varthabharthi

ನಿಮ್ಮ ಅಂಕಣ

ವಿಫಲ ಆರ್ಥಿಕ ನೀತಿಗಳು: ಮೋದಿ ಸರಕಾರಕ್ಕೆ ಮುಳುವಾಗಲಿವೆಯೇ?

ವಾರ್ತಾ ಭಾರತಿ : 12 Oct, 2017
ಸುರೇಶ್ ಭಟ್, ಬಾಕ್ರಬೈಲ್

ಭಾಗ-1

2014ರ ಚುನಾವಣೆಗಳ ಕಾಲದಲ್ಲಿ ನಟನಾ ಚತುರ ಮೋದಿಯವರ ಕೆಚ್ಚೆದೆಗೆ, ದೃಢತೆಗೆ, ಭಾವನಾತ್ಮಕ ಮಾತುಗಳಿಗೆ ಮಾರುಹೋಗಿ ಆತನ ಕಣ್ಣೀರಿಗೆ ಕರಗಿದ್ದ ಜನವರ್ಗವೊಂದು ಬಿಜೆಪಿಯನ್ನು ಗೆಲ್ಲಿಸಿ ಅಧಿಕಾರದ ಗದ್ದುಗೆಯಲ್ಲಿ ಕೂರಿಸಿತು. ಆದರೆ ಅಂದು ಹೀಗೆ ಮೋದಿಯ ಮಂಕುಬೂದಿಗೆ ಬಲಿಯಾದ ಜನರಲ್ಲಿ ಹೆಚ್ಚಿನವರು ಇಂದು ಮೂರೂವರೆ ವರ್ಷಗಳ ಬಳಿಕ ನಿಧಾನಕ್ಕೆ ಆ ಭ್ರಮಾಲೋಕದಿಂದ ಹೊರಬರುತ್ತಿದ್ದಾರೆ. ಇವತ್ತು ಮೋದಿ ಸರಕಾರ ಅನುಸರಿಸುತ್ತಿರುವ ಅನರ್ಥಕಾರಿ ಆರ್ಥಿಕ ನೀತಿಗಳು ಜನಸಾಮಾನ್ಯರಲ್ಲಷ್ಟೇ ಅಲ್ಲ ನಗರದ ಸುಶಿಕ್ಷಿತ ಮಧ್ಯಮವರ್ಗಗಳ ಯುವಜನತೆ, ಸಣ್ಣಪುಟ್ಟ ವ್ಯಾಪಾರಿಗಳು, ಸಣ್ಣಪುಟ್ಟ ಉದ್ಯಮಿಗಳು ಮತ್ತಿತರ ವರ್ಗಗಳಲ್ಲೂ ಭ್ರಮನಿರಸನ ಉಂಟುಮಾಡಿವೆ.

ಇದು ಒಂದು ಕಡೆಯಾದರೆ ಯಶವಂತ ಸಿನ್ಹಾ, ಅರುಣ್ ಶೌರಿ, ಸುಬ್ರಮಣ್ಯನ್‌ಸ್ವಾಮಿಯಂತಹ ಸಂಘ ಪರಿವಾರದ ಮುಖಂಡರೇ ಇಂದು ಮೋದಿ ಸರಕಾರವನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಜೆಪಿಯ ಪ್ರಧಾನ ವೋಟ್ ಬ್ಯಾಂಕ್ ಎಂದೇ ಪರಿಗಣಿತವಾದ ಸಣ್ಣಪುಟ್ಟ ವ್ಯಾಪಾರಿಗಳು, ರೈತರು ಮುಂತಾದವರು ನೋಟು ರದ್ದತಿ ಮತ್ತು ಜಿಎಸ್‌ಟಿಗಳಿಂದಾಗಿ ಹೈರಾಣಾಗಿರುವುದು ಆರೆಸ್ಸೆಸ್‌ಗೂ ತಲೆನೋವು ತಂದಿದೆ. ಹೀಗಾಗಿ ಸರಸಂಘ ಚಾಲಕ ಮೋಹನ್ ಭಾಗವತ್ ಕೂಡ ತನ್ನ ವಾರ್ಷಿಕ ವಿಜಯ ದಶಮಿ ಭಾಷಣದಲ್ಲಿ ಮೋದಿ ಸರಕಾರದ ಆರ್ಥಿಕ ನೀತಿಗಳನ್ನು ಟೀಕಿಸಿದ್ದಾರೆ. ಬಿಜೆಪಿಯ ಕಾರ್ಮಿಕ ಸಂಘಟನೆಯೂ ತನ್ನ ಅಸಮಾಧಾನವನ್ನು ಬಹಿರಂಗವಾಗಿ ಹೇಳಿಕೊಂಡಿದೆ.

