varthabharthi

ಸಂಪಾದಕೀಯ

ಕಟ್ಟಡ ಕಾರ್ಮಿಕರ ದಾರುಣ ಸ್ಥಿತಿ

ವಾರ್ತಾ ಭಾರತಿ : 5 Oct, 2017

ಈ ದೇಶದಲ್ಲಿ ಕೃಷಿಯ ಬಳಿಕ ಆರ್ಥಿಕ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿರುವುದು ಕಟ್ಟಡ ನಿರ್ಮಾಣ ಉದ್ಯಮ. ಆರ್ಥಿಕ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವುದು ಮಾತ್ರವಲ್ಲ, ಅತೀ ಹೆಚ್ಚು ಉದ್ಯೋಗಾವಕಾಶಗಳನ್ನು ಒದಗಿಸಿಕೊಟ್ಟಿರುವ ಉದ್ಯಮವಿದು. ಸರಕಾರದ ಅಧಿಕೃತ ಅಂಕಿಅಂಶಗಳ ಪ್ರಕಾರ ರಿಯಲ್ ಎಸ್ಟೇಟ್ ಉದ್ಯಮವು ಕಳೆದ ನಾಲ್ಕು ವರ್ಷಗಳಲ್ಲಿ ಶೇ.80ರಷ್ಟು ಪ್ರಗತಿಯನ್ನು ಕಂಡಿದೆ. ಆದರೆ, ಈ ಉದ್ಯಮ ಪ್ರಗತಿ ಕಂಡರೂ ಇದಕ್ಕಾಗಿ ತಮ್ಮ ರಕ್ತವನ್ನು ಬೆವರು ಮಾಡಿಕೊಂಡು ದುಡಿಯುತ್ತಿರುವ ಕಾರ್ಮಿಕರ ಸ್ಥಿತಿ ಶೋಚನೀಯವಾಗಿದೆ.

ಈ ಶ್ರಮಜೀವಿಗಳ ಕಗ್ಗತ್ತಲ ಬದುಕಿನ ಮುಖ ಜಗತ್ತಿಗೆ ಗೊತ್ತಿಲ್ಲ. ಗಗನಚುಂಬಿ ಕಟ್ಟಡಗಳು ಸೇರಿದಂತೆ ಬೃಹತ್ ವಸತಿ ಸಮೂಹಗಳನ್ನು ನಿರ್ಮಿಸುವ ಈ ಕಾರ್ಮಿಕರ ಬದುಕು ಸುರಕ್ಷಿತವಾಗಿಲ್ಲ. ಈ ಉದ್ಯಮದಲ್ಲಿ ಕೆಲಸ ಮಾಡುವ ಕಾರ್ಮಿಕರು ಪ್ರತೀ ವರ್ಷ ಒಂದಿಲ್ಲೊಂದು ಕಾರಣಗಳಿಂದ ಸಾವಿಗೀಡಾಗುತ್ತಲೇ ಇದ್ದಾರೆ. ಕಟ್ಟಡದ ಮೇಲಿಂದ ಬಿದ್ದು, ಇಲ್ಲವೇ ವಿದ್ಯುತ್ ಆಘಾತಕ್ಕೆ ಒಳಗಾಗಿ, ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಕ್ಕಿ ಪ್ರಾಣವನ್ನು ಕಳೆದುಕೊಳ್ಳುವ ಕಾರ್ಮಿಕರ ಸಂಖ್ಯೆಗೆ ಲೆಕ್ಕವೇ ಇಲ್ಲ. ಇನ್ನು ಇಂತಹ ಘಟನೆಗಳಲ್ಲಿ ಗಾಯಗೊಂಡು ಬದುಕಿದರೂ ಸತ್ತಂತೆ ಇರುವ ಕಾರ್ಮಿಕರ ಸ್ಥಿತಿ ಇನ್ನೂ ಶೋಚನೀಯವಾಗಿದೆ.

