varthabharthi

ಅನುಗಾಲ

ಭಾರತವೆಂಬ ವಿಶ್ವದ ಏಕೈಕ ಅತ್ಯದ್ಭುತ!

ವಾರ್ತಾ ಭಾರತಿ : 25 Oct, 2017
ಬಾಲಸುಬ್ರಹ್ಮಣ್ಯ ಕಂಜರ್ಪಣೆ

 ಬಾಬರಿ ಮಸೀದಿ ನೆಲಸಮವಾದಾಗ ವಾಜಪೇಯಿ ತುಂಬ ಸಂಕಟಪಟ್ಟಿದ್ದರಂತೆ. ಅದಾದ ಒಂದು ದಶಕದ ಅವಧಿಯಲ್ಲಿ ಅಫ್ಘಾನಿಸ್ತಾನದ ಎರಡು ಬಾಮಿಯಾನ್ ಬುದ್ಧ ಶಿಲ್ಪಗಳನ್ನು ಅಲ್ಲಿನ ತಾಲಿಬಾನ್ ಆಡಳಿತವು ಡೈನಮೈಟಿಸಿತು. ಯುನೆಸ್ಕೊದಿಂದ ರಕ್ಷಿತ ಸಾಂಸ್ಕೃತಿಕ ತಾಣವೆಂದು ಘೋಷಿಸಲ್ಪಟ್ಟಿದ್ದ, ಕ್ರಿಸ್ತಶಕ 6ನೇ ಶತಮಾನದಲ್ಲಿ ನಿರ್ಮಾಣವಾದ ಗಾಂಧಾರ ಶೈಲಿಯ ಈ ಬೃಹತ್ ಸಾಂಸ್ಕೃತಿಕ ಮತ್ತು ಪಾರಂಪರಿಕ ಶಿಲ್ಪಗಳಿರುವ ಪ್ರದೇಶದ ಮೇಲೆ ಮಂಗೋಲಿಯನ್ ಚಕ್ರವರ್ತಿ ಚೆಂಗೀಸ್ ಖಾನ್ ಮತ್ತು ಅನಂತರ ಮುಘಲ್ ದೊರೆ ಔರಂಗಜೇಬ್ ಹೀಗೆ ಅನೇಕರು ದಾಳಿಯಿಟ್ಟಿದ್ದರೂ ಈ ಶಿಲ್ಪಗಳನ್ನು ಅಳಿಸಿರಲಿಲ್ಲ. ಕಾರಣವೇನೇ ಇದ್ದರೂ ಅಷ್ಟರ ಮಟ್ಟಿಗೆ ಅವರೂ ಪರಮತ ಸಂಸ್ಕೃತಿಯನ್ನು ಗೌರವಿಸಿದ್ದರು ಎನ್ನಬಹುದು. ಇಸ್ಲಾಮ್ ರಾಷ್ಟ್ರಗಳೂ ಸೇರಿದಂತೆ ಜಾಗತಿಕ ವಿರೋಧವಿದ್ದಾಗಲೂ ಈ ಕೆಲಸವನ್ನು ತಾಲಿಬಾನ್ ಅಮಾನುಷವಾಗಿ ಪೂರೈಸಿತು. ತಾಲಿಬಾನಿನ ಈ ಕೆಲಸವನ್ನು ಒಂದು ಅಮಾನುಷ ಕ್ರೌರ್ಯವೆಂದು ಬಣ್ಣಿಸಲಾಯಿತು.

