varthabharthi

ಪ್ರಚಲಿತ

ಗೌರಿ ಲಂಕೇಶ್ ಹತ್ಯೆ ಮತ್ತು ಮಾಧ್ಯಮ

ವಾರ್ತಾ ಭಾರತಿ : 1 Oct, 2017
ಸನತ್ ಕುಮಾರ ಬೆಳಗಲಿ

ಗೌರಿ ಹತ್ಯೆ ತನಿಖೆಯ ದಿಕ್ಕನ್ನು ತಪ್ಪಿಸಲು ವ್ಯವಸ್ಥಿತ ಪ್ರಯತ್ನ ನಡೆದಿದೆ. ಕೆಲ ಪುರೋಹಿತಶಾಹಿ ಮಾಧ್ಯಮದವರು ನೇರವಾಗಿ ತನಿಖೆಗೆ ಸಂಬಂಧ ಪಡದ ಇಲ್ಲಸಲ್ಲದ ವಿಚಾರಗಳನ್ನು ಹೇಳಿ ಜನರ ಯೋಚನಾಲಹರಿಯನ್ನೇ ಬದಲಿಸುವ ಕಾರ್ಯದಲ್ಲಿ ನಿರತರಾಗಿದ್ದರೆ, ಇನ್ನು ಕೆಲವರು ತಮ್ಮ ವೃತ್ತಿಧರ್ಮಕ್ಕೆ ಎಳ್ಳುನೀರು ಬಿಟ್ಟಂತೆ ಮಾಧ್ಯಮಗಳಲ್ಲಿ ವರದಿ ಮಾಡುತ್ತಿದ್ದಾರೆ. ಪೊಲೀಸರಿಂದ ಖಚಿತ, ನಿಖರ ಮಾಹಿತಿ ಇಲ್ಲದಿದ್ದರೂ ಪೊಲೀಸ್ ಮೂಲಗಳು ಎಂಬ ಹೆಸರಿನಲ್ಲಿ ಕಪೋಲಕಲ್ಪಿತ ವರದಿಗಳು ಸಿದ್ಧವಾಗುತ್ತಿವೆ. ಆ ರೀತಿಯ ವರದಿಗಳನ್ನು ಕಂಡು ಬೆಚ್ಚಿಬೀಳುತ್ತಿರುವ ಪೊಲೀಸರು, ನಾವು ಹೀಗೆ ಎಲ್ಲಿಯೂ ಹೇಳಿಲ್ಲ ಎಂದು ಸ್ಪಷ್ಟನೆ ನೀಡುವಂತಹ ಪರಿಸ್ಥಿತಿ ಉದ್ಭವಿಸಿದೆ.