ಈ ಕಾರ್ಮಿಕರ ಬಗ್ಗೆ ಸರಕಾರ ಅತ್ಯಂತ ನಿರ್ಲಕ್ಷ ಧೋರಣೆಯನ್ನು ತಾಳಿದೆ. ನಿರ್ಮಾಣ ಕಾಮಗಾರಿ ವೇಳೆ ಮೃತಪಟ್ಟ ಕಾರ್ಮಿಕರ ಅಧಿಕೃತ ಮಾಹಿತಿ ಸರಕಾರದ ಬಳಿ ಇಲ್ಲ. ಅನಧಿಕೃತ ಮಾಹಿತಿಗಳು ಬೇಕಾದಷ್ಟು ಸಿಗುತ್ತವೆ. ಕಟ್ಟಡ ಕಾರ್ಮಿಕರ ಸಾವಿಗೆ ಹೆಚ್ಚಾಗಿ ಅತೀ ಎತ್ತರದಲ್ಲಿ ಕಟ್ಟಿದ ಕಟ್ಟಡದ ಗೋಡೆ ಕುಸಿದು ಬಿದ್ದು ಸಾಯುವವರ ಸಂಖ್ಯೆ ಹೆಚ್ಚಾಗಿದೆ. ಶೇ.15ರಷ್ಟು ಮಂದಿ ಗೋಡೆ ಕುಸಿದು ಸಾವಿಗೀಡಾಗುತ್ತಾರೆ. ಬೇರೆ ಬೇರೆ ಹಳ್ಳಿ ಪಟ್ಟಣಗಳಿಂದ ದುಡಿಯಲೆಂದು ನಗರಕ್ಕೆ ಬರುವ ಕಾರ್ಮಿಕರು ದಿಕ್ಕುದೆಸೆಯಿಲ್ಲದೆ ಸತ್ತುಹೋಗುತ್ತಾರೆ. ಅತೀ ಹೆಚ್ಚು ಸಾವುನೋವುಗಳು ಸಂಭವಿಸುವುದು ವಿದ್ಯುತ್ ಸ್ಥಾವರ, ರಾಷ್ಟ್ರೀಯ ಹೆದ್ದಾರಿ, ರಸ್ತೆ ನಿರ್ಮಾಣ ಕಾಮಗಾರಿಗಳಲ್ಲಿ ಎಂದು ತಿಳಿದುಬಂದಿದೆ. ಕಟ್ಟಡ ನಿರ್ಮಾಣ ಕಾರ್ಮಿಕರ ಸಾವಿಗೆ ಸಂಬಂಧಿಸಿದಂತೆ ಈಗ ಸರಕಾರದ ಬಳಿ ಇರುವ ಏಕೈಕ ಮಾಹಿತಿಯೆಂದರೆ 2015ರ ಮಾರ್ಚ್ 16ರಂದು ಸರಕಾರ ಸಂಸತ್ತಿನಲ್ಲಿ ನೀಡಿದ ಲಿಖಿತ ಉತ್ತರ.

ಈ ಉತ್ತರದ ಪ್ರಕಾರ 2012ರಿಂದ 2015ರವರೆಗೆ ದೇಶಾದ್ಯಂತ 77 ಮಂದಿ ಕಟ್ಟಡ ಕಾರ್ಮಿಕರು ದುರಂತ ಸಾವನ್ನಪ್ಪಿದ್ದಾರೆ. ಆದರೆ, ಮಾಹಿತಿ ಹಕ್ಕು ಕಾನೂನಿನ ಪ್ರಕಾರ ಅರ್ಜಿ ಹಾಕಿ ಪ್ರಶ್ನಿಸಿದಾಗ ದೊರೆತ ಉತ್ತರವೆಂದರೆ 2013ರಿಂದ 2016 ಕಾಲಾವಧಿಯಲ್ಲಿ 452 ಮಂದಿ ಕಟ್ಟಡ ಕಾರ್ಮಿಕರು ದುರಂತ ಸಾವಿಗೀಡಾಗಿದ್ದಾರೆ ಹಾಗೂ ಒಟ್ಟು 218 ಮಂದಿ ಗಾಯಗೊಂಡಿದ್ದಾರೆ. ಅಂದರೆ ಸರಕಾರ ಸಂಸತ್‌ನಲ್ಲಿ ನೀಡಿದ ಅಂಕೆ ಸಂಖ್ಯೆಗಳಿಗೂ ಮಾಹಿತಿ ಹಕ್ಕು ಕಾನೂನಿನ ಪ್ರಕಾರ ದೊರೆತದಲ್ಲಿ ಅಂಕೆಸಂಖ್ಯೆಗಳಿಗೂ ಸಾಕಷ್ಟು ವ್ಯತ್ಯಾಸ ಎದ್ದು ಕಾಣುತ್ತದೆ. ಮಾಹಿತಿ ಹಕ್ಕು ಕಾನೂನಿನಂತೆ ದೊರೆತ ಅಂಕಿಅಂಶಗಳ ಪ್ರಕಾರ ದುರಂತ ಸಾವಿಗೀಡಾದ ಕಟ್ಟಡ ಕಾರ್ಮಿಕರ ಸಂಖ್ಯೆ ಆರು ಪಟ್ಟು ಹೆಚ್ಚಾಗಿದೆ. ಈ ಅಂಕಿ ಅಂಶಗಳಲ್ಲಿ ತುಂಬಾ ಗೊಂದಲವಿದೆ.

