varthabharthi

ರಾಷ್ಟ್ರೀಯ

ವಾಹನ ಪಾರ್ಕಿಂಗ್ ವಿವಾದ: ವಿಎಚ್‌ಪಿ ಮುಖಂಡನಿಗೆ ಹಲ್ಲೆ

ವಾರ್ತಾ ಭಾರತಿ : 12 Oct, 2017

ಲಕ್ನೊ, ಅ.12: ವಾಹನ ಪಾರ್ಕ್ ಮಾಡುವ ವಿಷಯಕ್ಕೆ ಸಂಬಂಧಿಸಿ ಉಂಟಾದ ಮಾತಿನ ಚಕಮಕಿಯ ಬಳಿಕ ವಿಶ್ವಹಿಂದೂ ಪರಿಷದ್ ಮುಖಂಡನಿಗೆ ಹಲ್ಲೆ ನಡೆಸಿದ ಘಟನೆ ಫುಲಟ್ಟಿ ಮಾರ್ಕೆಟ್ ಬಳಿ ನಡೆದಿದೆ. ಘಟನೆಗೆ ಪ್ರತೀಕಾರವಾಗಿ ವಿಎಚ್‌ಪಿ ಕಾರ್ಯಕರ್ತರು ಅಂಗಡಿಯನ್ನು ದ್ವಂಸಗೊಳಿಸಿದ ಕಾರಣ ಪ್ರದೇಶದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು.

 ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ಫುಲಟ್ಟಿ ಮಾರ್ಕೆಟ್ ಬಳಿ ಇರುವ ಮದುವೆ ಬ್ಯಾಂಡ್‌ವಾಲಗ ಬಾಡಿಗೆ ನೀಡುವ ಅಂಗಡಿಯೆದುರು ವಿಶ್ವಹಿಂದೂ ಪರಿಷದ್‌ನ ಸಂಘಟನಾ ಕಾರ್ಯದರ್ಶಿ ಮನೋಜ್ ಕುಮಾರ್ ತನ್ನ ಕಾರನ್ನು ನಿಲ್ಲಿಸಿದಾಗ ಅಂಗಡಿಯವರು ಆಕ್ಷೇಪಿಸಿದರು ಎನ್ನಲಾಗಿದೆ. ಈ ಸಂದರ್ಭ ಇಬ್ಬರ ಮಧ್ಯೆ ವಾಗ್ಯುದ್ದ ನಡೆದಿದ್ದು ಅಂಗಡಿ ಮಾಲಕ ಹಾಗೂ ಕೆಲಸಗಾರರು ತನ್ನನ್ನು ಹಾಗೂ ತನ್ನ ವಾಹನ ಚಾಲಕನನ್ನು ಥಳಿಸಿದ್ದಾರೆ ಎಂದು ಮನೋಜ್ ಕುಮಾರ್ ದೂರಿದ್ದಾರೆ.

   ಹಲ್ಲೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸಮೀಪದ ಪ್ರದೇಶದಿಂದ ಧಾವಿಸಿ ಬಂದ ವಿಎಚ್‌ಪಿ ಕಾರ್ಯಕರ್ತರು ಅಂಗಡಿಗೆ ನುಗ್ಗಿ ಅಂಗಡಿಯನ್ನು ಧ್ವಂಸಗೊಳಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಅಲ್ಲಿ ಗುಂಡು ಹಾರಾಟದ ಸದ್ದೂ ಕೇಳಿ ಬಂದ ಕಾರಣ ಭೀತರಾದ ವ್ಯಾಪಾರಸ್ತರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಸುರಕ್ಷಿತ ಸ್ಥಳಕ್ಕೆ ಧಾವಿಸಿದರು . ಬ್ಯಾಂಡ್ ವಾಲಗ ಅಂಗಡಿಯ ಮಾಲಕ ಗುಂಡು ಹಾರಿಸಿದ್ದಾನೆ ಎಂದು ಹೇಳಲಾಗಿದೆ.ಸ್ಥಳಕ್ಕೆ ತಕ್ಷಣ ಹೆಚ್ಚುವರಿ ಪೊಲೀಸರನ್ನು ರವಾನಿಸಿ ಪರಿಸ್ಥಿತಿ ನಿಯಂತ್ರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಚ್‌ಪಿಯ ಕಾರ್ಯಕರ್ತ ರಮಣ್ ಸಿಂಗ್ ಎಂಬಾತ ನೀಡಿದ ದೂರಿನ ಮೇರೆಗೆ ಅಂಗಡಿಯ ಮಾಲಕ ಸುಧೀರ್ ಕುಮಾರ್, ಆತನ ಪುತ್ರ ರಿಕ್ಕಿ ಹಾಗೂ ಕೆಲಸಗಾರರಾದ ಸನ್ನಿ ಮತ್ತು ಬಿಟ್ಟನ್ ಎಂಬವರ ಹೆಸರನ್ನು ಎಫ್‌ಐಆರ್‌ನಲ್ಲಿ ನಮೂದಿಸಲಾಗಿದೆ. ಅಲ್ಲದೆ ವಿಎಚ್‌ಪಿ ಕಾರ್ಯಕರ್ತರ ವಿರುದ್ಧವೂ ತನಿಖೆ ನಡೆಸಲಾಗುವುದು ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಪ್ರಭಾರ ಅಧಿಕಾರಿ ಪಿ.ಎನ್.ಶರ್ಮ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)