪ್ರಕಾರ ಸರಕಾರಿ ಶಾಲೆಗಳಲ್ಲಿ ಶಿಥಿಲಗೊಂಡ ಕೊಠಡಿಗಳ ಸಂಖ್ಯೆ ಈ ಏಳು ವರ್ಷಗಳಲ್ಲಿ 63,415ರಿಂದ 73,129ಕ್ಕೆ ಏರಿಕೆಯಾಗಿದೆ. ಶೌಚಾಲಯ, ಗ್ರಂಥಾಲಯ, ಪ್ರಯೋಗಾಲಯ ಮುಂತಾದವುಗಳ ಕೊರತೆ ಯಿಂದಾಗಿ ಸರಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಲು ಪಾಲಕರು ಹಿಂಜರಿಯುತ್ತಿದ್ದಾರೆ. ಅದಕ್ಕಾಗಿ ಈ ಶಾಲೆಗಳನ್ನು ಪುನಶ್ಚೇತನಗೊಳಿಸುವುದು ಅಗತ್ಯವಾಗಿದೆ. ಆದರೆ, ಅದರ ಬದಲಾಗಿ ಸರಕಾರ ಈ ಶಾಲೆಗಳನ್ನು ಖಾಸಗಿಯವರಿಗೆ ಇಲ್ಲವೇ ಬೇರೆ ಇಲಾಖೆಗಳಿಗೆ ಪರಭಾರೆ ಮಾಡುವ ಯತ್ನ ನಡೆಸಿದೆ. ಅಲ್ಲಿ ಇರುವ ಶಿಕ್ಷಕರ ಹುದ್ದೆಗಳನ್ನು ತುಂಬುತ್ತಿಲ್ಲ. ಅಗತ್ಯವಾದ ಮೂಲಸೌಕರ್ಯಗಳನ್ನು ಒದಗಿಸುತ್ತಿಲ್ಲ ಎಂದು ಈ ಸಮಿತಿ ಆಕ್ಷೇಪಿಸಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರಕಾರಕ್ಕೆ ನೀಡಿರುವ ಶಿಫಾರಸುಗಳಲ್ಲಿ ಎಲ್ಲಕ್ಕಿಂತ ಮುಖ್ಯವಾದುದು ಸರಕಾರಿ ಶಾಲೆಗಳ ಸಬಲೀಕರಣ. ಇದು ಆಗಬೇಕಾದರೆ ಎಲ್ಲ ಜನಪ್ರತಿನಿಧಿಗಳು ಮತ್ತು ಸರಕಾರಿ ಅಧಿಕಾರಿಗಳು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರಕಾರಿ ಶಾಲೆಗೆ ಸೇರಿಸಬೇಕು. ಅದಕ್ಕಾಗಿ ಸರಕಾರ ಸುಗ್ರೀವಾಜ್ಞೆಯನ್ನು ಹೊರಡಿಸಬೇಕೆಂದು ಅಭಿವೃದ್ಧಿ ಪ್ರಾಧಿಕಾರ ಒತ್ತಾಯಿಸಿದೆ. ಆದರೆ, ಇದು ಅಂದುಕೊಂಡಷ್ಟು ಸುಲಭವಲ್ಲ. ಜನಪ್ರತಿನಿಧಿಗಳು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸುವುದು ದೂರದ ಮಾತು. ಅದಕ್ಕೆ ವ್ಯತಿರಿಕ್ತವಾಗಿ ಬಹುತೇಕ ಜನಪ್ರತಿನಿಧಿಗಳು ತಮ್ಮ ಜಿಲ್ಲೆಗಳಲ್ಲಿ ಮತ್ತು ಅಕ್ಕಪಕ್ಕದ ಜಿಲ್ಲೆಗಳಲ್ಲಿ ತಮ್ಮದೇ ಖಾಸಗಿ ಶಾಲೆ, ಕಾಲೇಜುಗಳನ್ನು ಸ್ಥಾಪಿಸಿಕೊಂಡಿದ್ದಾರೆ.

