varthabharthi

ನಿಮ್ಮ ಅಂಕಣ

ಭಡ್ತಿ ಮೀಸಲಾತಿಯೆಂಬುದು ಸಾಮಾಜಿಕ ವರವೋ ಅಥವಾ ಶಾಪವೋ?

ವಾರ್ತಾ ಭಾರತಿ : 29 Oct, 2017
ಡಾ. ಕೆ. ಕೃಷ್ಣಪ್ಪ, ಬೆಂಗಳೂರು

ಭಾಗ-2

ಸಮಾಜದಲ್ಲಿ ಸಫಾಯಿ ಕರ್ಮಚಾರಿಯಂತಹ ಉದ್ಯೋಗಗಳನ್ನು ಮಾತ್ರ ನೂರಕ್ಕೆ ನೂರರಷ್ಟು ಪರಿಶಿಷ್ಟರೇ ನಿರ್ವಹಿಸಬೇಕೆಂಬ ಮನಸ್ಥಿತಿಯಲ್ಲಿರುವವರು ಕನಿಷ್ಠ ‘ಸಿ’ ಮತ್ತು ‘ಡಿ’ ಹುದ್ದೆಗಳಿಂದ ನಂತರದ ಹುದ್ದೆಗಳಿಗೆ ಭಡ್ತಿ ಹೊಂದಿರುವುದನ್ನು ಸಹಿಸುತ್ತಿಲ್ಲವೆಂಬುದು ಅತ್ಯಂತ ನೋವಿನ ಸಂಗತಿಯಾಗಿದೆ. ಈ ಬಗ್ಗೆ ಅತೀ ಹಿಂದುಳಿದಿರುವ ತಳಸಮುದಾಯಗಳಲ್ಲಿಯೂ ಅಸಹನೆಯನ್ನು ಬೆಳೆಸುತ್ತಿರುವುದು ಕಂಡು ಬರುತ್ತಿದೆ. ಹಿಂದುಳಿದ ಸಮುದಾಯಗಳು ತಮ್ಮ ಹಕ್ಕು ಬಾಧ್ಯತೆಗಳಿಗೆ ಹೋರಾಡಲಾಗದ ಅಸಹಾಯಕತನವನ್ನು ಮುಗ್ಧತೆಯನ್ನು ದುರುಪಯೋಗಪಡಿಸಿಕೊಂಡು ಅನುಕೂಲಸ್ಥ ಮಧ್ಯಮ ಜಾತಿಗಳು ಅವರನ್ನು ಭಡ್ತಿ ಮೀಸಲಾತಿ ವಿಚಾರ ಮಾತ್ರ ಅಲ್ಲದೆ ರಾಜಕೀಯವಾಗಿಯೂ ದಿಕ್ಕು ತಪ್ಪಿಸುತ್ತಿವೆ.

