varthabharthi

ಕರ್ನಾಟಕ

ಕಬ್ಬಿಗೆರೆಯಲ್ಲಿ ಸೌರ ಘಟಕ, ಕೌಶಲ್ಯ ಅಭಿವೃದ್ಧಿ ಕೇಂದ್ರ: ಡಾ.ಸುಭಾಷ್ ಚಂದ್ರ ಕುಂಠಿಯಾ

ವಾರ್ತಾ ಭಾರತಿ : 12 Oct, 2017

ತುಮಕೂರು, ಅ.12: “ಹಸಿರು ಶಕ್ತಿ” ಯೋಜನೆಯಡಿ ಆಯ್ಕೆಯಾಗಿದ್ದ ಜಿಲ್ಲೆಯ ಕೊರಟಗೆರೆ ತಾಲೂಕಿನ ಕಬ್ಬಿಗೆರೆ ಸುತ್ತಮುತ್ತಲಿನ ಐದು ಗ್ರಾಮಗಳ ವ್ಯಾಪ್ತಿಯಲ್ಲಿ ಸೋಲಾರ್ ಘಟಕ ಹಾಗೂ ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಸುಭಾಷ್ ಚಂದ್ರ ಕುಂಠಿಯಾ ತಿಳಿಸಿದ್ದಾರೆ.

ಹಸಿರು ಶಕ್ತಿ ಯೋಜನೆಯ ಐದು ಗ್ರಾಮಗಳಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಪರಿವೀಕ್ಷಣೆ ನಡೆಸಿದ ನಂತರ ಈ ಗ್ರಾಮಗಳ ಗ್ರಾಮಸ್ಥರು ಕಬ್ಬಿಗೆರೆಯಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡುತಿದ್ದ ಅವರು, ಕಳೆದ 2002ರಿಂದ 2005ರವರೆಗೆ ಹಸಿರು ಶಕ್ತಿ ಯೋಜನೆಯ ಸಮನ್ವಯಾಧಿಕಾರಿಯಾಗಿ ಕಬ್ಬಿಗೆರೆ, ಅಜ್ಜೇನಹಳ್ಳಿ, ಚಿಕ್ಕರಸನಹಳ್ಳಿ, ಚಿಕ್ಕಣ್ಣನಹಳ್ಳಿ, ಒಬನಹಳ್ಳಿ ಹಾಗೂ ಮಜರಗೊಲ್ಲರಹಟ್ಟಿಯಲ್ಲಿ ಯೋಜನೆಯ ಅನುಷ್ಠಾನಗೊಳಿಸಲಾಗಿತ್ತು. ಕೃಷಿ, ತೋಟಗಾರಿಕೆ, ಅರಣ್ಯ ಹಾಗೂ ಭಾರತೀಯ ಆಗ್ರೋ ಇಂಡಸ್ಟ್ರೀಸ್ ಮತ್ತಿತರ ಸ್ವಯಂಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಮಳೆ ನೀರು ಕೊಯ್ಲು, ಶೌಚಾಲಯ, ಸಾಮೂಹಿಕ ನೀರಾವರಿ, ಕೃಷಿಹೊಂಡ, ಉರುವಲಿನಿಂದ ವಿದ್ಯುತ್‍ ಚ್ಛಕ್ತಿಯಾಗಿ ಪರಿವರ್ತಿಸುವ ಗ್ಯಾಸಿಪೈಯರ್ ಹಾಗೂ ಮರಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಎಲ್ಲರ ಪ್ರಯತ್ನದಿಂದಾಗಿ ಈ ಯೋಜನೆಯ ಗ್ರಾಮಗಳು ಹಸಿರುಮಯವಾಗಿವೆ ಎಂದು ಸಂತಸ ವ್ಯಕ್ತಪಡಿಸಿದರು. 

