varthabharthi

ಕರ್ನಾಟಕ

ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನದಿಂದ ಸದಾನಂದ ಗೌಡಗೆ ಕೊಕ್

ಬಿಜೆಪಿಯಲ್ಲಿ ಮತ್ತೆ ಭುಗಿಲೆದ್ದ ಭಿನ್ನಮತ

ವಾರ್ತಾ ಭಾರತಿ : 12 Oct, 2017

 ಬೆಂಗಳೂರು, ಅ.12: ಬಿಜೆಪಿಯ ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನದಿಂದ ಕೇಂದ್ರ ಸಚಿವ ಡಿವಿ ಸದಾನಂದ ಗೌಡರನ್ನು ಕೆಳಗಿಳಿಸಲಾಗಿದ್ದು, ಪಕ್ಷದಲ್ಲಿ ಮತ್ತೊಮ್ಮೆ ಭಿನ್ನಮತ ತಲೆ ಎತ್ತಿದೆ.

ಬಿಜೆಪಿಯ ಸಂಸದೆ ಹಾಗೂ ಪ್ರಧಾನಕಾರ್ಯದರ್ಶಿ ಶೋಭಾ ಕರಂದ್ಲಾಜೆಯ ಒತ್ತಾಯದ ಮೇರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಸದಾನಂದ ಗೌಡರನ್ನು ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನದಿಂದ ಬದಲಿಸಿದ್ದು, ಪಕ್ಷದ ಎಲ್ಲ ಸಮಿತಿಯ ಅಧ್ಯಕ್ಷ ಸ್ಥಾನವನ್ನು ತನ್ನಲ್ಲೇ ಉಳಿಸಿಕೊಂಡಿದ್ದಾರೆ.

2 ವಾರಗಳ ಹಿಂದೆಯಷ್ಟೇ ಬಿಜೆಪಿ ಪ್ರಚಾರ ಸಮಿತಿ ಪಟ್ಟಿ ಬಿಡುಗಡೆಯಾಗಿತ್ತು. ಸಾಂಪ್ರದಾಯಿಕ ಪ್ರಚಾರ ಸಮಿತಿ ಹಾಗೂ ಆಧುನಿಕ ತಂತ್ರಜ್ಞಾನ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಡಿವಿಎಸ್ ಹಾಗು ಸಂಸದ ಪ್ರಹ್ಲಾದ್ ಜೋಶಿ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಈ ಪಟ್ಟಿಯನ್ನು ಯಡಿಯೂರಪ್ಪರ ಗಮನಕ್ಕೆ ತಾರದೇ ಅಂತಿಮಗೊಳಿಸಲಾಗಿತ್ತು.

ಕೇಂದ್ರ ಸಚಿವರಾಗಿರುವ ಸದಾನಂದ ಗೌಡರಿಗೆ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನ ನೀಡಬಾರದು. ಒಬ್ಬರಿಗೆ ಎರಡು ಹುದ್ದೆ ನೀಡುವುದು ಸರಿಯಲ್ಲ ಎಂದು ಶೋಭಾ ಪಟ್ಟು ಹಿಡಿದಿದ್ದರು. ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ಮೇಲೆ ಒತ್ತಡ ಹಾಕಿದ್ದರು ಎನ್ನಲಾಗಿದೆ.

 ಇದೀಗ ದಿಢೀರನೆ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನದಿಂದ ತನ್ನನ್ನು ಕೆಳಗಿಳಿಸಿರುವ ಬಗ್ಗೆ ಡಿವಿಎಸ್ ಅತೃಪ್ತಿಗೊಂಡಿದ್ದು, ರಾಜ್ಯ ಬಿಜೆಪಿಯಲ್ಲಿ ಮತ್ತೊಮ್ಮೆ ಕಲಹ ಭುಗಿಲೆದ್ದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)