varthabharthi

ದಿಲ್ಲಿ ದರ್ಬಾರ್

ದಿಲ್ಲಿ ದರ್ಬಾರ್

ವಾರ್ತಾ ಭಾರತಿ : 22 Oct, 2017

ಗಾಂಧಿ ಅಣಕ
 ದಿಲ್ಲಿಯಿಂದ ಪದೇ ಪದೇ ಗುಜರಾತ್‌ಗೆ ಭೇಟಿ ನೀಡುತ್ತಿರುವ ಬಿಜೆಪಿ ಮುಖಂಡರಿಗೆ, ರಾಜ್ಯದಲ್ಲಿ ಪಕ್ಷದ ಭವಿಷ್ಯದ ಬಗ್ಗೆ ಆಶಾದಾಯಕ ಲಕ್ಷಣಗಳು ಕಾಣಿಸುತ್ತಿಲ್ಲ ಅಥವಾ ಕೇಳಿಸುತ್ತಿಲ್ಲ. ಪಕ್ಷದ ಬಗ್ಗೆ ವ್ಯಾಪಕ ಅಸಮಾಧಾನ ಇದ್ದರೂ, ಪಕ್ಷ ಅಧಿಕಾರಕ್ಕೆ ಮರಳುವ ಬಗ್ಗೆ ಇವರಲ್ಲಿ ಆಶಾವಾದ ಇದೆ. ಸಮೀಕ್ಷೆಗಳು ಹಾಗೂ ಸ್ವತಂತ್ರ ವಿಶ್ಲೇಷಣೆಗಳು ಬಿಜೆಪಿಗೆ ಬಹುಮತ ನೀಡಿವೆ. ಅಚ್ಚರಿ ಎಂಬಂತೆ ಇದುವರೆಗೆ ರಾಜ್ಯದಲ್ಲಿ ರಾಹುಲ್‌ಗಾಂಧಿಯವರ ಯಶಸ್ವಿ ಪ್ರಚಾರ ಅಭಿಯಾನ ಕೂಡಾ ಬಿಜೆಪಿ ಮುಖಂಡರನ್ನು ಕಳವಳಕ್ಕೀಡುಮಾಡಿದೆ. ರಾಹುಲ್‌ಗಾಂಧಿಯವರನ್ನು ಅಣಕ ಮತ್ತು ಅವಹೇಳನ ಮಾಡುತ್ತಿದ್ದ ಬಿಜೆಪಿ ಮುಖಂಡರಿಗೆ ಅವರ ಸ್ಫೂರ್ತಿದಾಯಕ ಪ್ರಚಾರ ಬಿಸಿತುಪ್ಪವಾಗಿ ಪರಿಣಮಿಸಿದೆ. ‘ಕಾಂಗ್ರೆಸ್ ಆವೆ ಚೇ’ (ಕಾಂಗ್ರೆಸ್ ಬರುತ್ತಿದೆ) ಎಂಬ ಘೋಷಣೆ ತಳಮಟ್ಟದಲ್ಲಿ ಬಿಜೆಪಿ ಮುಖಂಡರಲ್ಲಿ ತಳಮಳ ಮೂಡಿಸಿದೆ. ಮತ್ತೊಂದು ಘೋಷಣೆ ವಿಕಾಸ್ ಗಂದೋ ಥಾಯೋ ಚೇ (ಅಭಿವೃದ್ಧಿ ಎನ್ನುವುದು ಕ್ರೇಜ್ ಎನಿಸಿಬಿಟ್ಟಿದೆ) ಕೂಡಾ ಜನಾಕರ್ಷಣೆಯ ಕೇಂದ್ರವಾಗಿದೆ. ರಾಹುಲ್‌ಬಾಬಾನನ್ನು ಗಾಂಧಿ ಎಂದು ಅಣಕಿಸಿರುವ ಬಿಜೆಪಿ ಪ್ರಚಾರತಂತ್ರ ಕಾಂಗ್ರೆಸ್ ಮುಖಂಡನಿಗೆ ಅಂಥ ವಿರೋಧವನ್ನೇನೂ ತಂದಿಲ್ಲ. ರಾಜ್ಯದಲ್ಲಿ ಪಕ್ಷ ಪ್ರವರ್ಧಮಾನಕ್ಕೆ ಬರುತ್ತಿರುವ ಬಗ್ಗೆ ಕಾಂಗ್ರೆಸ್ಸಿಗರಲ್ಲೇ ಅಚ್ಚರಿ ಇದೆ. ಆದರೆ ಇದು ಸಾಧ್ಯವಾಗುವುದು ಬಿಜೆಪಿ ಗುಜರಾತನ್ನು ಕಳೆದುಕೊಂಡಾಗ ಎಂದು ಇತರರು ಅಭಿಪ್ರಾಯಪಡುತ್ತಾರೆ.


