varthabharthi

ಸಂಪಾದಕೀಯ

ರಾಷ್ಟ್ರಗೀತೆ: ಸುಪ್ರೀಂ ಕೋರ್ಟಿನ ಮುಜುಗರ

ವಾರ್ತಾ ಭಾರತಿ : 25 Oct, 2017

 ಚಿತ್ರಮಂದಿರದಲ್ಲಿ ರಾಷ್ಟ್ರಗೀತೆ ಕಡ್ಡಾಯ ಕುರಿತಂತೆ ತಾನು ನೀಡಿರುವ ಆದೇಶದ ವಿರುದ್ಧ ಸುಪ್ರೀಂಕೋರ್ಟ್ ತಾನೇ ತೀರ್ಪನ್ನು ನೀಡಿದೆ. ಇದೊಂದು ಮಹತ್ವದ ಬೆಳವಣಿಗೆ. ಚಿತ್ರಮಂದಿರಗಳಲ್ಲಿ ಪ್ರತೀ ಸಿನೆಮಾ ಪ್ರದರ್ಶನದ ಮೊದಲು ರಾಷ್ಟ್ರಗೀತೆ ಪ್ರಸಾರ ಮಾಡುವಾಗ ಪ್ರೇಕ್ಷಕರು ಕಡ್ಡಾಯವಾಗಿ ಎದ್ದುನಿಲ್ಲಬೇಕೆಂಬ ತನ್ನ 2016ರ ಆದೇಶವನ್ನು ಹಿಂಪಡೆಯಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿ ಬಳಿಕ ನ್ಯಾಯಾಲಯವು, ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವ ಹೊಣೆಗಾರಿಕೆಯನ್ನು ಸರಕಾರಕ್ಕೆ ವಹಿಸಿಕೊಡಲು ತೀರ್ಮಾನಿಸಿದೆ. ಚಿತ್ರಮಂದಿರಗಳಲ್ಲಿ ‘ಬಲವಂತ’ದ ರಾಷ್ಟ್ರಭಕ್ತಿಯ ಪ್ರದರ್ಶನಕ್ಕೆ ಆಸ್ಪದ ನೀಡುವ ತನ್ನ ಮಧ್ಯಂತರ ಆದೇಶದ ಕುರಿತು ವ್ಯಕ್ತವಾದ ಟೀಕೆಯನ್ನು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಹಾಗೂ ಎ.ಎ. ಕಾನ್ವಿಲ್ಕರ್ ಅವರನ್ನೊಳಗೊಂಡ ನ್ಯಾಯಪೀಠವು ಅಭೂತಪೂರ್ವವಾದ ಮುಕ್ತಮನಸ್ಸಿನೊಂದಿಗೆ ವಿಚಾರಣೆ ನಡೆಸಿರುವುದು ಪ್ರಶಂಸನೀಯವಾಗಿದೆ.

