varthabharthi

ವಿಶೇಷ-ವರದಿಗಳು

ವಾರದ ವ್ಯಕ್ತಿ

ಅನುಪಮ್ ಖೇರ್ ಕಲೆಗೂ ಬಂತು ಬೆಲೆ

ವಾರ್ತಾ ಭಾರತಿ : 15 Oct, 2017
-ಬಸು ಮೇಗಲಕೇರಿ

ನಟ, ನಿರ್ದೇಶಕ, ನಿರ್ಮಾಪಕ ಅನುಪಮ್ ಖೇರ್, ಪ್ರತಿಷ್ಠಿತ ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ(ಎಫ್‌ಟಿಐಐ)ದ ಛೇರ್ಮನ್ ಆಗಿ ನೇಮಕಗೊಂಡಿದ್ದಾರೆ. ರಂಗಭೂಮಿ, ಸಿನೆಮಾ ಮತ್ತು ಟೆಲಿವಿಷನ್- ಮೂರೂ ಕ್ಷೇತ್ರಗಳಲ್ಲಿ ಪಾಂಡಿತ್ಯ, ಪರಿಣತಿ ಮತ್ತು ಅನುಭವ ಗಳಿಸಿರುವ ಅನುಪಮ್ ಖೇರ್, ಮೂವತ್ತು ವರ್ಷಗಳ ಕಾಲ ಸುಮಾರು ಐನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಲೆಕ್ಕವಿಲ್ಲದಷ್ಟು ನಾಟಕಗಳಲ್ಲಿ ಅಭಿನಯಿಸಿ ರಂಗಭೂಮಿಯ ಆಳ-ಅಗಲಗಳನ್ನು ಅರಿತಿದ್ದಾರೆ. ಹಾಗೆಯೇ ಸಾವಿರಾರು ಟಿವಿ ಕಾರ್ಯಕ್ರಮಗಳನ್ನು ನಿರ್ಮಿಸಿ, ನಿರೂಪಿಸಿ ಸೈ ಎನಿಸಿಕೊಂಡಿದ್ದಾರೆ.

ಕೇಂದ್ರ ವಾರ್ತಾ ಇಲಾಖೆಯಡಿ ಬರುವ, ಪುಣೆಯಲ್ಲಿ ರುವ ಎಫ್‌ಟಿಐಐ ಸ್ವಾಯತ್ತ ಸಂಸ್ಥೆ. ಇಲ್ಲಿ ಸಿನೆಮಾ ನಿರ್ದೇಶನ, ಅಭಿನಯ, ಸಂಕಲನ, ಧ್ವನಿಗ್ರಹಣ, ಛಾಯಾಗ್ರಹಣಕ್ಕೆ ಸಂಬಂಧಿಸಿದ ಸರ್ಟಿಫಿಕೇಟ್ ಕೋರ್ಸ್ ಗಳನ್ನು ಕಲಿಸಿಕೊಡಲಾಗುತ್ತದೆ. ಈ ಸಂಸ್ಥೆಗೆ ಇಲ್ಲಿಯವರೆಗೆ ಖ್ಯಾತನಾಮರು ಛೇರ್ಮನ್ನರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸೃಜನಶೀಲರ ದೊಡ್ಡ ಪಡೆಯನ್ನೇ ಚಿತ್ರಜಗತ್ತಿಗೆ ಕೊಡುಗೆ ಯಾಗಿ ನೀಡಿದ ದಾಖಲೆಯೂ ಇದೆ. ಇಂತಹ ಪ್ರತಿಷ್ಠಿತ ಸಂಸ್ಥೆಗೆ, ಅನುಪಮ್ ಖೇರ್ ಅವರ ಸಾಧನೆ ಮತ್ತು ಹಿರಿತನವನ್ನು ಪರಿಗಣಿಸಿ, ಛೇರ್ಮನ್ ಆಗಿ ನೇಮಕ ಗೊಳಿಸಿರುವುದು ಸೂಕ್ತವಾಗಿದೆ. ಆದರೆ ನೇಮಕ ಮಾಡಿರುವ ಮೋದಿ ಸರಕಾರದ ಸಂದರ್ಭ ಹಾಗೂ ಖೇರ್ ನಿಲುವು-ಒಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅನುಮಾನ ಗಳಿಗೆ ಎಡೆಮಾಡಿಕೊಟ್ಟಿದೆ. ಟೀಕೆಗೆ ಗುರಿಯಾಗಿದೆ. ಇದು ಕಾಂಗ್ರೆಸ್ ಅಥವಾ ಬಿಜೆಪಿಯಾಗಲಿ, ಯಾವುದೇ ಸರಕಾರಿ ನೇಮಕವಾದರೂ ಇದು ಇದ್ದದ್ದೆ, ಇರಲಿ.