ಗೌರಿ ಲಂಕೇಶ್ ಹಂತಕರ ಗುಂಡಿಗೆ ಬಲಿಯಾಗಿ ಅಕ್ಟೋಬರ್ 5ಕ್ಕೆ ಒಂದು ತಿಂಗಳಾಗುತ್ತದೆ. ಹಂತಕರ ಸುಳಿವು ಸಿಕ್ಕಿದ್ದು ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ವಿಶೇಷ ತನಿಖಾ ತಂಡದ ಅಧಿಕಾರಿಗಳು ಒಂದೆಡೆ ಹೇಳಿದರೆ, ಮತ್ತೊಂದೆಡೆ ಪ್ರಗತಿಪರ ಸಂಘಟನೆಗಳ ನಾಯಕರು, ಸದಸ್ಯರು ದೇಶದ ವಿವಿಧೆಡೆ ‘ನಾನು ಗೌರಿ’ ಎಂಬ ಚಳವಳಿ ಕೈಗೆತ್ತಿಕೊಂಡಿದ್ದಾರೆ. ಹಂತಕರ ಬಂಧನವಲ್ಲದೇ ಕೋಮು, ಜಾತಿ, ಧರ್ಮ, ವಿಚಾರ ಮತ್ತು ಸಿದ್ಧಾಂತದ ಹೆಸರಿನಲ್ಲಿ ಕೊಲ್ಲುವ ಪೈಶಾಚಿಕ ಕೃತ್ಯಗಳಿಗೆ ಕಡಿವಾಣ ಹಾಕಲು ಅವರು ಒತ್ತಾಯಿಸುತ್ತಿದ್ದಾರೆ. ನಮಗೆ ನ್ಯಾಯ ಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಸೆಪ್ಟಂಬರ್ 5ರ ರಾತ್ರಿ ಗೌರಿ ಲಂಕೇಶ್ ಹತ್ಯೆ ವಿಷಯ ತಿಳಿದ ಕ್ಷಣದಿಂದ ರಾಜ್ಯ ವಲ್ಲದೇ ದೇಶದ ಬಹುತೇಕ ಭಾಗದಲ್ಲಿ ಒಂದಿಲ್ಲೊಂದು ಸ್ವರೂಪದಲ್ಲಿ ಹೋರಾಟ ನಡೆಯುತ್ತಿದೆ. ವಿಚಾರವಾದಿಗಳಾದ ಪನ್ಸಾರೆ, ದಾಭೋಳ್ಕರ್ ಮತ್ತು ಕಲಬುರ್ಗಿ ಯವರ ಹಂತಕರ ಬಂಧನಕ್ಕೂ ಆಗ್ರಹಿಸುತ್ತಿರುವ ವಿವಿಧ ಸಂಘಟನೆಗಳ ಪ್ರತಿನಿಧಿ ಗಳು, ಈ ಬಾರಿ ವಿರಮಿಸುವವರು ನಾವಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಸಂಘಟನೆಗಳ ನಿರಂತರ ಹೋರಾಟ, ಒತ್ತಡದಿಂದ ಕೇಂದ್ರ ಸರಕಾರವಲ್ಲದೇ ಮಹಾರಾಷ್ಟ್ರ ಮತ್ತು ಕರ್ನಾಟಕದ ಸರಕಾರಕ್ಕೂ ಹಂತಕರನ್ನು ಶೀಘ್ರ ಪತ್ತೆ ಮಾಡಿ ಬಂಧಿಸುವುದು ಅಗತ್ಯ ಮತ್ತು ಅನಿವಾರ್ಯವಾಗಿದೆ.

ಇವೆಲ್ಲದರ ಮಧ್ಯೆ ಗೌರಿ ಹತ್ಯೆ ತನಿಖೆಯ ದಿಕ್ಕನ್ನು ತಪ್ಪಿಸಲು ವ್ಯವಸ್ಥಿತ ಪ್ರಯತ್ನವೂ ನಡೆದಿದೆ. ಕೆಲ ಪುರೋಹಿತಶಾಹಿ ಮಾಧ್ಯಮದವರು ನೇರವಾಗಿ ತನಿಖೆಗೆ ಸಂಬಂಧ ಪಡದ ಇಲ್ಲಸಲ್ಲದ ವಿಚಾರಗಳನ್ನು ಹೇಳಿ ಜನರ ಯೋಚನಾಲಹರಿಯನ್ನೇ ಬದಲಿಸುವ ಕಾರ್ಯದಲ್ಲಿ ನಿರತರಾಗಿದ್ದರೆ, ಇನ್ನು ಕೆಲವರು ತಮ್ಮ ವೃತ್ತಿಧರ್ಮಕ್ಕೆ ಎಳ್ಳುನೀರು ಬಿಟ್ಟಂತೆ ಮಾಧ್ಯಮಗಳಲ್ಲಿ ವರದಿ ಮಾಡುತ್ತಿದ್ದಾರೆ. ಪೊಲೀಸರಿಂದ ಖಚಿತ, ನಿಖರ ಮಾಹಿತಿ ಇಲ್ಲದಿದ್ದರೂ ಪೊಲೀಸ್ ಮೂಲಗಳು ಎಂಬ ಹೆಸರಿನಲ್ಲಿ ಕಪೋಲಕಲ್ಪಿತ ವರದಿಗಳು ಸಿದ್ಧವಾಗುತ್ತಿವೆ. ಆ ರೀತಿಯ ವರದಿಗಳನ್ನು ಕಂಡು ಬೆಚ್ಚಿಬೀಳುತ್ತಿರುವ ಪೊಲೀಸರು, ನಾವು ಹೀಗೆ ಎಲ್ಲಿಯೂ ಹೇಳಿಲ್ಲ ಎಂದು ಸ್ಪಷ್ಟನೆ ನೀಡುವಂತಹ ಪರಿಸ್ಥಿತಿ ಉದ್ಭವಿಸಿದೆ.

