varthabharthi

ವಿಶೇಷ-ವರದಿಗಳು

ಶೇರುಗಳಲ್ಲಿ ಹೂಡಿಕೆ ಮಾಡಲು ಬಯಸಿದ್ದೀರಾ? ಈ ಟಿಪ್ಸ್ ನೆನಪಿಟ್ಟುಕೊಳ್ಳಿ

ವಾರ್ತಾ ಭಾರತಿ : 14 Oct, 2017

ಸಾಮಾನ್ಯವಾಗಿ ಹೆಚ್ಚಿನ ಜನರು ಉಳಿತಾಯದ ಹಣವನ್ನು ಬ್ಯಾಂಕುಗಳಲ್ಲಿ ಠೇವಣಿಯಾಗಿರಿಸುತ್ತಾರೆ. ಆದರೆ ದಿನೇದಿನೇ ಇಂತಹ ಠೇವಣಿಗಳ ಮೇಲೆ ಬ್ಯಾಂಕುಗಳು ನೀಡುವ ಬಡ್ಡಿದರಗಳು ಇಳಿಯುತ್ತಲೇ ಇವೆ. ಹೀಗಾಗಿ ಹೆಚ್ಚಿನ ಪ್ರತಿಫಲ ನೀಡುವ ಹೂಡಿಕೆಗಳತ್ತ ಜನರ ಗಮನ ಹರಿಯುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಶೇರುಗಳು ಅತ್ಯುತ್ತಮ ಪ್ರತಿಫಲವನ್ನು ನೀಡುತ್ತಿವೆ. ದೇಶದ ಎರಡು ಪ್ರಮುಖ ಶೇರು ವಿನಿಮಯ ಕೇಂದ್ರಗಳಾದ ಬಿಎಸ್‌ಇ ಮತ್ತು ಎನ್‌ಎಸ್‌ಇಗಳ ಸೂಚಿಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸಾರ್ವಕಾಲಿಕ ಏರಿಕೆಯನ್ನು ದಾಖಲಿಸಿವೆ. ಭವಿಷ್ಯದಲ್ಲಿಯೂ ಶೇರು ಮಾರುಕಟ್ಟೆಯಲ್ಲಿ ತೇಜಿಯ ವಾತಾವರಣವನ್ನು ಶೇರು ಪಂಡಿತರು ನಿರೀಕ್ಷಿಸಿದ್ದಾರೆ. ಸರಿಯಾದ ಶೇರುಗಳಲ್ಲಿ ಹೂಡಿಕೆ ಮಾಡಿದರೆ ವಾರ್ಷಿಕ ಶೇ.15ರಿಂದ 20ರಷ್ಟು ಪ್ರತಿಫಲಕ್ಕೆ ಮೋಸವಿಲ್ಲ. ಅದೃಷ್ಟವಿದ್ದರೆ ನಿಮ್ಮ ಹೂಡಿಕೆ ಕೆಲವೇ ತಿಂಗಳುಗಳಲ್ಲಿ ದುಪ್ಪಟ್ಟು ಆಗಲೂಬಹುದು. ಆದರೆ ಶೇರುಗಳಲ್ಲಿ ವ್ಯವಹಾರ ಅಷ್ಟು ಸುಲಭವಲ್ಲ. ಶೇರು ಮಾರುಕಟ್ಟೆಯ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳುತ್ತಿರುವಂತೆ ಶೇರುಗಳಲ್ಲಿ ಹೂಡಿಕೆಯೂ ಒಂದು ವೃತ್ತಿ ಎನ್ನುವುದು ಗೊತ್ತಾಗುತ್ತದೆ. ಆದರೆ ಶೇರುಗಳಲ್ಲಿ ಹೂಡಿಕೆ ಮಾಡುವ ಮುನ್ನ ಕೆಲವು ಮೂಲಭೂತ ಅಂಶಗಳನ್ನು ಮತ್ತು ಶೇರು ಮಾರುಕಟ್ಟೆಯೊಂದಿಗೆ ತಳುಕು ಹಾಕಿಕೊಂಡಿರುವ ಅಪಾಯಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ.

