varthabharthi

ನೇಸರ ನೋಡು

ಸುವರ್ಣ ಸಂಭ್ರಮದ ‘ಸಪ್ನ...’

ವಾರ್ತಾ ಭಾರತಿ : 29 Oct, 2017
ಜಿ.ಎನ್.ರಂಗನಾಥ್ ರಾವ್

ಸಣ್ಣದೊಂದು ಮಳಿಗೆಯಾಗಿ ಐವತ್ತು ವರ್ಷಗಳ ಹಿಂದೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ದಾಂಗುಡಿಯಿಟ್ಟ ಸಪ್ನದ ಬೇರುಗಳು ಈಗ ರಾಜ್ಯದ ದಶ ದಿಕ್ಕುಗಳಿಗೂ ಚಾಚಿಕೊಳ್ಳುತ್ತಿರುವುದಷ್ಟೇ ಅಲ್ಲದೆ ನೆರೆಯ ತಮಿಳುನಾಡಿಗೂ ಹಬ್ಬಿರುವುದು ಕನ್ನಡ ಪುಸ್ತಕೋದ್ಯಮದಲ್ಲೊಂದು ವಿಸ್ಮಯಕಾರಿ ಬೆಳವಣಿಗೆ.


ಒಲುಮೆಯಿಂದಲಿ ಸರಸ್ವತಿಯ ತಂದಿಹೆವು
ನಿಮ್ಮ ಮನೆ ಬಾಗಿಲಿಗೆ/

ಮುದದಿ ಮನೆತುಂಬಿಸಿಕೊಳ್ಳಿ ಮನ ತುಂಬಿಸಿಕೊಳ್ಳಿ//

-ಎಂದು ಬೆಳಗೂಬೈಗೂ ಶಾರದೆಯ ಹಾಡುತ್ತಪಾಡುತ್ತ,ತಲೆಯ ಮೇಲೆ ಪುಸ್ತಕಗಳ ಗಂಟನ್ನು ಹೊತ್ತು ಮನೆ-ಶಾಲಾಕಾಲೇಜುಗಳ ಎಡತಾಕುತ್ತ ಕನ್ನಡಿಗರಲ್ಲಿ ವಾಚನಾಭಿರುಚಿಯನ್ನೂ, ಕನ್ನಡದಲ್ಲಿ ಪುಸ್ತಕೋದ್ಯಮವನ್ನೂ ಬೆಳೆಸಿದ ಒಂದು ಮಹಾನ್ ಪರಂಪರೆ ನಮ್ಮಲ್ಲಿದೆ. ಶುರುವಿಗೆ ಗಳಗನಾಥರಿಂದ ಹಿಡಿದು ಜಿ.ಪಿ.ರಾಜರತ್ನಂ, ಮಂಗಳೂರು ಗೋವಿಂದ ರಾವ್, ದಾ.ಬಾ.ಕುಲಕರ್ಣಿ ಮೊದಲಾಗಿ ಈ ಪರಂಪರೆಯನ್ನು ಬೆಳೆಸಿದ ಪ್ರಮುಖ ಪುಸ್ತಕ ಪರಿಚಾರಕರ ಯಾದಿ ದೊಡ್ಡದೇ ಇದೆ. ಈ ಪರಂಪರೆಗೆ ಗುಜರಾತಿನ ನಂಟು ‘ಸಪ್ನ ಬುಕ್ ಹೌಸ್’ನ ಸುರೇಶ್ ಷಾ.
ಏಷ್ಯಾದಲ್ಲೇ ಅತಿದೊಡ್ಡ ಪುಸ್ತಕ ಮಳಿಗೆ ಎಂಬ ಅಗ್ಗಳಿಕೆಗೆ ಪಾತ್ರವಾಗಿರುವ ಸಪ್ನ ಬುಕ್ ಹೌಸ್‌ಗೆ ಈಗ ಸುವರ್ಣ ಸಂಭ್ರಮ.ಐವತ್ತು ವಸಂತಗಳನ್ನು ಪ್ರಚಂಡ ಯಶಸ್ಸಿನಿಂದ ಪೂರೈಸಿರುವ ಸಪ್ನ ಬುಕ್ ಹೌಸ್ ಹುಟ್ಟಿ, ಬೆಳೆದು ಬಂದಿರುವ ಬಗೆ ಕನ್ನಡ ಪುಸ್ತಕೋದ್ಯಮದ ಇತಿಹಾಸದಲ್ಲಿ ಒಂದು ರೋಚಕ ಅಧ್ಯಾಯ. ನಡೆದು ಬಂದ ದಾರಿಯ ತಿರುಗಿ ನೋಡಿದರೆ ಈ ರೋಚಕ ಅಧ್ಯಾಯದ ಒಂದೊಂದು ಪುಟವೂ ಸಾಹಸ ಗಾಥೆಯಂತೆ ನಮ್ಮನ್ನು ಅಕರ್ಷಿಸುತ್ತದೆ.

