varthabharthi

ಸಂಪಾದಕೀಯ

ಬಿಜೆಪಿ ಸೋಲಿನ ಮುನ್ಸೂಚನೆ

ವಾರ್ತಾ ಭಾರತಿ : 17 Oct, 2017

ಮೂರು ವರ್ಷಗಳ ಹಿಂದೆ ಶೇ.31ರಷ್ಟು ಮತಗಳನ್ನು ಪಡೆದು ದೇಶದ ಅಧಿಕಾರ ಸೂತ್ರ ಹಿಡಿದ ನರೇಂದ್ರ ಮೋದಿಗೆ ಮತ್ತು ಅವರ ಪಕ್ಷಕ್ಕೆ ಎದುರಾಳಿಗಳೇ ಇಲ್ಲ ಎನ್ನುವಂತಹ ವಾತಾವರಣ ಅರಂಭದಲ್ಲಿ ದೇಶದಲ್ಲಿ ಉಂಟಾಗಿತ್ತು. ಅನಾಯಾಸವಾಗಿ ದಕ್ಕಿದ ಅಧಿಕಾರದ ಉತ್ಸಾಹದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕಾಂಗ್ರೆಸ್ ಮುಕ್ತ ಭಾರತದ ಮಾತುಗಳನ್ನು ಆಡತೊಡಗಿದರು. ಕಾಂಗ್ರೆಸ್ ಮುಕ್ತ ಎಂಬುದು ಕ್ರಮೇಣ ಬದಲಾಗಿ ಪ್ರತಿಪಕ್ಷ ಮುಕ್ತ ಭಾರತ ಎಂದಾಯಿತು. ಈಗ ಪ್ರಜಾಪ್ರಭುತ್ವ ಮುಕ್ತ ಭಾರತವನ್ನು ನಿರ್ಮಾಣ ಮಾಡುವ ಕನಸನ್ನು ಅವರು ಕಾಣುತ್ತಿದ್ದಾರೆ. ಆದರೆ, ಅದು ಅಂದುಕೊಂಡಷ್ಟು ಸುಲಭವಲ್ಲ. ಭಾರತದ ಜನ ಅಷ್ಟು ಮೂರ್ಖರಲ್ಲ. ಅಧಿಕಾರದ ಮತ್ತೇರಿದವರಿಗೆ ಇಲ್ಲಿನ ಜನ ಪಾಠ ಕಲಿಸುತ್ತಲೇ ಬಂದಿದ್ದಾರೆ.

70ರ ದಶಕದಲ್ಲಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ ಇಂದಿರಾ ಗಾಂಧಿ ಅವರಂತಹ ಜನಪ್ರಿಯ ನಾಯಕಿಗೇ ದೇಶದ ಜನ ಪಾಠ ಕಲಿಸಿದರು. ಆನಂತರ ಅಧಿಕಾರಕ್ಕೆ ಬಂದ ವಾಜಪೇಯಿ ಸೇರಿದಂತೆ ಯಾರೇ ಆಗಿರಲಿ ಅವರು ತಪ್ಪು ಮಾಡಿದಾಗೆಲ್ಲಾ ಜನ ಪಾಠ ಕಲಿಸುತ್ತಲೇ ಬಂದಿದ್ದಾರೆ. ಈ ಹಿಂದೆ ಈ ದೇಶವನ್ನು ಆಳಿದ ಯಾರಿಗೂ ಇಲ್ಲದ ದುರಂಹಕಾರ ಈಗ ಈ ದೇಶವನ್ನು ಆಳುತ್ತಿರುವ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗಿದೆ. ಅಂತಲೇ ದೇಶದ ಜನ ಅವರಿಗೂ ಪಾಠ ಕಲಿಸುವ ಸೂಚನೆಯನ್ನು ನೀಡಿದ್ದಾರೆ. ಪಂಜಾಬ್‌ನ ಗುರುದಾಸಪುರ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಅಕಾಲಿದಳ ಕೂಟಕ್ಕೆ ಪರಾಭವ ಉಂಟಾಗಿದೆ. ಅಲ್ಲಿ ಕಾಂಗ್ರೆಸ್ ಗೆಲುವನ್ನು ಸಾಧಿಸಿದೆ. ಈ ಹಿಂದೆ ಅಲ್ಲಿ ಹೆಸರಾಂತ ಚಿತ್ರನಟ ವಿನೋದ್ ಖನ್ನಾ ಬಿಜೆಪಿ ಅಭ್ಯರ್ಥಿಯಾಗಿ ಆರಿಸಿಬಂದಿದ್ದರು.