ಮಾಧ್ಯಮದಲ್ಲಿ ಇಂತಹ ಅರಾಜಕತೆಯ ಸ್ಥಿತಿಯಲ್ಲಿ ಹಿಂದೆ ಯಾವತ್ತೂ ಇರಲಿಲ್ಲ. ಸುದ್ದಿಯನ್ನು ಸುದ್ದಿಯನ್ನಾಗಿ ಮಾತ್ರ ಪರಿಗಣಿಸಲಾಗುತ್ತಿತ್ತೇ ಹೊರತು ಸುದ್ದಿಯಲ್ಲಿನ ಜಾತಿ, ಧರ್ಮ ಕೆದಕುವ ಅಥವಾ ಸುದ್ದಿ ಬರೆದವರ ಹಿನ್ನೆಲೆಯನ್ನು ಪತ್ತೆ ಮಾಡುವ ಕೆಲಸ ನಡೆಯುತ್ತಿರಲಿಲ್ಲ. ಸತ್ಯ ಸಂಗತಿಗಳನ್ನು ಜನರಿಗೆ ತಲುಪಿಸಬೇಕು ಎಂಬ ಏಕಮೇವ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ಪತ್ರಿಕೆಗಳಲ್ಲಿ ಈಗಿನಂತೆ ಪೂರ್ವಾಗ್ರಹಗಳಿರಲಿಲ್ಲ. ಯಾರ ಬಗ್ಗೆ ಬರೆದರೆ ಏನು ಲಾಭ? ಯಾರನ್ನು ತುಳಿದರೆ ಅಥವಾ ಯಾರ ಕುರಿತು ವ್ಯಂಗ್ಯವಾಗಿ ಬರೆದರೆ ಏನೂ ಪ್ರಯೋಜನ ಎಂದೆಲ್ಲಾ ಯೋಚನೆಗಳು ಈಗಿನ ದಿನಗಳಂತೆ ಅತಿಯಾಗಿ ಇರುತ್ತಿರಲಿಲ್ಲ.

ಇಷ್ಟು ನಿಖರವಾಗಿ ಹೇಳಲು ನನ್ನ ಸ್ವಾನುಭವವೇ ಕಾರಣ. ಸುಮಾರು 30 ವರ್ಷ ಸಂಯುಕ್ತ ಕರ್ನಾಟಕದಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದ ನಾನು ಹಲವು ನೋವು ನಲಿವು ಕಂಡೆ. ಪುರೋಹಿತಶಾಹಿ ವ್ಯವಸ್ಥೆಯಿದ್ದರೂ ಮತ್ತು ಬೇರೆ ಬೇರೆ ರೀತಿಯ ಸಮಸ್ಯೆಗಳಿದ್ದರೂ ಅಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಅನ್ಯಾಯಕ್ಕೆ ಹೆಚ್ಚು ಆಸ್ಪದ ಇರುತ್ತಿರಲಿಲ್ಲ. ರಾಜ್ಯ ಅಥವಾ ದೇಶದ ಯಾವುದೇ ಭಾಗದಲ್ಲಿ ಯಾವು ದಾದರೂ ಕೋಮು ಗಲಭೆ ಅಥವಾ ಅನಾಹುತ ಸಂಭವಿಸಿದರೆ, ಆ ಸುದ್ದಿಯನ್ನು ಓದುಗರಿಗೆ ನಿಖರ ಮತ್ತು ಸ್ಪಷ್ಟವಾಗಿ ನೀಡಬೇಕು ಎಂಬ ಉದ್ದೇಶ ಇರುತ್ತಿತ್ತೇ ಹೊರತು ಈ ಜಾತಿ-ಧರ್ಮದ ಹೆಸರಿನಲ್ಲಿ ಸುದ್ದಿಯನ್ನು ತಿರುಚುವ ಯತ್ನ ನಡೆಯುತ್ತಿರಲಿಲ್ಲ. ಸುದ್ದಿಯನ್ನು ಸುದ್ದಿಯಂತೆಯೇ ನೀಡಿ ಸಮಾಜದ ಸ್ವಾಸ್ಥ್ಯ ಕಾಪಾಡಲು ಆದ್ಯತೆ ನೀಡಲಾಗುತ್ತಿತ್ತೇ ಹೊರತು ಈಗಿನಂತೆ ಸಮಾಜದ ಸ್ವಾಸ್ಥ್ಯ ಹಾಳುಗೆಡಹುವ ಉದ್ದೇಶ ಇರುತ್ತಿರಲಿಲ್ಲ. ಈ 30 ವರ್ಷಗಳಲ್ಲಿ ಈ ವಿಷಯದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ.

