varthabharthi

ಸಂಪಾದಕೀಯ

ಬೀದಿ ಪಾಲಾದ ಗೋವಾ ಕನ್ನಡಿಗರು

ವಾರ್ತಾ ಭಾರತಿ : 28 Sep, 2017

ನಮ್ಮ ಪಕ್ಕದ ರಾಜ್ಯ ಗೋವಾದಲ್ಲಿ ಕಳೆದ ಅರ್ಧ ಶತಮಾನದಿಂದ ನೆಲೆಸಿದ ಕನ್ನಡಿಗರ ಮನೆಗಳನ್ನು ಅಲ್ಲಿನ ಬಿಜೆಪಿ ಸರಕಾರ ನೆಲಸಮಗೊಳಿಸಿದೆ. ಐದು ದಶಕಗಳ ಕಾಲದ ಆಸರೆ ಭಾವನಾತ್ಮಕ ಸಂಬಂಧ, ದೇವಾಲಯಗಳು ಎಲ್ಲವನ್ನೂ ಜೆಸಿಬಿಗಳು ಒಂದೇ ತಾಸಿನಲ್ಲಿ ನಿರ್ನಾಮ ಮಾಡಿವೆ. ಸುರಿಯುತ್ತಿರುವ ಮಳೆಯಲ್ಲಿ 200 ಕುಟುಂಬಗಳು ಮಕ್ಕಳು-ಮರಿಗಳೊಂದಿಗೆ ಬೀದಿಗೆ ಬಿದ್ದಿವೆ. ಬೈನಾ ಕಡಲ ತೀರದ ಬಳಿ ಆಸರೆ ಕಟ್ಟಿಕೊಂಡಿದ್ದ ಕನ್ನಡಿಗರ ಮನೆಗಳನ್ನು 300ಕ್ಕೂ ಹೆಚ್ಚು ಪೊಲೀಸರು 15 ಜೆಸಿಬಿಗಳ ಮೂಲಕ ಮಂಗಳವಾರ ಬೆಳಗ್ಗೆ ಧ್ವಂಸಗೊಳಿಸಿದ್ದಾರೆ. ಕನ್ನಡಿಗರು ಅಕ್ರಮವಾಗಿ ವಾಸವಾಗಿದ್ದಾರೆ ಎಂಬ ಕಾರಣ ನೀಡಿ ಮುರಗಾಂವ್ ನಗರ ಪಾಲಿಕೆ ಜಿಲ್ಲಾಧಿಕಾರಿಯವರ ಆದೇಶದ ಮೇರೆಗೆ ಈ ಮನೆಗಳನ್ನು ನೆಲಸಮಗೊಳಿಸಿದೆ.

ಗೋವಾದಲ್ಲಿ ಕನ್ನಡಿಗರು ಅಕ್ರಮವಾಗಿ ನೆಲೆಸಿದ್ದಾರೆ ಎಂಬುದೇ ಹಾಸ್ಯಾಸ್ಪದ ಆರೋಪ. ಅವರು ನಿನ್ನೆ ಮೊನ್ನೆ ಅಲ್ಲಿ ಹೋದವರಲ್ಲ. ಈ ಪುಟ್ಟ ರಾಜ್ಯದಲ್ಲಿ ಉತ್ತರ ಕರ್ನಾಟಕದ ಬಿಜಾಪುರ, ಬಾಗಲಕೋಟೆ, ರಾಯಚೂರು, ಗದಗ, ಹಾವೇರಿ, ಧಾರವಾಡ, ಕಲಬುರಗಿ ಮತ್ತು ಕಾರವಾರ ಜಿಲ್ಲೆಯ ಜನ ಕಳೆದ 60 ವರ್ಷಗಳಿಂದ ಬದುಕು ಕಟ್ಟಿಕೊಂಡಿದ್ದಾರೆ. 50ರ ದಶಕದಲ್ಲೇ ಅಲ್ಲಿಗೆ ಹೋಗಿ ನೆಲೆಸಿದ್ದಾರೆ. ಆಗ ಗೋವಾ ರಾಜ್ಯ ಪೋರ್ಚುಗೀಸರ ವಶದಲ್ಲಿತ್ತು. ಅದರ ವಿಮೋಚನೆಗಾಗಿ ದೊಡ್ಡ ಹೋರಾಟವೇ ನಡೆದಿತ್ತು.