ಇವೆರಡನ್ನೂ ಹೊರತುಪಡಿಸಿ ಸ್ವಯಂ ಸೇವಾ ಸಂಸ್ಥೆಯೊಂದು ಸಂಗ್ರಹಿಸಿದ ಮಾಹಿತಿ ಪ್ರಕಾರ 2013ರಿಂದ 2016ರ ಕಾಲಾವಧಿಯಲ್ಲಿ ಸಾವಿಗೀಡಾದ ಕಟ್ಟಡ ಕಾರ್ಮಿಕರ ಸಂಖ್ಯೆ 1,098. ಗಾಯಗೊಂಡವರ ಸಂಖ್ಯೆ 378. ಈ ಬಗ್ಗೆ ಇನ್ನಷ್ಟು ಮಾಹಿತಿ ಸಂಗ್ರಹಿಸಲು ಹೋದರೆ, ಈ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎಂದು ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುವ ಕಾರ್ಮಿಕರ ಸಂಘಟನೆಗಳ ನಾಯಕರು ಹೇಳುತ್ತಾರೆ. ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುವ ಕಾರ್ಮಿಕರ ಸುರಕ್ಷತೆಯ ಬಗ್ಗೆ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಭಾರತದಲ್ಲಿ ಸದ್ಯ 3.7 ಕೋಟಿ ಜನ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿ ಜಾಗತೀಕರಣ ಪ್ರವೇಶಿಸಿದ ಆನಂತರ, ಅಂದರೆ 2000ನೆ ಇಸವಿಯ ಬಳಿಕ ದೇಶದ ಕೃಷಿ ರಂಗದಲ್ಲಿ ಅಸ್ತವ್ಯಸ್ತ ಉಂಟಾಗಿ ಗ್ರಾಮೀಣ ಪ್ರದೇಶದ ರೈತರೂ ಕಟ್ಟಡ ಕಾರ್ಮಿಕರಾಗಿ ನಗರಕ್ಕೆ ವಲಸೆ ಬಂದಿದ್ದಾರೆ. ಹೀಗಾಗಿ ಅವರ ಸಂಖ್ಯೆ ಹೆಚ್ಚಾಗಿದೆ. ದೇಶದ ಒಟ್ಟು ಆಂತರಿಕ ಉತ್ಪನ್ನ(ಜಿಡಿಪಿ)ಕ್ಕೆ ಕಟ್ಟಡ ನಿರ್ಮಾಣದ ಕೊಡುಗೆ ಶೇ.11ರಷ್ಟಿದೆ. ಇಲ್ಲಿ ಹೂಡಿರುವ ಬಂಡವಾಳದಲ್ಲಿ ಶೇ.65ರಷ್ಟು ಮೂಲಭೂತ ಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆಯಾಗುತ್ತಿದೆ.

