varthabharthi

ಅನುಗಾಲ

ಭಾರತದ ಅಸ್ಮಿತೆ

ವಾರ್ತಾ ಭಾರತಿ : 5 Oct, 2017
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಭಾರತದ ಅಸ್ಮಿತೆಯ ಪ್ರಶ್ನೆ ಬಂದಾಗ ನುಣುಚಿಕೊಳ್ಳುವುದು ಮತ್ತು ಚುನಾವಣೆಗಷ್ಟೇ ಭಾರತೀಯತೆಯನ್ನು ಬಳಸಿಕೊಳ್ಳುವುದು ದೇಶವನ್ನು ಆಳುವವರ ಕೌಟಿಲ್ಯವಾದರೆ ದೇಶದ ಅಭಿಮಾನ ಎಲ್ಲಿ ಉಳಿಯಬೇಕು? ‘ದಿಲ್ಲೀಶ್ವರೋವಾ ಜಗದೀಶ್ವರೋವಾ’ ಎಂಬುದು ಉತ್ತರಕುಮಾರನ ಪೌರುಷವಷ್ಟೇ ಆಗಿ ಉಳಿದೀತಲ್ಲವೇ?


ವಿದೇಶಗಳ ಕುರಿತು ಮಾತನಾಡುವಾಗ ಭಾರತದ ಬಹುಪಾಲು ಸ್ವಘೋಷಿತ ರಾಷ್ಟ್ರವಾದಿಗಳು, ರಾಷ್ಟ್ರೀಯವಾದಿಗಳು, ದೇಶಭಕ್ತರುಗಳು ಪಾಕಿಸ್ತಾನದ ಹೊರತಾಗಿ ಇನ್ನೆಲ್ಲ ರಾಷ್ಟ್ರಗಳ ಬಗ್ಗೆ ಮೃದು ಧೋರಣೆಯನ್ನು ತಾಳುತ್ತಾರೆ. ವಿದೇಶೀ ಆಕ್ರಮಣಗಳ ಕುರಿತು ಚರ್ಚಿಸುವಾಗಲೂ ಇಸ್ಲಾಂ ಆಕ್ರಮಣಕೋರರ ಹೊರತಾಗಿ ಉಳಿದವರ ಆಕ್ರಮಣವಾಗಲೀ ಅವರು ದೋಚಿದ ಸಂಪತ್ತಾಗಲೀ ಅವರು ಪ್ರದರ್ಶಿಸಿದ ದಮನಕಾರೀ ಪ್ರವೃತ್ತಿಯಾಗಲೀ ಈ ಸ್ವಘೋಷಿತಗಳನ್ನು ಅಷ್ಟಾಗಿ ಕಾಡುವುದೇ ಇಲ್ಲ.

ಇಸ್ಲಾಮ್ ದಾಳಿಕೋರರಿಂದ ಈ ದೇಶ ಹಾಳಾಯಿತೆಂದು ಹೇಳುವವರು 1947ಕ್ಕೆ ಮೊದಲಿನ ಸುಮಾರು ಇನ್ನೂರ ಮೂವತ್ತು ವರ್ಷಗಳ ಇತಿಹಾಸವನ್ನು ಕೆದಕುವುದೇ ಇಲ್ಲ. ಅದನ್ನು ಹೇಳಹೊರಟರೆ ನಮ್ಮ ಕಾನೂನು, ಉಡುಪು ತೊಡುಪು, ಇಂಗ್ಲಿಷ್, ಆಧುನಿಕತೆ ಇವೆಲ್ಲ ಅರ್ಥಹೀನವಾಗುತ್ತವೆ. ಬ್ರಿಟಿಷ್ ವಿದ್ಯಾಭ್ಯಾಸ ಅಥವಾ ಅದರೊಂದಿಗಿನ ನಮ್ಮ ಬಾಂಧವ್ಯ ಕೆಡುತ್ತದೆ. ನಮ್ಮ ಅಸ್ಮಿತೆಗೆ ಬ್ರಿಟಿಷರು ಒರೆಗಲ್ಲಾಗುವುದೇ ಇಲ್ಲ. ಪ್ರಾಯಃ ನಮ್ಮ ಪ್ರಧಾನಿಗಿಂತಲೂ ಹೆಚ್ಚು ಬ್ರಿಟನ್ ಕುರಿತಂತೆ ಭಾರತದ ಅಸ್ಮಿತೆಯ ಕುರಿತು ಮಾತನಾಡಿದ್ದು ಸಂಸದರಾಗಿರುವ ವಿಶ್ವಸಂಸ್ಥೆಯ ಮಾಜಿ ಅಧಿಕಾರಿ ಶಶಿ ಥರೂರ್.

