varthabharthi

ಅನುಗಾಲ

ವಿ.ಸೀ. ಅವರ ಶಬರಿ

ವಾರ್ತಾ ಭಾರತಿ : 28 Sep, 2017
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಕವಿತೆಯ ಮುಖ್ಯ ಧ್ವನಿಯಿರುವುದು ಅಳಿಯದ ಸೋಲದ ಭರವಸೆಯನ್ನು ಶಬರಿ ಮತ್ತು ಕಾಡಿನ ಬಡಜನ ಉಳಿಸಿಕೊಂಡಿದ್ದಾರೆಂಬುದರಲ್ಲಿ. ಬೆಕೆಟ್ ಬರೆದ ‘ವೈಟಿಂಗ್ ಫಾರ್ ಗೋಡೋ’ ನಾಟಕದ ಪಾತ್ರ ಗಳಂತೆ ಕಾಯುವಿಕೆ ಇಲ್ಲಿದೆ. ಇಲ್ಲಿನ ಕಾಯುವಿಕೆ ಭಾವುಕ; ಶ್ರದ್ಧಾಭಕ್ತಿಯ ಸಂಯೋಗದಿಂದ ಕೂಡಿದ್ದು.


ವಿ.ಸೀ.. ಎಂದು ಖ್ಯಾತರಾಗಿರುವ ದಿವಂಗತ ವಿ. ಸೀತಾರಾಮಯ್ಯನವರು ಕನ್ನಡದ ಹಿರಿಯ ಸಾಹಿತಿಗಳು ಮತ್ತು ವಿದ್ವಾಂಸರು. ಅಕ್ಟೋಬರ್ 2 ಬಂತೆಂದರೆ ಗಾಂಧಿ, ಲಾಲ್ ಬಹದೂರ್ ಶಾಸ್ತ್ರಿಯವರ ಜಯಂತಿಯಂತೆಯೇ ವಿ.ಸೀ. ಅವರ ಹುಟ್ಟುಹಬ್ಬವೂ (ಜನ್ಮ ದಿನಾಂಕ: 02.10.1899) ಹೌದು. ಅವರನ್ನು ಸಾಹಿತ್ಯದ ಯಾವ ಪ್ರಕಾರದಲ್ಲಿ ಸ್ಥಿತಗೊಳಿಸುವುದು ಎಂಬುದು ಒಂದು ಸಮಸ್ಯೆಯೇ. 8 ಕವಿತಾ ಸಂಗ್ರಹಗಳನ್ನು, 34 ಗದ್ಯ ಕೃತಿಗಳನ್ನು (ಇವುಗಳಲ್ಲಿ ಪ್ರಬಂಧಗಳು, ವಿಮರ್ಶೆ, ನಾಟಕ, ವ್ಯಕ್ತಿಚಿತ್ರಗಳು, ಮತ್ತಿತರ ಕೃತಿಗಳು ಸೇರಿವೆ), 8 ಆಂಗ್ಲ ಕೃತಿಗಳನ್ನು 19 ಅನುವಾದ ಕೃತಿಗಳನ್ನು ಬರೆದ ವಿ.ಸೀ. ಅವರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಭಿಸಿದ್ದು ಅವರ ಕವಿತಾ ಸಂಗ್ರಹ ‘ಅರಲು ಬರಲು’ ಕೃತಿಗೆ.

