varthabharthi

ಸಂಪಾದಕೀಯ

ನಿಜಕ್ಕೂ ನಮ್ಮ ಯೋಧರು ಯುದ್ಧಕ್ಕೆ ಸನ್ನದ್ಧರಿದ್ದಾರೆಯೇ?

ವಾರ್ತಾ ಭಾರತಿ : 11 Oct, 2017

ಸೈನಿಕರು ನಮಗೆ ನೆನಪಾಗಬೇಕಾದರೆ, ಅವರ ದುಃಖ ಸಂಕಟಗಳು ತಟ್ಟಬೇಕಾದರೆ ಅವರು ಗಡಿಯಿಂದ ಶವಪೆಟ್ಟಿಗೆಯ ಮೂಲಕ ನಮ್ಮ ಊರನ್ನು ಪ್ರವೇಶಿಸಬೇಕಾಗುತ್ತದೆ. ಆಗ ನಮಗೆ ಒಮ್ಮೆಲೆ ‘ಸ್ಮಶಾನ ವೈರಾಗ್ಯ’ ವಾಗುತ್ತದೆ. ದೇಶಪ್ರೇಮದ ಘೋಷಣೆ ಕೂಗುತ್ತೇವೆ. ಪಾಕಿಸ್ತಾನಕ್ಕೆ ಛೀಮಾರಿ ಹಾಕುತ್ತೇವೆ. ಯುದ್ಧ ಘೋಷಣೆಯಾಗಲಿ ಎಂದು ‘ನಾವೇ ಸ್ವತಃ ಯುದ್ಧ ಭೂಮಿಗೆ ಹೊರಡಲು ಸಿದ್ಧರಾದವರಂತೆ’ ಚೀರಾಡುತ್ತೇವೆ. ಬಳಿಕ ಇವರನ್ನು ಮರೆತು ಎಂದಿನಂತೆ ಸುಖ ಜೀವನದಲ್ಲಿ ಮೈ ಮರೆಯುತ್ತೇವೆ. ಇದೇ ಸಂದರ್ಭದಲ್ಲಿ, ಸುರಿವ ಹಿಮಗಳ ನಡುವೆ ಹಗಲು ರಾತ್ರಿ ಗಡಿ ಕಾಯುತ್ತಿದ್ದ ಯೋಧನೊಬ್ಬ ‘‘ನಮಗೆ ಸರಿಯಾದ ಊಟ ಸಿಗುತ್ತಿಲ್ಲ’’ ‘‘ಪೌಷ್ಟಿಕಾಂಶವುಳ್ಳ ಪದಾರ್ಥಗಳು ಸಿಗುತ್ತಿಲ್ಲ’’ ಎಂದಾಕ್ಷಣ, ಆ ಯೋಧನ ಕುರಿತಂತೆ ನಾವು ಅಸಹನೆ ವ್ಯಕ್ತಪಡಿಸುತ್ತೇವೆ. ದೇಶಭಕ್ತರೆಂದು ಕರೆಸಿಕೊಂಡವರು ಆ ಯೋಧನ ಮೇಲೆ ಮುಗಿ ಬೀಳುತ್ತಾರೆ.