ಅವರು ಬ್ರಿಟನ್‌ನಲ್ಲಿಯೇ ಈ ಬಗ್ಗೆ ಮಾತನಾಡಿದರು. ಬ್ರಿಟನ್ ತನ್ನ ವಸಾಹತುಶಾಹಿ ಆಡಳಿತದಲ್ಲಿ ಭಾರತಕ್ಕೆ ಮಾಡಿದ ಅನ್ಯಾಯಕ್ಕೆ, ಇಲ್ಲಿನ ಸಂಪತ್ತನ್ನು ದೋಚಿದ್ದಕ್ಕೆ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು. ಇಂತಹ ಅಸ್ಮಿತೆಯನ್ನು ಕಾರ್ಯರೂಪಕ್ಕಿಳಿಸಿದ್ದು ಟಿಪ್ಪೂವಿನ ಖಡ್ಗವನ್ನು ಅಪಾರ ಹಣ ತೆತ್ತು ಬ್ರಿಟನ್‌ನಿಂದ ತಂದ ವಿಜಯ್ ಮಲ್ಯ. (ಈಗ ಅವರು ನಾನಾ ಆರ್ಥಿಕ ಕಾರಣಕ್ಕೆ ದೇಶಭ್ರಷ್ಟರಾಗಿದ್ದಾರೆ. ಅದು ಪ್ರತ್ಯೇಕ ವಿಷಯ.)

ಭಾರತವೆಂದು ನಾವಿಂದು ಕರೆಯುವ ಭೂಭಾಗದ ವಿರುದ್ಧ ಅನ್ಯರ ಆಕ್ರಮಣ ಆರಂಭವಾದದ್ದು ಘಜನಿ ಮತ್ತು ಅನಂತರದ ಘೋರಿ ವಂಶಸ್ಥರಿಂದ. ಅನಂತರ ಬಂದ ಗುಲಾಮೀ ಅರಸರು, ಅಲ್ತಮಿಷ್, ಮುಂತಾದವರು ಆಳುತ್ತ, ಅಳಿಯುತ್ತ ಹೋದರು. ತನ್ಮಧ್ಯೆ ಮಂಗೋಲದ ಚಕ್ರವರ್ತಿ ಚಂಗೀಸ್‌ಖಾನ್ ವಿಶ್ವವಿಜೇತನಾಗುವ ಮಹೋದ್ದೇಶ ಮತ್ತು ಮಹೋತ್ಸಾಹದಿಂದ ಉತ್ತರ ಗುಜರಾತಿನವರೆಗೂ ಬಂದಿದ್ದ ಮತ್ತು ಆ ಭೂಭಾಗಗಳನ್ನು ಗೆದ್ದಿದ್ದ. ಆದರೆ ಆತನಿಗೆ ಅಲ್ಲಿ ಸಂಗ್ರಹವಾಗುವ ಸಂಪತ್ತಿನ ಕುರಿತು ಆಸಕ್ತಿಯಿತ್ತೇ ಹೊರತು ಅದನ್ನು ಆಳುವ ತವಕವಿಲ್ಲದ್ದರಿಂದ ಹಿಂದಿರುಗಿದ. ಆಗಾಗ ದಾಳಿ ಮಾಡಿದರೂ ಭಾರತವನ್ನು ಆಳಲಿಲ್ಲ. ಮುಂದೆ ಖಿಲ್ಜೀ ವಂಶಸ್ಥರು, (ಮುಖ್ಯವಾಗಿ ಅಲ್ಲಾವುದ್ದೀನ್ ಖಿಲ್ಜಿ), ಈ ಸಾಮ್ರಾಜ್ಯವನ್ನು ದಕ್ಷಿಣ ಭಾರತಕ್ಕೂ ವಿಸ್ತರಿಸಿದರಾದರೂ ಅದೂ ಪತನವಾಗಿ ತುಘಲಕ್ ಸಂತತಿಯ ಆಳ್ವಿಕೆಗೆ ದಾರಿ ಮಾಡಿಕೊಟ್ಟಿತು. ಈ ಆಡಳಿತವು ಎಷ್ಟು ಶಕ್ತ ಮತ್ತು ಅತಿಯಾಗಿತ್ತೆಂದರೆ ಅವಿವೇಕಿ ಆಳ್ವಿಕೆಗೆ ತುಘಲಕ್ ಆಡಳಿತವೆಂಬ ನುಡಿಗಟ್ಟು ಪ್ರಸಿದ್ಧವಾಗಿದೆ.

