varthabharthi

ವಿಶೇಷ-ವರದಿಗಳು

ಮಾದಕ ದ್ರವ್ಯ ಜಾಲದಲ್ಲಿ ಸಿಲುಕಿದ ಉಳ್ಳಾಲ

ವಾರ್ತಾ ಭಾರತಿ : 20 Oct, 2017
ವಾರ್ತಾಭಾರತಿ ವಿಶೇಷ ವರದಿ

►ಹದಿಹರೆಯದ ಯುವಕರೇ ‘ಟಾರ್ಗೆಟ್’

►ಜಾಲದ ಚಕ್ರವ್ಯೂಹದಲ್ಲಿ ಯುವಜನತೆ

►ಬಡ-ಮಧ್ಯಮ-ಶ್ರೀಮಂತರೆಂಬ ಭೇದವಿಲ್ಲದೆ ಎಲ್ಲರ ಮಕ್ಕಳಿಗೂ ಅಪಾಯ

►ಗಾಂಜಾ ಪೂರೈಕೆಯಲ್ಲಿ ಮಹಿಳೆಯರೂ ಶಾಮೀಲು

►ಜೈಲಿನಲ್ಲೂ ಮಾದಕ ವ್ಯಸನಿಗಳ ಜಾಲ ಸಕ್ರಿಯ

►ಕಣ್ಣಿಗೆ ರಾಚುವ ಪೊಲೀಸರು-ರಾಜಕಾರಣಿಗಳ ಕೃಪಾಕಟಾಕ್ಷ


ಐತಿಹಾಸಿಕ ಕಾರಣಕ್ಕಾಗಿ ಪ್ರಸಿದ್ಧಿ ಪಡೆದಿರುವ ‘ಉಳ್ಳಾಲ’ ಇಂದು ನಾನಾ ಕಾರಣಕ್ಕಾಗಿ ಕುಖ್ಯಾತಿಗೊಳಗಾಗುತ್ತಿದೆ. ಹಲ್ಲೆ, ಕೊಲೆ, ಕೊಲೆಯತ್ನ, ಲೂಟಿ, ಧಮ್ಕಿ, ಅಪಹರಣ, ಬ್ಲಾಕ್‌ಮೇಲ್ ಉಳ್ಳಾಲದಲ್ಲಿ ಎಗ್ಗಿಲ್ಲದೆ ನಡೆಯುತ್ತಿವೆ. ‘ಒಂದೆಡೆ ರಾಜಕಾರಣಿಗಳ ಬೆಂಬಲ, ಇನ್ನೊಂದೆಡೆ ಕೆಲವು ಪೊಲೀಸರ ವೈಫಲ್ಯದಿಂದಲೇ ಇಲ್ಲಿನ ಯುವಕರು ದಾರಿ ತಪ್ಪುತ್ತಿದ್ದಾರೆ’ ಎನ್ನುವುದು ಉಳ್ಳಾಲದ ನಾಗರಿಕರ ಅಳಲು. ಇವರನ್ನು ಸರಿದಾರಿಗೆ ತರಲಾಗದೆ ಹಿರಿಯರು, ಧರ್ಮಗುರುಗಳು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ನಶೆ ಏರಿದವರ ಬಗ್ಗೆ ಮಾತನಾಡಲು, ಅವರ ಬಗ್ಗೆ ಮಾಹಿತಿ ನೀಡಲು ಇಲ್ಲಿನ ಬಹುತೇಕ ಮಂದಿ ಹಿಂದೇಟು ಹಾಕುತ್ತಿದ್ದಾರೆ. ವಸ್ತುಶಃ ಉಳ್ಳಾಲ ಮಾದಕ ದ್ರವ್ಯ ಜಾಲದಲ್ಲಿ ಸಿಲುಕಿದೆ. ಹಾಗಾಗಿಯೇ ಉಳ್ಳಾಲದಲ್ಲಿ ಅಪರಾಧ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇದರ ಹಿಂದೆ ವ್ಯವಸ್ಥಿತ ಷಡ್ಯಂತ್ರ ಅಡಗಿದೆ ಎನ್ನುವುದು ಇಡೀ ಉಳ್ಳಾಲದ ಒಕ್ಕೊರಲ ಧ್ವನಿಯಾಗಿದೆ. ಈ ನಿಟ್ಟಿನಲ್ಲಿ ‘ವಾರ್ತಾಭಾರತಿ’ಯ ವಿಶೇಷ ತಂಡ ಉಳ್ಳಾಲದ ಜನಸಾಮಾನ್ಯರು, ವಿವಿಧ ಕ್ಷೇತ್ರಗಳ ನಾಯಕರು, ಸಾಮಾಜಿಕ ಕಾರ್ಯಕರ್ತರು ಹಾಗೂ ಪೊಲೀಸ್ ಇಲಾಖೆಯನ್ನು ಭೇಟಿ ಮಾಡಿ ಹೊರತಂದ ಸ್ಫೋಟಕ ಮಾಹಿತಿ ಇಲ್ಲಿದೆ.


ಉಳ್ಳಾಲದ ಮೇಲಂಗಡಿ, ಮಾಸ್ತಿಕಟ್ಟೆ, ಮುಕ್ಕಚೇರಿ, ಕೋಟೆಪುರ, ಕಡಪ್ಪರ, ಉಳ್ಳಾಲ ಮುಡಾ ಸೈಟ್, ಉಳ್ಳಾಲ ಬೊಟ್ಟು, ಉಳ್ಳಾಲ ಕೋಡಿ, ತೊಕ್ಕೊಟ್ಟು, ಒಳಪೇಟೆ, ಅಳೇಕಲ, ಮಾರ್ಗತಲೆ, ಕಟ್ಟತ್ತಲ ಮತ್ತಿತರ ಪ್ರದೇಶಗಳಲ್ಲದೆ, ಆಸುಪಾಸಿನ ಕಲ್ಲಾಪು, ಮೊಗವೀರಪಟ್ಣ, ಹಾಗೂ ಸಮೀಪದ ತಲಪಾಡಿ, ಕೆ.ಸಿ. ರೋಡ್, ಕುಂಪಲ, ದೇರಳಕಟ್ಟೆ, ಕುತ್ತಾರ್, ಶಾಂತಿಬಾಗ್, ಮುಡಿಪು, ಕೊಣಾಜೆ, ತೌಡುಗೋಳಿ ಕ್ರಾಸ್ ಹೀಗೆ ಉಳ್ಳಾಲ ಮತ್ತು ಕೊಣಾಜೆ ಠಾಣಾ ವ್ಯಾಪ್ತಿಯ ಹಲವು ಕಡೆ ಮಾದಕ ದ್ರವ್ಯ ಜಾಲ ಹಬ್ಬಿದ್ದು, ಸಮಾಜ ಬಾಹಿರ ಕೃತ್ಯಗಳಿಗೆ ಕಾರಣವಾಗುತ್ತಿದೆ ಎಂದು ಉಳ್ಳಾಲದ ನಾಗರಿಕರು ಅಳಲು ವ್ಯಕ್ತಪಡಿಸುತ್ತಿದ್ದಾರೆ.

 ಈ ಪ್ರದೇಶದ ನಿರ್ಜನ ಪ್ರದೇಶಗಳು, ಕಾಲನಿಗಳು, ನಿರ್ಮಾಣ ಹಂತದ ಕಟ್ಟಡಗಳು, ಜನವಾಸವಿಲ್ಲದ ಮನೆಗಳು, ಪಾಳುಬಿದ್ದ ಕಟ್ಟಡಗಳು, ಸಣ್ಣಪುಟ್ಟ ಡೇರೆಗಳು, ನೀರಿನ ಟ್ಯಾಂಕ್‌ನ ಸುತ್ತಮುತ್ತಲ ಪ್ರದೇಶಗಳನ್ನು ಮಾದಕ ದ್ರವ್ಯ ವ್ಯಸನಿಗಳು ತಮ್ಮ ಅಡ್ಡೆಗಳನ್ನಾಗಿಸಿದ್ದಾರೆ. ಅಲ್ಲೇ ಹೆಚ್ಚಾಗಿ ಠಳಾಯಿಸುತ್ತಾರೆ. ಅದೂ ರಾತ್ರಿ-ಹಗಲೆನ್ನದೆ, ಕೆಲವೊಮ್ಮೆ ಮಾರಕಾಯುಧಗಳೊಂದಿಗೆ!. ಆದರೆ ಪೊಲೀಸ್ ಇಲಾಖೆ ಇದನ್ನೆಲ್ಲಾ ಕಂಡೂ ಕಾಣದಂತೆ ವರ್ತಿಸುತ್ತಿದೆ ಎಂದು ಇಲ್ಲಿನ ಜನರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಕಳೆದ 10 ವರ್ಷಗಳಿಂದ ಈ ಜಾಲ ಸಕ್ರಿಯವಾಗಿದ್ದರೂ ಕಡಿವಾಣ ಹಾಕದೆ ಬಿಟ್ಟಿದ್ದರಿಂದ ಇತ್ತೀಚಿನ ದಿನಗಳಲ್ಲಿ ಇದರ ಹಾವಳಿ ಮಿತಿ ಮೀರಿದೆ. ಇಲ್ಲಿ ಹಲ್ಲೆ, ಕೊಲೆ, ಕೊಲೆಯತ್ನ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವ ಆರೋಪಿಗಳಿಗೂ ಮಾದಕ ದ್ರವ್ಯ ಜಾಲಕ್ಕೂ ಬಿಡಿಸಲಾಗದ ನಂಟಿದೆ. ಹಾಗಾಗಿಯೇ ಇಲ್ಲಿ ರಾತ್ರಿ-ಹಗಲು ಅಪರಾಧ ಪ್ರಕರಣಗಳು ನಡೆಯುತ್ತಿವೆ. ಬಡವರು, ಶ್ರೀಮಂತರು, ಮಧ್ಯಮ ವರ್ಗದವರು, ಸುಸಂಸ್ಕೃತರ ಮಕ್ಕಳು ಎಂಬ ಭೇದವಿಲ್ಲದೆ ದೊಡ್ಡ ಸಂಖ್ಯೆಯಲ್ಲಿ ಯುವಜನರು ಇದರ ದಾಸರಾಗುತ್ತಿದ್ದಾರೆ. ಯಾರು, ಯಾವ ಕ್ಷಣ ಈ ಚಕ್ರವ್ಯೆಹದೊಳಗೆ ಸಿಲುಕುತ್ತಾರೆ ಎಂದು ಹೇಳಲಿಕ್ಕಾಗದ ಸಂದಿಗ್ಧ ಸ್ಥಿತಿ ಉಳ್ಳಾಲದಲ್ಲಿ ನಿರ್ಮಾಣವಾಗಿದೆ. ಈ ಬಗ್ಗೆ ಯಾರೂ ಮುಕ್ತವಾಗಿ ಮಾತನಾಡಲು ಧೈರ್ಯ ತೋರುತ್ತಿಲ್ಲ. ಹಾಗಾಗಿ ಮಾದಕ ದ್ರವ್ಯ ಜಾಲದೊಳಗೆ ಸಿಲುಕಿರುವ ‘ಉಳ್ಳಾಲ’ವನ್ನು ಪಾರು ಮಾಡುವುದು ಸದ್ಯದ ಮಟ್ಟಿಗೆ ಯಕ್ಷಪ್ರಶ್ನೆಯಾಗಿ ಬಿಟ್ಟಿದೆ.

ಈ ಭಯಾನಕ ಪರಿಸ್ಥಿತಿ ಬಗ್ಗೆ ಪೊಲೀಸ್ ಇಲಾಖೆಯ ಅಧಿಕಾರಿಗಳ ಗಮನ ಸೆಳೆದಾಗ ‘ಮಾಧ್ಯಮದಲ್ಲಿ ಪ್ರಸಾರವಾದಂತೆ ಉಳ್ಳಾಲ-ಕೊಣಾಜೆ ಠಾಣಾ ಸರಹದ್ದಿನಲ್ಲಿ ಈ ಜಾಲ ಅಷ್ಟೇನೂ ಸಕ್ರಿಯವಾಗಿಲ್ಲ. ನೀವು ನೀಡುವ ಚಿತ್ರಣಕ್ಕೂ ಉಳ್ಳಾಲ-ಕೊಣಾಜೆ ವ್ಯಾಪ್ತಿಯ ಸನ್ನಿವೇಶಕ್ಕೂ ಅಜಗಜಾಂತರವಿದೆ’ ಎಂದು ಹಾರಿಕೆಯ ಉತ್ತರ ನೀಡಿ ಜಾರಿಕೊಳ್ಳುತ್ತಾರೆ. ಹಾಗಿದ್ದರೆ ಈ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳು ಮಿತಿ ಮೀರಲು ಕಾರಣ ಏನು ಎಂದು ಕೇಳಿದರೆ, ಕ್ರಿಮಿನಲ್ ಕೃತ್ಯಕ್ಕೂ ಮಾದಕ ದ್ರವ್ಯ ವ್ಯಸನಕ್ಕೂ ಸಂಬಂಧ ಕಲ್ಪಿಸುವ ಅಗತ್ಯವಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಪ್ಪೆ ಸಾರಿಸುತ್ತಾರೆ.
***
 ಅವನೊಬ್ಬ ಸುಸಂಸ್ಕೃತ ಕುಟುಂಬದ ಯುವಕ. ಹೆಸರು ರಫೀಕ್(ಹೆಸರು ಬದಲಿಸಲಾಗಿದೆ). ಆ ಕುಟುಂಬಕ್ಕೆ ಧಾರ್ಮಿಕ ಹಿನ್ನೆಲೆಯೂ ಇದೆ. ಅಂತಹ ಯುವಕನನ್ನು ಮಾದಕ ವ್ಯಸನಿಗಳು ಬಲೆಗೆ ಕೆಡವಿದರು. ಅದರ ದಾಸನಾದ ಯುವಕ ಅಪರಾಧ ಚಟುವಟಿಕೆಯಲ್ಲೂ ತೊಡಗಿಸಿಕೊಂಡ. ಇದನ್ನು ತಿಳಿದ ಮನೆಮಂದಿಗೆ ದಿಗಿಲು. ವಿಷಯ ಬಹಿರಂಗಗೊಂಡರೆ ಕುಟುಂಬದ ಮಾನ ಹರಾಜು ಎಂಬ ಭಯ. ಅಂತೂ ಅವರಿವರ ಬಳಿ ಅಂಗಲಾಚಿ ‘ಇದೇ ಕೊನೆ. ಇನ್ನು ಮುಂದೆ ನಿಮ್ಮ ಸಹಾಯಕ್ಕೆ ನಾವು ಬರುವುದಿಲ್ಲ’ ಎಂದು ಯುವಕನಿಗೆ ಬುದ್ಧಿವಾದ ಹೇಳಿದರು. ಪೊಲೀಸರು ಪ್ರಕರಣ ದಾಖಲಿಸಿದರೂ ವಿಷಯ ಗೌಪ್ಯವಾಗಿಡಲಾಯಿತು. ಅಂತೂ ಯುವಕ ಅಮಲಿನಿಂದ ಮುಕ್ತಿ ಪಡೆದ.