ಮೋದಿ ಸರಕಾರದ ಆರ್ಥಿಕ ನೀತಿಗಳು ಮತ್ತು ಅವುಗಳ ದುಷ್ಪರಿಣಾಮಗಳು

ನೋಟು ರದ್ದತಿ ಕ್ರಮದ ಆರಂಭದಲ್ಲಿ ತನಗೆ 50 ದಿನಗಳ ಕಾಲಾವಕಾಶ ಕೊಡಿ, ಇಲ್ಲವಾದರೆ ಶಿಕ್ಷೆ ವಿಧಿಸಿ ಎಂದಿದ್ದ ಮೋದಿಯ ಮಾತುಗಳನ್ನು ಜನ ನಂಬಿದರು. ಇಷ್ಟೊಂದು ವಿಶ್ವಾಸದಿಂದ ಮಾತಾಡುತ್ತಿರಬೇಕಾದರೆ ಅವರಲ್ಲಿ ಖಂಡಿತಾ ಸಾಮರ್ಥ್ಯವಿದೆ ಎಂದು ಭಾವಿಸಿ ನೋಟು ರದ್ದತಿಯನ್ನು ಬೆಂಬಲಿಸಿದರು. ಅದೇ ಜನ ಇಂದು ಮೋದಿ ತಮ್ಮನ್ನು ಮೂರ್ಖರನ್ನಾಗಿ ಮಾಡಿದರು ಎನ್ನುತ್ತಿದ್ದಾರೆ. ನೋಟು ರದ್ದತಿ ಕುರಿತಂತೆ ಮೋದಿಯ ಆರಂಭದ ಮಾತುಗಳು ಬಡವರಿಗೆ ಸಿಗಲಿರುವ ಲಾಭಗಳ ಕುರಿತಾಗಿದ್ದರೆ ಈಗ ಅವರು ಮಧ್ಯಮ ವರ್ಗಗಳ ಆತಂಕಗಳ ಮೇಲೆ ಕೇಂದ್ರೀಕರಿಸಿರುವುದನ್ನು ಕಾಣಬಹುದು. ಅದೇ ರೀತಿ ಜಿಎಸ್‌ಟಿ ಒಂದು ಒಳ್ಳೆಯ ಮತ್ತು ಸರಳ ವ್ಯವಸ್ಥೆ ಎಂದು ಅದನ್ನು ಜಾರಿಗೊಳಿಸಿದ ಸಂದರ್ಭದಲ್ಲಿ ಮೋದಿ ಬಿಗಿದಿದ್ದ ಭಾಷಣ ನಾಡಿನ ಎಲ್ಲಾ ಚಾನೆಲ್‌ಗಳಲ್ಲಿ ಪ್ರಸಾರವಾಗಿತ್ತು.

