varthabharthi

ಸಂಪಾದಕೀಯ

ದೀಪಾವಳಿಯೆಂದರೆ ಪಟಾಕಿ ಹಬ್ಬವಲ್ಲ

ವಾರ್ತಾ ಭಾರತಿ : 14 Oct, 2017

ಈ ಬಾರಿ ದೀಪಾವಳಿ ಬರುವ ಮುನ್ನವೇ ಪಟಾಕಿಗಳು ಸದ್ದು ಮಾಡುತ್ತಿವೆ. ಪಟಾಕಿಗಳ ವಿರುದ್ಧ ನ್ಯಾಯಾಲಯಗಳು ನೀಡುತ್ತಿರುವ ಪರಿಸರ ಪರ ತೀರ್ಪುಗಳನ್ನು ರಾಜಕೀಯ ವ್ಯಕ್ತಿಗಳು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸತೊಡಗಿದ್ದಾರೆ. ಕೆಲವರು ಇದಕ್ಕೆ ಕೋಮುಬಣ್ಣ ಹಚ್ಚುವುದಕ್ಕೆ ಯತ್ನಿಸುತ್ತಿರುವುದಕ್ಕೆ ನ್ಯಾಯಾಲಯವೇ ಆಕ್ಷೇಪ ವ್ಯಕ್ತಪಡಿಸಿದೆ. ರಾಜಧಾನಿ ದಿಲ್ಲಿಯ ಪರಿಸರವನ್ನು ರಕ್ಷಿಸುವ ಹಿನ್ನೆಲೆಯಲ್ಲಿ ಒಂದು ಪ್ರಯೋಗವಾಗಿ ಈ ಬಾರಿ ತಾತ್ಕಾಲಿಕವಾಗಿ ಪಟಾಕಿ ಸಿಡಿಸುವುದನ್ನು ನ್ಯಾಯಾಲಯ ನಿಷೇಧಿಸಿದೆ. ಇದೇನೂ ಪೂರ್ಣಕಾಲಿಕವಾದ ನಿಷೇಧವಲ್ಲ. ಆದರೂ ಕೆಲವು ರಾಜಕಾರಣಿಗಳು, ಪಟಾಕಿ ಸದ್ದುಗಳಿಗೂ ಹಿಂದೂ ಧರ್ಮಕ್ಕೂ ಭಾವನಾತ್ಮಕವಾಗಿ ಸಂಬಂಧವನ್ನು ತಳಕು ಹಾಕಲು ಹೊರಟಿದ್ದಾರೆ. ಇದು ಹಿಂದೂ ಧರ್ಮದ ಹಬ್ಬಗಳ ಮೇಲೆ ನ್ಯಾಯಾಲಯ ನಡೆಸುತ್ತಿರುವ ಹಸ್ತಕ್ಷೇಪ ಎಂದು ವ್ಯಾಖ್ಯಾನಿಸುವ ಪ್ರಯತ್ನಗಳನ್ನು ಕೆಲವು ರಾಜಕೀಯ ವ್ಯಕ್ತಿಗಳು ಮಾಡುತ್ತಿದ್ದಾರೆ.

ಪಟಾಕಿಗಳಿಗೆ ನಿಷೇಧ ಹೇರುವ ಕೂಗು ಮಹಾರಾಷ್ಟ್ರದಲ್ಲೂ ಕೇಳಿ ಬಂದಿದೆ. ಪಂಜಾಬ್, ಹರ್ಯಾಣ, ಚಂಡಿಗಢದಲ್ಲಿ ಮೂರು ಗಂಟೆಗಳ ಕಾಲ ಮಾತ್ರ ಪಟಾಕಿ ಸಿಡಿಸಲು ಹೈಕೋರ್ಟ್ ಅನುಮತಿ ನೀಡಿದೆ. ಹಂತಹಂತವಾಗಿ ಪಟಾಕಿ ಕುರಿತ ಜಾಗೃತಿ ದೇಶಾದ್ಯಂತ ವ್ಯಾಪಿಸುತ್ತಿರುವುದು ಸ್ವಾಗತಾರ್ಹವಾಗಿದೆ. ಆದರೆ ರಾಜಕಾರಣಿಗಳು ಮಾತ್ರ ಪಟಾಕಿಯೇ ದೀಪಾವಳಿ ಎಂಬಂತೆ ಬಿಂಬಿಸಲು ಹೊರಟಿದ್ದಾರೆ. ನಮ್ಮ ನೀರು, ನದಿ, ಕೆರೆ, ಗಾಳಿ ನಾಶವಾದರೂ ಪರವಾಗಿಲ್ಲ, ನಮ್ಮ ರಾಜಕೀಯ ಬೇಳೆ ಮಾತ್ರ ಬೇಯುತ್ತಲೇ ಇರಬೇಕು ಎನ್ನುವ ಸಣ್ಣ ಮನುಷ್ಯರಿಂದಾಗಿ ಹಬ್ಬಗಳೂ ತಮ್ಮ ತಾಜಾತನವನ್ನು ಕಳೆದುಕೊಂಡು ಮಾಲಿನ್ಯಗೊಂಡಿವೆ.