ಆದರೆ 14ನೆ ಶತಮಾನದ ಮೂರು-ನಾಲ್ಕನೆ ದಶಕಗಳಲ್ಲೇ ಟರ್ಕಿ ಮೂಲದ ತೈಮೂರ್ ಭಾರತದ ಮೇಲೆ ದಾಳಿ ಮಾಡಿದನಾದರೂ ಇಲ್ಲಿ ಉಳಿಯುವ ಆಸೆ ಅವನಿಗಿರಲಿಲ್ಲ. ಅವನ ದಾಳಿಯ ಅನಂತರ ತುಘಲಕ್ ವಂಶ ಪತನವಾಯಿತು ಮತ್ತು ಸಯ್ಯದ್ ಹಾಗೂ ಲೋದಿ ವಂಶಜರು ಭಾರತವನ್ನಳಿದರು. ಅನಂತರ ದಿಲ್ಲಿಯನ್ನು ಹಲವು ಸುಲ್ತಾನರು ಆಳತೊಡಗಿ ಒಬ್ಬರ ಅಳಿವು ಇನ್ನೊಬ್ಬರ ಉಳಿವು ಎಂಬಂತೆ ಸಾಮ್ರಾಜ್ಯಗಳಳಿದುವು. ದಕ್ಷಿಣ ಭಾರತದಲ್ಲೂ ಬಹಮನಿ ಮುಂತಾದ ವಂಶಜರು ಎಲ್ಲೆಗಳನ್ನು ಸ್ಥಾಪಿಸಿಕೊಂಡರು. ಆದರೆ ಸ್ಥಳೀಯರಾದ ಅನೇಕ ಅರಸೊತ್ತಿಗೆಗಳು ಸ್ಥಾಪಿತವಾದವು ಮತ್ತು ಮುಂದುವರಿದವೆಂಬುದಕ್ಕೆ ಮೇವಾಡ, ವಿಜಯನಗರ ಮತ್ತಿತರ ರಾಜ್ಯಗಳು ಸಾಕ್ಷಿಯಾದವು. ಮುಸಲ್ಮಾನ ರಾಜರು ನಿರಂತರವಾಗಿ ದೇಶೀ ಹಿಂದೂ ಮತ್ತು ಕೆಲವೊಮ್ಮೆ ಮಂಗೋಲ ಮತ್ತಿತರ ವಿದೇಶೀ ಶಕ್ತಿಗಳ ವಿರುದ್ಧ ನಿರಂತರ ಜಾಗೃತವಾಗಿರಬೇಕಾಗಿತ್ತು. ಪ್ರಾಯಃ ಇದೇ ಅವರ ನಿರಂಕುಶತೆಗೆ ಕಾರಣವಾದದ್ದಿರಬಹುದು. ಒಟ್ಟಿನಲ್ಲಿ ಅಲ್ಲಿನ ವರೆಗಿನ ಆಕ್ರಮಣಕಾರರು ಸಂಪತ್ತಿನ ಕ್ರೋಡೀಕರಣೆಗಾಗಿ ಭಾರತವನ್ನು ಪ್ರವೇಶಿಸಿದ ಮತ್ತು ನೆಲಸಿದವರಾದ್ದರಿಂದ ಹಾಗೂ ಈ ಪೈಕಿ ಕೆಲವರಾದರೂ ಸಂಪತ್ತಿನೊಂದಿಗೆ ಹಿಂದಿರುಗಿದ್ದರಿಂದ, ಅವರಿಂದ ಈ ದೇಶದ ಮೇಲೆ ನಿರ್ದಿಷ್ಟವಾದ ಸಾಂಸ್ಕೃತಿಕ ಪರಿಣಾಮಗಳಾಗಲೇ ಇಲ್ಲ.

