varthabharthi

ದಿಲ್ಲಿ ದರ್ಬಾರ್

ದಿಲ್ಲಿ ದರ್ಬಾರ್

ವಾರ್ತಾ ಭಾರತಿ : 15 Oct, 2017

ಕೇರಳ ಫ್ಲಾಪ್, ಅಮಿತ್ ಶಾ ಗರಂ
ಬಿಜೆಪಿ ಚಾಣಕ್ಯರ ತಂತ್ರಗಳು ಫಲಿಸುತ್ತಿಲ್ಲ. ಕೇರಳದಲ್ಲಿ ಇಂಥ ಫ್ಲಾಪ್ ಶೋ, ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರನ್ನು ವ್ಯಗ್ರರನ್ನಾಗಿಸಿದೆ. ಎಡಪಂಥೀಯ ‘ಜಿಹಾದಿ ಹಿಂಸೆ’ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ಜನರಕ್ಷಾ ಯಾತ್ರೆಗೆ ಚಾಲನೆ ನೀಡಿದ ತಕ್ಷಣ ತಮ್ಮ ಕೇರಳ ಪ್ರವಾಸ ಮೊಟಕುಗೊಳಿಸಿದ್ದಾರೆ. ಶಾ ಮಾಧ್ಯಮ ವಿಭಾಗ ವಿರುದ್ಧವೂ ಕಿಡಿ ಕಾರಿದ್ದಾರೆ ಎನ್ನಲಾಗಿದೆ. ರಾಷ್ಟ್ರೀಯ ಚಾನೆಲ್‌ಗಳು ಯಾತ್ರೆಯ ನೇರ ಪ್ರಸಾರ ಮಾಡುವ ಬದಲು ದೇರಾ ಸಚ್ಚಾ ಪಂಥದ ತಲೆಮರೆಸಿಕೊಂಡಿದ್ದ ಸದಸ್ಯೆ ಹನಿಪ್ರೀತ್ ಕೌರ್ ಶರಣಾಗತಿ ಬಗೆಗಿನ ತಿರುಚಿದ ವರದಿಗಳನ್ನು ಪ್ರಸಾರ ಮಾಡಿವೆ ಎನ್ನುವುದು ಅವರ ಆಕ್ಷೇಪ. ಆದರೆ ಶಾ ಯಾವ ಸಬೂಬು ಕೂಡಾ ಕೇಳುವ ಸ್ಥಿತಿಯಲ್ಲಿಲ್ಲ. ಸರಿಯಾಗಿ ಮಾಧ್ಯಮಗಳ ಮನವೊಲಿಸಿದ್ದರೆ, ಕ್ಯಾಮರಾಗಳು ಬಿಜೆಪಿ ಕಡೆಗೆ ಫೋಕಸ್ ಆಗುತ್ತಿದ್ದವು ಎನ್ನುವುದು ಅವರ ಅಭಿಮತ. ಕೇರಳ ಪತ್ರಿಕೆಗಳು ಕೂಡಾ ಯಾತ್ರೆಯನ್ನು ನಿರ್ಲಕ್ಷಿಸಿದ್ದವು ಎನ್ನುವ ವಾಸ್ತವ ಶಾ ಅವರಿಗೆ ತಿಳಿದಿದ್ದರೆ ಸಿಟ್ಟು ಮತ್ತಷ್ಟು ಹೆಚ್ಚುತ್ತಿತ್ತು.