ಹಿಂದುಳಿದ ವರ್ಗಗಳಿಗೆ ಸಲ್ಲಬೇಕಾದ ನೈಜವಾದ ಅವಕಾಶಗಳು ಕೈತಪ್ಪಿದ್ದರೂ ತಮ್ಮ ಸಾಂವಿಧಾನಿಕ ಹಕ್ಕುಗಳಿಗಾಗಿ ಸಂಘಟಿತ ಹೋರಾಟಕ್ಕೆ ಅಣಿಗೊಳ್ಳದೆ ತಮ್ಮ ಹಿತಶತ್ರುಗಳ ಜೊತೆಗೂಡಿ ಪರಿಶಿಷ್ಟರ ಹಕ್ಕುಗಳನ್ನು ಮೊಟಕುಗೊಳಿಸಲು ಸಹಕರಿಸುತ್ತಿರುವುದು ವರ್ತಮಾನದ ವ್ಯಂಗ್ಯವಾಗಿದೆ. ಇಂದಿಗೂ ಮೇಲ್ಜಾತಿಯ ಸಮುದಾಯಗಳು ಶೇಕಡಾವಾರು ‘ಎ’ ದರ್ಜೆಯಲ್ಲಿ 76.8, ‘ಬಿ’ ದರ್ಜೆಯಲ್ಲಿ 71.8, ‘ಸಿ’ ದರ್ಜೆಯಲ್ಲಿ ಶೇ.60, ‘ಡಿ’ ದರ್ಜೆಯಲ್ಲಿ ಶೇ.53.2 ಪ್ರಮಾಣದ ಹುದ್ದೆಗಳನ್ನು ಹೊಂದಿವೆ. ಉದ್ಯೋಗ ಮತ್ತು ಭಡ್ತಿಯಲ್ಲಿ ಪ್ರಾತಿನಿಧ್ಯ ಹೊಂದುವುದೆಂದರೆ ಕೇವಲ ಕೆಲವು ವ್ಯಕ್ತಿಗಳಿಗೆ ಸ್ಥಾನ ನೀಡುವ ಕ್ರಿಯೆಯಲ್ಲ. ಇದರಲ್ಲಿ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿದು ರಾಷ್ಟ್ರದ ಹಿತವನ್ನು ಅಂತರ್ಗತಗೊಳಿಸಿದೆ.

ಪ್ರಸ್ತುತದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಭಡ್ತಿ ಮೀಸಲಾತಿಗೆ ವಿರೋಧವೊಡ್ಡುತ್ತಿರುವ ‘ಅಹಿಂಸಾ’ (ಅಲ್ಪಸಂಖ್ಯಾತ, ಹಿಂದುಳಿದ, ಸಾಮಾನ್ಯವರ್ಗದ ನೌಕರರ ಒಕ್ಕೂಟ) ಎಂಬ ಸಂಘಟನೆಯ ಹಿಂದಿರುವ ವಾಸ್ತವ ಇದು. ಹಿಂದುಳಿದ ವರ್ಗಗಳಿಗೆ ಸರಕಾರಿ ಉದ್ಯೋಗಗಳಲ್ಲಿ ದೊರೆತಿರುವ ಪ್ರಮಾಣ ಪರಿಶಿಷ್ಟರಿಗಿಂತಲೂ ಕಡಿಮೆ. ಅದು ಕೇವಲ ಅಂದಾಜು ಶೇ.6 ದೊರೆಯಬೇಕಾಗಿದ ಪ್ರಮಾಣ ಶೇ.27. ಇನ್ನು ಭಡ್ತಿಯಲ್ಲಿ ಈ ವರ್ಗಗಳಿಗೆ ಅವಕಾಶವಿಲ್ಲದಿರುವುದು ಕೊರತೆಯಾಗಿಯೇ ಉಳಿದಿದೆ. ಅವರ ಗಮನ ಇತ್ತ ಹರಿಯದಿರುವುದೇ ಶೋಚನೀಯ. ವಾಸ್ತವವಾಗಿ ರಾಜಕೀಯದಲ್ಲಿಯೂ ತಮ್ಮ ಪಾಲನ್ನು ಗಳಿಸುವಲ್ಲಿ ಹಿಂದುಳಿದವರು ವಿಫಲರಾಗಿದ್ದಾರೆ.