ಅವನು ಮಧ್ಯಮ ವರ್ಗದ ಬಾಲಕ. ಹೆಸರು ಯೂನುಸು(ಹೆಸರು ಬದಲಿಸಲಾಗಿದೆ). ಶಾಲೆಗೆ ಹೋಗುತ್ತಿದ್ದ ಈ ಬಾಲಕನನ್ನು ಈ ಜಾಲದ ಸದಸ್ಯರು ಪುಸಲಾಯಿಸಿಕೊಂಡು ಆಸುಪಾಸಿನ ಫಾಸ್ಟ್ ಫುಡ್ ಸೆಂಟರ್‌ಗೆ ಕರೆದೊಯ್ದು ಹೊಟ್ಟೆತುಂಬಾ ತಿನ್ನಿಸಿದರು. ಕಾರಲ್ಲೇ ಅತ್ತಿಂದಿತ್ತ ಕರೆದೊಯ್ದರು. ಜೊತೆಗೆ ಮಾದಕ ದ್ರವ್ಯದ ಪರಿಚಯ ಕೂಡ ಮಾಡಿಕೊಟ್ಟರು. ಮನೆಯವರಿಗೆ ವಿಷಯ ತಿಳಿಯುವ ಮುನ್ನ ಬಾಲಕ ಮಾದಕ ವ್ಯಸನಿಯಾಗಿದ್ದ. ಬಳಿಕ ಅಲ್ಲಿಂದ ಆ ಬಾಲಕನನ್ನು ಪಾರು ಮಾಡಲು ಮನೆಯವರು ಪಟ್ಟ ಸಾಹಸ ಅಷ್ಟಿಷ್ಟಲ್ಲ.

ಅವನ ಹೆಸರು ಅನೀಸ್ (ಹೆಸರು ಬದಲಿ ಸಲಾಗಿದೆ). ಬಡ ಕುಟುಂಬದ ಯುವಕ. ನಿಯತ್ತಿನಿಂದ ಕೆಲಸ ಮಾಡುತ್ತಿದ್ದ ಈ ಯುವಕನಿಗೆ ಗೆಳೆಯರ ಸಂಗ ಸಿಕ್ಕಿತು. ಕೆಲಸಕ್ಕೆ ಹೋಗದೆ ಹಗಲು ಹೊತ್ತು ಎಲ್ಲೆಡೆ ತಿರುಗಾಡತೊಡಗಿದ. ರಾತ್ರಿ ಮನೆ ಸೇರುತ್ತಿದ್ದ. ಮನೆ ಸೇರಿ ಸುಮ್ಮನಿರುವ ಬದಲು ನಶೆಯಲ್ಲೇ ತಂದೆ-ತಾಯಿ-ಅಕ್ಕ ಎಂದು ನೋಡದೆ ಮನೆಯವರಿಗೆಲ್ಲಾ ಹೊಡೆಯತೊಡಗಿದ. ಅಷ್ಟೇ ಅಲ್ಲ, ನೆರಮನೆಯವರಿಗೂ ಹಲ್ಲೆ ಮಾಡತೊಡಗಿದ. ಹಣಕ್ಕಾಗಿ ದಾರಿ ಹೋಕರನ್ನು ಬೆದರಿಸತೊಡಗಿದ. ಈಗಲೂ ಈತ ಈ ವ್ಯಸನದಿಂದ ಹೊರ ಬಂದಿಲ್ಲ.

(ಗಾಂಜಾ ಅಡ್ಡೆಯಾಗಿರುವ ಪೆರ್ಮನ್ನೂರು ಸಮೀಪದ ಪ್ರದೇಶ)

ಹೀಗೆ ಉಳ್ಳಾಲ ಮತ್ತು ಆಸುಪಾಸಿನ ಸುಮಾರು 12 ವರ್ಷದ ಬಾಲಕರಿಂದ ಹಿಡಿದು 40 ವರ್ಷದೊಳಗಿನ ವ್ಯಕ್ತಿಗಳು ಮಾದಕ ದ್ರವ್ಯ ಜಾಲಕ್ಕೆ ಸಿಲುಕಿದ್ದು, ಇವರನ್ನು ನಿಯಂತ್ರಿಸಲಾಗದಂತಹ ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ. ಮೂಲವೊಂದರ ಪ್ರಕಾರ ಈ ಜಾಲದ ಕಪಿಮುಷ್ಟಿಯಿಂದ ಹೊರ ಬಂದವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಆದರೆ, ಈ ಜಾಲದೊಳಗೆ ಸಿಲುಕಿ ಒದ್ದಾಡುತ್ತಿರುವವರು ಸಾವಿರಾರು ಮಂದಿ. ಆ ಪೈಕಿ ಶೇ.85ರಷ್ಟು ಮುಸ್ಲಿಂ ಯುವಕರು ಎಂಬುದು ಗಮನಾರ್ಹ.
ಅಂದಹಾಗೆ ಮನೆ, ಕುಟುಂಬದವರಿಗೂ ಮಾರಿಗಳಾಗಿರುವ ಈ ವ್ಯಸನಿಗಳಿಗೆ ಕೆಲವು ಪ್ರಭಾವಿ ರಾಜಕಾರಣಿಗಳು ಮತ್ತು ಪೊಲೀಸರ ಸಹಕಾರ, ಬೆಂಬಲ, ಪ್ರೋತ್ಸಾಹ ಸಿಗುತ್ತಿರುವುದೇ ಉಳ್ಳಾಲದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಲು ಕಾರಣ ಎಂಬ ಆರೋಪ ಪಕ್ಷಭೇದವಿಲ್ಲದೆ ಸಾರ್ವತ್ರಿಕವಾಗಿ ಕೇಳಿ ಬರುತ್ತಿದೆ.

ಅಡ್ಡೆ ಗೊತ್ತಿದ್ದೂ ಪೊಲೀಸರು ಮೌನ
 ಅಂದಹಾಗೆ, ಈ ಜಾಲದ ಸದಸ್ಯರು ಎಲ್ಲೆಲ್ಲಿ ಸಕ್ರಿಯರಾಗಿದ್ದಾರೆ. ಯಾವಾಗ ಎಲ್ಲಿರುತ್ತಾರೆ ಎಂಬುದು ಪೊಲೀಸರಿಗೆ ಚೆನ್ನಾಗಿ ಗೊತ್ತು. ಆದರೆ, ಪೊಲೀಸರು ಅವರನ್ನು ಬಂಧಿಸಿ ಮಾದಕ ದ್ರವ್ಯ/ಪದಾರ್ಥ ಜಾಲವನ್ನು ಭೇದಿಸಲು ಮಾತ್ರ ಮುಂದಾಗುತ್ತಿಲ್ಲ. ಅಂದಹಾಗೆ, ಕೆಲವೊಮ್ಮೆ ಇವರು ‘ಭೂಗತ’ ರೀತಿಯಲ್ಲೇ ಕಾರ್ಯಾಚರಿಸುತ್ತಾರೆ. ಎಲ್ಲೂ ಸಣ್ಣ ಸುಳಿವು ಕೊಡದೆ ಗಾಂಜಾ ಪೂರೈಕೆ ಮಾಡುತ್ತಾರೆ, ಯುವಕರನ್ನು ಬಲೆಗೆ ಕೆಡಹುತ್ತಾರೆ. ಇವರ ಜೀವನವೂ ಐಷಾರಾಮಿ. ಇದನ್ನು ಕಂಡವರು ಐಷಾರಾಮಿ ಬದುಕಿಗೆ ಹಾತೊರೆಯುತ್ತಿರುವುದು ಸುಳ್ಳಲ್ಲ.

ಪೊಲೀಸರಿಗೆ ಹಲ್ಲೆ ನಡೆಸಿದರೂ ರಾಜಿ ಪಂಚಾಯಿತಿ
 ಕೆಲವು ದಿನದ ಹಿಂದೆ ಇಲ್ಲಿನ ಒಬ್ಬ ಪೊಲೀಸ್ ಸಿಬ್ಬಂದಿಗೆ ಇದೇ ಮಾದಕ ದ್ರವ್ಯ ವ್ಯಸನಿಗಳು ಹಲ್ಲೆ ನಡೆಸಿದ್ದರು. ಪೊಲೀಸರು ಮನಸ್ಸು ಮಾಡಿದ್ದರೆ ಕರ್ತವ್ಯಕ್ಕೆ ಅಡ್ಡಿ ಆರೋಪದಲ್ಲಿ ಪ್ರಕರಣ ದಾಖಲಿಸಬಹುದಿತ್ತು. ಆದರೆ, ಪೊಲೀಸರೇ ಈ ವ್ಯಸನಿಗಳ ಜೊತೆ ರಾಜೀ ಪಂಚಾಯಿತಿಗೆೆ ಮುಂದಾದರು. ಹಲ್ಲೆಗೊಳಗಾದ ಪೊಲೀಸ್ ಕಳೆದ 7-8 ವರ್ಷಗಳಿಂದ ಉಳ್ಳಾಲದಲ್ಲೇ ಬೀಡು ಬಿಟ್ಟಿದ್ದಾರೆ. ಹಲ್ಲೆಗೊಳಗಾದರೂ ಸರಿ, ಈ ಪೊಲೀಸ್‌ಗೂ ಉಳ್ಳಾಲವೇ ಬೇಕು. ಹೀಗೆ ಪೊಲೀಸರ ಅತಿಯಾದ ಪ್ರೀತಿ-ಮಮತೆಯಿಂದ ಉಳ್ಳಾಲದಲ್ಲಿ ಈಗ ಮಾದಕ ವ್ಯಸನಿಗಳೇ ಡಾನ್‌ಗಳಾಗುತ್ತಿದ್ದಾರೆ.

► ಉಳ್ಳಾಲ ಕೋಡಿಯಲ್ಲಿಹೊರ ಊರವರ ಠಿಕಾಣಿ
ಉಳ್ಳಾಲ ಕೋಡಿಯಲ್ಲೊಂದು ಹೊಟೇಲ್ ಇದೆ. ಖಾದ್ಯ ತಿನ್ನಲು ಹೊರ ಊರಿನ ಯುವಕರು ಸಂಜೆಯಾಗುತ್ತಲೇ ಇಲ್ಲಿಗೆ ಧಾವಿಸುತ್ತಾರೆ. ರಾತ್ರಿಯವರೆಗೂ ಯುವಕರು ಇಲ್ಲೇ ಠಳಾಯಿಸುತ್ತಾರೆ. ಕೇಕೆ ಹಾಕಿ ಕಾಲ ಕಳೆಯುತ್ತಾರೆ. ಹೊರ ಊರಿನಿಂದ ಬಂದ ಇವರಿಗೆ ರಾತ್ರಿಯವರೆಗೆ ಏನು ಕೆಲಸ? ಮಾದಕ ದ್ರವ್ಯ ಜಾಲದ ಜೊತೆ ಈ ಯುವಕರು ಸಂಪರ್ಕ ಹೊಂದಿದ್ದಾರಾ? ಗೊತ್ತಿಲ್ಲ. ಆದರೆ ಈ ಯುವಕರನ್ನು ಈವರೆಗೂ ಪೊಲೀಸರು ವಿಚಾರಣೆಗೊಳಪಡಿಸದಿರುವುದು ಸ್ಥಳೀಯರಲ್ಲಿ ಆತಂಕ ಮತ್ತು ಅನುಮಾನ ಸೃಷ್ಟಿಸಿದೆ.

ಜೈಲಿಗೆ ಹೋದರೂ ಸದಾ ಸಂಪರ್ಕ
ಗಾಂಜಾ ಮತ್ತಿತರ ಅಪರಾಧ ಎಸಗಿ ಜೈಲಿಗೆ ಹೋದರೂ ಆರೋಪಿಗಳು ಹೊರ ಜಗತ್ತಿನೊಂದಿಗೆ ಸದಾ ಸಂಪರ್ಕದಲ್ಲಿರುವುದು ಉಳ್ಳಾಲದ ಮಟ್ಟಿಗೆ
ಹೊಸದೇನಲ್ಲ. ಜೂಲುಗಳಲ್ಲಿ ಮೊಬೈಲ್ ಜಾಮರ್ ಅಳವಡಿಸಿದರೂ ಕೂಡ ಈ ಆರೋಪಿಗಳು ಅದನ್ನು ಭೇದಿಸಿ ಸಂಪರ್ಕ ಸಾಧಿಸುತ್ತಾರೆ. ಕೆಲವರು ಫೇಸ್‌ಬುಕ್ ಲೈವ್‌ನಲ್ಲಿರುವುದು ಕೂಡ ವಿಶೇಷ. ಪೊಲೀಸರಿಗೆ ಇದೆಲ್ಲಾ ಗೊತ್ತಿದ್ದರೂ ಮೌನ ತಾಳಿರುವುದು ವ್ಯವಸ್ಥೆಯ ವ್ಯಂಗ್ಯವಾಗಿದೆ.

ಮಹಿಳೆಯರೂ ಸಾಥ್!
ಆಘಾತಕಾರಿ ವಿಷಯ ಏನೆಂದರೆ, ಇಲ್ಲಿ ಗಾಂಜಾ ಪೂರೈಕೆಯಲ್ಲಿ ಕೆಲವು ಮಹಿಳೆಯರೂ ಸಾಥ್ ನೀಡುತ್ತಾರೆ. ಮನೆಯ ಯಜಮಾನನ ಸೂಚನೆಯ ಮೇರೆಗೆ ಮನೆ ಬಾಗಿಲಿಗೆ ಗಾಂಜಾ ಅರಸಿಕೊಂಡು ಬಂದವರಿಗೆ ದುಪ್ಪಟ್ಟು ಬೆಲೆಗೆ ಗಾಂಜಾ ಮಾರಾಟ ಮಾಡುತ್ತಾರೆ. ಅಲ್ಲದೆ ಜೈಲಿನೊಳಗಿರುವ ಕೈದಿಗಳಿಗೂ ಗಾಂಜಾ ಪೂರೈಕೆ ಮಾಡುವಲ್ಲಿಯೂ ಈ ಮಹಿಳೆಯರು ನಿಸ್ಸೀಮರಾಗಿದ್ದಾರೆ ಎಂದು ತಿಳಿದು ಬಂದಿದೆ.

► ಪೊಲೀಸರ ದಾಳಿ ಒಂದು ಪ್ರಹಸನ

ಪೊಲೀಸರೂ ಅಷ್ಟೇ, ಮಾಹಿತಿ ಅಥವಾ ದೂರು ನೀಡಿದ ತಕ್ಷಣ ನಾಟಕೀಯ ದಾಳಿ ಮಾಡಿ ಸುಮ್ಮನಿರುತ್ತಾರೆ. ಸಡಿಲ ಸೆಕ್ಷನ್ ಹಾಕಿ ಬಿಡುತ್ತಾರೆ. ಕೆಲವು ದಿನ ಜೈಲು ಸೇರುವ ಈ ಯುವಕರು ಬಳಿಕ ಊರಲ್ಲಿ ಮಾಡುವ ದಾದಾಗಿರಿ ಪೊಲೀಸರನ್ನೇ ನಾಚಿಸುವಂತಿದೆ. ಕೂಗಳತೆ ದೂರದಲ್ಲಿ ಠಾಣೆಯಿದ್ದರೂ ಇವರಿಗೆ ಕಾನೂನಿನ ಭಯವಿಲ್ಲ. ಆಸುಪಾಸಿನ ಅಂಗಡಿ, ಹೊಟೇಲ್, ಉದ್ಯಮಿಗಳಿಂದ ಹಫ್ತಾ ವಸೂಲಿ ಮಾಡುತ್ತಾರೆ. ಹಫ್ತಾ ನೀಡಲು ಹಿಂದೇಟು ಹಾಕಿದರೆ ಮಾರಕ ದಾಳಿ ಅಥವಾ ಮಾನಹಾನಿಗೂ ಈ ತಂಡ ಅಥವಾ ಮಾದಕ ವ್ಯಸನಿಗಳು ಹೇಸುವುದಿಲ್ಲ.

