varthabharthi

ಸಂಪಾದಕೀಯ

ಮೌಢ್ಯ ನಿಷೇಧ ಮಸೂದೆ: ಬಾಲಗ್ರಹ ಪೀಡಿತ ಶಿಶು

ವಾರ್ತಾ ಭಾರತಿ : 3 Oct, 2017

‘ಕರ್ನಾಟಕ ಅಮಾನವೀಯ ದುಷ್ಟ ಮತ್ತು ವಾಮಾಚಾರ ಪ್ರತಿಬಂಧ ಮತ್ತು ನಿರ್ಮೂಲನೆ ಮಸೂದೆ 2017’ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಬಹಳಷ್ಟು ಸಮಯದಿಂದ ನನೆಗುದಿಯಲ್ಲಿ ಬಿದ್ದಿದ್ದ ಈ ಮಸೂದೆ ಕೊನೆಗೂ ಸಣ್ಣದಾಗಿ ಗರ್ಭದೊಳಗೆ ಕಣ್ಣು ಪಿಳುಕಿಸಿದೆ. ಆದರೆ ಮಸೂದೆ ತಾಯಿಯ ಗರ್ಭದಿಂದ ಸಂಪೂರ್ಣ ಆರೋಗ್ಯದಿಂದ ಹೊರ ಬರುವುದು ಸಾಧ್ಯವಿಲ್ಲ ಎನ್ನುವ ಸೂಚನೆಯೂ ನಾಡಿನ ಜನತೆಗೆ ದೊರಕಿದೆ.

ಮೌಢ್ಯ ನಿಷೇಧದ ಕುರಿತಂತೆ ಸಿದ್ದರಾಮಯ್ಯ ಗಟ್ಟಿಯಾಗಿ ನಿಂತಿದ್ದಾರಾದರೂ, ಕಾಂಗ್ರೆಸ್‌ನ ಉಳಿದ ನಾಯಕರು ಆ ಮಸೂದೆಯ ಕುರಿತಂತೆ ವಿಶೇಷ ಒಲವನ್ನು ಹೊಂದಿದಂತಿಲ್ಲ. ಶ್ರೀಸಾಮಾನ್ಯನ ಹಿತಾಸಕ್ತಿಗೆ ಈ ಮಸೂದೆ ಪೂರಕವಾಗಿದೆಯಾದರೂ, ಮಸೂದೆಯ ವಿರುದ್ಧ ಬಿಜೆಪಿ ಅಪಪ್ರಚಾರಗೈಯುವ ಭಯ ಅವರಿಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ವಾಸ್ತುಶಾಸ್ತ್ರವೆನ್ನುವುದು ಒಂದು ಮಾಫಿಯಾ ರೂಪದಲ್ಲಿ ಕೆಲಸ ಮಾಡುತ್ತಿದೆ. ಇದರ ಹಿಂದೆ ಬರೇ ಜ್ಯೋತಿಷಿಗಳು ಮಾತ್ರವಲ್ಲ, ಬೇರೇ ಬೇರೇ ಹಿತಾಸಕ್ತಿಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿ ಕಾಂಗ್ರೆಸ್ ಸರಕಾರದೊಳಗಿರುವ ಹತ್ತು ಹಲವು ನಾಯಕರು ವಾಸ್ತು ಶಾಸ್ತ್ರವನ್ನು ಬಲವಾಗಿ ನಂಬುತ್ತಾರೆ.

ಈ ಹಿಂದೆ ಈ ನಾಯಕರು ಹಲವು ಬಾರಿ ವಾಸ್ತು ಕಾರಣಕ್ಕಾಗಿ ವಿಧಾನಸಭೆಯಲ್ಲಿರುವ ತಮ್ಮ ಕೊಠಡಿಯ ಗೋಡೆಗಳನ್ನು ಒಡೆದು ಸುದ್ದಿಯಾಗಿದ್ದಾರೆ. ಹೀಗಿರುವಾಗ, ಸಮಾಜದಲ್ಲಿ ಭಯೋತ್ಪಾದಕರಂತೆ ಕೆಲಸ ಮಾಡುತ್ತಿರುವ ವಾಸ್ತು ಶಾಸ್ತ್ರಜ್ಞರ ವಿರುದ್ಧ ಸರಕಾರ ಕಾನೂನು ತರುತ್ತದೆ ಎನ್ನುವುದನ್ನು ನಿರೀಕ್ಷಿಸಿದರೆ ಅತಿಯಾಗುತ್ತದೆ. ಇದ್ದುದರಲ್ಲಿ, ಈಗಾಗಲೇ ಸಾಕಷ್ಟು ಚರ್ಚೆಗೆ ಕಾರಣವಾಗಿರುವ ‘ಮಡೆ ಸ್ನಾನ’ವನ್ನು ತಡೆಯಲು ಸರಕಾರ ಮುಂದಾಗಿದೆ ಎನ್ನುವುದೇ ಅಚ್ಚರಿಯ ವಿಷಯ.