ಕೇರಳದ ಮಲಪ್ಪುರಂ ಜಿಲ್ಲೆಯ ವೆಂಗರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕೂಡಾ ಯುಡಿಎಫ್ ಬೆಂಬಲಿತ ಅಭ್ಯರ್ಥಿ ಗೆಲುವಿನ ಬಾವುಟ ಹಾರಿಸಿದ್ದಾರೆ. ಇವೆರಡೂ ಚುನಾವಣೆಗಳ ಫಲಿತಾಂಶದಿಂದ ಮೋದಿ ಅವರ ಜನಪ್ರಿಯತೆ ಕುಸಿದೇ ಹೋಗಿದೆ ಎಂದು ಒಮ್ಮೆಲೆ ನಿರ್ಣಯಕ್ಕೆ ಬರಲು ಆಗುವುದಿಲ್ಲ. ಉಪಚುನಾವಣೆಗಳಲ್ಲಿ ಒಮ್ಮೆಮ್ಮೆ ಸ್ಥಳೀಯ ಅಂಶಗಳು ಪ್ರಭಾವ ಬೀರುತ್ತವೆ. ಆದರೂ ಮೋದಿ ಸರಕಾರ ಅನುಸರಿಸುತ್ತಿರುವ ವಿನಾಶಕಾರಿ ಆರ್ಥಿಕ ನೀತಿಯ ಬಗ್ಗೆ ದೇಶದ ಜನರಲ್ಲಿ ಉಂಟಾಗಿರುವ ಅಸಮಾಧಾನವನ್ನು ಈ ಉಪಚುನಾವಣೆಗಳ ಫಲಿತಾಶ ಬಿಂಬಿಸುತ್ತದೆ ಎಂದು ಹೇಳಿದರೆ ಅಚ್ಚರಿಪಡಬೇಕಾಗಿಲ್ಲ. ದೇಶದಲ್ಲಿ ಈಗ ಪ್ರತಿಪಕ್ಷಗಳೇ ಇಲ್ಲದಂತಹ ವಾತಾವರಣ ಉಂಟಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಅನುಭವಿಸಿದ ಸೋಲಿನಿಂದ ಕಾಂಗ್ರೆಸ್ ಇನ್ನೂ ಚೇತರಿಸಿಕೊಂಡಿಲ್ಲ. ಬಿಜೆಪಿಗೆ ಎದುರಾಳಿಯೇ ಇಲ್ಲದಂತಹ ವಾತಾವರಣ ಎಲ್ಲೆಡೆ ಕಂಡುಬರುತ್ತಿದೆ. ಕೂಡಾ ಜನತೆ ಚುನಾವಣೆಯಲ್ಲಿ ಆ ಪಕ್ಷವನ್ನು ತಿರಸ್ಕರಿಸಿದ್ದಾರೆ ಅಂದರೆ ಅವರಿಗೆ ಸರಕಾರದ ಬಗ್ಗೆ ಬೇಸರ ಉಂಟಾಗಿದೆ ಎಂಬುದು ಸ್ಪಷ್ಟವಾಗುತ್ತದೆ.