ಅಲ್ಲದೆ ಪೊಲೀಸರಿಗೂ ಈ ವ್ಯಸನಿಗಳಿಂದ ಹಫ್ತಾ ಹೋಗುತ್ತದೆ ಎಂಬ ಆರೋಪವಿದೆ. ಕೆಲವರನ್ನು ಪುಂಡು ಪೋಕರಿಗಳಾಗಿ ಬೆಳೆಯಲು ಬಿಡುವ ಪೊಲೀಸರು ಇವರನ್ನೇ ಮಾಹಿತಿದಾರರಂತೆ ಬಳಸಿಕೊಳ್ಳುತ್ತಾರೆ. ಪೊಲೀಸರು ಮತ್ತು ಮಾದಕ ವ್ಯಸನಿಗಳ ಮಧ್ಯೆ ಎಂತಹ ಸಲುಗೆ ಇದೆ ಎಂದರೆ ಕೆಲವು ಪೊಲೀಸರು ಇವರ ಮೊಬೈಲ್‌ಗೆ ಕರೆನ್ಸಿ ಹಾಕಿ ಧನ್ಯರಾಗುತ್ತಾರೆ ಎಂದು ಈ ಜಾಲವನ್ನು ಬಲ್ಲವರು ಮಾಹಿತಿ ನೀಡುತ್ತಾರೆ.

(ಮಾಸ್ತಿಕಟ್ಟೆಯ ಸಮೀಪ ಮಾದಕ ವ್ಯಸನಿಗಳ ತಂಗುದಾಣ)

ಯಥೇಚ್ಛ ಮಾತ್ರೆ

ವೈದ್ಯರ ಔಷಧದ ಚೀಟಿ ಇಲ್ಲದೆ ಮೆಡಿಕಲ್ ಅಂಗಡಿಯವರು ಯಾವುದೇ ಔಷಧ, ಮಾತ್ರೆ ಕೊಡುವಂತಿಲ್ಲ. ಆದರೆ, ಇಲ್ಲಿನ ಮಾದಕ ದ್ರವ್ಯವ್ಯಸನಿಗಳಿಗೆ ಮಾತ್ರ ವೈದ್ಯರ ಚೀಟಿ ಇಲ್ಲದೆ ಅಮಲು ಮಿಶ್ರಿತ ಮಾತ್ರೆಗಳು, ಸಿರಪ್ ಇತ್ಯಾದಿ ಬಹಳ ಸುಲಭವಾಗಿ ಸಿಗುತ್ತವೆ. ಮಾನಸಿಕ ರೋಗಿಗಳಿಗೆ ನೀಡುವ ಔಷಧವನ್ನೂ ಈ ವ್ಯಸನಿಗಳು ಯಾವುದೇ ತೊಂದರೆಯಿಲ್ಲದೆ ಖರೀದಿಸುತ್ತಾರೆ. ಕೆಲವು ಮೆಡಿಕಲ್ ಅಂಗಡಿಯವರು ಇವರ ಬೆದರಿಕೆಗೆ ಮಣಿದು ಚೀಟಿ ಇಲ್ಲದೆಯೂ ಮಾತ್ರೆ ಕೊಟ್ಟರೆ, ಇನ್ನು ಕೆಲವು ಮೆಡಿಕಲ್ ಅಂಗಡಿಯವರು ಇವರ ಜೊತೆ ಶಾಮೀಲಾಗಿರುವ ಆರೋಪವೂ ಇದೆ. ಅಂದರೆ ಅಮಲು ಮಿಶ್ರಿತ ಮಾತ್ರೆಗಳನ್ನು ದುಪ್ಪಟ್ಟು ಬೆಲೆ ನೀಡಿ ಭಾರೀ ಲಾಭ ಗಳಿಸುತ್ತಾರೆ ಎಂದು ಹೇಳಲಾಗುತ್ತಿದೆ. ಮಾತ್ರೆಯ ಜೊತೆಗೆ ಮತ್ತುಬರಿಸುವ ಇಂಜೆಕ್ಷನ್‌ಗಳನ್ನು ಕೂಡ ಕೆಲವು ಮೆಡಿಕಲ್ ಅಂಗಡಿಯವರು ಪೂರೈಸುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆದರೆ, ಹೆಸರು ಬಹಿರಂಗಪಡಿಸಲು ಇಚ್ಛಿಸದ ತೊಕ್ಕೊಟ್ಟಿನ ಮೆಡಿಕಲ್ ಅಂಗಡಿಯ ಮಾಲಕರೊಬ್ಬರು ಈ ಆರೋಪವನ್ನು ನಿರಾಕರಿಸಿದ್ದಾರೆ. ನಮ್ಮಲ್ಲಿ ಜನರು ಇಂತಹ ಮಾತ್ರೆಗಳನ್ನು ಕೇಳಿಕೊಂಡು ಬರುವುದು ನಿಜ. ಆದರೆ ನಾವು ವೈದ್ಯರ ಚೀಟಿ ಇಲ್ಲದೆ ಯಾವ ಮಾತ್ರೆಯನ್ನೂ ಕೊಡುವುದಿಲ್ಲ. ಇನ್ನು ಯುವಕರನ್ನು ಬಲಿ ತೆಗೆದುಕೊಳ್ಳುವ ಇಂತಹ ಮಾತ್ರೆಗಳ ಮಾರಾಟದ ಸಂದರ್ಭ ಬಹಳಷ್ಟು ಎಚ್ಚರಿಕೆ ವಹಿಸುತೇವೆ ಎಂದು ಈ ಅಂಗಡಿಯ ಮಾಲಕರು ಹೇಳಿದರು.

ಕೈಯಿಂದ ಕೈಗೆ
ಗಾಂಜಾ-ಡ್ರಗ್ಸ್ ಜಾಲದ ಬಲೆಗೆ ಬೀಳುವವರಿಗೆ ವಯಸ್ಸಿನ ಹಂಗಿಲ್ಲ. ಇದರ ಪೂರೈಕೆದಾರರು ಕೂಡ ಹೆಚ್ಚಾಗಿ ಯುವಕರನ್ನೇ ಟಾರ್ಗೆಟ್ ಮಾಡುತ್ತಾರೆ. ಉಳ್ಳಾಲ ಮತ್ತು ಸುತ್ತಮುತ್ತಲಿನ ಯಾವ ಪೆಟ್ಟಿಗೆ ಅಂಗಡಿಗಳಲ್ಲೂ ಸದ್ಯ ಗಾಂಜಾ ಮಾರಾಟ ನಡೆಯುತ್ತಿಲ್ಲ. ಗೋವಾ ಮತ್ತು ಕೇರಳದಿಂದ ನೇರ ಉಳ್ಳಾಲದ ಕಡಪ್ಪರಕ್ಕೆ ಗಾಂಜಾವನ್ನು ತಂದು ಕೊಡುತ್ತಾರೆ. ಅದೂ ಕೈಯಿಂದ ಕೈಗೆ. ಅಲ್ಲಿಂದಲೇ ಎಲ್ಲೆಡೆ ಮಾರಾಟ ಮಾಡಲಾಗುತ್ತದೆ ಎಂದು ಸಾರ್ವಜನಿಕರು ಹೇಳುತ್ತಾರೆ.

ದೂರು ಕೊಟ್ಟರೆ ಪೊಲೀಸರಿಂದಲೇ ಮಾಹಿತಿ !

ಉಳ್ಳಾಲದಲ್ಲಿ ಗಾಂಜಾ, ಡ್ರಗ್ಸ್ ಜಾಲದ ವಿರುದ್ಧ ಯಾರಾದರು ಲಿಖಿತ ಅಥವಾ ವೌಖಿಕ ದೂರು ನೀಡಿದರೆ, ದೂರು ನೀಡಿದವರ ಬಗ್ಗೆ ಪೊಲೀಸರೇ ಮಾದಕ ದ್ರವ್ಯ ಜಾಲದ ಸದಸ್ಯರಿಗೆ ಮಾಹಿತಿ ನೀಡುವ ಪರಿಪಾಠ ಇಲ್ಲಿದೆ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ರಾಜಕೀಯ ಮುಖಂಡರು ಆರೋಪಿಸುತ್ತಾರೆ. ಹಾಗಾಗಿ ಯಾರೂ ದೂರು ನೀಡಲು ಮುಂದಾಗುತ್ತಿಲ್ಲ. ದೂರು ನೀಡಿದ ಬಳಿಕ ದೂರನ್ನು ವಾಪಸ್ ಪಡೆಯುವಂತೆಯೂ ಈ ತಂಡ ಒತ್ತಡ ಹಾಕುತ್ತದೆ. ಒಂದು ವೇಳೆ ದೂರು ವಾಪಸ್ ಪಡೆಯದಿದ್ದರೆ ಅವರ ವಿರುದ್ಧ ಅಪರಾಧ ಎಸಗಲೂ ಈ ತಂಡ ಹೇಸುವುದಿಲ್ಲ. ಮೊನ್ನೆ ಮುಕ್ಕಚೇರಿಯಲ್ಲಿ ನಡೆದ ಝುಬೈರ್ ಹತ್ಯೆಗೆ ಇದೂ ಒಂದು ಕಾರಣ ಎನ್ನಲಾಗಿದೆ.

ವಾರದೊಳಗೆ ಜಾಮೀನು
 ಈ ಗಾಂಜಾ ವ್ಯಸನಿಗಳು ಉಳ್ಳಾಲ ಮತ್ತು ಆಸುಪಾಸಿನಲ್ಲಿ ನಡೆಸಿದ ಅಪರಾಧ ಕೃತ್ಯ ಒಂದೆರಡಲ್ಲ. ಕಳೆದ ರವಿವಾರ ಮುಂಜಾನೆ ಉಳ್ಳಾಲ ಕೋಡಿಯಲ್ಲಿ ಸೋಡಾಬಾಟ್ಲಿಯಿಂದ ಹೊಡೆದು ರಿಕ್ಷಾವೊಂದರ ಗ್ಲಾಸನ್ನು ಹುಡಿ ಮಾಡಿದ್ದಾರೆ. ನಶೆ ಏರಿದ ಬಳಿಕ ಎಂತಹ ಅಪರಾಧ ಎಸಗಿದರೂ ಹೆಚ್ಚೆಂದರೆ ಇವರು ಒಂದು ವಾರ ಜೈಲಲ್ಲಿರುತ್ತಾರೆ. ಪೊಲೀಸರು ಅಂತಹ ಸಡಿಲ ಪ್ರಕರಣ ದಾಖಲಿಸಿ ಇವರನ್ನು ಬಿಟ್ಟು ಬಿಡುತ್ತಾರೆ. ಇದು ಗೊತ್ತಿದ್ದೇ ಮಾದಕ ವ್ಯಸನಿಗಳು ಪುಂಡಾಟಿಕೆ ಮೆರೆಯುತ್ತಲೇ ಇದ್ದಾರೆ ಎಂಬ ಆರೋಪವಿದೆ.

► ಕೋಡ್ ನಂಬ್ರ ಬಳಕೆ

ಮಾದಕ ದ್ರವ್ಯ ಜಾಲದೊಳಗೆ ಬಿದ್ದವರ ಹೆಸರು ಎಲ್ಲೂ ಜಗಜ್ಜಾಹೀರು ಆಗುತ್ತಿಲ್ಲ. ತಮ್ಮ ಸಂವಹನವನ್ನು ಇವರು ಕೋಡ್ ಸಂಖ್ಯೆಯ ಆಧಾರದ ಮೇಲೆ ಮಾಡುತ್ತಾರೆ. ಯಾವ ಕ್ಷಣದಲ್ಲಾದರೂ ಸರಿ, ಜಾಲದಿಂದ ಹೊರ ಹೋದರೆ ತಮ್ಮೆಲ್ಲಾ ವಿವರ ಬಹಿರಂಗವಾದೀತು ಎಂಬ ಆತಂಕದಿಂದ ಇವರು ಹೆಸರಿನ ಬದಲು ಕೋಡ್ ಸಂಖ್ಯೆಗೆ ಆದ್ಯತೆ ನೀಡುತ್ತಾರೆ.

►ಸಕ್ರಮ ಮತ್ತು ಅಕ್ರಮ

ಮಾದಕ ದ್ರವ್ಯದಲ್ಲಿ ಸಕ್ರಮ ಮತ್ತು ಅಕ್ರಮವಿದೆ. ಬೀಡಿ, ಸಿಗರೇಟ್, ಪಾನ್‌ಪರಾಗ್, ಅಮಲುಭರಿತ ಕೆಲವು ಪಾನೀಯಗಳು ಸಕ್ರಮ ವಾದರೆ, ಗಾಂಜಾ, ಕೊಕೇನ್, ಹೆರಾಯಿನ್, ಬ್ರೌನ್‌ಶುಗರ್ ಇತ್ಯಾದಿ ಅಕ್ರಮವಾಗಿವೆೆ. ಈ ಮಧ್ಯೆ ಅತ್ತ ಅಕ್ರಮವೂ ಅಲ್ಲದ ಇತ್ತ ಸಕ್ರಮವೂ ಆಗದ ಕೆಲವು ವಸ್ತುಗಳ ಮೂಲಕವೂ ಕೆಲವರು ನಶೆ ಏರಿಸಿಕೊಳ್ಳುತ್ತಾರೆ. ಇದಕ್ಕೆ ಇನ್‌ಹೆಲೆಂಟ್ ಎನ್ನುತ್ತಾರೆ. ಉದಾ: ವೈಟ್ನರ್, ಪೆಟ್ರೋಲ್, ಪೈಂಟಿಂಗ್, ವಾರ್ನಿಶ್, ಫೆವಿಕಾಲ್, ಸೈಕಲ್ ಟ್ಯೂಬ್‌ಗೆ ಬಳಸುವ ದ್ರವ್ಯ, ನೇಲ್‌ಪಾಲಿಶ್, ಶೂ ಪಾಲಿಶ್, ಟೂತ್‌ಪೇಸ್ಟ್ ಅಲ್ಲದೆ ಅಮಲು ಮಾತ್ರೆ, ಅಮಲುದ್ರವ್ಯ ಮಿಶ್ರಿತ ಸಿರಪ್ ಸೇವನೆ ಇತ್ಯಾದಿ. ಬ್ರೆಡ್‌ಗೆ ಐಡೆಕ್ಸ್ ಅಥವಾ ವಿಕ್ಸ್ ಬೆರೆಸಿ ತಿನ್ನುವ ಮತ್ತು ಝಂಡುಬಾಮ್‌ಗೆ ಗುಟ್ಕಾ ಹಾಕಿ ತಿನ್ನುವ ಮೂಲಕವೂ ನಶೆ ಏರಿಸುತ್ತಾರೆ.

