varthabharthi

ದಿಲ್ಲಿ ದರ್ಬಾರ್

ದಿಲ್ಲಿ ದರ್ಬಾರ್

ವಾರ್ತಾ ಭಾರತಿ : 1 Oct, 2017

ಬೆದರದ ಯಶವಂತ್

ಆರ್ಥಿಕತೆಯನ್ನು ನಿಭಾಯಿಸುವಲ್ಲಿ ಎಡವಿದ ಕೇಂದ್ರ ಸರಕಾರದ ವಿರುದ್ಧ ಬಿಜೆಪಿ ಹಿರಿಯ ಮುಖಂಡ ಯಶವಂತ್ ಸಿನ್ಹಾ ಕಿಡಿ ಕಾರಿರುವುದು ಪಕ್ಷದ ಮುಖಂಡರಿಗೆ ಒಗಟಾಗಿ ಪರಿಣಮಿಸಿದೆ. ಅವರು ಸವಕಲು ನಾಣ್ಯ; ಆದಾಗ್ಯೂ ಮಹತ್ವ ಪಡೆಯಲು ಬಯಸಿದ್ದಾರೆ ಎನ್ನುವುದು ಕೆಲವರ ವಿಶ್ಲೇಷಣೆ; ಮೋದಿ ಮೂಲೆಗುಂಪು ಮಾಡಿರುವ ಬಿಜೆಪಿಯ ಹಿರಿತಲೆಗಳ ಪರವಾಗಿ ಸಿನ್ಹಾ ಮಾತನಾಡಿದ್ದಾರೆ ಎನ್ನುವುದು ಮತ್ತೆ ಕೆಲವರ ಅಂಬೋಣ. ಸಿನ್ಹಾ ಅವರ ವಾಗ್ದಾಳಿ ಬಳಿಕ ಅವರನ್ನು ಭೇಟಿ ಮಾಡಿದ ಪತ್ರಕರ್ತರು ಕುತೂಹಲದಿಂದ ಕೇಳಿದ್ದು, ‘‘ನಿಮ್ಮ ಪುತ್ರ ಜಯಂತ್ ಸಿನ್ಹಾ ತಾವು ಇಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಳ್ಳಬಾರದು ಎಂಬ ಕಾರಣಕ್ಕೆ ಸುಮ್ಮನಿರಿ ಎಂದು ಹೇಳಲಿಲ್ಲವೇ?.’’ ಈ ಪ್ರಶ್ನೆಗೆ ಸಿನ್ಹಾ ಉತ್ತರ ಸರಳವಾಗಿತ್ತು. ‘‘ನಾನು ಸ್ವಂತಿಕೆಯ ವ್ಯಕ್ತಿ. ನನ್ನ ಪುತ್ರನಿಗೂ ಅದು ಗೊತ್ತು. ಆತ ಆತನ ಕೆಲಸ ಮಾಡುತ್ತಾನೆ. ನಾನು ನನ್ನ ಕೆಲಸ ಮಾಡುತ್ತೇನೆ.’’ ಈ ವಾಗ್ದಾಳಿಯಿಂದಾಗಿ ಸಿನ್ಹಾ ಮತ್ತಷ್ಟು ಸುದ್ದಿಯಲ್ಲಿರಲು ಸಜ್ಜಾದಂತಿದೆ. ಅಥವಾ ಆರ್ಥಿಕತೆ ಪುನಶ್ಚೇತನ ಪಡೆದುಕೊಳ್ಳುವವರೆಗಂತೂ ಖಚಿತ.


