varthabharthi

ಸಿನಿಮಾ

ಕನ್ನಡ ಸಿನೆಮಾ

ಹುಲಿರಾಯ: ಈ ಹುಲಿರಾಯ ಕ್ರೂರಿಯಲ್ಲ!

ವಾರ್ತಾ ಭಾರತಿ : 8 Oct, 2017
ಶಶಿಕರ ಪಾತೂರು

ಹೆಸರಿನಿಂದಲೇ ಆಕರ್ಷಣೆ ಮೂಡಿಸಿದಂಥ ಚಿತ್ರ ಹುಲಿರಾಯ.

ನಿರೀಕ್ಷೆ ಮೂಡಿಸಿ ಬಿಡುಗಡೆಯಾಗುವ ಚಿತ್ರಗಳಿಗೆ ಮೊದಲ ದೃಶ್ಯದಿಂದಲೇ ಪ್ರೇಕ್ಷಕರನ್ನು ತೃಪ್ತಿ ಪಡಿಸಬೇಕಾದ ಜವಾಬ್ದಾರಿ ಇರುತ್ತದೆ. ಅದನ್ನು ನಿಭಾಯಿಸುವಲ್ಲಿ ಚಿತ್ರ ಒಂದು ಹಂತಕ್ಕೆ ಯಶಸ್ವಿಯಾಗಿದೆ.

ಹಳ್ಳಿಯಿಂದ ನಗರಕ್ಕೆ ಬರುವ ನಾಯಕ ರೌಡಿಯಾಗುವ ಕತೆಯನ್ನು ನಾವು ಸಾಕಷ್ಟು ಸಿನೆಮಾಗಳಲ್ಲಿ ನೋಡಿದ್ದೇವೆ. ಆದರೆ ಇಲ್ಲಿನ ನಾಯಕ ಕಾಡಿನಿಂದ ಬೆಂಗಳೂರಿಗೆ ಬರುತ್ತಾನೆ. ಆತ ಕಾಡು ಮನುಷ್ಯನಲ್ಲವಾದರೂ ಕಾಡನ್ನು ಪ್ರೀತಿಸುವವನು. ಅದೇ ಕಾರಣಕ್ಕೆ ಚಿತ್ರದಲ್ಲಿ ನಗರದ ವೈಭೋಗಕ್ಕಿಂತ ಕಾಡಿನ ಮುಗ್ಧ್ದತೆಗೆ ಹೆಚ್ಚು ಒತ್ತು ನೀಡಲಾಗಿದೆ. ಹಾಗಾಗಿ ಚಿತ್ರ ಉಳಿದೆಲ್ಲ ವಲಸೆ ಬಂದ ನಾಯಕನ ಚಿತ್ರಕ್ಕಿಂತ ವಿಭಿನ್ನವಾಗಿ ನಿಲ್ಲುತ್ತದೆ.

ನಾಯಕನಾಗಿ ಬಾಲು ನಾಗೇಂದ್ರ ಚಿತ್ರದ ಬಹುಪಾಲನ್ನು ತಮ್ಮ ಹೆಗಲಲ್ಲಿರಿಸಿಕೊಂಡಿದ್ದಾರೆ. ಮುಗ್ಧ್ದತೆಯ ಮುಖವಿರಿಸಿಕೊಂಡೇ ಬೆಂಕಿಕಾರುವ ಕಣ್ಣು ತೋರಿಸುವ ಅವರ ಅಭಿನಯ ಅನನ್ಯ. ನಾಯಕನ ವ್ಯಕ್ತಿತ್ವಕ್ಕನುಗುಣವಾಗಿ ನಿರ್ದೇಶಕರೇ ಬರೆದ ಚಿತ್ರದ ಸಂಭಾಷಣೆಗಳು ಕೂಡ ಸಹಜವಾಗಿ ಸಾಗುತ್ತದೆ. ಯುವ ಬರಹಗಾರ್ತಿ ನಂದಿನಿ ನಂಜಪ್ಪ ರಚಿಸಿ, ಬಿಡುಗಡೆಗೂ ಮೊದಲೇ ಜನಪ್ರಿಯವಾಗಿದ್ದ ಗೀತೆ ‘ಹೇ ಹುಡುಗೀ..’ ಚಿತ್ರದ ಆಕರ್ಷಕ ಅಂಶಗಳಲ್ಲೊಂದಾಗಿದೆ. ಅರ್ಜುನ್ ರಾಮು ಸಂಗೀತ, ಹಿನ್ನೆಲೆ ಸಂಗೀತದ ಬಗ್ಗೆಯೂ ಉಲ್ಲೇಖಿಸಲೇಬೇಕು.