►ವಿಚಿತ್ರ ವರ್ತನೆ
ಈ ವ್ಯಸನಿಗಳ ವರ್ತನೆ ಕೂಡ ವಿಚಿತ್ರವಾಗಿರುತ್ತವೆ. ಇವರು ಯಾವ ಅಪರಾಧವನ್ನೂ ಮಾಡಲು ಹೇಸಲಾರರು. ಇವರಿಗೆ ಕೆಲವೊಮ್ಮೆ ಇತ್ತ ಮಾದಕ ದ್ರವ್ಯ ಅಥವಾ ಪದಾರ್ಥ ತೆಗೆಯಲಾಗದ ಮತ್ತು ಅತ್ತ ಬಿಡಲೂ ಆಗದ ವಿಚಿತ್ರ ಸನ್ನಿವೇಶದಲ್ಲಿ ಸಿಲುಕುತ್ತಾರೆ. ಹಠಾತ್ ಆಗಿ ಶಬ್ದ ಕೇಳಿದ ಹಾಗೆ, ಪೊಲೀಸರು ಹೊಡೆಯಲು ಬಂದ ಹಾಗೆ, ತಾನು ಪ್ರಯಾಣಿಸುವ ಬಸ್ಸನ್ನೇ ಆನೆಯೊಂದು ಎತ್ತುವ ಹಾಗೆ, ತನ್ನ ಮೈಮೇಲೆ ಬೆಟ್ಟ-ಗುಡ್ಡ ಬಿದ್ದ ಹಾಗೆ, ಹಾವು ಕಚ್ಚಲು ಬಂದ ಹಾಗೆ, ಕೆಲವೊಮ್ಮೆ ವೌನ, ಕೆಲವೊಮ್ಮೆ ನಗು, ಕೆಲವೊಮ್ಮೆ ವಿಪರೀತ ಮಾತು... ಇತ್ಯಾದಿ ವಿಚಿತ್ರ ನಡವಳಿಕೆ ಇವರಲ್ಲಿ ಕಂಡು ಬರುತ್ತದೆ. ಕೆಲವೊಮ್ಮೆ ಆತ್ಮಹತ್ಯೆಗೂ ಇವರು ಮುಂದಾಗುವುದುಂಟು.

►ಕೇರಳ-ಹೈದರಾಬಾದ್-ಗೋವಾ

ಗಾಂಜಾ, ಕೊಕೇನ್, ಹೆರಾಯಿನ್, ಬ್ರೌನ್‌ಶುಗರ್ ಇತ್ಯಾದಿ ಕೇರಳ-ಹೈದರಾಬಾದ್, ಗೋವಾದಿಂದ ಮಂಗಳೂರಿಗೆ ರಫ್ತಾಗುತ್ತಿದೆ. ಪಾಕಿಸ್ತಾನದಿಂದಲೂ ರವಾನೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಬೂದಿ, ಹಳೆ ಮಾತ್ರೆಗಳು, ಇಲಿಪಾಷಾಣ, ಮಲೇರಿಯಾ ರೋಗ ನಿಯಂತ್ರಣಕ್ಕೆ ಸಿಂಪಡಿಸುವ ದ್ರವ್ಯವನ್ನು ಬಳಸಿ ಬ್ರೌನ್‌ಶುಗರ್ ತಯಾರಿಸಲಾಗುತ್ತಿದ್ದು, ಇವು ಮನುಷ್ಯನ ದೇಹದೊಳಗೆ ಹೊಕ್ಕರೆ ಆಗುವ ಅಪಾಯ ಎಷ್ಟರಮಟ್ಟಿಗೆ ಇರುತ್ತದೆ ಎಂದು ತಿಳಿಯಬಹುದು. ಅಂದಹಾಗೆ, ಈ ಬ್ರೌನ್‌ಶುಗರ್, ಹೆರಾಯಿನ್, ಟಿಡಿಜೆಸಿಕ್ ಇತ್ಯಾದಿ ಹೊಸ ಬಗೆಯ ಮಾದಕ ದ್ರವ್ಯಗಳಲ್ಲ. ಅವು ಈ ಹಿಂದೆಯೇ ಇತ್ತು. ಈಗ ಹೊಸ ಹೆಸರಿನಲ್ಲಿ ಕಂಗೊಳಿಸುತ್ತಿವೆ ಅಷ್ಟೆ.

►ಈ ಮಾದಕ ದ್ರವ್ಯ ಕಾರ್ಕೋಟಕ ವಿಷಕ್ಕಿಂತಲೂ ಅಪಾಯಕಾರಿ
ಮಾದಕ ದ್ರವ್ಯವು ಕಾರ್ಕೋಟಕ ವಿಷಕ್ಕಿಂತಲೂ ಅಪಾಯಕಾರಿ ಎಂದು ಹೇಳಲಾಗುತ್ತದೆ. ಇದು ಇಂದು ನಿನ್ನೆಯ ಬೆಳವಣಿಗೆಯಲ್ಲ. ಮನುಷ್ಯ ತನ್ನ ನೋವಿಗೆ, ನರಳುವಿಕೆಗೆ, ದು:ಖ ದುಮ್ಮಾನಗಳಿಗೆ ಇದನ್ನೇ ‘ಯಕ್ಷಿಣಿ’ ಪರಿಹಾರ ಎಂದು ಭಾವಿಸಿದ್ದಾನೆ. ಒಮ್ಮೆ ಈ ಯಕ್ಷದೊಳಗೆ ಸಿಲುಕಿದರೆ ಮತ್ತೆ ಅಲ್ಲಿಂದ ಜೀವಂತವಾಗಿ ಪಾರಾಗಿ ಬರಲು ಅಸಾಧ್ಯ. ಅದು ಕ್ಷಣ ಕ್ಷಣಕ್ಕೂ ಮಾದಕ ದ್ರವ್ಯ ವ್ಯಸನಿಯನ್ನು ಕೊಲ್ಲುತ್ತಲೇ ಇರುತ್ತದೆ. ಅಂದಹಾಗೆ, ಆಲ್ಕೋಹಾಲ್-ಗಾಂಜಾ ಮತ್ತಿತರ ಮಾದಕ ವಸ್ತುಗಳು ಚಟವಾಗಿ ಬೆಳೆಯಲು ಕೆಲವು ತಿಂಗಳುಗಳು ಬೇಕು. ಆದರೆ, ಹೆರಾಯಿನ್-ಬ್ರೌನ್‌ಶುಗರ್ ಹಾಗಲ್ಲ. ಇದು ತನ್ನ ಕೆಲಸ ಮಾಡಲು ಒಂದೆರಡು ದಿನ ಸಾಕು. ಹೆರಾಯಿನನ್ನು ಸೂಜಿಮದ್ದಿನ ರೂಪದಲ್ಲಿ ಪಡೆದರೆ, ಬ್ರೌನ್‌ಶುಗರನ್ನು ಹೊಗೆ ಬತ್ತಿಯೊಂದಿಗೆ ಸೇದುತ್ತಾರೆ. ಇವೆರಡೂ ಮೆದುಳು ಸೇರಿ ತನ್ನ ಕೆಲಸ ಆರಂಭಿಸುತ್ತದೆ. ಆ ಬಳಿಕ ಅಂತಹ ವ್ಯಕ್ತಿಯಲ್ಲಿ ಯಾವ ನೋವು, ಆತಂಕ ಕಾಣಿಸದು. ಎಲ್ಲದಕ್ಕೂ ತಾನು ‘ಫಿಟ್’ ಎಂಬ ಭ್ರಮಾಲೋಕದಲ್ಲಿರುತ್ತಾರೆ. ಈ ಭ್ರಮಾ ಲೋಕವೇ ಎಲ್ಲ ಅನಾಹುತಗಳಿಗೆ ಕಾರಣವಾಗುತ್ತದೆ. ಇಂತಹವರಿಗೆ ತನ್ನ ತಂದೆ-ತಾಯಿ, ಒಡಹುಟ್ಟಿದವರು, ಹೆಂಡತಿ-ಮಕ್ಕಳು ಯಾರೂ ಮುಖ್ಯವಲ್ಲ. ಇವರಿಗೆ ಇವರದೇ ಲೋಕ. ಒಂದೇ ಸೂಜಿಯಿಂದ ಹಲವಾರು ಮಂದಿ ಹೆರಾಯಿನ್ ತೆಗೆದುಕೊಳ್ಳುವ ಕಾರಣ ರೋಗವನ್ನು ಪರಸ್ಪರ ಹಂಚಿಕೊಳ್ಳುತ್ತೇವೆ. ಇವು ಲಿವರ್‌ಗೆ ಹೊಡೆತ, ಹೃದಯದ ಸೋಂಕು, ಕ್ಷಯ, ಮಿದುಳು ಪೊರೆ ಉರಿತ, ರಕ್ತ ನಂಜು, ಫಿಟ್ಸ್, ಶ್ವಾಶಕೋಶಗಳ ಕ್ಯಾನ್ಸರ್, ಕೊನೆಗೆ ಏಯ್ಡ್ಸಾ ರೋಗಕ್ಕೂ ತುತ್ತಾದವರಿದ್ದಾರೆ.

ಮಾದಕ ವಸ್ತುಗಳಲ್ಲಿ ಅನೇಕ ವಿಧಗಳಿವೆ. ನರಕೋಶಗಳ ಕ್ರಿಯೆಗಳು ಕುಗ್ಗುವಂತೆ ಮಾಡುವ ಅಫೀಮುಗಳಲ್ಲಿ ಮಾರ್ಫಿನ್, ಕೊಡೀನ್, ಹೆರಾಯಿನ್, ಬ್ರೌನ್‌ಶುಗರ್, ಮೆಥಡೋನ್, ಪಥಿಡನ್, ಟಿಡಿಜೆಸಿಕ್ ಹಾಗೂ ಮದ್ಯಸಾರದಲ್ಲಿ ಹೆಂಡ, ಸಾರಾಯಿ, ಬೀರ್, ಬ್ರಾಂದಿ, ವಿಸ್ಕಿ, ಜಿನ್, ರಮ್, ಅರಾಕ್ ಸೇರಿವೆ. ಅಂಫಿಟಮಿನ್ಸ್, ಬೆಂಜ್ ಆಂಪಿಟಮಿನ್, ಡೆಕ್ಟ್ರೋಆಂಫಿಟಮಿನ್, ಕೆಫಿನ್, ಕೊಕೇನ್ ಇತ್ಯಾದಿ ಪ್ರಚೋದನೆಗೆ ಎಡೆಮಾಡಿಕೊಡುತ್ತದೆ. ಕೆನಬಿಸ್, ಗಾಂಜಾ, ಭಂಗಿ, ಚರಸ್, ಹಶೀಶ್, ಮಾರಿಹೋನ, ಎಲ್‌ಎಸ್‌ಡಿ, ಮೆಸ್ಕಲಿನ, ಪಿಯೋಟ್, ಡೈಜೆಪಾಂ, ಮೆಥಕೊಲಾನ್, ನೈಟ್ರಜೆಪಾಮ್, ಅಲ್‌ಪ್ರೊಜೊಲಾಮ್ ಇತ್ಯಾದಿ ಭ್ರಮಾಜನಕ ಸೃಷ್ಟಿಸುತ್ತದೆ ಎಂದು ಮಾನಸಿಕ ತಜ್ಞ ವೈದ್ಯರು ಹೇಳುತ್ತಾರೆ.


►ಮಾನಸಿಕ ಕಾಯಿಲೆ
 ಸ್ನೇಹಿತರ ಸಂಗ ಬೆಳಸಿದ ಬಳಿಕ ಯಾವುದೋ ಶೋಕಿಗಾಗಿ ಡ್ರಗ್ಸ್-ಗಾಂಜಾ ಚಟಕ್ಕೆ ಬಿದ್ದವರು ಮಾನಸಿಕ ಕಾಯಿಲೆಗೆ ತುತ್ತಾಗುವ ಅಪಾಯವಿದೆ ಎಂದು ಮಾನಸಿಕ ರೋಗ ತಜ್ಞ ವೈದ್ಯರು ಅಭಿಪ್ರಾಯಪಡುತ್ತಾರೆ. ಒಂದೆಡೆ ಹೆಂಡತಿ-ಮಕ್ಕಳು ಬಿಟ್ಟು ಹೋಗಿರುತ್ತಾರೆ, ಇನ್ನೊಂದೆಡೆ ಕೆಲಸದಿಂದ ಕಿತ್ತು ಹಾಕಲ್ಪಟ್ಟಿರುತ್ತಾರೆ. ಇದರಿಂದ ಇವರಲ್ಲಿ ಅಭದ್ರತೆ ಕಾಡಿರುತ್ತದೆ. ಮರೆವು ಅಧಿಕವಾಗುತ್ತದೆ. ಭಯ-ಸಂಶಯ ವಿಪರೀತವಾಗುತ್ತದೆ. ಇದರಿಂದ ಕಂಗಾಲಾಗಿ ಮಾನಸಿಕ ರೋಗಿಯಾಗುವ ಅಪಾಯವೇ ಅಧಿಕ ಎಂದು ವೈದ್ಯರು ಹೇಳುತ್ತಾರೆ.


► ಆಗ ಗ್ಯಾಂಗ್ ಲೀಡರ್, ಈಗ ಯುವ ಕಾಂಗ್ರೆಸ್ ಲೀಡರ್!

ಉಳ್ಳಾಲವನ್ನುಮುಗಿಸಲು ಟಾರ್ಗೆಟ್ ಗ್ಯಾಂಗ್
ಉಳ್ಳಾಲದ ಬೊಟ್ಟು ನಿವಾಸಿಯಾಗಿರುವ ಇಲ್ಯಾಸ್ ಎಂಬಾತ ತನ್ನದೇ ಆದ ಪುಟ್ಟ ತಂಡ ಕಟ್ಟಿಕೊಂಡು ಕೆಲವು ವರ್ಷಗಳ ಹಿಂದೆ ಉಳ್ಳಾಲದ ಆಸುಪಾಸಿನಲ್ಲಿ ಸಣ್ಣಪುಟ್ಟ ಅಪರಾಧ ಪ್ರಕರಣದಲ್ಲಿ ತೊಡಗಿಸಿಕೊಂಡಿದ್ದ. ಆರಂಭದಲ್ಲಿ ಸ್ವಧರ್ಮರಕ್ಷಕರಂತಿದ್ದ ಈ ತಂಡ ಬಳಿಕ ಹಣದ ಆಸೆಗೆ ಬಲಿಬಿದ್ದು ಹನಿಟ್ರಾಪ್ ಮಾಡತೊಡಗಿತು. ಉಳ್ಳಾಲ ಮತ್ತು ಆಸುಪಾಸಿನ ಉದ್ಯಮಿಗಳ ದೌರ್ಬಲ್ಯವನ್ನು ಅರಿತುಕೊಂಡು ಅವರನ್ನು ಬಲೆಗೆ ಕೆಡವಿ ಹಣಕ್ಕಾಗಿ ಬ್ಲಾಕ್‌ಮೇಲ್ ಮಾಡತೊಡಗಿದ ಈ ತಂಡವು ಕ್ರಮೇಣ ತಲಪಾಡಿಯಿಂದ ಹಿಡಿದು ಜಿಲ್ಲೆಯ ಮೂಲೆ ಮೂಲೆಯಲ್ಲಿ ಹರಡಿರುವ ಕ್ರಿಮಿನಲ್‌ಗಳ ಸಂಪರ್ಕ ಸಾಧಿಸಿ ತನ್ನ ದಂಧೆ ಮುಂದುವರಿಸಿತು. ಪೊಲೀಸರು ಹಿಡಿದು ಬೆಂಡೆತ್ತಿದಾಗ ಕೆಲವು ರಾಜಕಾರಣಿಗಳು ಈ ತಂಡದ ಬೆಂಬಲಕ್ಕೆ ನಿಂತರು ಎಂಬುದು ಸ್ಥಳೀಯರ ಆರೋಪ. ಸ್ಥಳೀಯ ಪ್ರಭಾವಿ ರಾಜಕಾರಣಿಗಳ ಬೆಂಬಲ ಸಿಕ್ಕಿದ ಬಳಿಕ ಪೊಲೀಸರು ಕೂಡ ಈ ತಂಡದ ಮೇಲೆ ಮುಗಿ ಬೀಳುವುದನ್ನು ಕಡಿಮೆಗೊಳಿಸಿದರು. ಅಲ್ಲದೆ ಈ ತಂಡದಲ್ಲಿದ್ದ ಕೆಲವು ಮಂದಿಯನ್ನು ತಮ್ಮ ಮಾಹಿತಿದಾರರನ್ನಾಗಿ ಬಳಸಿಕೊಂಡ ಪೊಲೀಸರು ಕ್ರಮೇಣ ಈ ತಂಡದ ಕೆಲವು ಸದಸ್ಯರ ಬಗ್ಗೆ ಮೃದುಧೋರಣೆ ತಾಳಿದರು. ಅದರ ಫಲವಾಗಿ ಉಳ್ಳಾಲ ಮಾದಕ ದ್ರವ್ಯಜಾಲಕ್ಕೆ ಸಿಲುಕಿತು.

