varthabharthi

ದಿಲ್ಲಿ ದರ್ಬಾರ್

ದಿಲ್ಲಿ ದರ್ಬಾರ್

ವಾರ್ತಾ ಭಾರತಿ : 29 Oct, 2017

ತಡೆ ನಿವಾರಣೆ
ತೃಣಮೂಲ ಕಾಂಗ್ರೆಸ್ ಪಕ್ಷದ ಉಚ್ಚಾಟಿತ ನಾಯಕ ಮುಕುಲ್ ರಾಯ್ ಅವರನ್ನು ಪಕ್ಷದ ತೆಕ್ಕೆಗೆ ಎಳೆದುಕೊಳ್ಳುವುದರಲ್ಲಿ ಖಂಡಿತವಾಗಿಯೂ ಲಾಭವಿದೆ ಎನ್ನುವುದು ಬಿಜೆಪಿಗೆ ಕೊನೆಗೂ ಮನವರಿಕೆಯಾದಂತಿದೆ. ಇಂದು (ಅಕ್ಟೋಬರ್ 29) ಮುಕುಲ್ ಬಿಜೆಪಿ ಸೇರ್ಪಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷಾಧ್ಯಕ್ಷ ಅಮಿತ್ ಶಾ ರಾಯ್ ಆಗಮಕ್ಕೆ ಹಸಿರು ನಿಶಾನೆ ತೋರಿದ್ದಾರೆ. ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿಯವರ ಬಲಗೈ ಬಂಟ ಎಂದೇ ಖ್ಯಾತರಾಗಿದ್ದ ರಾಯ್, ತೃಣಮೂಲದ ಕಣ ಕಣವನ್ನೂ ಅರಿತವರು. ಬೂತ್‌ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಬಲ್ಲ ಚಾಣಕ್ಯ. ತಾವು ಬಿಜೆಪಿ ಸೇರಿದ ತಕ್ಷಣ ಹಲವಾರು ಮಂದಿ ಟಿಎಂಸಿ ಕಾರ್ಯಕರ್ತರು ಬಿಜೆಪಿಗೆ ಸೇರುತ್ತಾರೆ ಎಂದು ರಾಯ್ ಪತ್ರಕರ್ತರ ಬಳಿ ಖಾಸಗಿಯಾಗಿ ಹೇಳುತ್ತಲೇ ಬಂದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಎರಡನೆ ಪ್ರಬಲ ಪಕ್ಷವಾಗಿರುವ ಬಿಜೆಪಿ, ಬಲವರ್ಧನೆಯ ಕಸರತ್ತು ನಡೆಸುತ್ತಿರುವ ಕಾಲಘಟ್ಟದಲ್ಲಿ, ಪಕ್ಷದ ನೆಲೆಯನ್ನು ಗಟ್ಟಿಗೊಳಿಸಿ, ಮಮತಾರನ್ನು ಎದುರಿಸಲು ರಾಯ್ ಸೇರ್ಪಡೆ ಬಲ ನೀಡಬಹುದು ಎನ್ನುವುದು ಬಿಜೆಪಿ ಲೆಕ್ಕಾಚಾರ.