ಚುನಾವಣೆ ಘೋಷಣೆಯಾದಾಗ ರಾಜಕಾರಣಿಗಳೆಲ್ಲ ಖ್ಯಾತ ಜ್ಯೋತಿಷಿಗಳ ಕೊಠಡಿಯಲ್ಲಿ ಹಗಲು ರಾತ್ರಿ ಕಳೆಯಬೇಕಾಗಿರುವುದರಿಂದ ತಮ್ಮ ತಮ್ಮ ಜ್ಯೋತಿಷಿಗಳ ರಕ್ಷಣೆಗಾಗಿ ರಾಜಕಾರಣಿಗಳು ಪಣತೊಟ್ಟಿದ್ದಾರೆ. ಒಟ್ಟಿನಲ್ಲಿ ಮಾಟಮಂತ್ರ, ದೆವ್ವ ಬಿಡಿಸುವುದು, ಸಿಡಿ ಹಾಯುವುದು ಮೊದಲಾದ ವೌಢ್ಯಗಳ ವಿರುದ್ಧ ಮಸೂದೆ ಮಾತನಾಡುತ್ತದೆ. ಇಂತಹದೊಂದು ಅರೆ ಬರೆ ಪ್ರಯತ್ನಕ್ಕಾದರೂ ಸರಕಾರ ಮುಂದಾಯಿತಲ್ಲ ಎಂದು ಸಮಾಧಾನ ಪಟ್ಟುಕೊಳ್ಳುವಂತಹ ಸ್ಥಿತಿ ಪ್ರಜ್ಞಾವಂತ ಜನರದು.

 ನಂಬಿಕೆ ಬೇರೆ, ಮೂಢನಂಬಿಕೆ ಬೇರೆ. ತಮ್ಮ ತಮ್ಮ ಧರ್ಮಗಳನ್ನು ಅನುಸರಿಸುವುದಕ್ಕೆ, ತಮ್ಮ ತಮ್ಮ ದಾರಿಗಳಲ್ಲಿ ತಮ್ಮ ದೇವರನ್ನು ಹುಡುಕುವುದಕ್ಕೆ, ಆರಾಧಿಸುವುದಕ್ಕೆ ಸಂವಿಧಾನ ಹಕ್ಕುಗಳನ್ನು ನೀಡಿದೆ. ಅಂತೆಯೇ ನಾಸ್ತಿಕರಿಗೆ ದೇವರನ್ನು ನಂಬದೇ ಇರುವಂತಹ ಹಕ್ಕನ್ನೂ ಕೊಟ್ಟಿದೆ. ಆದರೆ, ಭಾರತದಲ್ಲಿ ಧರ್ಮ, ದೇವರು ಬರೇ ಧಾರ್ಮಿಕ ನಂಬಿಕೆಯಾಗಿಯಷ್ಟೇ ಉಳಿದಿಲ್ಲ. ಇಲ್ಲಿ ನಂಬಿಕೆ ಯಾವುದು ಮೂಢನಂಬಿಕೆ ಯಾವುದು ಎನ್ನುವುದನ್ನು ಗುರುತಿಸುವುದೇ ದೊಡ್ಡ ಸವಾಲು. ಆದುದರಿಂದಲೇ, ಈ ದೇಶದಲ್ಲಿ ನಂಬಿಕೆ ಮತ್ತು ಮೂಢನಂಬಿಕೆಯನ್ನು ಬೇರ್ಪಡಿಸುವ ಸಂದರ್ಭದಲ್ಲಿ ತಿಕ್ಕಾಟ, ಸಂಘರ್ಷಗಳು ಕಾಣಿಸಿಕೊಳ್ಳುತ್ತವೆ. ಧಾರ್ಮಿಕ ನಂಬಿಕೆಯ ಹೆಸರಲ್ಲೇ ಹತ್ತು ಹಲವು ವೌಢ್ಯಗಳು ಇಲ್ಲಿ ಆಚರಣೆಯಲ್ಲಿವೆ.