ಆದರೆ ಹದಿನಾರನೆ ಶತಮಾನದ ಪೂರ್ವಾರ್ಧದಲ್ಲಿ (1526) ತುರ್ಕಿ ಮೂಲದ ಅಥವಾ ಮಂಗೋಲರ ವಂಶಜನಾದ ಬಾಬರನ ಮೂಲಕ ಭಾರತದಲ್ಲಿ ಮೊಗಲ್ ಸಾಮ್ರಾಜ್ಯವು ಅಸ್ತಿತ್ವಕ್ಕೆ ಬಂದಿತು. ಬಾಬರ್ ಚಂಗೀಸ್‌ಖಾನ್ ಮತ್ತು ತೈಮೂರ ಇವರಿಬ್ಬರ ವಂಶಗಳ ಕೊಂಡಿಕುಡಿಯಾಗಿದ್ದ. ಇತಿಹಾಸವನ್ನು ಗಮನಿಸಿದವರಿಗೆ ಈ ಹಂತದಲ್ಲಿ ಇದು ಹಿಂದೂ-ಮುಸ್ಲಿಮ್ ಕಲಹವಾಗಿ ಕಂಡುಬಂದಿಲ್ಲ; ಮೊಗಲ್-ಅಫ್ಘನ್ನರ ನಡುವಣ ಹೋರಾಟವಾಗಿ ಕಂಡಿದೆ. ಬಾಬರನ ಅನಂತರ ಹುಮಾಯೂನ್ ಅಫ್ಘನ್ ದಾಳಿಗೆ ಸೋತು ತಪ್ಪಿಸಿಕೊಂಡು ಬದುಕಬೇಕಾದ ಸ್ಥಿತಿ ಬಂದಿತ್ತು. ಮುಂದೆ ಅಕ್ಬರ್, ಜಹಾಂಗೀರ್, ಷಹಜಹಾನ್, ಔರಂಗಜೇಬ್ ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯನ್ನು ತಲುಪಿದ್ದ ಈ ವಂಶವು 1857ರ ಸಿಪಾಯಿ ದಂಗೆಯ ಬಳಿಕ 2ನೆಯ ಬಹದೂರ್‌ಷಾ ಜಾಫರ್ ಬ್ರಿಟಿಷರ ಸೆರೆಯಾಳಾಗಿ ದಯನೀಯವಾಗಿ ಸತ್ತರು. ಆ ವರೆಗೆ ಮುಘಲ್ ಆಡಳಿತವು ಭಾರತದ ಮೇಲೆ ದೀರ್ಘಾವಧಿಯ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಪ್ರಭಾವವನ್ನು ಬೀರಿತು.

ಭಾರತವು ಹೆಮ್ಮೆಯಿಂದ ಹೇಳಿಕೊಳ್ಳಬಲ್ಲ ತಾಜ್‌ಮಹಲ್, ಕುತುಬ್ ಮಿನಾರ್, ಕೆಂಪುಕೋಟೆ ಮುಂತಾದ ಅದ್ಭುತ ಸೃಷ್ಟಿಗಳು ಮುಸ್ಲಿಮ್ ಸಾಮ್ರಾಜ್ಯದ ವೈಭವದ ಕತೆಗಳು. ಇಲ್ಲಿ ಸಮಾನಾಂತರವಾಗಿ ಹಿಂದೂ-ಮುಸ್ಲಿಮ್ ಸಖ್ಯದ, ದ್ರೋಹದ ಕಥೆಗಳೂ ಇವೆ. ಒಂದು ವಿಶೇಷವೆಂದರೆ ಮತಾಂತರದ, ಮುಸ್ಲಿಮ್ ಕ್ರೌರ್ಯದ ಎಷ್ಟೇ ಉದಾಹರಣೆಗಳನ್ನು ಉಲ್ಲೇಖಿಸಿದರೂ ಇತರ ಜಾತಿ-ಮತಗಳ ಮುಖ್ಯವಾಗಿ ಹಿಂದೂಗಳ ಜನಸಂಖ್ಯೆ ವೃದ್ಧಿಯಾಯಿತೇ ವಿನಾ ಕುಂಠಿತಗೊಳ್ಳಲಿಲ್ಲ. ಮುಸ್ಲಿಮ್ ಆಳ್ವಿಕೆಯ ಹೊರತಾಗಿಯೂ ಅವರೇ ಏಕೆ ಈ ದೇಶದ ಅಲ್ಪಸಂಖ್ಯಾಕರಾಗಿ ಉಳಿದರೆಂಬುದು ಒಂದು ಅಧ್ಯಯನಯೋಗ್ಯ ವಿಚಾರ.

