varthabharthi

ಸಿನಿಮಾ

ಮಾಲಿವುಡ್ ಕ್ವೀನ್ 'ಮಂಜಿಮಾ'

ವಾರ್ತಾ ಭಾರತಿ : 29 Sep, 2017

‘ಕ್ವೀನ್’, ಬಾಲಿವುಡ್ ನಟಿ ಕಂಗನಾ ರಾಣಾವತ್‌ರ ವೃತ್ತಿಬದುಕಿಗೆ ಹೊಸ ತಿರುವನ್ನು ನೀಡಿದ ಚಿತ್ರ. ನಾಯಕಿ ಪ್ರಧಾನ ಕಥಾವಸ್ತುವನ್ನು ಹೊಂದಿರುವ ಕ್ವೀನ್ ಚಿತ್ರದ ಅಭಿನಯಕ್ಕಾಗಿ ಕಂಗನಾಗೆ ರಾಷ್ಟ್ರಪ್ರಶಸ್ತಿಯೂ ಒಲಿದುಬಂದಿತ್ತು.

ಅದೇ ‘ಕ್ವೀನ್’ ದಕ್ಷಿಣ ಭಾರತದ ಚಿತ್ರರಂಗವನ್ನೂ ಮೋಡಿ ಮಾಡಿ ಬಿಟ್ಟಿದೆ. ಸ್ಯಾಂಡಲ್‌ವುಡ್‌ನಲ್ಲೂ ಈ ಚಿತ್ರ ರಿಮೇಕ್ ಆಗುತ್ತಿದ್ದು, ಪರೂಲ್ ಯಾದವ್ ನಾಯಕಿಯಾಗಿದ್ದಾರೆ. ನಟ ರಮೇಶ್ ಅರವಿಂದ್ ಕನ್ನಡ ಮಾತ್ರವಲ್ಲ ತಮಿಳಿನಲ್ಲೂ ಕ್ವೀನ್ ರಿಮೇಕ್‌ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಅದರೆ ತಮಿಳು ರಿಮೇಕ್‌ಗೆ ಕಾಜಲ್ ಅಗರ್‌ವಾಲ್ ನಾಯಕಿಯಾಗಿದ್ದಾರೆ. ತೆಲುಗಿನಲ್ಲಿಯೂ ಈ ಚಿತ್ರ ರಿಮೇಕ್ ಆಗುತ್ತಿದ್ದು, ತಮನ್ನಾ ಕ್ವೀನ್ ಆಗಿದ್ದಾರೆ.

ಸಾಮಾನ್ಯವಾಗಿ ರಿಮೇಕ್‌ನಿಂದ ದೂರವಿರುವ ಮಲಯಾಳಂ ಚಿತ್ರರಂಗ ಕೂಡಾ ಕ್ವೀನ್‌ಗೆ ಮರುಳಾಗಿದೆ. ಮಲಯಾಳಂನಲ್ಲೂ ಅದು ರಿಮೇಕ್ ಆಗಲಿರುವುದು ಖಚಿತವಾಗಿದ್ದು, ನಾಯಕಿ ಪಾತ್ರಕ್ಕೆ ಮಂಜಿಮಾ ಮೋಹನ್ ಆಯ್ಕೆಯಾಗಿದ್ದಾರೆ. ‘ಸಂ ಸಂ’ ಎಂದು ವಿಚಿತ್ರ ಹೆಸರಿಡಲಾದ ಈ ಚಿತ್ರದ ಶೂಟಿಂಗ್ ಸದ್ಯದಲ್ಲೇ ಆರಂಭಗೊಳ್ಳಲಿದೆ. ‘ಕ್ವೀನ್‌ನ ಮಲಯಾಳಂನ ರಿಮೇಕ್‌ಗೆ ನಾಯಕಿಯಾಗಿರುವುದು ನನ್ನ ಸೌಭಾಗ್ಯ’ವೆಂದು ಮಂಜಿಮಾ ಹೇಳುತ್ತಾರೆ. ತನ್ನ ಕಥಾಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸಲು ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಆಕೆ ಹೇಳಿದ್ದಾರೆ. ಸೂಪರ್‌ಹಿಟ್ ಮಲಯಾಳಂ ಚಿತ್ರ ‘ಒರು ವಡಕ್ಕನ್ ಸೆಲ್ಫಿ’ಯಲ್ಲಿ ತನ್ನ ಅಭಿನಯದಿಂದ ಗಮನಸೆಳೆದಿದ್ದ ಮಂಜಿಮಾ, ‘ಸಂಸಂ’ ತನ್ನ ಚಿತ್ರಬದುಕಿಗೆ ಇನ್ನೊಂದು ಬ್ರೇಕ್ ನೀಡಲಿದೆಯೆಂಬ ನಿರೀಕ್ಷೆಯಲ್ಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)