ಉದಾಹರಣೆಗೆ, ಗೌರಿ ಲಂಕೇಶ್ ಹತ್ಯೆ ವಿಷಯವನ್ನೇ ತೆಗೆದುಕೊಳ್ಳುವುದಾದರೆ ಪೊಲೀಸರು ಪ್ರತಿಯೊಂದು ಹೆಜ್ಜೆಯನ್ನು ಸೂಕ್ಷ್ಮವಾಗಿಡುತ್ತ ಮುನ್ನಡೆದಿದ್ದರೆ, ಕೆಲ ದೃಶ್ಯ-ಮುದ್ರಣ ಮಾಧ್ಯಮಗಳು ತಾವಷ್ಟೇ ಎಕ್ಸ್‌ಕ್ಲೂಸಿವ್ ಆಗಿ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದುಕೊಂಡು ವರದಿ ಮಾಡುತ್ತಿದ್ದೇವೆ ಎಂದು ಬಿಂಬಿಸಿಕೊಳ್ಳುತ್ತಿವೆ. ಅದರ ನೆಪದಲ್ಲಿ ಮನಸೋಇಚ್ಛೆ ದೃಶ್ಯಗಳ ಪುನರ್‌ಸೃಷ್ಟಿ, ನಕ್ಸಲ್ ಕೈವಾಡ, ಕೌಟಂಬಿಕ ಕಲಹ, ರಿಯಲ್ ಎಸ್ಟೇಟ್ ವ್ಯವಹಾರ ಎಂದೆಲ್ಲ ವರದಿ ಗಳು ಸೃಷ್ಟಿಯಾಗುತ್ತಿವೆ. ವೈಚಾರಿಕ ಸಂಘರ್ಷ, ಇತರ ವಿಚಾರವಾದಿಗಳ ಹತ್ಯೆ ನಡುವಿನ ಸಾಮ್ಯತೆ, ಗೌರಿಗೆ ಬೇರೆ ಬೇರೆ ಸ್ವರೂಪದಲ್ಲಿ ಒಡ್ಡಲಾಗುತ್ತಿದ್ದ ಜೀವ ಬೆದರಿಕೆ ಮುಂತಾದವುಗಳ ಬಗ್ಗೆ ಹೆಚ್ಚು ಬೆಳಕು ಚೆಲ್ಲುತ್ತಿಲ್ಲ. ಇದು ಯಾವುವುದೂ ಈ ಹತ್ಯೆಗೆ ಕಾರಣವೇ ಅಲ್ಲ ಎಂಬ ರೀತಿಯ ಅಭಿಪ್ರಾಯ ರೂಪಿಸಲಾಗುತ್ತಿದೆ.

