varthabharthi

ಸಿನಿಮಾ

ಕನ್ನಡ ಸಿನೆಮಾ

ತಾರಕ್: ಇಮೇಜು ಬದಲಿಸುವ ಪ್ರಯತ್ನ

ವಾರ್ತಾ ಭಾರತಿ : 1 Oct, 2017
ಶಶಿಧರ ಚಿತ್ರದುರ್ಗ

ದರ್ಶನ್ ಬದಲಾಗುವ ಸೂಚನೆ ನೀಡಿದ್ದಾರೆ. ‘ಸಾರಥಿ’ ನಂತರ ತೆರೆಕಂಡ ಅವರ ಸಿನೆಮಾಗಳು ಸ್ಟಾರ್‌ಗಿರಿಯನ್ನೇ ಆಧರಿಸಿ ತಯಾರಾಗಿದ್ದವು. ಒಂದು ಸೀಮಿತ ಅಭಿಮಾನಿ ವರ್ಗಕ್ಕೆಂದೇ ಮಾಡಿದಂತಿದ್ದ ಈ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸನ್ನೇನೂ ಕಾಣಲಿಲ್ಲ. ಮತ್ತೊಂದೆಡೆ ಇಂತಹ ಹೀರೋನನ್ನು ವಿಜೃಂಭಿಸುವ ಚಿತ್ರಗಳಿಂದಾಗಿ ದರ್ಶನ್ ಕೂಡ ಕೌಟುಂಬಿಕ ಪ್ರೇಕ್ಷಕ ಸಮುದಾಯದಿಂದ ದೂರವಾಗಿದ್ದರು. ಈಗ ಎಚ್ಚೆತ್ತುಕೊಂಡಿರುವ ಅವರು ಹೀರೋಯಿಸಂನಿಂದ ಹೊರತಾಗಿ ಕಥಾಪ್ರಧಾನ ಚಿತ್ರವನ್ನು ಆಯ್ಕೆ ಮಾಡಿಕೊಂಡು ಭಿನ್ನ ಹಾದಿ ತುಳಿದಿದ್ದಾರೆ. ಆ ಮಟ್ಟಿಗೆ ‘ತಾರಕ್’ ಅವರಿಗೆ ನೆರವಿಗೆ ಬಂದಿದೆ.

‘ಮಿಲನ’ ಚಿತ್ರದ ಸೂಕ್ಷ್ಮ ಕತೆ, ಆಕರ್ಷಕ ನಿರೂಪಣೆಯಿಂದ ಸಿನಿಪ್ರೇಮಿಗಳ ಮನ ಗೆದ್ದಿದ್ದ ಪ್ರಕಾಶ್ ನಿರ್ದೇಶನದ ಚಿತ್ರ ಎನ್ನುವ ಕಾರಣಕ್ಕೂ ‘ತಾರಕ್’ ನಿರೀಕ್ಷೆ ಹುಟ್ಟಿಸಿತ್ತು. ಮಾಸ್ ಸ್ಟಾರ್ ಎಂದೇ ಗುರುತಿಸಿಕೊಂಡಿರುವ ದರ್ಶನ್‌ಗೆ ಅವರು ಹೇಗೆ ಚಿತ್ರ ಮಾಡಬಹುದು ಎಂದು ಉದ್ಯಮದವರಿಗೂ ಕುತೂಹಲವಿತ್ತು. ಎಲ್ಲರ ನಿರೀಕ್ಷೆ, ಕುತೂಹಲಗಳಿಗೆ ಪ್ರಕಾಶ್ ಸೂಕ್ತ ಉತ್ತರ ಕೊಟ್ಟಿದ್ದು ಮತ್ತೊಮ್ಮೆ ನಿರ್ದೇಶಕನಾಗಿ ತಮ್ಮ ಪ್ರತಿಭೆ ಸಾಬೀತು ಮಾಡಿದ್ದಾರೆ. ದರ್ಶನ್ ಕೂಡ ಸಿನೆಮಾದ ಯಾವ ಹಂತದಲ್ಲೂ ಮೂಗು ತೂರಿಸದೆ ನಿರ್ದೇಶಕನಿಗೆ ತಮ್ಮನ್ನು ಒಪ್ಪಿಸಿಕೊಂಡಿದ್ದಾರೆ. ಹಾಗಾಗಿ ‘ತಾರಕ್’ ಸದಭಿರುಚಿಯ ಫ್ಯಾಮಿಲಿ ಎಂಟರ್‌ಟೇನರ್ ಆಗಿ ತೆರೆ ಮೇಲೆ ಮೂಡಿದೆ.