ಮುಂದೆ ಈ ಗ್ಯಾಂಗ್‌ನ ಸದಸ್ಯರು ಮಾದಕ ದ್ರವ್ಯ ಜಾಲದಲ್ಲಿ ತೊಡಗಿಸಿಕೊಂಡ ಕಾರಣ ಇತರರಿಗೂ ಶ್ರೀರಕ್ಷೆ ಸಿಕ್ಕಂತಾಯಿತು. ಹಾಗಾಗಿ ಹೆಚ್ಚಿನ ಯುವಕರು ಉಳ್ಳಾಲ ಕಡಪ್ಪರದಲ್ಲಿ ಬೀಡುಬಿಟ್ಟರು. ಸಮಯದ ಹಂಗಿಲ್ಲದೆ ಕಾಲ ಕಳೆದರು. ಕಡಲ ಕಿನಾರೆಯಲ್ಲಿ ಬೀಸುವ ತಂಪಾದ ಗಾಳಿಗೆ ಮೈಯೊಡ್ಡಿ ನಶೆ ಏರಿಸಿದರು. ಹನಿಟ್ರಾಪ್ ಬಲೆಗೆ ಉದ್ಯಮಿ, ವ್ಯಾಪಾರಿಗಳನ್ನು ಮತ್ತೆ ಮತ್ತೆ ಕೆಡವಲು ಅಸಾಧ್ಯ ಎಂದು ತಿಳಿದುಕೊಂಡ ಈ ತಂಡವು ‘ಹಣ ವಸೂಲಿ ಕಮಿಷನ್ ದಂಧೆ’ಯನ್ನೂ ಮಾಡತೊಡಗಿತು. ಅದಕ್ಕಾಗಿ ಉಳ್ಳಾಲದಲ್ಲಿ ಕಚೇರಿಯೊಂದನ್ನು ತೆರೆದು ಬಿಟ್ಟರು. ಇದೆಲ್ಲಾ ಗೊತ್ತಿದ್ದೂ ಗೊತ್ತಿಲ್ಲದವರಂತೆ ಉಳ್ಳಾಲ ಪೊಲೀಸರು ವರ್ತಿಸಿದರು. ಮುಂದೆ ಸಾರ್ವಜನಿಕರ ಒತ್ತಡದ ಬಳಿಕ ಎಚ್ಚೆತ್ತು ಕೊನೆಗೆ ಈ ಕಚೇರಿಗೆ ಬೀಗ ಜಡಿದರು. ಹಾಗಂತ ಟಾರ್ಗೆಟ್ ಗ್ಯಾಂಗ್‌ನ ಅಟ್ಟಹಾಸಕ್ಕೆ ಕಡಿವಾಣ ಬೀಳಲಿಲ್ಲ. ಕೆಲ ರಾಜಕಾರಣಿಗಳ ಬೆಂಬಲವೂ ಸಿಕ್ಕಿದ ಬಳಿಕ ಇವರನ್ನು ನಿಯಂತ್ರಿಸಲು ಉಳ್ಳಾಲದಲ್ಲಿ ಯಾರೂ ಇಲ್ಲ ಎಂಬಂತಹ ವಾತಾವರಣ ಸೃಷ್ಟಿಯಾಯಿತು.

ಟಾರ್ಗೆಟ್ ಗ್ಯಾಂಗ್‌ನಲ್ಲಿ ಕೇವಲ ಉಳ್ಳಾಲದ ಯುವಕರು ಮಾತ್ರವಲ್ಲ, ಹೊರ ಊರಿನ ಕೆಲವು ಮಂದಿಯೂ ಇದ್ದಾರೆ. ಇದೀಗ ಈ ಗ್ಯಾಂಗ್‌ನಲ್ಲಿ ವಯಸ್ಸಿಗೆ ಅನುಗುಣವಾಗಿ ಟಾರ್ಗೆಟ್ 1, ಟಾರ್ಗೆಟ್ 2, ಟಾರ್ಗೆಟ್ 3 ಎಂಬ ಮೂರು ಗುಂಪುಗಳಿದ್ದು, ಇವು ಪ್ರತ್ಯೇಕವಾಗಿಯೇ ಕಾರ್ಯಾಚರಣೆ ನಡೆಸುತ್ತಿವೆ ಎಂದು ಸ್ಥಳೀಯರು ಹೇಳುತ್ತಾರೆ.

► ಸಂಪರ್ಕಕ್ಕೆಸಿಗದ ಇಲ್ಯಾಸ್

ಸುದ್ದಿಗೆ ಸಂಬಂಧಿಸಿದಂತೆ (ಉಳ್ಳಾಲದ ಘಟನೆಗೆ ಸಂಬಂಧಿಸಿದಂತೆ) ‘ವಾರ್ತಾಭಾರತಿ’ಯ ತಂಡವು ಪ್ರತಿಕ್ರಿಯೆ ಬಯಸಿ ಸತತ ಮೂರು ದಿನದಿಂದ ಉಳ್ಳಾಲ ಯುವ ಕಾಂಗ್ರೆಸ್ ಉಪಾಧ್ಯಕ್ಷ ಇಲ್ಯಾಸ್ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಸಂಪರ್ಕಕ್ಕೆ ಸಿಗಲಿಲ್ಲ.


► ಉಪಾಧ್ಯಕ್ಷನ ವಿರುದ್ಧ ಪ್ರಕರಣ ಇರುವುದು ಜಿಲ್ಲಾಧ್ಯಕ್ಷರಿಗೇ ಗೊತ್ತಿಲ್ಲ !

ಇಲ್ಯಾಸ್ ಮೇಲೆ ಈವರೆಗೆ ಗೂಂಡಾಕಾಯ್ದೆ ಸಹಿತ 18 ಪ್ರಕರಣಗಳು ದಾಖಲಾಗಿವೆ ಎಂದು ಉಳ್ಳಾಲ ಪೊಲೀಸ್ ಇನ್‌ಸ್ಪೆಕ್ಟರ್ ಗೋಪಿಕೃಷ್ಣ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ಆದರೆ ಈ ಬಗ್ಗೆ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಬಳಿ ಕೇಳಿದರೆ ಇಲ್ಯಾಸ್ ವಿರುದ್ಧ ಇಂತಹ ಪ್ರಕರಣ ದಾಖಲಾಗಿರುವ ಮಾಹಿತಿಯೇ ತನಗಿಲ್ಲ ಎಂದು ಹೇಳಿದ್ದಾರೆ.

ಒಂದೆಡೆ ರಾಜಕೀಯ ಬೆಂಬಲ, ಇನ್ನೊಂದೆಡೆ ಪೊಲೀಸರ ವೌನದಿಂದ ಉಬ್ಬಿ ಹೋಗಿರುವ ಟಾರ್ಗೆಟ್ ಗ್ಯಾಂಗ್‌ನ ಇಲ್ಯಾಸ್ ತಾನು ಈ ಹಿಂದೆ ಯಾರನ್ನೆಲ್ಲಾ ತೊಂದರೆಗೆ ಸಿಲುಕಿಸಿದ್ದರೋ ಅವರ ಜೊತೆ ಸೇರಿಕೊಂಡು ವೇದಿಕೆಗಳಲ್ಲಿ ಮಿಂಚತೊಡಗಿದರು. ಅಷ್ಟೇ ಅಲ್ಲ, ಐದಾರು ತಿಂಗಳ ಹಿಂದೆ ಉಳ್ಳಾಲ ಬ್ಲಾಕ್ ಯುವ ಕಾಂಗ್ರೆಸ್ ಚುನಾವಣೆಗೆ ಸ್ಪರ್ಧಿಸಿ ಸೋತರು. ಆದರೆ, ಎಐಸಿಸಿ ನಿಯಮಾವಳಿಯಂತೆ ಉಳ್ಳಾಲ ಬ್ಲಾಕ್ ಯುವ ಕಾಂಗ್ರೆಸ್‌ನ ಉಪಾಧ್ಯಕ್ಷ ಆಗಿದ್ದಾರೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ಕಾಂಗ್ರೆಸ್ ಪಕ್ಷವಾದ ಕಾರಣ ಪೊಲೀಸರಿಗೆ ‘ಟಾರ್ಗೆಟ್’ಗೆ ಸಂಬಂಧಿಸಿ ಏನು ಮಾಡಬೇಕು ಎಂದು ತೋಚುತ್ತಿಲ್ಲ.


ಆರೋಪ ಇರಬಹುದು, ಸಾಬೀತಾಗಿಲ್ಲ : ಮಿಥುನ್ ರೈ
ನನಗೆ ತಿಳಿದ ಮಟ್ಟಿಗೆ ಉಳ್ಳಾಲ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಇಲ್ಯಾಸ್ ವಿರುದ್ಧ ಗಾಂಜಾ ಪ್ರಕರಣ ದಾಖಲಾಗಿಲ್ಲ. ಅವರ ಮೇಲೆ ಗೂಂಡಾ ಕಾಯ್ದೆ ಹೇರಿರುವ ಬಗ್ಗೆಯೂ ಮಾಹಿತಿ ಇಲ್ಲ. ಅವರ ಮೇಲೆ ಆರೋಪ ಇರಬಹುದು. ಆದರೆ ಯಾವುದೂ ಸಾಬೀತಾಗಿಲ್ಲ. ಆರೋಪ ಸಾಬೀತಾದರೆ ಖಂಡಿತಾ ಪಕ್ಷದಿಂದ ಉಚ್ಚಾಟನೆ ಮಾಡಲಾಗುವುದು. ಮೊನ್ನೆ ನಡೆದ ಝುಬೈರ್ ಕೊಲೆ ಪ್ರಕರಣದಲ್ಲಿ ಇಲ್ಯಾಸ್‌ರ ಪಾತ್ರ ಇಲ್ಲ ಎಂದು ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ. ಯುವ ಕಾಂಗ್ರೆಸ್ ಸದಸ್ಯತ್ವ ನೀಡುವಾಗ ಎಲ್ಲವನ್ನೂ ಪರಿಶೀಲಿಸಿದ ಬಳಿಕವೇ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗುತ್ತದೆ. ಅದರಂತೆಯೇ ಇಲ್ಯಾಸ್‌ಗೆ ಅವಕಾಶ ನೀಡಲಾಗಿದೆ. ಇದೀಗ ಪಕ್ಷದಲ್ಲಿ ಸಕ್ರಿಯರಾಗಿರುವ ಇಲ್ಯಾಸ್ ಸಮಾಜದಲ್ಲಿ ಗೌರವಯುತವಾಗಿ ಬದುಕಲು ಮುಂದಾಗಿದ್ದಾರೆ. ಯಾರೇ ಆಗಲಿ ಯಾವತ್ತೋ ಮಾಡಿದ ತಪ್ಪನ್ನೇ ಮುಂದಿಟ್ಟುಕೊಂಡು ಹಳಿಯುವುದು ಸರಿಯಲ್ಲ. ಸಮಾಜಮುಖಿಯಾಗಿ ಜೀವಿಸಲು ಇಚ್ಛಿಸುವಾಗ ಪೂರಕ ವಾತಾವರಣ ಕಲ್ಪಿಸಿಕೊಡುವುದು ನಾಗರಿಕ ಸಮಾಜದ ಕರ್ತವ್ಯವೂ ಆಗಿದೆ.

- ಮಿಥುನ್ ರೈ

ಅಧ್ಯಕ್ಷರು, ದ.ಕ.ಜಿಲ್ಲಾ ಯುವ ಕಾಂಗ್ರೆಸ್


►ಪರಸ್ಪರ ಕೆಸರೆರಚಾಟ
ಉಳ್ಳಾಲದಲ್ಲಿ ಮಾದಕ ದ್ರವ್ಯ ಜಾಲಕ್ಕೆ ಸಿಲುಕಿ ಯುವಕರು ಒದ್ದಾಡುತ್ತಿದ್ದರೆ, ಪ್ರಮುಖ ರಾಜಕೀಯ ಪಕ್ಷಗಳ ಹಾಗೂ ಸಂಘಟನೆಗಳ ಮುಖಂಡರು ಆರೋಪ- ಪ್ರತ್ಯಾರೋಪಗಳಲ್ಲಿ ತೊಡಗಿಸಿಕೊಂಡಿರುವುದು ಅನೇಕರ ಹುಬ್ಬೇರಿಸಿದೆ. ಈ ಜಾಲದಿಂದ ಯುವಕರನ್ನು ಪಾರು ಮಾಡಲು ಎಲ್ಲರೂ ಒಂದಾಗಿ ಶ್ರಮಿಸುವ ಬದಲು ಈ ಮುಖಂಡರು ತಮ್ಮ ಪಕ್ಷ ಹಾಗೂ ಸಂಘಟನೆಗಳ ಬೆಳವಣಿಗೆಗೆ ಇದನ್ನು ಬಳಸಿಕೊಳ್ಳುವ ಬಗ್ಗೆಯೂ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.