 ಸುಪ್ರೀಂಕೋರ್ಟ್‌ನ ತೀರ್ಪನ್ನು ಬಳಸಿಕೊಂಡು ಕೆಲವು ಹಿತಾಸಕ್ತಿಗಳು ಸಮಾಜದಲ್ಲಿ ಬೆಂಕಿ ಹಚ್ಚುವುದಕ್ಕೆ ಹೊರಟಿದ್ದು ಕೊನೆಗೂ ನ್ಯಾಯಾಲಯದ ಗಮನಕ್ಕೆ ಬಂದಂತಿದೆ. ಚಿತ್ರಮಂದಿರಗಳಲ್ಲಿ ಪುಂಡುಪೋಕರಿಗಳೆಲ್ಲ ರಾಷ್ಟ್ರಗೀತೆಯ ಹೆಸರಲ್ಲಿ ಜನಸಾಮಾನ್ಯರ ದೇಶಭಕ್ತಿಯನ್ನು ಪ್ರಶ್ನಿಸುವುದು ಮಾಧ್ಯಮಗಳಲ್ಲಿ ಆಗಾಗ ಸುದ್ದಿಯಾಗುತ್ತಿತ್ತು. ಅಷ್ಟೇ ಅಲ್ಲ, ಯಾವುದೇ ಸರಕಾರಿ ಕಚೇರಿಗಳು ಆರಂಭವಾಗುವ ಮೊದಲು ರಾಷ್ಟ್ರಗೀತೆ ಹಾಡುವುದು ಕಡ್ಡಾಯವಿಲ್ಲದೇ ಇರುವಾಗ, ಸಿನೆಮಾ ಮಂದಿರಗಳಲ್ಲಿ ಮಾತ್ರ ಕಡ್ಡಾಯವಾಗಿರುವುದರ ಔಚಿತ್ಯವೂ ಪ್ರಶ್ನೆಗೊಳಗಾಗಿತ್ತು. ಸಿನೆಮಾ ಮಂದಿರಗಳಲ್ಲಿ ರಾಷ್ಟ್ರಗೀತೆಯನ್ನು ಮುಂದಿಟ್ಟು ಯಾರೂ ಯಾರ ಮೇಲೆ ಹಲ್ಲೆ ನಡೆಸಬಹುದಾದಂತಹ ಸಾಧ್ಯತೆಗಳೂ ಇದ್ದವು. ಇದೀಗ ಸುಪ್ರೀಂಕೋರ್ಟ್ ತಾನೇ ಇಟ್ಟ ಹೆಜ್ಜೆಯಿಂದ ಹಿಂದೆ ಸರಿದಿರುವು ಒಂದು ರೀತಿಯಲ್ಲಿ ನೆಮ್ಮದಿ ತರುವ ವಿಚಾರವಾಗಿದೆ. ಸುಪ್ರೀಂಕೋರ್ಟ್ ತನ್ನ ಹಿಂದಿನ ಆದೇಶದಲ್ಲಿ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆಯನ್ನು ಕಡ್ಡಾಯವಾಗಿ ಪ್ರಸಾರ ‘ಮಾಡಬೇಕು’ ಎಂದಿದ್ದುದನ್ನು ಸೋಮವಾರ ಆದೇಶದಲ್ಲಿ ‘ಮಾಡಬಹುದಾಗಿದೆ’ ಎಂಬುದಾಗಿ ಬದಲಾಯಿಸಿದೆ.

ಹೀಗಾಗಿ ರಾಷ್ಟ್ರಗೀತೆಯನ್ನು ಹಾಡಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವುದನ್ನು ಚಿತ್ರಮಂದಿರದ ಮಾಲಕರಿಗೆ ಬಿಟ್ಟುಕೊಡಲು ನಿರ್ಧರಿಸಿದ. ಆದರೆ ನ್ಯಾಯಾಲಯದ ಈ ನಿರ್ಧಾರದಿಂದ ಸಮಾಜಕ್ಕೆ ತಪ್ಪು ಸಂದೇಶ ದೊರೆಯುವ ಸಾಧ್ಯತೆಯಿದೆಯೆಂದು ಅರ್ಜಿದಾರರ ಪರ ನ್ಯಾಯವಾದಿ ಶ್ಯಾಮ್ ನಾರಾಯಣ್ ಚೌಕ್ಸೆ ಹಾಗೂ ಪ್ರಕರಣದ ಆ್ಯಮಿಕಸ್ ಕ್ಯೂರಿ ಸಿದ್ಧಾರ್ಥ ಲೂತ್ರಾ ಆತಂಕ ವ್ಯಕ್ತಪಡಿಸಿದ್ದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ನ್ಯಾಯಪೀಠವು, ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ ಪ್ರಸಾರಕ್ಕೆ ಸಂಬಂಧಿಸಿ ಕಳೆದ ವರ್ಷದ ನವೆಂಬರ್‌ನಲ್ಲಿ ತಾನು ನೀಡಿದ್ದ ಆದೇಶವನ್ನು ಸಡಿಲಗೊಳಿಸಬೇಕೇ ಅಥವಾ ಅದನ್ನು ಪರಿಷ್ಕರಿಸಬೇಕೇ ಎಂಬುದನ್ನು ಕೇಂದ್ರ ಸರಕಾರದ ತೀರ್ಮಾನಕ್ಕೆ ಬಿಟ್ಟು ಬಿಡಲು ನಿರ್ಧರಿಸಿದೆ.ಚಲನಚಿತ್ರ ಮಂದಿರಗಳಲ್ಲಿ ರಾಷ್ಟ್ರಗೀತೆಯನ್ನು ಕಡ್ಡಾಯವಾಗಿ ಪ್ರಸಾರ ಮಾಡುವ ಆದೇಶವನ್ನು ಹಿಂಪಡೆಯುವಂತೆ ಕೋರಿ, ಕೇರಳದ ಕೊಡಂಗನಲ್ಲೂರು ಫಿಲ್ಮ್ ಸೊಸೈಟಿಯು ಸುಪ್ರೀಂಕೋರ್ಟ್‌ನ ಮೆಟ್ಟಲೇರಿತ್ತು.