ಸ್ಥಳೀಯ ಸರಕಾರಗಳಲ್ಲಿ ಮಾತ್ರ ಅವರು ರಾಜಕೀಯ ಪ್ರಾತಿನಿಧ್ಯವನ್ನು ವಹಿಸಲು ಅವಕಾಶವಾಗಿದೆ. ಇಂಥ ಸನ್ನಿವೇಶದಲ್ಲಿ ಹಿಂದುಳಿದ ವರ್ಗಗಳು ಸಮಾನತೆಯ ನೆಪದಲ್ಲಿ ಸಾಮಾನ್ಯ ವರ್ಗಗಳ ಜೊತೆಗೂಡಿ ಪರಿಶಿಷ್ಟ ಜಾತಿ/ ವರ್ಗಗಳ ಹಕ್ಕುಗಳ ವಿರುದ್ಧ ಹೋರಾಟಕ್ಕೆ ಅಣಿಯಾಗಿರುವುದು ಆತ್ಮಹತ್ಯೆ ಮಾಡುಕೊಳ್ಳುವಂತಿದೆ. ಈ ಮಾತು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳಿಗೂ ಅನ್ವಯಿಸುತ್ತದೆ ಏಕೆಂದರೆ ಈ ವರ್ಗಗಳಿಗೂ ಸಾಂವಿಧಾನಿಕವಾದ ರಕ್ಷಣೆಯನ್ನು ನೀಡಲಾಗಿದೆ. ಪ್ರಮುಖವಾಗಿ ಮುಸ್ಲಿಂ ಸುಮುದಾಯವು ನಮ್ಮಲ್ಲಿ ಅಸುರಕ್ಷಿತ ಭಾವದಲ್ಲಿ ಹೊಯ್ದಿಡುತ್ತಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ ಇವರ ಪಾತ್ರ ನಗಣ್ಯ. ಇದು ಧಾರ್ಮಿಕ ಕಾರಣದಿಂದಲೇ ಪ್ರಚಾರದಲ್ಲಿರುವ ಸಮುದಾಯವಾಗಿದೆ.

ಇವರ ಜೀವನ ಮಟ್ಟ ‘ಸಾಚಾರ್ ಸಮಿತಿ’ ವರದಿ ಅನ್ವಯ ಪರಿಶಿಷ್ಟರಿಗಿಂತಲೂ ತಳಮಟ್ಟದಲ್ಲಿರುವುದನ್ನು ಅಂಕಿ ಅಂಶಗಳ ಸಮೇತ ವಿವರಿಸಲಾಗಿದೆ. ಶಿಕ್ಷಣ ಉದ್ಯೋಗ ಮೊದಲಾದ ಕ್ಷೇತ್ರಗಳಲ್ಲಿ ಇವರ ಪ್ರಮಾಣ ಅತ್ಯಲ್ಪವಾಗಿದೆ. ಇವೆಲ್ಲ ನಮ್ಮ ಸಮಾಜಕ್ಕೆ ಅರ್ಥವಾಗದ ವಿಚಾರಗಳಾಗಿ ಉಳಿದಿಲ್ಲ. ಜಾತಿ, ಮತ, ಧರ್ಮಗಳ ವಿಷ ವರ್ತುಲದಲ್ಲಿ ಸಿಲುಕಿ ನೆರಳುತ್ತಿರುವ ಸಮುದಾಯಗಳಿಗೆ ವಿಮೋಚನೆಯನ್ನು ಕಲ್ಪಿಸುವ ಬದಲಾಗಿ ಯತಾ ಸ್ಥಿತಿಯ ಮುಂದುವರಿಕೆಗಾಗಿ ಹಂಬಲಿಸುತ್ತಿರುವುದು ನಮ್ಮ ಸಮಾಜದ ವಿಪರ್ಯಾಸ.

