varthabharthi

ನಿಮ್ಮ ಅಂಕಣ

ಈ ಪ್ರತಿಭಟನೆಯ ಮೂಲಕ ಸಮಾಜಕ್ಕೆ ನೀಡಿದ ಸಂದೇಶವೇನು?

ವಾರ್ತಾ ಭಾರತಿ : 12 Oct, 2017
-ಡಾ. ಕೃಷ್ಣಮೂರ್ತಿ ಚಮರಂ, ಮೈಸೂರು

ಮಾನ್ಯರೇ,

ಅಖಿಲ ಭಾರತ 83ನೆ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ಪ್ರಗತಿಪರ ಸಾಹಿತಿ ಪ್ರೊ. ಚಂಪಾ ಅವರ ಆಯ್ಕೆಯನ್ನು ವಿರೋಧಿಸಿ ಮೈಸೂರಿನಲ್ಲಿ ಇತ್ತೀಚೆಗೆ ವಿಪ್ರ ಯುವಕರ ಸಂಘಟನೆ ಪ್ರತಿಭಟನೆ ಮಾಡಿದ್ದರು. ಸೈದ್ಧಾಂತಿಕವಾಗಿ ಚಂಪಾ ಅವರು ನಿಷ್ಠುರವಾಗಿ ಮನುಷ್ಯರಲ್ಲಿ ಅಸಮಾನತೆಯನ್ನು ಪೋಷಿಸುವ ಪುರೋಹಿತಶಾಹಿ ಧೋರಣೆಯನ್ನು ತಮ್ಮ ಮಾತು ಮತ್ತು ಕೃತಿಗಳಲ್ಲಿ ವಿರೋಧಿಸಿಕೊಂಡೇ ಬಂದವರು. ಯಾವುದೇ ಪ್ರಗತಿಪರ ಚಳವಳಿಯಲ್ಲೂ ಸಕ್ರಿಯರಾಗಿ ಭಾಗವಹಿಸುವ, ಅನ್ಯಾಯ ಅಕ್ರಮಗಳನ್ನು ದಿಟ್ಟವಾಗಿ ಪ್ರಶ್ನಿಸುವ ಪ್ರವೃತ್ತಿಯನ್ನು ಚಂಪಾ ಅವರಲ್ಲಿ ಕಾಣುತ್ತೇವೆ. ಅವರ ಸಾಹಿತ್ಯ ಕೃಷಿಯೂ ಅಪಾರವಾಗಿದೆ ಮತ್ತು ನಾಡು ನುಡಿ ಹಾಗೂ ಸಂಸ್ಕೃತಿಯನ್ನು ಕಟ್ಟುವಲ್ಲಿ ಅವರ ಸಾಹಿತ್ಯ ಸಹಕರಿಸಿದೆ. ಅನೇಕ ಯುವ ಚಿಂತಕರು ಹಾಗೂ ಬರಹಗಾರರನ್ನು ಅವರು ಆಗಿಂದಲೂ ಸಾಹಿತ್ಯಕ್ಕೇ ಮೀಸಲಿಟ್ಟು ನಡೆಸಿಕೊಂಡು ಬರುತ್ತಿರುವ ‘ಸಂಕ್ರಮಣ’ದ ಮೂಲಕ ಪ್ರೋತ್ಸಾಹಿಸಿ ಬೆಳೆಸಿದ್ದಾರೆ. ಅದರ ಮೂಲಕವೂ ಕನ್ನಡ ಸಾಹಿತ್ಯವನ್ನು ಕಟ್ಟಿ ಬೆಳೆಸಿದ್ದಾರೆ.
ಈ ಎಲ್ಲಾ ಸಾಧನೆಗಳನ್ನು ಗುರುತಿಸಿಯೇ ಅವರನ್ನು ನ್ಯಾಯಯುತವಾಗಿ ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಗೌರವವೆಂದೇ ಭಾವಿಸುವ ಕನ್ನಡದ ನುಡಿಜಾತ್ರೆ ಎಂದೇ ಪರಿಗಣಿಸುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ, ನಾಡಿನೆಲ್ಲಾ ಪ್ರಜ್ಞಾವಂತರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ಆರಿಸಿರುವುದು ಯೋಗ್ಯವಾಗಿಯೇ ಇದೆ. ಆದರೆ, ತಮ್ಮ ಸಾಹಿತ್ಯದಲ್ಲಿ ಪುರೋಹಿತಶಾಹಿ ವ್ಯವಸ್ಥೆಯನ್ನು ವಿರೋಧಮಾಡಿದ ಮಾತ್ರಕ್ಕೆ ಅವರಿಗೆ ಸರ್ವಾಧ್ಯಕ್ಷ ಸ್ಥಾನ ನೀಡಿದ್ದು ಸರಿಯಲ್ಲ ಎಂದು ವಿಪ್ರ ಸಂಘಟನೆಯ ಕೆಲವರು ಮೈಸೂರಿನಲ್ಲಿ ಪ್ರತಿಭಟಿಸಿದ್ದು ಉಚಿತವಲ್ಲ. ವಿಪ್ರ ಯುವಕರು ಈ ಪ್ರತಿಭಟನೆಯ ಮೂಲಕ ಸಮಾಜಕ್ಕೆ ನೀಡಿದ ಸಂದೇಶವೇನು? ಅಸಮಾನತೆಯನ್ನು ತಾವು ಎತ್ತಿ ಹಿಡಿಯುತ್ತೇವೆ. ಅದನ್ನು ವಿರೋಧಿಸುವವರನ್ನು ನಾವು ವಿರೋಧಿಸುತ್ತೇವೆ ಎಂಬುದಲ್ಲವೇ? ಪುರೋಹಿತಶಾಹಿ ಅಥವಾ ಬ್ರಾಹ್ಮಣತ್ವ ಎಂದರೆ ಅದು ಒಂದು ಜಾತಿಯ, ಧರ್ಮದ ಅಥವಾ ಒಂದು ವರ್ಗದ ಜನರ ಸಂಪ್ರದಾಯವನ್ನು ವಿರೋಧಿಸುವಂತಹದ್ದಲ್ಲ. ಮನುಷ್ಯ ಮನುಷ್ಯರ ನಡುವೆ ಭೇದಭಾವ, ಅಸಮಾನತೆ, ಶ್ರೇಷ್ಠ, ಕನಿಷ್ಠ ಅಥವಾ ಮೇಲುಕೀಳಿನ ಭಾವನೆಗಳನ್ನು ತೋರಿಸುವುದು, ಮಾನವ ಸಹಜ ಭ್ರಾತೃತ್ವವನ್ನು ನಿರಾಕರಿಸಿ ಇತರರನ್ನು ಜಾತಿ, ಧರ್ಮ, ಲಿಂಗ, ಬಣ್ಣ, ಭಾಷೆ, ಆಹಾರಕ್ರಮ, ಆಚಾರ ವಿಚಾರಗಳ ಆಧಾರದಲ್ಲಿ ತಾರತಮ್ಯ ಮತ್ತು ಅಸಮಾನತೆಯನ್ನು ಆಚರಿಸುವ ಪದ್ಧತಿಯೇ ಪುರೋಹಿತಶಾಹಿ. ಅದು ಸಂವಿಧಾನಭಾಹಿರ ನಡೆಯಾಗಿದೆ. ಅದು ದೇಶದ ಅಖಂಡತೆಗೆ ಮಾರಕವಾದುದಾಗಿದೆ. ಅದು ಜೀವವಿರೋಧಿ ಧೋರಣೆಯಾಗಿದೆ. ಅದನ್ನು ಯಾರೆಲ್ಲಾ ಆಚರಿಸುವರೋ ಅವರೆಲ್ಲರೂ ಪುರೋಹಿತಶಾಹಿಗಳೇ! ಚಂಪಾ ಅವರ ಈ ವಿರೋಧವನ್ನು ತಪ್ಪೆಂದು ವಿರೋಧಿಸುವ ಮೂಲಕ ವಿಪ್ರ ಸೋದರರು ತಮ್ಮನ್ನು ತಾವೇ ಪುರೋಹಿತಶಾಹಿಗಳೆಂದು ಸಾಬೀತುಪಡಿಸಿಕೊಂಡು ಸಮಾಜದೆದುರು ಬೆತ್ತಲಾದಂತಾಯಿತಲ್ಲವೇ?