ರಾಷ್ಟ್ರಗೀತೆ ಪ್ರಸಾರಕ್ಕೆ ಸಂಬಂಧಿಸಿ ಕೇಂದ್ರ ಗೃಹ ಸಚಿವಾಲಯವು ಬಹಳ ಸಮಯದ ಹಿಂದೆಯೇ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿತ್ತು. ಯಾವೆಲ್ಲಾ ಕಾರ್ಯಕ್ರಮಗಳಲ್ಲಿ ಹಾಗೂ ವಿಶೇಷ ಸಮಾರಂಭಗಳಲ್ಲಿ ರಾಷ್ಟ್ರಗೀತೆಯನ್ನು ನುಡಿಸಬೇಕು ಅಥವಾ ಹಾಡಬೇಕು ಎಂಬ ಬಗ್ಗೆ ಮಾರ್ಗದರ್ಶಿಸೂತ್ರಗಳಲ್ಲಿ ತಿಳಿಸಲಾಗಿದೆ.
  ಆದರೆ ಗೃಹ ಸಚಿವಾಲಯದ ಮಾರ್ಗದರ್ಶಿ ಸೂತ್ರಗಳಲ್ಲಿ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆಯನ್ನು ಹಾಡಬೇಕಾಗಿರುವ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಹೀಗಾಗಿ, ಚಿತ್ರಪ್ರದರ್ಶನದ ಆರಂಭದಲ್ಲಿ ರಾಷ್ಟ್ರಗೀತೆಯನ್ನು ಪ್ರಸಾರ ಮಾಡುವುದನ್ನು ಈ ಮಾರ್ಗದರ್ಶಿ ಸೂತ್ರಗಳಲ್ಲಿ ಸೇರ್ಪಡೆಗೊಳಿಸುವುದಕ್ಕಾಗಿ ನ್ಯಾಯಾಲಯವು ಸಂವಿಧಾನದ 142ನೇ ವಿಧಿಯನ್ನು ಬಳಸಿಕೊಂಡಿದ್ದು ಸರಿಯೇ ಎಂದು ಕೇರಳದ ಕೊಡಂಗನಲ್ಲೂರು ಫಿಲ್ಮ್ ಸೊಸೈಟಿ ಪರ ನ್ಯಾಯವಾದಿ ಸಿ.ಯು.ಸಿಂಗ್ ಪ್ರಶ್ನಿಸಿದ್ದರು. ಚಿತ್ರಪ್ರದರ್ಶನದ ಆರಂಭವು ಯಾವುದೇ ಗಂಭೀರ ಅಥವಾ ಔಪಚಾರಿಕ ಸಮಾರಂಭವಲ್ಲವೆಂದು ಅವರ ವಾದವಾಗಿತ್ತು.

ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸಿ, ಸುಪ್ರೀಂಕೋರ್ಟ್ ಕಳೆದ ನವೆಂಬರ್‌ನಲ್ಲಿ ಜಾರಿಗೊಳಿಸಿದ ಆದೇಶದ ಹಿಂದಿರುವ ತರ್ಕದ ಬಗ್ಗೆ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ಕಟುವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವುದು ಗಮನಾರ್ಹವಾಗಿದೆ. ರಾಷ್ಟ್ರಗೀತೆ ನುಡಿಸಲಾಗುತ್ತದೆಯೆಂಬ ಕಾರಣಕ್ಕಾಗಿ , ಪ್ರೇಕ್ಷಕರು ಶಾರ್ಟ್ಸ್‌ಗಳನ್ನು ಧರಿಸಿ ಚಿತ್ರಮಂದಿರಕ್ಕೆ ಹೋಗುವುದನ್ನು ನಿಷೇಧಿಸಬೇಕೆಂದು ನಾಳೆ ಯಾರಾದರೂ ಆಗ್ರಹಿಸುವ ಸಾಧ್ಯತೆಯಿದೆ. ಇಂತಹ ಅನೈತಿಕ ಪೊಲೀಸ್‌ಗಿರಿ ಯಾವ ಮಟ್ಟಕ್ಕೂ ತಲುಪಬಹುದಾಗಿದೆಯೆಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಎಲ್ಲಾ ಸಮಯದಲ್ಲೂ ನಮ್ಮ ದೇಶಭಕ್ತಿಯನ್ನು ಯಾಕೆ ಸಾಬೀತುಪಡಿಸುತ್ತಲೇ ಇರಬೇಕು ಎಂದವರು ಅಚ್ಚರಿ ವ್ಯಕ್ತಪಡಿಸಿದ್ದರು.