ಪರಿಶಿಷ್ಟ ಜಾತಿ/ ವರ್ಗಗಳು ಸಾಮಾನ್ಯ ವರ್ಗ ಅಥವಾ ಇತರ ವರ್ಗಗಳಿಗಾಗಿ ನಿರ್ದಿಷ್ಟ ಪಡಿಸಿರುವ ಹುದ್ದೆಗಳಿಗೆ ನೇಮಕಾತಿ ಹೊಂದುವುದಾಗಲಿ ಇಲ್ಲವೇ ಭಡ್ತಿ ಹೊಂದುವುದಾಗಲಿ ಅಸಂಭವ. ನ್ಯಾಯ ಸಮ್ಮತವಾಗಿ ತಮಗೆ ದಕ್ಕಬೇಕಾದ ಪ್ರಮಾಣವೇ ಅವರಿಗೆ ದಕ್ಕಿಲ್ಲವೆಂದ ಮೇಲೆ ಇತರರ ಹುದ್ದೆಗಳನ್ನು ಕಸಿಯುತ್ತಿದ್ದಾರೆ ಎಂಬ ಆರೋಪವೇ ಅಪ್ರಸ್ತುತ. ಇಂಥ ಪ್ರಸಂಗದಲ್ಲಿ ಈ ವರ್ಗಗಳ ಮೇಲೆ ‘ಅಹಿಂಸಾ’ ಸಂಘಟನೆ ಹೆಸರಿನಲ್ಲಿ ಪ್ರತಿಭಟಿಸುತ್ತಿರುವುದು ಒಂದು ರೀತಿಯ ಪ್ರತಿಗಾಮಿತನವಾಗಿದೆ. ಈ ರೀತಿಯ ಪ್ರತಿರೋಧಗಳಿಂದ ಸಮಾಜದಲ್ಲಿ ವಿನಾಕಾರಣ ಅಪಾರ್ಥ, ಅಸಹನೆ, ಅಂಧಾಭಿಮಾನಗಳನ್ನು ಪ್ರಚೋಧಿಸಿ ಮನುಷ್ಯ ಸಂಬಂಧಗಳನ್ನೇ ಕದಡುವ ಸಂಭವ ಹೆಚ್ಚಾಗಿದೆ. ಇದರಿಂದ ಸ್ವಾತಂತ್ರ್ಯ, ಸಮಾನತೆ, ಬ್ರಾತೃತ್ವಗಳೆಂಬ ಸಾಂವಿಧಾನದ ಆಶಯಗಳಿಗೆ ನೀಡಿದ ಕೊಡಲಿ ಪೆಟ್ಟಾಗಿ ಪರಿಣಮಿಸುತ್ತದೆ.

ಸಂವಿಧಾನಿಕವಾದ ಹಕ್ಕುಗಳನ್ನು ಅಪವ್ಯಾಖ್ಯಾನಗೊಳಿಸಿ ಅದನ್ನು ವಿರೂಪಗೊಳಿಸುವ ತಂತ್ರಗಳು ದಮನಿತ ವರ್ಗಗಳ ಪಾಲಿಗೆ ಮಾರಣಾಂತಿಕವಾಗಿದೆ. ಸ್ವಾತಂತ್ರ್ಯಾನಂತರದ ಎಪ್ಪತ್ತು ವರ್ಷಗಳಲ್ಲಿ ಹಲವು ದಶಕಗಳ ಕಾಲ ಪರಿಶಿಷ್ಟ ಜಾತಿ/ ವರ್ಗಗಳ ಅಭ್ಯರ್ಥಿಗಳು ಲಭ್ಯವಿಲ್ಲದೆ ಸಾಮಾನ್ಯ ವರ್ಗದ ಸಮುದಾಯಗಳೇ ಎಲ್ಲಾ ಸ್ಥಾನಮಾನಗಳನ್ನು ಅನುಭವಿಸಿರುವುದು ನಮ್ಮ ತಿಳಿವಳಿಕೆಗೇಕೆ ಬರುತ್ತಿಲ್ಲ. ಶತಮಾನಗಳಿಂದಲೂ ಮುಖ್ಯವಾಹಿನಿಗೂ ಸೇರಲಾಗದೆ ಬದುಕಿದ ವರ್ಗಗಳಿಗೆ ಅರ್ಹತೆಯ ಮೇಲೆ ಸಂವಿಧಾನ ದತ್ತವಾದ ಅವಕಾಶಗಳನ್ನು ಒದಗಿಸಿಕೊಡುವುದೇ ಒಂದು ಸಮಾಜಕ್ಕೆ ಸಲ್ಲುವ ಗೌರವವಾಗುತ್ತದೆ. ಆಧುನಿಕವಾಗಿ ಸರಕಾರಗಳಲ್ಲೂ ಖಾಸಗಿತನದ ಸಹಭಾಗಿತ್ವ ಏರ್ಪಟ್ಟು ಸರಕಾರಿ ಹುದ್ದೆಗಳು ಕ್ಷೀಣಿಸುತ್ತಿವೆ. ಭಡ್ತಿ ಹೊಂದುವ ಹುದ್ದೆಗಳನ್ನು ಯಾರಿಗೂ ನಿಯಮಬಾಹಿರವಾಗಿ ನೀಡಲು ಸಾಧ್ಯವಾಗದು ಅದಕ್ಕೆ ಸಂವಿಧಾನದ ರಕ್ಷಣೆಯಿದೆ.

