varthabharthi

ಸಂಪಾದಕೀಯ

ಏಕಕಾಲಕ್ಕೆ ಚುನಾವಣೆ ಜನತಂತ್ರಕ್ಕೆ ಪೂರಕವಲ್ಲ

ವಾರ್ತಾ ಭಾರತಿ : 12 Oct, 2017

ಲೋಕಸಭೆ ಮತ್ತು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ವಿಧಾನಸಭೆಗಳಿಗೆ ಏಕ ಕಾಲದಲ್ಲಿ ಚುನಾವಣೆ ನಡೆಸುವ ಬಗ್ಗೆ ಈಗ ಮತ್ತೆ ಚರ್ಚೆ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಇಂತಹ ಚರ್ಚೆಗೆ ಚಾಲನೆ ನೀಡಿದ್ದಾರೆ. ಲೋಕಸಭೆ ಮತ್ತು ಎಲ್ಲ ರಾಜ್ಯಗಳ ವಿಧಾನಸಭೆಗಳಿಗೆ ಏಕ ಕಾಲದಲ್ಲಿ ಚುನಾವಣೆ ನಡೆಸುವುದರಿಂದ ಉಂಟಾಗುವ ಪರಿಣಾಮದ ಬಗ್ಗೆ ವಿವರಗಳನ್ನು ನೀಡುವಂತೆ ಚುನಾವಣಾ ಆಯೋಗಕ್ಕೆ ಅವರು ಕೇಳಿಕೊಂಡಿದ್ದಾರೆ. ಏಕ ಕಾಲದಲ್ಲಿ ಚುನಾವಣೆ ನಡೆಸುವುದಕ್ಕೆ ಯಾವ ಯಾವ ಸಿದ್ಧತೆಯನ್ನು ಮಾಡಿಕೊಳ್ಳಬೇಕು? ಅದಕ್ಕೆ ಏನೇನು ಸವಲತ್ತುಗಳು ಬೇಕು? ಭದ್ರತಾ ವ್ಯವಸ್ಥೆ ಹೇಗಿರಬೇಕು? ಎಂಬೆಲ್ಲ ವಿವರ ನೀಡುವಂತೆ ಪ್ರಧಾನಿ ಆಯೋಗಕ್ಕೆ ಕೋರಿದ್ದಾರೆ.

ಪ್ರಧಾನಿ ಅವರ ಈ ಕೋರಿಕೆಗೆ ಉತ್ತರಿಸಿದ ಮುಖ್ಯ ಚುನಾವಣಾ ಆಯುಕ್ತ ಒ.ಪಿ. ರಾವತ್, ಈ ವರ್ಷದಲ್ಲಿ ಯಾವಾಗ ಬೇಕಾದರೂ ಲೋಕಸಭೆ ಹಾಗೂ ಎಲ್ಲ ರಾಜ್ಯಗಳು ಮತ್ತು ಎಲ್ಲ ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಗಳಿಗೆ ಏಕ ಕಾಲದಲ್ಲಿ ಚುನಾವಣೆ ನಡೆಸಲು ಚುನಾವಣಾ ಆಯೋಗ ಸಿದ್ಧವಿದೆ ಎಂದು ತಿಳಿಸಿದ್ದಾರೆ. ಇದಕ್ಕಾಗಿ ಚುನಾವಣಾ ಆಯೋಗ ನೂತನ ವಿದ್ಯುನ್ಮಾನ ಯಂತ್ರಗಳನ್ನು ಖರೀದಿಸಬೇಕಾಗುತ್ತದೆ. ಕೇಂದ್ರ ಸರಕಾರ ಅದಕ್ಕಾಗಿ 15,400 ಕೋಟಿ ರೂ. ನಿಗದಿ ಮಾಡಿದೆ. ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಿಗೆ ಏಕ ಕಾಲದಲ್ಲಿ ಚುನಾವಣೆ ನಡೆಸಬೇಕೆಂದರೆ ಇದಿಷ್ಟೇ ಸಾಕಾಗುವುದಿಲ್ಲ. ಏಕ ಕಾಲದಲ್ಲಿ ಚುನಾವಣೆ ನಡೆಸುವ ಸಾಧಕ ಬಾಧಕಗಳ ಬಗ್ಗೆ ರಾಷ್ಟ್ರಮಟ್ಟದಲ್ಲಿ ವ್ಯಾಪಕ ಚರ್ಚೆ ನಡೆಯಬೇಕಾಗುತ್ತದೆ. ಎಲ್ಲಾ ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ.

ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಸಮಾಲೋಚನೆ ನಡೆಸಬೇಕಾಗುತ್ತದೆ. ಇದು ಕೇವಲ ಮತಯಂತ್ರಗಳನ್ನು ತಂದು ಮತಗಟ್ಟೆಗಳಿಗೆ ರವಾನಿಸಲು ಸೀಮಿತವಾದ ವಿಷಯವಲ್ಲ. ಚುನಾವಣೆಯ ಸಂದರ್ಭದಲ್ಲಿ ಇಡೀ ದೇಶವ್ಯಾಪಿಯಾಗಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಅಪಾರ ಪ್ರಮಾಣದ ಭದ್ರತಾಪಡೆಗಳ ಅಗತ್ಯವಿದೆ. ಉತ್ತರಪ್ರದೇಶದಂತಹ ದೊಡ್ಡ ರಾಜ್ಯಗಳಲ್ಲಿ ಐದಾರು ಹಂತಗಳಲ್ಲಿ ಚುನಾವಣೆ ನಡೆಸಬೇಕಾಗುತ್ತದೆ. 60ರ ದಶಕದ ವರೆಗೂ ದೇಶದಲ್ಲಿ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಯುತ್ತಿತ್ತು. ಕೇಂದ್ರದಲ್ಲಿ ಮತ್ತು ರಾಜ್ಯಗಳಲ್ಲಿ ಬಹುತೇಕ ಕಾಂಗ್ರೆಸ್ ಪಕ್ಷವೇ ಗೆದ್ದು ಬರುತ್ತಿತ್ತು. ಹೀಗಾಗಿ ಅಸ್ಥಿರತೆ ಪ್ರಶ್ನೆ ಉದ್ಭವಿಸುತ್ತಿರಲಿಲ್ಲ. ಆದರೆ, 1967ರ ಸಾರ್ವತ್ರಿಕ ಚುನಾವಣೆಯ ನಂತರ ಕಾಂಗ್ರೆಸ್ಸೇತರ ಏಕಸ್ವಾಮ್ಯಕ್ಕೆ ಪೆಟ್ಟುಬಿತ್ತು.

ಕೆಲ ರಾಜ್ಯಗಳಲ್ಲಿ ಕಾಂಗ್ರೆಸೇತರ ಸಂಯುಕ್ತ ರಂಗ ಸರಕಾರಗಳು ಅಸ್ತಿತ್ವಕ್ಕೆ ಬಂದವು. ವಿಭಿನ್ನ ವಿಚಾರಧಾರೆಗಳನ್ನು ಹೊಂದಿದ ಈ ಪಕ್ಷಗಳು ಸ್ಥಿರವಾದ ಆಡಳಿತವನ್ನು ನೀಡುವಲ್ಲಿ ಯಶಸ್ವಿಯಾಗಲಿಲ್ಲ. ಕಾಂಗ್ರೆಸ್ ವಿರೋಧ ಎಂಬುದನ್ನು ಬಿಟ್ಟರೆ ಈ ಪ್ರತಿಪಕ್ಷಗಳಿಗೆ ನಿರ್ದಿಷ್ಟವಾದ ಆರ್ಥಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳು ಇರಲಿಲ್ಲ. ಬಲಪಂಥೀಯ ಭಾರತೀಯ ಜನಸಂಘ ಮತ್ತು ಎಡಪಂಥೀಯ ಸಮಾಜವಾದಿ ಪಕ್ಷಗಳು ಜೊತೆ ಸೇರಿ ಸರಕಾರ ರಚಿಸಿದರೂ ಸರಕಾರವನ್ನು ನಡೆಸಿಕೊಂಡು ಹೋಗಲು ನಿರ್ದಿಷ್ಟ ಕಾರ್ಯಕ್ರಮವನ್ನು ರೂಪಿಸಿರಲಿಲ್ಲ. ಹೀಗಾಗಿ ಕೆಲ ರಾಜ್ಯಗಳಲ್ಲಿ ಪ್ರತ್ಯೇಕ ಅಸ್ಥಿರತೆ ಉಂಟಾಗಿ ಮಧ್ಯಕಾಲೀನ ಚುನಾವಣೆ ನಡೆಸಬೇಕಾಗಿ ಬಂತು. 60ರ ದಶಕದ ಮುಂಚಿನ ನೆಹರೂ ಕಾಲದ ರಾಜಕಾರಣದ ಸ್ವರೂಪವೇ ಬೇರೆ, ಈಗಿನ ಚಿತ್ರಣವೇ ಬೇರೆ ಇದೆ.