 ಪ್ರತಿಯೊಂದು ಸಿನೆಮಾ ಪ್ರದರ್ಶನದ ಆರಂಭದಲ್ಲಿ ಕಡ್ಡಾಯವಾಗಿ ರಾಷ್ಟ್ರಗೀತೆಯನ್ನು ನುಡಿಸುವಂತೆ ಸಿನೆಮಾ ಮಂದಿರಗಳ ಮಾಲಕರಿಗೆ ಆದೇಶಿಸುವುದಕ್ಕೆ ನ್ಯಾಯಾಲಯಕ್ಕೆ ಸಮರ್ಪಕವಾದ ಅಧಿಕಾರ ವ್ಯ್ರಾಪ್ತಿಯಿಲ್ಲವೆಂಬುದನ್ನು 2016ರಲ್ಲಿ ಈ ಬಗ್ಗೆ ಆದೇಶ ನೀಡಿದ್ದ ನ್ಯಾಯಮೂರ್ತಿ ದೀಪಕ್ ಮಿಶ್ರಾ ಪ್ರಾಯಶಃ ಈಗ ಒಪ್ಪಿಕೊಂಡಿರಬಹುದು. ಆದರೆ ಈ ಆದೇಶವನ್ನು ಹಿಂಪಡೆಯಲು ಅವರು ನಿರಾಕರಿಸಿರುವುದನ್ನು ನೋಡಿದರೆ, ಜನರು ಇದನ್ನು ನ್ಯಾಯಾಲಯದ ದೌರ್ಬಲ್ಯವೆಂದು ತಪ್ಪಾಗಿತಿಳಿದುಕೊಳ್ಳುವರೆಂಬ ಆತಂಕವೂ ಅವರಿಗಿರುವುದು ಸ್ಪಷ್ಟವಾಗುತ್ತದೆ.

ನ್ಯಾಯಾಲಯವು ಉತ್ತಮ ಉದ್ದೇಶದಿಂದ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆಯ ಪ್ರಸಾರವನ್ನು ಕಡ್ಡಾಯಗೊಳಿಸಿದ್ದರೂ, ಅದು ವ್ಯಾಪಕವಾಗಿ ತಪ್ಪುಗ್ರಹಿಕೆಗೊಳಗಾಗಿದೆಯೆಂಬುದಂತೂ ಸತ್ಯ. ಆದರೆ ತಾನಾಗಿಯೇ ಹೊರಡಿಸಿದ ಈ ಆದೇಶದ ಕಗ್ಗಂಟಿನಿಂದ ಹೊರಬರಲು ತನಗೀಗ ಸಾಧ್ಯವಾಗುತ್ತಿಲ್ಲವೆಂಬುದು ಅದಕ್ಕೀಗ ಮನವರಿಕೆಯಾಗಿದೆ. ಹೀಗಾಗಿ ಈ ಆದೇಶದ ಬಗ್ಗೆ ಸೂಕ್ತ ನಿರ್ಧಾರವನ್ನು ಕೈಗೊಳ್ಳುವ ಹೊಣೆಯನ್ನು ಅದು ಸರಕಾರದ ಹೆಗಲಿಗೆ ರವಾನಿಸಿದೆ, ಆ ಮೂಲಕ ತಾನು ಮುಜುಗರಕ್ಕೊಳಗಾಗುವುದರಿಂದ ಪಾರಾಗಲು ಯತ್ನಿಸಿದೆ. ಇದೇ ಕಾರಣಕ್ಕಾಗಿ ‘ವಂದೇಮಾತರಂ’ ಹಾಡಿಗೂ ಸಾರ್ವಜನಿಕವಾಗಿ ಗೌರವ ಪ್ರದರ್ಶಿಸಲು ಆದೇಶ ನೀಡಬೇಕೆಂದು ಕೋರುವ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ಮುಖ್ಯ ನ್ಯಾಯಮೂರ್ತಿ ನಿರಾಕರಿಸಿರುವುದರಲ್ಲಿ ಅಚ್ಚರಿಯೇನಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)