varthabharthi

ವಿಶೇಷ-ವರದಿಗಳು

ಬದ್ಧತೆಯಿಂದ ಕ್ಷಯ ನಿಯಂತ್ರಣ

ವಾರ್ತಾ ಭಾರತಿ : 16 Oct, 2017
ಮಧುಕರ ಪೈ

ಈಗ, ಎಚ್‌ಐವಿ ಮತ್ತು ಮಲೇರಿಯ-ಎರಡೂ ಒಟ್ಟಾಗಿ ಕೊಲ್ಲುವುದಕ್ಕಿಂತ ಹೆಚ್ಚು ಮಂದಿಯನ್ನು ಕ್ಷಯರೋಗ (ಟಿಬಿ) ಕೊಲ್ಲುತ್ತಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 2015ರಲ್ಲಿ ವಿಶ್ವದಾದ್ಯಂತ ಅಂದಾಜು 10.6 ಮಿಲಿಯ ಹೊಸ ಟಿಬಿ ಪ್ರಕರಣಗಳು ಮತ್ತು 1.8 ಮಿಲಿಯ ಟಿಬಿ ಸಾವುಗಳು ದಾಖಲಾಗಿದ್ದವು ಮತ್ತು ಭಾರತವು ವಾರ್ಷಿಕ 5ಲಕ್ಷ ಟಿಬಿ ಮರಣಗಳು ಸಂಭವಿಸುವ ದೇಶವಾಗಿದ್ದು ಈ ಜಾಗತಿಕ ಸಾಂಕ್ರಾಮಿಕದ ಕೇಂದ್ರ ಸ್ಥಾನದಲ್ಲಿದೆ. ಅಲ್ಲದೆ, ಅಂದಾಜು 4,80,000 ಮಲ್ಟಿ-ಡ್ರಗ್ ರೆಸಿಸ್ಟಂಟ್ ಟಿಬಿಯ ಹೊಸ ಪ್ರಕರಣಗಳಲ್ಲಿ ಶೇ.16 ಪ್ರಕರಣಗಳು ಭಾರತದಲ್ಲೇ ದಾಖಲಾಗುತ್ತವೆ.

ಭಾರತವು ತನ್ನ ಕಾರ್ಯಕ್ರಮಗಳನ್ನು ಬದಲಿಸಿ ಈ ಸಾಂಕ್ರಾಮಿಕ ಕಾಯಿಲೆಯನ್ನು ನಿಯಂತ್ರಿಸಬಲ್ಲದೆ? ಈ ಪ್ರಶ್ನೆಗೆ ಉತ್ತರ, ಶರತ್ತುಬದ್ಧ ಹೌದು. ಕಳೆದ ಕೆಲವು ವರ್ಷಗಳಲ್ಲಿ ಟಿಬಿ ನಿಯಂತ್ರಿಸಲು ಭಾರತ ಸರಕಾರ ಅದಾಗಲೇ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ ಇನ್ನಷ್ಟು ಹೆಚ್ಚು ಕ್ರಮಗಳನ್ನು ಇನ್ನಷ್ಟು ಹೆಚ್ಚು ಉತ್ತಮವಾಗಿ ತೆಗೆದುಕೊಳ್ಳುವ ಅವಕಾಶವಿದೆ ಮತ್ತು ಒಂದು ಜಾಗತಿಕ ನಾಯಕತ್ವದ ಪಾತ್ರ ವಹಿಸಲು ಭಾರತಕ್ಕೆ ಸಾಧ್ಯವೂ ಇದೆ.
ಮಹತ್ವಾಕಾಂಕ್ಷೆಗೆ ಹಣದ ಬೆಂಬಲವಿರಲಿ
ಈ ವರ್ಷದ ಮೊದಲ ಭಾಗದಲ್ಲಿ ಭಾರತದ ಪರಿಷ್ಕೃತ ರಾಷ್ಟ್ರೀಯ ಟಿಬಿಯ ನಿಯಂತ್ರಣ ಕಾರ್ಯಕ್ರಮವು, 2017-2025ರ ವೇಳೆಗೆ ಟಿಬಿ ನಿರ್ಮೂಲನೆಗೊಳಿಸುವ ಒಂದು ಹೊಸ ರಾಷ್ಟ್ರೀಯ ಆಯಕಟ್ಟಿನ ಯೋಜನೆಯ ಕರಡನ್ನು ಪ್ರಕಟಿಸಿತು. ಈ ಯೋಜನೆಗೆ ಸಾಕಷ್ಟು ಹಣ ಮಂಜೂರು ಮಾಡಿ ಅದನ್ನು ಚೆನ್ನಾಗಿ ಅನುಷ್ಠಾನಗೊಳಿಸಿದಲ್ಲಿ ಅದು ಭಾರತದ ಟಿಬಿ ವಿರುದ್ಧದ ಹೋರಾಟದಲ್ಲಿ ಒಂದು ಮೈಲುಗಲ್ಲಾಗಬಹುದು.
ಸಾರ್ವಜನಿಕ ವ್ಯವಸ್ಥೆಯಲ್ಲಿರುವ 1.5 ಮಿಲಿಯ ರೋಗಿಗಳಿಗೆ ನೀಡುವ ಸೇವೆಗಳನ್ನು ಹಾಗೂ ಸವಲತ್ತುಗಳನ್ನು ಸುಧಾರಿಸಿ ಹೊಸ ರೋಗ ಪರೀಕ್ಷಣಾ ವಿಧಾನ ಹಾಗೂ ಔಷಧಗಳು ರೋಗಿಗಳಿಗೆ ದೊರಕುವಂತೆ ಮಾಡುವ ಗುರಿಯನ್ನು ಈ ಯೋಜನೆ ಹೊಂದಿದೆ. ಈ ಯೋಜನೆಯ ಅಡಿಯಲ್ಲಿ ರೋಗಿಗಳಿಗೆ ಅವರ ಚಿಕಿತ್ಸೆಗಳಿಗೆ ತಗಲುವ ಪ್ರತ್ಯಕ್ಷ ಮತ್ತು ಪರೋಕ್ಷ ವೆಚ್ಚಗಳ ಬಾಬ್ತು ಅವರ ಖಾತೆಗೆ ನಗದು ಹಣ ವರ್ಗಾಯಿಸಲಾಗುವುದು. ಮೊದಲ ಮೂರು ವರ್ಷಗಳಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸಲು ಬೇಕಾಗುವ ಮೊತ್ತವು 2.5 ಮಿಲಿಯ ಡಾಲರ್(ಸುಮಾರು 17,000 ಕೋಟಿ ರೂ.) ಎಂದು ಅಂದಾಜಿಸಲಾಗಿದೆ. ಹಣದ ಕೊರತೆ ಮುಂದುವರಿಯಲು ಸಾಧ್ಯವಿಲ್ಲ. ಭಾರತವು ಟಿಬಿಯನ್ನು ನಿಯಂತ್ರಿಸುವ ತನ್ನ ಮಹತ್ವಾಕಾಂಕ್ಷೆಗಳಿಗೆ ರೂಪಾಯಿಯ ಬೆಂಬಲ ನೀಡಲು ಆರಂಭಿಸಲೇಬೇಕಾಗಿದೆ. ಆದ್ದರಿಂದ ಆರೋಗ್ಯ ಸಚಿವಾಲಯದ ಭಾರೀ ಯೋಜನೆಯ ಅನುಷ್ಠಾನವು ಅದಕ್ಕೆ ಸರಕಾರ ಸಾಕಷ್ಟು ಸಂಪನ್ಮೂಲಗಳನ್ನು ಒದಗಿಸಬಲ್ಲುದೇ ಎಂಬುದನ್ನು ಅವಲಂಬಿಸಿದೆ.