+++
ಇಸವಿ 1957. ಒಂದು ದಿನ ಮುಂಬೈಯ ದಾದರ್ ರೈಲು ನಿಲ್ದಾಣದಲ್ಲಿ ಹೊರೆ ಹೊರುವ ಪೋರ್ಟರ್ ಒಬ್ಬನಿಗೆ ಅಕಸ್ಮಾತ್ತಾಗಿ ದೇಶದ ಪ್ರಧಾನ ಮಂತ್ರಿ ಪಂಡಿತ್ ಜವಹರಲಾಲ್ ನೆಹರೂ ಅವರ ದರ್ಶನವಾಗುತ್ತದೆ. ನೆಹರೂ ಅವರೊಂದಿಗಿನ ಪುಟ್ಟ ಮಾತುಕತೆಯಿಂದ ಪೋರ್ಟರನ ತಲೆಯಲ್ಲಿ ಹೊಸ ಆಲೋಚನೆಗಳು ಸ್ಫುರಿಸುತ್ತವೆ. ಪೋರ್ಟರ್, ಹೊರೆಹೊರುವ ಬುಟ್ಟಿಯನ್ನು ಪಕ್ಕಕ್ಕೆಸೆದು ತನ್ನ ವಿದ್ಯಾರ್ಹತೆ, ಶಕ್ತಿಸಾಮರ್ಥ್ಯಗಳಿಗೆ ಸವಾಲಾಗುವ ಉದ್ಯೋಗಕ್ಕಾಗಿ ಮುಂಬೈಯ ವಾಣಿಜ್ಯ ಕೇಂದ್ರಗಳಲ್ಲಿ ಅಲೆದಾಡುತ್ತಾನೆ. ಕಿರು ಪುಸ್ತಗಳ(ಪಾಕಿಟ್ ಬುಕ್ಸ್) ವಿತರಣಾ ಸಂಸ್ಥೆಯೊಂದು ಈ ಪೋರ್ಟರನ ಕೈಯಲ್ಲಿ ಪುಸ್ತಗಳ ಹೊರೆ ಇರಿಸಿ ಅವನನ್ನು ಪುಸ್ತಕ ಮಾರಾಟಕ್ಕೆ ಹಚ್ಚುತ್ತದೆ. ಮನೆಯಿಂದ ಮನೆಗೆ, ಶಾಲಾಕಾಲೇಜುಗಳಿಗೆ ಪಾದಯಾತ್ರೆ ಮಾಡುತ್ತಾ ಪುಸ್ತಕಗಳನ್ನು ಮಾರಾಟ ಮಾಡುವ ವೃತ್ತಿ ಪೋರ್ಟರನ ಬದುಕಿನ ಯಶೋಗಾಥೆಯ ಮೊದಲ ಹೆಜ್ಜೆ.