ತಮ್ಮ ಸಮಕಾಲೀನ ಸಾಹಿತ್ಯ ರಂಗದಲ್ಲಿ ಅತ್ಯಂತ ಶಿಸ್ತಿನ ಮತ್ತು ಪ್ರೌಢಿಮೆಯ ವ್ಯಕ್ತಿತ್ವವನ್ನು ಹೊಂದಿದವರು. ಅರ್ಥಶಾಸ್ತ್ರ ಮತ್ತು ರಾಜನೀತಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದರೂ ಕನ್ನಡದಲ್ಲಿ ಅವರಿಗಿದ್ದ ಅಪೂರ್ವ ಪಾಂಡಿತ್ಯವನ್ನು ಕಂಡ ಬಿಎಂಶ್ರೀಯವರ ವೈಯಕ್ತಿಕ ಆಸಕ್ತಿಯಿಂದಾಗಿ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ನೇಮಕಗೊಂಡು ಮೈಸೂರು ಮತ್ತು ಬೆಂಗಳೂರಿನಲ್ಲಿ ದುಡಿದರು. ಕನ್ನಡ ಸಾಹಿತ್ಯ-ಪಂಡಿತ ಪರಂಪರೆಯ ದಿಗ್ಗಜಗಳಾದ ಜಿ.ಪಿ.ರಾಜರತ್ನಂ, ಎ.ಆರ್.ಕೃಷ್ಣಶಾಸ್ತ್ರಿ, ಡಿಎಲ್‌ಎನ್, ಕುವೆಂಪು, ತೀನಂಶ್ರೀ, ಎಂ.ವಿ.ಸೀತಾರಾಮಯ್ಯನವರೇ ಮುಂತಾದವರು ವಿ.ಸೀ.ಯವರ ಸಹೋದ್ಯೋಗಿಗಳಾಗಿದ್ದರು. ಆಧುನಿಕ ಕನ್ನಡ ಸಾಹಿತ್ಯದೊಂದಿಗೆ ಅವರು ಸದಾ ಸ್ಮರಣೀಯರು. 04.09.1983ರಲ್ಲಿ ಅಗಲಿದ ಈ ಮಹಾನುಭಾವರ ಸಾಹಿತ್ಯವನ್ನು ಇಂದು ಓದುತ್ತಿರುವವರು ಕಡಿಮೆಯೆಂಬುದೇ ವಿಷಾದದ ಸಂಗತಿ.

ರಾಮಾಯಣದ ಒಂದು ಅಪೂರ್ವ ಶ್ರೀಸಾಮಾನ್ಯ ಸ್ತ್ರೀಪಾತ್ರವಾಗಿ ಕಥೆ- ಕಥನವನ್ನು ಪೋಷಿಸಿದ ಪಾತ್ರ ಶಬರಿಯದ್ದು. ಸೀತಾಪಹಾರವಾದ ಬಳಿಕ ರಾಮಲಕ್ಷ್ಮಣರು ಕಾಡಿನಲ್ಲಲೆಯುವಾಗ ಅವರಿಗಾಗಿ ಕಾದು ಕುಳಿತ ಬೇಡಿತಿ ಶಬರಿ. ರಾಮನು ಒಂದಲ್ಲ ಒಂದು ದಿನ ಬರುವನೆಂದು ಕಾಯುತ್ತ ಬದುಕು ಸವೆಸುವ ಸಂತಸ್ವರೂಪಿ ಮುಗ್ಧ ಹೆಣ್ಣಿನ ಚಿತ್ರ ಅದು. ಒಂದರೆಗಳಿಗೆ ಬಂದು ಹೋಗುವ ಈ ಪಾತ್ರ ಬಹಳಷ್ಟು ಕನ್ನಡ ಸಾಹಿತಿಗಳನ್ನು ಕಾಡಿದೆ. ಕುವೆಂಪು ಅವರ ಶ್ರೀರಾಮಾಯಣದರ್ಶನಂ (1949) ಕಾವ್ಯದಲ್ಲಿ ‘ಶಬರಿಗಾದನು ಅತಿಥಿ ದಾಶರಥಿ’ ಎಂಬೊಂದು ಅಧ್ಯಾಯವೇ ಅವಳಿಗೆ ಮುಡಿಪಾಗಿದೆ. ಅವಳ ಅಂತಿಮ ಕ್ಷಣಗಳನ್ನು ಕುವೆಂಪು ‘‘ಕಣ್ಮುಚ್ಚಿದಳು ಆ ಅಮರ ಸನ್ಮಾನ್ಯೆ, ದೇವ ಸೀತಾನಾಥ ದಿವ್ಯಶ್ರು ತೀರ್ಥಜಲಸಂಸ್ನಾತೆ, ಸಂಪೂತೆ, ಮೇಣ್ ಶಿವಕಳೇಬರೆ, ಧನ್ಯೆ!’ ಎಂದು ಚಿತ್ರಿಸಿದ್ದಾರೆ. ಪುತಿನ ಅವರು ‘ಶಬರಿ’ ಎಂಬ ಗೀತರೂಪಕವನ್ನು (1946) ಬರೆದಿದ್ದಾರೆ. ಸೇಡಿಯಾಪು, ಆನಂದಕಂದರೂ ಶಬರಿಯ ಕುರಿತು ಕೃತಿ ರಚಿಸಿದ್ದಾರೆ.