ನಾಯ್ಡುಗೆ ಹುದ್ದೆ ಕಿರಿಕಿರಿ?
ಉಪರಾಷ್ಟ್ರಪತಿಯಾದ ಬಳಿಕವೂ ವೆಂಕಯ್ಯನಾಯ್ಡು ಅವರಿಗೆ ತಮ್ಮ ರಾಜಕೀಯ ಒಲವು ಹತ್ತಿಕ್ಕಿಕೊಳ್ಳುವುದು ಸಾಧ್ಯವಾಗಿಲ್ಲ. ಒಂದಷ್ಟು ವಿವಾದಾಸ್ಪದ ಹೇಳಿಕೆಗಳೂ ಅವರಿಂದ ಬಂದಿವೆ. ಆದರೆ ಉಪರಾಷ್ಟ್ರಪತಿ ಹುದ್ದೆಯ ಮೇಲೆ ಇರುವ ನಿರ್ಬಂಧ ದಿಂದಾಗಿ ಅವರಿಗೆ ಉಸಿರು ಕಟ್ಟಿದಂತಾಗಿದೆಯೇ? ಮಾಹಿತಿ ಮತ್ತು ಪ್ರಸಾರ ಖಾತೆಯ ಮಾಜಿ ಸಚಿವರಾದ ನಾಯ್ಡು ಒಂದು ಜತೆ ಚಪ್ಪಲಿ ಖರೀದಿಸುವ ಸಲು ವಾಗಿ ದಿಲ್ಲಿಯ ಪ್ರಸಿದ್ಧ ಖಾನ್ ಮಾರ್ಕೆಟ್‌ಗೆ ತೆರಳಲು ಬಯಸಿದ್ದರು. ಉಪರಾಷ್ಟ್ರಪತಿ ಸ್ವತಃ ಚಪ್ಪಲಿ ಖರೀದಿಗೆ ತೆರಳುವುದಾದರೆ ಖಾನ್ ಮಾರ್ಕೆಟ್ ಪ್ರದೇಶಕ್ಕೆ ಬಿಗಿ ಭದ್ರತೆ ಒದಗಿಸಬೇಕಾಗುತ್ತದೆ ಎಂದು ಕರ್ತವ್ಯಾಧಿ ಕಾರಿಗಳು ಮಾಹಿತಿ ನೀಡಿದರು. ಇದರಿಂದ ಇರಿಸು ಮುರಿಸಿಗೆ ಒಳಗಾದ ನಾಯ್ಡು ತಮ್ಮ ಯೋಚನೆಯನ್ನೇ ಕೈಬಿಟ್ಟು, ಚಪ್ಪಲಿ ಖರೀದಿಸಿ ತರುವಂತೆ ಸಹವರ್ತಿಗಳಿಗೆ ಸೂಚಿಸಿದರು. ವಿರೋಧ ಪಕ್ಷಗಳ ಮೇಲೆ ವಾಗ್ದಾಳಿ ನಡೆಸುವಂಥ ರಾಜಕೀಯ ಹೇಳಿಕೆಗಳನ್ನು ನಿಲ್ಲಿಸುವಂತೆ ಬಹುಶಃ ಯಾರೂ ಅವರಿಗೆ ಸಲಹೆ ನೀಡಿಲ್ಲ!


ದಿಗ್ವಿಜಯ ನಡೆ ನಿಗೂಢ
ಡಿಗ್ಗಿ ರಾಜರ ನಡೆ ದಿಲ್ಲಿಯಲ್ಲಿ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ (24, ಅಕ್ಬರ್‌ರಸ್ತೆ) ಕುತೂಹಲಕ್ಕೆ ಕಾರಣವಾಗಿದೆ. ದಿಲ್ಲಿ ಮತ್ತು ಮಾಧ್ಯಮದಿಂದ ಆರು ತಿಂಗಳ ಕಾಲ ಸಿಂಗ್ ದೂರ ಉಳಿಯಲಿದ್ದಾರೆ. ನರ್ಮದಾ ಪರಿಕ್ರಮದ ಮೂಲಕ 3,300 ಕಿಲೋಮೀಟರ್ ಪಾದಯಾತ್ರೆಗೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮುಂದಾಗಿದ್ದಾರೆ. ತಮ್ಮ ಪರಿಕ್ರಮ ಆರಂಭಿಸುವ ಮುನ್ನ ಇತ್ತೀಚೆಗೆ ರಾಹುಲ್‌ಗಾಂಧಿಯವರನ್ನು ಭೇಟಿ ಮಾಡಿದ್ದರು. ಇವರ ಪಾದಯಾತ್ರೆ, ಮುಂದಿನ ವರ್ಷ ಚುನಾವಣೆ ನಡೆಯುವ ಮಧ್ಯಪ್ರದೇಶ ವಿಧಾನಸಭೆಯ 100 ಕ್ಷೇತ್ರಗಳಲ್ಲಿ ಸಂಚರಿಸುತ್ತದೆ. ಈ ಪರಿಕ್ರಮದಲ್ಲಿ ಕೇವಲ 50 ಮಂದಿ ಮಾತ್ರ ಇರುತ್ತಾರೆ ಎಂದು ಡಿಗ್ಗಿ ಸ್ಪಷ್ಟಪಡಿಸಿದ್ದರೂ, ವಿಮರ್ಶಕರ ಅಂದಾಜಿನಂತೆ, ಚುನಾವಣೆ ಹಿನ್ನೆಲೆಯಲ್ಲಿ ಈ ಪರಿಕ್ರಮ ಸಮೂಹ ಸಂಪರ್ಕ ಕಾರ್ಯಕ್ರಮವಾಗಿ ಮಾರ್ಪಡುವ ಸಾಧ್ಯತೆ ಇದೆ. ಅವರು ರಾಜ್ಯ ರಾಜಕೀಯದಿಂದ ಹೊರಗುಳಿದು ದಶಕ ಕಳೆದಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ಹಿನ್ನಡೆಯ ಸೂಚನೆ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಕಾಂಗ್ರೆಸ್ ಪಕ್ಷ ಸಿಎಂ ಅಭ್ಯರ್ಥಿಯಾಗಿ ಘೋಷಿಸಲು ಸಜ್ಜಾಗಿರುವ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್ ಮುಖಂಡರ ನಿದ್ದೆಗೆಡಿಸಲು ಡಿಗ್ಗಿರಾಜ ಮುಂದಾದಂತಿದೆ.


ಸ್ವಾಮಿ ಪುಸ್ತಕ ಬಿಡುಗಡೆಯಲ್ಲಿ ಮಾಧ್ಯಮಯುದ್ಧ
ವಿವಾದ ಎಲ್ಲೆಂದರಲ್ಲಿ ಸುಬ್ರಮಣಿಯನ್ ಸ್ವಾಮಿಯನ್ನು ಸುತ್ತಿಕೊಂಡಂತೆ ಕಾಣುತ್ತದೆ. ಅವರ ಪುಸ್ತಕ ಬಿಡುಗಡೆ ಸಮಾರಂಭವೂ ಇದಕ್ಕೆ ಹೊರತಾಗಿರಲಿಲ್ಲ. ಈ ಬಿಜೆಪಿ ಮುಖಂಡನ ಬಗ್ಗೆ ಪತ್ನಿ ರೊಕ್ಸ್ನಾ ಸ್ವಾಮಿ, ‘ಎವಾಲ್ವಿಂಗ್ ವಿದ್ ಸುಬ್ರಮಣಿಯನ್ ಸ್ವಾಮಿ: ಎ ರೋಲರ್ ಕೋಸ್ಟರ್ ರೈಡ್’ ಎಂಬ ಕೃತಿ ಬರೆದಿದ್ದಾರೆ. ಇದು ಸುಬ್ರಮಣಿಯನ್ ಸ್ವಾಮಿ ಜೀವನದ ಮಹತ್ವದ ಮತ್ತು ಆಸಕ್ತಿದಾಯಕ ಘಟನಾವಳಿಗಳ ಚಿತ್ರಣವನ್ನು ಒಳಗೊಂಡಿದೆ. ದಿಲ್ಲಿಯಲ್ಲಿ ಇತ್ತೀಚೆಗೆ ನಡೆದ ಪುಸ್ತಕ ಬಿಡುಗಡೆ ಸಮಾರಂಭ ಅಸ್ತವ್ಯಸ್ತ ಹಾಗೂ ನಾಟಕೀಯ ಘಟನಾವಳಿಗಳನ್ನು ಹೊಂದಿತ್ತು. ಪತ್ರಕರ್ತರಾದ ರಾಜದೀಪ್ ಸರ್ದೇಸಾಯಿ ಮತ್ತು ತವ್ಲೀನ್ ಸಿಂಗ್ ಚರ್ಚಾಗೋಷ್ಠಿಯಲ್ಲಿ ಪರಸ್ಪರ ಜಿದ್ದಿಗೆ ಬಿದ್ದರು. ಅಲ್ಪಸಂಖ್ಯಾತ ಸಮುದಾಯದ ಮೇಲೆ ಮತ್ತು ಆರ್‌ಬಿಐ ಗವರ್ನರ್ ಆಗಿದ್ದ ರಘುರಾಮ್‌ರಾಜನ್ ಅವರಂಥ ವ್ಯಕ್ತಿಗಳ ಮೇಲೆ ವಾಗ್ದಾಳಿ ನಡೆಸುವ ಸ್ವಾಮಿ ಚಟವನ್ನು ಸರ್ದೇಸಾಯಿ ಟೀಕಿಸಿದ್ದು, ಎಲ್ಲ ವಿವಾದದ ಮೂಲಬಿಂದು. ಸ್ವಾಮಿಯನ್ನು ಹಿಂಸಾತ್ಮಕ, ಕೇಸರಿ ಬಲಾಢ್ಯ ಎಂದು ಸರ್ದೇಸಾಯಿ ಬಿಂಬಿಸಿದ್ದರಿಂದ ತವ್ಲೀನ್ ಸಿಂಗ್ ಅಸಹಾಯಕರಾದರು. ಈ ಅಭಿಪ್ರಾಯದ ಬಳಿಕ ಕೆಲ ಪ್ರೇಕ್ಷಕರೂ ದಾಳಿಗೆ ಮುಂದಾದರು. ಆಗ ಇಬ್ಬರು ಪತ್ರಕರ್ತರು ಪರಸ್ಪರರ ದೂಷಣೆಯಲ್ಲಿ ತೊಡಗಿದರು. ಸ್ವಾಮಿಯೇನೋ ಗಮನ ಸೆಳೆದರು. ಆದರೆ ಇಬ್ಬರು ಪತ್ರಕರ್ತರ ಅಹಂಗೆ ಪೆಟ್ಟು ಬಿತ್ತು.


