varthabharthi

ಭೀಮ ಚಿಂತನೆ

ಡಾ. ಬಿ.ಆರ್.ಅಂಬೇಡ್ಕರ್ ಅವರ ಆಯ್ದ ಭಾಷಣ-ಬರಹಗಳು

ದಲಿತರೊಳಗಿನ ಒಡಕು

ವಾರ್ತಾ ಭಾರತಿ : 12 Oct, 2017

‘ಸ್ವಧರ್ಮ’ ಅನ್ನುವ 9ನೆ ಜೂನ್‌ನ ಪತ್ರಿಕೆಯಲ್ಲಿ ಮಹಾಡ ನೀರಿನ ಪ್ರಕರಣದ ಬಗ್ಗೆ ಒಂದು ಲೇಖನವನ್ನು ಬರೆಯಲಾಗಿದೆ. ಈ ಘಟನೆಗೆ ಎರಡೂವರೆ ಮೂರು ತಿಂಗಳು ಕಳೆದ ಮೇಲೂ ಇದರ ಬಗ್ಗೆ ಯಾರಾದರೂ ಬರೆದಾರು ಅನಿಸಿರಲಿಲ್ಲ. ತಡವಾಗಿಯಾದರೂ ಸ್ವಧರ್ಮಕಾರರು (ಸ್ವಧರ್ಮ ಪತ್ರಿಕೆಯವರು) ಈ ವಿಷಯದ ಬಗ್ಗೆ ಲೇಖನ ಬರೆದದ್ದು ಒಳ್ಳೆಯದೇ ಆಯಿತು. ಏಕೆಂದರೆ ‘ಸ್ವಧರ್ಮ’ ಅಂದರೆ ಡಾ.ಕುರ್ತುಕೋಟಿಯವರ ಮಠದ ಮುಖವಾಣಿ ಪತ್ರಿಕೆ. ಡಾ.ಕುರ್ತುಕೋಟಿ ಎಂದರೆ ಹಿಂದೂ ಧರ್ಮದ ಜಗದ್ಗುರುಗಳು. ಅವರ ಪತ್ರಿಕೆಯಲ್ಲದೆ ಮಹಾಡ ಪ್ರಕರಣದ ಚರ್ಚೆಯನ್ನು ಬೇರೆ ಯಾರು ತಾನೆ ಮಾಡುತ್ತಾರೆ? ಇಷ್ಟು ತಡವಾಗಿಯಾಗುತ್ತಿರುವ ಈ ಚರ್ಚೆಯಲ್ಲಿ ಯಾವುದೇ ದೋಷವಿರಲಾರದು ಎಂದು ಅಪೇಕ್ಷಿಸುವುದು ಸ್ವಾಭಾವಿಕ, ಆದರೆ ಸ್ವಧರ್ಮಕಾರರ ಚರ್ಚೆಯ ಪದ್ಧತಿಯೇ ವಿಪರೀತವಾಗಿದೆ. ‘‘ಈ ದಂಗೆಗಳಾದ ನಂತರ ಅದಕ್ಕೆ ಸಂಬಂಧಿಸದಂತೆ ಪ್ರಕಟವಾದ ವಿವಿಧ ವರದಿಗಳ ಪೈಕಿ ಪುಣೆಯ ಹಿಂದೂಸಭೆ ಪ್ರಕಟಿಸಿದ ವರದಿಯನ್ನು ನಾವು ನಂಬುತ್ತೇವೆ, ಏಕೆಂದರೆ ದಲಿತರ ಉದ್ಧಾರಕ್ಕಾಗಿ ಇಡೀ ಜನ್ಮ ಕಷ್ಟಪಡುವ ಜನ ಹಾಗೂ ದಲಿತರ ಉದ್ಧಾರಕ್ಕಾಗಿ ಕೆಲಸ ಮಾಡುವ ಸಂಸ್ಥೆಗಳಿಂದ ಮಹಾಡ್ ತನಕ ಹೋಗಿ ಬಂದು ನಾವು ಈ ವರದಿಯನ್ನು