 ಆದರೆ ಭಾರತದ ಆಧುನಿಕ ಇತಿಹಾಸ ಆರಂಭವಾದದ್ದು ಬ್ರಿಟಿಷರು ಈಸ್ಟ್ ಇಂಡಿಯಾ ಕಂಪೆನಿಯ ಮೂಲಕ ನಮ್ಮ ದೇಶವನ್ನು ಪ್ರವೇಶಿಸಿದ್ದರಿಂದ. ಅದಕ್ಕೂ ಮೊದಲೇ ಫ್ರೆಂಚರು, ಡಚ್ಚರು, ಪೋರ್ಚುಗೀಸರು ಭಾರತವನ್ನು ಪ್ರವೇಶಿಸಿ ಅಲ್ಲಲ್ಲಿ ತಮ್ಮ ಆಡಳಿತವನ್ನು ಹೂಡಿದ್ದರಾದರೂ ಅದು ಬ್ರಿಟಿಷರಷ್ಟು ಮಹತ್ವಾಕಾಂಕ್ಷೆಯನ್ನು ಹೊಂದಿದ್ದು ಕಾಣುವುದಿಲ್ಲ. ಆದರೆ ಸೂರ್ಯ ಮುಳುಗದ ಸಾಮ್ರಾಜ್ಯವನ್ನು ಕಟ್ಟುವ ಆಶಯವನ್ನು ಹೊಂದಿದ್ದ ಬ್ರಿಟಿಷರು 1947ರ ವರೆಗೂ ಈ ದೇಶದ ಮೇಲೆ ಹೊಂದಿದ್ದ ಕಬಂಧ ಬಾಹು ಎಷ್ಟು ಶಕ್ತವೂ ದಮನಕಾರಿಯೂ ಆಗಿತ್ತೆಂದರೆ ಬಿಳಿಯರು ಎಂದು ಭಾರತದಲ್ಲಿ ಉಲ್ಲೇಖಿಸುವುದಿದ್ದರೆ ಅದು ಬ್ರಿಟಿಷರನ್ನೇ ಹೊರತು ಇತರ ಯುರೋಪಿಯನ್ನರನ್ನಲ್ಲ.

ಬ್ರಿಟಿಷರು ಹೇರಿದ ಒತ್ತಡ ಎಷ್ಟು ಅತಿಯಾಗಿತ್ತೆಂದರೆ ಭಾರತದ ಅಸ್ಮಿತೆ ತಿರುಗೇಟು ಕೊಡದೆ ನಿರ್ವಾಹವಿರಲಿಲ್ಲ. ಒಂದೆಡೆ ರೈಲು, ಸಂಪರ್ಕಸಾಧನಗಳು, ಆಧುನಿಕ ಜೀವನ ಶೈಲಿ, ಆಂಗ್ಲ ಶಿಕ್ಷಣ ಮುಂತಾದ ಹೊಸತನಗಳು ಅಭಿವೃದ್ಧಿಯಾದರೂ ಇವನ್ನು ಮೀರಿಸಿದ ದಬ್ಬಾಳಿಕೆ ಮತ್ತು ಗುಲಾಮಗಿರಿಯನ್ನು ಭಾರತ ಅನುಭವಿಸಿತು. ಪ್ರಾಯಃ ಬ್ರಿಟಿಷ್ ಆಡಳಿತದಲ್ಲಿ ಆದಷ್ಟು ದಂಡನೆ, ಹಿಂಸೆ, ಸಾವು-ನೋವು ಈ ದೇಶದ ಇತಿಹಾಸದಲ್ಲಿ ಹಿಂದೆಂದೂ ಕಂಡುಬರುವುದಿಲ್ಲ. ನಾವಿಂದು ಉಲ್ಲೇಖಿಸುವ ಭಗತ್‌ಸಿಂಗ್ ಆದಿಯಾಗಿ ಸಾವಿರಾರು ದೇಶಪ್ರೇಮಿಗಳು, ಸ್ವಾತಂತ್ರ್ಯ ಹೋರಾಟಗಾರರು ತಮ್ಮ ರಕ್ತವನ್ನು ಹರಿಸಿದ್ದು ಗಾಂಧಿ ಮೂಲದ ಅಹಿಂಸಾ ಪರಂಪರೆಗೆ ಗೆಲುವಾಗಲು ನೆರವಾಯಿತೆಂಬುದನ್ನು ನೆನಪಿನಲ್ಲಿಡಬಹುದು. ಸ್ವಾತಂತ್ರ್ಯ ಸಿಕ್ಕಿತು; ಬ್ರಿಟಿಷರು ಭಾರತವನ್ನು ವಿಭಜಿಸಿ ಬಿಟ್ಟು ಹೋದರು. ಆದರೆ ಅವರ ಕುರಿತ ಕಹಿ ಭಾವನೆಯನ್ನು ನಾವು ವಿನಾ ಕಾರಣ ತೊಡೆದು ಹಾಕಿದೆವು.