ಕೊನೆಗೆ ಪೋರ್ಚುಗೀಸರು ಅಲ್ಲಿಂದ ನಿರ್ಗಮಿಸಿದರು. ಆನಂತರ ಆ ರಾಜ್ಯವನ್ನು ಕಟ್ಟಲು ಶ್ರಮಿಸಿದವರು ಉತ್ತರ ಕರ್ನಾಟಕದ ದುಡಿಯುವ ಜನ. ಈ ಜನರನ್ನು ಅಲ್ಲಿ ದುಡಿಯಲು ಕರೆದುಕೊಂಡು ಹೋದ ಸರಕಾರ ಅವರಿಗೆ ಶಾಶ್ವತವಾದ ಮನೆಗಳನ್ನು ನಿರ್ಮಿಸಿಕೊಡಲಿಲ್ಲ. ಆದರೂ ಈ ಜನ ಯಾವುದೋ ಕಡಲ ತೀರದಲ್ಲಿ ಮನೆಕಟ್ಟಿಕೊಂಡು ಆಧುನಿಕ ಗೋವಾ ರಾಜ್ಯವನ್ನು ನಿರ್ಮಿಸಿದರು. ಈ ಕನ್ನಡಿಗರು ಅಕ್ರಮ ವಲಸಿಗರಲ್ಲ. ಗೋವಾ ಸರಕಾರವೇ ಇವರಿಗೆ ಓಟಿನ ಹಕ್ಕನ್ನು ನೀಡಿದೆ. ಆಧಾರ್ ಕಾರ್ಡ್ ನೀಡಿದೆ. ಪಡಿತರ ಚೀಟಿಯನ್ನೂ ನೀಡಿದೆ. ಮನೆ ನಂಬ್ರ ಕೊಟ್ಟಿದೆ. ಅವರ ಮನೆಗಳಿಗೆ ಕುಡಿಯಲು ನೀರು, ವಿದ್ಯುತ್ ಸೌಕರ್ಯ ಒದಗಿಸಲಾಗಿದೆ. ವಾಸ್ತವಾಂಶ ಹೀಗಿರುವಾಗ ಇವರೆಲ್ಲ ಅಕ್ರಮ ವಲಸಿಗರು ಹೇಗಾಗುತ್ತಾರೆ.

ಅಲ್ಲಿ ನೆಲೆಸಿದ ಕನ್ನಡಿಗರ ಇಂದಿನ ತಲೆಮಾರಿನ ಯುವಕರು ಗೋವಾದಲ್ಲೇ ಹುಟ್ಟಿ ಬೆಳೆದವರು. ಇಂತಹವರನ್ನು ದಿಢೀರನೆ ಅಕ್ರಮ ವಲಸಿಗರೆಂದು ಅವರ ಮನೆಗಳನ್ನು ನೆಲಸಮಗೊಳಿಸಿ ಬೀದಿಗೆ ತಳ್ಳುವುದು ಕ್ರೌರ್ಯದ ಪರಮಾವಧಿಯಾಗುತ್ತದೆ. ಈ ಅಮಾಯಕ ಜನರ ದುಡಿಮೆಯಿಂದಲೇ ಆಧುನಿಕ ಗೋವಾ ನಿರ್ಮಾಣಗೊಂಡಿದೆ ಎಂಬುದನ್ನು ಮರೆತಿರುವ ಇಂದಿನ ಮನೋಹರ್ ಪಾರಿಕ್ಕರ್ ನೇತೃತ್ವದ ಬಿಜೆಪಿ ಸರಕಾರಕ್ಕೆ ಈಗ ಪ್ರವಾಸೋದ್ಯಮದ ಆದಾಯದ ಹುಚ್ಚು ಹಿಡಿದಿದೆ. ರಿಯಲ್ ಎಸ್ಟೇಟ್ ಮಾಫಿಯಾ, ಟೂರಿಸಂ ಮಾಫಿಯಾಗಳು ಸೇರಿ ಗೋವಾವನ್ನು ಒಂದೆಡೆಯಿಂದ ನಾಶ ಮಾಡುತ್ತಿದ್ದರೆ, ಇನ್ನೊಂದೆಡೆಯಿಂದ ಮೈನಿಂಗ್ ಮಾಫಿಯಾವೂ ಗೋವಾದ ವಿನಾಶಕ್ಕೆ ಕಾರಣವಾಗಿದೆ.