ಶೇರು ಮಾರುಕಟ್ಟೆಯ ಒಳಸುಳಿಗಳನ್ನು ಅರಿತುಕೊಳ್ಳುವುದು ಹೊಸ ಹೂಡಿಕೆದಾರರಿಗೆ ಕಬ್ಬಿಣದ ಕಡಲೆಯಾಗಬಹುದು. ಶೇರು ಮಾರುಕಟ್ಟೆಯ ಬಗ್ಗೆ ತಿಳಿದುಕೊಳ್ಳಲು ಮತ್ತು ಶೇರುಗಳಲ್ಲಿ ನಿಮ್ಮ ಹೂಡಿಕೆಯನ್ನು ಆರಂಭಿಸಲು ನೆರವಾಗುವ ಕೆಲವು ಅಗತ್ಯದ ಮಾಹಿತಿಗಳಿಲ್ಲಿವೆ.

ಉಳಿತಾಯದ ಹಣದ ಹೂಡಿಕೆ ಬೇಡ

ಶೇರು ಮಾರುಕಟ್ಟೆಗಳು ಹೆಚ್ಚಿನ ಅಪಾಯಗಳನ್ನೊಳಗೊಂಡಿರುವ ಹೂಡಿಕೆ ಸಾಧನ ಗಳಾಗಿದ್ದು, ಇಲ್ಲಿ ನಿಮ್ಮ ಮೂಲ ಬಂಡವಾಳವನ್ನು ವಾಪಸ್ ಪಡೆಯುತ್ತೀರಿ ಎನ್ನುವುದು ಗ್ಯಾರಂಟಿಯಿಲ್ಲ. ಹೀಗಾಗಿ ಅಧಿಕ ಪ್ರತಿಫಲದ ಆಮಿಷಗಳಿಂದ ದೂರ ಉಳಿಯುವುದು ಒಳ್ಳೆಯದು. ನಿಮ್ಮ ಬಳಿ ಸುರಕ್ಷಿತವಾದ ಇತರ ಸಾಕಷ್ಟು ಉಳಿತಾಯಗಳಿದ್ದರೆ ಮಾತ್ರ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ. ಮೊದಲು ನಿಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸಿಕೊಂಡು ಬಳಿಕ ನೀವು ಅಪಾಯಕ್ಕೆ ಒಡ್ಡಿಕೊಳ್ಳಬಹುದು ಮತ್ತು ಶೇರು ಮಾರುಕಟ್ಟೆಯತ್ತ ಹೆಜ್ಜೆಯನ್ನಿರಿಸಬಹುದು. ನೆನಪಿಡಿ, ಸಾಲ ಮಾಡಿ ಅದನ್ನು ಶೇರುಗಳಲ್ಲಿ ಹೂಡಿಕೆ ಮಾಡುವ ದುಃಸ್ಸಾಹಸ ಬೇಡವೇ ಬೇಡ. ನಿಮ್ಮದೇ ಆದ ಉಳಿತಾಯದ ಹೆಚ್ಚುವರಿ ಹಣವಿದ್ದರೆ ಮಾತ್ರ ಶೇರು ಮಾರುಕಟ್ಟೆಯ ಸಹವಾಸ ಮಾಡಿ.

ಹೂಡಿಕೆಯಲ್ಲಿ ಶಿಸ್ತು ಕಾಯ್ದುಕೊಳ್ಳಿ

ಶೇರು ಮಾರುಕಟ್ಟೆಯಲ್ಲಿ ಶೇರುಗಳ ಬೆಲೆಗಳ ಏರಿಳಿತಗಳು ಹೊಸದೇನಲ್ಲ. ಪೂರಕ ವಾದ ಸಣ್ಣ ಸುದ್ದಿಯಿದ್ದರೂ ಸಾಕು, ಶೇರುಗಳ ಬೆಲೆಗಳು ಮೇಲೇರುತ್ತವೆ. ಮಾರಕವಾದ ಸಣ್ಣಸುದ್ದಿಯಿದ್ದರೂ ಬೆಲೆಗಳು ಪ್ರಪಾತಕ್ಕಿಳಿಯುತ್ತವೆ. ವಿಚಿತ್ರವೆಂದರೆ ಕೆಲವೊಮ್ಮೆ ಶೇರುಗಳ ಬೆಲೆಗಳು ಏರಲು ಮತ್ತು ಇಳಿಯಲು ಕಾರಣಗಳೂ ಬೇಕಾಗಿಲ್ಲ. ಮಾರುಕಟ್ಟೆಯಲ್ಲಿನ ಏರಿಳಿತಗಳು ಕೆಲವೊಮ್ಮೆ ಹೂಡಿಕೆದಾರರು ತಮ್ಮ ಹಣವನ್ನು ಕಳೆದುಕೊಳ್ಳಲು ಕಾರಣ ವಾಗುತ್ತವೆ. ಅಲ್ಲದೆ ಇಂತಹ ಸಂದರ್ಭದಲ್ಲಿ ಮಾರುಕಟ್ಟೆಯ ಜಾಡು ಹಿಡಿಯುವುದೇ ಕಷ್ಟವಾಗುತ್ತದೆ. ಯಾವಾಗ ಒಂದು ಶೇರನ್ನು ಖರೀದಿಸಬೇಕು ಮತ್ತು ಯಾವಾಗ ಅದನ್ನು ಮಾರಾಟ ಮಾಡಿ ಲಾಭವನ್ನು ಜೇಬಿಗೆ ಹಾಕಿಕೊಳ್ಳಬೇಕು ಎನ್ನುವ ಕಲೆ ಇಲ್ಲಿ ಎಲ್ಲರಿಗೂ ಸಿದ್ಧಿಸುವುದಿಲ್ಲ. ಹೀಗಾಗಿ ಹಣ ಕಳೆದುಕೊಳ್ಳುವುದನ್ನು ತಪ್ಪಿಸಲು ಹೂಡಿಕೆಯಲ್ಲಿ ಶಿಸ್ತು ಅತಿ ಮುಖ್ಯವಾಗಿದೆ. ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್(ಸಿಪ್)ಗಳಲ್ಲಿ ಹೂಡಿಕೆ ಇದಕ್ಕೆ ಏಕಮಾತ್ರ ಮಾರ್ಗವಾಗಿದೆ. ನಿಮ್ಮ ಪೋರ್ಟ್‌ಫೋಲಿಯೊ ಅಥವಾ ಹೂಡಿಕೆಗಳ ಕುರಿತು ಶಿಸ್ತು ಮತ್ತು ಅವುಗಳ ಮೇಲೆ ಸೂಕ್ತ ನಿಗಾ ಇದ್ದರೆ ಅಧಿಕ ಲಾಭ ಗಳಿಸುವ ಅವಕಾಶಗಳು ಉಜ್ವಲವಾಗಿರುತ್ತವೆ.