ಪ್ರಕಟಿಸುತ್ತಿದ್ದೇವೆ. ಬ್ಯಾರಿಸ್ಟರ್ ಅಂಬೇಡ್ಕರ್ ಅವರ ವರದಿಯನ್ನು ಉಳಿದ ವರದಿಗಳಿಗಿಂತ ನಂಬಬೇಕಿತ್ತು. ನಾವೂ ಹಾಗೇ ಮಾಡಬೇಕಿತ್ತು, ಆದರೆ ಅವರು ಕೊಟ್ಟ ಮಾಹಿತಿಗಳಿಗೆ ವಿರೋಧವಾಗುತ್ತಿರುವುದರಿಂದ ಹಾಗೂ ಅದರಲ್ಲಿ ಯಾವುದೇ ನಿಪ್ಪಕ್ಷಪಾತಿ ಜನರಿಗೆ ಅರ್ಥವಾಗಬಹುದಾದಂತಹ ಜಾತಿದ್ವೇಷ ತುಂಬಿರುವುದರಿಂದ ಅಂತಹ ವರದಿ ಪ್ರಕಟಿಸಲು ನಂಬಲರ್ಹವಾಗಿರುವುದಿಲ್ಲ’’ ಎಂದವರು ಬರೆಯುತ್ತಾರೆ. ಅವರು ಹೇಳಿದುದರಲ್ಲಿ ನಮಗೇನೂ ಆಶ್ಚರ್ಯವೆನಿಸುವುದಿಲ್ಲ. ಜಾತಿಭೇದದಿಂದ ನಮ್ಮ ನ್ಯಾಯವ್ಯವಸ್ಥೆ ಎಷ್ಟು ಮಲಿನಗೊಂಡಿದೆ ಅನ್ನುವುದನ್ನು ನಾವು ದಿನನಿತ್ಯ ನೋಡುತ್ತಿರುತ್ತೇವೆ. ಬಾಹ್ಮಣ ಹಾಗೂ ಬ್ರಾಹ್ಮಣೇತರರ ವಾದ ಆರಂಭವಾದಾಗಿನಿಂದ ನ್ಯಾಯಾಧೀಶರು ತಮ್ಮ ವರಸೆ ತೋರಿಸದೆ ಬಿಡರು ಅನ್ನುವ ಭಯ ಪ್ರಾಂತದ ಪಕ್ಷಕಾರರಲ್ಲಿ ಮೂಡಿದೆ. ಹಾಗಾಗಿ ಈ ಕೇಸನ್ನು ಈ ನ್ಯಾಯಾಧೀಶರಿಂದ ಹಿಂದೆಗೆದುಕೊಂಡು ಬೇರೆ ನ್ಯಾಯಾಧೀಶರಿಗೆ ವಹಿಸಿ ಅನ್ನುವ ಅರ್ಜಿಯನ್ನು ಸತತವಾಗಿ ಹೈಕೋರ್ಟಿಗೆ ಕೊಡಲಾಗುತ್ತಿದೆ. ಸ್ವಧರ್ಮಕಾರರು ಕೂಡ ಮಾಟೆಯವರು ಪ್ರಕಟಿಸಿರುವ ವರದಿಯನ್ನೇ ನಂಬುವ ಹೀನವೃತ್ತಿಯನ್ನು ತೋರಿಸಿದ್ದಾರೆ. ಇಂತಹ ಪಕ್ಷಪಾತ ಶಂಕರಾಚಾರ್ಯರ ಮುಖವಾಣಿಗೆ ಒಪ್ಪುತ್ತದೆಯೇ? ಅನ್ನುವುದನ್ನು ಸ್ವಧರ್ಮಕಾರರು ಯೋಚಿಸಬೇಕು. ಮಾಟೆಯವರ ಮಹಾಡ್‌ನ ವರದಿ ಸುತರಾಂ ಸುಳ್ಳು ಅನ್ನುವುದನ್ನು ನಾವು ಕಳೆದೆರಡು ಸಂಚಿಕೆಯಲ್ಲಿ ಸಿದ್ಧಪಡಿಸಿದ್ದೇವೆ. ಅದರಲ್ಲಿ ಮಹಾಡ್‌ನ ನಗರಪಾಲಿಕೆಯ ಅಧ್ಯಕ್ಷರಾದ ಟಿಪಣಿಸ್ ಅವರ ಬಗ್ಗೆ ಬರೆದ ವಿಧಾನ ಎಷ್ಟು ಸುಳ್ಳು ಅನ್ನುವುದನ್ನು ತೋರಿಸಿಕೊಟ್ಟಿದ್ದೇವೆ. ಇಂದು ಮಾಟೆಯವರ ಇನ್ನೊಂದು ವಿಧಾನ ಎಷ್ಟು ಸುಳ್ಳು ಅನ್ನುವುದನ್ನು ಸಿದ್ಧಪಡಿಸಲಿದ್ದೇವೆ. ಮಾಟೆಯವರು ಒಂದೆಡೆ, ‘‘ಓರ್ವ ಹೆಣ್ಣಿನ ಮೇಲೆ ಕೈ ಮಾಡಿದ್ದಾರೆ ಎಂದು ದಲಿತರು ಹರಡಿರುವ ಸುದ್ದಿ ಸುಳ್ಳು, ನಾವು ಆ ಹೆಣ್ಣಿನ ನೆಂಟರಿಷ್ಟರನ್ನು ಈ ವಿಷಯದ ಬಗ್ಗೆ ಸಂಪರ್ಕಿಸಿ ವಿಷಯವನ್ನು ಸಂಗ್ರಹಿಸಿದ್ದೇವೆ’’ ಅನ್ನುತ್ತಾರೆ. ಈ ಮಾತು ಎಷ್ಟು ಸುಳ್ಳು ಎಂದು ಕಂಡುಹಿಡಿಯಲಿಚ್ಛಿಸುವವರು ಇದೇ ಸಂಚಿಕೆಯಲ್ಲಿ ಪ್ರಕಟಿಸಿರುವ ಆಕೆಯ ಗಂಡನ ಪತ್ರವನ್ನು ಓದಬಹುದು. ವಿದ್ಯಾವಂತ ಮಾಟೆಯವರಂತಹ ಮೇಷ್ಟ್ರು ಅಸತ್ಯ ಘಟನೆಗಳನ್ನು ನಾಲ್ಕು ಜನರೆದುರು ಸತ್ಯ ಎಂದು ಸಾಬೀತುಪಡಿಸುವಂತಹ ನಿಂದನೀಯ ಕೆಲಸ ಬೇರೊಂದಿಲ್ಲ ಅನ್ನಿಸುತ್ತದೆ. ಈ ಆರೋಪ ಸುಳ್ಳಾಗಿದ್ದರೆ ಮಾಟೆಯವರು ಸ್ವತಃ ಬಂದು ಅದನ್ನು ಅಲ್ಲಗೆಳೆಯಲಿ. ಆದರೆ ಹಾಗೆ ಮಾಡದೆ ಮಾಟೆಯವರು ಬಾಯಿ ಮುಚ್ಚಿ ಸುಮ್ಮನಿರಬೇಕಾದರೆ ತಪ್ಪು ಯಾರದ್ದು? ಅನ್ನುವುದನ್ನು ಸ್ವಧರ್ಮಕಾರರು ತಿಳಿದುಕೊಳ್ಳಬೇಕು. ಆದರೆ ಹಾಗೆ ಮಾಡದೆ ಮಾಟೆಯವರೇ ‘‘ವಿದ್ಯೆ ಕಲಿಸಿರುವ ಅನೇಕ ದಲಿತ ವಿದ್ಯಾರ್ಥಿಗಳೇ ನಾಳೆ ಮಾತಾಡುವವರಂತಾಗಿ ಒಂದಲ್ಲ ಒಂದು ದಿನ ಮಾಟೆಯವರೆಂದರೇನು ಅನ್ನುವುದನ್ನು ಡಾ. ಅಂಬೇಡ್ಕರ್ ಅವರಿಗೆ ತೋರಿಸಿಕೊಟ್ಟಾರು’’ ಅನ್ನುವಂತಹ ಜಂಬದ ಮಾತನ್ನಾಡಿದ್ದಾರೆ. ಮಾಟೆಯವರು ಕಲಿಸಿರುವ ದಲಿತ ವಿದ್ಯಾರ್ಥಿಗಳು ಯಾರು ಹಾಗೂ ಎಷ್ಟು ಅನ್ನುವುದನ್ನು ನಮಗೆ ಗೊತ್ತಿಲ್ಲ. ಅವರ ದಲಿತ ವಿದ್ಯಾರ್ಥಿಗಳಲ್ಲಿ ಪಾಂಡುರಂಗ ನಥುಜಿ ರಾಜಭೋಜ್ ಅನ್ನುವ ವಿದ್ಯಾರ್ಥಿಯೊಬ್ಬರಿದ್ದರು. ಆದರೆ ಅವರಂತೂ ಮಾಟೆಯವರ ಪರ ಮಾತನಾಡದೆ ಮಾಟೆಯವರ ಸುಳ್ಳುತನದ ಬಗ್ಗೆ ವಿಷ ಕಾರಿದ್ದಾರೆ ಅನ್ನುವುದು 5ನೆ ಮೇ ತಾರೀಕಿನಂದು ‘ಜ್ಞಾನಪ್ರಕಾಶ’ದಲ್ಲಿ ಅವರು ಬರೆದ ಪತ್ರದಿಂದ ಸಿದ್ಧವಾಗುತ್ತದೆ. ದೇವರದಯೆಯಿಂದ ಮಾಟೆಯವರ ಎಲ್ಲ ವಿದ್ಯಾರ್ಥಿಗಳು ಅವರ ವಿರುದ್ಧವಾಗದಿರಲಿ!

  ಮಾಟೆಯವರು ತಮ್ಮ ಇಡೀ ಜನ್ಮವನ್ನು ದಲಿತೋದ್ಧಾರಕ್ಕಾಗಿ ಅರ್ಪಿಸಿದ್ದಾರೆ ಎಂದು ಸ್ವಧರ್ಮಕಾರರು ಬರೆದಿದ್ದಾರೆ. ಇರಲೂಬಹುದು. ಮಾಟೆಯವರ ದಲಿತೋದ್ಧಾರದ ಬಗ್ಗೆ ಬರೆಯುವ ಆವಶ್ಯಕತೆ ನಮಗನಿಸಲಿಲ್ಲ. ಆದರೆ ಸ್ವಧರ್ಮದವರು ಇದರ ಬಗ್ಗೆ ಪ್ರಶ್ನೆಯೆತ್ತಿರುವಾಗ ನಮಗೂ ಆ ಸಂಬಂಧದಲ್ಲಿ ಒಂದೆರಡು ಶಬ್ದಗಳನ್ನು ಬರೆಯುವ ಅಗತ್ಯ ಕಂಡುಬಂದಿದೆ. ದಲಿತೋದ್ಧಾರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಸದ್ಗಹಸ್ಥರಲ್ಲಿ ಮಾಟೆ ಹಾಗೂ ಅವರ ಅಸ್ಪಶ್ಯತೆ ನಿವಾರಣೆ ಮಂಡಳದ ಹೆಸರು ಇತ್ತೀಚೆಗೆ ಬೆಳಕಿಗೆ ಬಂದಿದೆ. ಯಾವುದೇ ಕೆಲಸ ಮಾಡಬೇಕಾಗಿ ಬಂದರೂ ಅದು ಅವರ ಅಸ್ಪಶ್ಯತಾ ನಿವಾರಣಾ ಮಂಡಳದ ಹೆಸರಿನಲ್ಲಾಗುತ್ತದೆ. ಈ ಮಂಡಳದ ಬಗ್ಗೆ ಆಶ್ಚರ್ಯದ ಸಂಗತಿಯೇನು ಗೊತ್ತೆ? ಈ ಮಂಡಳದ ವತಿಯಿಂದ ಯಾವುದೇ ಕೆಲಸ ಮಾಡಬೇಕಾಗಿ ಬಂದಾಗ ಅದನ್ನು ಸೆಕ್ರೆಟರಿ ನಿರ್ಧರಿಸಬೇಕು, ಅಧ್ಯಕ್ಷರು ಹಸ್ತಾಕ್ಷರ ಮಾಡಬೇಕು ಹಾಗೂ ಅಸ್ಪಶ್ಯತಾ ನಿವಾರಣಾ ಮಂಡಳವು ಅದನ್ನು ಪ್ರಕಟಿಸಬೇಕು! ಹಾಗೂ ಈ ಮಂಡಳದ ಅನಿಸಿಕೆಯೇ ದಲಿತರ ಅನಿಸಿಕೆಗಳು ಅನ್ನುವುದನ್ನು ಜಗತ್ತಿಗೆ ತೋರಿಸುವುದು. ನಿಜ ಹೇಳಬೇಕೆಂದರೆ ಈ ಮಂಡಳಕ್ಕೆ ಸಭಾಸದರೂ ಇಲ್ಲ, ಶುಲ್ಕವೂ ಇಲ್ಲ! ಒಬ್ಬ ಅಧ್ಯಕ್ಷ ಹಾಗೂ ಒಬ್ಬ ಸೆಕ್ರೆಟರಿ ಇವರಿಬ್ಬರ ಬಲದ ಮೇಲೆ ಎಲ್ಲ ಹಾರಾಟ ನಡೆಯುತ್ತದೆ. ಅಷ್ಟೇಯಲ್ಲದೆ ಮಾಟೆಯವರ ಬಗ್ಗೆ ಪೇಜುಗಟ್ಟಲೆ ಬರೆಯುವ ಸ್ವಧರ್ಮದವರು ಪ್ರತ್ಯಕ್ಷವಾಗಿ ಅಸ್ಪಶ್ಯತಾ ನಿವಾರಣೆಯ ಬಗ್ಗೆ ಮಾಡಿರುವ ಘನಂದಾರಿ ಕೆಲಸವಾದರೂ ಯಾವುದು? ಅನ್ನುವುದನ್ನವರು ಹೇಳುವುದೇ ಇಲ್ಲ. ಮಾಟೆಯವರು ದಲಿತರ ಜೊತೆ ಊಟ ಮಾಡಿದರೇ? ಇಲ್ಲ ಅವರ ಮಗಳನ್ನು ತಮ್ಮ ಮನೆಯ ಸೊಸೆಯಾಗಿ ತಂದರೇ? ಅವರು ಮಾಡಿರುವುದಾದರೂ ಏನು ಅನ್ನುವುದೊಮ್ಮೆ ಗೊತ್ತಾದರೆ ಅವರ ಬಗ್ಗೆಯಿರುವ ಅನುಮಾನಗಳು ಪರಿಹಾರವಾದಾವು. ನಮಗೆ ಗೊತ್ತಿರುವಂತೆ ಮಾಟೆಯವರು ಮೈಲಿಗೆಯನ್ನು ಎಷ್ಟರಮಟ್ಟಿಗೆ ಪಾಲಿಸುತ್ತಾರೆಂದರೆ ದಲಿತರ ಸ್ವಾಗತಕ್ಕೆ ಅವರು ಮನೆಯಲ್ಲಿಯ ಒಂದು ಪ್ರತ್ಯೇಕ ಕೊಠಡಿಯನ್ನಿಟ್ಟುಕೊಂಡಿದ್ದಾರೆ. ತಮ್ಮ ಉಳಿದ ಕೋಣೆಗಳಿಗೆ ದಲಿತರನ್ನವರು ಕಾಲಿಡಗೊಡದೆ ತಾವೇ ಹೊರಗೆ ಹೋಗಿ ಮಾತನಾಡಿಸಿ ಬರುತ್ತಾರೆ. ಈ ನಮ್ಮ ಸುದ್ದಿ ಸುಳ್ಳಾದರೆ ನಮ್ಮ ಮಾತನ್ನು ನಾವು ಹಿಂದೆಗೆದುಕೊಳ್ಳುತ್ತೇವೆ. ಮಾಟೆಯವರ ಮನೆಗೆ ಹೋಗಿ ಬಂದು ಮಾಡುವ ದಲಿತನೊಬ್ಬನಿಂದಲೇ ಈ ವಿಷಯ ತಿಳಿದಿದೆ. ಹಾಗಾಗಿ ಅದು ನಿಜ. ದಲಿತೋದ್ಧಾರಕ್ಕಾಗಿ ನಿಜವಾಗಿ ದುಡಿಯುತ್ತಿರುವ ಜನರನ್ನು ಆರಿಸಿ ಸುಳ್ಳಾಡುವ ಜನರಿಗೆ ಮನೆಯ ದಾರಿ ತೋರಿಸುವುದಿದೆ. ಅದಕ್ಕೆಂದೇ ಮಾಟೆಯವರ ಬಗ್ಗೆ ನಮ್ಮ ಅನಿಸಿಕೆಗಳನ್ನು ಸ್ಪಷ್ಟವಾಗಿ ಮಂಡಿಸಿದ್ದೇನೆ. ಮಾಟೆಯವರು ಅಸ್ಪಶ್ಯತಾ ನಿವಾರಣೆಯ ತೋರಿಕೆಯನ್ನು ಯಾಕೆ ಮಾಡುತ್ತಾರೆ? ಅನ್ನುವುದನ್ನು ನಾನು ಒಮ್ಮೆ ವಿವರಿಸಿದ್ದೆ. ನಮ್ಮ ಮಾತಿಗೆ ಆಧಾರವಿದೆ ಅನ್ನುವುದು ಮಾಟೆಯವರು ಇತ್ತೀಚೆಗಷ್ಟೆ ಆಯೋಜಿಸಿದ್ದ ಮಾತಂಗ ಪರಿಷತ್ತಿನ ವರದಿಯಿಂದ (ಬೇರೆ ಪತ್ರಿಕೆಯಲ್ಲಿ ಪ್ರಕಟವಾಗಿದ್ದು) ಗೊತ್ತಾಗುತ್ತದೆ. ಕಡಿಮೆ ಬುದ್ಧಿಯಿರುವ ಜನ ಯಾವತ್ತೂ ಬೇರೆಯವರ ಬುದ್ಧಿಯನ್ನು ಬಳಸಿ ನಡೆದುಕೊಳ್ಳುತ್ತಾರೆ. ಇಂತಹವರನ್ನು ಹಿಡಿದು ಯಾವುದೇ ಸ್ವಾರ್ಥಿ ಮನುಷ್ಯನು ಸಮಾಜದಲ್ಲಿ ಬುದ್ಧಿಭೇದದ ಪಾಪಕರ್ಮವನ್ನು ಮಾಡುವ ಸಾಧ್ಯತೆಯಿರುತ್ತದೆ. ಈ ಪ್ರಕಾರದ ಬುದ್ಧಿಭೇದ ದಲಿತರಲ್ಲಿ ಕಾಣುತ್ತದೆ, ಇದನ್ನು ನಂಬಿದ ಕೇಸರಿಯವರು ದಲಿತರಲ್ಲಿ ಒಡಕುಂಟಾಗಿದೆ ಎಂದು ಸಂತೋಷದಿಂದ ಚಪ್ಪಾಳೆ ತಟ್ಟಿದ್ದಾರೆ. ಆದರೆ ಕೇಸರಿಯವರು ಈ ತಮ್ಮ ಅಸುರ ಸಂತೋಷವನ್ನು ವ್ಯಕ್ತಪಡಿಸುವ ಮೊದಲು ಮಾದಿಗರ ಪರಿಷತ್ತಿನ ಮತ್ತೊಂದು ಬದಿಯನ್ನು