ಇತ್ತೀಚೆಗಷ್ಟೇ ಗಣೇಶ ಹಬ್ಬ ಬಂದು ಹೋಯಿತು. ಈ ಸಂದರ್ಭದಲ್ಲಿ ಗಣೇಶ ವಿಸರ್ಜನೆಯ ಕುರಿತಂತೆ ಹಲವು ನಿಯಮಗಳನ್ನು ಆಡಳಿತ ವ್ಯವಸ್ಥೆ ಮಾಡಿದಾಗ, ಕೆಲವು ರಾಜಕೀಯ ಶಕ್ತಿಗಳು ವಿರೋಧಿಸಿದವು. ಆದರೆ ನಮ್ಮ ಕೆರೆ, ಹಳ್ಳಗಳನ್ನು ಗಣೇಶ ಮೂರ್ತಿಗಳು ಯಾವ ಮಟ್ಟಕ್ಕೆ ಗಬ್ಬೆಬ್ಬಿಸುತ್ತಿವೆ ಎನ್ನುವುದನ್ನು ನಾವು ನೋಡುತ್ತಿದ್ದೇವೆ. ನೀರನ್ನು ನಾವು ಗಂಗೆ ಎಂದು ಕರೆಯುತ್ತೇವೆ. ಕೆರೆಗಳು, ನದಿಗಳು ಭಾರತೀಯರಿಗೆ ಪವಿತ್ರವಾದವುಗಳು. ಅದರಲ್ಲಿ ಜೀವಿಸುತ್ತಿರುವ ಜೀವಚರಗಳನ್ನೂ ಗೌರವಿಸುವಂತಹ ಉದಾತ್ತ ವೌಲ್ಯಗಳನ್ನು ಭಾರತೀಯರಾದ ನಾವು ಹೊಂದಿದ್ದೇವೆ. ಇಂತಹ ಸಂದರ್ಭದಲ್ಲಿ ಧಾರ್ಮಿಕ ನಂಬಿಕೆಗಳ ಹೆಸರಿನಲ್ಲಿ ನಾವೇ ಅವುಗಳ ಮಾಲಿನ್ಯಕ್ಕೆ, ನಾಶಕ್ಕೆ ಕಾರಣವಾದರೆ ಹಬ್ಬಗಳ ವೌಲ್ಯಗಳಿಗೆ ಏನು ಅರ್ಥ ಉಳಿಯಿತು.

ಇಂದು ಸಾರ್ವಜನಿಕ ಗಣೇಶೋತ್ಸವಗಳು ಪ್ರತಿಷ್ಠೆಯ ರೂಪ ಪಡೆದಿವೆ. ಆದುದರಿಂದ, ಗಣೇಶನ ಆಕಾರದಲ್ಲಿ ಜನರು ಸ್ಪರ್ಧೆಗಿಳಿಯುತ್ತಾರೆ. ಒಬ್ಬರಿಗಿಂತ ಒಬ್ಬರು ಬೃಹತ್ ಪ್ರತಿಮೆಗಳನ್ನು ನಿರ್ಮಾಣ ಮಾಡುವುದರಿಂದ, ಇವುಗಳ ವಿಸರ್ಜನೆ ಸಹಜವಾಗಿಯೇ ಮಾಲಿನ್ಯಕ್ಕೆ ಕಾರಣವಾಗುತ್ತದೆ. ದೇವರು ಅನಂತ. ಆತನ ಆಕಾರಕ್ಕೆ ತಕ್ಕ ಪ್ರತಿಮೆಯನ್ನು ನಾವೆಂದೂ ನಿರ್ಮಿಸಲಾರೆವು. ಗಣೇಶನ ಪ್ರತಿಮೆ ಎಷ್ಟು ದೊಡ್ಡದಾಗಿದ್ದರೂ ಆತನು ನಮಗೆ ಒಲಿಯುವುದು, ನಮ್ಮ ಭಕ್ತಿಯ ಎತ್ತರಕ್ಕೆ ಅನುಗುಣವಾಗಿ ಎನ್ನುವುದನ್ನು ನಾವು ಮರೆಯುತ್ತೇವೆ.