ನಿಯಮಾನುಸಾರ ಭಡ್ತಿ ಹೊಂದುವ ಪರಿಶಿಷ್ಟ ಜಾತಿ/ ವರ್ಗಗಳ ಬಗ್ಗೆ ಮಾತ್ಸರ್ಯ ಮನೋಭಾವವನ್ನು ತೊರೆದು ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಸಾಮರಸ್ಯವನ್ನು ಮೂಡಿಸದಿದ್ದರೆ ಪ್ರಜಾತಂತ್ರಕ್ಕೇ ಕಳಂಕವಾಗುತ್ತದೆ. ಮಾನವ ಹಕ್ಕುಗಳನ್ನೇ ಹಂಗಿಸುವ ಪ್ರವೃತ್ತಿಯನ್ನು ನೌಕರ/ ಅಧಿಕಾರಿ ವರ್ಗ ತ್ಯಜಿಸಬೇಕು. ಇದು ಕೇವಲ ಸರಕಾರಿ ನೌಕರರು ಅಥವಾ ಅಧಿಕಾರಿಗಳ ವಿಷಯವಷ್ಟೇ ಆಗಿರದೆ ಒಟ್ಟು ಸಮಾಜ ಮತ್ತು ರಾಷ್ಟ್ರದ ಹಿತಾಸಕ್ತಿಗಳು ಅಡಗಿದೆ. ನಮಗೆ ನಿರ್ದಿಷ್ಟಪಡಿಸಿಕೊಂಡ ಯಾವುದೋ ಒಂದು ದೃಷ್ಟಿಯಲ್ಲಿ ಯೋಚಿಸುವುದನ್ನು ಬಿಟ್ಟು ಒಟ್ಟು ಸಾಮಾಜಿಕ ಹಿತಾಸಕ್ತಿಯನ್ನು ಗಮನಿಸಬೇಕಾಗುತ್ತದೆ. ಅದರಲ್ಲೂ ವಿದ್ಯಾವಂತ ನೌಕರ ಬಂಧುಗಳು ಸಮಾಜಕ್ಕೆ ಮಾರ್ಗದರ್ಶಕ ಸ್ಥಾನದಲ್ಲಿ ನಿಂತು ಯೋಚಿಸಬೇಕಾದ ಸಂದರ್ಭ ಇದಾಗಿದೆ.