ಅನುಪಮ್ ಖೇರ್ ಎಂದಾಕ್ಷಣ ನಮ್ಮ ನೆನಪಿಗೆ ಬರುವುದು ‘ಸಾರಾಂಶ್’ ಚಿತ್ರದ ನಿವೃತ್ತ ವಯೋವೃದ್ಧನ ಪಾತ್ರ. 1984ರಲ್ಲಿ ತೆರೆಕಂಡ ಮಹೇಶ್ ಭಟ್‌ರ ‘ಸಾರಾಂಶ್’ ಪ್ರಾಯದ ಮಗನನ್ನು ಕಳೆದುಕೊಂಡ, ಮಧ್ಯಮವರ್ಗದ ಟಿಪಿಕಲ್ ಮರಾಠಿ ಮುದುಕನೊಬ್ಬನ ಮನೋವೇದನೆಯನ್ನು ಮನಕ್ಕಿಳಿಸುವ ಚಿತ್ರ. ವೃದ್ಧನ ಮಡುಗಟ್ಟಿದ ನೋವು, ಯಾತನೆ, ಸಂಕಟವನ್ನು ಸ್ಫುರಿಸುವ ಆ ಪಾತ್ರಕ್ಕೆ ಮಹೇಶ್ ಭಟ್ ಆರಿಸಿದ್ದು, 28ರ ಹರೆಯದ, ಆಗತಾನೆ ಸಿನೆಮಾಗಳಲ್ಲಿ ಅವಕಾಶ ಅರಸುತ್ತಿದ್ದ ಅನುಪಮ್ ಖೇರ್‌ರನ್ನು. ಭಟ್‌ರ ಆಯ್ಕೆಗೆ ನ್ಯಾಯ ಒದಗಿಸಿದ ಖೇರ್, ಪಾತ್ರವೇ ಅವರಾಗಿ ದ್ದರು. ಅದಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದರು.

ಅನುಪಮ್ ಖೇರ್ ಹುಟ್ಟಿದ್ದು ಮಾರ್ಚ್ 7, 1955ರಲ್ಲಿ, ಕಾಶ್ಮೀರಿ ಪಂಡಿತ್ ಕುಟುಂಬದಲ್ಲಿ. ಅಪ್ಪಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಗುಮಾಸ್ತರಾಗಿದ್ದರು. ಕಷ್ಟದಲ್ಲಿ ಓದು ವಿದ್ಯಾಭ್ಯಾಸ ಮುಗಿಸಿದ್ದರು. ನಂತರ ನಟನೆ, ನಾಟಕಗಳತ್ತ ಹೊರಳಿದರು. ಅವಕಾಶ ಅರಸಿ ಮುಂಬೈಗೆ ಬಂದಾಗ, ಕಾಸಿಲ್ಲದೆ ರೈಲ್ವೆ ಸ್ಟೇಷನ್ ಪ್ಲಾಟ್‌ಫಾರಂನಲ್ಲಿ ಮಲಗಿ, ನಗರ ಬದುಕಿನ ನರಕವನ್ನು ನುಂಗಿಕೊಂಡಿದ್ದರು. ನಂತರ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಸೇರಿ, ನಟನಾ ಕೌಶಲ್ಯ ಕಲಿತು ಚಿತ್ರರಂಗಕ್ಕೆ ಅಡಿಯಿಟ್ಟರು.