ಈ ಎಲ್ಲ ಮಾಫಿಯಾಗಳಿಗೆ ಅಲ್ಲಿನ ಬಿಜೆಪಿ ಸರಕಾರ ಶರಣಾಗಿದೆ. ಆ ಸರಕಾರದ ಅಭಿವೃದ್ಧಿ ಮಾದರಿ ಅತ್ಯಂತ ಅಪಾಯಕಾರಿಯಾಗಿದೆ. ಗೋವಾ ಕನ್ನಡಿಗರ ಮೇಲೆ ಅಲ್ಲಿನ ಸರಕಾರ ಹಲ್ಲೆ ಮಾಡುತ್ತಿರುವುದು ಇದೇ ಮೊದಲಸಲವಲ್ಲ. 80ರ ದಶಕದಿಂದ ಇದು ಪುನರಾವರ್ತನೆಯಾಗುತ್ತಲೇ ಇದೆ. ಈ ಹಿಂದೆ ಮನೆಗಳನ್ನು ನೆಲಸಮ ಮಾಡಿದ್ದು ಮಾತ್ರವಲ್ಲದೆ, ಅವರ ಮೇಲೆ ದೈಹಿಕ ಹಲ್ಲೆ ಮಾಡಿ ರಾಜ್ಯದಿಂದ ಓಡಿಸಲಾಗಿತ್ತು. ಪ್ರತೀ ಬಾರಿ ಇಂತಹ ದೌರ್ಜನ್ಯ ನಡೆದಾಗ ಕರ್ನಾಟಕ ಸರಕಾರ ಸಾಂಕೇತಿಕವಾಗಿ ಆಕ್ಷೇಪಿಸುತ್ತದೆ. ಸರಕಾರದ ಪರವಾಗಿ ಕಟು ಶಬ್ದಗಳಲ್ಲಿ ಪತ್ರ ಬರೆಯಲಾಗುತ್ತದೆ. ಅಲ್ಲಿಗೆ ವಿವಾದ ಮುಗಿಯಿತೆಂದು ಅನ್ನುವಷ್ಟರಲ್ಲಿ ಕನ್ನಡಿಗರ ಮೇಲೆ ಇನ್ನೊಂದು ಕಡೆ ಹಲ್ಲೆ ನಡೆಯುತ್ತದೆ.

ಗೋವಾದಲ್ಲಿ ಯಾರೇ ಅಧಿಕಾರಕ್ಕೆ ಬರಲಿ ಅಲ್ಲಿನ ಕನ್ನಡ ಜನರ ಮತಗಳೇ ನಿರ್ಣಾಯಕವಾಗಿವೆ. ಈಗಿನ ಮನೋಹರ್ ಪಾರಿಕ್ಕರ್ ಸರಕಾರ ಅಸ್ತಿತ್ವಕ್ಕೆ ಬರಲು ಕೂಡಾ ಕನ್ನಡಿಗರೇ ಕಾರಣ. ಕರ್ನಾಟಕದ ಬಿಜೆಪಿ ನಾಯಕರಾದ ಯಡಿಯೂರಪ್ಪ, ಅನಂತಕುಮಾರ್, ಪ್ರಭಾಕರ ಕೋರೆ, ಜಗದೀಶ್ ಶೆಟ್ಟರ್ ಇವರೆಲ್ಲ ಚುನಾವಣೆಯ ಸಂದರ್ಭದಲ್ಲಿ ಗೋವಾಕ್ಕೆ ಹೋಗಿ ಬಿಜೆಪಿಗೆ ಮತ ಹಾಕುವಂತೆ ಅಲ್ಲಿ ನೆಲೆಸಿದ ಕನ್ನಡಿಗರಿಗೆ ದುಂಬಾಲು ಬೀಳುತ್ತಾರೆ. ಕಳೆದ ಚುನಾವಣೆಯಲ್ಲಿ ಅಲ್ಲಿಗೆ ಹೋಗಿದ್ದ ಕರ್ನಾಟಕದ ಬಿಜೆಪಿ ನಾಯಕರು ತಮ್ಮ ಪಕ್ಷಕ್ಕೆ ಮತ ನೀಡಿದರೆ ಅಧಿಕಾರಕ್ಕೆ ಬಂದ ಆನಂತರ ನಿಮಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದರು. ಹೀಗೆ ಕನ್ನಡಿಗರ ಮತಗಳಿಂದಲೇ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಕನ್ನಡಿಗರಿಗೆ ವಿಶ್ವಾಸದ್ರೋಹ ಬಗೆದಿದೆ.