ಮರುಬ್ರಾಂಡಿಂಗ್: ಇದು ಮೋದಿ ಶೈಲಿ
ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಶ್ಮ್ಮಾ ಸ್ವರಾಜ್, ಎನ್‌ಡಿಎ ಸರಕಾರದ ಕಾರ್ಯಶೈಲಿಗಿಂತ ತುಸು ಭಿನ್ನವಾಗಿ ತನ್ನ ಕಾರ್ಯವನ್ನು ಸದ್ದುಗದ್ದಲವಿಲ್ಲದೆ ನಿರ್ವಹಿಸುತ್ತಿರುವಂತೆ ಕಾಣುತ್ತಿದೆ. ವಿದೇಶಾಂಗ ನೀತಿ ವಿಚಾರದಲ್ಲಿ ಪ್ರಧಾನಿ ಮೋದಿಯೇ ಮುನ್ನೆಲೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಸುಶ್ಮ್ಮಾ ಕೂಡಾ ರಿಪ್ಯಾಕೇಜಿಂಗ್ ತಂಡಕ್ಕೆ ಧುಮುಕಿದ್ದಾರೆ. ‘‘ದೀಪಾವಳಿಯ ಶುಭ ಸಂದರ್ಭದಲ್ಲಿ ಇಂದಿನ ವರೆಗೆ ಬಾಕಿ ಇರುವ ಎಲ್ಲ ವೈದ್ಯಕೀಯ ವೀಸಾ ಪ್ರಕರಣಗಳಲ್ಲಿ ಭಾರತ ವೀಸಾ ಮಂಜೂರು ಮಾಡಲಿದೆ’’ ಎಂದು ಅವರು ಇತ್ತೀಚೆಗೆ ಟ್ವೀಟ್ ಮಾಡಿದ್ದರು. ಟ್ವಿಟರ್ ಹ್ಯಾಂಡಲ್ ಇದಕ್ಕಾಗಿ ‘ಇಂಡಿಯಾ ಇನ್ ಪಾಕಿಸ್ತಾನ್’ ಹೆಸರು ನಮೂದಿಸಲಾಗಿದೆ. ಮರುದಿನವೇ ಅವರು ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನ್‌ಗೆ ಸೂಚನೆ ನೀಡಿ, ರೋಗಿಗಳಿಗೆ ವೀಸಾ ನೀಡುವಂತೆ ಸೂಚಿಸಿದ್ದಾರೆ. ಆದರೆ ತಮಾಷೆಯ ವಿಷಯವೆಂದರೆ, ಇಂಥದ್ದೇ ಟ್ವೀಟನ್ನು ಸುಶ್ಮ್ಮಾ ತಿಂಗಳ ಹಿಂದೆ ಪ್ರಕಟಿಸಿದ್ದರು. ‘‘ಭಾರತದ ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ, ನಮ್ಮಲ್ಲಿ ಬಾಕಿ ಇರುವ ಎಲ್ಲ ಅರ್ಹ ವೈದ್ಯಕೀಯ ವೀಸಾ ಪ್ರಕರಣಗಳಲ್ಲಿ ವೀಸಾ ಮಂಜೂರು ಮಾಡುತ್ತೇವೆ’’ ಎಂದು. ಸರಕಾರದ ಮರುಶೋಧನೆ ತರಾತುರಿ ತನ್ನ ಸಚಿವರ ಆಯ್ದ ಜಾಣಮರೆವಿಗೆ ಕಾರಣವಾಗುತ್ತಿದೆಯೇ? ಅಥವಾ ಇದು ಸರಕಾರಿ ನೀತಿಯ ಪಾರ್ಶ್ವವಾಯುವಿನ ಸ್ಪಷ್ಟ ಪ್ರಕರಣವೇ? ಏನೇ ಆದರೂ ವಿದೇಶಾಂಗ ಸಚಿವೆ ಹೊಸ ಶಬ್ದಗಳಿಗಾಗಿ ತಡಕಾಡಬೇಕಾಗಿದೆ.