ಇವೆರಡೂ ಉಪಚುನಾವಣೆಗಳ ಫಲಿತಾಂಶ ಏನೇ ಆಗಿರಲಿ ಮುಂಬರುವ ಗುಜರಾತ್, ಹಿಮಾಚಲ ಪ್ರದೇಶ, ಕರ್ನಾಟಕ ಮುಂತಾದ ರಾಜ್ಯಗಳ ವಿಧಾನಸಭೆ ಚುನಾವಣೆಗಳ ಫಲಿತಾಂಶದ ಬಗ್ಗೆ ಪ್ರಧಾನಿ ಮೋದಿಗೆ ದುಸ್ವಪ್ನಗಳು ಬೀಳುತ್ತಿರುವುದು ಸ್ಪಷ್ಟವಾಗಿದೆ. ಕಳೆದ ಎರಡು ದಶಕಗಳಿಂದ ಗುಜರಾತ್ ರಾಜ್ಯವನ್ನು ತನ್ನ ಕೋಟೆಯನ್ನಾಗಿ ಮಾಡಿಕೊಂಡಿದ್ದ ಬಿಜೆಪಿಗೆ ಅಲ್ಲಿ ನಿಂತ ನೆಲವೇ ಜಾರುತ್ತಿದೆ. ಅಂತಲೇ ಅವರು ಕೊಂಚ ಗಾಬರಿಗೊಂಡಂತೆ ಕಾಣುತ್ತಿದೆ. ಹೇಗಾದರೂ ಮಾಡಿ ಗುಜರಾತ್ ಕೋಟೆಯನ್ನು ಉಳಿಸಿಕೊಳ್ಳಲು ನರೇಂದ್ರ ಮೋದಿ ಮತ್ತು ಅಮಿತ್ ಶಾ ಹರಸಾಹಸ ಪಡುತ್ತಿದ್ದಾರೆ. ವಾಸ್ತವವಾಗಿ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ಘೋಷಣೆಯ ಜೊತೆಗೆ ಗುಜರಾತ್ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯೂ ಪ್ರಕಟಗೊಳ್ಳಬೇಕಾಗಿತ್ತು. ಆದರೆ, ಚುನಾವಣಾ ಆಯೋಗ ಗುಜರಾತನ್ನು ಕೈಬಿಟ್ಟು ಕೇವಲ ಹಿಮಾಚಲ ಪ್ರದೇಶದ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಿದ್ದು ಈಗಾಗಲೇ ಸಾಕಷ್ಟು ಟೀಕೆಗೆ ಕಾರಣವಾಗಿದೆ.

ಗುಜರಾತ್ ರಾಜ್ಯ ಸಂಘಪರಿವಾರದ ಹಿಂದೂ ರಾಷ್ಟ್ರ ನಿರ್ಮಾಣದ ಪ್ರಯೋಗಶಾಲೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. 90ರ ದಶಕದ ಆನಂತರ ಈ ರಾಜ್ಯ ಕೋಮು ಆಧಾರದಲ್ಲಿ ವಿಭಜನೆಗೊಂಡಿದೆ. ಈ ಕೋಮು ಧ್ರುವೀಕರಣದ ಬಲದಿಂದಲೇ ಬಿಜೆಪಿ ಕಳೆದ 22 ವರ್ಷಗಳಿಂದ ಈ ರಾಜ್ಯವನ್ನು ಆಳುತ್ತಿದೆ. ಗುಜರಾತಿನ ಪ್ರತೀ ನಗರ, ಪ್ರತೀ ಹಳ್ಳಿ, ಪ್ರತೀ ಬಡಾವಣೆಗಳು ಕೋಮು ಆಧಾರದಲ್ಲಿ ವಿಭಜನೆಗೊಂಡಿವೆ. 2002ರಲ್ಲಿ ನಡೆದ ಕೋಮು ಹತ್ಯಾಕಾಂಡದ ಆನಂತರ ಅಲ್ಲಿನ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು. ಆಗ ಆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅಲ್ಲಿ ನಡೆದ ಹತ್ಯಾಕಾಂಡದ ಕಳಂಕವನ್ನು ಇಂದಿಗೂ ಮೈಗಂಟಿಸಿಕೊಂಡಿದ್ದಾರೆ. ಈ ಕೋಮುಧ್ರುವೀಕರಣದಿಂದ ಬಿಜೆಪಿಗೆ ಕೊಂಚ ಲಾಭವಾಗಿದೆ. ಆದರೆ, ಈಗ ಪರಿಸ್ಥಿತಿ ಬದಲಾದಂತೆ ಕಾಣುತ್ತಿದೆ.

