varthabharthi

ಸಂಪಾದಕೀಯ

ತಾಜ್ ಮಹಲ್ ವಿರುದ್ಧ ದ್ವೇಷದ ಮಹಲ್!

ವಾರ್ತಾ ಭಾರತಿ : 18 Oct, 2017

‘‘ಪ್ರೀತಿ ಇಲ್ಲದ ಮೇಲೆ ಸಂಶಯದ ಗಡಿಗಳುದ್ದಕ್ಕೂ

ಸಿಡಿಗುಂಡುಗಳ ಕದನ ನಿಂತೀತು ಹೇಗೆ?
ಜಾತಿ-ಮತ-ಭಾಷೆ-ಬಣ್ಣಗಳ ಗೋಡೆಯ ನಡುವೆ
ನರಳುವ ಪಾಡು ತಪ್ಪೀತು ಹೇಗೆ?
ನಮ್ಮ ನಿಮ್ಮ ಮನಸ್ಸು
ಮರುಭೂಮಿಯಾಗದ ಹಾಗೆ
ತಡೆಗಟ್ಟುವುದು ಹೇಗೆ?’’

ತಾಜ್‌ಮಹಲ್‌ನ ವಿರುದ್ಧ ಬಿಜೆಪಿಯ ಮುಖಂಡರ ದ್ವೇಷ ಮಾತುಗಳು ಕೇಳಿ ಬರುತ್ತಿರುವ ಈ ಸಂದರ್ಭದಲ್ಲಿ ಜಿ.ಎಸ್.ಶಿವರುದ್ರಪ್ಪ ಅವರ ಮೇಲಿನ ಕವಿತೆ ಹೆಚ್ಚು ಪ್ರಸ್ತುತವಾಗುತ್ತಿದೆ. ಪ್ರೀತಿ ಎಂದರೆ ಏನೂ ಎಂದು ಗೊತ್ತೇ ಇಲ್ಲದ ಮನುಷ್ಯನೊಬ್ಬ ಮಾತ್ರ, ತಾಜ್‌ಮಹಲ್‌ನಂತಹ ಒಂದು ಪ್ರೇಮ ರೂಪಕದ ಕುರಿತಂತೆ ನೀಚತನದ ಮಾತುಗಳನ್ನಾಡಬಲ್ಲ. ತಾಜ್‌ಮಹಲ್‌ನ್ನು ನಿಂದಿಸುವುದರಿಂದ ತಾಜ್‌ಮಹಲ್‌ನ ಘನತೆಗೆ ಕುಂದುಂಟಾಗುತ್ತದೆ ಎಂದು ಭಾವಿಸುವ ಈತನಿಂದ, ಈತನ ಪರಿವಾರದ ಬಣ್ಣ ಬಯಲಾಯಿತು. ಅಂದ ಹಾಗೆ ತಾಜ್‌ಮಹಲ್ ದೇಶದ ಕಳಂಕ ಎಂದಿದ್ದ ಈ ಬಿಜೆಪಿ ಶಾಸಕ ಸಂಗೀತ್ ಸೋಮ್‌ನ ಇತಿಹಾಸ ಎಲ್ಲರಿಗೂ ತಿಳಿದಿರುವುದೇ ಆಗಿದೆ. ಅಲ್ ದುವಾ ಗೋಮಾಂಸ ಸಂಸ್ಕರಣೆ ಘಟಕದ ಪಾಲುದಾರ ಈತ.