ಇಂದು ಅದನ್ನು ‘‘ಇನ್ನಷ್ಟು ಉತ್ತಮ ಮತ್ತು ಸರಳಗೊಳಿಸಲಾಗುವುದು’’, ‘‘ಹಂತಹಂತವಾಗಿ ಸರಳಗೊಳಿಸಲಾಗುವುದು’’ ಮುಂತಾದ ಮಾತುಗಳು ಕೇಳಿಬರುತ್ತಿವೆ. ಅಂದರೆ ಇದರರ್ಥ ಅದು ಉತ್ತಮವೂ ಸರಳವೂ ಆಗಿರಲಿಲ್ಲ ಎಂದಲ್ಲವೇ? ಜಿಎಸ್‌ಟಿಯಿಂದಾಗಿ ಹೆಚ್ಚು ಸಂಕಷ್ಟಕ್ಕೊಳಗಾಗುವವರು ಸಣ್ಣಪುಟ್ಟ ಉದ್ದಿಮೆಗಳು ಮತ್ತು ವ್ಯಾಪಾರಿಗಳು; ಆದುದರಿಂದ ಜಿಎಸ್‌ಟಿ ವ್ಯವಸ್ಥೆ ಕಾರ್ಪೊರೇಟ್ ಪರವಾಗಿದೆ, ದೊಡ್ಡ ಬಂಡವಾಳಶಾಹಿಗಳ ಪರವಾಗಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ನೋಟು ರದ್ದತಿಯ ದುಷ್ಪರಿಣಾಮಗಳು ಒಂದೆರಡಲ್ಲ, ಹಲವಾರಿವೆ. ಇವೆಲ್ಲವೂ ಒಂದೊಂದಾಗಿ ರಂಗಸ್ಥಳದ ಮೇಲೆ ಕಾಣಿಸಿಕೊಳ್ಳತೊಡಗಿವೆ. ಸಣ್ಣಪುಟ್ಟ ಉದ್ದಿಮೆಗಳು ನೆಲಕಚ್ಚಿದ ಪರಿಣಾಮವಾಗಿ ಲಕ್ಷಾಂತರ ನೌಕರಿಗಳು ನಾಶವಾಗಿರುವುದು ಇವುಗಳಲ್ಲೊಂದು. ಅದೇ ವೇಳೆ ನೋಟು ರದ್ದತಿಯ ಫಲವಾಗಿ ವಿದೇಶಗಳಲ್ಲಿ ಅನೇಕ ನೌಕರಿಗಳು ಸೃಷ್ಟಿಯಾಗಿರಬಹುದು. ಅದು ಹೇಗೆಂದು ಮುಂದೆ ನೋಡೋಣ. ಇಂದು ಎಲ್ಲರೂ ಜಿಡಿಪಿ (ಒಟ್ಟು ಆಂತರಿಕ ಉತ್ಪನ್ನ) ದರ ಕುಂಠಿತವಾಗಿರುವುದರ ಕುರಿತು ಮಾತನಾಡುತ್ತಿದ್ದಾರೆ.

ಹೀಗಾಗಿ ಮೊದಲು ಜಿಡಿಪಿ ಅಂದರೇನೆಂದು ತಿಳಿಯಬೇಕಾದ ಆವಶ್ಯಕತೆ ಇದೆ. ಜಿಡಿಪಿ = ಖಾಸಗಿ ಬಳಕೆದಾರರ ವೆಚ್ಚಗಳು + ಹೂಡಿಕೆ + ಸರಕಾರದಿಂದ ವೆಚ್ಚ + (ರಫ್ತು ಆಮದು)
ಮೇಲಿನ ಸಮೀಕರಣ ಸ್ಪಷ್ಟಪಡಿಸುವಂತೆ ಮೊದಲನೆಯ ನಾಲ್ಕು ಅಂಶಗಳಲ್ಲಿ ಹೆಚ್ಚಳ ಆದಾಗ ಜಿಡಿಪಿ ಏರುತ್ತದೆ. ಇನ್ನು ಆಮದಿನ ವಿಷಯಕ್ಕೆ ಬಂದರೆ ಆಮದು ಹೆಚ್ಚಾದಂತೆ ಜಿಡಿಪಿ ಕಡಿಮೆಯಾಗುತ್ತದೆ. ಆಮದುಗಳು ಅಂತಿಮವಾಗಿ ಗ್ರಾಹಕರ ಬೇಡಿಕೆಯ ಫಲವಾಗಿ ಆಗುತ್ತವೆ. ಜನಬಳಕೆಯ ವಸ್ತುಗಳ ಅಭಾವ ನಿರ್ಮಾಣವಾದಾಗ ಅವುಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ. ನಾವು ಆಮದು ಮಾಡಿಕೊಂಡಾಗ ನಮ್ಮ ಗ್ರಾಹಕ ಬೇಡಿಕೆ ಹೆಚ್ಚುತ್ತದೆ. ಆದರೆ ಜಿಡಿಪಿ ಕಡಿಮೆಯಾಗುತ್ತದೆ.