ಬಹುತೇಕ ಶಾಸಕರು ಆರಂಭಿಸಿರುವ ಈ ಖಾಸಗಿ ಶಾಲೆಗಳ ಪೈಪೋಟಿಯಿಂದಾಗಿ ಸರಕಾರಿ ಶಾಲೆಗಳು ಮುಚ್ಚಿಹೋಗುತ್ತಿವೆ. ಈ ರಾಜ್ಯದ ಬಹುತೇಕ ಶಾಸಕರು ತಮ್ಮ ಹೆಸರಿನಲ್ಲಿ ಅಲ್ಲದಿದ್ದರೂ ತಮ್ಮ ಹೆಂಡತಿ, ಮಕ್ಕಳ ಹೆಸರಿನಲ್ಲಿ ಬೇನಾಮಿ ಶಾಲೆ-ಕಾಲೇಜುಗಳನ್ನು ನಡೆಸುತ್ತಿದ್ದಾರೆ. ಇನ್ನು ಹಲವರು ಸಾರ್ವಜನಿಕ ಟ್ರಸ್ಟ್‌ಗಳನ್ನು ಮಾಡಿಕೊಂಡು ಅದಕ್ಕೆ ತಾವೇ ಅಧ್ಯಕ್ಷರಾಗಿ ಡಿಗ್ರಿ ಕಾಲೇಜುಗಳನ್ನು ಮಾತ್ರವಲ್ಲ, ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜುಗಳನ್ನೂ ನಡೆಸುತ್ತಿದ್ದಾರೆ. ಗ್ರಾಮಾಂತರ ಪ್ರದೇಶಗಳಲ್ಲೂ ಪ್ರಾಥಮಿಕ ಹಂತದಿಂದ ಸರಕಾರಿ ಶಾಲೆಗಳು ಈ ಪೈಪೋಟಿಯನ್ನು ಎದುರಿಸಬೇಕಾಗಿದೆ. ಸರಕಾರದ ಹೊಣೆ ಹೊತ್ತವರೇ ಪರೋಕ್ಷವಾಗಿ ಸರಕಾರಿ ಶಾಲೆಗಳು ಮುಚ್ಚಿಹೋಗಲು ಕಾರಣರಾಗುತ್ತಿದ್ದಾರೆ. ಇಂತಹವರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸುತ್ತಾರೆ ಎಂದು ನಿರೀಕ್ಷಿಸುವುದರಲ್ಲಿ ಅರ್ಥವಿಲ್ಲ.

ದೇಶದಲ್ಲಿ ಜಾಗತೀಕರಣ ಪ್ರವೇಶವಾದ ಆನಂತರ ಶಿಕ್ಷಣ ಎಂಬುದು ಹಣಗಳಿಸುವ ವ್ಯಾಪಾರವಾಗಿದೆ. ವ್ಯಾಪಾರದಲ್ಲಿ ಬಂಡವಾಳ ಹೂಡಿಕೆ ಮಾಡಿ ಲಾಭ ಗಳಿಸುವಂತೆ ಶಾಲೆ-ಕಾಲೇಜುಗಳನ್ನು ಆರಂಭಿಸಿ ದುಡ್ಡು ಮಾಡುವ ದಂಧೆ ರಾಜ್ಯದಲ್ಲಿ ವ್ಯಾಪಕವಾಗಿ ನಡೆದಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರಕಾರಕ್ಕೆ ನೀಡಿರುವ ಶಿಫಾರಸುಗಳಲ್ಲಿ ಕೆಲ ಶಿಫಾರಸುಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಜನಪ್ರತಿನಿಧಿಗಳು ಮತ್ತು ಸರಕಾರಿ ಅಧಿಕಾರಿಗಳು ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಸೇರಿಸುವುದನ್ನು ಕಡ್ಡಾಯ ಮಾಡಬೇಕಾಗಿದೆ. ಎರಡನೆಯದಾಗಿ ಆರ್‌ಟಿಇ ಕಾಯ್ದೆ ಯನ್ವಯ ಬಡವರ ಮಕ್ಕಳನ್ನು ಸೇರಿಸಿಕೊಳ್ಳಲು ಸರಕಾರವೂ ಖಾಸಗಿ ಶಾಲೆಗಳಿಗೆ ಹಣಕಾಸಿನ ನೆರವನ್ನು ನೀಡುವ ಬದಲು ಅದೇ ಹಣವನ್ನು ಸರಕಾರಿ ಶಾಲೆಗಳ ಅಭಿವೃದ್ಧಿಗೆ ಉಪಯೋಗಿಸಬೇಕಾಗಿದೆ. ಅಷ್ಟೇ ಅಲ್ಲದೇ, ಶಾಲಾ ಶಿಕ್ಷಕರಿಗೆ ಪಾಠ ಮಾಡುವ ಕೆಲಸ ಬಿಟ್ಟು ಬೇರೆ ಯಾವ ಕೆಲಸವನ್ನೂ ವಹಿಸಬಾರದು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಈ ಶಿಫಾರಸುಗಳನ್ನು ಜಾರಿಗೆ ತರುವಂತೆ ಸರಕಾರದ ಮೇಲೆ ಒತ್ತಡ ತರಲು ಕನ್ನಡ ಪರ ಸಂಘಟನೆಗಳು ಹೋರಾಟಕ್ಕೆ ಇಳಿಯಬೇಕಾಗಿದೆ. ಈ ರಾಜ್ಯದಲ್ಲಿ ಉಳ್ಳವರಿಗಾಗಿ ಖಾಸಗಿ ಶಾಲೆ ಬಡವರ ಮಕ್ಕಳಿಗಾಗಿ ಸರಕಾರಿ ಶಾಲೆ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಆರ್‌ಟಿಇ ಕಾಯ್ದೆ ಮೂಲಕ ಈ ಕಂದಕವನ್ನು ನಿವಾರಿಸಲು ಸರಕಾರ ಯತ್ನಿಸುತ್ತಿದೆ. ಖಾಸಗಿ ಶಾಲೆಗಳಲ್ಲಿ ಶೇ.25ರಷ್ಟು ಸೀಟುಗಳನ್ನು ಬಡವರ ಮಕ್ಕಳಿಗೆ ನೀಡಬೇಕೆಂದು ಕಡ್ಡಾಯ ಮಾಡಿ ಕಾನೂನಿಗೆ ತಿದ್ದುಪಡಿ ತರಲಾಗಿದೆ. ಈ ಕಾನೂನಿನನ್ವಯ ಸರಕಾರ ಮೊದಲ ವರ್ಷವೇ 380 ಕೋಟಿ ರೂ. ಖರ್ಚು ಮಾಡಿದೆ. ಪ್ರತೀ ವರ್ಷ ಈ ಪ್ರಮಾಣ ಹೆಚ್ಚುತ್ತಲೇ ಇದೆ. ಇಷ್ಟೊಂದು ದೊಡ್ಡ ಪ್ರಮಾಣದ ಹಣವನ್ನು ಖಾಸಗಿ ಶಾಲೆಗಳಿಗೆ ನೀಡುವ ಬದಲಾಗಿ ಸರಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಇದನ್ನು ವಿನಿಯೋಗಿಸ ಬೇಕಾಗಿದೆ.