ಗೊಪಾಲಕೃಷ್ಣ ಅಡಿಗರ ಶ್ರೀರಾಮನವಮಿಯ ದಿವಸ ಕವಿತೆಯ ‘‘ವ್ಯಕ್ತಮಧ್ಯಕೆ ಬಂದುರಿವ ಶಬರಿ’’ ಎಂಬ ಸಾಲು ಬಹಳ ಪ್ರಸಿದ್ಧವಾಗಿದೆ ಮಾತ್ರವಲ್ಲ ಕವಿತೆಗೆ ಹೊಸ ಅಯಾಮವನ್ನು ಕರುಣಿಸಿದೆ. ವಿ.ಸೀ. ಅವರು ಈ ಎಲ್ಲರಿಗಿಂತ ಮೊದಲೇ ಶಬರಿ ಕವಿತೆಯನ್ನು ಬರೆದರು. ಉಳಿದ ಕೃತಿಗಳೊಂದಿಗೆ ಇದನ್ನು ಹೋಲಿಸುವ ಉದ್ದೇಶವಿಲ್ಲ ದಿದ್ದರೂ ಕಾಲಾನುಕ್ರಮಣಿಕೆಯಲ್ಲಿ ಉಳಿದೆಲ್ಲ ಕೃತಿಗಳಿಗೂ ಮೊದಲೇ ಅವರು ಈ ಕವಿತೆಯುನ್ನು ಬರೆದಿದ್ದರು ಎಂಬುದು ಮಹತ್ವದ್ದಾಗಿದೆ. ಅದು 1935ರಲ್ಲಿ ಪ್ರಕಟವಾದ ಅವರ ನೆಳಲು ಬೆಳಕು ಕವಿತಾ ಸಂಗ್ರಹದಲ್ಲಿದೆ. ಅವರ ಈ ಕವಿತೆ ಅವರಿಗೆ ಸಾಕಷ್ಟು ಖ್ಯಾತಿಯನ್ನು ತಂದಿತ್ತು. ಇಂದಿಗೂ ವಿ.ಸೀ. ಅವರ ಉಲ್ಲೇಖ ಈ ಕವಿತೆಯ ಹೊರತಾಗಿ ಪೂರ್ಣವಾಗುವುದಿಲ್ಲ.

ಆರಂಭದ ಮತ್ತು ಕೊನೆಯ ಸ್ಟಾಂಜಾಗಳು ಮೂರು ಸಾಲನ್ನು ಹೊಂದಿದ್ದು ಉಳಿದವು ನಾಲ್ಕು ಸಾಲುಗಳನ್ನು ಹೊಂದಿವೆ.
ಎರಡು ಭಾಗಗಳಾಗಿ ವಿಂಗಡಿಸಬಹುದಾದ ಈ ಕವಿತೆಯ ಪೂರ್ವಾರ್ಧ ಹೀಗಿದೆ:

ಕಾದಿರುವಳು ಶಬರಿ,ರಾಮ ಬರುವನೆಂದು,ತನ್ನ ಪೂಜೆಗೊಳುವನೆಂದು.॥
ಎಳಗಾಳಿ ತೀಡುತಿರಲು ಕಿವಿಯೆತ್ತಿ ಆಲಿಸುವಳು ಎಲೆಯಲುಗೆ ಗಾಳಿಯಲ್ಲಿ ನಡೆ ಸಪ್ಪುಳೆಂದು ಬಗೆದು.॥

