varthabharthi

ವಿಶೇಷ-ವರದಿಗಳು

ನನ್ನ ಕಥೆ

ನಮ್ಮಿಬ್ಬರ ಸ್ವರ್ಗದಲ್ಲಿ ಆಹಾರ, ಹಣಕ್ಕೆ ಯಾವುದೇ ಸ್ಥಾನವಿಲ್ಲ; ಅಲ್ಲಿರುವುದು ಪ್ರೇಮ ಮಾತ್ರ...: ಸೋನಿಯಾ

ವಾರ್ತಾ ಭಾರತಿ : 27 Oct, 2017
ಜಿಎಂಬಿ ಆಕಾಶ್

ಶಾಹೀನ್,ಸೋನಿಯಾ ತಮ್ಮ ಪುತ್ರಿ ಸುಖ್ತಾರಾಳೊಂದಿಗೆ

ಇದು ನಿಜಜೀವನದ ಕಥೆ. ಇದು ಖಂಡಿತವಾಗಿಯೂ ನಿಮ್ಮ ಹೃದಯವನ್ನು ಕರಗಿಸುತ್ತದೆ ಮತ್ತು ಕೇವಲ ಮುಗುಳ್ನಗೆಯೊಂದಿಗೂ ಪ್ರೇಮಕಥೆ ಆರಂಭವಾಗುತ್ತದೆ ಎನ್ನುವುದು ನಿಮಗೆ ಅರ್ಥವಾಗುತ್ತದೆ. ಇದು ಅಂತಹ ಶಾಹೀನ್(21) ಮತ್ತು ಸೋನಿಯಾ(19) ದಂಪತಿಯ ಕಥೆ. ಇದನ್ನು ಸೋನಿಯಾಳ ಬಾಯಿಯಿಂದಲೇ ಕೇಳಿ.

 ಅದೆಲ್ಲವೂ ಮುಗುಳ್ನಗೆಯೊಂದಿಗೆ ಆರಂಭಗೊಂಡಿತ್ತು. ಅದು ಮೊದಲ ನೋಟದ ಪ್ರೇಮವಾಗಿತ್ತು. ಶಾಹೀನ್ ಕಟ್ಟಡ ನಿರ್ಮಾಣ ಕಾರ್ಮಿಕನಾದರೆ ನಾನು ಜವಳಿ ಕಾರ್ಖಾನೆಯಲ್ಲಿ ದುಡಿಯುತ್ತಿದ್ದೆ. ಊಟದ ಸಮಯದಲ್ಲಿ ನಾನು ಮನೆಗೆ ಮರಳುತ್ತಿದ್ದರೆ ಆತ ದಾರಿಯಲ್ಲಿರುವ ನಿರ್ಮಾಣ ಹಂತದ ಕಟ್ಟಡದ ಬಳಿ ನಿಂತಿರುತ್ತಿದ್ದ. ಅದೊಂದು ದಿನ ಆಕಸ್ಮಿಕವಾಗಿ ನಮ್ಮ ಕಣ್ಣುಗಳು ಪರಸ್ಪರ ಸಂಧಿಸಿದ್ದವು. ನಾನು ಅಂದು ಮುಗುಳ್ನಕ್ಕಿದ್ದು ಏಕೆ ಎನ್ನುವುದು ಗೊತ್ತಿಲ್ಲ, ಪ್ರತಿಯಾಗಿ ಆತನೂ ಮುಗುಳ್ನಗೆ ಬೀರಿದ್ದ. ಇದು ಸುಮಾರು ಒಂದು ವರ್ಷ ಕಾಲ ಹೀಗೆಯೇ ಮುಂದುವರಿದಿತ್ತು. ಅಲ್ಲಿ ಶಾಹೀನ್‌ನ ಕೆಲಸ ಮುಗಿದಿದ್ದರೂ ಅದೆಲ್ಲಿದ್ದರೂ ನಾನು ದಿನನಿತ್ಯ ಊಟಕ್ಕೆ ಹೋಗುವಾಗ ಅಲ್ಲಿ ಬಂದು ನನಗಾಗಿ ಕಾಯುತ್ತಿದ್ದ. ಇಷ್ಟಿದ್ದರೂ ನಾವು ಪರಸ್ಪರ ಒಮ್ಮೆಯೂ ಮಾತನಾಡಿರಲಿಲ್ಲ.

ಅದೊಂದು ದಿನ ಮಧ್ಯಾಹ್ನ ಊಟಕ್ಕೆ ತೆರಳುವಾಗ ಆತ ಯಥಾಪ್ರಕಾರ ನನಗಾಗಿ ಕಾದು ನಿಂತಿದ್ದ. ಅದೇಕೋ ಅಂದು ನನ್ನ ಕಾಲುಗಳು ಮುಂದಕ್ಕೆ ಚಲಿಸಿರಲೇ ಇಲ್ಲ. ಆತ ನನ್ನ ಬಳಿಗೆ ಬಂದು ಹಿಂಜರಿಯುತ್ತಲೇ, ರಸ್ತೆಯಲ್ಲಿ ಪರಸ್ಪರರತ್ತ ಮುಗುಳ್ನಗೆ ಬೀರುವ ಬದಲು ನಾವು ಎಲ್ಲಿಯಾದರೂ ಭೇಟಿಯಾಗಲು ಸಾಧ್ಯವಿಲ್ಲವೇ ಎಂದು ಕೇಳಿದ್ದ.

