varthabharthi

ಸಂಪಾದಕೀಯ

ಗುಜರಾತ್ ಚುನಾವಣಾ ಘೋಷಣೆ: ಈ ಹಿಂಜರಿಕೆ ಯಾಕೆ?

ವಾರ್ತಾ ಭಾರತಿ : 12 Oct, 2017

ಚುನಾವಣಾ ಆಯೋಗವು ಗುರುವಾರ ಹಿಮಾಚಲಪ್ರದೇಶದ ವಿಧಾನಸಭಾ ಚುನಾವಣಾ ದಿನಾಂಕವನ್ನು ಘೋಷಿಸಿದೆ. ಆದರೆ ಗುಜರಾತ್‌ನ ವಿಧಾನಸಭಾ ಚುನಾವಣೆಯು ಇದೇ ಅವಧಿಯಲ್ಲಿ ನಡೆಯಲಿದ್ದರೂ, ಆ ರಾಜ್ಯದ ಚುನಾವಣಾ ದಿನಾಂಕವನ್ನು ಅದು ಪ್ರಕಟಿಸಿಲ್ಲ. ಚುನಾವಣಾ ಆಯೋಗವು ಸುದೀರ್ಘ ಸಮಯದಿಂದ ಅನುಸರಿಸಿಕೊಂಡು ಬಂದಿರುವ ಪದ್ಧತಿಯ ಪ್ರಕಾರ, ಆರು ತಿಂಗಳುಗಳ ಅವಧಿಯೊಳಗೆ ಚುನಾವಣೆ ನಡೆಯಬೇಕಾಗಿರುವ ರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕಗಳನ್ನು ಜೊತೆಯಾಗಿ ಪ್ರಕಟಿಸಲಾಗುತ್ತದೆ.ಆದರೆ ಈ ಸಲದ ಗುಜರಾತ್ ವಿಧಾನಸಭಾ ಚುನಾವಣೆಯ ವಿಷಯದಲ್ಲಿ ಆಯೋಗ ಈ ಪದ್ಧತಿಗೆ ತಿಲಾಂಜಲಿ ನೀಡಿದೆ.

  ಹಿಮಾಚಲಪ್ರದೇಶದ ವಿಧಾನಸಭೆಯ ಮೊದಲ ಹಂತದ ಚುನಾವಣೆಯು ನವೆಂಬರ್ 9ರಂದು ನಡೆಯಲಿದೆ ಹಾಗೂ ಡಿಸೆಂಬರ್ 18ರಂದು ರಾಜ್ಯದ ಸಮಗ್ರ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗ ಇಂದು ಘೋಷಿಸಿದೆ. ಗುಜರಾತ್ ವಿಧಾನಸಭಾ ಚುನಾವಣಾ ಪ್ರಕ್ರಿಯೆಯ ವೇಳಾಪಟ್ಟಿಯನ್ನು ಮುಂದೆ ಪ್ರತ್ಯೇಕವಾಗಿ ಪ್ರಕಟಿಸಲಾಗುವುದು. ಆದರೆ ಡಿಸೆಂಬರ್ 18ಕ್ಕೆ ಮುನ್ನ ಅಲ್ಲಿ ಚುನಾವಣೆ ನಡೆಯಲಿದೆಯೆಂದು ಮುಖ್ಯ ಚುನಾವಣಾ ಆಯುಕ್ತ ಎ.ಕೆ.ಜ್ಯೋತಿ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ. ಒಂದು ರಾಜ್ಯದ ವಿಧಾನಸಭಾ ಚುನಾವಣೆಯ ಮತದಾನದ ಮಾದರಿಯು ಇನ್ನೊಂದು ರಾಜ್ಯದ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಬಾರದೆಂಬುದನ್ನು ಖಾತರಿಪಡಿಸಲು ಆಯೋಗ ಈ ಕ್ರಮ ಕೈಗೊಂಡಿದೆೆಯೆಂಬುದು ಅವರ ವಾದವಾಗಿದೆ.

   ನೂತನ ಚುನಾವಣಾಯುಕ್ತ ಅಚಲ್ ಕುಮಾರ್ ಜ್ಯೋತಿ ಅವರ ಹಿನ್ನೆಲೆ ಗೊತ್ತಿದ್ದವರಿಗೆ ಅವರ ಈ ನಿರ್ಧಾರದ ಹಿಂದಿನ ರಾಜಕೀಯ ತಂತ್ರವನ್ನು ಊಹಿಸಲು ಕಷ್ಟವಾಗದು. ಗುಜರಾತ್ ರಾಜ್ಯದಲ್ಲಿ ನಡೆಯುವ ಚುನಾವಣೆ ಕೇಂದ್ರ ಸರಕಾರಕ್ಕೆ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಈಗಾಗಲೇ ಆರೆಸ್ಸೆಸ್ ಸಂಘಟನೆಯು ನಡೆಸಿದ ಸಮೀಕ್ಷೆಯಲ್ಲಿ, ಗುಜರಾತ್‌ನಲ್ಲಿ ಬಿಜೆಪಿ ಸೋಲಲಿದೆ ಎಂಬ ಅಂಶವನ್ನು ಎತ್ತಿ ಹೇಳಿದೆ. ನರೇಂದ್ರ ಮೋದಿಯವರು ಗುಜರಾತ್‌ನ್ನು ಮುಂದಿಟ್ಟುಕೊಂಡು ರಾಷ್ಟ್ರಮಟ್ಟದ ನಾಯಕರಾಗಿ ಬೆಳೆದವರು. ಗುಜರಾತ್‌ನ ಅಭಿವೃದ್ಧಿಯೆಂಬ ಸುಳ್ಳನ್ನು ಮಾಧ್ಯಮಗಳ ಮೂಲಕ ಪದೇ ಪದೇ ಹರಡಿ, ಆ ಮೂಲಕ ಈ ದೇಶದ ಪ್ರಧಾನಿ ಅಭ್ಯರ್ಥಿಯಾಗಿ ಮೂಡಿ ಬಂದರು. ಒಂದು ವೇಳೆ ಗುಜರಾತ್ ಚುನಾವಣೆಯಲ್ಲಿ ಬಿಜೆಪಿಯೇನಾದರೂ ಸೋತರೆ, ಅದು ಮೋದಿ ನೇತೃತ್ವದ ಸರಕಾರದ ಮೇಲೆ ನೇರ ಪರಿಣಾಮ ಬೀರಲಿದೆ. ಈಗಾಗಲೇ ಮೋದಿಯ ತಲೆಬುಡವಿಲ್ಲದ ನಿರ್ಧಾರಗಳಿಂದ ದೇಶದ ಅರ್ಥವ್ಯವಸ್ಥೆ ಹಳ್ಳ ಹಿಡಿದಿದೆ. ನಿರುದ್ಯೋಗ ಹೆಚ್ಚುತ್ತಿದೆ. ಕೃಷಿ ಕ್ಷೇತ್ರ ನೆಲಕಚ್ಚಿದೆ. ಜಿಡಿಪಿ ಕುಸಿದಿದೆ. ಬೆಲೆಯ ಮೇಲೆ ನಿಯಂತ್ರಣ ತರಲು ಮೋದಿ ಸರಕಾರಕ್ಕೆ ಅಸಾಧ್ಯವಾಗಿದೆ. ಇವೆಲ್ಲದರ ಪರಿಣಾಮ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಣಿಸಿಕೊಂಡು ಬಿಜೆಪಿಯೇನಾದರೂ ಸೋತರೆ, ಮೋದಿಯ ಕಳಪೆ ಆಡಳಿತದ ವಿರುದ್ಧ ಜನಾದೇಶವಾಗಿ ಪರಿಣಮಿಸುವ ಸಾಧ್ಯತೆಯಿದೆ. ಸದ್ಯಕ್ಕೆ ಮೋದಿಯ ವರ್ಚಸ್ಸೇ ಬಿಜೆಪಿ ಬಂಡವಾಳ. ಆ ವರ್ಚಸ್ಸಿಗೆ ಧಕ್ಕೆಯಾದರಂತೂ, ಮುಂದಿನ ಮಹಾಚುನಾವಣೆ ಬಿಜೆಪಿಗೆ ಬಹುದೊಡ್ಡ ಸವಾಲಾಗಬಹುದು. ಈ ಕಾರಣದಿಂದಲೇ, ಗುಜರಾತ್ ವಿಧಾನಸಭಾ ಚುನಾವಣೆಯನ್ನು ಮುಂದೂಡಿ ಅದಕ್ಕೆ ಮೊದಲೇ ಹಿಮಾಚಲ ಪ್ರದೇಶದ ಚುನಾವಣೆಯನ್ನು ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಇದನ್ನು ಆಯೋಗದ ತೀರ್ಮಾನ ಎನ್ನುವುದಕ್ಕಿಂತ ಮೋದಿಯ ತೀರ್ಮಾನ ಎಂದೇ ಗ್ರಹಿಸಬೇಕಾಗುತ್ತದೆ.