ಪಿ.ಲಂಕೇಶ್ ಅವರು ನಿಧನರಾದ ಬಳಿಕ ಮೊದಲಿಗೆ ಲಂಕೇಶ್ ಪತ್ರಿಕೆ ಮತ್ತು ಆ ನಂತರ ತಮ್ಮ ಸ್ವಂತ ಪತ್ರಿಕೆಯ ಜವಾಬ್ದಾರಿ ಹೊತ್ತ ಗೌರಿ ಲಂಕೇಶ್‌ನ ಪ್ರತಿಯೊಂದು ಸಂಚಿಕೆಯನ್ನೂ ಸೂಕ್ಷ್ಮವಾಗಿ ಗಮನಿಸಿದರೆ ಎಷ್ಟೋ ವಿಷಯಗಳು ಅರಿವಿಗೆ ಬರುತ್ತವೆ. ಕೋಮುವಾದದ ವಿರುದ್ಧದ ಹೋರಾಟಕ್ಕೆ ಹೆಚ್ಚಿನ ಒತ್ತು ನೀಡಿದ ಗೌರಿ ಅವರು ತಮ್ಮ ಅಂಕಣದಲ್ಲಿ ಅಲ್ಲದೇ ಪತ್ರಿಕೆಯ ಇತರೆ ಪುಟಗಳಲ್ಲಿ ಕೋಮುವಾದಿಗಳ ಬಂಡವಾಳ ಬಯಲು ಮಾಡಿದರು. ಕೋಮುವಾದ, ಕೋಮು ಗಲಭೆ, ಹಿಂಸಾ ಚಾರ, ಷಡ್ಯಂತ್ರ, ಕೋಮುವಾದಿಗಳ ಅಟ್ಟಹಾಸ ಮುಂತಾದವುಗಳ ಬಗ್ಗೆ ನಿರಂತರ ಬರೆದ ಅವರು ಸಂಘ ಪರಿವಾರದ ವಿರುದ್ಧ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಹೋರಾಟದಲ್ಲಿ ಪಾಲ್ಗೊಂಡರು. ಪ್ರಧಾನಿ ಮೋದಿಯವರ ಕುರಿತಾಗಿ ಅಂಕಣ ವೊಂದನ್ನು ಪ್ರಕಟಿಸಿ, ಹೊಸ ವಿಷಯಗಳನ್ನು ಓದುಗರಿಗೆ ತಲುಪಿಸಲು ಪ್ರಯತ್ನಿ ಸಿದರು. ಪತ್ರಿಕೆಯಲ್ಲಿ, ಸಾಮಾಜಿಕ ಜಾಲತಾಣಗಳಲ್ಲೂ ಕೇಂದ್ರದ ಬಿಜೆಪಿ ಸರಕಾರದ ದುರಾಡಳಿತ, ಸಂಘ ಪರಿವಾರದ ದುಷ್ಕೃತ್ಯ, ಜಾತಿ-ಧರ್ಮ-ಕೋಮುವಾದದ ಹೆಸರಿ ನಲ್ಲಿ ನಡೆಯುವ ಅನ್ಯಾಯ, ಹಿಂಸೆ ಬಗ್ಗೆ ನಿರಂತರವಾಗಿ ತಮ್ಮ ಅನಿಸಿಕೆ ವ್ಯಕ್ತಪಡಿಸಿ ದರು. ನಿರಂತರ ಜೀವ ಬೆದರಿಕೆ ಬಂದರೂ ಅವರು ಎಂದಿಗೂ ಎದೆಗುಂದಲಿಲ್ಲ.