ದೇಶದಲ್ಲಿ ಸಂವಿಧಾನ ಅಸ್ತಿತ್ವಕ್ಕೆ ಬಂದ ಬಳಿಕ 1952ರಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ನಡೆಯಿತು. ಆಗ ಲೋಕಸಭೆ ಹಾಗೂ ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಯಿತು. ಆ ನಂತರ 60ರ ದಶಕದ ವರೆಗೆ ಇದೇ ಸ್ಥಿತಿ ಮುಂದುವರಿಯಿತು. ಆದರೆ, ಕಳೆದ ಮೂರು ದಶಕಗಳಿಂದ ದೇಶದ ರಾಜಕೀಯ ರಂಗ ನಾನಾ ಸ್ಥಿತ್ಯಂತರಗಳನ್ನು ಕಂಡಿದೆ. ನಾನಾ ಪಲ್ಲಟಗಳನ್ನು ಉಂಟುಮಾಡಿವೆ. ರಾಜಕಾರಣದಲ್ಲಿ ಈ ಹಿಂದೆ ಕಾಣದಿದ್ದ ಪಕ್ಷಾಂತರದ ಪಿಡುಗು 70ರ ದಶಕದ ನಂತರ ವ್ಯಾಪಕವಾಯಿತು. ಆಯಾರಾಮ್, ಗಯಾರಾಮ್ ಕಾಲದಲ್ಲಿ ಚುನಾಯಿತ ಸರಕಾರಗಳು ಉರುಳುವುದು, ಉರುಳಿಸುವುದು ಸಾಮಾನ್ಯ ಸಂಗತಿಯಾಯಿತು. ಹೀಗಾಗಿ ಅನೇಕ ಕಡೆ ಮಧ್ಯಂತರ ಚುನಾವಣೆ ನಡೆಸುವುದು ಅನಿವಾರ್ಯವಾಯಿತು. ಪ್ರತಿಪಕ್ಷಗಳ ಸರಕಾರವಿರುವ ರಾಜ್ಯಗಳಲ್ಲಿ ಕೇಂದ್ರವೇ ಚುನಾಯಿತ ಸರಕಾರಗಳನ್ನು ಬೀಳಿಸಿ ತನ್ನ ಪಕ್ಷದ ಸರಕಾರ ಹೇರುವ ಕೆಟ್ಟ ಪರಂಪರೆ ಆರಂಭಿಸಿತು.

1957ರಷ್ಟು ಹಿಂದೆಯೇ ಕೇರಳದಲ್ಲಿ ಜಗತ್ತಿನ ಪ್ರಥಮ ಕಮ್ಯುನಿಸ್ಟ್ ಚುನಾಯಿತ ಸರಕಾರ ಇ.ಎಂ.ಎಸ್. ನಂಬೂದರಿಪ್ಪಾಡ್ ಅವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂತು. ಆಗ ಅದು ದೇಶದ ಏಕ ಮಾತ್ರ ಕಾಂಗ್ರೆಸೇತರ ಸರಕಾರವಾಗಿತ್ತು. ಆ ಸರಕಾರ ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸಿತ್ತು. ಸಾವಿರಾರು ಎಕರೆ ಭೂಮಿಯನ್ನು ಭೂ ರಹಿತರಿಗೆ ಹಂಚಿಕೆ ಮಾಡಲಾಯಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಖಾಸಗಿ ರಂಗದ ನಿಯಂತ್ರಣ ಸಡಿಲುಗೊಳಿಸಲು ಯತ್ನಿಸಿತು. ಇದು ಕೇಂದ್ರದಲ್ಲಿನ ಕಾಂಗ್ರೆಸ್ ಸರಕಾರಕ್ಕೆ ಸಹಿಸುವುದಕ್ಕೆ ಆಗಲಿಲ್ಲ. ಅಂದಿನ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷೆ ಇಂದಿರಾ ಗಾಂಧಿ ಕೇರಳದಲ್ಲಿ ಅಸಹಕಾರ ಚಳವಳಿಗೆ ಪ್ರಚೋದನೆ ನೀಡಿದರು. ಮಗಳ ಒತ್ತಡಕ್ಕೆ ಮಣಿದ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಜನರಿಂದ ಚುನಾಯಿತವಾದ ನಂಬೂದರಿಪ್ಪಾಡ್ ಸರಕಾರವನ್ನು ಕಾನೂನು ಸುವ್ಯವಸ್ಥೆ ನೆಪ ಮಾಡಿ ವಜಾಗೊಳಿಸಿದರು.