ಜೀನ್ಸ್, ರೈತರು ಮತ್ತು ಧನಕರ್ ಶೈಲಿ!
ಹರ್ಯಾಣದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಖಾತೆ ಸಚಿವ ಓಂಪ್ರಕಾಶ್ ಧನಕರ್ ಅವರು ಕಳೆದ ವರ್ಷ ರಾಜ್ಯದಲ್ಲಿ ವಿದೇಶಿ ಹೋರಿಗಳ ಅಸ್ತಿತ್ವದ ನೈತಿಕ ಚಾರಿತ್ರ್ಯವನ್ನು ಪ್ರಶ್ನಿಸಿದ್ದರು. ‘‘ಜೈಸಾ ವಹಾನ್ ಕೆ ಕೈ ಮುಲ್ಕೊ ಮೆ ಕ್ಯಾರೆಕ್ಟರ್ ಹೆ, ವೈಸಾ ಹೆ ಇನ್‌ಕಾ ಕ್ಯಾರೆಕ್ಟರ್ ಹೆ’’ (ಹೋರಿಗಳು ಎಲ್ಲಿಂದ ಬಂದಿವೆಯೋ ಆ ದೇಶದ ಗುಣವನ್ನೇ ಹೊಂದಿವೆ) ಎಂದು ಅಣಕಿಸಿದ್ದರು. ಆದರೆ ಸಚಿವರು ಸ್ವತಃ ವಿದೇಶಿ ಅವತಾರದಲ್ಲಿ ಕಾಣಿಸಿಕೊಂಡ ಬಗ್ಗೆ ತಲೆ ಕೆಡಿಸಿಕೊಂಡಂತಿಲ್ಲ. ರೈತರ ಸಮಸ್ಯೆಗಳನ್ನು ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆ ರಾಜ್ಯದ ಸಚಿವರಿಗೆ ಪಕ್ಷದ ವತಿಯಿಂದ ಇತ್ತೀಚೆಗೆ ತರಬೇತಿ ಆಯೋಜಿಸಲಾಗಿತ್ತು. ತರಬೇತಿ ಪಡೆದವರಲ್ಲಿ ಧನಕರ್ ಕೂಡಾ ಒಬ್ಬರು. ತರಬೇತಿ ಶಿಬಿರ ನಡೆಯುತ್ತಿದ್ದಾಗ, ಧನಕರ್ ಜೀನ್ಸ್ ಹಾಗೂ ಟಿ- ಷರ್ಟ್ ಧರಿಸಿದ್ದುದನ್ನು ಬಿಜೆಪಿ ಮುಖಂಡ ಮುರಲೀಧರ ರಾವ್ ಗಮನಿಸಿದರು. ರೈತರು ನಮ್ಮ ಮಾತು ಕೇಳ ಬಯಸುವುದಾದರೆ ಇಂಥ ವಿದೇಶಿ ದಿರಿಸಿನಲ್ಲಿ ರೈತರನ್ನು ತಲುಪಲಾಗದು ಎಂದು ಹೇಳಿದರು. ಇದರಿಂದ ಮುಜುಗರಕ್ಕೀಡಾದ ಧನಕರ್, ದೇಸಿ ಉಡುಪು ಧರಿಸುವ ಭರವಸೆ ನೀಡಿದರು. ಮರುದಿನ ಅದನ್ನು ಅಕ್ಷರಶಃ ಪಾಲಿಸಿದರು ಎಂದು ಶಿಬಿರದಲ್ಲಿ ಪಾಲ್ಗೊಂಡಿದ್ದ ಇತರರು ಸ್ಪಷ್ಟಪಡಿಸಿದ್ದಾರೆ.