ಖೇರ್, 1982ರಲ್ಲಿ ‘ಆಗ್ಮನ್’ ಚಿತ್ರದಲ್ಲಿ ನಟಿಸಿದರೂ, ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಆದರೆ ‘ಸಾರಾಂಶ್’ ಚಿತ್ರ ಇವರನ್ನು ಇಡೀ ದೇಶಕ್ಕೇ ಪರಿಚಯಿಸಿತು. ಅದಾದ ನಂತರ 1986ರಲ್ಲಿ ಬಂದ ‘ಕರ್ಮ’ ಚಿತ್ರದ ಖಳನಾಯಕನ ಪಾತ್ರ ಜನಪ್ರಿಯ ನಟನನ್ನಾಗಿ ರೂಪಿಸಿತು. ಆ ನಂತರ ಬಂದ ‘ಡ್ಯಾಡಿ’ ಚಿತ್ರದ ಪಾತ್ರ ರಾಷ್ಟ್ರೀಯ ಪುರಸ್ಕಾರ ತಂದುಕೊಟ್ಟಿತು. ಅದರಲ್ಲೂ 80 ಮತ್ತು 90ರ ದಶಕದ ಹಿಂದಿ ಚಿತ್ರಗಳಲ್ಲಿ, ಅದಕ್ಕಿಂತಲೂ ಹೆಚ್ಚಾಗಿ ಶಾರುಕ್‌ಖಾನ್ ಚಿತ್ರಗಳಲ್ಲಿ ಖೇರ್ ಕಡ್ಡಾಯವಾಗಿ ಇದ್ದೇ ಇರುತ್ತಿದ್ದರು.

ಹಾಗೆ ನೋಡಿದರೆ, ಖೇರ್ ನಿರ್ವಹಿಸದೆ ಇರುವ ಪಾತ್ರಗಳೇ ಇಲ್ಲ. ಮೂಲತಃ ರಂಗಭೂಮಿಯಿಂದ ಬಂದವರಾದ್ದರಿಂದ, ಖೇರ್‌ಗೆ ಯಾವ ಪಾತ್ರ ಕೊಟ್ಟರೂ ತನ್ನಿರುವಿಕೆಯನ್ನು ಸಾಬೀತುಪಡಿಸುತ್ತಿದ್ದರು. ಭಿನ್ನ ಪಾತ್ರಗಳಿಂದಾಗಿಯೇ ಬೇಡಿಕೆಯನ್ನು ನಿರಂತರವಾಗಿ ಕಾಯ್ದಿಟ್ಟುಕೊಂಡವರು. ಪೋಷಕ, ವಿಲನ್, ಕಾಮಿಡಿಯನ್- ಅಪ್ಪ, ಅಣ್ಣ, ಮುದುಕ- ಎಲ್ಲಕ್ಕೂ ಹೊಂದುವ, ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿರುವ ಖೇರ್, ನಿರಂತರವಾಗಿ ಎಂಟು ಬಾರಿ ಫಿಲಂಫೇರ್ ಅವಾರ್ಡ್ ಪಡೆದು ದಾಖಲೆ ಬರೆದ ನಟ. ಹಾಗೆಯೇ ಹಿಂದಿ ಚಿತ್ರರಂಗಕ್ಕಷ್ಟೇ ಸೀಮಿತವಾಗದೆ, ಮಲಯಾಳಂ, ಮರಾಠಿ, ಬೆಂಗಾಲಿ ಭಾಷೆಯ ಚಿತ್ರಗಳಲ್ಲೂ ನಟಿಸಿರುವ ಖೇರ್, ತಮ್ಮ ಅದ್ಭುತ ಪ್ರತಿಭೆಯ ಮೂಲಕ ಕೆಲ ವಿದೇಶಿ ಚಿತ್ರಗಳಲ್ಲೂ ನಟಿಸಿ, ಹಾಲಿವುಡ್ ಅಂಗಳದಲ್ಲೂ ಸೈ ಎನಿಸಿಕೊಂಡವರು.