►ಹೆಸರಿಗಷ್ಟೇ ಕ್ರೈಂ ಠಾಣೆ

ನಗರ ಮತ್ತು ಹೊರವಲಯದಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ಜಾಲ ಸಹಿತ ಇತರ ಅಪರಾಧ ಪ್ರಕರಣಗಳನ್ನು ಮಟ್ಟ ಹಾಕಲು ತಿಂಗಳ ಹಿಂದೆ ಇಕನಾಮಿಕ್ ಆ್ಯಂಡ್ ನಾರ್ಕೊಟಿಕ್ ಕ್ರೈಂ ಠಾಣೆಯನ್ನು ತೆರೆಯಲಾಗಿದೆ. ಪಾಂಡೇಶ್ವರ ಪೊಲೀಸ್ ಠಾಣೆಯ ಒಂದು ಸಣ್ಣ ಕೊಠಡಿಯಲ್ಲಿ ಇದು ಕಾರ್ಯಾಚರಿಸುತ್ತಿದೆೆ. ಮುಹಮ್ಮದ್ ಶರೀಫ್ ಇದರ ಇನ್‌ಸ್ಪೆಕ್ಟರ್ ಆಗಿದ್ದು, ಈವರೆಗೆ 4 ಪ್ರಕರಣಗಳನ್ನು ಭೆೇದಿಸಿದ್ದಾರೆ. ಅದರಲ್ಲಿ 2 ಉಳ್ಳಾಲ, 1 ಕಾವೂರು, 1 ಉರ್ವ ಠಾಣಾ ಸರಹದ್ದಿಗೆ ಸೇರಿದೆ. ಇಲ್ಲಿ ಒಬ್ಬ ಪಿಐ, ಇಬ್ಬರು ಪಿಎಸ್ಸೈ, 6 ಎಚ್‌ಸಿ, 15 ಪಿಸಿಗಳು ಕರ್ತವ್ಯನಿರ್ವಹಿಸಬೇಕು. ಆದರೆ, ಸದ್ಯ ಇಲ್ಲಿರುವುದು 1 ಪಿಐ, 1 ಪಿಎಸ್ಸೈ, 2 ಎಚ್‌ಸಿ, 1 ಪಿಸಿ ಮಾತ್ರ. ಇನ್ನು ಕಚೇರಿ ವ್ಯವಹಾರಕ್ಕೆ 2 ಮಹಿಳಾ ಪಿಸಿಗಳಿದ್ದಾರೆ. ಮಾದಕ ದ್ರವ್ಯ ಸಹಿತ 9ಸೆಕ್ಷನ್‌ನಡಿ ಪ್ರಕರಣ ದಾಖಲಿಸಿ, ತನಿಖೆ ನಡೆಸುವ ಅಧಿಕಾರ ಈ ತಂಡಕ್ಕಿದೆ. ಮಂಗಳೂರು ಪೊಲೀಸ್ ಆಯುಕ್ತಾಲಯದ ವ್ಯಾಪ್ತಿ ಹಿರಿದಾಗಿದ್ದು, ಇಷ್ಟು ದೊಡ್ಡ ವ್ಯಾಪ್ತಿಯ ಮಾದಕ ದ್ರವ್ಯ ಸಹಿತ ಇತರ ಅಪರಾಧ ಪ್ರಕರಣ ಮಟ್ಟ ಹಾಕಲು ಬೆರಳೆಣಿಕೆಯ ಈ ತಂಡಕ್ಕೆ ಸಾಧ್ಯವೇ ಎಂಬುದು ಯಕ್ಷಪ್ರಶ್ನೆಯಾಗಿ ಉಳಿದಿದೆ.


ಪುನರ್ವಸತಿ ಕೇಂದ್ರ ಬೇಕು
ಯುವಜನತೆಯನ್ನು ಬಲಿ ಪಡೆಯುತ್ತಿರುವ ‘ಡ್ರಗ್ಸ್’ ಜಾಲಕ್ಕೆ ಸಂಬಂಧಿಸಿದಂತೆ ಸೂಕ್ತ ಚಿಕಿತ್ಸೆ ಮತ್ತು ಕೌನ್ಸಿಲಿಂಗ್ ನೀಡಲು ಸರಕಾರಿ ‘ಮಾದಕ ವ್ಯಸನ ಮುಕ್ತ ಪುನರ್ವಸತಿ ಕೇಂದ್ರ’ದ ಅಗತ್ಯವಿದೆ. ಆದರೆ, ಸರಕಾರ ಈ ನಿಟ್ಟಿನಲ್ಲಿ ಆಸಕ್ತಿ ವಹಿಸುತ್ತಿಲ್ಲ. ಹಲವು ವರ್ಷಗಳಿಂದ ಜಿಲ್ಲೆಯ ಯುವ ಜನತೆ ಅದರಲ್ಲೂ ಉಳ್ಳಾಲದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ವ್ಯಸನಗಳಿಗೆ ತುತ್ತಾಗುತ್ತಿದ್ದಾರೆ. ಅದರಲ್ಲೂ ಡ್ರಗ್ಸ್‌ನ ಸುಳಿಗೆ ಸಿಲುಕಿದ್ದಾರೆ. ಇವರಿಗೆ ಸಕಾಲದಲ್ಲಿ ಚಿಕಿತ್ಸೆ ಮತ್ತು ಕೌನ್ಸಿಲಿಂಗ್ ನೀಡುವ ಸರಕಾರಿ ಕೇಂದ್ರದ ಅಗತ್ಯವಿದೆ. ಈಗಾಗಲೇ ಮಂಗಳೂರಿನ ಕಂಕನಾಡಿಯಲ್ಲಿ ಪ್ರಜ್ಞಾ ಮತ್ತು ಬಜಾಲ್‌ನಲ್ಲಿ ಲಿಂಕ್ ಅಮಲು ಚಿಕಿತ್ಸಾ ಕೇಂದ್ರ ಹಾಗು ಪುತ್ತೂರಿನಲ್ಲೊಂದು ಕೇಂದ್ರವಿದೆ. ಇಲ್ಲಿ ಹೆಚ್ಚಾಗಿ ಮದ್ಯವರ್ಜನಕ್ಕೆ ಚಿಕಿತ್ಸೆ ನೀಡಲಾಗುತ್ತದೆ. ಮೊದಲ ಬಾರಿಗೆ ಡ್ರಗ್ಸ್ ಜಾಲದೊಳಗೆ ಪ್ರವೇಶಿಸಿದವರಿಗೂ ಆರಂಭಿಕ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಡ್ರಗ್ಸ್ ವ್ಯೆಹಕ್ಕೆ ಸಿಲುಕಿ ಹೊರಬರಲಾಗದೆ ಚಡಪಡಿಸುವವರನ್ನು ಗುಣಪಡಿಸುವಂತಹ ಮತ್ತು ಕೌನ್ಸ್ಸ್ಸಿಲಿಂಗ್ ನೀಡುವಂತಹ ಸರಕಾರಿ ಕೇಂದ್ರವಿಲ್ಲ.


► ಸಚಿವ ಯು.ಟಿ. ಖಾದರ್‌ಗೆ ಏನೂ ಗೊತ್ತಿಲ್ಲವೇ?

ಉಳ್ಳಾಲದಲ್ಲಿ ಏನೇನು ನಡೆಯುತ್ತಿದೆ, ಯಾರು ಏನೇನು ಮಾಡುತ್ತಿದ್ದಾರೆ ಎಂಬುದು ಸಚಿವ ಯು.ಟಿ.ಖಾದರ್‌ಗೆ ಗೊತ್ತಿಲ್ಲವೇ? ಟಾರ್ಗೆಟ್ ಗ್ಯಾಂಗ್ ಈ ಹಂತ ತಲುಪಲು ಖಾದರ್ ಇವರ ವೌನ ಕೂಡ ಕಾರಣ. ಇವರ ಕಣ್ಣ ಮುಂದೆಯೇ ಈ ಗ್ಯಾಂಗ್‌ನ ಲೀಡರ್ ಸಹಿತ ಕೆಲವು ಮಂದಿಗೆ ಪಕ್ಷದ ಆಯಕಟ್ಟಿನ ಸ್ಥಾನ ನೀಡಲಾಗಿದೆ. ಹಿಂದೊಮ್ಮೆ ಮಾದಕ ವ್ಯಸನಿಗಳನ್ನು ಬಗ್ಗು ಬಡಿಯಲು ಮುಂದಾಗಿದ್ದೂ ಇವರೇ, ಈಗ ಅವರ ಆ ಆವೇಶ ಎಲ್ಲಿದೆ? ಇವರು ಮನಸ್ಸು ಮಾಡಿದರೆ ಈ ಜಾಲವನ್ನು ಬಗ್ಗು ಬಡಿಯಲು ಕಷ್ಟವೇನಲ್ಲ. ಇನ್ನು ಉಳ್ಳಾಲ ಠಾಣೆಯಲ್ಲಿ ಹಲವು ವರ್ಷಗಳಿಂದ ಕೆಲವು ಪೊಲೀಸರು ಬೀಡು ಬಿಟ್ಟಿದ್ದಾರೆ. ಇವರನ್ನು ವರ್ಗಾವಣೆ ಮಾಡದಿದ್ದರೆ ಉಳ್ಳಾಲದಲ್ಲಿ ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಇಲ್ಲ ಎಂಬುದು ಇಲ್ಲಿಯ ಹಲವರ ಅನಿಸಿಕೆ.

►ಕ್ರಿಮಿನಲ್‌ಗಳಿಗೆ ಬೆಂಬಲವಿಲ್ಲ

ನಾನು ಎಂದೂ ಕ್ರಿಮಿನಲ್‌ಗಳನ್ನು ಬೆಂಬಲಿಸಿಲ್ಲ, ಬೆಂಬಲಿಸುವುದೂ ಇಲ್ಲ. ಯುವ ಕಾಂಗ್ರೆಸ್ ಚುನಾವಣೆಯು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ನಿರ್ದೇಶನದ ಮೇರೆಗೆ ನಡೆಯುತ್ತಿದೆ. ಅದಕ್ಕೆ ಅವರು ಪ್ರತ್ಯೇಕ ನೀತಿ-ನಿಯಮ ರೂಪಿಸಿದ್ದಾರೆ, ತಂಡ ಕಟ್ಟಿದ್ದಾರೆ. ಶಾಸಕರು, ಸಚಿವರು, ಪಕ್ಷದ ಹಿರಿಯ ಮುಖಂಡರು ಯಾರೂ ಇದರಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ಆದಾಗ್ಯೂ ಯುವ ಕಾಂಗ್ರೆಸ್ ಸದಸ್ಯತ್ವ ಸ್ವೀಕರಿಸುವಾಗ ಕ್ರಿಮಿನಲ್ ಹಿನ್ನೆಲೆಯವರಿಗೆ ಅವಕಾಶ ನೀಡಬಾರದು ಎಂದು ನಾನು ಹೈಕಮಾಂಡ್ ಗಮನ ಸೆಳೆದಿದ್ದೆ. ಇನ್ನು ಉಳ್ಳಾಲ ಬ್ಲಾಕ್ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಕೂಡ ನನ್ನ ಹಸ್ತಕ್ಷೇಪ ಅಥವಾ ಪಾತ್ರವಿಲ್ಲ. ನಿಯಮಾವಳಿಯಂತೆ ಅತೀ ಹೆಚ್ಚು ಮತ ಪಡೆದ ರವೂಫ್ ಅಧ್ಯಕ್ಷರಾದರೆ, ಇಲ್ಯಾಸ್ ಉಪಾಧ್ಯಕ್ಷರಾಗಿದ್ದಾರೆ. ಕ್ರಿಮಿನಲ್ ಹಿನ್ನೆಲೆಯವರಿಗೆ ಸ್ಪರ್ಧಿಸಲು ಅವಕಾಶ ನೀಡಬೇಕೋ, ಬೇಡವೋ ಎಂಬುದನ್ನು ಹೈಕಮಾಂಡ್ ನಿರ್ಧರಿಸಬೇಕಷ್ಟೆ. ಇನ್ನು ಉಳ್ಳಾಲದಲ್ಲಿ ಗಾಂಜಾ ಮಾಫಿಯಾ ಇಲ್ಲ. ವಿದ್ಯಾರ್ಥಿ, ಯುವಕರನ್ನು ಗುರಿಯಾಗಿಸಿಕೊಂಡು ಗಾಂಜಾ ದಂಧೆ ನಡೆಯುತ್ತಿರುವುದು ಸ್ಪಷ್ಟ. ಸಾರ್ವಜನಿಕರ ಮೌನವೇ ಈ ದಂಧೆ ಹೆಚ್ಚಲು ಕಾರಣವಾಗಿದೆ. ಸಾರ್ವಜನಿಕರು ಪೊಲೀಸ್ ಇಲಾಖೆಗೆ ಸಹಕಾರ ನೀಡಿದರೆ ಈ ಹಾವಳಿಯನ್ನು ನಿರ್ಮೂಲನೆ ಮಾಡಬಹುದು. ಅದಲ್ಲದೆ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನಿನಲ್ಲೂ ತಿದ್ದುಪಡಿಯ ಅಗತ್ಯವಿದೆ. ಠಾಣೆಯಲ್ಲೇ ಜಾಮೀನು ನೀಡುವ ಪ್ರಕ್ರಿಯೆಗೆ ಕಡಿವಾಣ ಹಾಕಬೇಕು.

 

- ಯು.ಟಿ.ಖಾದರ್, ಆಹಾರ ಸಚಿವರು


►ಇಲಾಖೆ ಸನ್ನದ್ಧ

ಮಾದಕ ದ್ರವ್ಯ ಮತ್ತು ರೌಡಿಗಳನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆ ಸನ್ನದ್ಧವಾಗಿದೆ.ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ ಪಾಂಡೇಶ್ವರದಲ್ಲಿ ಇಕನಾಮಿಕ್ ಆ್ಯಂಡ್ ನಾರ್ಕೊಟಿಕ್ ಕ್ರೈಂ ಠಾಣೆಯನ್ನು ತೆರೆಯಲಾಗಿದೆ. ಅಲ್ಲದೆ, ಮಂಗಳೂರು ಉತ್ತರ ಮತ್ತು ದಕ್ಷಿಣ ಪೊಲೀಸ್ ಉಪವಿಭಾಗ ವ್ಯಾಪ್ತಿಯಲ್ಲಿ ಎಸಿಪಿಗಳ ನೇತೃತ್ವದಲ್ಲಿ ಮಾದಕ ದ್ರವ್ಯ ನಿಯಂತ್ರಣ ದಳವನ್ನು ರಚಿಸಲಾಗಿದೆ. ಈ ಎಲ್ಲ ತಂಡವು ಸಮರೋಪಾದಿಯಲ್ಲಿ ಕಾರ್ಯಾಚರಣೆ ಆರಂಭಿಸಿದೆ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಿಗಿಂತ ಯುವಕರು ಅದರಲ್ಲೂ ಕ್ರಿಮಿನಲ್‌ಗಳು ಮಾದಕ ದ್ರವ್ಯ ವ್ಯಸನಿಗಳಾಗುತ್ತಿದ್ದಾರೆ. ನಿರ್ಭೀತಿಯಿಂದ ಅಪರಾಧ ಎಸಗಲು ಈ ದ್ರವ್ಯಗಳು ಇವರಿಗೆ ಉಪಕಾರ ಮಾಡೀತು. ಆದರೆ, ಪೊಲೀಸ್ ಇಲಾಖೆ ಸುಮ್ಮನಿಲ್ಲ. ಇವರಿಗೆ ಯಾರು, ಎಲ್ಲಿಂದ ಮಾದಕ ದ್ರವ್ಯಗಳನ್ನು ಪೂರೈಕೆ ಮಾಡುತ್ತಾರೆ ಎಂಬುದರ ಬಗ್ಗೆ ಮಾಹಿತಿಯನ್ನು ಕಲೆ ಹಾಕಿದ್ದೇವೆ ಮತ್ತು ಅದನ್ನು ಮಟ್ಟ ಹಾಕಲು ಕಠಿಣ ಕ್ರಮ ಕೈಗೊಳ್ಳುತ್ತೇವೆ.