ಆನಂತರ ದೇಶದಲ್ಲಿ ಅಸ್ಥಿರ ರಾಜಕಾರಣದ ಶಕೆ ಆರಂಭವಾಯಿತು. ರಾಜ್ಯಗಳಲ್ಲಿ ಚುನಾಯಿತ ಸರಕಾರಗಳನ್ನು ಅವಧಿಗೆ ಮುನ್ನವೇ ಉರುಳಿಸುವ ಪಕ್ಷಾಂತರ ಚಟುವಟಿಕೆಗಳು ವ್ಯಾಪಕವಾಗಿ ಹಬ್ಬಿದವು. ಬಳಿಕ ಲೋಕಸಭೆ ಮತ್ತು ರಾಜ್ಯಗಳಿಗೆ ಏಕಕಾಲದಲ್ಲಿ ಚುನಾವಣೆ ಎಂಬ ಸಂಪ್ರದಾಯ ಕೊನೆಗೊಂಡಿತು. ಅನೇಕ ರಾಜ್ಯಗಳಿಗೆ ಅವುಗಳ ಅವಧಿ ಮುಗಿಯುವ ಮೊದಲೇ ಮಧ್ಯಂತರ ಚುನಾವಣೆ ನಡೆಸುವುದು ಅನಿವಾರ್ಯವಾಯಿತು. ಈಗ ಲೋಕಸಭೆಗೆ 2019ಕ್ಕೆ ಚುನಾವಣೆ ನಡೆಯಬೇಕಾಗಿದೆ. ಕರ್ನಾಟಕದ ವಿಧಾನಸಭೆಗೆ 2018ಕ್ಕೆ ಚುನಾವಣೆ ನಡೆಯಬೇಕಾಗಿದೆ. ಇದರೊಂದಿಗೆ ಇನ್ನೂ ಏಳು ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಯಲಿವೆ. 2019ರಲ್ಲಿ ಮಧ್ಯಪ್ರದೇಶ, ರಾಜಸ್ಥಾನ ಸೇರಿದಂತೆ ಹತ್ತು ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಯಬೇಕಾಗಿದೆ.

ಯಾವುದೇ ರಾಜ್ಯದಲ್ಲಿ ಅಲ್ಲಿನ ವಿಧಾನಸಭೆಗೆ ಪೂರ್ಣಾವಧಿಗಿಂತ ಮೊದಲೇ ಚುನಾವಣೆ ನಡೆಸಲು ಕಾನೂನುಪ್ರಕಾರ ಸಾಧ್ಯವಿಲ್ಲ. ವಿಧಾನಸಭೆಯ ಅವಧಿಯನ್ನು ಐದು ವರ್ಷಕ್ಕಿಂತ ಹೆಚ್ಚು ವಿಸ್ತರಿಸಲು ಸದ್ಯದ ಕಾನೂನಿನಲ್ಲಿ ಅವಕಾಶವಿಲ್ಲ. ಆಯಾ ರಾಜ್ಯಗಳ ವಿಧಾನಸಭೆಗಳ ಅವಧಿ ಮುಗಿದ ಬಳಿಕ ಚುನಾವಣೆ ನಡೆಸಬೇಕಾಗುತ್ತದೆ. ಈ ವರ್ಷ ಹಾಗೂ ಕಳೆದ ವರ್ಷ ಚುನಾವಣೆ ನಡೆದ ರಾಜ್ಯಗಳಲ್ಲಿ ಎರಡು ವರ್ಷ ಇಲ್ಲವೇ ಮೂರು ವರ್ಷಕ್ಕೆ ಮತ್ತೆ ಚುನಾವಣೆ ನಡೆಸುವುದು ನ್ಯಾಯಸಮ್ಮತವೆನಿಸುವುದಿಲ್ಲ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅಲ್ಲಿನ ಸರಕಾರಗಳು ಏಕಕಾಲದಲ್ಲಿ ಚುನಾವಣೆ ನಡೆಸಲು ಒಪ್ಪಿಕೊಂಡರೂ ಪ್ರತಿಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳು ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ.