ಈ ನದಿ, ಕೆರೆ, ಕಡಲು, ವಾಯು ಇವುಗಳ ಮೇಲೆ ಎಳ್ಳಷ್ಟೂ ಕಾಳಜಿ ಗೌರವ ಇಟ್ಟುಕೊಳ್ಳದೆ ನಾವು ಆಕಾಶದೆತ್ತರ ಪ್ರತಿಮೆ ನಿರ್ಮಿಸಿ ಗದ್ದಲ ಮೆರವಣಿಗೆಗಳ ಮೂಲಕ ಗಣಪತಿಯನ್ನು ಒಲಿಸಿಕೊಳ್ಳುವುದು ಸಾಧ್ಯವಿಲ್ಲ. ಆದುದರಿಂದ, ಗಣೇಶನ ಪ್ರತಿಮೆ ನಿರ್ಮಾಣಕ್ಕೆ ಒಂದು ಮಾನದಂಡ ಇಡುವುದು ಅತ್ಯಗತ್ಯವಾಗಿದೆ. ಸಾರ್ವಜನಿಕ ಪ್ರತಿಮೆಗಳು ಸಣ್ಣ ಆಕಾರದಲ್ಲಿದ್ದಷ್ಟೂ ಪರಿಸರ ಮಾಲಿನ್ಯ ಕಡಿಮೆಯಾಗುವುದರಿಂದ ಜನರು ಆಕಾರವನ್ನು ಕಿರಿದುಗೊಳಿಸಿ ಭಕ್ತಿಯನ್ನು ಎತ್ತರಗೊಳಿಸುತ್ತಾ ಹೋಗಬೇಕಾದುದು ಇಂದಿನ ಅಗತ್ಯ. ಈ ಮೂಲಕ ಹಬ್ಬಗಳು ಸಾರುವ ವೌಲ್ಯಗಳನ್ನು ನಾವು ಗೌರವಿಸಿದಂತಾಗುತ್ತದೆ. ದೇವರ ಪ್ರೀತಿಯನ್ನೂ ಗಳಿಸಿದಂತಾಗುತ್ತದೆ.

ದೀಪಾವಳಿ ಹೆಸರೇ ಸೂಚಿಸುವಂತೆ ಬೆಳಕಿನ ಹಬ್ಬ. ಹಣತೆಗಳ ಹಬ್ಬವೆಂದೂ ಇದನ್ನು ಕರೆಯುತ್ತಾರೆ. ಕತ್ತಲೆಯಿಂದ ಬೆಳಕಿನೆಡೆಗೆ ಮುನ್ನಡೆಸುವ ಸುಂದರ ರೂಪಕವನ್ನು ತನ್ನದಾಗಿ ಸಿಕೊಂಡಿರುವ ದೀಪಾವಳಿ ಹಬ್ಬವನ್ನು ‘ಪಟಾಕಿಯ ಹಬ್ಬ’ವನ್ನಾಗಿ ಪರಿವರ್ತಿಸಿದವರು ಪಟಾಕಿ ಉದ್ಯಮಿಗಳು ಮತ್ತು ರಾಜಕಾರಣಿಗಳು. ಪಟಾಕಿ ಬೆಳಕನ್ನು ನೀಡಲಾರದು. ಹಣತೆಯಂತೆ ಬೆಳಗುವ ಶಕ್ತಿ ಅದಕ್ಕಿಲ್ಲ. ಒಂದು ಕ್ಷಣದ ಗದ್ದಲವನ್ನು ಮಾಡಿ, ಜನರ ಎದೆ ನಡುಗಿಸುವಂತೆ ಸದ್ದು ಮಾಡಿ, ಉಲ್ಕೆಯಂತೆ ಉರಿದು ಇಲ್ಲವಾಗುತ್ತದೆ. ಅದರ ಬಳಿಕ ಉಳಿಯುವುದು ಗಾಢಕತ್ತಲು. ಬೂದಿ. ಜೊತೆಗೆ ಗಂಧಕದ ದುರ್ಗಂಧ. ಪರಿಸರಾದ್ಯಂತ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಅದರ ಅವಶೇಷಗಳು. ಜನಜಂಗುಳಿಯಿರುವ ನಗರಗಳಲ್ಲಿ ಈ ಪಟಾಕಿಗಳು ಮಾಡುವ ಅನಾಹುತಗಳು ಒಂದೆರಡಲ್ಲ. ಪಟಾಕಿಯ ಹೆಸರಿನಲ್ಲಿ ಸಿಡಿಸಲ್ಪಡುವ ಗರ್ನಾಲುಗಳ ಸದ್ದಿಗೆ ದುರ್ಬಲರ ಎದೆ ಒಡೆದೇ ಹೋಗಬೇಕು.