ಆದುದರಿಂದ ಕೆಲವು ಮೌಢ್ಯಗಳನ್ನು ಮುಟ್ಟಲು ಹೋದಾಕ್ಷಣ, ಅದರ ಹಿಂದಿರುವ ಶಕ್ತಿಗಳು ‘ನಮ್ಮ ಧರ್ಮದ ಮೇಲೆ ದಾಳಿ’ ಎಂದು ಬೊಬ್ಬಿಡುತ್ತವೆ. ಜ್ಯೋತಿಷ್ಯಕ್ಕಾಗಲಿ, ವಾಸ್ತುಶಾಸ್ತ್ರಕ್ಕಾಗಲಿ ಧರ್ಮದೊಂದಿಗೆ ಯಾವುದೇ ಸಂಬಂಧವಿರದಿದ್ದರೂ ಅದು, ಹಿಂದೂ ಧರ್ಮದ ಹೆಸರಲ್ಲೇ ಬದುಕಿಕೊಂಡು ಬಂದಿದೆ. ರಾಜಕಾರಣಿಗಳೂ ಈ ವೌಢ್ಯಕ್ಕೆ ಬೆಂಗಾವಲಾಗಿದ್ದಾರೆ. ‘ಹಿಂದೂ ಧರ್ಮ’ದ ಗುತ್ತಿಗೆ ವಹಿಸಿರುವ ಬಿಜೆಪಿಯಂತಹ ಪಕ್ಷಗಳು, ವೌಢ್ಯ ನಿಷೇಧ ಕಾಯ್ದೆಯನ್ನು ಹದ್ದಿನ ಕಣ್ಣಿನಿಂದ ನೋಡುತ್ತಿದೆ. ಈ ಕಾಯ್ದೆಯನ್ನೇ ಮುಂದಿಟ್ಟುಕೊಂಡು, ಹಿಂದೂ ಆಚರಣೆಗಳ ವಿರುದ್ಧ ಸರಕಾರ ಕಾಯ್ದೆ ತರುತ್ತಿದೆ ಎಂದು ಹುಯಿಲೆಬ್ಬಿಸಲು ಅದು ಈಗಾಗಲೇ ಯೋಜನೆ ರೂಪಿಸಿಕೊಂಡಿದೆ.

ಮುಂದಿನ ಚುನಾವಣೆಯಲ್ಲಿ ಈ ಕಾಯ್ದೆಯನ್ನೇ ಮುಂದಿಟ್ಟು, ಸರಕಾರದ ವಿರುದ್ಧ ಹುಯಿಲೆಬ್ಬಿಸುವ ಸಾಧ್ಯತೆಗಳೂ ಇಲ್ಲದಿಲ್ಲ. ಆದರೆ ಇದೇ ಸಂದರ್ಭದಲ್ಲಿ, ಹಿಂದೂ ಧರ್ಮಕ್ಕೆ ಯಾವುದೇ ರೀತಿಯಲ್ಲಿ ಸಂಬಂಧವಿರದ ವಾಸ್ತು ಮತ್ತು ಜ್ಯೋತಿಷ್ಯಗಳನ್ನು ಧರ್ಮಕ್ಕೆ ನಂಟು ಹಾಕುವುದು ಪರೋಕ್ಷವಾಗಿ ತಮ್ಮದೇ ಧರ್ಮಕ್ಕೆ ಮಾಡುವ ಅವಮಾನ ಎನ್ನುವುದನ್ನು ಇವರು ಮರೆತಿದ್ದಾರೆ. ಒಂದು ಕಟ್ಟಡ ಕಟ್ಟುವ ಸಂದರ್ಭದಲ್ಲಿ ಗಾಳಿ, ಬೆಳಕಿನ ದಿಕ್ಕುಗಳನ್ನು ನಿರ್ಧರಿಸುವುದಷ್ಟೇ ವಾಸ್ತುಶಾಸ್ತ್ರ ಎಂದಾಗಿದ್ದರೆ ನಾವು ಇದರ ಕುರಿತಂತೆ ತಲೆಕೆಡಿಸಿಕೊಳ್ಳಬೇಕಾಗಿರಲಿಲ್ಲ. ಆದರೆ ದಿಕ್ಕುಗಳು ಅಸ್ತವ್ಯಸ್ತವಾದರೆ ಅದರಿಂದಾಗಿ ಪ್ರಾಣ, ಮಾನಹಾನಿಗಳೂ ಸಂಭವಿಸುತ್ತವೆ, ಆರ್ಥಿಕ ನಷ್ಟವಾಗುತ್ತದೆ, ಮಾನಸಿಕ ಸ್ಥಿತಿ, ಆರೋಗ್ಯ ಸ್ಥಿತಿ ಹದಗೆಡುತ್ತದೆ ಎಂದೆಲ್ಲ ಬೆದರಿಸಿ ಜನರನ್ನು ಸುಲಿಗೆ ಮಾಡುವುದನ್ನು ಮೌಢ್ಯವಲ್ಲದೆ ವಿಜ್ಞಾನವೆಂದು ಕರೆಯಲಾದೀತೇ? ಇಂಥವರಿಂದ ಮನೆಮಠ ಕಳೆದುಕೊಂಡವರ ಸಂಖ್ಯೆ ಬಹುದೊಡ್ಡದಿದೆ.