ಈ ನಡುವೆ, 1978ರಲ್ಲಿ ಎನ್‌ಎಸ್‌ಡಿಯ ಜೊತೆಗಾರ ನಾಗಿದ್ದ ಸತೀಶ್ ಕೌಶಿಕ್ ಜೊತೆ ಸೇರಿ, ಚಿತ್ರನಿರ್ಮಾಣ ಸಂಸ್ಥೆ ಸ್ಥಾಪಿಸಿ ‘ತೆರೆ ಸಂಗ್’ ಎಂಬ ಚಿತ್ರ ಮಾಡಿ ಕೈಸುಟ್ಟುಕೊಂಡರು. ನಂತರ ತಮ್ಮ ಸ್ವಂತ ಬದುಕನ್ನು ಕುರಿತು ಬರೆದು ನಟಿಸಿದ ‘ಕುಚ್ ಭಿ ಹೊ ಸಕ್ತಾ ಹೈ’ ಚಿತ್ರ ಮಾಡಿ ಮೌನಕ್ಕೆ ಶರಣಾದರು. ಬಡತನ, ಹಸಿವು, ಅವಮಾನಗಳನ್ನು ಅನುಭವಿಸಿದ್ದ ಅನುಪಮ್ ಖೇರ್, ನೋವು-ನಷ್ಟಗಳನ್ನು ಕೂಡ ನಾಜೂಕಾಗಿಯೇ ನಿಭಾಯಿಸಿದರು. ಅನುಪಮ್ ಖೇರ್ ಅವರದ್ದು ಒಂದು ರೀತಿಯಲ್ಲಿ ಸಾಹಸಮಯ ಬದುಕು. ಇನ್ನೂ ಏನನ್ನಾದರೂ ಸಾಧಿಸಬೇಕು ಎಂಬ ತವಕ. ನೂರಾರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರೂ, ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದ ಮನ್ನಣೆ ಗಳಿಸಿದ್ದರೂ, ಅವರಲ್ಲಿನ ನಟನೆಯ ಹಸಿವು ಇಂಗಿಲ್ಲವೆಂದೇ ಹೇಳಬೇಕು. ಆ ಕಾರಣಕ್ಕಾಗಿಯೇ ಅವರು ಸಿನೆಮಾ, ರಂಗಭೂಮಿ ಬೇಸರ ವಾದಾಗ ಕಿರುತೆರೆಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರು.

ಅಮಿತಾಭ್ ಬಚ್ಚನ್ ‘ಕೌನ್ ಬನೇಗಾ ಕರೋಡ್‌ಪತಿ’ ಮಾಡಿ ಯಶಸ್ವಿಯಾದಾಗ, ತಾನೇನು ಕಮ್ಮಿ ಎಂದು ‘ಸವಾಲ್ ದಸ್ ಕ್ರೋರ್ ಕಾ’ ಎಂಬ ಕಾರ್ಯಕ್ರಮ ಮಾಡಿ ದುಡಿದ ದುಡ್ಡನ್ನೆಲ್ಲಾ ಕಳೆದುಕೊಂಡಿದ್ದರು. ಅಷ್ಟೇ ಅಲ್ಲ, ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ನಟಿಸಲು ಸಹ ಸಾಧ್ಯವಿಲ್ಲದ ಸ್ಥಿತಿಗೆ ತಲುಪಿದ್ದರು. ಆದರೆ, ಕೆಲವೇ ದಿನಗಳಲ್ಲಿ ತಮ್ಮ ಎಲ್ಲಾ ಸೋಲುಗಳಲ್ಲಿದ್ದ ತಪ್ಪುಗಳನ್ನು ಅರ್ಥ ಮಾಡಿಕೊಂಡು ಮತ್ತೆ ಕ್ರಿಯಾಶೀಲರಾಗಿ ಮೇಲೇರಿ ನಿಂತವರು. ಜೀವನದಲ್ಲಿ ಕಲಿತ ಪಾಠಗಳನ್ನು ತಮ್ಮ ಭಾಷಣ, ಬರಹಗಳ ಮೂಲಕವಲ್ಲದೆ, ತಮ್ಮದೇ ಆದ ಶೈಕ್ಷಣಿಕ ಶಾಲೆಯ ಮೂಲಕ ಹಂಚಿದವರು. ಇಷ್ಟಕ್ಕೇ ಸುಮ್ಮನಾಗದ ಖೇರ್, ಅಣ್ಣಾ ಹಝಾರೆ ಅವರ ಭ್ರಷ್ಟಾಚಾರ ಆಂದೋಲನದಲ್ಲಿ ಪ್ರಮುಖ ಪಾತ್ರಧಾರಿಯಾದವರು. ಭಾರತೀಯ ಸೆನ್ಸಾರ್ ಮಂಡಳಿಯ ಅಧ್ಯಕ್ಷತೆ, ರಾಷ್ಟ್ರೀಯ ನಾಟಕ ಶಾಲೆಯ ಪ್ರಾಚಾರ್ಯತೆ ಮುಂತಾದ ಅನೇಕ ಜವಾಬ್ದಾರಿಗಳನ್ನು ಸಹ ಸಮರ್ಥವಾಗಿ ನಿವರ್ಹಿಸಿದವರು.