ಗ್ರಾಮಗಳು ಅಭಿವೃದ್ಧಿಯಾಗಬೇಕಾದರೆ ಗ್ರಾಮ ಯಾವ ರೀತಿಯಲ್ಲಿ ಅಭಿವೃದ್ಧಿಯಾಗಬೇಕು ಎಂಬುದನ್ನು ಗ್ರಾಮಸ್ಥರೇ ನಿರ್ಧರಿಸಬೇಕು. ಶೇ.100ರಷ್ಟು ಬಯಲು ಶೌಚ ಮುಕ್ತ ಗ್ರಾಮಗಳಾಗಬೇಕು. ಪ್ರತಿಮನೆಯು ಶೌಚಾಲಯಗಳನ್ನು ಹೊಂದಬೇಕು ಎಂಬ ನಿಟ್ಟಿನಲ್ಲಿ ಈ ಯೋಜನೆಯ ವ್ಯಾಪ್ತಿಯ ಗ್ರಾಮಗಳು ಸ್ವಚ್ಛ ಭಾರತ್ ಅಡಿಯಲ್ಲಿ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಬೇಕು. ಅಲ್ಲದೆ ಮಳೆ ನೀರು ಕೊಯ್ಲು, ಕೃಷಿ ಹೊಂಡಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಸುಧಾಕರ್‍ಲಾಲ್, ಹಸಿರು ಶಕ್ತಿ ಯೋಜನೆಯ ಪರಿಣಾಮದಿಂದಾಗಿ ಈ ವ್ಯಾಪ್ತಿಯ ಗ್ರಾಮಗಳ ಗ್ರಾಮಸ್ಥರಲ್ಲಿ ಶಿಸ್ತು, ಅವರ ನಡವಳಿಕೆ, ಉತ್ತಮ ಅಲೋಚನೆಯನ್ನು ನಾವು ಕಾಣುತ್ತಿದ್ದೇವೆ. ಇಂತಹ ಯೋಜನೆಯು ಪರಿಣಾಮಕಾರಿ ಅನುಷ್ಠಾನಗೊಳಿಸಿ ಶ್ರಮಿಸಿದ ಮುಖ್ಯ ಕಾರ್ಯದರ್ಶಿಗಳು ತಾಲೂಕಿನ ಮಗನಿದ್ದಂತೆ.  ತಾಲೂಕಿನ ಅಭಿವೃದ್ಧಿಗೆ ನಿಮ್ಮ ಸಲಹೆ, ಮಾರ್ಗದರ್ಶನ ಹಾಗೂ ಸಹಕಾರ ಸದಾ ಇರಬೇಕು ಎಂದರು. 

ಕಬ್ಬಿಗೆರೆ ಕೆರೆಗೆ ಮುಖ್ಯ ಕಾರ್ಯದರ್ಶಿಗಳಿಂದ ಬಾಗಿನ: ಕಬ್ಬಿಗೆರೆ ಕೆರೆಯು ತುಂಬಿ ಹರಿದ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿ ಸುಭಾಷ್‍ಚಂದ್ರ ಕುಂಠಿಯಾ ದಂಪತಿಗಳು ಕೆರೆಗೆ ಬಾಗಿನ ಸಮರ್ಪಿಸಿದರು. ಕಬ್ಬಿಗೆರೆ ಕೆರೆಗೆ ನೀರು ತುಂಬುವುದಕ್ಕೂ ಮುನ್ನ ಕೆರೆಯ ಅಭಿವೃದ್ಧಿಗೆ ಕೈಗೊಂಡಿದ್ದ ಕಾಮಗಾರಿಗಳ ಬಗ್ಗೆ ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಕೆ.ಜಿ.ಶಾಂತಾರಾಮ್ ಅವರಿಂದ ಮಾಹಿತಿ ಪಡೆದ ಮುಖ್ಯ ಕಾರ್ಯದರ್ಶಿಗಳು ಉತ್ತಮವಾದ ಕೆಲಸ ಮಾಡಿದ್ದೀರಿ ಎಂದು ಸಿಇಒ ಅವರನ್ನು ಪ್ರಶಂಶಿಸಿದರು.

ಕಾರ್ಯಕ್ರಮದಲ್ಲಿ ಪದ್ಮಜಾ ಸುಭಾಷ್‍ಚಂದ್ರ ಕುಂಠಯಾ, ಗ್ರಾಮೀಣ ಮೂಲಭೂತ ಸೌಕರ್ಯಗಳ ನಿರ್ದೇಶಕ ಯಶವಂತ, ಮಧುಗಿರಿ ಉಪವಿಭಾಗಾಧಿಕಾರಿ ಡಾ.ವೆಂಕಟೇಶಯ್ಯ, ಐಎಎಸ್ ಪ್ರೊಬೇಷನರಿ ಅಧಿಕಾರಿ ಪ್ರೀತಿ ಗೆಹಲೋಟ್, ಜಿಲ್ಲಾ ಪಂಚಾಯತ್ ಸದಸ್ಯೆ ಅಕ್ಕಮಹಾದೇವಿ, ತೋವಿನಕೆರೆ ಗ್ರಾ.ಪಂ ಅಧ್ಯಕ್ಷೆ ಸಿದ್ಧಗಂಗಮ್ಮ, ತಾಪಂ ಇಒ ಮೋಹನ್‍ರಾಜ್ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)