varthabharthi

ರಾಷ್ಟ್ರೀಯ

ಪತ್ರಕರ್ತೆ ಗೌರಿ ಲಂಕೇಶ್ ಅವರಿಗೆ ಆರೆಸ್ಸೆಸ್ ನಾಯಕರ ಶ್ರದ್ಧಾಂಜಲಿ

ವಾರ್ತಾ ಭಾರತಿ : 12 Oct, 2017

ಭೋಪಾಲ,ಅ.12: ಗುರುವಾರ ಇಲ್ಲಿ ಆರಂಭಗೊಂಡ ಆರೆಸ್ಸೆಸ್‌ನ ಮೂರು ದಿನಗಳ ಅಖಿಲ ಭಾರತೀಯ ಕಾರ್ಯಕಾರಿಣಿ ಮಂಡಳಿಯ ಸಭೆಯಲ್ಲಿ ಕಳೆದ ತಿಂಗಳು ಬೆಂಗಳೂರಿನಲ್ಲಿ ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ಸೇರಿದಂತೆ ಇತ್ತೀಚಿಗೆ ನಿಧನರಾದ ಹಲವಾರು ಗಣ್ಯರಿಗೆ ಅವರು ಸಮಾಜಕ್ಕೆ ಸಲ್ಲಿಸಿದ್ದ ಸೇವೆಯನ್ನು ಸ್ಮರಿಸಿಕೊಂಡು ಶ್ರದ್ಧಾಂಜಲಿಗಳನ್ನು ಸಲ್ಲಿಸಲಾಯಿತು.

ಸಂಘದ ಮುಖ್ಯಸ್ಥ ಮೋಹನ ಭಾಗವತ್ ಸೇರಿದಂತೆ ವಾರ್ಷಿಕ ‘ದಿವಾಳಿ ಬೈಠಕ್’ನಲ್ಲಿ ಸಮಾವೇಶಗೊಂಡಿರುವ ರಾಷ್ಟ್ರಾದ್ಯಂತದಿಂದ ಆಗಮಿಸಿರುವ ಆರೆಸ್ಸೆಸ್ ನಾಯಕರು ಗೌರಿ ಲಂಕೇಶ್, ಮಾಜಿ ಇಸ್ರೋ ಅಧ್ಯಕ್ಷ ಯು.ಆರ್.ರಾವ್, ಕರ್ನಾಟಕದ ಖ್ಯಾತ ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಸೇರಿದಂತೆ ಜೀವನದ ವಿವಿಧ ಕ್ಷೇತ್ರಗಳ ಗಣ್ಯರಿಗೆ ಶ್ರದ್ಧಾಂಜಲಿಗಳನ್ನು ಅರ್ಪಿಸಿದರು.

ಆರೆಸ್ಸೆಸ್ ಸಭೆಯಲ್ಲಿ ಶ್ರದ್ಧಾಂಜಲಿಗಳನ್ನು ಸಲ್ಲಿಸಲಾದ ಗಣ್ಯರ ದೊಡ್ಡ ಪಟ್ಟಿಯೇ ಇದೆ. ಗೌರಿ ಲಂಕೇಶ್ ಸಹ ಅದರಲ್ಲಿ ಸೇರಿದ್ದಾರೆ ಎಂದು ಸಂಘದ ಪ್ರಚಾರ ಪ್ರಮುಖ ಮನಮೋಹನ ವೈದ್ಯ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಆರೆಸ್ಸೆಸ್ ಮೂರು ದಿನಗಳ ಸಭೆಯಲ್ಲಿ ದೇಶದ ಆರ್ಥಿಕತೆಯ ಸ್ಥಿತಿ ಹಾಗೂ ಮ್ಯಾನ್ಮಾರ್‌ನಿಂದ ರೊಹಿಂಗ್ಯಾಗಳ ವಲಸೆ ಮತ್ತು ಗೋರಕ್ಷಕರಿಂದ ಹಿಂಸಾಚಾರದಂತಹ ಹಲವಾರು ವಿಷಯಗಳನ್ನು ಚರ್ಚಿಸಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)