 ಅನುಪಮ್ ಖೇರ್ ಕಾಶ್ಮೀರಿ ಪಂಡಿತರು. ಕಾಶ್ಮೀರ ಸಮಸ್ಯೆ, ಮುಸ್ಲಿಂ ಉಗ್ರವಾದ, ಮೂಲಭೂತವಾದಕ್ಕೆ ಹೆದರಿ ಅಲ್ಲಿಂದ ಪಲಾಯನಗೈದ ಕಾಶ್ಮೀರಿ ಪಂಡಿತರ ಮೇಲೊಂದು ಡಾಕ್ಯುಮೆಂಟರಿ ಮಾಡಿ, ವಸ್ತುಸ್ಥಿತಿಯನ್ನು ದೇಶದ ಜನರ ಮುಂದಿಟ್ಟವರು. ಇದು ವಿವಾದ ಸೃಷ್ಟಿಸಿತ್ತು. ಹಾಗೆ ನೋಡಿದರೆ ಖೇರ್ ಉದ್ದಕ್ಕೂ, ಒಂದಿಲ್ಲೊಂದು ವಿವಾದವನ್ನು ಮೈ ಮೇಲೆ ಎಳೆದುಕೊಳ್ಳುತ್ತಲೇ ಸಾಗಿಬಂದವರು.

ಸಿನೆಮಾ ತಾರೆಯರು, ನಟ-ನಟಿಯರು ಒಂದು ಪಕ್ಷದ ಪರವಾಗಿ ವಕಾಲತ್ತು ವಹಿಸುವುದು, ಗುರುತಿಸಿಕೊಳ್ಳುವುದು ಹೊಸದೇನೂ ಅಲ್ಲ. ಅನುಪಮ್ ಖೇರ್ ಕೂಡ ಮೊದಲಿ ನಿಂದಲೂ ಬಿಜೆಪಿಯೊಂದಿಗೆ ಗುರುತಿಸಿಕೊಂಡವರು. ಪತ್ನಿ ಕಿರಣ್ ಖೇರ್ 2013ರಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಗೆದ್ದು, ಸಂಸದರಾದ ನಂತರ ಖೇರ್ ಮೋದಿ ಮೆಚ್ಚಿ ಮಾತನಾಡುವುದು, ಬಿಜೆಪಿ ನಾಯಕರಿಗೆ ಹತ್ತಿರವಾಗುವುದು ಹೆಚ್ಚಾಯಿತು.