ಗೌರಿ ಲಂಕೇಶ್ ನಕ್ಸಲ್‌ವಾದಿಯಾಗಿದ್ದರು ಮತ್ತು ಅವರಿಗೆ ಹತ್ತಿರವಾ ಗಿದ್ದರು. ಗೌರಿ ಸಾವಿಗೆ ನಕ್ಸಲರೇ ಕಾರಣ ಎಂದು ಕೆಲ ಪುರೋಹಿತಶಾಹಿ ಮಾಧ್ಯಮ ದವರು ಹತ್ಯೆಯಾದ ದಿನದಿಂದ ಭಜನೆ ಮಾಡುತ್ತಿದ್ದಾರೆ. ಆದರೆ ಸುಖಾಸುಮ್ಮನೆ ನಕ್ಸಲರು ಯಾಕೆ ಗೌರಿ ಅವರನ್ನು ಹತ್ಯೆ ಮಾಡುತ್ತಾರೆ ಎಂಬುದರ ಬಗ್ಗೆ ನೈಜ ವಿಶ್ಲೇಷಣೆಮಾಡುತ್ತಿಲ್ಲ. ಜೀವನದಲ್ಲಿ ಬಹುಶಃ ಒಮ್ಮೆಯೂ ನಕ್ಸಲರನ್ನು ಭೇಟಿಯಾಗದೆ ಮತ್ತು ಅವರ ಹೋರಾಟದ ಗುರಿಯೇನು ಎಂಬ ಅಂಶವೂ ಅರಿಯದೆ ಮಾತನಾಡುವವರಿಂದ ಮಾತ್ರವೇ ಈ ರೀತಿಯ ಆರೋಪ ಮಾಡಲು ಸಾಧ್ಯ. ಗೌರಿ ಲಂಕೇಶ್ ಪತ್ರಿಕೆಯ ಬಹುತೇಕ ಎಲ್ಲಾ ಸಂಚಿಕೆಗಳ ಒಂದೂ ಅಕ್ಷರವೂ ಬಿಡದೇ ಓದಿದರೂ ನಕ್ಸಲ್ ಒಡಕು ಅಥವಾ ಅವರಿಂದ ಅಪಾಯವಾಗುವ ವರದಿ ಕಾಣಸಿಗುವುದಿಲ್ಲ. ಅಸಲಿಗೆ ಅವರನ್ನು ಮುಖ್ಯವಾಹಿನಿಗೆ ಕರೆ ತರುವ ಮತ್ತು ಹೋರಾಟದ ಸ್ವರೂಪ ಬದಲಿಸುವ ವರದಿಗಳನ್ನು ಕಾಣಬಹುದು.

ಯಾವುದೇ ತರಹದ ಹಿಂಸಾಚಾರ, ದ್ವೇಷ ಮತ್ತು ಅಸಹನೆಯ ವಿರೋಧಿ ಯಾಗಿದ್ದ ಗೌರಿ ಎಂದಿಗೂ ಹಿಂಸೆಗೆ ಪ್ರಚೋದಿಸಲಿಲ್ಲ. ಭೂಗತರಾಗಿದ್ದ ನಕ್ಸಲರನ್ನು ಮತ್ತು ಆ ವಿಚಾರಧಾರೆಯುಳ್ಳವರನ್ನು ರಾಜ್ಯ ಸರಕಾರದ ನೆರವಿನಿಂದ ಸಮಾಜದ ಮುಖ್ಯವಾಹಿನಿಗೆ ಕರೆತರಲು ಗೌರಿ ಶ್ರಮಿಸಿದರೇ ಹೊರತು ಅದರಿಂದ ತಮ್ಮ ಪ್ರಾಣಕ್ಕೆ ಅಪಾಯವಾಗಲಿದೆ ಎಂಬ ಸಣ್ಣ ಮುನ್ಸೂಚನೆಯೂ ಅವರಿಗೆ ಬರಲಿಲ್ಲ. ಹಿರಿಯರಾದ ಎಚ್.ಎಸ್.ದೊರೆಸ್ವಾಮಿ, ಎ.ಕೆ.ಸುಬ್ಬಯ್ಯ ಮುಂತಾದವರ ಸಮ್ಮುಖ ದಲ್ಲಿ ಕೆಲ ಹೋರಾಟಗಾರರು ಸಮಾಜದ ಮುಖ್ಯವಾಹಿನಿಗೆ ಬಂದಾಗಲೂ ಯಾರಿಂದಲೂ ಆಕ್ಷೇಪಣೆ ವ್ಯಕ್ತವಾಗಲಿಲ್ಲ. ಪುರೋಹಿತಶಾಹಿ ಮಾಧ್ಯಮದವರು ಹೇಳುವಂತೆ ದ್ವೇಷವೇನಾದರೂ ಇದ್ದಿದ್ದರೆ, ಈ ವೇಳೆಗೆ ಅದು ಬೇರೆ ಬೇರೆ ಸ್ವರೂಪ ದಲ್ಲಿ ವ್ಯಕ್ತವಾಗಬೇಕಿತ್ತು. ನಕ್ಸಲರ ಒಡಕು ಅಥವಾ ದ್ವೇಷವೇ ಕಾರಣವಾಗಿದ್ದರೆ, ಅಂತಹ ಅಪಾಯ ಸಮಾಜದ ಮುಖ್ಯವಾಹಿನಿಗೆ ಬಂದವರಿಗೆ ಅಥವಾ ಅದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಿದವರಿಗೆ ಆಗಬೇಕಿತ್ತೆ ಹೊರತು ಗೌರಿಯೊಬ್ಬರೇ ಬಲಿಯಾಗಬೇಕಿರಲಿಲ್ಲ.