     ಈ ನಿರ್ಧಾರದ ಹಿಂದೆ ಎರಡು ತಂತ್ರಗಳಿವೆ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದೆ. ಚುನಾವಣೆ ಘೋಷಣೆಯಾಗಿದ್ದು ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಆದುದರಿಂದ ಅಲ್ಲಿನ ಸರಕಾರ ಯಾವುದೇ ಅಭಿವೃದ್ಧಿ ಕಾರ್ಯಕ್ರಮವನ್ನು ಕೈಗೊಳ್ಳುವಂತಿಲ್ಲ. ಯಾವುದೇ ಕಾಮಗಾರಿಗಳಿಗೆ ಶಿಲಾನ್ಯಾಸ ಮಾಡುವಂತಿಲ್ಲ. ಇದು ಅಲ್ಲಿನ ಕಾಂಗ್ರೆಸ್ ಸರಕಾರದ ಕೈಗಳನ್ನು ಕಟ್ಟಿ ಹಾಕಿದೆ. ಹಿಮಾಚಲ ಪ್ರದೇಶದಲ್ಲಿ ಚುನಾವಣೆಯನ್ನು ಮುಂದೆ ಹಾಕಿದಷ್ಟು, ಅಲ್ಲಿನ ಸರಕಾರ ಚುನಾವಣೆಯ ದೃಷ್ಟಿಯನ್ನಿಟ್ಟುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಮಾಡತೊಡಗುತ್ತದೆ. ಇದರಿಂದ ಬಿಜೆಪಿಗೆ ಹಿನ್ನಡೆಯಾಗಬಹುದು ಎಂದು ಬಿಜೆಪಿ ಭಯಪಟ್ಟಂತಿದೆ. ಇದೇ ಸಂದರ್ಭದಲ್ಲಿ ಗುಜರಾತ್‌ನಲ್ಲಿ ಬಿಜೆಪಿ ಸರಕಾರವಿರುವುದರಿಂದ, ಒಟ್ಟೊಟ್ಟಿಗೆ ಚುನಾವಣೆಯನ್ನು ಘೋಷಿಸದೇ, ಗುಜರಾತ್‌ನಲ್ಲಿ ಬಿಜೆಪಿಗೆ ಇನ್ನಷ್ಟು ಅವಕಾಶ ಸಿಗುವಂತೆ ಚುನಾವಣಾ ಆಯೋಗವೇ ಮುತುವರ್ಜಿ ವಹಿಸಿದೆ. ಗುಜರಾತ್‌ನಲ್ಲಿ ಸೋಲಿನ ಭಯ ಬಿಜೆಪಿಯನ್ನು ಈಗಾಗಲೇ ಕಾಡತೊಡಗಿದೆ. ಆದುದರಿಂದ, ಚುನಾವಣೆಗೆ ಮುನ್ನ ಮೋದಿಯನ್ನು ಬಳಸಿಕೊಂಡು ಜನರನ್ನು ಮರುಳು ಮಾಡಲು ಯೋಜನೆ ರೂಪಿಸಿದೆ. ನರೇಂದ್ರ ಮೋದಿ ಅಕ್ಟೋಬರ್ 16ರಂದು ಗುಜರಾತ್‌ಗೆ ಭೇಟಿ ನೀಡಲು ಸಜ್ಜಾಗಿದ್ದಾರೆ. ಮೋದಿ ತನ್ನ ಗುಜರಾತ್ ಪ್ರವಾಸದ ವೇಳೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಭಯವಿಲ್ಲದೆ ರಾಜಾರೋಷವಾಗಿ ಹಲವಾರು ‘ಜನಮರುಳು’ ಕಾರ್ಯಕ್ರಮಗಳನ್ನು, ಪ್ಯಾಕೇಜ್‌ಗಳನ್ನು ಹಾಗೂ ಕಾಮಗಾರಿಗಳನ್ನು ಘೋಷಿಸಲಿರುವುದು ನಿಚ್ಚಳವಾಗಿದೆ.ಗುಜರಾತ್‌ನಲ್ಲಿ ಮತ್ತೆ ಅಧಿಕಾರ ಹಿಡಿಯಲು ಬಿಜೆಪಿಯು ನಡೆಸುತ್ತಿರುವ ಕೊನೆಯ ಪ್ರಯತ್ನ ಇದಾಗಿದೆ. ಚುನಾವಣಾ ಆಯೋಗ ಅದಕ್ಕಾಗಿಯೇ, ಒಟ್ಟೊಟ್ಟಿಗೆ ಚುನಾವಣೆಯನ್ನು ಘೋಷಿಸದೆ ಗುಜರಾತ್‌ನಲ್ಲಿ ಮೋದಿ ಪ್ರವಾಸಕ್ಕೆ ಅನುಕೂಲ ಮಾಡಿಕೊಟ್ಟಿದೆ.