ಈ ನಡುವೆ, 2016ರಲ್ಲಿ ಬುದ್ಧಿಜೀವಿಗಳು, ಕಲಾವಿದರು ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗುತ್ತಿದೆ ಎಂದು ಪ್ರಶಸ್ತಿಗಳನ್ನು ವಾಪಸ್ ಮಾಡಿ, ಮೋದಿ ಸರಕಾರದ ವಿರುದ್ಧ ತಮ್ಮ ತಣ್ಣನೆಯ ವಿರೋಧ ವ್ಯಕ್ತಪಡಿಸಿದಾಗ, ಅನುಪಮ್ ಖೇರ್, ‘‘ಕೇವಲ ಶ್ರೀಮಂತರು ಮತ್ತು ಖ್ಯಾತನಾಮರಷ್ಟೇ ಅಸಹಿಷ್ಣುತೆ ಬಗ್ಗೆ ಮಾತನಾಡುತ್ತಾರೆ. ಬೀದಿಬದಿಯ ಜನಸಾಮಾನ್ಯನಿಗೆ ಅದು ಗೊತ್ತೇ ಇಲ್ಲ. ಅವರಿಗೆ ಬೇಕಾಗಿರುವುದು ಎರಡು ಹೊತ್ತಿನ ಊಟ ಮಾತ್ರ. ಯಾರ ಕೈಯಲ್ಲಿ ಶಾಂಪೇನ್ ಇದೆಯೋ, ಅವರಷ್ಟೇ ಆ ಬಗ್ಗೆ ಚರ್ಚಿಸುತ್ತಾರೆ’’ ಎಂದು ಕುಟುಕಿದ್ದರು. ಕಾಕತಾಳೀಯವೆಂಬಂತೆ, ಕೇಂದ್ರ ಸರಕಾರ ಅನುಪಮ್ ಖೇರ್‌ಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು.

ಇದರಿಂದ ಉತ್ತೇಜಿತರಾದ ಖೇರ್, ‘‘ಬಿಜೆಪಿಯಲ್ಲಿ ಕೆಲವರು ಕನಿಷ್ಠ ಜ್ಞಾನವೂ ಇಲ್ಲದೆ ಮಾತನಾಡುತ್ತಾರೆ. ಅವರು ಸಾಧ್ವಿಯಾಗಿರಲಿ, ಯೋಗಿಯಾಗಿರಲಿ, ಅಂಥವರನ್ನು ಜೈಲಿಗಟ್ಟಬೇಕು, ಪಕ್ಷದಿಂದ ಕಿತ್ತುಹಾಕಬೇಕು’’ ಎಂದು ವಿಶ್ವ ಹಿಂದೂ ಪರಿಷತ್ ನಾಯಕಿ ಸಾಧ್ವಿ ಪ್ರಾಚಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧವೇ ವಾಗ್ದಾಳಿ ಮಾಡಿ, ಬಿಜೆಪಿಗೇ ಇರಿಸು ಮುರಿಸುಂಟುಮಾಡಿದ್ದರು.

ಪ್ರತಿಷ್ಠಿತ ಎಫ್‌ಟಿಐಐಗೆ ಟಿವಿ ನಟ ಗಜೇಂದ್ರ ಚೌಹಾಣ್‌ರನ್ನು ಮೋದಿ ಸರಕಾರವೇ ಛೇರ್ಮನ್‌ರನ್ನಾಗಿ ನೇಮಕ ಮಾಡಿದಾಗ, ಅಲ್ಲಿಯ ವಿದ್ಯಾರ್ಥಿಗಳು ಸತತ 139 ದಿನಗಳ ಕಾಲ ಧರಣಿ, ಪ್ರತಿಭಟನೆ ಮಾಡಿದರು. ಬಿಜೆಪಿ ಪ್ರತಿಕ್ರಿಯಿಸದೆ ಮೌನಕ್ಕೆ ಶರಣಾಗಿದ್ದಾಗ ಖೇರ್, ‘‘ಮೃಣಾಲ್ ಸೇನ್, ಅಡೂರ್, ಮಹೇಶ್ ಭಟ್, ಗಿರೀಶ್ ಕಾರ್ನಾಡ್, ಶ್ಯಾಂ ಬೆನಗಲ್‌ರಂತಹವರು ಕೂತ ಕುರ್ಚಿ ಅದು. ಅಲ್ಲಿ ಚೌಹಾಣ್ ಕೂರುವುದು ಸೂಕ್ತವಲ್ಲ’’ ಎಂದು ನೇರವಾಗಿಯೇ ಟೀಕೆಗಿಳಿದಿದ್ದರು. ಆದರೆ ಅದೇ ಸ್ಥಾನಕ್ಕೆ ಈಗ ಅನುಪಮ್ ಖೇರ್ ಬಂದು ಕೂತಿದ್ದಾರೆ. ಖೇರ್‌ಗೆ ಅರ್ಹತೆ, ಯೋಗ್ಯತೆ ಮತ್ತು ಅನುಭವವಿದ್ದರೂ, ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವುದು ಮತ್ತು ಎಫ್‌ಟಿಐಐ ಮಾದರಿಯ ಸ್ವಂತ ಸಂಸ್ಥೆಯ ಮುಖ್ಯಸ್ಥರಾಗಿರುವುದು ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿದೆ. ‘ಇದು ರಾಜಕೀಯ ನೇಮಕ’ ಎಂಬ ಅಪವಾದಕ್ಕೆ ಒಳಗಾಗಿದೆ.