 ಇಂತಹ ಸಂದರ್ಭದಲ್ಲಿ ಕರ್ನಾಟಕ ಸರಕಾರ ಗೋವಾ ಕನ್ನಡಿಗರ ನೆರವಿಗೆ ಧಾವಿಸಬೇಕಾಗಿದೆ. ಬರೀ ಪತ್ರ ಬರೆದರೆ ಸಾಲದು, ರಾಜ್ಯ ಸಚಿವ ಸಂಪುಟದ ಹಿರಿಯ ಸಚಿವರನ್ನು ಗೋವಾಕ್ಕೆ ಕಳುಹಿಸಿ ಬೀದಿ ಪಾಲಾದ ಕನ್ನಡಿಗರ ಪುನರ್ವಸತಿಗೆ ವ್ಯವಸ್ಥೆಯನ್ನು ಮಾಡಿಸಬೇಕು. ಇನ್ನು ಸಣ್ಣಪುಟ್ಟ ಪ್ರಶ್ನೆಗಳನ್ನು ಎತ್ತಿಕೊಂಡು ಬೀದಿಗೆ ಇಳಿಯುವ ಕನ್ನಡಪರ ಸಂಘಟನೆಗಳು ಗೋವಾ ಕನ್ನಡಿಗರು ಬೀದಿಗೆ ಬಿದ್ದಿರುವಾಗ ಸುಮ್ಮನಿರಬಾರದು. ಅವರ ನೆರವಿಗೆ ಮುಂದಾಗಬೇಕು. ಬೆಂಗಳೂರಿನಲ್ಲಿರುವ ಕನ್ನಡ ಪರ ಸಂಘಟನೆಗಳಿಗೆ ಉತ್ತರ ಕರ್ನಾಟಕ ಮತ್ತು ಕರಾವಳಿ ಕರ್ನಾಟಕದ ಕನ್ನಡಿಗರ ನೋವು ಮತ್ತು ಸಂಕಟಗಳು ಅರ್ಥವಾಗುವುದಿಲ್ಲ. ಅವರ ನೋವಿಗೆ ಸ್ಪಂದಿಸುವುದಿಲ್ಲ ಎಂಬ ಆರೋಪವಿದೆ.

ಕಾವೇರಿ ಹೋರಾಟಕ್ಕೆ ಸ್ಪಂದಿಸಿದಷ್ಟು ಕೃಷ್ಣಾ ನದಿ ವಿವಾದ ಹೋರಾಟಕ್ಕೆ ಸ್ಪಂದಿಸುವುದಿಲ್ಲ ಎಂಬ ಟೀಕೆಗಳಿವೆ. ಈ ಹಿನ್ನೆಲೆಯಲ್ಲಿ ಗೋವಾ ಕನ್ನಡಿಗರ ಪ್ರಶ್ನೆಯಲ್ಲಾದರೂ ಕನ್ನಡಪರ ಸಂಘಟನೆಗಳು ಬೀದಿಗೆ ಇಳಿದು ಹೋರಾಡಬೇಕಾಗಿದೆ. ಬರೀ ಹೋರಾಟ ಮಾಡಿದರೆ ಸಾಲದು ಸುರಿಯುವ ಮಳೆಗೆ ಬೀದಿಗೆ ಬಿದ್ದಿರುವ ಅಲ್ಲಿಯ ಕನ್ನಡಿಗರ ನೆರವಿಗೆ ಧಾವಿಸಲಿ. ಗೋವಾದ ಬಿಜೆಪಿ ಸರಕಾರ ಕನ್ನಡಿಗರ ಮನೆಗಳನ್ನು ಧ್ವಂಸ ಮಾಡಿ ಬೀದಿಪಾಲು ಮಾಡಿರುವಾಗ ಕೇಂದ್ರ ಸರಕಾರ ಮೂಕ ಪ್ರೇಕ್ಷಕನಾಗಿದೆ. ಪ್ರಧಾನಿ ನರೇಂದ್ರ ಮೋದಿ ಎಂದಿನಂತೆ ವೌನ ತಾಳಿದ್ದಾರೆ. ಈ ವೌನ ಅತ್ಯಂತ ಬೇಜವಾಬ್ದಾರಿ ಮಾತ್ರವಲ್ಲ ಅತ್ಯಂತ ಅಮಾನವೀಯವಾಗಿದೆ. ನರೇಂದ್ರ ಮೋದಿ ಗುಜರಾತ್‌ಗೆ ಮಾತ್ರ ಪ್ರಧಾನಿಯಲ್ಲ.