ದೂರಕ್ಕೆ ನೋಳ್ಪೆನೆಂದು ಮರವೇರಿ ದಿಟ್ಟಿಸುವಳು ಗಿರಿಮೇಲಕೈದಿ ಕೈಯ ಮರೆಮಾಡಿ ನೋಡುತಿಹಳು.॥
ಉತ್ತರಾರ್ಧ ಹೀಗಿದೆ:
ಶಬರಿವೊಲು ಜನವು, ದಿನವೂಯುಗ ಯುಗವೂ ಕರೆಯುತಿಹುದು ಕರೆ ಇಳೆಗಳೇಳಲರಸಿ ತವಕದಲಿ ತಪಿಸುತಿಹುದು.॥
ಭರವಸೆಗಳಳಿಯವಾಗಿ ಮನವೆಲ್ಲ ಬಯಕೆಯಾಗಿ ಹಗಲೆಲ್ಲ ಕಾದು ಕೂಗಿ ಇರುಳೆಲ್ಲ ಜಾಗರಾಗಿ;-॥
ಬಂದಾನೊ ಬಾರನೋ ಓ ಕಂಡಾನೋ ಕಾಣನೋ ಓ ಎಂದೆಂದು ಜಪಿಸಿ ತಪಿಸಿ ಶಂಕಾತುರಂಗಳೂರಿ.॥
ಬಾ ರಾಮ, ಬಾರ, ಬರಾ ಬಡವರನು ಕಾಯು ಬಾರಾ ಕಂಗಾಣದಿವರ ಪ್ರೇಮ ನುಡಿ ಸೋತ ಮೂಕ ಪ್ರೇಮ.॥
-ಕಾದಿರುವರು ಜನವು ರಾಮ ಬರುವನೆಂದು ತಮ್ಮ ಪೂಜೆಗೊಳುವನೆಂದು.॥

ಕವಿತೆಯ ಸಾಲುಗಳು ಸರಳವಾಗಿವೆ ಮತ್ತು ಅರ್ಥವಾಗುತ್ತವೆ. ಅವು ಅನುಭವಕ್ಕೆ ಬಂದರೆ ಕವಿತೆಯ ಸೊಗಸು ಮತ್ತು ಮಹತ್ವವು ಅರಿವಾಗುತ್ತದೆ. ಕವಿತೆಯ ಶೀರ್ಷಿಕೆ ಮತ್ತು ಆರಂಭ ಶಬರಿಯಿಂದಲೇ. ಆಕೆ ಕಾದಿರು ತ್ತಾಳೆ. ನಿರ್ದಿಷ್ಟ ಉದ್ದೇಶದಿಂದ: ರಾಮ ಬರುವನೆಂದು ಮತ್ತು ತನ್ನ ಪೂಜೆಗೊಳುವನೆಂದು. ಕಾಯುವುದೆಂದರೇನು? ಬೇರೇನೂ ಮಾಡದೆ ಕಾಯುವವಳು ಶಬರಿಯಲ್ಲ. ಆಕೆ ತನ್ನೆಲ್ಲ ಕೆಲಸಕಾರ್ಯಗಳನ್ನು ರಾಮನಿಗೆ ಸಮರ್ಪಿಸುವ ಉದ್ದೇಶದಿಂದಲೇ ಮಾಡುವವಳು. ಹೂ ಹಣ್ಣುಗಳನ್ನು ಆಯುವವಳು. ಜೊತೆಗೆ ತನ್ನ ಇಂದ್ರಿಯಗಳನ್ನು ತೆರೆದಿಟ್ಟು ಶ್ರೀರಾಮನ ಬರವನ್ನು ನಿರೀಕ್ಷಿಸುವಳು. ಕಿವಿಯೆತ್ತಿ, ದೂರಕ್ಕೆ, ಕೈಯ ಮರೆಮಾಡಿ, ನೋಡುತಿಹಳು ಈ ಪದಗಳು ಇವನ್ನೇ ಸಂಕೇತಿಸುತ್ತವೆ.