ಈ ಮನುಷ್ಯನೇ ದಾದ್ರಿಯಲ್ಲಿ ಅಮಾಯಕ ಅಖ್ಲಾಕ್‌ರ ಕೊಲೆಗೆ ಕಾರಣನಾಗಿದ್ದ. ಅಖ್ಲಾಕ್ ಮನೆಯ ಫ್ರಿಡ್ಜಿನಲ್ಲಿ ಗೋಮಾಂಸವಿದೆ ಎಂದು ಆರೋಪಿಸಿ ಜನರನ್ನು ಪ್ರಚೋದಿಸಿದ್ದೂ ಈತನೇ. ವಿಪರ್ಯಾಸವೆಂದರೆ, ಈತ ಪಾಲುದಾರನಾಗಿರುವ ಕಂಪೆನಿ ವಿದೇಶಕ್ಕೆ ಟನ್ನುಗಟ್ಟಳೆ ಮಾಂಸವನ್ನು ರಫ್ತು ಮಾಡುತ್ತಿದೆ. ಇಂತಹ ಮನುಷ್ಯನಿಗೆ ತಾಜ್‌ಮಹಲ್ ಕಳಂಕವಾಗಿ ಕಂಡರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ಈ ದೇಶದಲ್ಲಿ ಹೃದಯ ಹೃದಯವನ್ನು ಸೇರಿಸುವಂತಹ, ಪ್ರೀತಿಯ ಸಂದೇಶವನ್ನು ಹರಡುವಂತಹ ಯಾವ ವೌಲ್ಯಗಳೂ ಉಳಿಯಬಾರದು ಎನ್ನುವುದು ಸೋಮ್‌ನಂತಹ ಸಮಯಸಾಧಕ ರಾಜಕಾರಣಿಗಳ ಉದ್ದೇಶವಾಗಿದೆ. ಈ ಕಾರಣಕ್ಕಾಗಿಯೇ ಅವರಿಗೆ ತಾಜ್‌ಮಹಲ್ ಬೇಡವಾಗಿದೆ. ಈತ ಪ್ರತಿನಿಧಿಸುವ ಸಿದ್ಧಾಂತ, ತತ್ವ ಅದೆಷ್ಟು ನೀಚತನದಿಂದ ಕೂಡಿದೆ ಎನ್ನುವುದನ್ನು ಇದೀಗ ದೇಶಕ್ಕೆ ಮಾತ್ರವಲ್ಲ, ವಿದೇಶಗಳಿಗೂ ರಫ್ತಾದಂತಾಗಿದೆ.

ತಾಜ್‌ಮಹಲ್‌ಗೆ ಈ ಶಾಸಕ ಅಥವಾ ಈತನ ಪರಿವಾರದ ಪ್ರಮಾಣ ಪತ್ರದ ಅಗತ್ಯವೇ ಇಲ್ಲ. ಯಾಕೆಂದರೆ ಇಡೀ ವಿಶ್ವವೇ ಅದನ್ನು ತನ್ನ ಸೊತ್ತು ಎನ್ನುವುದನ್ನು ಸ್ವೀಕರಿಸಿದೆ. ‘ವಿಶ್ವದ ಏಳು ಅದ್ಭುತಗಳಲ್ಲಿ ಒಂದು’ ಎಂದು ತಾಜ್‌ಮಹಲ್ ಗುರುತಿಸಲ್ಪಟ್ಟಿದೆ. ಭಾರತದ ಪ್ರವಾಸೋದ್ಯಮದ ಪ್ರಮುಖ ಭಾಗವಾಗಿದೆ ಈ ಪ್ರೇಮಮಹಲ್. ಭಾರತದ ಹಲವು ಹೆಗ್ಗಳಿಕೆಗಳಲ್ಲಿ ತಾಜ್‌ಮಹಲ್ ಕೂಡ ಒಂದು. ತಾಜ್‌ಮಹಲನ್ನು ನೋಡುವುದಕ್ಕೆಂದೇ ಭಾರತಕ್ಕೆ ಆಗಮಿಸುವ ವಿದೇಶಿಯರಿದ್ದಾರೆ. ವಿಶ್ವದ ವಿವಿಧ ನಾಯಕರು ಸಂದರ್ಶಿಸುವ ಪ್ರಮುಖ ಎರಡು ಸ್ಥಳಗಳೆಂದರೆ, ಒಂದು ಗಾಂಧಿಯ ಆತ್ಮ ಮಲಗಿರುವ ರಾಜ್‌ಘಾಟ್. ಇನ್ನೊಂದು, ತಾಜ್‌ಮಹಲ್. ಎರಡೂ ಈ ದೇಶದ ವಿಭಿನ್ನ ಅಂಶಗಳಾದರೂ, ಆಳದಲ್ಲಿ ಅವು ಒಂದನ್ನೊಂದು ಬೆಸೆದಿವೆ. ಅದಕ್ಕೆ ಕಾರಣ ಅವರಿಬ್ಬರು ಪ್ರತಿಪಾದಿಸುತ್ತಿದ್ದ ಪ್ರೇಮ.