ನಮ್ಮ ರಾಜಕೀಯ ಹೇಗೆ ವಿಕಾಸ/ಸಂಕೋಚ-ವಾಯಿತೆಂದರೆ ನಾವು ಈ ಎಲ್ಲ ಹೋರಾಟ, ಅನ್ಯಾಯದ ಹೊರತಾಗಿಯೂ ಭಾರತ-ಪಾಕಿಸ್ತಾನ ಎಂಬ ವಿಭಜನೆಗಿಂತಲೂ ಹಿಂದೂ-ಮುಸ್ಲಿಮ್ ಎಂಬ ವಿಭಜನೆಯನ್ನು ಮೈಗೂಡಿಸಿಕೊಂಡಿದ್ದೇವೆ. ಬ್ರಿಟಿಷರು ಬಿಟ್ಟುಹೋದ ಹಳೆಯ ಕೋಟು-ಟೈಗಳು ನಮಗೆ ಸ್ವೀಕಾರ್ಹ. ಆದರೆ ಬ್ರಿಟಿಷರು ಪ್ರವೇಶಿಸಿದ ಅನಂತರ ಸಿಪಾಯಿದಂಗೆಯ ಒಂದು ಐತಿಹಾಸಿಕ ಕ್ಷಣದ ಹೊರತಾಗಿ ಭಾರತದ ಹಿಂದೂಗಳು ಮತ್ತು ಮುಸ್ಲಿಮರು ಪರಸ್ಪರ ಸಂಶಯ-ಸಂದೇಹಗಳನ್ನೇ ಭ್ರಾತೃತ್ವವೆಂದು ಅಂಗೀಕರಿಸಿದಂತಿದೆ. ಇತರ ಮತ-ಪಂಥಗಳು ಗೌಣವಾಗಿವೆ ಅಥವಾ ಅವು ಸಾಂದರ್ಭಿಕವಾಗಿ ಒಮ್ಮೆ ಅ ಪಾಳೆಯ ಇನ್ನೊಮ್ಮೆ ಈ ಪಾಳೆಯ ಎಂಬ ಹಾಗೆ ಛಿದ್ರಗೊಂಡಿವೆ. ಇಂದು ದೇಶದ ಇತಿಹಾಸದ ಕತ್ತಲನ್ನು ಗುರುತಿಸುವವರು ಉದ್ದೇಶಪೂರ್ವಕವಾಗಿ ಬ್ರಿಟಿಷ್ ವಸಾಹತುಶಾಹಿಯ ರಕ್ತರಾತ್ರಿಗಳನ್ನು ಮರೆತಂತೆ ವಿವರಿಸುತ್ತಾರೆ. ಬ್ರಿಟನ್ ಭಾರತದಿಂದ ಏನೇನು ಮತ್ತು ಎಷ್ಟು ದೋಚಿದರೆಂಬ ವಿಚಾರವನ್ನು ಖ್ಯಾತ ಯುರೋಪಿಯನ್ ಇತಿಹಾಸಕಾರ ವಿಲ್ ಡ್ಯುರಾಂಟ್ ತನ್ನ ‘ದಿ ಕೇಸ್ ಫಾರ್ ಇಂಡಿಯಾ’ ಕೃತಿಯಲ್ಲಿ ಮನಮುಟ್ಟುವಂತೆ ವಿವರಿಸುತ್ತಾರೆ. (1765ರಲ್ಲಿ ಬ್ರೆಝಿಲ್ ಮತ್ತು ಮಲೇಶ್ಯಾದ ಕೆಲವೆಡೆ ಉತ್ಖನನವಾಗುವವರೆಗೆ ವಿಶ್ವದಲ್ಲಿ ವಜ್ರಗಳ ಅದಿರು ಮತ್ತು ಏಕೈಕ ದಾಸ್ತಾನು ಭಾರತದಲ್ಲಿತ್ತು ಎಂಬ ಅಂಶವನ್ನು ಚರಿತ್ರೆ ಹೇಳುತ್ತದೆ.)