ಮುಕುಲ್ ರಾಯ್ ಎಂಟ್ರಿ
ತೃಣಮೂಲ ಕಾಂಗ್ರೆಸ್‌ನಿಂದ ಅಮಾನತುಗೊಂಡ ಹಿರಿಯ ರಾಜ್ಯಸಭಾ ಸದಸ್ಯ ಮುಕುಲ್ ರಾಯ್ ಇತ್ತೀಚೆಗೆ ಗೃಹಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ್ದಾರೆ. ಇದು ಅವರ ಬಿಜೆಪಿ ಸೇರ್ಪಡೆಗೆ ಇದ್ದ ಎಲ್ಲ ತಡೆಗಳನ್ನು ನಿವಾರಿಸಿದೆ ಎಂಬ ಸಂದೇಶ ರವಾನಿಸಿದೆ. ಆದರೆ ಬಿಜೆಪಿ ಪಶ್ಚಿಮ ಬಂಗಾಳ ಘಟಕ ಮಾತ್ರ, ಅನುಭವಿ ನಾಯಕ ಮುಕುಲ್ ಪ್ರವೇಶದ ಬಗ್ಗೆ ಸಂತಸ ಹೊಂದಿಲ್ಲ. ತಡವಾಗಿ ಪಕ್ಷಕ್ಕೆ ಪ್ರವೇಶ ಪಡೆದರೂ, ರಾಯ್ ಪಕ್ಷದಲ್ಲಿ ಮೇಲುಗೈ ಸಾಧಿಸುತ್ತಾರೆ ಎಂಬ ಸಂದೇಹ ಇವರಲ್ಲಿದೆ. ಆದರೆ ರಾಯ್ ಬಿಜೆಪಿಯಿಂದಾಗಿ ಪಡೆಯುವ ಲಾಭಕ್ಕಿಂತ, ರಾಯ್ ಬಿಜೆಪಿಗೆ ಬಂದಿರುವುದರಿಂದ ಪಕ್ಷಕ್ಕೆ ಲಾಭವಾಗುತ್ತದೆ ಎನ್ನುವ ಲೆಕ್ಕಾಚಾರ ಪಕ್ಷದ ಕೇಂದ್ರ ಮುಖಂಡರದ್ದು. 2019ರ ಸಾರ್ವತ್ರಿಕ ಚುನಾವಣೆ ವೇಳೆ ಹಲವು ಮಂದಿ ತೃಣಮೂಲ ಕಾಂಗ್ರೆಸ್ ಮುಖಂಡರನ್ನು ಮುಕುಲ್ ಪಕ್ಷಕ್ಕೆ ಕರೆತರುತ್ತಾರೆ ಎಂಬ ನಿರೀಕ್ಷೆ ಬಿಜೆಪಿ ನಾಯಕರದ್ದು. ಇದರಿಂದಾಗಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ದೊಡ್ಡ ಪ್ರಮಾಣದ ಲಾಭವಾಗುತ್ತದೆ ಎಂಬ ಲೆಕ್ಕಾಚಾರ ಅವರದ್ದು. ಒಂದು ಕಾಲದಲ್ಲಿ ಮಮತಾ ಬ್ಯಾನರ್ಜಿಯವರಿಗೆ ತೀರಾ ನಿಕಟವಾಗಿದ್ದ ರಾಯ್ ನಿರ್ಗಮನದ ಬಗ್ಗೆ ತೃಣಮೂಲ ಮುಖಂಡರಲ್ಲಿ ದೊಡ್ಡ ಹೆದರಿಕೆ ಇದೆ. ಪಕ್ಷದ ಹಲವು ರಹಸ್ಯಗಳು ಮುಕುಲ್ ರಾಯ್ ಅವರಿಗೆ ತಿಳಿದಿವೆ ಎಂಬ ಕಳವಳ ಅವರದ್ದು. ಬಹುಶಃ ಮಮತಾರನ್ನು ಅವರದ್ದೇ ಪ್ರಾಬಲ್ಯದ ರಾಜ್ಯದಲ್ಲಿ ಎದರಿಸಲು ಇದೇ ಬೇಕು ಎನ್ನುವ ತಂತ್ರಗಾರಿಕೆ ಬಿಜೆಪಿ ಮುಖಂಡರದ್ದು.