ಆರೋಗ್ಯ ವ್ಯಯ ಒಂದು ತುರ್ತು ಆದ್ಯತೆ
ಇತ್ತೀಚೆಗೆ ಪ್ರಕಟವಾದ ಒಂದು ವರದಿಯ ಪ್ರಕಾರ(ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಸ್ಟಡಿ 2016), ಭಾರತವು 188 ದೇಶಗಳಲ್ಲಿ ಟಿಬಿ ನಿಯಂತ್ರಣ ರಂಗದಲ್ಲಿ 127ನೆ ಸ್ಥಾನದಲ್ಲಿದೆ. ನಿಜ ಹೇಳಬೇಕೆಂದರೆ; ಪ್ರತಿಯೊಂದು ಇತರ ಬ್ರಿಕ್ಸ್‌ದೇಶ (ಬ್ರೆಝಿಲ್, ರಷ್ಯಾ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ಭಾರತಕ್ಕಿಂತ ಮುಂದೆ ಇವೆ.
ವರದಿಯ ಪ್ರಕಾರ, ಭಾರತದ ಆರ್ಥಿಕ ಅಭಿವೃದ್ಧಿಯು ದೇಶದ ಜನರ ಆರೋಗ್ಯದಲ್ಲಿ ಪ್ರತಿಫಲನವಾಗಿಲ್ಲ. ಭಾರತದ ರಾಷ್ಟ್ರೀಯ ಆರೋಗ್ಯ ನೀತಿಯು ಸರಕಾರದ ಆರೋಗ್ಯ ವೆಚ್ಚದ ಮೊತ್ತವನ್ನು ಈಗ ಇರುವ ಒಟ್ಟು ರಾಷ್ಟ್ರೀಯ ಉತ್ಪನ್ನದ ಶೇ.1.15 ದಿಂದ, 2025ರ ವೇಳೆಗೆ 2.5%ಕ್ಕೆ ಏರಿಸಲು ಉದ್ದೇಶಿಸಿದೆ.
ಈ ಏರಿಕೆ ಅನುಷ್ಠಾನಗೊಳ್ಳುವಂತೆ ನೋಡಿಕೊಳ್ಳುವುದು ಭಾರತಕ್ಕೆ ಒಂದು ತುರ್ತು ಆದ್ಯತೆಯಾಗಬೇಕು. ಭಾರತ ಜಾಗತಿಕ ಆರೋಗ್ಯ ಸೇವೆಯ ನಿಟ್ಟಿನಲ್ಲಿ ಅಭಿವೃದ್ಧಿ ಸಾಧಿಸಬೇಕಾದರೆ ಇದೊಂದು ಅನಿವಾರ್ಯ ಆವಶ್ಯಕತೆಯಾಗಿದೆ.
ಅದ್ಭುತ ಸಾಧನೆಯ ಪರಂಪರೆ
ಭಾರತವು ಜಾಗತಿಕ ಆರೋಗ್ಯಕ್ಕೆ ಕೆಲವು ಪ್ರಮುಖ ಕೊಡುಗೆಗಳನ್ನು ನೀಡಿದೆ. ಐದು ವರ್ಷಗಳಿಗೂ ಹೆಚ್ಚು ಅವಧಿಗೆ ಭಾರತ ಪೋಲಿಯೊ-ಮುಕ್ತ ದೇಶವಾಗಿದೆ; ಮತ್ತು ಅದೇ ಈ ಯಶಸ್ಸು ಪೋಲಿಯೊ ನಿರ್ಮೂಲನೆಗೊಂಡಿರುವ ಜಾಗತಿಕ ಪ್ರಯತ್ನ ಗಳಿಗೆ ವಿಶೇಷ ಚಾಲನೆ ನೀಡಿದೆ. ಭಾರತದ ಬಯೋಟೆಕ್ ಮತ್ತು ಔಷಧ ತಯಾರಕರು ಟಿಬಿ ಮತ್ತು ಎಚ್‌ಐವಿ ಔಷಧಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದಾರೆ; ಈ ನಿಟ್ಟಿನಲ್ಲಿ ಇವರು ಜಾಗತಿಕ ಮಾರುಕಟ್ಟೆಯ ಶೇ.80ರಷ್ಟು ಮಾರುಕಟ್ಟೆಯನ್ನು ಹೊಂದಿದ್ದಾರೆ.