ಲಾಲು ಬಾಯ್ಚಳಕ!
ಸ್ವಯಂ ಬಿಂಬಿಸಿಕೊಳ್ಳುವುದಕ್ಕಿಂತ ಉತ್ತಮ ತಂತ್ರ ಬೇರೊಂದಿಲ್ಲ ಎನ್ನುವುದು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಸಿದ್ಧಾಂತ. ಲಾಲು ರಾಜಕೀಯ ಶಬ್ದಕೋಶಕ್ಕೆ ಗಣನೀಯ ಹಾಗೂ ಸ್ಮರಣೀಯ ಕೊಡುಗೆ ನೀಡಿದವರು. ಲಾಲೂ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ, ಬಿಹಾರ ರಾಜಕೀಯದಲ್ಲಿ ಅವರ ಮಾತೇ ಅಂತಿಮವಾಗಿದ್ದ ಸಂದರ್ಭದಲ್ಲಿ, ‘‘ಜಬ್ ತಕ್ ಸಮೋಸೆ ಮೆ ರಹೇಗಾ ಆಲೂ, ಬಿಹಾರ್ ಪರ್ ರಾಜ್ ಕರೇಗಾ ಲಾಲು’’ ಎಂದು ಬೀಗಿದ್ದವರು. ತಮ್ಮ ಸುದೀರ್ಘ ಜೀವನದ ಬಗ್ಗೆ ಅತಿವಿಶ್ವಾಸ ಹೊಂದಿದ್ದ ಲಾಲು ರಾಜಕೀಯ ಜೀವನದಲ್ಲಿ ಯಶಸ್ಸು ಹಾಗೂ ವೈಫಲ್ಯ ಎರಡನ್ನೂ ಕಂಡವರು. ಪ್ರಸ್ತುತ ಪ್ರತಿಕೂಲ ಪರಿಸ್ಥಿತಿಯಲ್ಲೂ, ಲಾಲು ನಾಲಿಗೆ ಇಂದಿಗೂ ಜಾಣ್ಮೆಯಿಂದ ತಿರುಗುತ್ತದೆ. ಅವರ ಸ್ನೇಹಿತ-ವಿರೋಧಿ ಹಾಗೂ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಆರೆಸ್ಸೆಸ್ ಶಿಬಿರಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಾಗ ಲಾಲೂ ಹೇಳಿದ್ದು, ‘ಮುಹ್ ಮೆ ರಾಮ್, ದಿಮಾಗ್ ಮೇ ನಾಥೂರಾಂ, ಇಸಿಲಿಯೇ ನಿತೀಶ್ ಬನಾ ಪತ್ಲೂ ರಾಂ’ ಎಂದಿದ್ದರು.


ರಾಹುಲ್ ಪಟ್ಟಾಭಿಷೇಕ
 ವದಂತಿಗಳನ್ನು ನಂಬಬಹುದಾದರೆ, ದೀಪಾವಳಿ ಬಳಿಕ ರಾಹುಲ್‌ಗಾಂಧಿಯವರನ್ನು ಪಕ್ಷದ ಅಧ್ಯಕ್ಷ ಹುದ್ದೆಗೆ ಪಟ್ಟಾಭಿಷೇಕ ಮಾಡಲಾಗುತ್ತದೆ, ಪಟ್ಟಾಭಿಷೇಕ ಸಮಾರಂಭಕ್ಕೆ 24, ಅಕ್ಬರ್ ರಸ್ತೆಯಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತವೆ. ದೇಶದಲ್ಲಿ ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ, ಪಕ್ಷಾಧ್ಯಕ್ಷರ ಪಟ್ಟಾಭಿಷೇಕವನ್ನು ಹಬ್ಬದ ರೂಪದಲ್ಲಿ ನಿರ್ವಹಿಸಲು ಕಾಂಗ್ರೆಸ್ ತಂತ್ರಗಾರರು ಕಾರ್ಯತಂತ್ರ ರೂಪಿಸಿದ್ದಾರೆ. ಒಂದು ಮೂಲದ ಪ್ರಕಾರ, ಪ್ರಸಕ್ತ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ರಾಜಮಾತೆಯ ಸ್ಥಾನಮಾನ ನೀಡಲಾಗುತ್ತದೆ. ಇವರನ್ನು ಜೀವನ ಪರ್ಯಂತ ಪಕ್ಷದ ಮಹಾಪೋಷಕರಾಗಿ ನಿಯೋಜಿಸಲಾಗುತ್ತದೆ. ಇನ್ನೊಂದು ಸಲಹೆಯೆಂದರೆ, ರಾಹುಲ್ ಗಾಂಧಿಯವರನ್ನು ಪಕ್ಷಭಕ್ತನನ್ನಾಗಿ ಬಿಂಬಿಸಿ, ಅಧಿಕಾರಕ್ಕಾಗಿ ಎಂದೂ ಹಾತೊರೆಯುವವರಲ್ಲ ಎನ್ನುವುದನ್ನು ನಿರೂಪಿಸುವುದು. ಇದಕ್ಕಾಗಿ 2019ರ ಚುನಾವಣೆಯಲ್ಲಿ ರಾಹುಲ್ ಸ್ಪರ್ಧಿಸುವುದಿಲ್ಲ ಎಂದು ಘೋಷಣೆ ಮಾಡುವುದು ಹಾಗೂ ಸ್ಪರ್ಧೆಯ ಬದಲಾಗಿ ಪಕ್ಷದ ಗತವೈಭವ ಮರುಕಳಿಸುವಂತೆ ಮಾಡಲು ಪಕ್ಷವನ್ನು ಪುನರ್ ಸಂಘಟಿಸಲು ಒತ್ತು ನೀಡುತ್ತಾರೆ ಎಂದು ಬಿಂಬಿಸುವುದು. ಈ ನಡೆಯ ಮತ್ತೊಂದು ಉದ್ದೇಶವೆಂದರೆ ಬಿಜೆಪಿಯ ಅದರಲ್ಲೂ ಪ್ರಮುಖವಾಗಿ ಅಮೇಠಿಯಲ್ಲಿ ಸ್ಮತಿ ಇರಾನಿಯ ಅಲೆಯಿಂದ ರಾಹುಲ್ ಅವರನ್ನು ರಕ್ಷಿಸುವುದು. ರಾಹುಲ್ ಮತ್ತು ಮೋದಿ ನಡುವಿನ ನೇರ ಸಮರದ ಕಣವಾಗುವ ಪರಿಸ್ಥಿತಿಯನ್ನು ತಪ್ಪಿಸುವುದು ಇದರ ಉದ್ದೇಶ ಎನ್ನುವುದು ಮತ್ತೆ ಕೆಲವರ ವಿಶ್ಲೇಷಣೆ. ಪ್ರಿಯಾಂಕಾ ಗಾಂಧಿ ನಾಟಕೀಯವಾಗಿ ಅಚ್ಚರಿಯ ರಾಜಕೀಯ ಪ್ರವೇಶ ನೀಡುತ್ತಾರೆ ಎನ್ನುವುದು ಮತ್ತೊಂದು ವದಂತಿ.