ವರ್ಮಾ ಯೋಚನೆ ಏನು?
ಜೆಡಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ವಿದೇಶಾಂಗ ಸೇವೆ ಅಧಿಕಾರಿ ಪವನ್ ಕೆ.ವರ್ಮಾ ಪಕ್ಷದಿಂದ ಹೊರಗೆ ಕಾಲಿಟ್ಟಿದ್ದಾರೆ. ಗುಜರಾತ್‌ನ ಚುನಾವಣಾ ದಿನಾಂಕವನ್ನು ಘೋಷಿಸದ ಚುನಾವಣಾ ಆಯೋಗದ ಕ್ರಮವನ್ನು ಅವರು ಇತ್ತೀಚೆಗೆ ಬಹಿರಂಗವಾಗಿಯೇ ಪ್ರಶ್ನಿಸಿದ್ದಾರೆ. ಇದಕ್ಕೆ ವಿಶ್ವಾಸಾರ್ಹ ಉತ್ತರ ಬೇಕು ಎಂದು ಆಗ್ರಹಿಸಿದ್ದಾರೆ. ಅವರ ಮುಖಂಡ ನಿತೀಶ್ ಕುಮಾರ್ ಅವರು ಬಿಜೆಪಿಗೆ ಮತ್ತು ಮೋದಿಗೆ ನಿಕಟವಾಗಿರುವ ಸಂದರ್ಭದಲ್ಲಿ, ಚುನಾವಣಾ ಆಯೋಗವನ್ನು ವಿರೋಧಿಸಿ ಹೇಳಿಕೆ ನೀಡುವ ಅಧಿಕಾರ ವರ್ಮಾ ಅವರಿಗಂತೂ ಇಲ್ಲ. ಇಷ್ಟಾಗಿಯೂ ಅವರು ಆಯೋಗವನ್ನು ವಿರೋಧಿಸಿದ್ದಾರೆ. ನಿತೀಶ್ ಅವರಿಗೆ ಸಾಂಸ್ಕೃತಿಕ ವಿಚಾರಗಳ ಬಗ್ಗೆ ಸಲಹೆ ನೀಡುತ್ತಿದ್ದ ವರ್ಮಾ ಅವರನ್ನು ಇತ್ತೀಚೆಗೆ ರಾಜ್ಯಸಭೆಗೆ ಆಯ್ಕೆ ಮಾಡಲಾಗಿತ್ತು. ಆದರೆ ಬಿಜೆಪಿ ಜತೆ ಸಖ್ಯ ಬೆಳೆಸಿರುವ ನಿತೀಶ್ ನಡೆ ಬಗ್ಗೆ ಅವರಿಗೆ ಸಮಾಧಾನ ಇಲ್ಲ. ಆದರೆ ವರ್ಮಾ ಕೇಂದ್ರ ಸಂಪುಟಕ್ಕೆ ಸೇರ್ಪಡೆಯಾಗುವ ನಿರೀಕ್ಷೆಯಲ್ಲಿದ್ದರು. ಆದರೆ ಜೆಡಿಯು ಸದಸ್ಯರಿಗೆ ಸಂಪುಟದಲ್ಲಿ ಸ್ಥಾನ ನೀಡುವ ಬಗ್ಗೆ ನಿತೀಶ್, ಪ್ರಧಾನಿ ಮೇಲೆ ಒತ್ತಡ ತಂದಿಲ್ಲ ಎನ್ನುವುದು ಇತರ ಕೆಲವರ ಅಭಿಪ್ರಾಯ. ಏನೇ ಆದರೂ ಜೆಡಿಯು ದಿಲ್ಲಿ ಘಟಕ ಸಂಪೂರ್ಣ ಸಂತಸವಾಗಿಲ್ಲ. ಕೆಲ ಸದಸ್ಯರು ನಿತೀಶ್‌ಗೆ ಕೈಕೊಟ್ಟು, ಶರದ್ ಯಾದವ್ ಅವರನ್ನು ಅನುಸರಿಸುವ ಸಾಧ್ಯತೆಗಳಿವೆ. ಹಾಗೆ ಮಾಡುವ ಸರದಿಯಲ್ಲಿ ಬಹುಶಃ ವರ್ಮಾ ಇದ್ದಾರೆ.