ಹಾರ್ದಿಕ್- ರಾಹುಲ್ ಭಾಯಿ ಭಾಯಿ
ಗುಜರಾತ್ ಸಿಎಂ ವಿಜಯ್ ರೂಪಾನಿಯವರ ಅಸ್ತಿತ್ವಕ್ಕೇ ಧಕ್ಕೆ ಬರುವಂತಾಗಿದೆ. ರಾಜ್ಯದ ಚುನಾವಣೆಯ ಚಟುವಟಿಕೆಗಳಲ್ಲಿ ಸಿಎಂ ಬಹುತೇಕ ಅಪ್ರಸ್ತುತ ಎನಿಸಿದ್ದಾರೆ. ರಾಹುಲ್‌ಗಾಂಧಿ ಅಥವಾ ಪಾಟಿದಾರ್ ಆಂದೋಲನದ ವಮುಖಂಡ ಹಾರ್ದಿಕ್ ಪಟೇಲ್ ಇಬ್ಬರೂ ಮೋದಿ ಹಾಗೂ ಅಮಿತ್ ಶಾ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ. ಗುಜರಾತ್‌ನ ಪ್ರಗತಿ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ರಾಹುಲ್ ಮತ್ತು ಹಾರ್ದಿಕ್ ಅಣಕವಾಡುತ್ತಿದ್ದಾರೆ. ಗುಜರಾತ್‌ನ ನಾಗರಿಕ ಸೌಲಭ್ಯ ಸ್ಥಿತಿಗತಿ ಕುರಿತ ಒಂದು ಸಾಮಾನ್ಯ ಪೋಸ್ಟ್, ಹಿಮದುಂಡೆ ಪರಿಣಾಮ ಪಡೆದು ‘ವಿಕಾಸ್ ಗಾಂದೊ ಥಾಯೊ ಚೇ’ ಶೀರ್ಷಿಕೆಯಡಿ ಪ್ರಬಲ ಸಮಾಜಮಾಧ್ಯಮ ಆಂದೋಲನವಾಗಿ ರೂಪುಗೊಂಡಿದೆ. ಪಟೇಲ್ ಹಾಗೂ ರಾಹುಲ್ ಬಿಜೆಪಿಯನ್ನು ಚುಚ್ಚುವ ಹೇಳಿಕೆಗಳ ವಿಚಾರದಲ್ಲಿ ಗಮನ ಕೇಂದ್ರೀಕರಿಸಿದ್ದಾರೆ. ಇಬ್ಬರೂ ಇದಕ್ಕಾಗಿ ಜತೆಯಾಗಿರುವುದು ಅನೌಪಚಾರಿಕವಾಗಿ ಸ್ಪಷ್ಟ. ಉದಾಹರಣೆಗೆ ರಾಹುಲ್ ಗುಜರಾತ್‌ಗೆ ಭೇಟಿ ನೀಡಿದಾಗ ಹಾರ್ದಿಕ್ ಸಾಮಾಜಿಕ ಜಾಲತಾಣದಲ್ಲಿ ಹಾರ್ದಿಕ ಸ್ವಾಗತ ಬಯಸಿದರು. ಇತ್ತೀಚಿನ ಸಮೀಕ್ಷೆ ಪ್ರಕಾರ, ಬಿಜೆಪಿ ಮುಂದಿನ ವರ್ಷದ ಚುನಾವಣೆಯಲ್ಲಿ ಸುಲಭವಾಗಿ ಗೆಲ್ಲಲಿದೆ. ಆದರೆ ಬಿಜೆಪಿ ಗೆಲುವು ಅಷ್ಟೊಂದು ಸಲೀಸಲ್ಲ ಎನ್ನುವುದು ತಳಮಟ್ಟದ ವಾಸ್ತವ. ಆದರೆ ಜನ ಮಾತ್ರ, ರಾಹುಲ್ ಹಾಗೂ ಅಖಿಲೇಶ್ ಯಾದವ್ ಉತ್ತರ ಪ್ರದೇಶದಲ್ಲಿ ಜತೆಯಾಗಿ ಬಿಜೆಪಿ ವಿರುದ್ಧ ಹೋರಾಡಿದರು. ಫಲಿತಾಂಶ ಏನಾಯಿತು ಎಂದು ಪ್ರಶ್ನಿಸುತ್ತಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)