ಪೂರ್ವಾರ್ಧದಲ್ಲಿ ಶಬರಿಯ ಕಾಯುವಿಕೆಯನ್ನು ಕವಿತೆ ವಿವರಿಸುತ್ತದೆ. ಅವಳಷ್ಟೇ ಸರಳವಾಗಿ ಅವಳ ಆಚಾರ-ವಿಚಾರಗಳನ್ನು ನಿರೂಪಿಸುತ್ತದೆ. ಇದರ ಕೊನೆಯಲ್ಲಿ ‘ಕಳೆೆದಿಹವು ವರುಷ ಹಲವು’ ಎನ್ನುವ ಮೂಲಕ ಶಬರಿಯ ದೈನಂದಿನ ಬದುಕಿನ ಮಹತ್ವ ಮತ್ತು ಎಲ್ಲ ಭಕ್ತಿಯ, ಶ್ರದ್ಧೆಯ ಪ್ರಾಮಾಣಿಕತೆಯಿರುವುದೇ ಈ ಕಾಯುವಿಕೆಯಲ್ಲಿ ಎಂಬುದು ಅನುಭವಕ್ಕೆ ಬರುತ್ತದೆ. ವರುಷ ಹಲವು ಎಂಬ ಎರಡು ಪದಗಳು ಕಾಲವನ್ನು ವಿಸ್ತರಿಸಿ ಹೇಳುತ್ತವೆ. ಈ ಕಾಯುವಿಕೆಯೇ ಒಂದು ತಪಸ್ಸು; ಸಾಧನೆ. ರಾಮನ ದರ್ಶನವು ಸಿದ್ಧಿಯಾಗುವವರೆಗೆ. ತಾಳುವಿಕೆಗಿಂತ ತಪವು ಇಲ್ಲ ಎಂಬುದರ ಅಥರ್ ಇದೇ ಅಲ್ಲವೇ?

ಎರಡನೆಯ ಭಾಗದಲ್ಲಿ ಕವಿತೆಯು ವ್ಯಷ್ಟಿಯಿಂದ ಸಮಷ್ಟಿಗೆ ವಿಕಾಸಗೊಳ್ಳುತ್ತದೆ. ಶಬರಿ ಒಂದು ಸಂಕೇತ, ಒಂದು ರೂಪಕವಾಗುತ್ತಾಳೆ. ಈ ಪದ್ಯದ ಸೊಗಸಿರುವುದೇ ಇಲ್ಲಿ. ಶಬರಿಗಿನ್ನೂ ರಾಮನ ದರ್ಶನವಾಗಿಲ್ಲ. ಅಷ್ಟರಲ್ಲೇ ಕವಿ ಶಬರಿಯ ಮೂಲಕ ಒಂದು ಜನ ಸಮುದಾಯದ ಕಾಣ್ಕೆಯನ್ನು ದರ್ಶಿಸುತ್ತಾರೆ. ಜನರು ಹೇಗೆ ಬದುಕುತ್ತಿದ್ದಾರೆಂಬುದನ್ನು ಶಬರಿವೊಲು ಎಂಬ ಒಂದೇ ಪದದ ಮೂಲಕ ವಿವರಿಸಲಾಗಿದೆ. ಜನರು ಮಾತ್ರವಲ್ಲ ಕಾಲವೇ ಯುಗರೂಪಿಯಾಗಿ ರಾಮನಿಗಾಗಿ ಕಾಯುತ್ತಿದೆ. ಕಾಲಕ್ಕೆ ಅರಸೇ ಕಾರಣ. ಆದ್ದರಿಂದ ಕಾಲವೂ ಆತನಿಗಾಗಿ ಭರವಸೆಯಿಂದ ಕಾಯುತ್ತಿದೆ.