ವಿಪ್ರ ಯುವಕರ ಈ ನಡೆಯನ್ನು ಪತ್ರಿಕೆಯೊಂದರ ಓದುಗರ ಪತ್ರಗಳ ವಿಭಾಗದಲ್ಲಿ ವಿಪ್ರ ಸಮಾಜದ ಹಿರಿಯ ಸಂಘಟಕರಾದ ಕೆ.ರಘುರಾಂ ಅವರು ಅತ್ಯಂತ ನಿಷ್ಠುರವಾಗಿ ಖಂಡಿಸಿರುವುದು ನಿಜಕ್ಕೂ ಪ್ರಶಂಸನೀಯ. ವಿಪ್ರರೆಂದಾಕ್ಷಣ ಎಲ್ಲರೂ ಸಮಾನತೆಯ ವಿರೋಧಿಗಳು ಎಂದು ಸಾರ್ವತ್ರಿಕವಾಗಿ ನಂಬುವವರ ನಂಬಿಕೆಯನ್ನು ರಘುರಾಂ ತಮ್ಮ ಪ್ರಜ್ಞಾವಂತಿಕೆಯಿಂದ ಸುಳ್ಳು ಮಾಡಿದ್ದಾರೆ. ಇಂತಹ ಅನುಭವಿಗಳಿಂದಲೇ ಸಮಾಜದಲ್ಲಿ ಬದಲಾವಣೆ ಎಂಬುದು ತ್ವರಿತ ಗತಿಯಲ್ಲಿ ನಡೆಯಲು ಸಾಧ್ಯ. ಅವರು, ‘‘ಕರ್ನಾಟಕದ ಜನಸಂಖ್ಯೆಯಲ್ಲಿ ಶೇ. 2ರಷ್ಟಿರುವ ಬ್ರಾಹ್ಮಣರು ಈ ವರೆಗೆ ನಡೆದಿರುವ 82 ಸಾಹಿತ್ಯ ಸಮ್ಮೇಳನಗಳಲ್ಲಿ 40 ಸಮ್ಮೇಳನಗಳ ಸರ್ವಾಧ್ಯಕ್ಷರಾಗಿ ಬ್ರಾಹ್ಮಣ ಸಾಹಿತಿಗಳು ಗೌರವಕ್ಕೆ ಪಾತ್ರರಾಗಿದ್ದಾರೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಈ ವರೆಗಿನ 25 ಅಧ್ಯಕ್ಷರ ಪೈಕಿ 13 ಜನ ಬ್ರಾಹ್ಮಣ ಸಮುದಾಯದವರೇ ಆಗಿದ್ದಾರೆ. ಇದು ಸಾಮಾಜಿಕ ನ್ಯಾಯವೇ’’ ಎಂಬಂತೆ ಮಾರ್ಮಿಕವಾಗಿ ಹೇಳಿರುವುದು ಆ ಮೂಲಕ ಇತರರು ಬ್ರಾಹ್ಮಣ ಸಾಹಿತಿಗಳಿಗೆ ನೀಡಿದ ಗೌರವವನ್ನು ಸ್ಮರಿಸಿದ್ದಾರೆ. ಅವರ ಈ ನಡೆಯನ್ನು ಉಳಿದ ಪ್ರಜ್ಞಾವಂತ ಯುವ ಸಮುದಾಯ ಮಾದರಿಯಾಗಿಸಿಕೊಳ್ಳಬೇಕು. ಕೆ. ರಘುರಾಂ ಅವರ ಭ್ರಾತೃತ್ವಕ್ಕೆ ಹೃದಯಪೂರ್ವಕ ನಮನಗಳು. ಅಂತಹ ಭ್ರಾತೃತ್ವ ಎಲ್ಲರಲ್ಲೂ ಬರಲಿ, ಸಮಾಜವು ಶಾಂತಿ ನೆಮ್ಮದಿಯ ತಾಣವಾಗಲಿ.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)