ವಿಲಿಯಂ ಡೇಲ್ರಿಂಪಲ್ (ಮತ್ತು ಅನಿತಾ ಆನಂದ್) ತಮ್ಮ ಕೊಹಿನೂರ್ ಕೃತಿಯಲ್ಲಿ ಭಾರತದ ಹೆಮ್ಮೆಯಾಗಿದ್ದ ಒಂದು ವಿಶಿಷ್ಟ ಮತ್ತು ಭಾರೀ ಗಾತ್ರದ (ಕೋಳಿ ಮೊಟ್ಟೆಯಷ್ಟು) 190.3 ಮೆಟ್ರಿಕ್ ಕ್ಯಾರಟ್ ಮೌಲ್ಯದ ವಜ್ರ ಅನೇಕ ಯುದ್ಧಗಳಿಗೆ, ದುರಂತಗಳಿಗೆ ಸಾಕ್ಷಿಯಾಗಿಯೂ ಈ ದೇಶದಲ್ಲೇ ಉಳಿದಿತ್ತು ಮತ್ತು ಬ್ರಿಟಿಷರ ಕ್ರೂರ ಮತ್ತು ಕುಟಿಲ ಕಾರಸ್ಥಾನದಿಂದಾಗಿ ಅದು 1850ರಲ್ಲಿ ಬಲವಂತವಾಗಿ ಬ್ರಿಟನ್‌ಗೆ ಒಯ್ಯಲ್ಪಟ್ಟಿತು ಎಂಬುದನ್ನು ವಿವರಿಸುತ್ತಾರೆ. ಅದರ ಮೌಲ್ಯ ಎಷ್ಟಿತ್ತೆಂದರೆ ಅದನ್ನು ಮಾರಿದರೆ ಇಡೀ ವಿಶ್ವಕ್ಕೆ ಎರಡೂವರೆ ದಿನ ಊಟ ಹಾಕಬಹುದಾಗಿತ್ತು. ಭಾರತವು ಎಂದೂ ಊಹಿಸದಿದ್ದ, ವಿಚಿತ್ರವಾದರೂ ನಿಜವಾಗಿರಬೇಕೆಂದು ಬಯಸುವ, ಪೌರಾಣಿಕ ಇತಿಹಾಸವನ್ನೂ ಅವರು ಈ ವಜ್ರಕ್ಕೆ ಜೋಡಿಸಿ ಇದು ಶ್ರೀಕೃಷ್ಣನ ಕಾಲದ ಶ್ಯಮಂತಕಮಣಿಯಾಗಿದ್ದಿರ ಬಹುದೆಂದು ಕಲ್ಪಿಸುತ್ತಾರೆ.

ದಿಲ್ಲಿಯ ಮಯೂರ ಸಿಂಹಾಸನದ ಒಂದು ಕಣ್ಣಾಗಿದ್ದ ಈ ವಜ್ರವನ್ನು ಲಾಹೋರನ್ನು ರಾಜಧಾನಿಯಾಗಿಸಿ ಸುಮಾರಾಗಿ ಪೂರ್ತಿ ಉತ್ತರ ಭಾರತವನ್ನು ಆಳಿದ ಮಹಾರಾಜ ರಂಜಿತ್ ಸಿಂಗ್ ತನ್ನ ತೋಳಿಗೆ ಕಟ್ಟಿಕೊಳ್ಳುತ್ತಿದ್ದ ಎಂಬುದನ್ನು ಅಧಾರಸಹಿತವಾಗಿ ಉಲ್ಲೇಖಿಸುತ್ತಾರೆ. ಆತನ ಅನಂತರ ಆತನ ಮಗ ಮಹಾರಾಜ ದುಲೀಪ್ ಸಿಂಗ್ 8-9 ವರ್ಷದ ಎಳೆಯವನಾಗಿದ್ದಾಗ ಆತನಿಂದ ಬಲವಂತವಾಗಿ ಸಹಿಹಾಕಿಸಿ ಆತನ ತಾಯಿ ರಾಣಿ ಜಿಂಡಾನ್‌ಳನ್ನು ಸೆರೆಗೆ ದೂಡಿ ಕೊಹಿನೂರ್ ವಜ್ರವನ್ನು ಹೇಗೆ ಲಾರ್ಡ್ ಡಾಲ್‌ಹೌಸಿ ವಶಪಡಿಸಿಕೊಂಡನೆಂಬುದನ್ನು ಓದಿದರೆ ಬ್ರಿಟಿಷರು ವೃತ್ತಿಪರ ಡಕಾಯಿತರಂತೆ ಕಾಣುತ್ತಾರೆ. ಇಂತಹ ವಜ್ರ ಈಗ ತನ್ನ ಹಳೆಯ ಗಾತ್ರವನ್ನು ಕಳೆದುಕೊಂಡು ಕಿಂಚಿದೂನವಾಗಿದ್ದರೂ ವಿಶ್ವಶ್ರೇಷ್ಠವಾಗಿ ಉಳಿದಿದೆ ಮತ್ತು ಬ್ರಿಟನ್ ರಾಣಿಯ ಕಿರೀಟದಲ್ಲಿ ಶೋಭಿಸುತ್ತಿದೆಯೆಂದು ಹೇಳುತ್ತಾರೆ. ಇದರ ಒಡೆತನದ ಬಗ್ಗೆ ಪಾಕಿಸ್ತಾನ, ಅಫ್ಘಾನಿಸ್ತಾನ, ಇರಾನ್ ಮಾತ್ರವಲ್ಲ, ತಾಲಿಬಾನ್ ಕೂಡಾ ಬೇಡಿಕೆಯಿಟ್ಟಿದೆಯಾದರೂ ಈ ಬಗ್ಗೆ ಭಾರತ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡಲೇ ಇಲ್ಲ.