ಉತ್ತರ ಪ್ರದೇಶದ ಹೀರೊ ಹೊರಗೆ!?
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕನಿಷ್ಠ ಹೊರರಾಜ್ಯಗಳಲ್ಲಿ ಬಿಜೆಪಿಯ ರಾಜಕೀಯ ಯೋಜನೆಗಳ ಸ್ಯಾಂಪಲ್. ಕೇರಳದಲ್ಲಿ ರಾಜಕೀಯ ಹಿಂಸೆ ವಿರುದ್ಧ ಬಿಜೆಪಿ ಆಯೋಜಿಸಿದ್ದ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಸಜ್ಜಾಗುತ್ತಿದ್ದಾಗ, ಈ ಕೇಸರಿ ರುಮಾಲುಧಾರಿಗೆ ಗುಜರಾತ್‌ನಿಂದ ಹೊಸ ಕಾರ್ಯಭಾರದ ಕರೆ ಬಂದಿದೆ. ಗುಜರಾತ್‌ನಲ್ಲಿ ಕಳಾಹೀನವಾಗುತ್ತಿರುವ ಪಕ್ಷಕ್ಕೆ ಪುನಶ್ಚೇತನ ನೀಡಲು ಆಯೋಜಿಸಿದ್ದ ಗೌರವಯಾತ್ರೆಯಲ್ಲಿ ಭಾಗವಹಿಸಿದ್ದರು. ಯೋಗಿ ಉತ್ತರ ಪ್ರದೇಶದಲ್ಲಿ ಒಂದಷ್ಟು ಸಾಧನೆ ಮಾಡಿದ್ದರೂ, ಕೇರಳದಂಥ ಇತರ ರಾಜ್ಯಗಳು ಯೋಗಿಯಿಂದ ಆಕರ್ಷಿತರಾಗಿಲ್ಲ. ಗೌರವಯಾತ್ರೆಯ ತೆರೆದ ವಾಹನದಲ್ಲಿ ಯೋಗಿ ಮೆರವಣಿಗೆ ಹೊರಟರೆ, ಖಾಲಿ ಬೀದಿಗಳು ಅವರನ್ನು ಸ್ವಾಗತಿಸಿದವು. ಕೇರಳದಂತೆ ಸ್ಥಳೀಯ ಪತ್ರಿಕೆಗಳು ಅವರನ್ನು ನಿರ್ಲಕ್ಷಿಸಿದವು ಅಥವಾ ಋಣಾತ್ಮಕ ವಿಮರ್ಶೆಯನ್ನು ಪ್ರಕಟಿಸಿದವು. ರಾಜ್ಯ ಘಟಕದ ತಯಾರಿ ಬಗ್ಗೆ ಸಹಜವಾಗಿಯೇ ಯೋಗಿ ಸಿಡಿಮಿಡಿಗೊಂಡರು. ಅವರು ದೊಡ್ಡ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲು ಸಾಧ್ಯವಾಗಲಿಲ್ಲ. ಪಕ್ಷದ ಕಾರ್ಯಕರ್ತರು ಯೋಗಿಯಿಂದ ಉತ್ತೇಜಿತರಾಗಲಿಲ್ಲ. ಆದ್ದರಿಂದ ದೊಡ್ಡ ರ್ಯಾಲಿ ಆಯೋಜಿಸಲು ಸಾಧ್ಯವಾಗಿಲ್ಲ ಎನ್ನುವುದು ರಾಜ್ಯ ಘಟಕದ ಅಭಿಮತ. ಬಿಜೆಪಿ ಇನ್ನು ಮುಂದೆ, ಇತರ ರಾಜ್ಯಗಳಲ್ಲಿ ನಡೆಯುವ ಪಕ್ಷದ ಕಾರ್ಯಕ್ರಮಗಳಲ್ಲಿ ಯೋಗಿ ಪಾಲ್ಗೊಳ್ಳಬೇಕು ಎನ್ನುವುದನ್ನು ಪಕ್ಷ ಒತ್ತಾಯಿಸಲಾರದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)