ಇವೆಲ್ಲದರ ಮಧ್ಯೆ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಲಾಗುತ್ತದೆ. ಅಲ್ಲದೆ ಪ್ರಜ್ಞಾ ಕೌನ್ಸಿಲಿಂಗ್‌ನಂತಹ ಅಮಲು ಪದಾರ್ಥ ಮುಕ್ತ ಸಂಸ್ಥೆಗಳ ಜೊತೆ ಸಂಪರ್ಕ ಸಾಧಿಸಿ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಅಗತ್ಯಬಿದ್ದಲ್ಲಿ ಗೂಂಡಾ ಕಾಯ್ದೆ ಹೇರಲಾಗುತ್ತದೆ. ಅಪರಾಧ ಎಸಗಿ ಜಾಮೀನು ಮೂಲಕ ಹೊರ ಬಂದ ಬಳಿಕ ಆರೋಪಿಗಳ ಚಲನವಲನಗಳನ್ನು ಗಮನಿಸಲಾಗುತ್ತದೆ. ಇನ್ನು ಈ ಜಾಲದ ಬಗ್ಗೆ ದೂರು ನೀಡಿದವರ ಬಗ್ಗೆ ಠಾಣೆಯಿಂದಲೇ ಸಂಬಂಧಪಟ್ಟವರಿಗೆ ಮಾಹಿತಿ ಸೋರಿಕೆಯಾಗುತ್ತಿದೆ ಎಂಬ ಸಂಶಯವಿದ್ದರೆ ನೇರವಾಗಿ ಎಸಿಪಿ, ಡಿಸಿಪಿ ಅಥವಾ ನನ್ನನ್ನು ಸಂಪರ್ಕಿಸಬಹುದು.

 

- ಟಿ.ಆರ್. ಸುರೇಶ್

ಆಯುಕ್ತರು, ಮಂಗಳೂರು ನಗರ ಪೊಲೀಸ್


►ಮತ್ತಷ್ಟುಮಂದಿಯ ವಿರುದ್ಧ ಗೂಂಡಾ ಕಾಯ್ದೆ

ಉಳ್ಳಾಲ ವ್ಯಾಪ್ತಿಯಲ್ಲಿ ಸದ್ಯ ಮೂವರ ಮೇಲೆ ಗೂಂಡಾ ಕಾಯ್ದೆ ಹೇರಲಾಗಿದೆ. ಆ ಪೈಕಿ ಹನಿಟ್ರಾಪ್, ಅಪಹರಣ ಇತ್ಯಾದಿ ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಟಾರ್ಗೆಟ್ ಗ್ರೂಪ್‌ನ ಇಲ್ಯಾಸ್ ವಿರುದ್ಧ 18 ಪ್ರಕರಣಗಳು ದಾಖಲಾಗಿವೆ. ಅಲ್ತಾಫ್ ಎಂಬಾತನ ಮೇಲೆ 17 ಪ್ರಕರಣಗಳು ದಾಖಲಾಗಿವೆ. ಅದಲ್ಲದೆ ರಾಹುಲ್ ಎಂಬಾತನ ಮೇಲೂ ಗೂಂಡಾ ಕಾಯ್ದೆ ಹೇರಲಾಗಿದೆ. ಇನ್ನೂ ಕೆಲವು ಮಂದಿಯ ವಿರುದ್ಧ ಗೂಂಡಾ ಕಾಯ್ದೆಗೆ ಸಿದ್ಧತೆ ನಡೆದಿದೆ. ಪೊಲೀಸ್ ಇಲಾಖೆ ಸಮಾಜ ಘಾತುಕ ಶಕ್ತಿಗಳನ್ನು ಮಟ್ಟ ಹಾಕಲು ಶಕ್ತವಾಗಿದೆ. 2016ರ ನವೆಂಬರ್‌ನಿಂದ ಈವರೆಗೆ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ 84 ಗಾಂಜಾ ಪ್ರಕರಣಗಳು ದಾಖಲಾಗಿದ್ದು, ನೂರಕ್ಕೂ ಅಧಿಕ ಮಂದಿಯನ್ನು ಸೆರೆ ಹಿಡಿದು ಕಾನೂನು ಕ್ರಮ ಜರಗಿಸಲಾಗಿದೆ. ಸದ್ಯ ಉಳ್ಳಾಲದಲ್ಲಿ ಗಾಂಜಾ ಹಾವಳಿ ನಿಯಂತ್ರಣದಲ್ಲಿದೆ. ಗಾಂಜಾ ಸಾಗಾಟ-ಮಾರಾಟ ಮಾತ್ರವಲ್ಲ ಅದನ್ನು ಪೂರೈಸುವವರ ಮೇಲೆ ಕಣ್ಣಿಡಲಾಗಿದೆ.

- ಗೋಪಿಕೃಷ್ಣ
ಪೊಲೀಸ್ ಇನ್‌ಸ್ಪೆಕ್ಟರ್, ಉಳ್ಳಾಲ ಠಾಣೆ


►ಮೊಹಲ್ಲಾ ವ್ಯಾಪ್ತಿಯಲ್ಲಿ ಜನಜಾಗೃತಿ ಶಿಬಿರ
ಈಗಾಗಲೇ ಉಳ್ಳಾಲದಲ್ಲಿ ಎರಡು ಬಾರಿ ಪೊಲೀಸ್-ಜನಸಂಪರ್ಕ ಸಭೆಯನ್ನು ನಡೆಸಲಾಗಿತ್ತು. ಆದರೆ, ಪ್ರಯೋಜನವಾಗಿಲ್ಲ. ಮೊನ್ನೆ ಝುಬೈರ್ ಕೊಲೆ ನಡೆದ ಬಳಿಕ ಜನರು ಎಚ್ಚೆತ್ತಿದ್ದಾರೆ. ಉಳ್ಳಾಲದ ಬಸ್ತಿಪಡ್ಪುವಿನಲ್ಲಿ ಗಾಂಜಾ-ಡ್ರಗ್ಸ್ ಜಾಲದಲ್ಲಿ ಗುರುತಿಸಿಕೊಂಡ ಯುವಕನೊಬ್ಬನ ಕುಟುಂಬದ ಬಾಡಿಗೆ ಮನೆಯನ್ನೇ ಸ್ಥಳೀಯರು ಖಾಲಿ ಮಾಡಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಗಾಂಜಾ-ಡ್ರಗ್ಸ್ ವ್ಯಸನಿಗಳನ್ನು ಸಮಾಜದಿಂದಲೇ ಬಹಿಷ್ಕರಿಸುವಂತಹ ಜಾಗೃತಿ ಪ್ರಜ್ಞೆ ಎಲ್ಲ ಕಡೆ ಉಂಟಾಗಬೇಕು. ಸಾರ್ವಜನಿಕರು ಬಹಿರಂಗವಾಗಿ ಹೋರಾಟ ಮಾಡಿದರೆ ಇದನ್ನು ನಿರ್ಮೂಲನೆ ಮಾಡಬಹುದು.

ಉಳ್ಳಾಲ ದರ್ಗಾ ಅಧೀನದಲ್ಲಿ 33 ಮುಸ್ಲಿಂ ಮೊಹಲ್ಲಾಗಳಿವೆ. ಇಲ್ಲಿನ ವಿದ್ಯಾರ್ಥಿಗಳು, ಯುವಕರು, ಹೆತ್ತವರ ಸಭೆ ಕರೆದು ಈ ಬಗ್ಗೆ ಶೀಘ್ರದಲ್ಲೇ ಜಾಗೃತಿ ಶಿಬಿರವನ್ನು ಆಯೋಜಿಸಲಾಗುವುದು.

- ಹಾಜಿ ಅಬ್ದುಲ್ ರಶೀದ್
ಅಧ್ಯಕ್ಷರು, ಉಳ್ಳಾಲ ದರ್ಗಾ


► ಪೊಲೀಸ್ ವೈಫಲ್ಯವೇ ಕಾರಣ
 ಉಳ್ಳಾಲದಲ್ಲಿ ಮಾದಕ ವ್ಯಸನಿಗಳು ಹೆಚ್ಚಾಗಲು ಪೊಲೀಸರ ವೈಫಲ್ಯವೇ ಕಾರಣ. ರಾಜಕಾರಣಿಗಳು ಕೂಡ ಇವರನ್ನು ಸಲಹುತ್ತಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರೆ ಅಂತಹವರನ್ನೇ ಮಟ್ಟ ಹಾಕಲಾಗುತ್ತದೆ. ಅದಕ್ಕೆ ಮೊನ್ನೆ ಕೊಲೆಯಾದ ಝುಬೈರ್ ಸಾಕ್ಷಿ. ಆತ ಈ ಜಾಲದ ವಿರುದ್ಧ ಹೋರಾಟ ಮಾಡಿದ್ದನ್ನು ಸಹಿಸದ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಕಳೆದ ವರ್ಷ ತೊಕ್ಕೊಟ್ಟು ಸಮೀಪದ ಕುತ್ತಾರ್ ಪರಿಸರದಲ್ಲಿ ಗಾಂಜಾ ವ್ಯಸನಿಗಳ ಹಾವಳಿ ಮಿತಿ ಮೀರಿತ್ತು. ಆ ಹಿನ್ನಲೆಯಲ್ಲಿ ಡಿವೈಎಫ್‌ಐ ನೇತೃತ್ವದಲ್ಲಿ ಇದರ ವಿರುದ್ದ ಜಾಥಾ ನಡೆಸಲಾಗಿತ್ತು. ಝುಬೈರ್ ಕೊಲೆಯ ಬಳಿಕ ಉಳ್ಳಾಲದಲ್ಲೂ ಪ್ರತಿಭಟನಾ ಸಭೆ ನಡೆಸಿದ್ದೇವೆ. ಉಳ್ಳಾಲ ಗಾಂಜಾ ಮುಕ್ತವಾಗಬೇಕು. ಅದಕ್ಕಾಗಿ ಸ್ಥಳೀಯ ಶಾಸಕರು ಸಾರ್ವಜನಿಕರ ಸಭೆ ಕರೆದು ಚರ್ಚೆ ಮಾಡಬೇಕು. ಇಲ್ಲದೇ ಇದ್ದರೆ ಯುವಕರು ಮಾತ್ರವಲ್ಲ ಭವಿಷ್ಯದ ದಿನಗಳಲ್ಲಿ ಯುವತಿಯರೂ ಗಾಂಜಾದ ಹಾವಳಿಗೆ ತುತ್ತಾದರೆ ಅಚ್ಚರಿ ಇಲ್ಲ. ದುಷ್ಕರ್ಮಿಗಳು ಮದ್ಯದ ಅಮಲಿನಲ್ಲಿ ಝುಬೈರ್‌ರನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಹೇಳುತ್ತಾರೆ. ಆದರೆ, ಇದು ಸರಿಯಲ್ಲ. ಅದನ್ನೇ ಒಪ್ಪುವುದಾದರೆ ನಾಡಿನಾದ್ಯಂತ ಎಷ್ಟೋ ಕೊಲೆಗಳಾಗುತ್ತಿತ್ತು. ಇನ್ನಾದರೂ ಪೊಲೀಸರು ಕಾಣದ ಕೈಗಳನ್ನು ಮಟ್ಟ ಹಾಕಲಿ. ಜನರು ನೆಮ್ಮದಿಯಿಂದ ಬದುಕುವಂತೆ ಮಾಡಲಿ.


- ಜೀವನ್ ರಾಜ್ ಕುತ್ತಾರ್
ಅಧ್ಯಕ್ಷರು, ಡಿವೈಎಫ್‌ಐ ಉಳ್ಳಾಲ ವಲಯ


►ಸಚಿವರು ಆತ್ಮಾವಲೋಕನ ಮಾಡಲಿ
ಯು.ಟಿ.ಖಾದರ್ ಕೇವಲ ಶಾಸಕರಷ್ಟೇ ಅಲ್ಲ, ಪ್ರಭಾವಿ ಸಚಿವರಲ್ಲೊಬ್ಬರು. ಈ ವಿಷಯದಲ್ಲಿ ನಾನು ಏನೇ ಹೇಳಿದರೂ ಅದನ್ನು ರಾಜಕೀಯ ದೃಷ್ಟಿಯಿಂದ ನೋಡುವ ಸಾಧ್ಯತೆಯಿದೆ. ಆದರೂ ಚಿಂತೆ ಇಲ್ಲ. ಸಚಿವ ಖಾದರ್ ಇನ್ನಾದರೂ ಮನಸ್ಸು ಮಾಡಿದರೆ ಇದನ್ನು ಕೆಲವೇ ದಿನಗಳೊಳಗೆ ಇದನ್ನು ಮಟ್ಟ ಹಾಕಬಹುದು. ಮೊದಲು ಈ ಗಾಂಜಾ ವ್ಯಸನಿಗಳಿಗೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು. ಪೊಲೀಸರೂ ಕಠಿಣ ಕ್ರಮ ಜರುಗಿಸಬೇಕು. ಆದರೆ ರಾಜಕಾರಣಿಗಳು ಇಚ್ಛಾಶಕ್ತಿ ಪ್ರದರ್ಶಿಸಲಿಲ್ಲ. ಪೊಲೀಸರು ಕರ್ತವ್ಯ ನಿಷ್ಠೆ ಮೆರೆಯಲಿಲ್ಲ. ಹಾಗಾಗಿ ಮೊನ್ನೆ ಝುಬೈರ್‌ನ ಕೊಲೆಯಾಗಿದೆ. ನಾಳೆ ಇನ್ನೊಬ್ಬನ ಕೊಲೆಯಾಗಬಹುದು. ಇದು ಹೀಗೇ ಮುಂದುವರಿದರೆ ಉಳ್ಳಾಲ ಮತ್ತು ಆಸುಪಾಸಿನ ಯುವಕರು ‘ನಾಗರಿಕ ಸಮಾಜ’ದ ಬದುಕಿನಿಂದ ವಂಚಿತರಾಗಬಹುದು. ಹಾಗಾಗಬಾರದು. ಇದಕ್ಕೆ ಕಡಿವಾಣ ಹಾಕಲೇಬೇಕು. ಸಚಿವ ಖಾದರ್ ಮೊದಲೇ ಇದಕ್ಕೆ ಕಡಿವಾಣ ಹಾಕಿದ್ದರೆ, ಮೊನ್ನೆ ಮುಕ್ಕಚೇರಿಯ ಯುವಕರು ಸಚಿವರಿಗೆ ೇರಾವ್ ಹಾಕುತ್ತಿರಲಿಲ್ಲ. ಹಾಗಾಗಿ ಸಚಿವರು ಇನ್ನಾದರೂ ಆತ್ಮಾವಲೋಕನ ಮಾಡಲಿ. ಮಾದಕ ದ್ರವ್ಯ ವ್ಯಸನಿಗಳನ್ನು ಮಟ್ಟ ಹಾಕಲು ಪ್ರಾಮಾಣಿಕ ಪ್ರಯತ್ನ ಮಾಡಲಿ.