ಆಮದಿನಲ್ಲಿ ಭಾರೀ ಏರಿಕೆ 
ಆರ್ಥಿಕ ವ್ಯವಸ್ಥೆಯ ಔಪಚಾರಿಕ ಮತ್ತು ಅನೌಪಚಾರಿಕ ವಲಯಗಳೆರಡೂ ಪೂರೈಕೆ ವ್ಯವಸ್ಥೆಯನ್ನು ಹೊಂದಿಕೊಂಡಿವೆ. ಈಗ ನೋಟು ರದ್ದತಿಯ ಪರಿಣಾಮವಾಗಿ ಆಂತರಿಕ ಪೂರೈಕೆ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಪೂರೈಕೆ ವ್ಯವಸ್ಥೆ ಸರಿ ಇಲ್ಲದಾಗ ಉತ್ಪನ್ನಗಳ ಚಲನೆ ಸಾಧ್ಯವಾಗುವುದಿಲ್ಲ. ಆದರೆ ಗ್ರಾಹಕರ ಬೇಡಿಕೆಯನ್ನು ಪೂರೈಸಬೇಕು. ಹೇಗೆ? ಬೇಡಿಕೆಯನ್ನು ಪೂರೈಸಲು ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುವುದೊಂದೇ ದಾರಿ. ನಾವು ಆಮದು ಮಾಡಿಕೊಳ್ಳುವ ಸಾಮಗ್ರಿಗಳಲ್ಲಿ ಚಿನ್ನ, ಬೆಳ್ಳಿ, ತೈಲ ಮತ್ತು ಇತರ ವಸ್ತುಗಳು ಸೇರಿವೆ.

ಈ ಇತರ ವಸ್ತುಗಳು ಗ್ರಾಹಕ ಬೇಡಿಕೆಯನ್ನು ಸೂಚಿಸುತ್ತದೆ. 2016ರ ಎಪ್ರಿಲ್‌ಗೆ ಹೋಲಿಸಿದರೆ 2017ರ ಎಪ್ರಿಲ್‌ನಲ್ಲಿ ಇತರ ವಸ್ತುಗಳ ಆಮದಿನಲ್ಲಿ ಶೇಕಡಾ 42.5ರಷ್ಟು ಹೆಚ್ಚಳವಾಗಿದೆ. ಉಳಿದ ತಿಂಗಳುಗಳಲ್ಲಿಯೂ ಆಮದು ಕಳೆದ ವರ್ಷಕ್ಕಿಂತ ಹೆಚ್ಚೇ ಇದೆ. ಇದರರ್ಥ ಏನೆಂದರೆ 2016ರ ಅಕ್ಟೋಬರ್ ನಂತರದಲ್ಲಿ ಇತರ ವಸ್ತುಗಳ ಆಮದು ಭಾರೀ ಶೀಘ್ರ ಗತಿಯ ಏರಿಕೆಯನ್ನು ಕಂಡಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಆಮದು ಎಂದೂ ಇಷ್ಟೊಂದು ವೇಗವಾಗಿ ಬೆಳೆದಿರಲಿಲ್ಲ. ನೋಟು ರದ್ದತಿಯ ಪರಿಣಾಮವಾಗಿ ಪೂರೈಕೆಯ ವ್ಯವಸ್ಥೆಗಳು ನಾಶವಾದುದರಿಂದಲೇ ಇತರ ವಸ್ತುಗಳ ಆಮದಿನಲ್ಲಿ ಭಾರೀ ಹೆಚ್ಚಳವಾಗಿದೆ. ಪೂರೈಕೆಯ ವ್ಯವಸ್ಥೆಗಳು ನಾಶವಾದಾಗ ಸಾಮಗ್ರಿಗಳ ಚಲನೆಗೆ ಅಡ್ಡಿಯಾಗಿದೆ. ಸಾಮಗ್ರಿಗಳು ಚಲಿಸದೆ ಇದ್ದಾಗ ಇನ್ನಷ್ಟು ಸಾಮಗ್ರಿಗಳನ್ನು ಉತ್ಪಾದಿಸುವುದರಲ್ಲಿ ಅರ್ಥವಿರಲಿಲ್ಲ. ಹೀಗಾಗಿ ಉದ್ಯಮಗಳು ಮುಚ್ಚಿದವು. ಉದ್ಯಮಗಳು ಮುಚ್ಚಿದಾಗ ಬೃಹತ್ ಪ್ರಮಾಣದಲ್ಲಿ ಉದ್ಯೋಗಗಳು ನಾಶವಾದವು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)