varthabharthi

ನಿಮ್ಮ ಅಂಕಣ

ಚಹಾ ಮಾರಿದ್ದು ನಿಜವೇ?

ವಾರ್ತಾ ಭಾರತಿ : 11 Oct, 2017
-ಆರ್.ಬಿ.ಶೇಣವ, ಮಂಗಳೂರು

ಮಾನ್ಯರೆ,

ಮೋದಿಯವರು ಪ್ರಧಾನಿಯಾದ ಮೇಲೆ ಕಳೆದ ವಾರ ಮೊತ್ತ ಮೊದಲ ಬಾರಿಗೆ ತನ್ನ ಹುಟ್ಟೂರು ವಡ್ನಗರಕ್ಕೆ ಭೇಟಿ ನೀಡಿದರು. ಆಗ ಅವರು ತಾನು ಚಹಾ ಮಾರಿದ್ದ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಅಲ್ಲಿಯ ನೆಲಕ್ಕೆ ಮುತ್ತಿಡುವ ದೃಶ್ಯ ಟಿವಿಯಲ್ಲಿ ತೋರಿಸಿದರು. ಮೋದಿ ಹುಟ್ಟಿದ್ದು ಸೆಪ್ಟಂಬರ್ 1950 ಕ್ಕೆ, ಆದರೆ ಅವರು ಚಹಾ ಮಾರಿದ್ದ ರೈಲ್ವೆ ಸ್ಟೇಷನ್ ಕಟ್ಟಿದ್ದು 1973ರಲ್ಲಿ. ವಡ್ನಗರ್ ರೈಲ್ವೆ ಸ್ಟೇಷನ್ ಕಟ್ಟಿದಾಗ ಮೋದಿಯವರಿಗೆ ವಯಸ್ಸು 23 ಆಗಿತ್ತು. ಅದಕ್ಕಿಂತ ಮೊದಲು ಅಲ್ಲಿ ಕೇವಲ ಒಂದು ರೈಲ್ವ್ವೆೆ ‘ಹಾಲ್ಟ್’ ಮಾತ್ರ ಇತ್ತು. ಹಾಲ್ಟ್ ಎಂದರೆ ಅಲ್ಲಿ ಕೇವಲ ಪ್ಯಾಸೆಂಜರ್ ಟ್ರೇನ್ ಎರಡು ನಿಮಿಷ ಮಾತ್ರ ನಿಲ್ಲುತ್ತದೆ ಮತ್ತು ಅಲ್ಲಿ ಯಾವುದೇ ಪ್ಲಾಟ್‌ಫಾರ್ಮ್ ಇರುವುದಿಲ್ಲ. ಕೇವಲ ನೆಲಮಟ್ಟದಲ್ಲಿಯೇ ಒಂದು ಉದ್ದನೆ ಬಯಲು ಇರುತ್ತದೆ. ಅಲ್ಲಿ ಯಾವುದೇ ಸಿಗ್ನಲ್‌ಗಳು ಇರುವುದಿಲ್ಲ. ಹಾಗಾಗಿ ಸ್ಟೇಷನ್ ಮಾಸ್ಟರ್ ಮತ್ತು ಇತರ ತಾಂತ್ರಿಕ ಸಿಬ್ಬಂದಿ ಇರುವುದಿಲ್ಲ. ಕೇವಲ ಪ್ರಯಾಣಿಕರಿಗೆ ಟಿಕೆಟ್ ಕೊಡಲು ಒಂದು ಸಣ್ಣ ಗೂಡಂಗಡಿಯಂತಹ ಕೌಂಟರ್ ಇರುತ್ತದೆ. ಅದರಲ್ಲಿ ಒಬ್ಬ ಗುತ್ತಿಗೆ ಆಧಾರದಲ್ಲಿ ಟಿಕೆಟ್ ಮಾರುತ್ತಾನೆ. ಅಂದರೆ ಅವನು ರೈಲ್ವೆ ನೌಕರನಲ್ಲ, ಅವನಿಗೆ ಇಷ್ಟು ಟಿಕೆಟ್ ಮಾರಿದರೆ ಇಂತಿಷ್ಟು ಕಮಿಷನ್ ಎಂದು ನಿಗದಿಯಾಗಿರುತ್ತದೆ.