ಹಣಕಾಸು ಮಾರುಕಟ್ಟೆಯಲ್ಲಿ ಈ ಉದ್ಯಮದಿಂದ ವಾರ್ಷಿಕ ರೂ. 2.48 ಕೋಟಿಯಷ್ಟು ವ್ಯವಹಾರ ನಡೆಯುತ್ತಿದೆ. ಆದರೆ, ಈ ಉದ್ಯಮದ ಬೆಳವಣಿಗೆಗಾಗಿ ಬೆವರು ಸುರಿಸುತ್ತಿರುವ ಕಾರ್ಮಿಕರ ಪರಿಸ್ಥಿತಿ ಮಾತ್ರ ಅತ್ಯಂತ ಶೋಚನೀಯವಾಗಿದೆ. ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುವವರು ದಿನಗೂಲಿ ಆಧಾರದಲ್ಲಿ ದುಡಿಯುತ್ತಿದ್ದಾರೆ. ಈ ಕಟ್ಟಡ ಕಾರ್ಮಿಕರಿಗಾಗಿ ನಮ್ಮ ದೇಶದಲ್ಲಿ ಅನೇಕ ಕಾನೂನುಗಳು ಇರುವುದು ನಿಜ. ಆದರೆ, ಇತ್ತೀಚಿನವರೆಗೆ ಈ ಕಾನೂನುಗಳು ಕಾಗದದಲ್ಲಿ ಮಾತ್ರ ಉಳಿದಿದ್ದವು. ಕಟ್ಟಡ ಕಾರ್ಮಿಕರಿಗೆಂದೇ ಇರುವ 27 ಕಾನೂನುಗಳ ಪೈಕಿ ಯಾವ ಕಾನೂನುಗಳೂ ಜಾರಿಯಾಗಿರಲಿಲ್ಲ. ಆದರೆ, ಕಳೆದ ಒಂದೂವರೆ ದಶಕದಿಂದೀಚೆಗೆ ಕಟ್ಟಡ ಕಾರ್ಮಿಕರು ಸಂಘಟನೆ ಕಟ್ಟಿಕೊಂಡು ಹೋರಾಡಿದ ಬಳಿಕ ಈ ಕಾನೂನುಗಳು ಜಾರಿಯಾಗಿವೆ.

ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಅಸುರಕ್ಷತೆಯಿಂದ ಕಾರ್ಮಿಕರ ಸಾವುಗಳು ಸಂಭವಿಸುತ್ತಿರುವುದು ಮಾತ್ರವಲ್ಲ, ಅವರ ದೈನಂದಿನ ಬದುಕು ಅತ್ಯಂತ ಯಾತನಾಮಯವಾಗಿದೆ. ಇಲ್ಲಿ ಕೆಲಸ ಮಾಡುವವರಿಗೆ ಉದ್ಯೋಗದ ಭದ್ರತೆ ಇಲ್ಲ. ಈ ಕಾರ್ಮಿಕರಲ್ಲಿ ಶೇ.95ರಷ್ಟು ಮಂದಿ ಗುತ್ತಿಗೆ ಕಾರ್ಮಿಕರಾಗಿದ್ದಾರೆ. ಗುತ್ತಿಗೆ ಕಾರ್ಮಿಕರಿಗೆ ಯಾವುದೇ ಕಾರ್ಮಿಕ ಕಾನೂನುಗಳು ಅನ್ವಯಿಸುವುದಿಲ್ಲ. ಈಗ ಲಭ್ಯವಿರುವ ಕಾನೂನುಗಳು ಕೂಡಾ ಸರಿಯಾಗಿ ಜಾರಿಯಾಗುತ್ತಿಲ್ಲ. ಹೀಗಾಗಿ ಅವರ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಕಟ್ಟಡ ಕಾರ್ಮಿಕರಲ್ಲಿ ಯಾವುದೇ ಕಾರ್ಮಿಕ ಸಂಘಟನೆಯನ್ನು ಸೇರದಿರು ವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಅವರಿಗೆ ಸರಕಾರದ ಯಾವುದೇ ಸವಲತ್ತು ಸಿಗುತ್ತಿಲ್ಲ. ಇದರೊಂದಿಗೆ ಮಧ್ಯವರ್ತಿಗಳ ಶೋಷಣೆಯಿಂದಾಗಿ ಕಾರ್ಮಿಕರ ಸ್ಥಿತಿ ಶೋಚನೀಯವಾಗಿದೆ.