ಕೇರಳದಲ್ಲಿ ಜನರಕ್ಷಾ ಯಾತ್ರೆ ಮಾಡಿ ಹೋದ ಅಮಿತ್ ಶಾ ಅವರಿಗೆ ಗುಜರಾತ್‌ನಲ್ಲಿ ತಮ್ಮ ಪಕ್ಷವನ್ನು ಉಳಿಸಿಕೊಳ್ಳುವುದು ಪ್ರಯಾಸವಾಗಿ ಕಾಣುತ್ತಿದೆ. ಇತ್ತೀಚೆಗೆ ಅಲ್ಲಿನ ಮೂರು ಪ್ರಮುಖ ಸಮುದಾಯಗಳು ಬಿಜೆಪಿಯ ರಾಜ್ಯಸರಕಾರದ ವಿರುದ್ಧ ತಿರುಗಿಬಿದ್ದಿವೆ. ಮೀಸಲಾತಿಗಾಗಿ ಒತ್ತಾಯಿಸಿದ ಪಟೇಲ್ ಸಮುದಾಯ ಈಗ ಬಿಜೆಪಿ ಜೊತೆಗೆ ಇಲ್ಲ. ಪಟೇಲ್ ಸಮುದಾಯದ ಯುವ ನಾಯಕ ಹಾರ್ದಿಕ್ ಪಟೇಲ್ ಅವರನ್ನು ದೇಶದ್ರೋಹಿ ಎಂಬಂತೆ ಬಿಂಬಿಸಿದ ಬಿಜೆಪಿ ಈಗ ಆ ಸಮುದಾಯವನ್ನು ಎದುರು ಹಾಕಿಕೊಂಡಿದೆ. ಇನ್ನೊಂದೆಡೆ ಜಿಗ್ನೇಶ್ ಮೇವಾನಿ ನೇತೃತ್ವದಲ್ಲಿ ದಲಿತ ಸಮುದಾಯ ಹೋರಾಟಕ್ಕೆ ಇಳಿದಿದೆ. ಹಿಂದೆಲ್ಲ ಮೋದಿ ಮೋಡಿಯಿಂದ ಬಿಜೆಪಿ ಗುಜರಾತ್‌ನಲ್ಲಿ ಗೆದ್ದು ಬರುತ್ತಿತ್ತು. ಆದರೆ, ಈಗ ಮೋದಿ ಮೋಡಿ ಇಡೀ ದೇಶದಿಂದಲೇ ಮಾಯವಾಗುತ್ತಿದೆ. ಕೇಂದ್ರ ಸರಕಾರ ಕೈಗೊಂಡ ನೋಟು ರದ್ದತಿ ಕ್ರಮ ಮತ್ತು ಜಿಎಸ್‌ಟಿಗಳಿಂದಾಗಿ ಜನಸಾಮಾನ್ಯರು ಮೋದಿ ಸರಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ನಿರಂತರವಾಗಿ ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿರುವ ವ್ಯಾಪಾರಿ ಸಮುದಾಯ ಕೂಡಾ ಜಿಎಸ್‌ಟಿ ಬಂದ ಬಳಿಕ ತೀವ್ರ ಅಸಮಾಧಾನಗೊಂಡಿದೆ.