ನಾಯಕಿಯರಲ್ಲೊಬ್ಬರಾಗಿ ದಿವ್ಯಾ ಉರುದುಗ ಆಧುನಿಕತೆಯ ಮುಗ್ಧ ಹುಡುಗಿಯಾದರೆ ಮಲ್ಲಿ ಪಾತ್ರಧಾರಿ ಚಿರಶ್ರೀ ಅಂಚನ್ ಮುಖದಲ್ಲೇ ಅಮಾಯಕತೆ ತುಳುಕುತ್ತದೆ. ಒಟ್ಟು ಕತೆಯಲ್ಲಿ ಮುಗ್ಧ್ದ ಮನಸುಗಳಲ್ಲಿ ಮೂಡುವ ಹೆಣ್ಣು, ದುಡ್ಡಿನ ಆಸೆಗಳು ಹೇಗೆ ಮನುಷ್ಯತ್ವ ಮರೆಸುತ್ತವೆ ಎನ್ನುವುದನ್ನು ಸೂಚ್ಯವಾಗಿ ಹೇಳಲಾಗಿದೆ.

ಇದರೊಂದಿಗೆ ಹುಲಿರಾಯ ಅಂದರೆ ದೆವ್ವವೇ? ರಾಕ್ಷಸನೇ? ಅಥವಾ ಮನುಜನೇ? ಎನ್ನುವುದರ ಅನಾವರಣವಾಗುತ್ತದೆ. ಆ ಅಂಶ ಅರ್ಥ ಮಾಡಿಕೊಳ್ಳಲಾರದೆ ಹೋದವರು ‘ಹುಲಿರಾಯ ಹುಳಿರಾಯ’ ಎನ್ನಲೂಬಹುದು. ಕ್ಲೈಮ್ಯಾಕ್ಸ್ ಏನೆಂದು ತಿಳಿಸಿದ ಮೇಲೆಯೂ ಹತ್ತು ನಿಮಿಷದ ಎಳೆದಾಟ ತಾಳ್ಮೆ ಪರೀಕ್ಷಿಸುತ್ತದೆ. ಆದರೆ ಛಾಯಾಗ್ರಹಣದಲ್ಲಿ ಮೂಡಿರುವ ಕಾಡಿನ ಸೊಬಗು, ಕಲಾವಿದರ ಅಭಿನಯದ ಬೆಡಗನ್ನು ಆಸ್ವಾದಿಸಬೇಕಾದರೆ ಚಿತ್ರ ನೋಡಲೇಬೇಕು.

ತಾರಾಗಣ: ಬಾಲು ನಾಗೇಂದ್ರ, ದಿವ್ಯಾ ಉರುದುಗ,

ಚಿರ ಶ್ರೀ ಅಂಚನ್
ನಿರ್ದೇಶನ: ಅರವಿಂದ್ ಕೌಶಿಕ್
ನಿರ್ಮಾಣ: ರಕ್ಷಿತ್ ಶೆಟ್ಟಿ, ಪುಷ್ಕರ್ ಮಲ್ಲಿಕಾರ್ಜುನಯ್ಯ

ಶ್ರೀನಾಥ್ ಕೌಂಡಿನ್ಯ, ಕುಲದೀಪ್, ನಾಗೇಂದ್ರ, ಹರೀಶ್ ಗುಂಗರ್ ಮೊದಲಾದವರು ಉಳಿದ ತಾರಾಗಣದಲ್ಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)