ಹಾಗೆಯೇ ಇವರೆಲ್ಲರೂ ಅನ್ಯ ಧರ್ಮಕ್ಕೆ ಸೇರಿದವರೇನೂ ಅಲ್ಲ. ಈ ವಾಸ್ತುಶಾಸ್ತ್ರಜ್ಞರೆಂಬ ಡೋಂಗಿಗಳೆಲ್ಲ ಕೇಸರಿ ವಸ್ತ್ರ ಧರಿಸಿ ಸ್ವಾಮೀಜಿಗಳಂತೆ ಸಮಾಜದ ಮುಂದೆ ಕಾಣಿಸಿಕೊಳ್ಳುವವರು. ಇವರನ್ನು ನಂಬುವವರು ಶೇ.99ರಷ್ಟು ಹಿಂದೂಗಳೇ ಆಗಿದ್ದರೆ. ಅಂದರೆ ಈ ವೌಢ್ಯದ ಬಲಿಪಶುಗಳು ಹಿಂದೂಗಳೇ ಆಗಿರುವಾಗ, ಹಿಂದೂಗಳ ಪರವಾಗಿ ಧ್ವನಿಯೆತ್ತುವ ಬಿಜೆಪಿ, ಸಂಘಪರಿವಾರ ಯಾಕೆ ವಾಸ್ತುಶಾಸ್ತ್ರವನ್ನು ವೌಢ್ಯನಿಷೇಧ ಕಾನೂನು ವ್ಯಾಪ್ತಿಯ ಒಳಗೆ ಸೇರಿಸಬೇಕು ಎಂದು ಒತ್ತಾಯಿಸುವುದಿಲ್ಲ? ವಾಸ್ತುಶಾಸ್ತ್ರ ಪಂಡಿತರ ವೇಷದಲ್ಲಿರುವ ಈ ಭಯೋತ್ಪಾದಕರು, ಜನರಲ್ಲಿ ಭೀತಿ ಹುಟ್ಟಿಸಿ, ಅವರನ್ನು ಮಾನಸಿಕವಾಗಿ ಕುಗ್ಗಿಸಿ ಲಕ್ಷಾಂತರ ಹಣ ದೋಚುತ್ತಿದ್ದರೂ ಬಿಜೆಪಿ ವೌನವಾಗಿದೆ ಎಂದರೆ ಅದರ ಅರ್ಥವೇನು? ಹಿಂದೂ ಧರ್ಮದ ಕುರಿತಂತಾಗಲಿ, ಹಿಂದೂಗಳ ಕುರಿತಂತಾಗಲಿ ಇವರದು ಹುಸಿ ಕಾಳಜಿ ಎನ್ನುವುದನ್ನು ಇದು ಎತ್ತಿ ತೋರಿಸುವುದಿಲ್ಲವೇ?