ಅಪಂಬಿಕೆ, ಅಸತ್ಯ ಮತ್ತು ಅಸ್ಪಷ್ಟತೆ ಅತಿಯಾಗಿ ವಿಜೃಂಭಿಸುತ್ತಿರುವ ಇಂದಿನ ದಿನಗಳಲ್ಲೂ ಜನರು ದೃಶ್ಯ-ಮುದ್ರಣ ಮಾಧ್ಯಮದ ಮೇಲೆ ನಂಬಿಕೆ ಹೊಂದಿದ್ದಾರೆ. ಪತ್ರಿಕೆಯ ಅಕ್ಷರಗಳಲ್ಲಿ ಮೂಡಿದ್ದೆಲ್ಲವೂ ನಿಜ ಮತ್ತು ಟಿವಿಯಲ್ಲಿ ಕಂಡಿದ್ದೆಲ್ಲವೂ ಸತ್ಯ ಎಂಬ ಗಾಢ ನಂಬಿಕೆ ಜನರಲ್ಲಿದೆ. ಮಾಧ್ಯಮ ಲೋಕದ ರಾಜಕಾರಣ ಮತ್ತು ಪೂರ್ವಾಗ್ರಹ ದೃಷ್ಟಿ ಅವರಿಗೆ ತಕ್ಷಣವೇ ಅರಿವಿಗೆ ಬರುವುದಿಲ್ಲ.

ಸತ್ಯನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಪತ್ರಕರ್ತರಾಗಿ ಕಾರ್ಯನಿರ್ವಹಿಸಬೇಕು ಎಂಬ ಆಸೆ ಹೊತ್ತು ಪತ್ರಿಕೋದ್ಯಮ ವಿದ್ಯಾರ್ಥಿಗಳು ಭವಿಷ್ಯದ ಪತ್ರಕರ್ತರಾಗಲು ಸಿದ್ಧತೆ ನಡೆಸಿದ್ದಾರೆ. ಸಮಾಜ ಪರಿವರ್ತನೆಯ ಅಪಾರ ಆಶಾಭಾವ ಹೊತ್ತಿದ್ದಾರೆ. ಅವರು ಧೈರ್ಯ, ನಿರ್ಭಯ, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲು ವಾತಾವ ರಣ ಕಲ್ಪಿಸಬೇಕೆ ಹೊರತು ಅವರ ಆಸೆಗಳು ನುಚ್ಚುನೂರಾಗಬಾರದು. ಎಲ್ಲವೂ ಭ್ರಮೆ ಎಂಬ ಭಾವನೆ ಮೂಡಬಾರದು. ಪತ್ರಿಕೋದ್ಯಮದ ವಿದ್ಯಾರ್ಥಿಗಳ ದೃಷ್ಟಿಯಿಂದ ಅಲ್ಲದೇ ಸಮಾಜದ ಹಿತದೃಷ್ಟಿಯಿಂದ ಮಾಧ್ಯಮಗಳಿಗೆ ದೊಡ್ಡ ಜವಾಬ್ದಾರಿಯಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)