    ಗುಜರಾತ್ ವಿಧಾನಸಭಾ ಚುನಾವಣಾ ದಿನಾಂಕದ ಘೋಷಣೆಯನ್ನು ಮುಂದೂಡುವ ಮೂಲಕ ಚುನಾವಣಾ ಆಯೋಗದ ಘನತೆಯನ್ನು ಕೊಂದುಹಾಕಲಾಗಿದೆ ಎಂದು ಚುನಾವಣಾ ಆಯೋಗದ ಮಾಜಿ ಅಧಿಕಾರಿಯೊಬ್ಬರು ವ್ಯಕ್ತಪಡಿಸಿರುವ ಅಭಿಪ್ರಾಯವು ಇಡೀ ದೇಶದ ಪ್ರಜ್ಞಾವಂತ ಜನತೆಯ ಧ್ವನಿಯೂ ಹೌದು. ಗುಜರಾತ್‌ನಲ್ಲಿ ಡಿಸೆಂಬರ್ ಒಳಗೆ ವಿಧಾನಸಭಾ ಚುನಾವಣೆ ನಡೆಯಲಿದ್ದರೂ, ಆಯೋಗವು ಚುನಾವಣಾ ದಿನಾಂಕವನ್ನು ಪ್ರಕಟಿಸದಿರುವುದು ಹಲವಾರು ಸಂದೇಹಗಳಿಗೆ ಎಡೆಮಾಡಿಕೊಡುತ್ತದೆ. ಹಿಮಾಚಲಪ್ರದೇಶದಂತಹ ಪುಟ್ಟ ರಾಜ್ಯದ ವಿಧಾನಸಭಾ ಚುನಾವಣೆಗೆ ನವೆಂಬರ್ 8ರಂದು ಮತದಾನ ನಡೆಯುವುದಾದರೂ, ಮತಎಣಿಕೆ ಮಾತ್ರ ಸುದೀರ್ಘ ಅಂತರದ ಬಳಿಕ ಅಂದರೆ ಡಿಸೆಂಬರ್ 18ರಂದು ನಡೆಸಲು ಆಯೋಗ ತೀರ್ಮಾನಿಸಿದೆ. ಈ ಅವಧಿಯೊಳಗೆ ಗುಜರಾತ್ ವಿಧಾನಸಭಾ ಚುನಾವಣೆ ನಡೆಸುವ ಇರಾದೆ ಆಯೋಗಕ್ಕಿದೆ. ಒಟ್ಟಿನಲ್ಲಿ, ಚುನಾವಣಾ ಆಯುಕ್ತರಾದ ಬೆನ್ನಿಗೇ ಬಿಜೆಪಿಗೆ ಪೂರಕವಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಜ್ಯೋತಿ ಅವರು, ತನ್ನ ನಿಷ್ಠೆಯನ್ನು ಸಂವಿಧಾನಕ್ಕೆ ಬದಲಾಗಿ ಪ್ರಧಾನಿ ಮೋದಿಗೆ ಅರ್ಪಿಸಿದ್ದಾರೆ. ಇದು ನಿಜಕ್ಕೂ ಅಪಾಯಕಾರಿ. ಈಗಾಗಲೇ ಇವಿಎಂ ಅಂದರೆ ಮತಯಂತ್ರ ತಿರುಚಲಾಗುತ್ತಿದೆ ಎಂಬ ಆರೋಪ ಆಯೋಗದ ಮೇಲಿದೆ. ಇದೀಗ ಆಯುಕ್ತರೇ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡರೆ, ನಡೆಯುವ ಚುನಾವಣೆಗಳಿಗೆ ಅರ್ಥವಾದರೂ ಏನು ಉಳಿಯುತ್ತದೆ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)