ಗಾಂಧಿ ಎಲ್ಲರನ್ನೂ ಪ್ರೀತಿಸಿದರು. ಸಮಾನರೆಂದು ಬಗೆದರು. ಅದಕ್ಕಾಗಿಯೇ ಅವರನ್ನು ಗುಂಡು ಹೊಡೆದು ಕೊಂದು ಹಾಕಿದರು. ತಾಜ್‌ಮಹಲ್ ಪ್ರೇಮಿಗಳೆಲ್ಲರನ್ನೂ ಕೈ ಬೀಸಿ ಕರೆಯುತ್ತಿವೆ. ಜಾತಿ ಭೇದಗಳಾಚೆಗೆ ಶತಶತಮಾನಗಳಿಂದ ಪ್ರೇಮಿಗಳನ್ನು ಒಂದಾಗಿಸುತ್ತಾ ಬಂದಿದೆ. ಆ ಕಾರಣಕ್ಕಾಗಿಯೇ ಗಾಂಧಿಯನ್ನು ಕೊಂದವರ ಕೆಂಗಣ್ಣಿಗೆ ತಾಜ್‌ಮಹಲ್ ಕೂಡ ಗುರಿಯಾಗಿದೆ. ತಾಜ್‌ಮಹಲ್‌ನ ವಿರುದ್ಧ ಹೇಳಿಕೆಗಳನ್ನು ನೀಡುವುದೆಂದರೆ, ಪ್ರೀತಿ, ಪ್ರೇಮದ ವೌಲ್ಯಗಳ ವಿರುದ್ಧ ಹೇಳಿಕೆ ನೀಡುವುದೆಂದೇ ಅರ್ಥ. ತಾಜ್‌ಮಹಲ್‌ನ್ನು ಕೆಡವಿ ಆ ಜಾಗದಲ್ಲಿ ತಮ್ಮ ದ್ವೇಷ ಮಹಲನ್ನು ಕಟ್ಟುವ ಉದ್ದೇಶವನ್ನು ಇವರು ಹೊಂದಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ತಾಜ್‌ಮಹಲ್‌ನ್ನು ಕಟ್ಟಿದವರು ಮೊಗಲರು. ಮೊಗಲರು ಹೊರಗಿನಿಂದ ಬಂದವರೇನೋ ನಿಜ. ಆದರೆ ಅವರು ಇಲ್ಲಿನ ಸಂಪತ್ತನ್ನು ದೋಚಿಕೊಂಡು, ತಮ್ಮ ನಾಡಿಗೆ ಹೋಗಲಿಲ್ಲ. ಬದಲಿಗೆ, ಅದನ್ನು ಇಲ್ಲಿಗೇ ಅರ್ಪಿಸಿದರು.

ಅವರು ಇಲ್ಲಿ ನೆಲೆ ನಿಂತು, ಇಲ್ಲಿನವರೇ ಆದರು. ಸಂಗೀತ, ಕಾವ್ಯ, ಶಿಕ್ಷಣ, ವಾಸ್ತು ಶಿಲ್ಪ, ಕೃಷಿ, ಆಹಾರ ಇವೆಲ್ಲವುಗಳಿಗೂ ಮೊಗಲರು ಕೊಟ್ಟ ಕೊಡುಗೆ ಅಪಾರವಾದುದು. ಮೊಗಲರಿಲ್ಲದ ಭಾರತವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ತಾಜ್‌ಮಹಲ್ ಈ ದೇಶಕ್ಕೆ ಕಳಂಕವೆಂದಾದರೆ, ಕೆಂಪುಕೋಟೆಯನ್ನು ಇವರೇನು ಮಾಡುತ್ತಾರೆ? ರಾಷ್ಟ್ರಪತಿ ಭವನವನ್ನು ಕಟ್ಟಿರುವುದು ಯಾರು? ಇವೆಲ್ಲವನ್ನು ಕೆಡವಿ ಹೊಸದಾಗಿ ಕಟ್ಟಬೇಕೆಂದು ಬಯಸುತ್ತಾರೆಯೇ? ಮೊಗಲರು ಈ ದೇಶದಲ್ಲಿ ನಿರ್ಮಾಣ ಮಾಡಿರುವುದು ಬರೇ ಕಟ್ಟಡಗಳು ಮಾತ್ರವೇ? ಹಿಂದೂಸ್ತಾನಿ ಸಂಗೀತದಲ್ಲಿ ಮೊಗಲರ ಪಾಲು ಬಹುದೊಡ್ಡದಿದೆ. ಈ ಸಂಗೀತವನ್ನೇ ಸಂಘಪರಿವಾರದ ಮುಖಂಡರು ನಿಷೇಧಿಸುತ್ತಾರೆಯೇ? ಆಹಾರ ವೈವಿಧ್ಯಗಳಲ್ಲಿ ಮೊಗಲರ ಪಾತ್ರವಿದೆ. ಅವುಗಳನ್ನೂ ಅಳಿಸಿ ಹಾಕುತ್ತಾರೆಯೇ? ಈ ದೇಶದ ಕಳಂಕ ಮೊಗಲರಲ್ಲ. ಅವರು ಈ ದೇಶಕ್ಕೆ ಕಾಲಿಡುವ ಮೊದಲೇ ಇಲ್ಲಿ ಶಿಕ್ಷಣ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೀಮಿತವಾಗಿತ್ತು.