ಅಪಾಯ ಮತ್ತು ಹೂಡಿಕೆಯನ್ನು ಜಾಣತನದಿಂದ ನಿರ್ವಹಿಸಿ

 ಓರ್ವ ಹೂಡಿಕೆದಾರನಾಗಿ ಮಾರುಕಟ್ಟೆಯನ್ನು ನಿಯಂತ್ರಿಸಲು ನಿಮಗೆ ಸಾಧ್ಯವಿಲ್ಲ, ಆದರೆ ನೀವು ನಡೆಸುವ ಪ್ರತಿಯೊಂದು ವಹಿವಾಟಿನಲ್ಲಿಯೂ ನಿಮ್ಮ ಹಣವನ್ನು ನೀವು ಸೂಕ್ತವಾಗಿ ನಿರ್ವಹಿಸಬಹುದು. ನಿಮಗೆ ಶೇರು ವ್ಯವಹಾರದ ಕೌಶಲ್ಯ ಸಿದ್ಧಿಸಿದ್ದರೂ ಅದು ಕೆಲವೊಮ್ಮೆ ಯಾವುದೇ ಉಪಯೋಗಕ್ಕೆ ಬರುವುದಿಲ್ಲ. ನೀವು ಖರೀದಿಸಿದ ಬಳಿಕ ಶೇರುಗಳ ಬೆಲೆಗಳು ಇಳಿಯಬಹುದು. ಮತ್ತೆ ಮೇಲೇರಬಹುದೆಂದು ನೀವು ಕಾಯುತ್ತಿದ್ದರೆ ಅದು ಇನ್ನೂ ಇಳಿಯುತ್ತಲೇ ಹೋಗಬಹುದು. ಮುಂದೆ ಮತ್ತೆ ಏರಬಹುದು ಎಂದು ಹೆಚ್ಚಿನವರು ಶೇರುಗಳನ್ನು ಮಾರಾಟ ಮಾಡುವುದಿಲ್ಲ. ಆಗ ಹಣವು ಹೂಡಿಕೆಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತದೆ. ಇದನ್ನು ತಪ್ಪಿಸಲು ಶೇರು ಮಾರುಕಟ್ಟೆಯಲ್ಲಿ ಲಭ್ಯವಿರುವ ‘ಸ್ಟಾಪ್ ಲಾಸ್’ ಅವಕಾಶವನ್ನು ಬಳಸಿಕೊಳ್ಳುವುದು ಅತ್ಯುತ್ತಮ ವಿಧಾನವಾಗಿದೆ. ನಿಮ್ಮ ಹೂಡಿಕೆಯ ಮೇಲೆ ಶೇ.5-10 ನಷ್ಟವನ್ನು ಭರಿಸಲು ನೀವು ಸಿದ್ಧರಿದ್ದರೆ ಅಷ್ಟಕ್ಕೆ ಸ್ಟಾಪ್‌ಲಾಸ್ ಹಾಕಿಟ್ಟರೆ ನಿಮ್ಮ ಶೇರುಗಳು ಆ ಮಟ್ಟಕ್ಕೆ ಇಳಿದರೆ ಅವು ಸ್ವಯಂ ಮಾರಾಟವಾಗುತ್ತವೆ ಮತ್ತು ನಿಮಗೆ ಹೆಚ್ಚಿನ ನಷ್ಟವಾಗುವುದು ತಪ್ಪುತ್ತದೆ.

ಶೇರುಗಳಲ್ಲಿ ವೈವಿಧ್ಯತೆಯಿರಲಿ

ಶೇರು ಮಾರುಕಟ್ಟೆಗಳಲ್ಲಿ ವಿವಿಧ ಕ್ಷೇತ್ರಗಳ ಮತ್ತು ವಿವಿಧ ಸೇವೆಗಳನ್ನು ಒದಗಿಸುವ ಕಂಪನಿಗಳ ಶೇರುಗಳು ಲಭ್ಯವಿವೆ. ನಿಮ್ಮ ಶೇರುಗಳು ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿ ದ್ದಾಗಿರಲಿ. ಹೀಗೆ ಮಾಡಿದಾಗ ಯಾವುದೇ ಒಂದು ಕ್ಷೇತ್ರದ ಶೇರುಗಳ ಬೆಲೆಗಳು ಇಳಿದರೂ ಇನ್ನೊಂದು ಕ್ಷೇತ್ರದ ಶೇರುಗಳ ಬೆಲೆಗಳಲ್ಲಿ ಏರಿಕೆಯಾಗಬಹುದು ಮತ್ತು ನಿಮ್ಮ ಹೂಡಿಕೆಯಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಬಹುದು. ಹೆಚ್ಚು ಖಚಿತ ಪ್ರತಿಫಲವನ್ನು ನೀಡುವ ಕಂಪನಿಗಳ ಶೇರುಗಳ ಬಗ್ಗೆ ನಿಮ್ಮ ಆದ್ಯತೆಯಿರಲಿ. ಇಂತಹ ಶೇರುಗಳು ದುಬಾರಿಯಾಗಿದ್ದರೂ ನಿಮ್ಮ ಹೂಡಿಕೆ ಸುಭದ್ರವಾಗಿರುತ್ತದೆ. ಜೊತೆಗೆ ಭವಿಷ್ಯದಲ್ಲಿ ಒಳ್ಳೆಯ ಬೆಳವಣಿಗೆ ಕಾಣಬಹುದು ಎಂಬ ವಿಶ್ವಾಸವಿದ್ದರೆ ಹೊಸ ಕಂಪನಿಗಳ ಶೇರುಗಳಲ್ಲಿಯೂ ಹಣವನ್ನು ತೊಡಗಿಸಬಹುದು. 1,2 ರೂ.ಗಳಂತಹ, ಪೆನ್ನಿ ಸ್ಟಾಕ್ಸ್ ಎಂದು ಕರೆಯಲಾಗುವ ಶೇರುಗಳನ್ನು ಖರೀದಿಸಲೇಬೇಡಿ.