ಸಾಲು ಸಾಲಾಗಿ ಹೊಡೆದಾಟದ ಸಿನೆಮಾಗಳನ್ನು ಮಾಡಿಕೊಂಡು ಬಂದಿದ್ದ ದರ್ಶನ್‌ಗೆ ಇಂಥದ್ದೊಂದು ಕತೆ ಹೆಣೆಯುವುದು ಸವಾಲೇ ಸರಿ. ಪ್ರಕಾಶ್ ಬುದ್ಧಿವಂತಿಕೆಯಿಂದ ಕತೆ ಮಾಡಿಕೊಂಡಿದ್ದಾರೆ. ದರ್ಶನ್‌ರ ಮಾಸ್ ಇಮೇಜ್‌ಗೂ ಧಕ್ಕೆಯಾಗದಂತೆ ಒಂದಷ್ಟು ಆ್ಯಕ್ಷನ್ ಮಾಡಿಕೊಂಡು ಚೆಂದದ ತ್ರಿಕೋನ ಪ್ರೇಮಕಥೆ ಹೆಣೆದಿದ್ದಾರೆ. ಜೊತೆಗೆ ತಾತ-ಮೊಮ್ಮಗನ ಭಾವುಕ ಸನ್ನಿವೇಶಗಳಿಗೂ ಜಾಗವಿದೆ. ಪ್ರೀತಿ, ಕೌಟುಂಬಿಕ ಮೌಲ್ಯಗಳೆದುರು ಹೊಡೆದಾಟದ ಸನ್ನಿವೇಶಗಳು ಮುನ್ನೆಲೆಯಲ್ಲಿ ಕಾಣಿಸದಂತೆ ನಿರೂಪಿಸುವಲ್ಲಿ ಪ್ರಕಾಶ್ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ದರ್ಶನ್‌ರ ಮಾಸ್ ಅಭಿಮಾನಿ ಬಳಗವೂ ಖುಷಿಯಿಂದ ಸಿನೆಮಾ ಮೆಚ್ಚಿಕೊಳ್ಳುತ್ತಾರೆ.

ಇನ್ನು ಅಭಿನಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ದರ್ಶನ್, ಶಾನ್ವಿ ಶ್ರೀವತ್ಸ ಮತ್ತು ಶೃತಿ ಹರಿಹರನ್ ತಮ್ಮ ಪಾತ್ರಗಳ ಔಚಿತ್ಯ ಅರಿತು ನಟಿಸಿದ್ದಾರೆ. ದರ್ಶನ್ ಇಲ್ಲಿ ನಿರ್ದೇಶಕರ ನಟನಾಗಿದ್ದು, ಭಾವುಕ ಸನ್ನಿವೇಶಗಳಲ್ಲಿ ಗಮನ ಸೆಳೆಯುತ್ತಾರೆ. ಸಾಮಾನ್ಯವಾಗಿ ಸ್ಟಾರ್ ಮಾಸ್ ಹೀರೋಗಳ ಚಿತ್ರಗಳಲ್ಲಿ ನಾಯಕಿಯರಿಗೆ ನಟನೆಗೆ ಹೆಚ್ಚು ಸ್ಕೋಪ್ ಇರುವುದಿಲ್ಲ. ಆದರೆ ಇಲ್ಲಿ ನಾಯಕಿಯರಾದ ಶಾನ್ವಿ ಮತ್ತು ಶೃತಿ ಹರಿಹರನ್ ಅವರಿಗೆ ಒಳ್ಳೆಯ ಸ್ಕೋಪ್ ಇದೆ. ಅವರು ಕೂಡ ಪೈಪೋಟಿಗೆ ಬಿದ್ದಂತೆ ನಟಿಸಿದ್ದಾರೆ. ಇನ್ನು ಹಿರಿಯ ನಟ ದೇವರಾಜ್ ಅವರಿಗಿದು ನಿಸ್ಸಂಶಯವಾಗಿ ವೃತ್ತಿ ಬದುಕಿನ ಉತ್ತಮ ಪಾತ್ರಗಳಲ್ಲೊಂದು. ಎಪ್ಪತ್ತೈದರ ತಾತನ ಪಾತ್ರವನ್ನು ಅವರು ಉತ್ತಮವಾಗಿ ನಿಭಾಯಿಸಿದ್ದಾರೆ. ಚಿತ್ರದ ಸದಭಿರುಚಿಗೆ ಕಪ್ಪುಚುಕ್ಕೆ ಇಟ್ಟಂತೆ ಕುರಿ ಪ್ರತಾಪ್‌ರ ಒಂದು ಕೆಟ್ಟ ಕಾಮಿಡಿ ಸೀನ್ ಇದೆ. ಅದು ಹೇಗೆ ಪ್ರಕಾಶ್ ಇದನ್ನು ಚಿತ್ರಿಸಿದರೋ!?