ಓದಿ ನೋಡಬೇಕು. ಅದರಿಂದ ಅವರಿಗೆ ಒಡಕು ಹೇಗೆ ಉಂಟಾಗುತ್ತದೆ ಅನ್ನುವುದು ಗೊತ್ತಾದೀತು. ಬ್ರಾಹ್ಮಣರಲ್ಲಿಯ ಕೆಲವು ಸ್ವಾರ್ಥಿ ಜನಗಳು ದಲಿತರ ದಾರಿಗೆ ಅಡ್ಡ ಬರದಿದ್ದರೆ ದಲಿತರಲ್ಲಿ ಎಂದೂ ಒಡಕುಂಟಾಗದು ಅನ್ನುವುದು ನಮಗೆ ಗೊತ್ತು. ಅರ್ಥದ ಅನರ್ಥ ಮಾಡಿ ವಸ್ತುಸ್ಥಿತಿಯನ್ನು ವಿಪರ್ಯಾಸಗೊಳಿಸಿ ಒಬ್ಬರ ಬಗ್ಗೆ ಮತ್ತೊಬ್ಬರ ಮನಸ್ಸಿನಲ್ಲಿ ಕಲುಷಿತ ಭಾವನೆಗಳಿದ್ದರೆ ಒಡಕುಂಟಾಗುತ್ತದೆ. ಹಾಗಾಗಬಾರದೆಂದೇ ಮಾಟೆಯವರಿಗೆ ನಮ್ಮದೊಂದು ಸೂಚನೆ, ದಲಿತರ ಬಗೆಗಿನ ನಿಮ್ಮ ಪ್ರೀತಿ ನಿಜವಾಗಿದ್ದಿರಲಿ ಸುಳ್ಳೇ ಇರಲಿ ಅವರನ್ನು ಆವರ ಪಾಡಿಗೆ ಬಿಟ್ಟು ಬಿಡಿ! ನಿಮ್ಮ ಪ್ರೀತಿ ತೋರಿಕೆಯದ್ದಾಗಿದ್ದು ನೀವು ಅವರಿಂದ ದೂರವಾಗುವುದು ನಿಮ್ಮ ಕರ್ತವ್ಯವಾಗುತ್ತದೆ. ಮಗು ನಮಗೆ ಎಷ್ಟೇ ಪ್ರೀತಿಯಿದ್ದರೂ ಯಾವತ್ತೂ ಅದನ್ನು ಎತ್ತಿಕೊಂಡೇ ಓಡಾಡಿದರೆ ಅದು ನಡೆಯಲು ಬಾರದೆ ಕುಂಟುತ್ತದೆ. ಅದನ್ನು ಬಿಟ್ಟರೆ ಮೊದಲಿಗೆ ಬಿದ್ದು ಗಾಯ ಮಾಡಿಕೊಳ್ಳುವುದು ನಿಜವಾದರೂ ಮುಂದೊಂದು ದಿನ ತನ್ನ ಕಾಲ ಮೇಲೆ ನಿಂತು ಸ್ವತಂತ್ರವಾಗುತ್ತದೆ. ಹಾಗೇನಾದರೂ ಆದರೆ ಸಾಕಟರಿಗೆ ಅಧ್ಯಕ್ಷರಾಗುವ ಅವಕಾಶ ದೊರೆತೀತು. ಇಲ್ಲದಿದ್ದರೆ ಪರಿಷತ್ತು ಸಾಕಟರ ಜಾತಿಯದ್ದು ಹಾಗೂ ಅಧ್ಯಕ್ಷರುಮಾಟೆಯವರ ಜಾತಿಯವರು ಅನ್ನುವ ಪದ್ಧತಿ ಖಾಯಂ ಆಗಿ ಬಿಡುವ ಸಾಧ್ಯತೆಯಿದೆ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)