ನೀರನ್ನು ದಲಿತರು, ಶೂದ್ರರು ಮುಟ್ಟಬಾರದ ಸ್ಥಿತಿ ಇತ್ತು. ಮೊಗಲರು ಮತ್ತು ಬ್ರಿಟಿಷರು ಕಾಲಿಟ್ಟ ಬಳಿಕ ಆ ಕಳಂಕಕ್ಕೆ ಒಂದಿಷ್ಟು ಕುತ್ತು ಬಂತು. ದುರದೃಷ್ಟವಶಾತ್, ಸಂಘಪರಿವಾರದ ಹಿರಿಯರು ಕಟ್ಟಿ ನಿಲ್ಲಿಸಿರುವ ಆ ಕಳಂಕಗಳು ಈಗಲೂ ಈ ದೇಶದಲ್ಲಿ ಆಗಾಗ ತಲೆ ಎತ್ತುತ್ತಿದೆ. ಇಂದು ನಿವಾರಿಸಬೇಕಾದುದು ಆ ಕಳಂಕವನ್ನು. ಈ ದೇಶಕ್ಕೆ ರೈಲು ಮಾರ್ಗವನ್ನು ನೀಡಿದವರು, ಆಧುನಿಕ ಶಿಕ್ಷಣವನ್ನು ನೀಡಿ ತಳವರ್ಗ ತಲೆಯೆತ್ತಿ ನಿಲ್ಲುವುದಕ್ಕೆ ಕಾರಣರಾದವರು ಬ್ರಿಟಿಷರು. ಹೊರಗಿನಿಂದ ಬಂದ ಬ್ರಿಟಿಷರು ಇದನ್ನು ಜಾರಿಗೊಳಿಸಿದರು ಎನ್ನುವ ಕಾರಣಕ್ಕಾಗಿ ನಮ್ಮ ರೈಲು ಹಳಿಗಳನ್ನೆಲ್ಲ ಕಿತ್ತು ಹಾಕಬೇಕೆಂದು ಸಂಘಪರಿವಾರ ಬಯಸುತ್ತದೆಯೇ? ಅಥವಾ ಬ್ರಿಟಿಷರ ಕಾಲದ ಶಾಲೆಗಳನ್ನೆಲ್ಲ ಧ್ವಂಸ ಮಾಡಲು ಇವರು ಹೊರಟಿದ್ದಾರೆಯೇ?

ತಮ್ಮ ಆಡಳಿತದ ವೈಫಲ್ಯಗಳನ್ನು ಮುಚ್ಚಿ ಹಾಕಲು ಇಂತಹ ದ್ವೇಷ ಅಭಿಯಾನವನ್ನು ನಡೆಸಲು ಬಿಜೆಪಿಯ ನಾಯಕರು ಮುಂದಾಗಿದ್ದಾರೆ. ಇದು ಬಿಜೆಪಿಯ ನಿಜವಾದ ಸಂಸ್ಕೃತಿ ಏನು ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ದೇಶದ ಜನರಿಗೆ ಇನ್ನಷ್ಟು ಸಹಾಯಕವಾಗಿದೆ. ತಾಜ್‌ಮಹಲ್‌ನ ವಿರುದ್ಧ ಬಿಜೆಪಿಯ ಮುಖಂಡರು ತೂರಿದ ಕಲ್ಲು, ಅವರ ಮನೆಯ ಮೇಲೆ ಬೀಳುತ್ತಿದೆ ಎನ್ನುವ ಎಚ್ಚರಿಕೆ ಅವರಿಗೆ ಇಲ್ಲದೇ ಇದ್ದರೆ, ಶ್ರೀಘ್ರದಲ್ಲೇ ಈ ದೇಶದಲ್ಲಿ ಬಿಜೆಪಿ ಅಳಿಯಲಿದೆ ಮತ್ತು ಸಂಘಪರಿವಾರದ ನಾಯಕರು ಅದಕ್ಕೊಂದು ದ್ವೇಷಮಹಲ್ ಸ್ಮಾರಕವನ್ನು ನಿರ್ಮಾಣ ಮಾಡಬೇಕಾದ ಸ್ಥಿತಿ ಬರಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)