ಇಸ್ಲಾಮಿಕ್ ಸ್ಟೇಟ್ ಎಂಬ ಮತಾಂಧ ಕ್ರೂರಿಗಳ ತಂಡವು ಇರಾಕಿನಲ್ಲಿದ್ದ ಮತ್ತು ಎಂತಹ ಸಂದರ್ಭದಲ್ಲೂ ಕಾಪಾಡಿಕೊಂಡು ಬಂದಿದ್ದ ಸಾಂಸ್ಕೃತಿಕ ಪರಂಪರೆಯನ್ನು ಅಭಿವ್ಯಕ್ತಿಸುತ್ತಿದ್ದ ಅನೇಕ ಭವ್ಯ ಸ್ಮಾರಕಗಳನ್ನು ನಾಶಪಡಿಸಿತು. ಆದರೆ ಯಾರೂ ಈ ಘಾತುಕತನಗಳ ನಡುವೆ ಇದ್ದ ಸಮಾನಾಂತರತೆಯನ್ನು ಉಲ್ಲೇಖಿಸಲಿಲ್ಲ. ಇದಕ್ಕೆ ಕಾರಣಗಳು ಹಲವಿದ್ದರೂ ಹಿಂಸೆಯ, ಅಸಹಿಷ್ಣುತೆಯ, ಆಕ್ರಮಣದ, ವಿನಾಶದ, ವಿಕೃತಿಯ ಈ ಎಲ್ಲ ಘಟನೆಗಳೂ ಸಂಸ್ಕೃತಿಯ ಮೂಲದಲ್ಲಿ ಒಂದೇ ಆಗಿವೆಯೆಂದು ಇತಿಹಾಸಕಾರರು ಧೈರ್ಯತಾಳಿ ಹೇಳಿಯಾರೆಂದು ಅಶಿಸೋಣ.

ಈಗ ಇಂತಹ ಅಸಹಿಷ್ಣುತೆಯು ವಿಶ್ವಾತ್ಮಕವಾದ ಹಿರಿಮೆಯಾಗಿದೆ. ಕುತರ್ಕಗಳು, ಮತಾಂಧತೆಯನ್ನು ವಿಜೃಂಭಿಸುತ್ತಿವೆ. ಸಮಾಜದ ಪ್ರಜ್ಞಾವಂತರು ಈ ಕುರಿತು ಎಷ್ಟೇ ಪ್ರತಿರೋಧ ತೋರಿದರೂ ಅವರ ಕೈಸೋಲುವಂತೆ ಕಾಣಿಸುತ್ತಿದೆ. ಆದರೆ ಈ ಸೋಲು ತಾತ್ಕಾಲಿಕವೆಂದು ನಮ್ಮ ಇತಿಹಾಸ ಮತ್ತೆ ಮತ್ತೆ ಸಾರಿದೆಯೆಂಬ ಅಭಯವಷ್ಟೇ ಸಮಾಜದ ಆಸೆಗಣ್ಣುಗಳನ್ನು ಉಳಿಸೀತು. 1975ರಲ್ಲಿ ತುರ್ತುಸ್ಥಿತಿ ಎದುರಾದಾಗ ಅದರ ಭಯಾನಕತೆ ಅನೇಕರನ್ನು ಅಧೀರರನ್ನಾಗಿಸಿತು. ಮತ್ತೆ ಬೆಳಕು ಬರುವುದಿಲ್ಲವೇನೋ ಎಂಬಷ್ಟು ಕತ್ತಲಾಯಿತು. ಆದರೂ ಬೆಳಗಾಯಿತು; ಬೆಳಕಾಯಿತು. ಹಾಗೆಯೇ ಎಷ್ಟೇ ಸಂಕಟದ ಸ್ಥಿತಿ ಎದುರಾದಾಗಲೂ ಅದರಿಂದ ವಿಮೋಚನೆಯಿದೆ. ಆದರೆ ಈ ದುಸ್ಥಿತಿಗೆ ಬಲಿಯಾಗಿ ನಾಶವಾದ ಮನುಷ್ಯರು, ಸಾಂಸ್ಕೃತಿಕ ಸುವಸ್ತುಗಳು ಮತ್ತೆ ಬರಲಾರವು. ಇದು ಸತ್ತುಹೋದ ಮಹಾತ್ಮ ಗಾಂಧಿ, (ಪ್ರಾಯಃ ಇದೊಂದು ವಿಚಾರದಲ್ಲಿ ಮೋಹನ ದಾಸ ಕರಮಚಂದ್, ಇಂದಿರಾ, ರಾಜೀವ್ ಈ ಮೂವರು ಗಾಂಧಿಗಳೂ ಒಂದೇ ತಕ್ಕಡಿಯಲ್ಲಿದ್ದಾರೆ!) ಭಗತ್ ಸಿಂಗ್ ಇವರುಗಳ ಮತ್ತು ಇಂತಹ ಅನೇಕರ ಕುರಿತು ಎಷ್ಟು ಸತ್ಯವೋ ಬಾಬರಿ ಮಸೀದಿಯಂತಹ ಸಾಂಸ್ಕೃತಿಕ ತಾಣಗಳ ಕುರಿತೂ ಅಷ್ಟೇ ಸತ್ಯ. ವಿಶೇಷವೆಂದರೆ ತುರ್ತುಸ್ಥಿತಿಯಲ್ಲಿ ಅಭಿವ್ಯಕ್ತಿ, ಸಂಸ್ಕೃತಿ, ಸ್ವಾತಂತ್ರ್ಯ, ಇವುಗಳಿಗಾಗಿ ಪ್ರಾಣ ಕಳೆದುಕೊಂಡವರ ಹೊರತಾಗಿ ಆ ಬಗ್ಗೆ ಹೋರಾಡಿದವರೂ ಭಾಷಣ ಬಿಗಿದವರೂ, ಸೆರೆಮನೆ ಸೇರಿದವರೂ, ಆ ವಿಚಾರವನ್ನೇ ಮರೆತಂತೆ ಇದ್ದಾರೆ. ಇವು ಸಾರ್ವತ್ರಿಕ ಮತ್ತು ಶಾಶ್ವತ ಮೌಲ್ಯಗಳೆಂಬುದನ್ನು ಬಹಳಷ್ಟು ಜನರು ಮರೆತೇ ಬಿಟ್ಟಿದ್ದಾರೆ. ಈಚೆಗೆ ಖ್ಯಾತ ನಟ ಪ್ರಕಾಶ ರೈಯವರಿಗೆ ಶಿವರಾಮ ಕಾರಂತ ಪ್ರಶಸ್ತಿ ಬಂತು. ಸುಮಾರಾಗಿ ಇದೇ ಸಮಯಕ್ಕೆ ರೈ ಕೇಂದ್ರ ಸರಕಾರದ ಮತ್ತು ಮೋದಿ, ಆದಿತ್ಯನಾಥ್ ಮುಂತಾದ ಧುರೀಣರ ಮತೀಯ ಮತ್ತು ಸರ್ವಾಧಿಕಾರಿ ಧೋರಣೆಗಳನ್ನು ಖಂಡಿಸಿದರು. ಇದೇ ನೆಪವಾಗಿ ಕರ್ನಾಟಕದ ಈಗ ಭಾಜಪದಲ್ಲಿರುವ ಅನೇಕ ರಾಜಕಾರಣಿಗಳು ರೈಗೆ ಈ ಪ್ರಶಸ್ತಿಯನ್ನು ಕೊಡಬಾರದು ಮತ್ತು ಪ್ರಶಸ್ತಿಯ ಘೋಷಣೆಯನ್ನು ಹಿಂದೆಗೆದುಕೊಳ್ಳಬೇಕು ಎಂದೆಲ್ಲ ಪ್ರತಿಭಟಿಸಿದರು. ಕರ್ನಾಟಕದ ಶಾಸಕರೂ ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಂವಿಧಾನ ಮುಂತಾಗಿ ಸದಾ ಮಾತನಾಡುವ ಮಾಜಿ ಮಂತ್ರಿ ಸುರೇಶಕುಮಾರ್ ರೈಯನ್ನು ಟೀಕಿಸಿ ಅವರಿಗೆ ಅಷ್ಟು ಕಾಳಜಿಯಿದ್ದರೆ ಸಿನೆಮಾದಲ್ಲಿ ನಟಿಸುವುದನ್ನು ಬಿಟ್ಟು ರಾಜಕೀಯಕ್ಕೆ ಸೇರಲಿ ಎಂದು (ಅಥವಾ ಈ ಅರ್ಥದಲ್ಲಿ) ಹೇಳಿದರು. ‘ಟಾಮ್ ಡಿಕ್ ಮತ್ತು ಹ್ಯಾರಿ’ ಎಂದು ಇಂಗ್ಲಿಷ್‌ನಲ್ಲಿ ಉಲ್ಲೇಖಿಸುವಂತೆ ಪರಮ ಅಜ್ಞಾನಿಗಳೂ ಬೀದಿಯಲ್ಲಿ ನಿಂತು ಇಲ್ಲವೆ ಪೇಸ್ಬುಕ್‌ನಂತಹ ಬಿಟ್ಟಿ ಜಾಲತಾಣಗಳ ಮೂಲಕ ಊಳಿದರು. ಪ್ರಕಾಶ ರೈಯನ್ನು ನಮ್ಮ ಮುಖ್ಯ ವಾಹಿನಿಯ ಹೆಸರಾಂತ ಸಾಂಸ್ಕೃತಿಕ ಚಿಂತಕರು, ಸಾಹಿತಿಗಳ ಪೈಕಿ ಬಹುಪಾಲು ಮಂದಿ ಗುಟ್ಟಾಗಿ ಬೆಂಬಲಿಸಿದರೇ ವಿನಾ ಸಾರ್ವಜನಿಕವಾಗಿ ಹೋಗುವಾಗ ಮುಖಮರೆಮಾಡಿಕೊಂಡರು. ಪ್ರಕಾಶ ರೈ ಉತ್ತಮ ನಟರು ಮಾತ್ರವಲ್ಲ. ಒಳ್ಳೆಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾಳಜಿ ಮತ್ತು ಅನುಭವವಿರುವವರು.

ಸಾಹಿತ್ಯವನ್ನು ಸಾಕಷ್ಟು ಓದಿಕೊಂಡವರು. ನಮ್ಮ ಬಹುಪಾಲು ದೊಡ್ಡ ದುರಂತವೆಂದರೆ ನೀವು ಓದಿದರೆ ಸಾಲದು; ನಿತ್ಯ ಏನಾದರೂ ಬರೆಯುತ್ತಿರಬೇಕು; ಭಾಷಣ ಮಾಡುತ್ತಿರಬೇಕು; ಹೆಸರುವಾಸಿಯಾದವರ ನಡುವೆ ಸದಾ ವೇದಿಕೆಯಲ್ಲಿ ರಂಜಿಸುತ್ತಿರಬೇಕು. ಆಗಾಗ ಒಂದೊಂದು ಕೃತಿ ಪ್ರಕಟವಾಗುತ್ತಿದ್ದರೆ ಇನ್ನೂ ಉತ್ತಮ. ಆಗ ಮಾತ್ರ ನೀವು ಸಾಹಿತಿಗಳು ಮತ್ತು ಪದ ನಿಮಿತ್ತ ಚಿಂತಕರು. ಈ ಅಳತೆಗೋಲಿನಲ್ಲಿ ಪ್ರಕಾಶ ರೈ ಗೋಲು ಹೊಡೆಯಲೂ ಇಲ್ಲ; ಗೋಲು ತಲುಪಲೂ ಇಲ್ಲ.

ಇದನ್ನೇಕೆ ಇಲ್ಲಿ ಪ್ರಾಸಂಗಿಕವಾಗಿ ಉಲ್ಲೇಖಿಸಲಾಗಿದೆಯೆಂದರೆ ನಮ್ಮ ಬಹುಪಾಲು ವಿದ್ಯಾವಂತರು, ಬುದ್ಧಿವಂತರು ಅವಕಾಶವಾದಿಗಳು. ಅಂತಃಪುರದಲ್ಲಿ ಉತ್ತರನಂತೆ ಪೌರುಷದ ಅಭಿವ್ಯಕ್ತಿಮಾಡಿ ಶಸ್ತ್ರ ಹಿಡಿಯುವ ಪ್ರಸಂಗ ಬಂದರೆ ಹಿಂದುಳಿಯುವರು; ವೌನಕ್ಕೆ ಶರಣಾಗುವರು. ದೇವಾಸುರರಂತೆ ತಮಗೆ ಪ್ರಶಸ್ತವಾದ ಆಯಕಟ್ಟಿನ ಜಾಗದಲ್ಲಿ ಕುಳಿತು ಸಮರವನ್ನು ವೀಕ್ಷಿಸಿ ಗುಣಗಾನಮಾಡುವರೇ ಹೊರತು ಯುದ್ಧಭೂಮಿಯ ಹತ್ತಿರವೂ ಸುಳಿಯಲಾರರು. ಆದರೆ ಮೊದಲೂ ಅನಂತರವೂ ತಾವೇ ಗೆಲುವು ಸಂಪಾದಿಸಿದವರಂತೆ ಮಾತನಾಡುವರು. ಮಾತೇ ಜ್ಯೋತಿರ್ಲಿಂಗ! ಈಗ ನಿಜವಾದ ಅಪಾಯಕಾರೀ ಸಂದರ್ಭ ಎದುರಾಗಿದೆ. ಕುಂಬಾರಗೆ ವರುಷ, ದೊಣ್ಣೆಗೆ ನಿಮಿಷ ಎಂಬುದನ್ನು ಸಾವಿರಾರು ವರ್ಷಗಳಿಂದ ಅಸಂಖ್ಯ ಆಕ್ರಮಣಕಾರರು ಮತ್ತು ಕಳೆದ ಕೆಲವು ದಶಕಗಳಲ್ಲಿ ಭಾರತವೂ ತಾಲಿಬಾನೂ ನಿರೂಪಿಸಿದೆ.

ನಿರ್ಮಾಣ ಮತ್ತು ನಿರ್ನಾಮ ಇವು ಅರ್ಥಕೋಶದಲ್ಲಿ ಬಹಳ ಹತ್ತಿರದಲ್ಲಿವೆಯಾದರೂ ವಾಸ್ತವದಲ್ಲಿ ಬಹುದೂರ ಇರಬೇಕಾದವು. ಸೂರತ್‌ನಲ್ಲಿ ಪದ್ಮಾವತಿ ಸಿನೆಮಾದ ನಾಯಕಿಯ ಚಿತ್ರವನ್ನು ನೆಲದಲ್ಲಿ 48 ಗಂಟೆಗಳ ಕಾಲದೊಳಗೆ ಬರೆದ ಕಲಾವಿದನಿಗೆ ಅದನ್ನು ಮತಾಂಧರು ನಾಶಗೊಳಿಸಿದಾಗ ಈ ನಿರ್ಮಾಣ ಮತ್ತು ನಿರ್ನಾಮ ಎಷ್ಟು ಹತ್ತಿರವೆಂದು ಗೊತ್ತಾಗುತ್ತದೆ. (ರಾಮಾಯಣದಲ್ಲಿ ಋಷಿಮುನಿಗಳ ಯಜ್ಞಶಾಲೆಗಳನ್ನು ರಾಕ್ಷಸರು ಹಾಳುಗೆಡವಿದ್ದನ್ನು ನೆನಪಿಸಬಹುದು!) ತಾಜ್‌ಮಹಲ್ ಅನೇಕರ ಕಣ್ಣಿಗೆ ಹಬ್ಬವಾದರೆ ಅದನ್ನು ನೋಡಿ ಕಣ್ಣು ಕೆಂಪಾಗುವ ಒಂದು ಸಾಂಸ್ಕೃತಿಕ ನಿರ್ಗತಿಕರ ಸಮೂಹವೇ ಭಾರತದಲ್ಲಿದೆ. ಹಿಂದೆ ಭಾರತೀಯ ಜನಸಂಘವು ಅಸ್ತಿತ್ವದಲ್ಲಿದ್ದಾಗ ಪಿ.ಎನ್. ಓಕ್ ಎಂಬವರು (ಈತ ಇತಿಹಾಸಕಾರನೆಂಬ ಅರ್ಹತೆಯನ್ನೂ ಪಡೆದಿದ್ದಾರೆ!) ತಾಜ್‌ಮಹಲ್ ತೇಜೋ ಮಹಾಲಯ ಎಂಬ ದೇವಾಲಯವಾಗಿತ್ತೆಂದೂ ಅದನ್ನು ಇಸ್ಲಾಮ್ ಧಾಳಿಕೋರರು ವಿಕೃತಗೊಳಿಸಿ (ವಿಕೃತಿಯಿಂದ ಇಷ್ಟೊಂದು ಸೌಂದರ್ಯ ಸೃಷ್ಟಿಯಾಗುವುದಾದರೆ ವಿಕೃತಿಯೂ ಸ್ವಾಗತಾರ್ಹ!) ತಾಜ್‌ಮಹಲ್ ಎಂದು ಹೆಸರಿಟ್ಟು ಬದಲಾಯಿಸಿದರು ಎಂಬ ಅದ್ಭುತ ರಮ್ಯ ಕಥಾನಕವನ್ನು ಬರೆದಿದ್ದರು. ಅದೃಷ್ಟಕ್ಕೆ ಅವರನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಅವರು ಬರೆದದ್ದು ಅತ್ತ ಹಾಸ್ಯ ಸಾಹಿತ್ಯವೂ ಆಗದೆ, ಇತ್ತ ಪತ್ತೇದಾರಿ ಕಾದಂಬರಿಯೂ ಆಗದೆ ನೆಲೆಕಾಣದ ದೆವ್ವದಂತೆ ಕಳೆದುಹೋಯಿತು. ಆದರೆ ಈ ಗತ ಭೂತಕ್ಕೆ ಮತ್ತೆ ಹೊಸ ರೀತಿ-ರೂಪದಲ್ಲಿ ಜೀವತುಂಬಿಸುವ ಡ್ರಾಕುಲಾ ಭಕ್ತರು ಈಗ ಹುಟ್ಟಿಕೊಂಡಿದ್ದಾರೆ ಮತ್ತು ಮತಾಂಧತೆಯ ರಕ್ತ ಬಿದ್ದಲ್ಲೆಲ್ಲ ಈ ತಳಿಯ ಕಳೆ ಬೆಳೆಯುತ್ತಿದೆ. ಉತ್ತರ ಪ್ರದೇಶದ ಬಿಜೆಪಿ ಶಾಸಕ ಸಂಗೀತ್‌ಸೋಮ್ ತಾಜ್‌ಮಹಲ್ ಈ ದೇಶದ ಸಂಸ್ಕೃತಿಯಲ್ಲದಿರುವುದರಿಂದ ಅದಕ್ಕೆ ಆಧುನಿಕ ಭಾರತದಲ್ಲಿ ಸ್ಥಾನ (‘ಅಸ್ತಿತ್ವ’ವೆಂದು ಓದಿಕೊಳ್ಳಬೇಕು!) ವಿರಬಾರದೆಂದು ಹೇಳಿದರು. ಇನ್ನೊಬ್ಬ ಬಿಜೆಪಿ ಸಂಸದ ವಿನಯಕುಮಾರ್ ಖಟಿಯಾರ್ ಸತ್ತುಹೋದ ಓಕ್ ಅವರ ಮಾತುಗಳನ್ನೇ ವಾಂತಿ ಮಾಡಿದ್ದಾರೆ. ಸುದ್ದಿಗಾಗಿಯೇ ಓದು ಬರೆಹವನ್ನು ಅಭ್ಯಸಿಸಿದವರಂತಿರುವ ಸುಬ್ರಹ್ಮಣ್ಯ ಸ್ವಾಮಿಯವರು ಸಹಿತ ಇದೇ ರೀತಿಯ ಮಾತುಗಳನ್ನಾಡಿದ್ದಾರೆ. (ಇದಕ್ಕೆ ಪ್ರತಿಯಾಗಿ ಸಮಾಜವಾದಿ ಪಕ್ಷದ ಅಝಂ ಖಾನ್ ‘ಹಾಗಾದರೆ ಕೆಂಪುಕೋಟೆ, ಕುತುಬ್‌ಮಿನಾರ್, ಸಂಸತ್ ಭವನ, ರಾಷ್ಟ್ರಪತಿ ಭವನ ಇವೆಲ್ಲವೂ ಅದೇ ರೀತಿಯ ಸ್ಮಾರಕಗಳು, ಇವನ್ನೇನು ಮಾಡುತ್ತೀರಿ?’ ಎಂದು ವ್ಯಂಗ್ಯವಾಡಿದ್ದಾರೆ.) ಇವೆಲ್ಲ ಆಕಸ್ಮಿಕವಾದ ಮಾತುಗಳೆಂದು ಭಾವಿಸಬಾರದು. ಈ ಹಂತಕ್ಕಿಂತ ಸ್ವಲ್ಪ ಮೊದಲು ಉತ್ತರ ಪ್ರದೇಶ ಸರಕಾರ ಪ್ರಕಟಿಸಿದ ಪ್ರವಾಸೀ ಮಾರ್ಗದರ್ಶಿಯಲ್ಲಿ ತಾಜ್‌ಮಹಲಿನ ಉಲ್ಲೇಖವೇ ಇಲ್ಲದಿರುವುದನ್ನು (ಮತ್ತು ಯೋಗಿ ಆದಿತ್ಯನಾಥರ ಗೋರಖಪುರದ ಪೂರ್ಣಪುಟವಿನ್ಯಾಸವನ್ನು!) ಮತ್ತು ಈ ಮುಖ್ಯಮಂತ್ರಿಯವರೇ ಆ ಮೊದಲು ತಾಜ್‌ಮಹಲ್ ಭಾರತೀಯ ಸಂಸ್ಕೃತಿಯ ಪ್ರತೀಕವಲ್ಲವೆಂಬ ನೆಪದಲ್ಲಿ ಅದರ ಪ್ರತಿಕೃತಿಯನ್ನು ಸರಕಾರಿ ಸಮಾರಂಭಗಳಲ್ಲಿ ಉಡುಗೊರೆಯಾಗಿ ನೀಡಲು ನಿರಾಕರಿಸಿರುವುದನ್ನು, ತಾಜ್‌ಮಹಲಿಗೆ ತಮ್ಮ ಮುಂಗಡಪತ್ರದಲ್ಲಿ ಯಾವ ಪ್ರಸ್ತಾವನೆಯನ್ನೂ ಮಾಡದಿರುವುದನ್ನು ಗಮನಿಸಿದರೆ ಇದೊಂದು ಭಯಾನಕವಷ್ಟೇ ಅಲ್ಲ, ಮಾರಕ ತಂತ್ರವೆಂಬುದು ಸ್ಪಷ್ಟವಾಗುತ್ತದೆ. ಈ ವಿಷಾನಿಲವನ್ನು ಸಂಶೋಧಿಸಿ ಹಬ್ಬಿಸಿದ ಮೇಲೆ ಈ ಭಾರತೀಯ ಸಂಸ್ಕೃತಿಯ ವಕ್ತಾರರು ಆ ಮೇಲಷ್ಟೇ ಈ ರೋಗ ತರಂಗಗಳು ಉಲ್ಬಣವಾಗುವುದನ್ನು ಮತ್ತು ಇದರ ಪರಿಣಾಮ ಕೈಮೀರಿ ಹೋಗುತ್ತಿರುವುದನ್ನು ಗಮನಿಸಿರಬೇಕು.

ಅಲ್ಲಿನ ಮುಖ್ಯಮಂತ್ರಿ ತಕ್ಷಣ ಹಾವು ಕಡಿದದ್ದಕ್ಕೆ ಪ್ರಥಮ ಚಿಕಿತ್ಸೆಯ ಭಾಗದಂತೆ ತಾಜ್‌ಮಹಲನ್ನು ಭಾರತೀಯರ ಬೆವರಿನ ಫಲವೆಂದು ಬಣ್ಣಿಸಿದರು. ಅಲ್ಲಿಗೆ ಬೇಟಿ ನೀಡಿದರು. ಪ್ರಧಾನಿಯವರು ಪರೋಕ್ಷವಾಗಿ (ಅ)ಸಮ್ಮತಿಯನ್ನು ಸೂಚಿಸಿದರು. ತಾಜ್‌ಮಹಲಿನಂತಹ ಒಂದು ಶಿಲ್ಪಕಲಾ ವೈಭವವು ನಮ್ಮ ದೇಶದಲ್ಲಿದೆಯೆಂಬುದೇ ಹೆಮ್ಮೆಪಡಬೇಕಾದ ವಿಚಾರ. ಯಾರೇ ಕಟ್ಟಿರಲಿ, ಅದು ಇತಿಹಾಸದಿಂದ ಮುಂದುವರಿದು ನಮ್ಮ ಸಂಸ್ಕೃತಿಯ ಭಾಗವಾಗಿ ಉಳಿದಿದೆ. ಅದರ ಉಗಮದ ಬಗ್ಗೆ ಇರುವ ಐತಿಹಾಸಿಕ ಸತ್ಯಗಳನ್ನು ವಿರೂಪಗೊಳಿಸಿ ನಾಲಗೆಯ ಆಚಾರವನ್ನು ಕುಲಗೆಡಿಸುವವರು ತಮ್ಮ ಡಿಎನ್‌ಎ ಪರೀಕ್ಷೆಮಾಡಿಸಿಕೊಳ್ಳುವುದು ಒಳ್ಳೆಯದು. ಆಗ ಎಸ್.ಎಲ್. ಭೈರಪ್ಪನವರ ವಂಶವೃಕ್ಷದ ಶ್ರೋತ್ರಿಯವರು ತಮ್ಮ ಮೂಲವನ್ನು ಕೆದಕಿದಂತಾಗಬಹುದು. ರಾಜಕಾರಣಿಗಳು ಆಕಾಶದಲ್ಲಿ ಬಹು ಎತ್ತರದಲ್ಲಿ ಹಾರುವ ಹದ್ದುಗಳಂತೆ. ಅವರು ಊರ್ಧ್ವಮುಖಿಗಳಲ್ಲ; ಅವರಿಗೆ ನೆಲದ ಮೇಲಿರುವ ಮಾಂಸದ ಮೇಲೆಯೇ ಕಣ್ಣು. ಉಳಿದೆಲ್ಲ ದಾಳಗಳು ವಿಫಲವಾದಾಗ ಮತಾಂಧತೆಯನ್ನು ಅಸ್ಮಿತೆಯ ಹೆಸರಿನಲ್ಲಿ ಕೆರಳಿಸುವುದೇ ಇಂತಹ ಮಾತುಗಳ ಉದ್ದೇಶ. ಇವು ಉನ್ಮತ್ತತೆಯನ್ನು, ಉನ್ಮಾದವನ್ನು ಸೃಷ್ಟಿಸಿ ಜೀವಂತ ಸಮಸ್ಯೆಗಳನ್ನು ಮರೆಸುತ್ತವೆ ಮತ್ತು ಸಮಾಜವನ್ನು ಮತೀಯವಾಗಿ ಕೆರಳಿಸಿ ಧ್ರುವೀಕರಿಸುತ್ತವೆ. ವಿಷಾದವೆಂದರೆ ತಾಜ್‌ಮಹಲಿನ ಕುರಿತು ಕಥೆ, ಪ್ರೇಮ ಕವನ ಬರೆದವರೂ ಅದರೆದುರು ನಿಂತೋ ಕುಳಿತೋ ಫೋಟೊ ಕ್ಲಿಕ್ಕಿಸಿಕೊಂಡವರೂ ಈಗ ಮೌನ ತಾಳಿದ್ದಾರೆ. ಈ ಮತೀಯ ಉನ್ಮಾದವನ್ನು ಗಮನಿಸಿದರೆ ತಾಜ್‌ಮಹಲನ್ನು ನೋಡದವರು ಆದಷ್ಟು ಬೇಗ ಅದನ್ನು ನೋಡಿ ಬರುವುದು ಒಳಿತೆಂದನ್ನಿಸುತ್ತದೆ. ಜಗತ್ತಿನ ಏಳು ಅದ್ಭುತಗಳಲ್ಲಿ ಒಂದೆಂದು ಬಣ್ಣಿಸಲಾದ ತಾಜ್‌ಮಹಲ್ ಇಲ್ಲವಾದರೆ ಅದರ ಬದಲಿಗೆ ವಿಕೃತ ಭಾರತವನ್ನೇ ವಿಶ್ವದ ಅತ್ಯದ್ಭುತವೆಂದು ಯುನೆಸ್ಕೋ ಆಯ್ಕೆ ಮಾಡುವುದು ಒಳ್ಳೆಯದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)