varthabharthi

ಸಿನಿಮಾ

ವಿವಾದದ ಸುಳಿಯಲ್ಲಿ ‘ನ್ಯೂಟನ್’

ವಾರ್ತಾ ಭಾರತಿ : 29 Sep, 2017

ಆಸ್ಕರ್‌ಗೆ ಭಾರತದ ಸ್ಪರ್ಧಿಯಾಗಿ ನಾಮಕರಣಗೊಂಡಾಗ ಪ್ರಶಂಸೆಗಳ ಮಹಾಪೂರವೇ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಚಿತ್ರದ ಬಗ್ಗೆ ಅಪಸ್ವರವೂ ಕೇಳಿಬಂದಿತ್ತು. ಅದಕ್ಕೆ ಕಾರಣವಿಷ್ಟೇ. ‘ನ್ಯೂಟನ್’ ಚಿತ್ರದ ಕಥೆಯನ್ನು, ಇರಾನ್‌ನ ಜನಪ್ರಿಯ ಚಿತ್ರ ‘ಸೀಕ್ರೆಟ್ ಬ್ಯಾಲೆಟ್’ನಿಂದ ಕದಿಯಲಾಗಿದೆಯೆಂಬ ಆರೋಪಗಳು ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದವು. ಆದರೆ ಅನುರಾಗ್ ಕಶ್ಯಪ್‌ರನಂತಹ ಬಾಲಿವುಡ್‌ನ ಖ್ಯಾತ ನಿರ್ದೇಶಕರು ‘ನ್ಯೂಟನ್’ ಪರವಾಗಿ ಧ್ವನಿಯೆತ್ತಿದ್ದಾರೆ.

ಅನುರಾಗ್ ಕಶ್ಯಪ್ ಅವರು ‘ನ್ಯೂಟನ್’ ನಿರ್ಮಾಪಕರ ಸಮ್ಮತಿ ಪಡೆದು, ‘ಸೀಕ್ರೆಟ್ ಬ್ಯಾಲೆಟ್’ನ ನಿರ್ಮಾಪಕ ಮಾರ್ಕೊ ಮುಲ್ಲರ್‌ಗೆ, ‘ನ್ಯೂಟನ್’ ಚಿತ್ರವನ್ನು ತೋರಿಸುವ ಏರ್ಪಾಡು ಮಾಡಿದ್ದರು. ಚಿತ್ರ ವೀಕ್ಷಿಸಿದ ಮಾರ್ಕೊ ಮುಲ್ಲರ್, ‘ನ್ಯೂಟನ್’ನನ್ನು ಮುಕ್ತಕಂಠದಿಂದ ಪ್ರಶಂಸಿದ್ದಾರೆ. ಎರಡೂ ಚಿತ್ರಗಳ ಪರಿಕಲ್ಪನೆ ಒಂದೇ ಆಗಿದೆಯಾದರೂ, ‘ನ್ಯೂಟನ್’ ಚಿತ್ರದ ಕಥೆಯು ‘ಸೀಕ್ರೆಟ್ ಬ್ಯಾಲೆಟ್’ಗಿಂತ ಸಂಪೂರ್ಣ ವಿಭಿನ್ನವಾಗಿದೆ ಎಂದೂ ಮುಲ್ಲರ್ ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲದೆ ಆಸ್ಕರ್ ಸ್ಪರ್ಧೆಯಲ್ಲಿ ‘ನ್ಯೂಟನ್’ಗೆ ಶುಭ ಹಾರೈಸಿದ್ದಾರೆ.

ಬರ್ಲಿನ್ ಚಿತ್ರೋತ್ಸವದಲ್ಲೂ ಪ್ರಶಸ್ತಿ ಗೆದ್ದಿರುವ ‘ನ್ಯೂಟನ್’ನ ಕಥೆಯನ್ನು ಸೀಕ್ರೆಟ್ ಬ್ಯಾಲೆಟ್‌ನಿಂದ ಕದಿಯಲಾಗಿದೆಯೆಂಬ ಆರೋಪಗಳಲ್ಲಿ ಎಳ್ಳಷ್ಟೂ ಹುರುಳಿಲ್ಲವೆಂದು ಕಶ್ಯಪ್ ಹೇಳಿದ್ದಾರೆ.

‘ಸೀಕ್ರೆಟ್ ಬ್ಯಾಲೆಟ್’ನ ನಿರ್ದೇಶಕ ಬಾಬಕ್ ಪಯಾಮಿ ಕೂಡಾ ‘ನ್ಯೂಟನ್’ ವೀಕ್ಷಿಸಿದ್ದು, ಒರಿಜಿನಲ್ ಚಿತ್ರವೆಂದು ಕ್ಲೀನ್ ಚಿಟ್ ನೀಡಿದ್ದಾರೆ. ಒಂದು ವೇಳೆ ಎರಡೂ ಚಿತ್ರಗಳ ಥೀಮ್ ಒಂದೇ ಆಗಿದ್ದರೂ, ನಿರ್ದೇಶಕರು ಅದನ್ನು ಬೇರೆ ಬೇರೆ ಧ್ವನಿಗಳಲ್ಲಿ ಅಭಿವ್ಯಕ್ತಿಸಬಹುದಾಗಿದೆ ಎಂದವರು ಹೇಳಿದ್ದಾರೆ.

‘ನ್ಯೂಟನ್’ ಆಸ್ಕರ್‌ಗೆ ಈಗ ಎಲ್ಲಾ ಊಹಾಪೋಹಗಳಿಗೂ ತೆರೆ ಎಳೆದಿರುವ ಭಾರತೀಯ ಚಲನಚಿತ್ರ ಒಕ್ಕೂಟ (ಎಫ್‌ಎಫ್‌ಐ)ವು, ‘ನ್ಯೂಟನ್’ ಚಿತ್ರವು ಆಸ್ಕರ್‌ಗೆ ಭಾರತದ ಅಧಿಕೃತ ಸ್ಪರ್ಧಿಯಾಗಿ ಮುಂದುವರಿಯಲಿದೆಯೆಂದು ಸ್ಪಷ್ಟಪಡಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)