ಲೋಕಸಭೆ ಹಾಗೂ ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಕೇಂದ್ರ ಸರಕಾರ ನೀಡುತ್ತಿರುವ ಕಾರಣ ಸಮಯ, ಶ್ರಮ ಹಾಗೂ ಹಣದ ಉಳಿತಾಯವಾಗಿದೆ. ಮೇಲಿಂದ ಮೇಲೆ ಚುನಾವಣೆ ನಡೆದು ನೀತಿ ಸಂಹಿತೆ ಜಾರಿಯಾದರೆ ಅಭಿವೃದ್ಧಿ ಕಾರ್ಯಗಳಿಗೆ ಅಡಚಣೆ ಉಂಟಾಗುತ್ತದೆ ಎಂಬ ವಾದವಿದೆ. ಆದರೆ, ಇದಷ್ಟೇ ಕಾರಣವಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಕಾಂಗ್ರೆಸ್ ಮುಕ್ತ ಮಾತ್ರವಲ್ಲ, ಪ್ರತಿಪಕ್ಷ ಮುಕ್ತ ಭಾರತ ನಿರ್ಮಿಸುವುದು ಬೇಕಾಗಿದೆ. ಏಕಕಾಲದಲ್ಲಿ ಚುನಾವಣೆ ನಡೆಸುವ ಹೆಸರಿನಲ್ಲಿ ದೇಶದ ಮೇಲೆ ಏಕ ಪಕ್ಷ ಆಡಳಿತ ನಡೆಸುವ ಮಸಲತ್ತನ್ನು ಅವರು ನಡೆಸಿದ್ದಾರೆ.

ಅಷ್ಟೇ ಅಲ್ಲದೆ, ಅಮೆರಿಕದಂತೆ ಅಧ್ಯಕ್ಷ ಮಾದರಿಯ ಸರಕಾರವನ್ನು ದೇಶದ ಮೇಲೆ ಹೇರುವ ರಹಸ್ಯ ಕಾರ್ಯಸೂಚಿಯನ್ನು ಅವರು ಹೊಂದಿದಂತೆ ಕಾಣುತ್ತದೆ. ಆದರೆ, ಪ್ರಜಾಪ್ರಭುತ್ವದಲ್ಲಿ ಫಲಿತಾಂಶ ಹೀಗೆಯೇ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವೊಮ್ಮೆ ತ್ರಿಶಂಕು ಪರಿಸ್ಥಿತಿ ಉಂಟಾಗಬಹುದು. ಯಾರಿಗೂ ಸರಕಾರ ರಚಿಸಲು ಸಾಧ್ಯವಾಗದಂತಹ ಸನ್ನಿವೇಶ ನಿರ್ಮಾಣವಾಗಬಹುದು. ಅಂತಹ ಸನ್ನಿವೇಶ ನಿರ್ಮಾಣವಾದರೆ ಮತ್ತೆ ಐದು ವರ್ಷಗಳ ಕಾಲ ಸಾರ್ವತ್ರಿಕ ಚುನಾವಣೆಗಾಗಿ ಕಾಯಬೇಕಾಗುತ್ತದೆ. ಆದ್ದರಿಂದ ಏಕ ಕಾಲಕ್ಕೆ ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಮೂಲತತ್ವಕ್ಕೆ ಹೊಂದಿಕೆಯಾಗದ ಅಂಶವಾಗಿದೆ. ಇಂತಹ ದುಸ್ಸಾಹಸಕ್ಕೆ ಕೇಂದ್ರ ಸರಕಾರ ಕೈ ಹಾಕಬಾರದು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)