ಊರು, ಮನೆ, ಕುಟುಂಬ, ಮಕ್ಕಳು ಇವರೆಲ್ಲರನ್ನು ಮರೆತು ಗಡಿಯಲ್ಲಿ ಮಳೆ, ಚಳಿಯೆನ್ನದೇ ಕಾವಲು ಕಾಯುವ ಯೋಧನೊಬ್ಬನಿಗೆ ‘‘ನನಗೆ ಹೊಟ್ಟೆ ತುಂಬಾ ಊಟ ಕೊಡಿ’’ ಎಂದು ಕೇಳುವ ಹಕ್ಕೂ ಇಲ್ಲವೇ? ಹಾಗೆ ಕೇಳುವ ಸನ್ನಿವೇಶವನ್ನು ಸೃಷ್ಟಿಸಿದ್ದಕ್ಕಾಗಿ ಸರಕಾರದ ಮೇಲೆ ನಾವು ಮುಗಿ ಬೀಳಬೇಕಾಗಿತ್ತು. ಆ ಸೈನಿಕನಿಗೆ ಆತ್ಮಸ್ಥೈರ್ಯವನ್ನು ತುಂಬಬೇಕಾಗಿತ್ತು. ಆದರೆ ಅದಾವುದೂ ನಡೆಯಲಿಲ್ಲ. ‘‘ಸೇನೆಯೊಳಗಿನ ದೂರನ್ನು ಸಾಮಾಜಿಕ ತಾಣದಲ್ಲಿ ಹಾಕಿದ್ದೇಕೇ?’’ ಎಂದು ಪ್ರಶ್ನಿಸಿ ಆ ಯೋಧನನ್ನೇ ದೇಶದ್ರೋಹಿಯಾಗಿಸುವ ಸಂಚು ನಡೆಯಿತು. ಅವನ ಹುದ್ದೆ ಹೋಯಿತು. ಆತನಿಗೆ ಸಿಗುವ ಸೌಲಭ್ಯಗಳು ಹೋದವು.ಆವರೆಗೆ ಆತ ನಿರ್ವಹಿಸಿದ ದೇಶ ಸೇವೆ ಬೆಲೆ ಕಳೆದುಕೊಂಡಿತು. ಸೇನೆಯ ಮೇಲಧಿಕಾರಿಗಳ ವಿರುದ್ಧ ಸೇನೆಯೊಳಗೆ ದೂರು ನೀಡಿದರೆ ಅದರ ಪರಿಣಾಮ ಏನಾಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವುದೇ ಆಗಿದೆ.

ಸೇನೆಯ ಒಳಗೆ ನಡೆಯುವ ಕೋರ್ಟ್ ಮಾರ್ಷಲ್‌ಗಳೆಂಬ ಅಣಕ, ಸಂತ್ರಸ್ತ ಯೋಧರಿಗೆ ನ್ಯಾಯಕೊಟ್ಟದ್ದು ತೀರಾ ಕಡಿಮೆ ಎಂದು ವರದಿಗಳು ಹೇಳುತ್ತವೆ. ಹೀಗಿರುವಾಗ, ಒಬ್ಬ ಯೋಧ, ಕಳಪೆ ಊಟದ ವಿರುದ್ಧ ಮೇಲಾಧಿಕಾರಿಗಳಿಗೆ ದೂರನ್ನು ನೀಡುವುದಾದರೂ ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ನಮಗೆ ನಾವು ಕೇಳಿಕೊಳ್ಳಲಿಲ್ಲ. ಸೇನೆಯೊಳಗೆ ಮೇಲಧಿಕಾರಿಗಳು ಯೋಧರನ್ನು ಗುಲಾಮಗಿರಿಗೆ ಬಳಸುವ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸೈನಿಕ ಅಂತಿಮವಾಗಿ ನಿಗೂಢ ರೀತಿಯಲ್ಲಿ ಮೃತಪಟ್ಟ. ಅದನ್ನು ನಾವು ಆತ್ಮಹತ್ಯೆ ಎಂದು ಕರೆದಿದ್ದೇವೆ. ಇದೇ ಯೋಧರನ್ನು ಬಳಸಿಕೊಂಡು ನಮ್ಮ ರಾಜಕಾರಣಿಗಳು ತಮ್ಮನ್ನು ತಾವು ‘ವೀರರು, ಶೂರರು, ದೇಶಪ್ರೇಮಿಗಳು’ ಎಂದು ಮಾಧ್ಯಮಗಳಲ್ಲಿ ಬಿಂಬಿಸಿಕೊಳ್ಳುತ್ತಾರೆ. ‘‘ಯುದ್ಧಕ್ಕೆ ನಾವು ಸಿದ್ಧ’’ ಎಂದು ರಾಜಕಾರಣಿಗಳು ಮಾಧ್ಯಮಗಳಲ್ಲಿ ಘೋಷಿಸುತ್ತಾರೆ. ಆದರೆ ಯುದ್ಧಭೂಮಿಯಲ್ಲಿ ಶತ್ರುಗಳ ಕೋವಿಗೆ ಎದೆಗೊಡುವವರು ಈ ರಾಜಕಾರಣಿಗಳಲ್ಲ.