ವಡ್ನಗರದಲ್ಲಿ ಪ್ಲಾಟ್‌ಫಾರ್ಮ್ ಇರದ್ದರಿಂದ ಅಲ್ಲಿ ಚಹಾದ ಸ್ಟಾಲ್ ಇರುವ ಸಾಧ್ಯತೆ ಇಲ್ಲವೇ ಇಲ್ಲ. ಹಾಲ್ಟ್ ಗಳಲ್ಲಿ ಚಹಾ ಸ್ಟಾಲ್ ಹಾಕಲು ರೈಲ್ವೆ ಇಲಾಖೆ ಲೈಸನ್ಸ್ ಸಹಾ ಕೊಡುವುದಿಲ್ಲ. ಕೇವಲ ಅಧಿಕೃತ ಪ್ಲಾಟ್‌ಫಾರ್ಮ್ ಇರುವಲ್ಲಿ ಮಾತ್ರ ಟೀ-ಸ್ಟಾಲ್, ಪೇಪರ್-ಸ್ಟಾಲ್, ಹಣ್ಣಿನ ಅಂಗಡಿ ಹಾಕಲು ರೈಲ್ವೆ ಇಲಾಖೆ ಲೈಸನ್ಸ್ ನೀಡುತ್ತದೆ. (ನನ್ನ ತಮ್ಮನೇ ಹುಬ್ಬಳ್ಳಿ ರೈಲ್ವೆ ಡಿವಿಜನ್ನಿನಲ್ಲಿ ಸ್ಟೇಷನ್ ಸುಪರಿಂಟೆಂಡೆಂಟ್ ಆಗಿರುವುದರಿಂದ ನನಗೆ ರೈಲ್ವೆ ನಿಯಮ ಚೆನ್ನಾಗಿ ಗೊತ್ತಿದೆ.)
 ಮೋದಿಯವರ ಅಧಿಕೃತ ಜೀವನ ಚರಿತ್ರೆಯಲ್ಲಿ ಅವರು ಆರು ವರ್ಷದ ಚಿಕ್ಕ ಮಗುವಾಗಿದ್ದಾಗ ತಂದೆಯೊಟ್ಟಿಗೆ ರೈಲ್ವೆ ಟೀಸ್ಟಾಲ್‌ನಲ್ಲಿ ಚಹಾ ಮಾರುತ್ತಿದ್ದರು ಎಂದು ಬರೆಯಲಾಗಿದೆ. ಅಂದರೆ 1956 ರಲ್ಲಿ ವಡ್ನಗರದಲ್ಲಿ ರೈಲ್ವೆ ಸ್ಟೇಷನೇ ಇರದಿದ್ದಾಗ ಆರು ವರ್ಷದ ಪುಟ್ಟ ಮೋದಿ ಯಾವ ಸ್ಟೇಷನ್ನಿನಲ್ಲಿ ಚಹಾ ಮಾರಿದ್ದು? ಅವರು ತಮ್ಮ 17ನೆ ವಯಸ್ಸಿನಲ್ಲಿ ಮೆಟ್ರಿಕ್ ಫೇಲ್ ಆಗಿದ್ದಕ್ಕಾಗಿ ಮನೆ ಬಿಟ್ಟು ಹೋದವರು ಹಿಂದಿರುಗಿದ್ದು ಆರು ವರ್ಷಗಳ ನಂತರವಂತೆ. ಆಗ ಮೋದಿಯ ಇಬ್ಬರು ಅಣ್ಣಂದಿರೂ ಕಾಲೇಜಿನಲ್ಲಿ ಪದವಿ ಮುಗಿಸಿ ಸರಕಾರಿ ನೌಕರಿ ಮಾಡುತ್ತಿದ್ದರು. ಅಂದರೆ ಆಗ ಅವರ ತಂದೆಗೆ ಯಾವುದೇ ಹಣದ ಮುಗ್ಗಟ್ಟು ಇರಲಿಲ್ಲ ಎಂದಂತಾಯಿತು. ಹಾಗಾದರೆ ಮೋದಿ ಬಡತನದ ಯಾತನೆ ಅನುಭವಿಸಿದ್ದು ಯಾವಾಗ?