ಹೊಸ ಹೆಸರು
ರಾಹುಲ್‌ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಲು ವೇದಿಕೆ ಸಜ್ಜಾಗಿದೆ. ಅವರು ತಮ್ಮ ಟ್ವಿಟರ್ ಹ್ಯಾಂಡಲ್ ಹೆಸರು ಬದಲಾಯಿಸುವ ಚಿಂತನೆ ನಡೆಸಿದ್ದು, ಸಾಮಾಜಿಕ ಜಾಲತಾಣ ಸಲಹೆಗಾರರಾದ ದಿವ್ಯಸ್ಪಂದನ ಅವರ ಸಲಹೆಯಂತೆ ಹೆಸರನ್ನು ನೇರ ಹಾಗೂ ಸರಳವಾಗಿಸುವ ಚಿಂತನೆಯಲ್ಲಿದ್ದಾರೆ. ಪ್ರಸ್ತುತ ರಾಹುಲ್ ‘ಆಫೀಸ್ ಆಫ್ ಆರ್‌ಜಿ’ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಹುಶಃ ಅವರು ಟ್ವಿಟರ್‌ನಿಂದ ಈ ಹೆಸರು ಪಡೆಯಲು ಸಾಧ್ಯವಾದರೆ ರಾಹುಲ್‌ಗಾಂಧಿ ಹೆಸರು ಆರಿಸಿಕೊಳ್ಳುವ ಸಾಧ್ಯತೆ ಇದೆ. ರಾಹುಲ್‌ಗಾಂಧಿ ಹಳೆಯ ರಷ್ಯನ್ ಬ್ಲಾಕ್ ದೇಶಗಳಿಂದ ದೊಡ್ಡ ಸಂಖ್ಯೆಯ ಅನುಯಾಯಿಗಳನ್ನು ಹೊಂದಿದ್ದಾರೆ ಎಂದು ಬಿಜೆಪಿ ಇತ್ತೀಚೆಗೆ ವಾಗ್ದಾಳಿ ಮಾಡಿತ್ತು. ಆದರೆ ನರೇಂದ್ರ ಮೋದಿಯವರ ಬಹುತೇಕ ಟ್ವಿಟರ್ ಅನುಯಾಯಿಗಳು ನಕಲಿ ಖಾತೆಗಳು ಎಂದು ಕಾಂಗ್ರೆಸ್ ಪ್ರತಿದಾಳಿ ನಡೆಸಿದೆ. ಆದರೆ ತಮ್ಮ ಸ್ವಂತ ಹೆಸರಿನಲ್ಲಿ ಟ್ವಿಟರ್ ಹ್ಯಾಂಡಲ್ ಹೊಂದುವುದು ಸಾಧ್ಯವಾದರೆ, ಇನ್ನಷ್ಟು ನೇರ ದಾಳಿ ಮಾಡಬಹುದು ಎಂಬ ಇಂಗಿತವನ್ನು ರಾಹುಲ್ ಇತ್ತೀಚೆಗೆ ವ್ಯಕ್ತಪಡಿಸಿದ್ದರು. ಇದು ಮೋದಿ ವಿರುದ್ಧದ ಸಮರ. ರಾಹುಲ್ 40 ಲಕ್ಷ ಅನುಯಾಯಿಗಳನ್ನು ಹೊಂದಿದ್ದರೆ, ಮೋದಿಯ ಅನುಯಾಯಿಗಳ ಸಂಖ್ಯೆ 36 ದಶಲಕ್ಷ.


ಪಾಸ್ವಾನ್ ಪ್ರಮಾದ
ಗ್ರಾಹಕ ವ್ಯವಹಾರಗಳ ಸಚಿವ ರಾಮ್‌ವಿಲಾಸ್ ಪಾಸ್ವಾನ್ ಇತ್ತೀಚೆಗೆ, ಗ್ರಾಹಕ ಸಂರಕ್ಷಣೆ ಕುರಿತ ಎರಡು ದಿನಗಳ ಜಾಗತಿಕ ಸಮಾವೇಶದಲ್ಲಿ 24 ಏಷ್ಯನ್ ದೇಶಗಳ ಪ್ರತಿನಿಧಿಗಳು ಭಾಗವಹಿಸುತ್ತಾರೆ ಎಂದು ಘೋಷಿಸಿದ್ದರು. ಇದು ನಡೆದದ್ದು ಕಳೆದ ವಾರ. ಆದರೆ ಯಾವೆಲ್ಲ ದೇಶಗಳ ಪ್ರತಿನಿಧಿಗಳು ಭಾಗವಹಿಸುತ್ತಾರೆ ಎಂದು ಘೋಷಿಸುವ ವೇಳೆ ಪಾಸ್ವಾನ್ ಉತ್ತರ ಕೊರಿಯಾ ಹೆಸರನ್ನೂ ಘೋಷಿಸಿ ಅಚ್ಚರಿ ಮೂಡಿಸಿದರು. ಗೋಷ್ಠಿ ಮುಗಿಯುವ ವೇಳೆಗೆ ಒಬ್ಬರು ಕಾರ್ಯದರ್ಶಿಯನ್ನು ಕುರಿತು ‘‘ಉತ್ತರ ಕೊರಿಯಾಗೆ ಆಹ್ವಾನ ನೀಡಲಾಗಿದೆಯೇ’’ ಎಂದು ಪ್ರಶ್ನಿಸಿದರು. ಬಳಿಕ ಸಚಿವರು ‘‘ಉತ್ತರ ಕೊರಿಯಾ ಹಾಗೂ ಪಾಕಿಸ್ತಾನಕ್ಕೆ ಆಹ್ವಾನ ನೀಡಿಲ್ಲ’’ ಎಂದು ಸ್ಪಷ್ಟಪಡಿಸಿದರು. ಇದರಿಂದ ಸಚಿವಾಲಯದ ಕೆಲವರ ಮುಖ ಕೆಂಪೇರಿತು. ಆದರೆ ಈ ವಿಷಯ ಅಲ್ಲಿಗೇ ತಣ್ಣಗಾಯಿತು.