ಗಡಿ ಕಾಯುವ ಜವಾನರು. ಯಾವಾಗ ಈ ಸೈನಿಕರ ಬೇಡಿಕೆಗಳು ಈಡೇರುತ್ತವೋ, ಅವರಿಗೆ ಹೊಟ್ಟೆ ತುಂಬಾ ಆರೋಗ್ಯಪೂರ್ಣ ಆಹಾರ ಸಿಗುತ್ತದೆಯೋ, ಅತ್ಯುತ್ತಮ ಬೂಟುಗಳು, ಕೈಗವಚಗಳು ಸಿಗುತ್ತವೆಯೋ, ಅತ್ಯಾಧುನಿಕ ಶಸ್ತ್ರಗಳು ಒದಗುತ್ತವೆಯೋ, ಮಳೆ, ಚಳಿಯನ್ನು ಎದುರಿಸಲು ಬೇಕಾದ ಆಧುನಿಕ ಬಟ್ಟೆಗಳು ದೊರಕುತ್ತವೆಯೋ ಆಗ ಮಾತ್ರ ರಾಜಕಾರಣಿಗಳು ‘ನಾವು ಯುದ್ಧಕ್ಕೆ ಸಿದ್ಧ’ ಎಂದು ಘೋಷಿಸುವ ನೈತಿಕತೆಯನ್ನು ಪಡೆಯುತ್ತಾರೆ. ವಿಪರ್ಯಾಸವೆಂದರೆ, ಆಹಾರ, ಆಧುನಿಕ ಶಸ್ತ್ರಾಸ್ತ್ರಗಳಿಗಾಗಿ ಆಗ್ರಹಿಸುತ್ತಿರುವ ಸೈನಿಕರು ಇಂದು, ಶವಪೆಟ್ಟಿಗೆಗಳಿಗಾಗಿ ಬೇಡಿಕೆ ಇಡುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಮೃತಪಟ್ಟ ಏಳು ಯೋಧರ ಮೃತದೇಹಗಳನ್ನು ರಟ್ಟಿನಲ್ಲಿ ಸುತ್ತಿ ರವಾನಿಸಿರುವುದು ಮಾಧ್ಯಮಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಸೇನೆ ಸ್ಪಷ್ಟೀಕರಣ ನೀಡಿ ‘ಇಂತಹ ತಪ್ಪು ಪುನರಾವರ್ತನೆಯಾಗದು’ ಎಂದು ಹೇಳಿದೆಯಾದರೂ, ನಡೆದಿರುವ ತಪ್ಪು ಈ ದೇಶದ ಆತ್ಮವನ್ನು ಇರಿದಿದೆ ಎನ್ನುವುದನ್ನು ನಾವು ಮರೆಯಬಾರದು. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ ಅಸ್ತಿತ್ವದಲ್ಲಿದ್ದಾಗ ಸೈನಿಕರ ಶವಪೆಟ್ಟಿಗೆ ಹಗರಣ ನಡೆಯಿತು. ಸೈನಿಕರ ಶವಪೆಟ್ಟಿಗೆ ವ್ಯವಹಾರದಲ್ಲಿ ತಮಗೆಷ್ಟು ಗಿಟ್ಟುತ್ತದೆ ಎಂದು ರಣಹದ್ದುಗಳಂತೆ ಇಣುಕುವ ನಾಯಕರಿರುವ ದೇಶದಲ್ಲಿ ಸೈನಿಕರು ತಮ್ಮ ಉಳಿದ ಸವಲತ್ತುಗಳನ್ನು ನಿರೀಕ್ಷಿಸುವುದಾದರೂ ಹೇಗೆ? ಇದೀಗ ಮೋದಿಯ ಆಡಳಿತದಲ್ಲಿ ರಟ್ಟಿನಲ್ಲಿ ಸುತ್ತಲ್ಪಟ್ಟ ಯೋಧರ ಮೃತದೇಹಗಳು ನಮ್ಮನ್ನು ಅಣಕಿಸುತ್ತಿವೆ. ನಮ್ಮ ಯೋಧರ ತ್ಯಾಗ, ಬಲಿದಾನಗಳು ನಮ್ಮ ರಾಜಕಾರಣಿಗಳ ದೃಷ್ಟಿಯಲ್ಲಿ ಅದೆಷ್ಟು ನಿಕೃಷ್ಟವಾಗಿದೆ ಎನ್ನುವುದನ್ನು ಇದು ತಿಳಿಸುತ್ತದೆ.