ವರ್ಷಕ್ಕೆ 2 ಲಕ್ಷ ಉದ್ಯೋಗಾವಕಾಶ ಸೃಷ್ಟಿಸುವುದಾಗಿ ಹೇಳಿದ ಸರಕಾರದ ಭರವಸೆ ಈಡೇರಲಿಲ್ಲ. ವಿದೇಶದಿಂದ ಕಪ್ಪು ಹಣವನ್ನು ತರುವುದಾಗಿ ನೀಡಿದ ಆಶ್ವಾಸನೆ ಹುಸಿಯಾಗಿದೆ. ಜಿಎಸ್‌ಟಿಯಿಂದಾಗಿ ಉಳಿದ ರಾಜ್ಯಗಳಿಗಿಂತ ಹೆಚ್ಚಿನ ಪೆಟ್ಟು ಗುಜರಾತ್‌ಗೆ ಬಿದ್ದಿದೆ. ಅಲ್ಲಿನ ಜವಳಿ ಉದ್ಯಮ ತೀವ್ರ ನಷ್ಟ ಅನುಭವಿಸುತ್ತಿದೆ. ಸಣ್ಣ ಕೈಗಾರಿಕೆಗಳು ದಿವಾಳಿಯಾಗಿವೆ. ಕೈಗಾರಿಕೆಗಳು ಮುಚ್ಚಿ ಕಾರ್ಮಿಕರು ಭಾರೀ ಸಂಖ್ಯೆಯಲ್ಲಿ ಬೀದಿಗೆ ಬಿದ್ದಿದ್ದಾರೆ. ಸಾಲದ ಸುಳಿಗೆ ಸಿಕ್ಕ ರೈತರು ಕೋಪದಿಂದ ಕುದಿಯುತ್ತಿದ್ದಾರೆ. ಚುನಾವಣಾ ಕಾರಣಕ್ಕಾಗಿ ಸರ್ದಾರ್ ಸರೋವರ್ ಅಣೆಕಟ್ಟಿನ ಬಾಗಿಲನ್ನು ಬಂದ್ ಮಾಡಲಾಯಿತು. ಆದರೆ, ರೈತರ ಹೊಲಗಳಿಗೆ ನೀರು ಹರಿಸುವ ಕಾಲುವೆ ಕಾಮಗಾರಿ ಪೂರ್ಣಗೊಂಡಿಲ್ಲ. ಇದೆಲ್ಲದರ ಪರಿಣಾಮವಾಗಿ ಬಿಜೆಪಿ ಅಲ್ಲಿ ತೀವ್ರ ಪ್ರತಿರೋಧ ಎದುರಿಸುತ್ತಿದೆ. ಬಿಜೆಪಿಯ ಗೌರವ ಯಾತ್ರೆಗೆ ಎಲ್ಲೆಡೆ ಜನ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ಸತ್ತ ಹಸುವಿನ ಚರ್ಮವನ್ನು ಸುಲಿಯುತ್ತಿದ್ದ ದಲಿತರನ್ನು ಬೆತ್ತಲೆ ಮಾಡಿ ಥಳಿಸಿದ ಆನಂತರ ದಲಿತ ಸಮುದಾಯ ಬಿಜೆಪಿ ವಿರುದ್ಧ ಸಿಡಿದು ನಿಂತಿದೆ. ಇನ್ನೊಂದೆಡೆ ಹಿಂದುಳಿದ ಸಮುದಾಯದ ನಾಯಕ ಅಲ್ವೇಶ್ ಠಾಕೂರ್ ಕೂಡಾ ಸರಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ಧಾರೆ. ಹೀಗಾಗಿ ಗುಜರಾತ್ ಚುನಾವಣೆಯಲ್ಲಿ ಗೆಲ್ಲುವುದು ಬಿಜೆಪಿಗೆ ಈ ಬಾರಿ ಅಷ್ಟು ಸುಲಭವಾಗಿಲ್ಲ. ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಗುಜರಾತ್‌ನಲ್ಲಿ ಭಾರೀ ಅಭಿವೃದ್ಧಿ ಸಾಧಿಸಲಾಗುತ್ತಿದೆ ಎಂದು ಹೇಳಲಾಗಿದ್ದರೂ ಅವರ ಅಭಿವೃದ್ಧಿಯ ಕಾರ್ಯಕ್ರಮಗಳಿಂದ ಜನಸಾಮಾನ್ಯರಿಗೆ ಪ್ರಯೋಜನವಾಗಿಲ್ಲ. ಕಾರ್ಪೊರೇಟ್ ಬಂಡವಾಳ ಶಾಹಿಯ ತಿಜೋರಿ ತುಂಬಿದೆ. ಬಡವರು, ಹಿಂದುಳಿದವರು, ರೈತರು, ದಲಿತರು ಬೀದಿಗೆ ಬಿದ್ದಿದ್ದಾರೆ. ಅಂತಲೇ, ಸ್ವತಃ ನರೇಂದ್ರ ಮೋದಿ ಚುನಾವಣಾ ಪ್ರಚಾರಕ್ಕೆ ಇಳಿದರೂ ಚುನಾವಣೆ ಗೆಲ್ಲುವುದು ಅಷ್ಟು ಸುಲಭವಲ್ಲ. ಗುಜರಾತ್ ವಿಧಾನಸಭಾ ಚುನಾವಣೆ ಪ್ರಧಾನಿ ನರೇಂದ್ರ ಮೋದಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಪ್ರಧಾನಿಯಾಗಿರುವ ಅವರು ಚುನಾವಣಾ ಕಣದಲ್ಲಿ ಇರದಿದ್ದರೂ ತಾವೇ ಮುಖ್ಯಮಂತ್ರಿ ಅಭ್ಯರ್ಥಿ ಎಂಬಂತೆ ಆ ರಾಜ್ಯವನ್ನು ಗೆಲ್ಲಲು ಪಣ ತೊಟ್ಟಿದ್ದಾರೆ. ಆದರೆ, ಈ ಬಾರಿ ಗುಜರಾತನ್ನು ಗೆಲ್ಲವುದು ಅಷ್ಟು ಸುಲಭವಲ್ಲ. ಕಾಂಗ್ರೆಸ್ ಎಷ್ಟೇ ದುರ್ಬಲಗೊಂಡಿದ್ದರೂ ಜನತೆಗೆ ಬಿಜೆಪಿ ಬೇಡವಾಗಿರುವುದರಿಂದ ಅವರ ಅನಿವಾರ್ಯ ಆಯ್ಕೆ ಕಾಂಗ್ರೆಸ್ ಆದರೆ ಅಚ್ಚರಿಪಡಬೇಕಾಗಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)