ಇದಕ್ಕೆ ಕಳಶವಿಟ್ಟಂತೆ ಅನುಪಮ್ ಖೇರ್, ‘‘ನಾನು ಮೋದಿ ಅವರ ಅಭಿಮಾನಿ, ನನ್ನನ್ನು ಅವರ ಚಮಚಾ ಎಂದು ಕರೆದರೂ ಪರವಾಗಿಲ್ಲ. ಹೀಗೆ ಕರೆಸಿಕೊಳ್ಳುವುದಕ್ಕಿಂತ ದೊಡ್ಡ ಸೌಭಾಗ್ಯ ನನಗೆ ಬೇರೆ ಇಲ್ಲ. ಚಮಚಾ ಎಂದು ಕರೆಸಿಕೊಳ್ಳುವುದರಿಂದ ನನಗೆ ಯಾವುದೇ ಅವಮಾನವಾಗುವುದಿಲ್ಲ’’ ಎಂದಿದ್ದಾರೆ.

ಇವತ್ತು ಕಲೆ ಕೂಡ ಮಾರಾಟದ ವಸ್ತುವಾಗಿ ತನ್ನ ಬೆಲೆ ಕಳೆದುಕೊಳ್ಳುತ್ತಿದೆ. ಕಲಾವಿದರು, ಸಾಹಿತಿಗಳು, ಚಿಂತಕರು ಕೂಡ ಕಿಲುಬು ಕಾಸಿಗಾಗಿ, ಅಧಿಕಾರದ ಸ್ಥಾನಗಳಿಗಾಗಿ ರಾಜಕೀಯ ಪಕ್ಷಗಳ, ನಾಯಕರ ಬೆನ್ನುಬಿದ್ದು ಭಟ್ಟಂಗಿಗಳಾಗಿದ್ದಾರೆ. ಒಬ್ಬ ಪ್ರಬುದ್ಧ ನಟ, ಪದ್ಮ ಪ್ರಶಸ್ತಿ ಪುರಸ್ಕೃತ ಕಲಾವಿದ ಕುರ್ಚಿಗಾಗಿ-ಕಾಸಿಗಾಗಿ ಯಾವ್ಯಾವ ವೇಷ ಹಾಕಬಲ್ಲ, ಎಂತೆಂತಹ ಮಾತುಗಳನ್ನು ಆಡಬಲ್ಲ ಎನ್ನುವುದಕ್ಕೆ, ಇವತ್ತು ಖೇರ್ ಉತ್ತಮ ಉದಾಹರಣೆಯಾಗಿ ನಿಂತಿದ್ದಾರೆ. ಅನುಪಮ್ ಖೇರ್ ಅವರ ಅರ್ಹತೆ-ಯೋಗ್ಯತೆ ಬದಲಾದ ಕಾಲಮಾನಕ್ಕೆ ಬಕೆಟ್-ಚಮಚಾಗಳಾಗಿರುವುದು ದುರಂತ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)