ಪೂರ್ವಾರ್ಧವನ್ನು ಓದಿಕೊಂಡೇ ಮತ್ತೆ ಇದನ್ನು ಮುಂದುವರಿಸಬೇಕು. ಇಷ್ಟಕ್ಕೂ ರಾಮ ಬರುವನೆಂಬ ಭರವಸೆ ಯಾರು ನೀಡಿದರು? ಅ ಹಿನ್ನೆಲೆ ಕವಿತೆಯಲ್ಲಿಲ್ಲ. ಲೋಕಕ್ಕೇ ರಾಮನ ಇರವು, ಬರವು ತಿಳಿದಿದೆ. ಆತ ಬರುತ್ತಾನೆಂಬ ಭರವಸೆಯು ಲೋಕವಿದಿತ. ಕಾಯುವವರು ಕಾದೇ ಕಾಯುತ್ತಾರೆ. ಮನುಷ್ಯನ ಬಯಕೆ ಅದಮ್ಯವಾದಾಗ ಅದು ಮನವೆಲ್ಲ ಬಯಕೆಯಾಗಿ ರೂಪುಗೊಳ್ಲುತ್ತದೆ. ಇಲ್ಲಿ ಸಹಜ ಬದುಕಿನ ಚಕ್ರವನ್ನು ವಿಶೇಷ ಅಬ್ಬರವಿಲ್ಲದೆ ಹೇಳುವ ಬಗೆ ಹೀಗೆ: ‘ಹಗಲೆಲ್ಲ ಕಾದು ಕೂಗಿ ಇರುಳೆಲ್ಲ ಜಾಗರಾಗಿ’. ಮನುಷ್ಯ ಹಗಲೆಲ್ಲ ಸಹಜವಾಗಿಯೇ ಕಾಲನಿಯಮಕ್ಕನುಸಾರವಾಗಿ ಎಚ್ಚರಿರುತ್ತಾನೆ. ಆದರೆ ಇರುಳಾಯಿತೆಂದರೆ ನಿದ್ರಿಸುತ್ತಾನೆ. ಕಾಯಬೇಕಾದರೆ ಪ್ರಜ್ಞಾಪೂರ್ವಕವಾಗಿ ಎಚ್ಚೆತ್ತಿರಬೇಕು. ಎಲ್ಲಾದರೂ ರಾಮ ಇರುಳೇ ದರುಶನ ನೀಡಿದರೆ?