ಹೂಡಿಕೆ ದೀರ್ಘಾವಧಿಯದ್ದಾಗಿರಲಿ

ಅಲ್ಪಾವಧಿಯಲ್ಲಿ ಶೇರು ಮಾರುಕಟ್ಟೆಗಳು ಏರಿಳಿತಗಳನ್ನು ತೋರಿಸಬಹುದು, ಆದರೆ ದೀರ್ಘಾವಧಿಯ ಹೂಡಿಕೆಗಳಿಗೆ ಅವು ಉತ್ತಮ ಪ್ರತಿಫಲಗಳನ್ನು ನೀಡುತ್ತವೆ. ಹೀಗಾಗಿ ಸದ್ಯೋಭವಿಷ್ಯದಲ್ಲಿ ನಿಮಗೆ ಹಣದ ಅಗತ್ಯವಿಲ್ಲದಿದ್ದರೆ ಒಳ್ಳೆಯ ಕಂಪನಿಗಳ ಶೇರುಗಳಲ್ಲಿ ದೀರ್ಘಾವಧಿಗೆ ಹೂಡಿಕೆ ಮಾಡಿ. ಶೇರು ಮಾರುಕಟ್ಟೆಯಲ್ಲಿರುವ ಡೇ ಟ್ರೇಡಿಂಗ್‌ನ ಗೋಜಿಗೆ ಹೋಗಬೇಡಿ.

ಶೇರು ಒಂದು ಕಂಪನಿ, ಮರೆಯಬೇಡಿ

 ನೀವು ಲಾಭ ಅಥವಾ ನಷ್ಟವನ್ನು ಮಾಡಿ, ಆದರೆ ಶೇರುಗಳಲ್ಲಿ ಹೂಡಿಕೆಯ ಮೂಲಭೂತ ಪರಿಕಲ್ಪನೆಯನ್ನು ನೆನಪಿನಲ್ಲಿಟ್ಟುಕೊಳ್ಳುವುದು ಮುಖ್ಯ. ನೀವು ವಿಶ್ವಾಸವಿಟ್ಟಿರುವ ಮತ್ತು ಭವಿಷ್ಯದಲ್ಲಿ ಬೆಳೆಯುತ್ತದೆ ಎಂದು ಆಶಿಸಿರುವ ಕಂಪನಿಯ ಶೇರುಗಳನ್ನು ನೀವು ಖರೀದಿಸುತ್ತೀರಿ. ಹೀಗಾಗಿ ಶೇರು ಖರೀದಿಯನ್ನು ಒಂದು ಆಟ ಅಥವಾ ಜೂಜು ಎಂದು ಭಾವಿಸಬೇಡಿ. ನಿಮ್ಮ ಹಣವು ಕಂಪನಿಯಲ್ಲಿ ಹೂಡಿಕೆಯಾಗಿ ರುತ್ತದೆ ಮತ್ತು ಅದು ವೃದ್ಧಿಯಾಗುವಂತೆ ಕಂಪನಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಹೀಗಾಗಿ ಶೇರು ಖರೀದಿಯ ಮುನ್ನ ಕಂಪನಿಯ ಹಣಕಾಸು ನಿರ್ವಹಣೆ, ಭವಿಷ್ಯದಲ್ಲಿ ಅದರ ಉತ್ಪನ್ನಗಳಿಗೆ ಬೇಡಿಕೆ ಇತ್ಯಾದಿಗಳ ಬಗ್ಗೆ ಕೂಲಂಕಶವಾದ ಅಧ್ಯಯನ ಮಾಡಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)