ಈ ದೇಶ ನಿಂತಿರುವುದು ರೈತರು, ವಿಜ್ಞಾನಿಗಳ ಶ್ರಮದಿಂದ. ಎಲ್ಲರು ತಮ್ಮ ತಮ್ಮ ಭವಿಷ್ಯವನ್ನು ತಮ್ಮ ತಮ್ಮ ಸಾಧನೆಗಳಿಂದ ರೂಪಿಸಿಕೊಂಡವರಾಗಿದ್ದಾರೆ. ಯಾರನ್ನೂ ಜ್ಯೋತಿಷಿಗಳು ರೂಪಿಸಿದ ಉದಾಹರಣೆಗಳಿಲ್ಲ. ಒಂದು ವೇಳೆ ಜ್ಯೋತಿಷಿಗಳೇ ಒಬ್ಬನ ಭವಿಷ್ಯವನ್ನು, ವ್ಯಕ್ತಿತ್ವವನ್ನು ರೂಪಿಸುತ್ತಾರೆಂದರೆ ಈ ದೇಶ ಇಂದು ಸೂಪರ್ ಪವರ್ ಆಗಬೇಕಾಗಿತ್ತು. ಯಾಕೆಂದರೆ ಈ ದೇಶದ ಪ್ರತಿ ಗಲ್ಲಿಗಳಲ್ಲಿ ಹತ್ತಕ್ಕೂ ಅಧಿಕ ಜ್ಯೋತಿಷಿಗಳಿದ್ದಾರೆ. ಮನುಷ್ಯನ ಬದುಕನ್ನು ದೇವರು ನಿರ್ಧರಿಸುತ್ತಾನೆ ಎನ್ನುವುದು ಆಸ್ತಿಕರ ನಂಬಿಕೆ. ಆದರೆ ಒಬ್ಬ ಸ್ವತಃ ನಿಷ್ಪ್ರಯೋಜಕನಾದ ವ್ಯಕ್ತಿ ಇನ್ನೊಬ್ಬನ ಭವಿಷ್ಯವನ್ನು ಹೇಳುತ್ತೇನೆ ಎನ್ನುವುದೇ ಹಾಸ್ಯಾಸ್ಪದ.

ಇದು ಧರ್ಮದ ಅಪಹಾಸ್ಯ. ದುರದೃಷ್ಟವಶಾತ್ ಇಂದು ಜ್ಯೋತಿಷ್ಯವನ್ನೇ ವಿಜ್ಞಾನವಾಗಿ ಮಾರ್ಪಡಿಸುವ ಪ್ರಯತ್ನ ನಡೆಯುತ್ತಿದೆ. ದೇಶ ಆರ್ಥಿಕವಾಗಿ ಮಾತ್ರವಲ್ಲ, ಬೌದ್ಧಿಕವಾಗಿಯೂ ಹಿಂದೆ ತಳ್ಳಲ್ಪಡುತ್ತಿರುವುದರ ಸೂಚನೆಯಿದು. ಜ್ಯೋತಿಷಿಗಳು ಅವಿದ್ಯಾವಂತನ ಭವಿಷ್ಯವನ್ನು ಹೇಳುವ ನೆಪದಲ್ಲಿ, ಅವನೊಳಗೆ ಭಯತುಂಬಿ ಪರಿಹಾರದ ಹೆಸರಲ್ಲಿ ಹಣ ಸುಲಿಯುತ್ತಾರೆ. ಹಾಗೆ ನೋಡಿದರೆ ಈ ವಾಸ್ತುಶಾಸ್ತ್ರ ಮತ್ತು ಜ್ಯೋತಿಷ್ಯದ ಮುಂದೆ ಮಡೆಸ್ನಾನ ಏನೇನೂ ಅಲ್ಲ. ಸರಕಾರ ಮುಂದಿನ ದಿನಗಳಲ್ಲಿ ಕನಿಷ್ಠ ವಾಸ್ತುಶಾಸ್ತ್ರ ಮತ್ತು ಜ್ಯೋತಿಷ್ಯವನ್ನು ಮೌಢ್ಯವೆಂದು ಘೋಷಿಸುವ ಧೈರ್ಯವನ್ನು ಮಾಡಬೇಕು. ಅಂತಹ ಧೈರ್ಯವನ್ನು ಸರಕಾರ ಮಾಡಬೇಕಾದರೆ, ಅದಕ್ಕೆ ಜನರ ಸ್ಪಂದನೆ ಸಿಗಬೇಕು. ಜನರು ಬೀದಿಗಿಳಿದು, ಇವುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಬೇಕು. ಯಾರೆಲ್ಲ ಹಿಂದೂಧರ್ಮದ ವಕ್ತಾರರೆಂದು ಕರೆಸಿಕೊಂಡಿದ್ದಾರೆಯೋ ಅವರೆಲ್ಲ ಜ್ಯೋತಿಷ್ಯ ಮತ್ತು ವಾಸ್ತುಶಾಸ್ತ್ರದಂತಹ ಮೌಢ್ಯಗಳಿಗೆ ಹಿಂದೂಧರ್ಮದಲ್ಲಿ ಸ್ಥಾನವಿಲ್ಲ ಎನ್ನುವುದನ್ನು ಸಾರ್ವಜನಿಕರಿಗೆ ಮತ್ತು ಸರಕಾರಕ್ಕೆ ತಿಳಿಯಪಡಿಸಿ ಧರ್ಮವನ್ನು ಮತ್ತು ಅದನ್ನು ಅವಲಂಬಿಸಿದ ಭಕ್ತರನ್ನು ಕಾಪಾಡಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)