ಕಾಂಗ್ರೆಸ್ ಭವಿಷ್ಯದ ಪೀಳಿಗೆ?
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಪರ ಸ್ಟಾರ್ ಪ್ರಚಾರಕರು ಯಾರ್ಯಾರು ಎಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪಟ್ಟಿ ಬಹಿರಂಗವಾಗಿದೆ. ಬಹುಶಃ ಇದು ಕಾಂಗ್ರೆಸ್ ತಂತ್ರಗಾರಿಕೆಯಲ್ಲಿ ಆಗಿರುವ ಬದಲಾವಣೆಯನ್ನು ಸೂಚಿಸಿದೆ. ರಾಹುಲ್‌ಗಾಂಧಿ ಪಕ್ಷಾಧ್ಯಕ್ಷರಾಗುವುದನ್ನು ದೃಷ್ಟಿಯಲ್ಲಿಟ್ಟುಕೊಂಡು ಸಿದ್ಧಪಡಿಸಿದಂತಿದೆ. ಸ್ಟಾರ್ ಪ್ರಚಾರಕರಲ್ಲಿ ಜ್ಯೋತಿರಾದಿತ್ಯ ಸಿಂಧ್ಯಾ, ಸಚಿನ್ ಪೈಲಟ್, ಗೌರವ್ ಗೊಗೋಯ್, ಸುಷ್ಮಿತಾ ದೇವ್ ಹಾಗೂ ಪಕ್ಷದ ಹಲವು ಯುವಮುಖಂಡರು ಸೇರಿದ್ದಾರೆ. 83 ವರ್ಷದ ವೀರಭದ್ರಸಿಂಗ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ರಾಹುಲ್‌ಗಾಂಧಿ ಪ್ರಕಟಿಸಿದ್ದು, ಸ್ಟಾರ್ ಪ್ರಚಾರಕರ ಪಟ್ಟಿಯನ್ನು ನೊಡಿದರೆ, ಕನಿಷ್ಠ ಸಿಎಂ ಹುದ್ದೆಗಾದರೂ ಯುವಕರ ಹೆಸರು ಪರಿಗಣನೆಯಲ್ಲಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಪ್ರಚಾರತಂಡದಲ್ಲಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಹರ್ಯಾಣ ಹಾಗೂ ಉತ್ತರಾಖಂಡದ ಮಾಜಿ ಸಿಎಂಗಳಾದ ಭೂಪೀಂದರ್ ಸಿಂಗ್ ಹೂಡಾ ಮತ್ತು ಹರ್ಷ ರಾವತ್ ಅವರಂಥ ಸಾಕಷ್ಟು ಹಳೆ ಹುಲಿಗಳೂ ಇದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ದುರ್ಬಲವಾಗಿದೆ ಎಂದು ಹೇಳಲಾಗುತ್ತಿದೆ. ಬಿಜೆಪಿ ವಿರುದ್ಧದ ಹೋರಾಟಕ್ಕೆ ಹೆಚ್ಚು ಯುವಶಕ್ತಿಯ ಅಗತ್ಯವಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)