varthabharthi

ಬೆಂಗಳೂರು

‘ಲೋಹಿಯಾ ನೆನಪು-50’

ಆರ್ಥಿಕ, ಸಾಮಾಜಿಕ ಸಮಾನತೆಯಿಲ್ಲದೆ ಭಾರತ ಅಭಿವೃದ್ಧಿಯಾಗದು: ಮದನಲಾಲ್ ಹಿಂದ್

ವಾರ್ತಾ ಭಾರತಿ : 12 Oct, 2017

ಬೆಂಗಳೂರು, ಅ.12: ದೇಶದಲ್ಲಿ ಸಾವಿರಾರು ವರ್ಷಗಳಿಂದಲೂ ಜಾರಿಯಲ್ಲಿರುವ ಆರ್ಥಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿರುವ ಅಸಮಾನತೆಯ ಆಚರಣೆಗಳು ಇಂದಿಗೂ ಬದಲಾಗದೆ ಉಳಿದಿರುವುದರಿಂದ ದೇಶದ ಸರ್ವತೋಮುಖ ಅಭಿವೃದ್ಧಿ ಮರೀಚಿಕೆಯಾಗಿಯೇ ಉಳಿದಿದೆ ಎಂದು ಹಿರಿಯ ಪತ್ರಕರ್ತ ಮದನಲಾಲ್ ಹಿಂದ್ ಅಭಿಪ್ರಾಯಟ್ಟಿದ್ದಾರೆ.

ಗುರುವಾರ ಡಾ.ರಾಮಮನೋಹರ ಲೋಹಿಯಾ ಸಮತಾ ವಿದ್ಯಾಲಯ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಕೋಶ  ಸಂಯುಕ್ತಾಶ್ರಯದಲ್ಲಿ  ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ‘ಲೋಹಿಯಾ ನೆನಪು-50’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತಕ್ಕೆ ಸ್ವಾತಂತ್ರ ಸಿಕ್ಕ ಕಾಲಘಟ್ಟದಲ್ಲಿಯೇ ಚೀನಾ ದೇಶವೂ ಸ್ವತಂತ್ರವಾಯಿತು. ಆದರೆ, ಶಿಕ್ಷಣ, ಆರೋಗ್ಯ, ಸಂಶೋಧನೆ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಚೀನಾಕ್ಕೆ ಹೋಲಿಸಿದರೆ ಭಾರತ ಅತ್ಯಂತ ಕೆಳ ಹಂತದಲ್ಲಿದೆ. ಭಾರತದ ಈ ದುಸ್ಥಿತಿಯನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸಿದರೆ ದೇಶದಲ್ಲಿ ಅನಾದಿಕಾಲದಿಂದಲೂ ಬೀಡು ಬಿಟ್ಟಿದ್ದ ಅಸಮಾನತೆಯನ್ನು ಹೋಗಲಾಡಿಸಲು ನಾವು ವಿಫಲರಾಗಿದ್ದೇವೆ. ಹೀಗಾಗಿ ದೇಶ ಎಲ್ಲ ರಂಗದಲ್ಲೂ ಅತ್ಯಂತ ಕಳಪೆ ಮಟ್ಟದಲ್ಲಿದೆ ಎಂದು ವಿಷಾದಿಸಿದರು.

ದೇಶದಲ್ಲಿ ಕನಿಷ್ಠ ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಾದರೂ ಸಮಾನತೆ ತರಬೇಕೆಂಬುದು ಲೋಹಿಯಾರವರ ಕನಸಾಗಿತ್ತು. ಆದರೆ, ಪ್ರಸ್ತುತ ದೇಶದಲ್ಲಿ ಒಂದನೇ ತರಗತಿಗೆ ಲಕ್ಷಾಂತರ ರೂ. ಶುಲ್ಕ ಕಟ್ಟಿ ಶಾಲೆಗೆ ಕಳಿಸುವಂತಹ ಪರಿಸ್ಥಿತಿ ಇದ್ದರೆ, ಇನ್ನು ಕೆಲವು ಸಮುದಾಯದ ಮಕ್ಕಳು ತರಗತಿಯ ಮುಖವನ್ನೇ ನೋಡದ ದುಸ್ಥಿತಿಯಲ್ಲಿದ್ದಾರೆ. ಇಂತಹ ಪರಿಸ್ಥಿತಿ ಹೊಂದಿರುವ ಭಾರತ ಅಭಿವೃದ್ಧಿಗೊಳ್ಳಲು ಸಾಧ್ಯವಿದೆಯೇ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಮಾತನಾಡಿ, ದೇಶದಲ್ಲಿ ಲೋಹಿಯಾರವರ ಸಮಾಜವಾದಿ ಆಶಯಗಳನ್ನು ಜಾರಿಗೆ ಮಾಡಿದ ಏಕೈಕ ರಾಜ್ಯ ಕರ್ನಾಟಕವಾಗಿದೆ. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಆಡಳಿತಾವಧಿಯಲ್ಲಿ ಜಾರಿಗೆ ಬಂದ ಭೂ ಸುಧಾರಣೆ, ಮಲಹೊರುವ ಪದ್ಧತಿ ನಿಷೇಧ, ವಿಕೇಂದ್ರಿಕರಣ, ಮಹಿಳಾ ಮೀಸಲಾತಿ ಸೇರಿದಂತೆ ಹಲವು ಕಾರ್ಯಕ್ರಮಗಳು ಲೋಹಿಯಾ ಚಿಂತನೆಯ ಪ್ರತಿಫಲವಾಗಿವೆ ಎಂದು ತಿಳಿಸಿದರು.