ಇದರಲ್ಲಿ ಯಾರೊಬ್ಬರ ಸೋಲು-ಗೆಲುವುಗಳು ಅಡಗಿರುವುದಿಲ್ಲ. ನಿತ್ಯ ನ್ಯಾಯಾಲಯಗಳಲ್ಲಿ ಬದುಕು- ಬವಣೆಗಳನ್ನು ಸವೆಸಲಾಗದು. ಸಂವಿಧಾನವನ್ನು ಗೌರವಿಸುತ್ತಾ ನಮ್ಮನ್ನು ನಾವು ಗೌರವಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಅಹಿಂಸಾ ಸಂಘಟನೆ ತನ್ನ ನಿಲುವನ್ನು ಮತ್ತೊಮ್ಮೆ ಪರಾಮರ್ಶೆಗೊಳಪಡಿಸುವುದು ಸೂಕ್ತ. ಪರಿಶಿಷ್ಟರ ಭಡ್ತಿ ವಿಚಾರಕ್ಕೆ ಒಡ್ಡಿರುವ ಪ್ರತಿರೋಧವನ್ನು ಉಪಶಮನಗೊಳಿಸದಿದ್ದಲ್ಲಿ ಕೇವಲ ಪರಿಶಿಷ್ಟ ಜಾತಿ/ ವರ್ಗಗಳು ಮಾತ್ರವಲ್ಲ, ಹಿಂದುಳಿದ ವರ್ಗಗಳು ಮತ್ತು ಮತೀಯ ಅಲ್ಪಸಂಖ್ಯಾತರಿಗೂ ಅಪಚಾರವೆಸಗಿದಂತಾಗುವುದು. ಇಷ್ಟಕ್ಕೂ ಮೀಸಲಾತಿ ಎಂಬುದು ಅನುಕಂಪದ ಆಧಾರಿತ ಭಿಕ್ಷೆಯಲ್ಲ.

ಸಮಾನ ಹಕ್ಕುಗಳಿಗಾಗಿ ನೀಡಿರುವ ಪ್ರಾತಿನಿಧ್ಯ ಎಂಬುದನ್ನೇ ನಮ್ಮ ಸಮಾಜ ಮರೆತಂತಿದೆ. ನ್ಯಾಯಸಮ್ಮತವಾಗಿ ನೀಡಬೇಕಾದ ಹಕ್ಕು ಆಗಿದೆ. ಅಂತೆಯೇ ಮುಂಭಡ್ತಿಯು ಅದರ ಭಾಗವಾಗಿದೆ. ಈ ಬಗ್ಗೆ ಸಾಮಾಜಿಕ ಅರಿವನ್ನು ಬೆಳಸುವ ಮೂಲಕ ನಾಗರಿಕ ಸಮಾಜ ಎಲ್ಲರನ್ನು ಒಟ್ಟಾಗಿ ಮುನ್ನಡೆಸಬೇಕು. ಆಗ ಮಾತ್ರ ಸಂವಿಧಾನದ ಆಶಯಗಳಿಗೆ ಬೆಲೆ ಬರುತ್ತದೆ. ಈ ಬಗ್ಗೆ ಸರಕಾರಗಳು ತಮ್ಮ ಶಾಸನಬದ್ಧ ಹೊಣೆಗಾರಿಕೆಯನ್ನರಿತು ಕಾನೂನಾತ್ಮಕ ತೊಡಕುಗಳನ್ನು ಪರಿಹರಿಸಿ ಸಮಾಜದಲ್ಲಿ ತಲೆದೋರುವ ಸಂದಿಗ್ದಗಳಿಗೆ ಪರಿಹಾರವನ್ನು ನೀಡಬೇಕು. ಅದೇ ನೈಜ ಪ್ರಜಾಪ್ರಭುತ್ವದ ಪ್ರಯೋಗ ಶಾಲೆಯೆಂಬುದನ್ನು ನಾವೆಲ್ಲ ಅರ್ಥ ಮಾಡಿಕೊಳ್ಳಬೇಕು. ಇಲ್ಲವಾ ದಲ್ಲಿ ಸಂವಿಧಾನ ಸೂಚಿಸುವ ಪರಿಹಾರಗಳು ಕಾನೂನುಗಳನ್ನು ಅಪವ್ಯಾಖ್ಯಾನಗೊಳಿಸುವ ಮೂಲಕ ಸಮಾಜಕ್ಕೆ ಶಾಪವಾಗಿ ಪರಿಣಮಿಸುವುದರಲ್ಲಿ ಅನುಮಾನವೇ ಇಲ್ಲವಾಗುತ್ತವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)