ಅಗ್ನಿ ದುರಂತಕ್ಕೀಡಾದ ಕಾರಿನಲ್ಲಿ ಭಾರತ ಮೂಲದ ಮಹಿಳೆ ಸಜೀವದಹನ
ಅಮೆರಿಕದಲ್ಲಿ ರಸ್ತೆ ಅಪಘಾತ
ನ್ಯೂಯಾರ್ಕ್, ಅ.15: ರಸ್ತೆ ಅಪಘಾತದಿಂದ ಅಗ್ನಿ ದುರಂತಕ್ಕೀಡಾದ ಕಾರಿನಲ್ಲಿ ಭಾರತ ಮೂಲದ ಮಹಿಳೆಯೊಬ್ಬರು ಸಜೀವದಹನವಾದ ಘಟನೆ ಅಮೆರಿಕದಲ್ಲಿ ನಡೆದಿದೆ.
ಬ್ರೂಕ್ಲಿನ್ ಕ್ವೀನ್ಸ್ ಎಕ್ಸ್ ಪ್ರೆಸ್ ವೇನಲ್ಲಿ ಲಕ್ಸುರಿ ಇನ್ಫಿನಿಟಿ ಕಾರು ಕಾಂಕ್ರಿಟ್ ಬ್ಯಾರಿಯರ್ ಗೆ ಗುದ್ದಿದ್ದು, ಈ ಸಂದರ್ಭ ಕಾರಿನ ಚಾಲಕ ಸಯೀದ್ ಅಹ್ಮದ್ ಎಂಬಾತ ಹೊರಗೆ ಜಿಗಿದಿದ್ದಾನೆ. ಆದರೆ ಕಾರಿನೊಳಗೆ ಸಿಲುಕಿಕೊಂಡಿದ್ದ ಮಹಿಳೆ ಹರ್ಲೀನ್ ಗ್ರೆವಾಲ್ ಎಂಬ ಭಾರತ ಮೂಲದ ಮಹಿಳೆ ಮೃತಪಟ್ಟಿದ್ದಾರೆ.
ಅಪಘಾತದ ನಂತರ ಚಾಲಕ ಸಯೀದ್ ಕ್ಯಾಬೊಂದರಲ್ಲಿ ಆಸ್ಪತ್ರೆಗೆ ತೆರಳಿದ್ದಾನೆ. ಆದರೆ ಹರ್ಲೀನ್ ಕಾರಿನೊಳಗೆ ಸಿಲುಕಿದ್ದಾರೆ ಎನ್ನಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದಾಗ ಕಾರಿನೊಳಗೆ ಸುಟ್ಟು ಕರಕಲಾದ ಮಹಿಳೆಯ ಶವ ಪತ್ತೆಯಾಗಿದೆ.
ಆಸ್ಪತ್ರೆಯಲ್ಲಿರುವ ಸಯೀದ್ ನ ಕೈ ಹಾಗು ಕಾಲುಗಳಿಗೆ ಸುಟ್ಟ ಗಾಯಗಳಾಗಿದ್ದು, ಆತ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಾರು ಚಲಾಯಿಸುವ ಮುನ್ನ ಆತ ಮದ್ಯಪಾನ ಮಾಡಿದ್ದ. ಮಹಿಳೆಯನ್ನು ರಕ್ಷಿಸಲು ಪ್ರಯತ್ನಿಸಿದ್ದ ಎಂದು ಆತನ ಸಂಬಂಧಿ ತಿಳಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.