ರಾಜ್ಯದಲ್ಲಿ ಲೋಹಿಯಾ ಚಿಂತೆನಗಳು ಮೇಲ್ ಜಾತಿಗೆ ಸೀಮಿತಗೊಂಡು, ತಳ ಸಮುದಾಯಕ್ಕೆ ತಲುಪುವಲ್ಲಿ ವಿಫಲವಾಯಿತು. ಇದರಿಂದಾಗಿ ರಾಜ್ಯದಲ್ಲಿ ಸಮಾಜವಾದಿ ಚಿಂತನೆ ರಾಜಕೀಯ ಸ್ವರೂಪವನ್ನು ಪಡೆಯುವಲ್ಲಿ ವಿಫಲವಾಯಿತು. ಇಂದಿಗೂ ಕೆಲವು ಸಮಾಜವಾದಿಗಳು ಲೋಹಿಯಾ ಒಂದು ಕಾಲಘಟ್ಟದಲ್ಲಿ ತೋರಿದ ಕಾಂಗ್ರೆಸ್ ವಿರೋಧಿ ಧೋರಣೆಯನ್ನು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಅವರು ವಿಷಾದಿಸಿದರು.

ಈ ವೇಳೆ ನಿವೃತ್ತ ಐಜಿಪಿ ಕೆ.ಅರ್ಕೇಶ್, ದಲಿತ ಹೋರಾಟಗಾರ್ತಿ ಇಂದಿರಾ ಕೃಷ್ಣಪ್ಪ ಮಾತನಾಡಿದರು.

ಕಾರ್ಯಕ್ರಮದಲ್ಲಿ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ.ವೂಡೇ ಪಿ.ಕೃಷ್ಣ ಅಧ್ಯಕ್ಷತೆಯನ್ನು ವಹಿಸಿದ್ದರು. ಗಾಂಧಿ ಸ್ಮಾರಕ ನಿಧಿಯ ಪ್ರೊ.ಶಿವರಾಜ್, ತಿಪ್ಪಣ್ಣಗೌಡ ಹಾಗೂ ಇ.ಬಸವರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಲೋಹಿಯಾ ಅಂದರೆ ಹೋರಾಟದ ಸಂಕೇತ. ಅವರ ಚಿಂತನೆಗಳ ಸ್ಫೂರ್ತಿಯಿಂದ ಒಂದು ಸಂದರ್ಭದಲ್ಲಿ ರಾಜ್ಯದಲ್ಲಿ ಅಂತರ್ಜಾತಿ ವಿವಾಹಗಳು ಹೆಚ್ಚಾಗಿ ನಡೆದವು. ಅಂತರ್ಜಾತಿ ವಿವಾಹ ಹಾಗೂ ಸಹಪಂಕ್ತಿ ಭೋಜನದಿಂದ ಮಾತ್ರವೇ ಜಾತಿ ವಿನಾಶವಾಗಲು ಸಾಧ್ಯವೆಂದು ಲೋಹಿಯಾ ಪ್ರಬಲವಾಗಿ ಪ್ರತಿಪಾದಿಸುತ್ತಿದ್ದರು.
-ಪ್ರೊ.ರವಿವರ್ಮ ಕುಮಾರ್, ಹಿರಿಯ ನ್ಯಾಯವಾದಿ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)