ಆಸ್ಪತ್ರೆಗಳ ಪಕ್ಕದಲ್ಲಿ ಇಂತಹ ಪಟಾಕಿಯ ಸದ್ದು ರೋಗಿಗಳಿಗೆ, ವೃದ್ಧರಿಗೆ ಅಪಾರ ಯಾತನೆಯನ್ನುಂಟು ಮಾಡುತ್ತದೆ. ‘ಹಬ್ಬ ಯಾವತ್ತು ಬರುತ್ತದೆ’ ಎಂದು ಕಾಯುತ್ತಿರುವವರು ‘ಹಬ್ಬ ಯಾವತ್ತು ಮುಗಿಯುತ್ತದೆ’ ಎಂದು ಕಾಯುವಂತೆ ಮಾಡುತ್ತವೆ ಈ ಎದೆ ಬಿರಿವ ಪಟಾಕಿ ಸದ್ದುಗಳು. ಈ ಪಟಾಕಿಯಿಂದಾಗಿ ಪ್ರತೀ ದೀಪಾವಳಿಯ ಸಂದರ್ಭದಲ್ಲಿ ಕಣ್ಣು ಕಳೆದುಕೊಳ್ಳುತ್ತಿರುವ ಮಕ್ಕಳ ಸಂಖ್ಯೆಯೂ ಹೆಚ್ಚುತ್ತಿವೆ. ಬೆಳಕು ನೀಡಬೇಕಾದ ದೀಪಾವಳಿ ಮಕ್ಕಳ ಬದುಕಿನಲ್ಲಿ ಶಾಶ್ವತ ಕತ್ತಲನ್ನು ಬಿತ್ತುತ್ತಿರುವುದು ಕಂಡೂ ಮಕ್ಕಳ ಕಣ್ಣುಗಳಿಗಿಂತ ಪಟಾಕಿಯೇ ಹೆಚ್ಚು ಎಂದು ಬೀದಿಗಿಳಿದು ರಂಪ ಹಿಡಿದರೆ, ಅದು ದೀಪಾವಳಿ ಹಬ್ಬದ ಸಂದೇಶಕ್ಕೆ ನಾವು ಮಾಡುವ ಅವಮಾನವಾಗಿದೆ.