ಅರ್ಜುನ್ ಜನ್ಯ ಸಂಗೀತ ಸಂಯೋಜನೆಯಲ್ಲಿ ಸಾಹಿತ್ಯವೇನೂ ಕಿವಿಗೆ ಕೇಳಿಸುವುದಿಲ್ಲ. ಹಾಗೆಂದು ಸಂಗೀತ ಅಬ್ಬರವಾಗೇನೂ ಇಲ್ಲ. ಆದರೆ ಥಿಯೇಟರ್‌ನಿಂದಾಚೆ ಬಂದರೆ ಹಾಡುಗಳು ನೆನಪಾಗುವುದಿಲ್ಲವಷ್ಟೆ. ಇಟಲಿ, ಸ್ವಿಟ್ಝರ್‌ಲ್ಯಾಂಡ್ ಸನ್ನಿವೇಶಗಳನ್ನು ಛಾಯಾಗ್ರಾಹಕ ಕೃಷ್ಣಕುಮಾರ್ ಕಣ್ಣಿಗೆ ಹಿತವೆನಿಸುವಂತೆ ಸೆರೆಹಿಡಿದಿದ್ದಾರೆ. ಹಿತಮಿತವಾದ ಫೈಟ್ ದೃಶ್ಯಗಳಿದ್ದು, ಅವು ಕೌಟುಂಬಿಕ ಚಿತ್ರಕಥೆಯ ಆಶಯಕ್ಕೇನೂ ಧಕ್ಕೆಯಾಗೋಲ್ಲ. ಒಟ್ಟಾರೆ ಒಂದೊಳ್ಳೆಯ ಸದಭಿರುಚಿಯ ಚಿತ್ರವಾಗಿ ‘ತಾರಕ್’ ನೋಡುಗರಿಗೆ ಇಷ್ಟವಾಗುವಂತಿದೆ.


ನಿರ್ದೇಶನ: ಪ್ರಕಾಶ್ ನಿರ್ಮಾಣ: ಲಕ್ಷ್ಮಣ ದುಶ್ಯಂತ್
ಸಂಗೀತ: ಅರ್ಜುನ್ ಜನ್ಯ,
ಛಾಯಾಗ್ರಹಣ: ಎ.ವಿ.ಕೃಷ್ಣಕುಮಾರ್
ತಾರಾಗಣ: ದರ್ಶನ್, ಶೃತಿ ಹರಿಹರನ್, ಶಾನ್ವಿ ಶ್ರೀವತ್ಸ, ದೇವರಾಜ್, ಸುಮಿತ್ರ, ಕುರಿ ಪ್ರತಾಪ್ ಮತ್ತಿತರರು.

ರೇಟಿಂಗ್ - ***


* - ಚೆನ್ನಾಗಿಲ್ಲ, ** - ಸಾಧಾರಣ, *** - ಉತ್ತಮ, **** - ಅತ್ಯುತ್ತಮ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)