varthabharthi

ಸಿನಿಮಾ

ಹಾಲಿವುಡ್ ನಿರ್ದೇಶಕನ ಚಿತ್ರದಲ್ಲಿ ನಟರಾಜ್

ವಾರ್ತಾ ಭಾರತಿ : 27 Oct, 2017

ವಿಭಿನ್ನ ಕಥಾವಸ್ತುವಿನ ‘ರಾಮಾರಾಮಾ ರೇ’ ಚಿತ್ರದ ಮೂಲಕ ಡಿ. ಸತ್ಯಪ್ರಕಾಶ್ ನಿರ್ದೇಶಕರಾಗಿ ಸ್ಯಾಂಡಲ್‌ವುಡ್ ಪ್ರವೇಶಿಸಿದ್ದರು. ಇದೇ ಚಿತ್ರದಲ್ಲಿ ಅವರು ನಟರಾಜ್ ಎಂಬ ಅಪ್ಪಟ ಪ್ರತಿಭಾವಂತ ನಟನನ್ನು ಕನ್ನಡಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಇದೀಗ ನಟರಾಜ್ ಜನಪ್ರಿಯತೆ ಹಾಲಿವುಡ್‌ವರೆಗೂ ತಲುಪಿದೆ. ಹೌದು. ನಟರಾಜ್‌ಗೆ ಹಾಲಿವುಡ್ ನಿರ್ದೇಶಕರೊಬ್ಬರು ತನ್ನ ಚಿತ್ರದಲ್ಲಿ ನಟಿಸುವಂತೆ ಆಫರ್ ನೀಡಿದ್ದಾರೆ.

ಇಂಟರ್‌ನೆಟ್‌ನ ಚಲನಚಿತ್ರ ವೀಕ್ಷಣಾ ವೆಬ್‌ಸೈಟ್ ನೆಟ್‌ಫ್ಲಿಕ್ಸ್‌ನಲ್ಲಿ ರಾಮಾ ರಾಮಾ ರೇ ಚಿತ್ರ ವೀಕ್ಷಿಸಿದ್ದ ಹಾಲಿವುಡ್ ನಿರ್ದೇಶಕ ಸ್ಯಾಂಡಿ ಸಾಯಿ ಅವರು ನಟರಾಜ್ ಅಭಿನಯವನ್ನು ತುಂಬಾನೇ ಮೆಚ್ಚಿಕೊಂಡಿದ್ದಾರಂತೆ. ಆ ಚಿತ್ರದಲ್ಲಿ ಗಲ್ಲಿಗೇರಿಸುವವನ ಪಾತ್ರದಲ್ಲಿ ನಟರಾಜ್ ಅಭಿನಯ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಮುಕ್ತಕಂಠದ ಪ್ರಶಂಸೆಗೆ ಪಾತ್ರವಾಗಿತ್ತು. ಮೂಲತಃ ಭಾರತೀಯರಾಗಿರುವ ಸ್ಯಾಂಡಿ ಸಾಯಿ ಕಳೆದ 14 ವರ್ಷಗಳಿಂದ ಅಮೆರಿಕದಲ್ಲಿದ್ದು, ತನ್ನದೇ ಆದ ಚಿತ್ರ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದಾರೆ. ತನ್ನ ಸಂಸ್ಥೆಯ ಬ್ಯಾನರ್‌ನಲ್ಲಿ ಕೆಲವು ಕಥಾಚಿತ್ರಗಳು ಹಾಗೂ ಸಾಕ್ಷಚಿತ್ರಗಳನ್ನು ನಿರ್ಮಿಸಿದ್ದಾರಂತೆ.

ತನ್ನ ಚಿತ್ರ ನಿರ್ಮಾಣ ಸಂಸ್ಥೆಯ ಮೂಲಕ ಕನ್ನಡ ಚಿತ್ರವೊಂದನ್ನು ನಿರ್ಮಿಸಲು ಸ್ಯಾಂಡಿ ಸಾಯಿ ಆಸಕ್ತರಾಗಿದ್ದಾರೆ. ಅಷ್ಟೇ ಅಲ್ಲ ಆ ಚಿತ್ರಕ್ಕೆ ತಾನೇ ನಿರ್ದೇಶನ ಮಾಡಲು ಇಚ್ಛಿಸಿದ್ದಾರೆ. ಡಿಸೆಂಬರ್‌ನಲ್ಲಿ ಸ್ಯಾಂಡಿ ಭಾರತಕ್ಕೆ ಬರಲಿದ್ದು, ಆ ಬಳಿಕ ತನ್ನ ಮಹತ್ವಾಕಾಂಕ್ಶೆಯ ಚಿತ್ರಕ್ಕೆ ಚಾಲನೆ ನೀಡಲಿದ್ದಾರಂತೆ.

 ಈ ಮಧ್ಯೆ ನಟರಾಜ್ ತನ್ನ ಮುಂದಿನ ಸ್ಯಾಂಡಲ್‌ವುಡ್ ಚಿತ್ರ ‘ಕಲ್ಲುಬೆಟ್ಟದ ದರೋಡೆಕೋರರು’ ಚಿತ್ರದ ಬಗ್ಗೆ ಭಾರೀ ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಅನುಶ್ ಶೆಟ್ಟಿ ಅವರ ಕಾದಂಬರಿಯನ್ನು ಆಧರಿಸಿದ ಈ ಚಿತ್ರಕ್ಕೆ ದೀಪಕ್ ಮಧುವನಳ್ಳಿ ನಿರ್ದೇಶಕರು.

  ‘ಕಲ್ಲುಬೆಟ್ಟದ ದರೋಡೆಕೋರರು’ ಚಿತ್ರದ ಶೇ.60ರಷ್ಟು ಪೂರ್ಣಗೊಂಡಿದ್ದು ಅಂತಿಮ ಶೆಡ್ಯೂಲ್ ಮುಂದಿನವಾರ ಆರಂಭಗೊಳ್ಳಲಿದೆ. ಆನಂತರ ತನ್ನ ಮೂರನೇ ಚಿತ್ರಕ್ಕೂ ಬಣ್ಣ ಹಚ್ಚಲು ನಟರಾಜ್ ತಯಾರಿ ನಡೆಸಲಿದ್ದಾರೆ. ರಾಮಾರಾಮಾ ರೇ ನಿರ್ದೇಶಕ ಸತ್ಯಪ್ರಕಾಶ್ ಆ ಚಿತ್ರಕ್ಕೆ ಸ್ಕ್ರಿಪ್ಟ್ ಹಾಗೂ ಸಂಭಾಷಣೆ ಬರೆಯಲಿದ್ದಾರೆ. ಆದರೆ ಈ ಚಿತ್ರವನ್ನು ರಾಮಾ ರಾಮಾ ರೇಯಲ್ಲಿ ನಟಿಸಿದ್ದ ಕಲಾವಿದರೊಬ್ಬರು ನಿರ್ದೇಶಿಸಲಿದ್ದಾರೆ ಎಂದು ನಟರಾಜ್ ತಿಳಿಸಿದ್ದಾರೆ. ಆದರೆ ಅವರ್ಯಾರೆಂಬುದನ್ನು ಮಾತ್ರ ಗುಟ್ಟಾಗಿಟ್ಟಿದ್ದಾರೆ.ಒಟ್ಟಿನಲ್ಲಿ ನಟರಾಜ್‌ಗೆ ಸ್ಯಾಂಡಲ್‌ವುಡ್‌ನಲ್ಲಿ ಅವಕಾಶಗಳ ಹೆಬ್ಬಾಗಿಲೇ ತೆರೆದಿರುವುದಂತೂ ನಿಜ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)