-ಸಂತೋಷ್ ಕುಮಾರ್ ರೈ, ಬೋಳಿಯಾರ್
ಅಧ್ಯಕ್ಷರು, ಬಿಜೆಪಿ-ಮಂಗಳೂರು ವಿಧಾನ ಸಭಾ ಕ್ಷೇತ್ರ


►‘ಗೂಂಡಾ’ ಕಾಯ್ದೆಯಡಿ ಕ್ರಮ
 ಗಾಂಜಾ ವ್ಯಸನಿಗಳನ್ನು ಮಟ್ಟ ಹಾಕಲು ಕೇವಲ ಭರವಸೆ ನೀಡಿದರೆ ಸಾಲದು. ಪೊಲೀಸರು ಸಮರೋಪಾದಿಯಲ್ಲಿ ನಿಂತು ಕೆಲಸ ಮಾಡಬೇಕು. ಸಾಧ್ಯವಾದರೆ ‘ಗೂಂಡಾ’ ಕಾಯ್ದೆಯಡಿ ಕ್ರಮ ಜರಗಿಸಬೇಕು. ನಾರ್ಕೊಟಿಕ್ ಸೆಲ್‌ಗೆ ಹೆಚ್ಚುವರಿ ಸಿಬ್ಬಂದಿ ನೇಮಿಸಬೇಕು. ಈ ವಿಷಯದಲ್ಲಿ ಯಾರೂ ರಾಜಕೀಯ ಮಾಡಬೇಕಿಲ್ಲ. ಹೊರ ರಾಜ್ಯ, ಜಿಲ್ಲೆಗಳ ವಿದ್ಯಾರ್ಥಿಗಳು ಕರಾವಳಿ ಪ್ರದೇಶಕ್ಕೆ ಆಗಮಿಸುವ ಕಾರಣ ವಿವಿ ಕುಲಪತಿಗಳು ಮತ್ತು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಸಭೆ ಕರೆದು ಜಾಗೃತಿ ಮೂಡಿಸಬೇಕಿದೆ.

- ಪಿ.ವಿ.ಮೋಹನ್
ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ


►ಹೋರಾಟಗಾರರಿಗೆ ರೌಡಿ ಪಟ್ಟ

ನಾನು ಕಳೆದ ಹಲವು ವರ್ಷಗಳಿಂದ ಸಾಮಾಜಿಕ ರಂಗದಲ್ಲಿದ್ದೇನೆ. ಮಾನವ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದೇನೆ. ಪೊಲೀಸರ ಅನ್ಯಾಯ, ಅಕ್ರಮಗಳ ವಿರುದ್ಧ ಹೋರಾಟ ಮಾಡಿದ ನನಗೆ ರೌಡಿ ಪಟ್ಟವನ್ನು ಈ ಪೊಲೀಸರು ಕಟ್ಟಿದ್ದರು. ಬಳಿಕ ಅದರ ವಿರುದ್ಧ ಹೈಕೋರ್ಟ್ ಮೊರೆ ಹೋಗಬೇಕಾಯಿತು. ಉಳ್ಳಾಲದ ಶಾಂತಿ, ಸೌಹಾರ್ದ ಕದಡಲು ಯಾರು ಕಾರಣ ಎಂಬುದು ಪೊಲೀಸರಿಗೂ ಗೊತ್ತು. ಉಳ್ಳಾಲದಲ್ಲಿ ಏನೇನು ನಡೆಯುತ್ತಿದೆ ಎಂದು ಸಚಿವ ಯು.ಟಿ.ಖಾದರ್‌ಗೂ ಗೊತ್ತು. ಆದರೆ ಪೊಲೀಸರಿಗೆ ಅಪರಾಧಿಗಳ ವಿರುದ್ಧ ಕ್ರಮ ಜರುಗಿಸುವ ಆಸಕ್ತಿ ಇಲ್ಲ. ಖಾದರ್‌ಗೆ ಇಚ್ಛಾಶಕ್ತಿ ಇಲ್ಲ. ಉಳ್ಳಾಲ ಹದಗೆಡಲು ಉಳ್ಳಾಲದ ಕೆಲವು ಭ್ರಷ್ಟ ಪೊಲೀಸರು ಮತ್ತು ಸಚಿವರೇ ಕಾರಣ.

-ಕಬೀರ್ ಉಳ್ಳಾಲ್
ಅಧ್ಯಕ್ಷರು, ಪಿಯುಸಿಎಲ್ ದ.ಕ. ಜಿಲ್ಲೆ


►‘ಮಾದಕ ಮುಕ್ತ ಉಳ್ಳಾಲ’ಕ್ಕೆ ಪಣ
ಗಾಂಜಾ, ಡ್ರಗ್ಸ್ ಇತ್ಯಾದಿ ಮಾದಕ ದ್ರವ್ಯ ಜಾಲವು ಉಳ್ಳಾಲದಲ್ಲಿ ವ್ಯಾಪಕವಾಗಿದೆ. ಇದರಿಂದ ಸಮಾಜದ ಸ್ವಾಸ್ಥ ಕದಡಿದೆ. ಯುವಕರು ಮಾತ್ರವಲ್ಲ ಬಾಲಕರು ಕೂಡ ಇದರ ದಾಸರಾಗುತ್ತಿದ್ದಾರೆ. ವರ್ಷದ ಹಿಂದೆ ಶಾಲಾ ಬಾಲಕನೊಬ್ಬನ ಬಳಿ ಗಾಂಜಾ ಪತ್ತೆಯಾಗಿತ್ತು. ಈತನಿಗೆ ತಾನೇನು ಮಾಡುತ್ತಿದ್ದೇನೆ ಎಂಬ ಅರಿವು ಇರಲಿಲ್ಲ. ಆದರೆ, ಈತನನ್ನು ಈ ಜಾಲಕ್ಕೆ ಸಿಲುಕಿಸಿದವರಿಗೆ ಎಲ್ಲವೂ ತಿಳಿದಿತ್ತು. ಇನ್ನು ಈ ಭಾಗದ ಕೆಲವು ಮೆಡಿಕಲ್ ಶಾಪ್‌ಗಳಲ್ಲಿ ಅಮಲುಭರಿತ ಮಾತ್ರೆಗಳನ್ನು ಅನಧಿಕೃತವಾಗಿ ಮಾರಲಾಗುತ್ತಿದೆ. 10 ರೂ.ನ ಮಾತ್ರೆಯನ್ನು 150 ರೂ.ಗೆ ಮತ್ತು 800 ರೂ.ನ ಇಂಜೆಕ್ಷನನ್ನು 6,000 ರೂ.ಗೆ ಮಾರಾಟ ಮಾಡಲಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಗಮನಹರಿಸಬೇಕು. ಸದ್ಯ ನಾವೀಗ ‘ಮಾದಕ ಮುಕ್ತ ಉಳ್ಳಾಲ’ವನ್ನು ಸೃಷ್ಟಿಸಬೇಕು. ಅದಕ್ಕಾಗಿ ಎಲ್ಲರೂ ಕೈ ಜೋಡಿಸಬೇಕು.

-ಫಾರೂಕ್ ಉಳ್ಳಾಲ್
ಕೌನ್ಸಿಲರ್, ಉಳ್ಳಾಲ ನಗರಸಭೆ ಮತ್ತು ವಕ್ತಾರರು, ದ.ಕ. ಜಿಲ್ಲಾ ಕಾಂಗ್ರೆಸ್


►34 ಮಂದಿಯ ಸೆರೆ
ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ಮಾದಕ ದ್ರವ್ಯ ವ್ಯಸನಿಗಳನ್ನು ಮಟ್ಟ ಹಾಕಲು ಇಲಾಖೆ ಶಕ್ತಿ ಮೀರಿ ಪ್ರಯತ್ನಿಸುತ್ತಿವೆ. ಅಲ್ಲಲ್ಲಿ ನಡೆಯುವ ಅಹಿತಕರ ಘಟನೆಗಳಿಗೆಲ್ಲಾ ಮಾದಕ ದ್ರವ್ಯ ವ್ಯಸನಿಗಳೇ ಕಾರಣರಲ್ಲ. ಆದರೆ, ಕ್ರಿಮಿನಲ್‌ಗಳು ಇದಕ್ಕೆ ದಾಸರಾಗುತ್ತಿರುವುದು ಸುಳ್ಳಲ್ಲ. ಈ ನಿಟ್ಟಿನಲ್ಲಿ ಇಲಾಖೆ ಕಠಿಣ ಕ್ರಮ ಜರಗಿಸುತ್ತಿದೆೆ. ಮಾಹಿತಿ ಬಂದ ತಕ್ಷಣ ದಾಳಿ ಮಾಡುತ್ತೇವೆ. 2016ರಲ್ಲಿ 12 ಪ್ರಕರಣಗಳಲ್ಲಿ 22 ಮಂದಿಯನ್ನು ಬಂಧಿಸಲಾಗಿತ್ತು. 2017ರಲ್ಲಿ 5 ಪ್ರಕರಣಗಳಲ್ಲಿ 12 ಮಂದಿಯನ್ನು ಬಂಧಿಸಲಾಗಿದೆ. 2016ರಲ್ಲಿ ಮುಡಿಪು ಬಳಿ ಪತ್ತೆಹಚ್ಚಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಫೀಝ್, ಮುಹಮ್ಮದ್ ಸಿರಾಜ್, ಮುಹಮ್ಮದ್ ಇಮ್ತಿಯಾಝ್ ಎಂಬವರಿಗೆ ಒಂದೂವರೆ ವರ್ಷದ ಶಿಕ್ಷೆಯಾಗಿದೆ. ನಾವು ಸಡಿಲ ಸೆಕ್ಷನ್‌ನಡಿ ಪ್ರಕರಣ ದಾಖಲಿಸಿದ್ದರೆ ಅವರಿಗೆ ಶಿಕ್ಷೆಯಾಗುತ್ತಿರಲಿಲ್ಲ. ಸಾಕ್ಷಿ ಸಮೇತ ಪ್ರಬಲ ಸೆಕ್ಷನ್ ಹಾಕಿದ ಕಾರಣ ಶಿಕ್ಷೆ ಅನುಭವಿಸುತ್ತಿದ್ದಾರೆ.
- ಅಶೋಕ್
ಪೊಲೀಸ್ ಇನ್‌ಸ್ಪೆಕ್ಟರ್, ಕೊಣಾಜೆ ಠಾಣೆ


►ಸಂಘಟಿತ ಹೋರಾಟ
ಉಳ್ಳಾಲದಲ್ಲಿ ಸಾವಿರಾರು ಮಂದಿ ಈ ಜಾಲಕ್ಕೆ ಸಿಲುಕಿ ನಲುಗುತ್ತಿದ್ದಾರೆ. ರಾಜಕಾರಣಿಗಳು ಮತ್ತು ಪೊಲೀಸರ ಬೆಂಬಲ ದಿಂದ ಈ ವ್ಯಸನಿಗಳು ರಾರಾಜಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಭವಿಷ್ಯದಲ್ಲಿ ಎದುರಾಗುವ ಅಪಾಯವನ್ನು ಊಹಿಸಲೂ ಸಾಧ್ಯವಿಲ್ಲ. ಇದರ ವಿರುದ್ಧ ಯಾವುದೋ ಒಂದು ಸಂಘಟನೆ ಹೋರಾಟ ಮಾಡುವುದಕ್ಕಿಂತ ಎಲ್ಲ ಸಂಘಟನೆಗಳೂ ಸೇರಿ ಧ್ವನಿ ಎತ್ತಬೇಕಿದೆ. ಈ ನಿಟ್ಟಿನಲ್ಲಿ ಪಿಎಫ್‌ಐ ಚಿಂತನೆ ನಡೆಸಿದ್ದು, ವಿವಿಧ ಸಂಘಟನೆಗಳ ಮುಖಂ ಡರ ಜೊತೆ ಮಾತುಕತೆ ನಡೆಸಲಾಗುತ್ತಿದೆ.

- ನವಾಝ್ ಉಳ್ಳಾಲ್

ಅಧ್ಯಕ್ಷರು, ದ.ಕ.ಜಿಲ್ಲಾ ಪಿಎಫ್‌ಐ


►ಅಸಹಕಾರ ಚಳವಳಿ
ಉಳ್ಳಾಲದಲ್ಲಿ ಗಾಂಜಾದ ಹಾವಳಿ ಹೊಸತೇನಲ್ಲ. ಸುಮಾರು 40 ವರ್ಷಗಳ ಹಿಂದೆಯೇ ಉಳ್ಳಾಲದಿಂದ ಮೀನು ಖರೀದಿಸಲು ಬರುತ್ತಿದ್ದ ರತ್ನಗಿರಿಯ ವ್ಯಾಪಾರಿಗಳು ಅಲ್ಪ ಸ್ವಲ್ಪ ಗಾಂಜಾ ಪೂರೈಕೆ ಮಾಡುತ್ತಿದ್ದರು. ಹಿಂದೆ ಗಾಂಜಾ ಸೇವಿಸಿದವರು ಹಾಡು-ಕುಣಿತದಲ್ಲಿ ತೊಡಗಿಸುತ್ತಿದ್ದರೇ ವಿನಃ ಯಾವತ್ತೂ ಹಿಂಸಾಚಾರಕ್ಕೆ ಇಳಿದವರಲ್ಲ. ಆದರೆ ಕಳೆದ 10 ವರ್ಷಗಳಿಂದ ಉಳ್ಳಾಲದಲ್ಲಿ ಗಾಂಜಾ ಸಹಿತ ಮಾದಕ ದ್ರವ್ಯ ಜಾಲ ಸಕ್ರಿಯವಾಗಿದೆ. ಅದರಲ್ಲೂ ಬಾಲಕರು, ಯುವಕರು ಗಾಂಜಾ ದಾಸರಾಗುತ್ತಿದ್ದಾರೆ. ಅಷ್ಟೇ ಅಲ್ಲ, ಅಪರಾಧ ಪ್ರಕರಣಗಳಲ್ಲೂ ತೊಡಗಿಸಿಕೊಳ್ಳುತ್ತಿದ್ದಾರೆ. ಇದರಿಂದ ಉಳ್ಳಾಲಕ್ಕೆ ಕೆಟ್ಟ ಹೆಸರು ಬಂದಿದೆ. ಮೊನ್ನೆ ಮುಕ್ಕಚೇರಿಯಲ್ಲಿ ನಡೆದ ಝುಬೈರ್ ಕೊಲೆಯ ಬಳಿಕ ಜನರಲ್ಲಿ ಜಾಗೃತಿ ಉಂಟಾಗಿದೆ. ಇನ್ನು ಬಾಯ್ಮುಚ್ಚಿ ಕುಳಿತರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಅರಿತುಕೊಂಡಿದ್ದಾರೆ. ಅಷ್ಟೇ ಅಲ್ಲ ಮಾದಕ ವ್ಯಸನಿಗಳ ವಿರುದ್ಧ ಅಸಹಕಾರ ಚಳವಳಿ ಆರಂಭಿಸಿದ್ದಾರೆ. ಈ ಜಾಗೃತಿ ವಿಸ್ತಾರಗೊಂಡರೆ ಮಾದಕ ದ್ರವ್ಯ ವ್ಯಸನಿಗಳನ್ನು ಉಳ್ಳಾಲದಿಂದಲೇ ನಿರ್ಮೂಲನೆ ಮಾಡಬಹುದು.

-ಯು.ಕೆ. ಮೋನು ಇಸ್ಮಾಯೀಲ್
ಉಪಾಧ್ಯಕ್ಷರು, ಉಳ್ಳಾಲ ದರ್ಗಾ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)