varthabharthi

ವಿಶೇಷ-ವರದಿಗಳು

ಇಲ್ಲಿದ್ದಾನೆ ನೋಡಿ ಭಾರತೀಯ ಕ್ರಿಕೆಟ್ ತಂಡದ ಅನಧಿಕೃತ ಟ್ವೆಲ್ತ್ ಮ್ಯಾನ್

ವಾರ್ತಾ ಭಾರತಿ : 10 Oct, 2017

ಈತನಿಗೆ ನಡೆದಾಡುವ ಸಾಮರ್ಥ್ಯವಿಲ್ಲದಿರಬಹುದು,ಆದರೆ 23ರ ಹರೆಯದ ಈ ಬಾಲ್‌ಬಾಯ್‌ನ ಶರೀರದಲ್ಲಿ ಕ್ರಿಕೆಟ್ ಎನ್ನುವುದು ಹಾಸುಹೊಕ್ಕಾಗಿದೆ.

ತನ್ನ ಜೀವನದುದ್ದಕ್ಕೂ ಕ್ರಿಕೆಟ್ ಆಟದ ಕಟ್ಟಾ ಅಭಿಮಾನಿಯಾಗಿರುವ ಧರ್ಮವೀರ ಪಾಲ್ ಇದೇ ಕಾರಣದಿಂದ ಭಾರತೀಯ ಕ್ರಿಕೆಟ್ ತಂಡದ ಭಾಗವಾಗಿಬಿಟ್ಟಿದ್ದಾನೆ.

ಗ್ವಾಲಿಯರ್ ಸಮೀಪದ ಮೊರೆನಾ ಗ್ರಾಮದ ಕುಟುಂಬವೊಂದರ ಆರು ಮಕ್ಕಳಲ್ಲಿ ಓರ್ವನಾಗಿರುವ ಧರ್ಮವೀರ ಹುಟ್ಟಿನಿಂದಲೇ ಅಂಗವಿಕಲನಾಗಿದ್ದಾನೆ. ಆದರೆ ಈ ಅಂಗವೈಕಲ್ಯ ವಿಶ್ವಾದ್ಯಂತ ಪ್ರಯಾಣಿಸಿ ಸ್ಟೇಡಿಯಮ್‌ಗಳಲ್ಲಿ ಕುಳಿತುಕೊಂಡು ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸುವ ಈತನ ಉತ್ಸಾಹಕ್ಕೆ ಅಡ್ಡಿಯಾಗಿಲ್ಲ. ಧರ್ಮವೀರ್ ಹೈಸ್ಕೂಲ್ ಮೆಟ್ಟಿಲನ್ನು ಹತ್ತದಿದ್ದರೂ ಆಟಗಾರರ ಒಡನಾಟದಿಂದಾಗಿ ಸೊಗಸಾದ ಇಂಗ್ಲೀಷ್ ಮಾತನಾಡುತ್ತಾನೆ.

ಕ್ರಿಕೆಟ್ ಬಗ್ಗೆ ತನ್ನ ಪ್ರೀತಿಯಿಂದಾಗಿಯೇ ಈತ ಇಂದು ಭಾರತೀಯ ಕ್ರಿಕೆಟ್ ತಂಡದ ಅನಧಿಕೃತ 12 ನೇ ಆಟಗಾರನಾಗಿ ಪ್ರವೇಶ ಪಡೆಯುವುದು ಸಾಧ್ಯವಾಗಿದೆ. ಭಾರತೀಯ ಕ್ರಿಕೆಟ್ ತಂಡವು ವಿಶ್ವದ ಯಾವುದೇ ಭಾಗಕ್ಕೆ ತೆರಳಿದರೂ ಈತ ಅವರೊಂದಿಗೆ ಇರುತ್ತಾನೆ. ಈತನ ಎಲ್ಲ ಖರ್ಚುವೆಚ್ಚಗಳನ್ನು ಭರಿಸುವ ಆಟಗಾರರು ಈತನನ್ನು ತಮ್ಮ ಕುಟುಂಬ ಸದಸ್ಯನೆಂದೇ ಪರಿಗಣಿಸಿದ್ದಾರೆ.

  ಧರ್ಮವೀರ ಭಾರತದ ಅಂಗವಿಕಲರ ಕ್ರಿಕೆಟ್ ತಂಡದ ನಾಯಕನೂ ಆಗಿದ್ದಾನೆ. ತನ್ನ ಕೈಗಳನ್ನು ಬಳಸಿ ನಡೆದಾಡುವ ಈತ ಅತ್ಯಂತ ವೇಗವಾಗಿ ಚಲಿಸಬಲ್ಲ. ಶಕ್ತಿಶಾಲಿ ತೋಳುಗಳನ್ನು ಹೊಂದಿರುವ ಈತ ಮಾಡುವ ಥ್ರೋ ಅಧ್ಭುತವಾಗಿರುತ್ತದೆ.

ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್, ಎಂ.ಎಸ್.ಧೋನಿ ಮತ್ತು ಮುರಳಿ ವಿಜಯ್‌ರಂತಹ ಕ್ರಿಕೆಟ್ ದಿಗ್ಗಜರೊಂದಿಗಿನ ಧರ್ಮವೀರನ ಚಿತ್ರಗಳು ಮೊರೆನಾದ ಈತನ ಮನೆಯ ಗೋಡೆಗಳನ್ನು ಅಲಂಕರಿಸಿವೆ. ಭಾರತೀಯ ತಂಡದ ಜರ್ಸಿಗಳು, ಆಟಗಾರರ ಬ್ಯಾಗ್‌ಗಳು ಮತ್ತು ಹಸ್ತಾಕ್ಷರಗಳನ್ನು ಸಂಗ್ರಹಿಸುವ ಈತನ ಮನೆಯಲ್ಲಿ ಇವುಗಳನ್ನೂ ಕಾಣಬಹುದಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)