varthabharthi

ಬೆಂಗಳೂರು

‘ನೈಸ್’ ಅಕ್ರಮ ವಿವಿಧ ನ್ಯಾಯಾಲಯಗಳಲ್ಲಿ 40 ಕೇಸುಗಳು ಬಾಕಿ: ಸಚಿವ ಜಯಚಂದ್ರ

ವಾರ್ತಾ ಭಾರತಿ : 12 Oct, 2017

ಬೆಂಗಳೂರು, ಅ. 12: ಬಿಎಂಐಸಿ (ನೈಸ್) ಯೋಜನೆಯ ಅಕ್ರಮ ಸಂಬಂಧ ಸದನ ಸಮಿತಿ ವರದಿಯನ್ವಯ ಕ್ರಮ ಜರಗಿಸಲು ವಿಳಂಬವಾಗುತ್ತಿದೆ. ವಿವಿಧ ನ್ಯಾಯಾಲಯಗಳಲ್ಲಿ 40ಕ್ಕೂ ಹೆಚ್ಚು ಪ್ರಕರಣಗಳು ಬಾಕಿಯಿದ್ದು, ಈ ಸಂಬಂಧ ಅಡ್ವೋಕೇಟ್ ಜನರಲ್ ಅವರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಸಚಿವ ಜಯಚಂದ್ರ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾತನಾಡಿದ ಅವರು, ‘ನೈಸ್’ ಅಕ್ರಮಗಳ ಸಂಬಂಧ ಸಿಬಿಐ ತನಿಖೆಗೆ ವಹಿಸಲು ಸದನ ಸಮಿತಿ ವಿಸ್ತೃತ ಅಧ್ಯಯನ ನಡೆಸಿ ಶಿಫಾರಸುಗಳ ವರದಿಯನ್ನು ಸಲ್ಲಿಸಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿದ್ದು, ಲೋಕೋಪಯೋಗಿ ಇಲಾಖೆ ಅಭಿಪ್ರಾಯ ಪಡೆಯಲಾಗುತ್ತಿದೆ ಎಂದರು.

‘ನೈಸ್’ ಅಕ್ರಮಗಳ ಸಂಬಂಧ ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣಗಳ ಬಾಕಿ ಇರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಸುನೀಲ್‌ಯಾದವ್ ಎಂಬ ವಕೀಲರನ್ನು ನೇಮಿಸಿದೆ. ಆದರೂ, ಪ್ರಕರಣಗಳ ವಿಲೇವಾರಿ ವಿಳಂಬವಾಗುತ್ತಿದೆ ಎಂದು ಅವರು ಹೇಳಿದರು.

‘ನೈಸ್’ ಸಂಸ್ಥೆ ಏಕಾಏಕಿ ಟೋಲ್ ದರ ಹೆಚ್ಚಳ ಮಾಡಿದ ಕೂಡಲೇ ನೈಸ್ ಸಂಸ್ಥೆಗೆ ರಾಜ್ಯ ಸರಕಾರ ನೋಟಿಸ್ ನೀಡಿತ್ತು. ಆದರೆ, ನ್ಯಾಯಾಲಯದಿಂದ ಆ ಬಗ್ಗೆ ತಡೆಯಾಜ್ಞೆ ತರಲಾಗಿದೆ. ಇದರಿಂದ ನಾವೇನು ಮಾಡಲಾಗದ ಸ್ಥಿತಿ ಇದೆ ಎಂದು ಅವರು ತಮ್ಮ ಅಸಹಾಯಕತೆಯನ್ನು ಪ್ರದರ್ಶಿಸಿದರು.

 

Comments (Click here to Expand)