ಕಟ್ಟಡ ಕಾರ್ಮಿಕರು ಸಾವಿಗೀಡಾದಾಗ ಮತ್ತು ಗಾಯಗೊಂಡಾಗ ಸರಕಾರದಿಂದ ದೊರೆಯುವ ಪರಿಹಾರ ಧನದಲ್ಲಿ ಶೇಕಡ ಅರ್ಧದಷ್ಟನ್ನು ಮಧ್ಯವರ್ತಿಗಳು ಲಪಟಾಯಿಸುತ್ತಾರೆ. ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ. ದೇಶದ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಶೇ.51ರಷ್ಟು ಮಹಿಳಾ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಆದರೆ, ಇವರಿಂದ ಕೆಲಸ ಮಾಡಿಸಿಕೊಳ್ಳುವ ಮಾಲಕರು ಮತ್ತು ಗುತ್ತಿಗೆದಾರರು ಇವರಿಗೆ ಸರಿಯಾಗಿ ಸಂಬಳವನ್ನೂ ನೀಡದೆ ಪ್ರತಿಯೊಂದು ವಿಷಯದಲ್ಲೂ ತಾರತಮ್ಯದಿಂದ ಕಾಣುತ್ತಾರೆ. ಅಷ್ಟೇ ಅಲ್ಲದೆ ಈ ಮಹಿಳಾ ಕಾರ್ಮಿಕರು ಮಾಲಕರಿಂದ ಮತ್ತು ಗುತ್ತಿಗೆ ದಾರರಿಂದ ನಿತ್ಯವೂ ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗ ಳಿಲ್ಲ. ಮಕ್ಕಳ ಆರೈಕೆಗಾಗಿ ವಿಶ್ರಾಂತಿ ಗೃಹಗಳಿಲ್ಲ. ಇಂತಹ ಹಲವು ಸೌಕರ್ಯಗಳನ್ನು ಕೊಡಿಸಲು ಕ್ರಮಕೈಗೊಳ್ಳಬೇಕಾದ ಕಾರ್ಮಿಕ ಇಲಾಖೆ ನಿಷ್ಕ್ರಿಯವಾಗಿದೆ. ಹೀಗಾಗಿ ಮಹಿಳಾ ಕಾರ್ಮಿಕರ ಪರಿಸ್ಥಿತಿ ಶೋಚನೀಯವಾಗಿದೆ.

ಒಂದು ಅಂಕಿಅಂಶದ ಪ್ರಕಾರ ಭಾರತದ ಪ್ರತೀ ಐವರು ಮಹಿಳೆಯರಲ್ಲಿ ಇಬ್ಬರು ಮಾತ್ರ ಒಂದಲ್ಲ ಒಂದು ರೀತಿಯಲ್ಲಿ ವೇತನ ಸಹಿತ ದುಡಿಮೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಉಳಿದಂತೆ ಬಹುತೇಕ ಕಾರ್ಮಿಕರಿಗೆ ಸರಿಯಾಗಿ ಸಂಬಳವೂ ಲಭಿಸುತ್ತಿಲ್ಲ. ಸಂಘಟಿತ ವಲಯದಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರಿಗೆ ಒಂದಿಷ್ಟು ಸೌಕರ್ಯಗಳು ಸಿಗುತ್ತವೆ. ಆದರೆ, ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ದುಡಿಯುತ್ತಿರುವ ಮಹಿಳಾ ಕಾರ್ಮಿಕರು ನಿತ್ಯವೂ ಶೋಷಣೆ ಅನುಭವಿಸಬೇಕಾಗುತ್ತದೆ. ದೇಶದಲ್ಲಿ ಇಂತಹವರ ಸಂಖ್ಯೆ ಶೇ.90ರಷ್ಟಿದೆ. ಹೀಗೆ ಹಲವಾರು ಸಮಸ್ಯೆಗಳಿಂದ ಬಳಲುತ್ತಿರುವ ಕಟ್ಟಡ ಕಾರ್ಮಿಕರಿಗಾಗಿ ಸರಕಾರ ಇನ್ನಷ್ಟು ಕಾನೂನುಗಳನ್ನು ರಚಿಸಬೇಕಾಗಿದೆ. ಈಗ ಇರುವ ಕಾನೂನುಗಳನ್ನು ಸರಿಯಾಗಿ ಜಾರಿಗೆ ತರಬೇಕಾಗಿದೆ. ಈ ನಿಟ್ಟಿನಲ್ಲಿ ಕಾರ್ಮಿಕರ ಸಂಘಟನೆಗಳ ಪಾತ್ರ ತುಂಬಾ ಮಹತ್ವದ್ದಾಗಿದೆ. ಕಾರ್ಮಿಕ ಸಂಘಟನೆಗಳು ನಿರಂತರ ಹೋರಾಟ ನಡೆಸಿ ಕಟ್ಟಡ ಕಾರ್ಮಿಕರ ಬದುಕನ್ನು ಸುಧಾರಿಸಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)