ಚೌಹಾಣ್‌ಗೆ ಕಂಟಕ
ಮಧ್ಯಪ್ರದೇಶದಲ್ಲಿ ಪರಿಸ್ಥಿತಿ ಬಿಜೆಪಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಕೈಮೀರಿ ಹೋಗುತ್ತಿದೆ. ರಾಜ್ಯದಲ್ಲಿ ಹಲವು ಸುತ್ತಿನ ರೈತ ಪ್ರತಿಭಟನೆಗಳು ನಡೆದಿವೆ. ಟಿಕಂಘರ್‌ನಲ್ಲಿ ಪೊಲೀಸರು ರೈತರನ್ನು ಜೈಲಿಗೆ ತಳ್ಳಿ ಬೆತ್ತಲೆಗೊಳಿಸಿ ಹೊಡೆದಿದ್ದಾರೆ ಎಂಬ ಆರೋಪಗಳು ಇದೀಗ ಕೇಳಿಬರುತ್ತಿವೆ. ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯುತ್ತಿದ್ದು, ಬಿಜೆಪಿ ತಂತ್ರಗಾರರು, ಪಕ್ಷಕ್ಕೆ ಆಗುವ ಸಂಭಾವ್ಯ ಹಾನಿ ತಡೆಯುವ ಶತಪ್ರಯತ್ನ ನಡೆಸಿದ್ದಾರೆ. ಲಾಕಪ್ ಒಳಗಡೆ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂಬ ಕಾರಣಕ್ಕೆ ಪೊಲೀಸರು ಬಟ್ಟೆ ಬಿಚ್ಚಿದ್ದಾರೆ ಎನ್ನುವುದು ಪಕ್ಷದ ಸಮರ್ಥನೆ. ರೈತರನ್ನು ಔಪಚಾರಿಕವಾಗಿ ಬಂಧಿಸಿದರೆ, ರೈತರು ಏಕೆ ಲಾಕಪ್‌ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸುತ್ತದೆ ಎನ್ನುವುದು ಜನರ ಪ್ರಶ್ನೆ. ರಾಜ್ಯದಲ್ಲಿ ಕೃಷಿ ಸಮಸ್ಯೆ ತಾಂಡವವಾಡುತ್ತಿರುವುದು ನಿಜ. ಚೌಹಾಣ್ ಸರಕಾರದ ಅಂಕಿ ಅಂಶಗಳ ಪ್ರಕಾರ 500 ಮಂದಿ ರೈತರು ಹಾಗೂ ಕಾರ್ಮಿಕರು 2016ರ ಜುಲೈನಿಂದ ನವೆಂಬರ್ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ತಮ್ಮ ವಿರುದ್ಧದ ಪಿತೂರಿ ಎಂದು ಚೌಹಾಣ್ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ತಮ್ಮನ್ನು ಪದಚ್ಯುತಿಗೊಳಿಸಲು ನಡೆಸುತ್ತಿರುವ ಪಿತೂರಿ ಇದಾಗಿದೆ ಎಂದು ಆಪಾದಿಸುವ ಅವರು ಇದಕ್ಕೆ ಕೆಲ ದಿಲ್ಲಿ ಮುಖಂಡರತ್ತ ಬೆಟ್ಟು ಮಾಡಿದ್ದಾರೆ. ಭಯಪಡುವ ವ್ಯಕ್ತಿ ತನ್ನ ನೆರಳು ಕಂಡರೂ ಭಯಪಡುತ್ತಾನೆ ಎನ್ನುವುದು ಕೆಲವರ ವಿಶ್ಲೇಷಣೆ.