ಆದರೂ ರಾಮ ಎಂದು ಬರುವನೋ ಗೊತ್ತಿಲ್ಲ. ಬಂದಾನೊ ಬಾರನೋ, ಕಂಡಾನೊ ಕಾಣನೋ ಎಂಬ ಪದಗಳೊಂದಿಗೆ ಕವಿ ಓ ಎಂಬ ಪದವನ್ನು ಸೇರಿಸುತ್ತಾರೆ. ಈ ಪದಗಳು ಸೇರಿದಾಕ್ಷಣ ಮೊದಲ ಪದಗಳ ಪರಿಣಾಮವೇ ಬೇರೆಯಾಗುತ್ತದೆ. ಅದು ಬರೀ ಸಂಶಯವಲ್ಲ; ಆತಂಕ. ಭರವಸೆಯಿದೆ; ಆದರೂ ಅನಿಶ್ಚಿತತೆ. ತಮ್ಮ ತಲೆಮಾರು ರಾಮನನ್ನು ಕಾಣುತ್ತದೆಯೇ, ಅಥವಾ ಈ ಭಾಗ್ಯ ಇನ್ನೊಂದು ತಲೆಮಾರಿಗೆ ದಾಟಿಹೋಗುತ್ತದೆಯೇ ಎಂಬ ಶಂಕೆ. ರಾಮನ ಬರವೆಂಬ ಸೂರ್ಯನಿಗೆ ವಿಳಂಬವೆಂಬ ಮೋಡ. ಇಷ್ಟೆಲ್ಲದರ ನಡುವೆಯೂ ರಾಮನನ್ನು ಹೃದಯ ಕರೆಯುತ್ತದೆ. ದೇವರೆದುರು ಎಲ್ಲರೂ ಬಡವರೇ. ಆದ್ದರಿಂದ ಕವಿ ‘‘ಬಡವರನು ಕಾಯು ಬಾರಾ’’ ಎಂದು ಹೇಳಿಸುತ್ತಾರೆ. ಹೀಗೆ ಕರೆದರೂ ಕೊನೆಗೆ ನುಡಿ ಸೋಲುತ್ತದೆ; ಆದರೆ ಮನಸ್ಸು ಸೋಲದು; ಹೃದಯ ಸೋಲದು. ಅದು ಮೂಕಪ್ರೇಮವಾಗಿ ಉಳಿಯುತ್ತದೆ. ಮಾತು ಹೇಳಲಾಗದ್ದನ್ನು ಮನಸ್ಸು ಹೇಳುತ್ತದೆ. ಶಬರಿಯಷ್ಟೇ ಕಾಯುತ್ತಿರುವುದಲ್ಲ, ಎಲ್ಲ ಜನರೂ ಕಾಯುತ್ತಿದ್ದಾರೆ. ಅವರ ನಡುವೆ ಶಬರಿಯಿದ್ದಾಳೆ. ಈಗ ಶಬರಿಯಿದ್ದರೂ ಇಲ್ಲದಿದ್ದರೂ ಒಂದೇ. ಅವಳು ಪ್ರಾತಿನಿಧಿಕ. ಕಾಡಿನ ಎಲೆಮರಗಳಲ್ಲಿ, ಜನರಲ್ಲಿ, ಪ್ರಾಣಿ-ಪಕ್ಷಿಗಳಲ್ಲಿ ಆಕೆಯಿದ್ದಾಳೆ.

ಕವಿತೆಯ ಮುಖ್ಯ ಧ್ವನಿಯಿರುವುದು ಅಳಿಯದ ಸೋಲದ ಭರವಸೆಯನ್ನು ಶಬರಿ ಮತ್ತು ಕಾಡಿನ ಬಡಜನ ಉಳಿಸಿಕೊಂಡಿದ್ದಾರೆಂಬು ದರಲ್ಲಿ. ಬೆಕೆಟ್ ಬರೆದ ‘ವೈಟಿಂಗ್ ಫಾರ್ ಗೋಡೋ’ ನಾಟಕದ ಪಾತ್ರ ಗಳಂತೆ ಕಾಯುವಿಕೆ ಇಲ್ಲಿದೆ. ಇಲ್ಲಿನ ಕಾಯುವಿಕೆ ಭಾವುಕ; ಶ್ರದ್ಧಾಭಕ್ತಿಯ ಸಂಯೋಗದಿಂದ ಕೂಡಿದ್ದು. ರಾಮ ಬಂದನೆಂಬ ರಾಮಾಯಣ ಕಥೆಯ ಪ್ರಮಾಣ ಇಲ್ಲಿಲ್ಲ. ರಾಮ ಬಂದು ಶಬರಿಯ ಆತಿಥ್ಯ ಸ್ವೀಕರಿಸಿದನೆಂಬ ಕಥೆ ಪೌರಾಣಿಕ ನಂಬಿಕೆಯನ್ನು ದೃಢಗೊಳಿಸಬಹುದು. ಆದರೆ ಕವಿಯ ಅಶಯ ಅದಲ್ಲ. ನಂಬಿಕೆಯ ಆಧಾರದ ಮೇಲೆ ತಳೆಯುವ ಭರವಸೆಗೆ ಕಾಲದ ಮಿತಿಯಿಲ್ಲ. ಅದು ವ್ಯಾಪಕ ಮತ್ತು ನಿಶ್ಚಿತ. ಕವಿತೆ ರಾಮಾಯಣದಂತಿಲ್ಲವೆಂದು ವಿಮರ್ಶಕರು ಟೀಕಿಸಿದರಂತೆ.