ಹಾಗೆ ನಮ್ಮ ಮೊದಲ ಭೇಟಿ ಅಥವಾ ಕಲಿತವರ ಭಾಷೆಯಲ್ಲಿ ‘ಮೊದಲ ಡೇಟಿಂಗ್’ ನ್ಯಾಷನಲ್ ಮ್ಯೂಝಿಯಂನಲ್ಲಿ ನಿಗದಿಗೊಂಡಿತ್ತು. ಅಲ್ಲಿ ಒಂದೇ ಕಡೆ ಅಷ್ಟೆಲ್ಲ ವಸ್ತುಗಳನ್ನು ನೋಡಿ ನಾವು ಬೆರಗಾಗಿದ್ದೆವು. ಅಲ್ಲಿದ್ದ ರಾಜರು ಮತ್ತು ರಾಣಿಯರಿಗೆ ಸೇರಿದ ವಸ್ತುಗಳನ್ನು ನಾನು ಅಚ್ಚರಿಯಿಂದ ನೋಡುತ್ತ ಸಂಭ್ರಮಿಸುತ್ತ ಸಾಗುತ್ತಿದ್ದಾಗ ನನ್ನನ್ನು ನಿಲ್ಲಿಸಿದ ಶಾಹೀನ್,‘ನೀನು ನನ್ನ ರಾಣಿಯಾಗುವೆಯಾ’ ಎಂದು ಪ್ರಶ್ನಿಸಿದ್ದ. ನಾನು ತಕ್ಷಣ ನಕ್ಕು ‘ಯಾವಾಗ’ಎಂದು ಪ್ರಶ್ನಿಸಿದ್ದೆ. ಅದಕ್ಕೆ ಶಾಹೀನ್ ಕೂಡ ಮುಖದ ತುಂಬ ನಗುವನ್ನು ತುಂಬಿಕೊಂಡು,ಇಂದೇ ಆಗೋಣವೇ ಎಂದು ಕೇಳಿದ್ದ.

ಹಾಗೆ ನಮ್ಮ ಮೊದಲ ಭೆಟಿಯ ದಿನವೇ ನಾವು ಮದುವೆ ಮಾಡಿಕೊಂಡಿದ್ದೆವು. ಆ ದಿನದ ನೆನಪಿಗಾಗಿ ಮ್ಯೂಝಿಯಂನ ಪ್ರವೇಶ ಚೀಟಿಗಳು ಈಗಲೂ ನನ್ನ ಬಳಿಯಿವೆ. ನನ್ನ ಗಂಡ ಕೆಲಸವಿಲ್ಲದೆ ಮನೆಯಲ್ಲಿ ಕುಳಿತ ದಿನಗಳಲ್ಲಿ ನಾವು ಉಪವಾಸ ಕಳೆದದ್ದಿದೆ. ಅಂತಹ ಮಳೆಯ ದಿನಗಳಲ್ಲಿ ನಾವಿಬ್ಬರು ಎರಡು ಕಪ್ ಚಹಾ ಮತ್ತು ಬ್ರೆಡ್‌ನ ತುಣುಕಿನೊಂದಿಗೆ ಒಬ್ಬರನ್ನೊಬ್ಬರು ಆಧರಿಸಿದ್ದೆವು.

ಶಾಹೀನ್‌ಗೆ ಆಗಾಗ್ಗೆ ಚಹಾ ಗುಟುಕರಿಸುವುದು ಅಭ್ಯಾಸ. ಆತನಿಗೆ ಚಹಾವಿಲ್ಲದ ದಿನ ಬಾರದಂತೆ ನೋಡಿಕೊಳ್ಳಲು ನಾನು ರಹಸ್ಯವಾಗಿ ಪುಡಿಗಾಸನ್ನು ಉಳಿತಾಯ ಮಾಡುತ್ತಿರುತ್ತೇನೆ. ನಮ್ಮ ಬಳಿ ರಾಜ್ಯವಿಲ್ಲದಿರಬಹುದು ಅಥವಾ ರಾಜರು ಮತ್ತು ರಾಣಿಯರು ಹೊಂದಿದ್ದ ಸಂಪತ್ತು ಇಲ್ಲದಿರಬಹುದು. ಆದರೆ ನಾವು ನಮ್ಮದೇ ಸ್ವರ್ಗವನ್ನು ಸೃಷ್ಟಿಸಿಕೊಂಡಿದ್ದೇವೆ ಮತ್ತು ಈ ಸ್ವರ್ಗದಲಲಿ ಆಹಾರ ಮತ್ತು ಹಣಕ್ಕೆ ಯಾವುದೇ ಸ್ಥಾನವಿಲ್ಲ. ಅಲ್ಲಿ ಇರುವುದು ನಮ್ಮಿಬ್ಬರ ಪ್ರೇಮ ಮಾತ್ರ....

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)