ಶತ್ರುಗಳ ದಾಳಿಗೆ ನಮ್ಮ ಸೈನಿಕರು ಮೃತಪಟ್ಟಿರುವುದಕ್ಕಿಂತ ಒಳ ಅವ್ಯವಸ್ಥೆಯಿಂದ ನಮ್ಮ ಸೈನಿಕರು ಸತ್ತ ಸಂಖ್ಯೆ ಹೆಚ್ಚಿವೆ ಎನ್ನುವುದು ಆತಂಕದ ವಿಷಯ. ಯಾವ ಶತ್ರು ದಾಳಿಗೂ ಈಡಾಗದೆ ಪದೇ ಪದೇ ನಮ್ಮ ಲಘು ಯುದ್ಧ ವಿಮಾನಗಳು ನೆಲಕಚ್ಚಿ ಅಧಿಕಾರಿಗಳು, ಯೋಧರು ಮೃತಪಡುತ್ತಿರುವುದು ಮುಂದುವರಿಯುತ್ತಲೇ ಇದೆ. ಇದಕ್ಕೆ ಕಾರಣ ಏನು? ನಾವು ಕಳಪೆ ಯುದ್ಧ ವಿಮಾನಗಳಲ್ಲಿ ನಮ್ಮ ಯೋಧರನ್ನು ಏರಿಸಿ, ಬಲಿಪಶುಗಳನ್ನಾಗಿ ಮಾಡುತ್ತಿದ್ದೇವೆಯೇ? ಇದು ಸೈನಿಕರ ನೈತಿಕ ಸ್ಥೈರ್ಯವನ್ನು ಕಸಿದುಕೊಳ್ಳುವುದಿಲ್ಲವೇ? ಯುದ್ಧ ನಡೆಯದೆಯೇ ನೆಲಕಚ್ಚುವ ವಿಮಾನಗಳು ನಮ್ಮ ರಕ್ಷಣಾ ವರ್ಚಸ್ಸಿಗೆ ಕುಂದುಂಟು ಮಾಡುವುದಿಲ್ಲವೇ? ಈ ಪ್ರಶ್ನೆಗಳಿಗೆ ಉತ್ತರಿಸುವ ಸರಕಾರ ಬಾಯಿ ಹೊಲಿದು ಕೂತಿದೆ. ಇದಕ್ಕಿಂತ ಆತಂಕಕಾರಿಯಾದ ಇನ್ನೊಂದು ಅಂಶದ ಕಡೆಗೆ ನಾವು ಗಮನ ಹರಿಸಬೇಕಾಗಿದೆ.