ಅವರು ದೇಶಕ್ಕೆ ಪ್ರಧಾನಿ ಎಂಬುದನ್ನು ತಿಳಿದುಕೊಳ್ಳಬೇಕು. ಈಗ ಅಲ್ಲಿಂದ ಬಂದಿರುವ ವರದಿಗಳ ಪ್ರಕಾರ 200ಕ್ಕೂ ಹೆಚ್ಚು ಮಂದಿ ಅಕ್ಷರಶಃ ಬೀದಿ ಪಾಲಾಗಿದ್ದಾರೆ. ಮಳೆ ಸುರಿಯುತ್ತಲೇ ಇದೆ. ಬೀದಿ ಪಾಲಾದವರೆಲ್ಲ ಬಡ ಕೂಲಿ ಕಾರ್ಮಿಕರು. ಊರಿಗೆ ಹೋಗಲೂ ಅವರ ಕೈಯಲ್ಲಿ ಹಣವಿಲ್ಲ. ಇಂತಹ ಸ್ಥಿತಿಯಲ್ಲಿರುವವರಿಗೆ ನೆರವು ಕಲ್ಪಿಸಬೇಕಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಮಾತ್ರವಲ್ಲ ಕರ್ನಾಟಕದ ಸಚಿವ ಆರ್.ವಿ. ದೇಶಪಾಂಡೆ ಮತ್ತು ವಿಧಾನಪರಿಷತ್ ಸದಸ್ಯ ಐವನ್ ಡಿ‘ಸೋಜ ಗೋವಾಕ್ಕೆ ಭೇಟಿ ನೀಡಿ ಇನ್ನು ಮುಂದೆ ಕನ್ನಡಿಗರ ಮನೆಗಳನ್ನು ನೆಲಸಮಗೊಳಿಸದಂತೆ ಸರಕಾರಕ್ಕೆ ಮನವಿ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದರು. ಆಗ ಭರವಸೆ ನೀಡಿ ಹೋದ ನಾಯಕರು ಈಗ ಎಲ್ಲಿದ್ದಾರೆ ಎಂಬುದು ಪತ್ತೆಯಿಲ್ಲ.

ಮತ್ತೆ ಚುನಾವಣೆ ಬಂದಾಗ ಇವರು ಬರುತ್ತಾರೆ ಎಂದು ಅಲ್ಲಿನ ಕನ್ನಡಿಗರು ಹೇಳುತ್ತಾರೆ. ಅದೇನೇ ಇರಲಿ ಆಧುನಿಕ ಗೋವಾವನ್ನು ಕಟ್ಟಿ ಬೆಳೆಸಿ, ತಮ್ಮ ರಕ್ತವನ್ನು ನೀರು ಮಾಡಿಕೊಂಡು ಗೋವಾವನ್ನು ಒಂದು ಪ್ರವಾಸಿತಾಣವನ್ನಾಗಿ ಮಾಡಿದ ಗೋವಾ ಕನ್ನಡಿಗರ ರಕ್ಷಣೆಗೆ ಕೇಂದ್ರ ಸರಕಾರ, ಕರ್ನಾಟಕ ಸರಕಾರ ಮತ್ತು ಗೋವಾ ಸರಕಾರಗಳು ಮುಂದಾಗಬೇಕಾಗಿದೆ. ತಕ್ಷಣ ಅವರಿಗೆ ಬೇರೆಕಡೆ ಪುನರ್ವಸತಿ ಕಲ್ಪಿಸಬೇಕು. ಬಂಡವಾಳಶಾಹಿಗಳಿಗೆ ರತ್ನಗಂಬಳಿ ಹಾಸುವ ಸರಕಾರಗಳು ದುಡಿಯುವ ಜನರ ಬಗ್ಗೆ ಇಂತಹ ನೀಚತನದಿಂದ ವರ್ತಿಸುವುದು ಸರಿಯಲ್ಲ. ತಕ್ಷಣ ಅವರಿಗೆ ಆಸರೆ ಒದಗಿಸುವುದು ಗೋವಾ ಸರಕಾರದ ಕರ್ತವ್ಯವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)