ವಿ.ಸೀ. ಅವರೇ ನೊಂದುಕೊಂಡು ಹೀಗೆ ಬರೆದಿದ್ದಾರೆ: ‘‘ರಾಮಾಯಣದಲ್ಲಿನಂತೆಯೇ ಇದ್ದರೆ ನಾನೇಕೆೆ ಬರೆಯಬೇಕಿತ್ತು! ಆಕೆ ತಪಸ್ವಿ. ರಾಮನನ್ನು ಎದುರುಗೊಂಡು ಕೂಡಲೇ ಬ್ರಹ್ಮಲೋಕಕ್ಕೆ ಹೋದಳು. ಅಲ್ಲಿಯೆ ಇರಬೇಕು, ಇನ್ನೂ. ವಾಲ್ಮೀಕಿಯ ವಾಣಿಯ ಮುಂದೆ ಹುಲು ಮನುಷ್ಯನದು ಎಂತಹ ವಾಣಿ? ಇಂದಿನ ಇತರರು ಬರೆದ ಶಬರಿಯಂತಿಲ್ಲವೆಂಬುದು ಇನ್ನೊಂದು ಮಾತು. ಏಕಿರಬೇಕು? ಅವರೂ ನಾನೂ ಬೇರೆ ಬೇರೆ ಬಗೆಯ ವ್ಯಕ್ತಿಗಳು. ಇಲ್ಲಿ ಶಬರಿ-ಚಿತ್ರಗಳು ಎರಡು: ಒಂದು:- ರಾಮನಿಗಾಗಿ ಕಾದಿದ್ದಿರಬಹುದಾದ ಅ ಶಬರಿ; ಪ್ರತೀಕ್ಷೆಯದು. ಆಕೆಯ ಕೋರಿಕೆ ನೆರವೇರುವಂತೆ, ಎಷ್ಟೋ ಕಾಲ ಕಳೆದ ಮೇಲೆ, ಅ ರಾಮ ಬಂದನಂತೆ.

ಎರಡು:- ಈಗಿನ ಲೋಕದ ಜನ ಶಬರಿಯಂತೆ ತನ್ನ ರಾಮನನ್ನು ಬಯಸಿ ಕಾದಿದೆ. ಬಂದಾನೊ ಇಲ್ಲವೊ ಎಂಬ ಶಂಕೆ, ಆತುರ ಅದಕ್ಕೆ. ಬಾ ಎಂದು ಕೂಗುತ್ತಿದೆ. ಬಂದಾನು ಎಂಬ ಭರವಸೆಯೊಂದರಿಂದ. ಹಿಂದೆ ಬಂದ, ಹಿಂದಿನ ಶಬರಿಯ ಭಾಗ್ಯ ಈ ಶಬರಿಗೂ ಬಂದೀತು ಎಂಬ ನಚ್ಚು. ಅದು ನೆರವೇರೀತೆ? ಎಂಬುದು ಭಾವ. ಓದುವವರು ಹಾಗೆ ಓದಿದರೆ, ಹಾಡುವವರು ಹಾಡಿದರೆ ಚೆನ್ನಾದೀತು. ಆ ಭಾಗ್ಯ ಕವಿತೆಗೆ ಬರಬೇಕು ಮಾತ್ರ.’’

ಶಬರಿ ವಿ.ಸೀ.. ಅವರ ಒಂದು ಯಶಸ್ವೀ ಕವಿತೆ. ಅದು ನಿರಾಡಂಬರ ಸುಂದರಿ. ಬದುಕನ್ನು ಕನಿಷ್ಠಗೊಳಿಸಿ, ಸಂಕೀರ್ಣಗೊಳಿಸಿ ಏನನ್ನೋ ಹೇಳ ಬಯಸುವ ಕವಿತೆಯಲ್ಲ. ಒಟ್ಟರ್ಥದಲ್ಲಿ ಬಡವರ ಗಂಜಿ. ಸದಾ ಪ್ರಸ್ತುತ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)