ಸರಕಾರಿ ಶಾಲೆಗಳಲ್ಲೂ ಕೂಡಾ ಖಾಸಗಿ ಶಾಲೆಗಳಷ್ಟೇ ಉತ್ತಮ ಶಿಕ್ಷಣ ದೊರಕುತ್ತದೆ ಎಂದು ಜನರಲ್ಲಿ ನಂಬಿಕೆ ಹುಟ್ಟಿಸಬೇಕಾಗಿದೆ. ಅತ್ಯುತ್ತಮ ಕಟ್ಟಡ, ಶೌಚಾಲಯ, ಪ್ರಯೋಗಾಲಯ, ಗ್ರಂಥಾಲಯ ಮತ್ತಿತರ ಸೌಕರ್ಯಗಳನ್ನು ಸರಕಾರಿ ಶಾಲೆಗಳಿಗೆ ಒದಗಿಸಿದರೆ ಯಾವ ಪೋಷಕರೂ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುವುದಿಲ್ಲ. ರಾಜ್ಯದಲ್ಲಿ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ಅತ್ಯುತ್ತಮ ವಾದ ಕೆಲ ಸರಕಾರಿ ಶಾಲೆಗಳೂ ಇವೆ. ಅಂತಹ ಕಡೆಗಳಲ್ಲಿ ಪಾಲಕರು ಸ್ವ ಇಚ್ಛೆಯಿಂದಲೇ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕಳುಹಿಸಿಕೊಡುತ್ತಾರೆ. ಆದರೆ, ಅಂತಹ ಶಾಲೆಗಳ ಸಂಖ್ಯೆ ತುಂಬಾ ಕಡಿಮೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರಕಾರಕ್ಕೆ ನೀಡಿದ ಸಲಹೆಯಂತೆ ಆರ್‌ಟಿಇ ಕಾಯ್ದೆಯ ಮೂಲಕ ಖಾಸಗಿ ಶಾಲೆಗಳಿಗೆ ಸರಕಾರದ ಹಣ ಒದಗಿಸುವ ಬದಲಾಗಿ ಈಗ ಅಸ್ತಿತ್ವದಲ್ಲಿರುವ ಸರಕಾರಿ ಕನ್ನಡ ಶಾಲೆಗಳನ್ನು ಅಭಿವೃದ್ಧಿ ಪಡಿಸುವುದು ಅಗತ್ಯವಾಗಿದೆ. ಬಹುತೇಕ ಕಡೆ ಕನ್ನಡ ಶಾಲೆಗಳು ಸ್ವಂತದ ನಿವೇಶನ ಗಳನ್ನು ಹೊಂದಿವೆ. ಅದಕ್ಕೆ ಸರಕಾರದ ಒಂದಿಷ್ಟು ನೆರವು ಸಿಕ್ಕರೆ ಅವುಗಳನ್ನು ಖಾಸಗಿ ಶಾಲೆಗಳಿಗೆ ಸಮಾನವಾಗಿ ಅಭಿವೃದ್ಧಿ ಪಡಿಸಬಹುದು. ಇದರ ಜೊತೆಗೆ ಸರಕಾರಿ ಶಾಲೆಗಳಲ್ಲಿರುವ ಶಿಕ್ಷಕರ ಕೊರತೆಯನ್ನು ನಿವಾರಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಶಿಫಾರಸನ್ನು ರಾಜ್ಯಸರಕಾರ ಗಂಭೀರವಾಗಿ ಪರಿಗಣಿಸಿ ಅವುಗಳ ಜಾರಿಗೆ ಕ್ರಮ ಕೈಗೊಳ್ಳಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)