  ಮಕ್ಕಳ ಬಾಲ್ಯದ ರೋಗ ನಿರೋಧಕ ರಂಗದಲ್ಲಿ ಇತ್ತೀಚೆಗೆ ಉತ್ಪಾದಿಸಲು ಆರಂಭಿಸುವ ರೊಬೊ ವೈರಸ್ ಚುಚ್ಚುಮದ್ದು ಈ ನಿಟ್ಟಿನಲ್ಲಿ ಭಾರತದ ಪಾತ್ರವನ್ನು , ನಾಯಕತ್ವವನ್ನು ಸಾಬೀತುಪಡಿಸಿದೆ. ಅಲ್ಲದೆ, ಟಿಬಿ ಸಂಶೋಧನೆಯಲ್ಲಿ ಭಾರತಕ್ಕೆ ದೀರ್ಘವಾದ ಒಂದು ಪರಂಪರೆಯ ಹಿರಿಮೆ ಇದೆ. ಅದು ಈಗಾಗಲೆ ಟಿಬಿ ರಿಸರ್ಚ್‌ಕನ್ಸೋರ್ಟಿಯಮ್‌ನ್ನು ಸ್ಥಾಪನೆ ಮಾಡಿದೆ. ಆದ್ದರಿಂದ ಟಿಬಿ ವಿರುದ್ಧ ಭಾರೀ ಸಾಧನೆ ಮಾಡುವ ಸಾಮರ್ಥ್ಯ ಭಾರತಕ್ಕೆ ಇದೆ. ಈ ಸಾಧನೆ ಸಾಧ್ಯವಾಗಬೇಕಾರೆ, ಟಿಬಿ ಸಾಂಕ್ರಾಮಿಕವನ್ನು ಕೊನೆಗೊಳಿಸಲು ಪ್ರಧಾನಿ ನರೇಂದ್ರ ಮೋದಿಯವರು ಆರ್ಥಿಕ / ಹಣಕಾಸು ಹಾಗೂ ರಾಜಕೀಯ ಬದ್ಧತೆಯನ್ನು ತೋರಬೇಕು. ಮತ್ತು ಆರೋಗ್ಯ ರಂಗದಲ್ಲಿ ಇನ್ನಷ್ಟು ಹೆಚ್ಚಿನ ಬಂಡವಾಳ ಹೂಡಬೇಕು. ಆರೋಗ್ಯವು ಭಾರತದ ಆದ್ಯತೆಯಾದಾಗ ಟಿ.ಬಿ. ಸಹಜವಾಗಿಯೆ ಕಡಿಮೆಯಾಗುತ್ತದೆ; ಆರೋಗ್ಯ ಸಂಬಂಧಿ ಜಾಗತಿಕ ಯಾದಿಯಲ್ಲಿ ಭಾರತದ ಸ್ಥಾನವನ್ನು ಈಗ ಇರುವಲ್ಲಿ ಇಟ್ಟಿರಲು ಕಾರಣರಾದ ಇತರ ಅನೇಕ ಪರಿಸ್ಥಿತಿಗಳು ಕೂಡ ಸುಧಾರಿಸುತ್ತವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)