ವರುಣ್ ನಡೆ ಏನು?
ಬಿೆಪಿ ಸಂಸದ ವರುಣ್ ಗಾಂಧಿ ಅವರು ಮಹಿಳಾ ಮೀಸಲಾತಿ ಮಸೂದೆ ಆಂಗೀಕಾರಕ್ಕಾಗಿ ಆಗ್ರಹ ಮಂಡಿಸಿದ್ದಾರೆ. ಮಹಿಳೆಯರಿಗೆ ಶಾಸನಸಭೆಯಲ್ಲಿ ಶೇಕಡಾ 33ರಷ್ಟು ಮೀಸಲಾತಿ ನೀಡುವ ಸಂಬಂಧ ಈ ಮಸೂದೆ ಆಂಗೀಕರಿಸುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮೋದಿಯವರಿಗೆ ಕಳೆದ ತಿಂಗಳು ಪತ್ರ ಬರೆದು ಒತ್ತಾಯಿಸಿದ್ದರು. ವರುಣ್ ಗಾಂಧಿ ಈ ವಿಷಯದ ಬಗ್ಗೆ ಹೊಂದಿರುವ ನಿಲುವು ಪಕ್ಷಕ್ಕೆ ಪಥ್ಯವಾಗಿಲ್ಲ. ರೊಹಿಂಗ್ಯಾ ನಿರಾಶ್ರಿತರು ಭಾರತದಲ್ಲಿ ಉಳಿಯಬೇಕು ಎನ್ನುವುದು ಅವರ ಆಗ್ರಹ. ಮಾಲಿನ್ಯ ಮತ್ತು ಹಲವು ವಿಚಾರಗಳಲ್ಲಿ ಅವರ ನಿಲುವಿಗೆ ಪಕ್ಷದಲ್ಲಿ ಬೆಂಬಲ ವ್ಯಕ್ತವಾಗಿಲ್ಲ. ವರುಣ್ ಗಾಂಧಿ ಅವರ ನಿಜವಾದ ಉದ್ದೇಶ ಏನು ಎನ್ನುವುದು ಪಕ್ಷದ ಮುಖಂಡರಿಗೆ ಪ್ರಶ್ನೆಯಾಗಿದೆ. ಅವರ ತಾಯಿ ಮೇನಕಾ ಗಾಂಧಿ ಸಚಿವಾಲಯದ ಕಾರ್ಯದಲ್ಲಿ ಮಗ್ನರಾಗಿದ್ದರೆ, ಮಗ ದಿಢೀರನೇ ದೋಣಿ ಬದಲಿಸುವ ಮೂಲಕ ಅಚ್ಚರಿ ನೀಡುತ್ತಾರೆಯೇ ಎಂಬ ಸಂದೇಹವೂ ಹಲವರನ್ನು ಕಾಡುತ್ತಿದೆ. ಆದರೆ ಅವರ ತಾಯಿ ಅದಕ್ಕೆ ಅವಕಾಶ ನೀಡಲಾರರು. ಅವರ ಮುಂದಿನ ಹೇಳಿಕೆ ಪಕ್ಷದ ಇಷ್ಟಗಳಿಗೆ ವಿರುದ್ಧವಾಗಿರಲಾರದು ಎಂಬ ವಿಶ್ವಾಸ ಬಿಜೆಪಿ ಮುಖಂಡರದ್ದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)