varthabharthi

ಕರ್ನಾಟಕ

ಗೌರಿ ಲಂಕೇಶ್ ಹತ್ಯೆ ಪ್ರಕರಣ

ಆರೋಪಿಗಳ ಪತ್ತೆಗೆ ಗಡುವು ನೀಡಲು ಸಾಧ್ಯವಿಲ್ಲ: ಸಚಿವ ರಾಮಲಿಂಗರೆಡ್ಡಿ

ವಾರ್ತಾ ಭಾರತಿ : 12 Oct, 2017

ಮೈಸೂರು, ಅ.12: ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಆದರೆ ಮಾಹಿತಿ ಬಹಿರಂಗ ಕಷ್ಟ. ಎಸ್ ಐಟಿಗೆ ನೂರಕ್ಕೂ ಹೆಚ್ಚು ಅಧಿಕಾರಿಗಳನ್ನು ಕೊಟ್ಟಿದ್ದೇವೆ. ಆರೋಪಿಗಳನ್ನು ಬಂಧಿಸುವ ವಿಶ್ವಾಸವಿದೆ. ಇಂತಹ ಪ್ರಕರಣಗಳಲ್ಲಿ ಗಡುವು ನೀಡಲು ಸಾಧ್ಯವಿಲ್ಲ ಎಂದು ಗೃಹ ಸಚಿವ ರಾಮಲಿಂಗರೆಡ್ಡಿ ತಿಳಿಸಿದ್ದಾರೆ.

ಗುರುವಾರ ಎಸ್ಪಿ ಕಚೇರಿಯಲ್ಲಿ ದಕ್ಷಿಣ ವಲಯದ ಪೊಲೀಸ್ ಅಧಿಕಾರಿಗಳ ಕಾರ್ಯ ಪರಿಶೀಲನಾ ಸಭೆ ನಡೆಸಿ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯಲ್ಲಿ ಸುಳಿವು ದೊರೆತಿದ್ದು, ಎಸ್‍ಐಟಿ ತನಿಖೆ ಪ್ರಗತಿಯಲ್ಲಿದೆ. ಇಂತಹ ಪ್ರಕರಣದ ತನಿಖೆಗೆ ಕಾಲಾಮಿತಿ ವಿಧಿಸುವುದು ಅಸಾಧ್ಯ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಉತ್ತಮವಾಗಿದೆ. ಶಾಲಾ ಕಾಲೇಜುಗಳ ಬಳಿ ಬೀದಿ ಕಾಮಣ್ಣರು, ಪುಂಡ ಪೋಕರಿಗಳ ಹಾವಳಿ ತಡೆಗೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಅಲ್ಲದೆ, ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕಬೇಕು. ರಾತ್ರಿ ವೇಳೆ ಪೊಲೀಸರ ಗಸ್ತು ಪರಿಣಾಮಕಾರಿಯಾಗಿ ಇರಬೇಕು. ಬಾರ್, ವೈನ್ಸ್ ಸ್ಟೋರ್ ಗಳ ಸಮಯ ಪಾಲನೆಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಪ್ರತೀ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸಭೆ ನಡೆಸಬೇಕು. ಜನರಿಗೆ ಹತ್ತಿರವಾಗಬೇಕು ಸಾರ್ವಜನಿಕರು ನೀಡಿದ ದೂರು ದಾಖಲಿಸಿ ಎಫ್ ಐಆರ್ ದಾಖಲೆಗೆ ತಡ ಮಾಡದಂತೆ ಸೂಚನೆ ನೀಡಿದ್ದೇನೆ ಎಂದರು.

ಗೃಹ ಇಲಾಖೆಯಲ್ಲಿ ಕೆಂಪಯ್ಯನವರ ಹಸ್ತಕ್ಷೇಪ ಎಂಬುದಿಲ್ಲ. ನಾನು ಬಂದ ಮೇಲೆ ಆ ರೀತಿ ಯಾವುದೂ ಆಗಿಲ್ಲ. ಅಗತ್ಯ ಬಿದ್ದಾಗ ನಾನು ಎಲ್ಲರಿಂದಲೂ ಸಲಹೆ ಪಡೆಯುತ್ತೇನೆ. ಮಾಧ್ಯಮಗಳು ಕೂಡ ಸಂಪಾದಕೀಯ ಹಾಗೂ ಒಂದು ಗಂಟೆಗಳ ಚರ್ಚೆ ಮೂಲಕ ನಮಗೆ ಸಲಹೆ ಕೊಡುತ್ತೀರಿ. ನಾವು ಆ ಸಲಹೆಗಳನ್ನೂ ಗಮನಿಸುತ್ತೇನೆ ಎಂದು ಹೇಳಿದರು.
 
ಹೈಕಮಾಂಡ್ ಗೆ ಕಪ್ಪ ನೀಡಿರುವ ಬಗ್ಗೆ ಯಡಿಯೂರಪ್ಪ ಹಾಗೂ ಅನಂತ್ ಕುಮಾರ್ ವೇದಿಕೆಯಲ್ಲಿ ಮಾತಾಡಿದ್ದು, ನಮ್ಮ ದನಿ ಎಂದು ಅವರೇ ಒಪ್ಪಿಕೊಂಡಿದ್ದಾರೆ. ಅವರು ಕೇವಲ ರಾಜಕೀಯಕ್ಕೆ ರಾಜ್ಯ ಸರಕಾರ ಎಸಿಬಿ ದುರ್ಬಳಕೆ ಮಾಡಿದ್ದಾರೆಂದು ಹೇಳುತ್ತಾರೆ.  ಅವರು ಹಾಗೇ ಹೇಳಬೇಕು. ಯಾಕೆಂದರೆ ತಪ್ಪು ಮಾಡಿದವರು ಯಾರು ತಾನೆ ಒಪ್ಪಿಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು.

ಸುದ್ದಿಗೋಷ್ಠಿಯಲ್ಲಿ ಎಡಿಜಿಪಿ ಅಲೋಕ್ ಮೋಹನ್, ದಕ್ಷಿಣ ವಲಯ ಐಜಿಪಿ ವಿಫುಲ್‍ ಕುಮಾರ್, ನಗರ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ ರಾವ್ ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)