ಪಟಾಕಿ ಉದ್ಯಮ ಹತ್ತು ಹಲವು ಕಾಳ ಕೈಗಳಿಂದ ಸುತ್ತುವರಿಯಲ್ಪಟ್ಟಿದೆ. ಬಾಲಕಾರ್ಮಿಕರು ಮತ್ತು ಮಹಿಳೆಯರೇ ಈ ಅಪಾಯಕಾರಿ ಕೆಲಸದಲ್ಲಿ ಹೆಚ್ಚು ಬಳಕೆಯಾಗುತ್ತಿದ್ದಾರೆ. ಪ್ರತೀ ವರ್ಷ ಪಟಾಕಿ ಕಾರ್ಖಾನೆಗಳಲ್ಲಿ ದುರಂತಗಳು ಸಂಭವಿಸುತ್ತಲೇ ಇರುತ್ತವೆ ಮತ್ತು ಮಕ್ಕಳು, ಮಹಿಳೆಯರು ಪ್ರಾಣಗಳನ್ನು ಕಳೆದುಕೊಳ್ಳುತ್ತಲೇ ಇರುತ್ತಾರೆ. ಕೆಲವು ಪಟಾಕಿ ಕಾರ್ಖಾನೆಗಳಂತೂ ಹೆಸರಿಗಷ್ಟೇ ಪಟಾಕಿಯನ್ನು ತಯಾರಿಸುತ್ತವೆ. ಆಳದಲ್ಲಿ, ದುಷ್ಟ ಶಕ್ತಿಗಳಿಗೆ ಸ್ಫೋಟಕಗಳು ಇಲ್ಲಿಂದಲೇ ಪೂರೈಕೆಯಾಗುತ್ತವೆ. ಧರ್ಮ, ಹಬ್ಬ, ಪಟಾಕಿ ಮೊದಲಾದ ಮುಖವಾಡಗಳಲ್ಲಿ ಇಲ್ಲಿ ಸ್ಫೋಟಕಗಳನ್ನು ತಯಾರಿಸಿ ದೇಶವಿರೋಧಿ ಕೃತ್ಯಗಳಿಗೆ ಬಳಸಲಾಗುತ್ತಿದೆ. ಅಷ್ಟೇ ಅಲ್ಲ, ಪಟಾಕಿ ದಾಸ್ತಾನುಗಳ ಹೆಸರಲ್ಲಿ ಕೆಲವು ಉಗ್ರವಾದಿ ಸಂಘಟನೆಗಳು ಸ್ಫೋಟಕಗಳನ್ನು ಗೋದಾಮುಗಳಲ್ಲಿ ಸಂಗ್ರಹಿಸಿಟ್ಟ ಉದಾಹರಣೆಗಳಿವೆ.

ಈ ಎಲ್ಲ ಕರಾಳ ಶಕ್ತಿಗಳು ದೀಪಾವಳಿ ಹಬ್ಬವನ್ನು ತಮಗೆ ಪೂರಕವಾಗಿ ಬಳಸಿಕೊಂಡು, ಜನರ ಬದುಕಿನಲ್ಲಿ ಕತ್ತಲನ್ನು ಬಿತ್ತಲು ಸಂಚು ಹೂಡುತ್ತಿರುವ ಕುರಿತಂತೆ ನಾವೆಲ್ಲರೂ ಜಾಗೃತವಾಗಬೇಕಾಗಿದೆ. ಆದುದರಿಂದ ದೀಪಾವಳಿ ಹಬ್ಬದಲ್ಲಿ ಎಂದಲ್ಲ, ಯಾವುದೇ ಹಬ್ಬ ಸಂಭ್ರಮಗಳಲ್ಲಿ ಪಟಾಕಿಗಳ ಬಳಕೆಯನ್ನು ಹಂತಹಂತವಾಗಿ ಇಲ್ಲವಾಗಿಸುತ್ತಾ ಹೋಗಬೇಕು. ಈ ಬಾರಿಯ ನಮ್ಮ ದೀಪಾವಳಿ ಹಣತೆಯ ಬೆಳಕಿನ ಧ್ಯಾನವಾಗಲಿ. ವೌನವಾಗಿ ಜಗವನ್ನು ಬೆಳಗುವ ಹಣತೆ ನಮ್ಮ ಅಂತರಂಗದ ಕತ್ತಲನ್ನು ದೂರವಾಗಿಸಲಿ. ನಮ್ಮ ಹಬ್ಬದ ಸಂಭ್ರಮ ಆ ವೌನದೊಳಗೆ ಜೀವಪಡೆಯಲಿ. ನಮ್ಮ ಮಕ್ಕಳನ್ನು ಖುಷಿ ಪಡಿಸಲು ಪಟಾಕಿ ಸುಡಲೆಂದು ಇಟ್ಟ ದುಡ್ಡನ್ನು ನೆರೆಹೊರೆಯ ಬಡಮಕ್ಕಳಿಗೆ ಬಟ್ಟೆ ಬರೆ, ಚೀಲಬಳಪಗಳನ್ನು ಉಡುಗೊರೆಯಾಗಿ ಕೊಟ್ಟು ಅವರ ಕಣ್ಣಲ್ಲಿ ಖುಷಿಯ ಹಣತೆಗಳನ್ನು ಬೆಳಗೋಣ. ಅದರ ಬೆಳಕಲ್ಲಿ ನಮ್ಮ ಮಕ್ಕಳ ದೀಪಾವಳಿಯನ್ನು ಇನ್ನಷ್ಟು ಅರ್ಥಪೂರ್ಣಗೊಳಿಸೋಣ. ಎಲ್ಲರಿಗೂ ದೀಪಾವಳಿ ಶುಭಾಶಯಗಳು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)