ದಕ್ಷಿಣ ಕಾಶ್ಮೀರದಲ್ಲಿ ದೇಶ ಕಾಯುತ್ತಿದ್ದ ಕರ್ನಾಟಕ ಯೋಧನೊಬ್ಬನ ಮೃತದೇಹ ಸೋಮವಾರ ಬೆಂಗಳೂರಿಗೆ ಬಂದಿದೆ. ಈತನನ್ನು ಕೊಂದಿರುವುದು ಉಗ್ರರಲ್ಲ. ಸೇನೆ ಹೇಳುವಂತೆ ‘ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ’. ಆದರೆ ಕುಟುಂಬ ಈ ಬಗ್ಗೆ ತನ್ನ ಸಂಶಯವನ್ನು ವ್ಯಕ್ತಪಡಿಸುತ್ತಿದೆ. ಒಂದು ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದೇ ಇಟ್ಟುಕೊಳ್ಳೋಣ. ಸಾಧಾರಣವಾಗಿ ಪ್ರತೀ ಆತ್ಮಹತ್ಯೆಗಳ ಹಿಂದೆ ಒಂದು ಕಾರಣವಿರುತ್ತದೆ ಮತ್ತು ಆತ್ಮಹತ್ಯೆ ಮಾಡಿಕೊಳ್ಳುವ ಹೆಚ್ಚಿನ ಜನರು ಆ ಕಾರಣವನ್ನು ಬರೆದಿಟ್ಟು ಸಾಯುತ್ತಾರೆ. ಆದರೆ ಸೇನೆಯಲ್ಲಿ ಯೋಧರ ಆತ್ಮಹತ್ಯೆಗಳು ‘ಖಿನ್ನತೆ’ ಹೆಸರಲ್ಲಿ ಮುಚ್ಚಿ ಹೋಗಿವೆ.

ಆತಂಕಕಾರಿಯಾದ ಅಂಶವೆಂದರೆ ಈ ದೇಶದಲ್ಲಿ ಪ್ರತೀ ಮೂರು ದಿನಕ್ಕೆ ಒಬ್ಬ ಯೋಧ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎಂದು ವರದಿಯೊಂದು ತಿಳಿಸುತ್ತದೆ. 2014, ಜ.1ರಿಂದ 2017, ಮಾ.31ರ ನಡುವೆ ಪ್ರತೀ ಮೂರು ದಿನಗಳಿಗೆ ಮೂರೂ ಸಶಸ್ತ್ರ ಪಡೆಗಳು ಸೇರಿ ಕನಿಷ್ಠ ಓರ್ವ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಾ ಬಂದಿದ್ದಾನೆ. ಈ ಪೈಕಿ ಭೂಸೇನೆಯ ಸಿಬ್ಬಂದಿ ಅತಿಹೆಚ್ಚು ಸಂಖ್ಯೆ(276)ಯಲ್ಲಿದ್ದರೆ, ನೌಕಾಪಡೆಯ ಸಿಬ್ಬಂದಿಯ ಸಂಖ್ಯೆ(12) ಕನಿಷ್ಠವಾಗಿದೆ. ಇದರ ಜೊತೆ ಜೊತೆಗೇ ಮೇಲಾಧಿಕಾರಿಗಳ ಮೇಲೆ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಯೋಧರ ಸಂಖ್ಯೆಯೂ ಹೆಚ್ಚುತ್ತಿದೆ. ಖಿನ್ನತೆ ಈ ದುರಂತಕ್ಕೆ ಕಾರಣವಾಗಿರಬಹುದು. ಆದರೆ ಯೋಧರನ್ನು ಖಿನ್ನತೆಗೆ ತಳ್ಳುವ ಅವ್ಯವಸ್ಥೆಯನ್ನು ಸುಧಾರಣೆ ಮಾಡುವುದು ಸೇನೆಯ ಹಿರಿಯ ಅಧಿಕಾರಿಗಳು ಮತ್ತು ನಮ್ಮ ಸರಕಾರದ ಕರ್ತವ್ಯ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಸೇನೆ ಸೇರಲು ಯುವಕರೇ ಸಿಗದಂತಹ ಸನ್ನಿವೇಶ ನಿರ್ಮಾಣವಾಗಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)