ಪ್ರಿಯತಮನನ್ನು ಮದುವೆಯಾಗಲು ಕಿಡ್ನಿ ಮಾರಲು ಮುಂದಾದ ಯುವತಿ!
ಹೊಸದಿಲ್ಲಿ, ಅ.19: ಪ್ರಿಯತಮನನ್ನು ಮದುವೆಯಾಗುವ ಸಲುವಾಗಿ ಯುವತಿಯೊಬ್ಬಳು ತನ್ನ ಕಿಡ್ನಿ ಮಾರಲು ಮುಂದಾದ ಘಟನೆ ಬೆಳಕಿಗೆ ಬಂದಿದೆ.
ಪ್ರಿಯತಮ ಕೇಳಿದ 1.8 ಲಕ್ಷ ರೂ.ಗಳನ್ನು ಹೊಂದಿಸಲು ಬಿಹಾರದ 21 ವರ್ಷದ ಯುವತಿ ತನ್ನ ಕಿಡ್ನಿ ಮಾರಲು ದಿಲ್ಲಿಗೆ ತಲುಪಿದ್ದಳು. ದಿಲ್ಲಿಯ ಆಸ್ಪತ್ರೆಯೊಂದಕ್ಕೆ ಬಂದ ಆಕೆ ಕಿಡ್ನಿ ಮಾರುವ ವಿಷಯವನ್ನು ಆಸ್ಪತ್ರೆಯ ಅಧಿಕಾರಿಗಳಿಗೆ ತಿಳಿಸಿದ್ದು, ಈ ಬಗ್ಗೆ ಅಧಿಕಾರಿಗಳು ಮಹಿಳಾ ಹೆಲ್ಪ್ ಲೈನ್ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ದಿಲ್ಲಿಯ ಮಹಿಳಾ ಆಯೋಗದ ತಂಡ ಮತ್ತು ಪೊಲೀಸರು ಯುವತಿಯ ವಿಚಾರಣೆ ನಡೆಸಿದ್ದಾರೆ.
ವಿವಾಹವಾಗಿ ವಿಚ್ಛೇದನವಾದ ಬಳಿಕ ತಂದೆ-ತಾಯಿಯರ ಜೊತೆಗಿರುವ ಯುವತಿ ನೆರೆಮನೆಯ ಯುವಕನ್ನು ಪ್ರೀತಿಸುತ್ತಿದ್ದಳು. ಇದಕ್ಕೆ ಮನೆಯವರು ವಿರೋಧಿಸಿದ್ದರಿಂದ ಪ್ರಿಯತಮ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ಮೊರದಾನಾದ್ ಗೆ ಯುವತಿ ಬಂದಿದ್ದಾಳೆ. ಆದರೆ ಮದುವೆಯಾಗಬೇಕಾದರೆ 1.8 ಲಕ್ಷ ರೂ. ನೀಡಬೇಕೆಂದು ಆತನ ಹೇಳಿದ್ದು, ಇದಕ್ಕಾಗಿ ಕಿಡ್ನಿ ಮಾರಿ ಹಣ ಸಂಗ್ರಹಿಸಲು ದಿಲ್ಲಿಗೆ ಬಂದಿದ್ದೇನೆ ಎಂದು ಯುವತಿ ತಿಳಿಸಿದ್ದಾಳೆ ಎನ್ನಲಾಗಿದೆ.
ಪ್ರಿಯತಮನ ವಿರುದ್ಧ ದೂರು ನೀಡಲು ಮಹಿಳಾ ಆಯೋಗ ಹೇಳಿದರೂ ಯುವತಿ ಇದಕ್ಕೆ ಒಪ್ಪಿಲ್ಲ ಎನ್ನಲಾಗಿದೆ.