ಭಾರತ ಕೊಹಿನೂರ್ ವಜ್ರವನ್ನು ಹೇಗಾದರೂ ತರುವುದು ಇಲ್ಲವೇ ಮರಳಿ ಪಡೆಯುವುದು ಅದರ ಅಸ್ಮಿತೆಯ ಲಕ್ಷಣ. ಬ್ರಿಟನ್ ಜೊತೆಗೆ ಕೆಲಸಕ್ಕೆ ಬಾರದ ಸಂಬಂಧ ವರ್ಧನೆಯ ಬದಲಿಗೆ ಅದನ್ನು ಇಂತಹ ಕಳೆದುಹೋದ ಮಾನಸಂರಕ್ಷಣೆಗೆ ಬಳಸುವುದು ಒಳ್ಳೆಯದು. ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ಈ ವಜ್ರವನ್ನು ಮರಳಿ ಪಡೆಯುವ ಪ್ರಶ್ನೆ ಬಂದಾಗ 16.04.2016ರಂದು ಭಾರತದ ಸೊಲಿಸಿಟರ್‌ಜನರಲ್ ರಂಜಿತ್ ಕುಮಾರ್ ಅವರು ಇದನ್ನು ಭಾರತದ ಆಗಿನ ಅರಸರಾಗಿದ್ದ ಮಹಾರಾಜ ರಂಜಿತ್ ಸಿಂಗ್ ಬ್ರಿಟಿಷರಿಗೆ ಉಚಿತವಾಗಿ ನೀಡಿದ್ದಾರೆಯೇ ವಿನಾ ಅದನ್ನು ಅಪಹರಿಸಲಾಗಿಲ್ಲ ಮತ್ತು ಬಲಾತ್ಕಾರವಾಗಿ ಒಯ್ಯಲಾಗಿಲ್ಲ ಎಂದರು. ಹೀಗೆ ಭಾರತದ ಅಸ್ಮಿತೆಯ ಪ್ರಶ್ನೆ ಬಂದಾಗ ನುಣುಚಿಕೊಳ್ಳುವುದು ಮತ್ತು ಚುನಾವಣೆಗಷ್ಟೇ ಭಾರತೀಯತೆಯನ್ನು ಬಳಸಿಕೊಳ್ಳುವುದು ದೇಶವನ್ನು ಆಳುವವರ ಕೌಟಿಲ್ಯವಾದರೆ ದೇಶದ ಅಭಿಮಾನ ಎಲ್ಲಿ ಉಳಿಯಬೇಕು? ‘ದಿಲ್ಲೀಶ್ವರೋವಾ ಜಗದೀಶ್ವರೋವಾ’ ಎಂಬುದು ಉತ್ತರಕುಮಾರನ ಪೌರುಷವಷ್ಟೇ ಆಗಿ ಉಳಿದೀತಲ್ಲವೇ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)