ಕಳೆದ ವರ್ಷದಿಂದ ಗುಜರಾತ್ ಪ್ರವಾಸೋದ್ಯಮ ಇಲಾಖೆ ಮೋದಿ ಚಹಾ ಮಾರಿದ್ದ ವಡ್ನಗರ ರೈಲ್ವೆ ಸ್ಟೇಷನ್, ಮೋದಿ ಕಲಿತ ಎರಡು ಶಾಲೆಗಳು ಮತ್ತು ಮೋದಿ ಮೊಸಳೆಯೊಂದಿಗೆ ಹೊಡೆದಾಡಿದ್ದ ನದಿಯನ್ನು ಪ್ರವಾಸಿಗರಿಗೆ ತೋರಿಸಲು ಒಂದು ದಿನದ ಟೂರ್ ಆಯೋಜಿಸಿದ್ದು ದಿನಕ್ಕೆ ತಲಾ ರೂ. 600 ಚಾರ್ಜ್ ಮಾಡುತ್ತಿದೆ (ಇದರ ವಿವರ ಅಂತರ್ಜಾಲದಲ್ಲಿ ಲಭ್ಯವಿದೆ). 1973ರಲ್ಲಿ ಕಟ್ಟಿದ ವಡ್ನಗರ್ ರೈಲ್ವೆ ಸ್ಟೇಷನ್‌ನಲ್ಲಿ ಮೋದಿ ಚಹಾ ಮಾರದೆ ಇದ್ದರೂ ಈಗ ಅದನ್ನು ಪ್ರವಾಸಿ ಕೇಂದ್ರ ಮಾಡಿರುವುದು ಆಶ್ಚರ್ಯ.

ಗೂಗಲ್ಸ್‌ನಲ್ಲಿ ವಡ್ನಗರ್ ರೈಲ್ವೆ ಸ್ಟೇಷನ್ ಎಂದು ಟೈಪ್ ಮಾಡಿ ನೋಡಿದಾಗ, ವಿಕಿಪೀಡಿಯಾದಲ್ಲಿ ಆ ಸ್ಟೇಷನ್ 1971ರಲ್ಲಿ ಕಟ್ಟಲು ಶುರು ಮಾಡಿ 1973ರಲ್ಲಿ ಉದ್ಘಾಟನೆಗೊಂಡಿದ್ದು ಎಂದು ಬರೆಯಲಾಗಿದೆ. ಅಂದರೆ 1971-73ರಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದಿದ್ದು ಇಂದಿರಾ ಗಾಂಧಿಯವರ ಕಾಂಗ್ರೆಸ್ ಸರಕಾರ. ಅಂದರೆ ಈ ವಡ್ನಗರ್ ರೈಲ್ವೆ ಸ್ಟೇಷನ್ ಕಟ್ಟಿಸಿದ್ದು ಕಾಂಗ್ರೆಸ್‌ಸರಕಾರ ಎಂದಂತಾಯಿತು. ಅದನ್ನೇ ಈಗ ಮೋದಿಯ ಹೆಸರಲ್ಲಿ ಪ್ರವಾಸಿ ಕೇಂದ್ರ ಮಾಡಲಾಗಿದೆ. ಒಟ್ಟಾರೆ ಮೋದಿಯವರು ಸುಳ್ಳಿನ ಬಲೆಯನ್ನೇ ಹೆಣೆದು ಅದರ ಮೂಲಕ ಅಧಿಕಾರ ಪಡೆದು, ಈಗ ಅದೇ ಸುಳ್ಳಿನ ಬಲೆಯಲ್ಲಿ ತಾನೇ ಸಿಕ್ಕಿ ಬಿದ್ದು ಒದ್ದಾಡುವಂತಾಗಿದೆ. ಈ ವಡ್ನಗರ್ ಸ್ಟೇಷನ್ ಎಂಬ ವಿಕಿಪೀಡಿಯಾ ಮೋದಿ ಸರಕಾರದ ಒತ್ತಡದಿಂದ ಅಂತರ್ಜಾಲದಿಂದ ಅಳಿಸಿ ಹಾಕುವ ಸಾಧ್ಯತೆ ಇದೆ, ಹಾಗಾಗಿ ಬೇಕಾದವರು ಇದರ ಸ್ಕ್ರೀನ್ ಶಾಟ್ ತೆಗೆದು ಇಟ್ಟುಕೊಳ್ಳಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)