ಈ ಪೋರ್ಟರ್ ಬೇರೆಯಾರೂ ಅಲ್ಲ, ಸಪ್ನ ಬುಕ್‌ಹೌಸ್‌ನ ಸಂಸ್ಥಾಪಕ ಸುರೇಶ್ ಷಾ. ಕುಟುಂಬದ ಜವಾಬ್ದಾರಿಗಳಿಂದಾಗಿ ಕಾಲೇಜು ಶಿಕ್ಷಣವನ್ನು ಮೊಟಕುಗೊಳಿಸುವುದು ಅನಿವಾರ್ಯವಾದಾಗ ಯುವಕ ಸುರೇಶ್ ಷಾ ಉದ್ಯೋಗಾರ್ಥಿಯಾಗಿ ಗುಜರಾತಿನ ಹುಟ್ಟಿದ ಊರು ತೊರೆದು ಮುಂಬೈ ರೈಲು ಹತ್ತಿದರು. ಮುಂಬೈಯಲ್ಲಿ ಸಿಕ್ಕಿದ್ದು ಹೊರೆಹೊರುವ ಕೂಲಿ ಕೆಲಸ. ಬೆವರು ಹರಿಸುವ ಕೂಲಿ ದುಡಿಮೆಯಲ್ಲಿದ್ದಾಗಲೇ ನೆಹರೂ ಅವರೊಂದಿಗಿನ ಕೆಲವು ನಿಮಿಷಗಳ ಅಕಸ್ಮಾತ್ ಭೇಟಿ ಯುವಕ ಸುರೇಶ್ ಷಾನ ಬದುಕಿನ ಗೊತ್ತುಗುರಿಗಳನ್ನೇ ಬದಲಾಯಿಸಿಬಿಟ್ಟಿತು. ಚಾಲೂಕಿ ಯುವಕ ಸುರೇಶ್ ಷಾ ಅವರ ಮಾರಾಟ ಕೌಶಲ ಕಂಡು ಸುಪ್ರಸನ್ನರಾದ ಪುಸ್ತಕ ವಿತರಣಾ ಸಂಸ್ಥೆಯ ಮಾಲಕರು ಮ್ಯಾನೆಜರ್ ಹುದ್ದೆಗೆ ಭಡ್ತಿ ನೀಡಿದರು. ನಂತರ ಅಂದಿನ ಮದ್ರಾಸಿನಲ್ಲಿದ್ದ ತಮ್ಮ ಸಂಸ್ಥೆಯ ಹೊಸ ಶಾಖೆಗೆ ಸುರೇಶ್ ಷಾರನ್ನು ಮುಖ್ಯಸ್ಥನನ್ನಾಗಿ ನೇಮಿಸಿದರು.

ಸಾಹಸ ಪ್ರವೃತ್ತಿ ಮತ್ತು ಉದ್ಯಮಶೀಲತೆಗಳ ಸಾಕಾರವಾಗಿದ್ದ ಸುರೇಶ್ ಷಾಗೆ ಸಂಬಳದ ಚಾಕರಿ ಸಾಕೆನಿಸಿತು. ಸ್ವಂತ ಏನನ್ನಾದರೂ ಮಾಡುವ ಹಂಬಲ-ತುಡಿತಗಳು ಜೋರಾದಾಗ, ನೌಕರಿ ಮಾಡುತ್ತಿದ್ದ ಸಂಸ್ಥೆಗೆ ‘ನಮಸ್ಕಾರ’ ಹೇಳಿ ಬೆಂಗಳೂರಿನ ರೈಲು ಹತ್ತಿದರು. ಕೈಯಲ್ಲಿದ್ದ ಬಂಡವಾಳ ಪುಸ್ತಕ ಮಾರಾಟದ ಅನುಭವ ಮತ್ತು ಉದ್ಯಮಶೀಲತೆ, ಇವರೆಡೇ.

+++
26 ನವೆಂಬರ 1967. ಕನ್ನಡ ರಾಜ್ಯೋತ್ಸವದ ಸಡಗರ ಸಂಭ್ರಗಳ ಮಧ್ಯೆಯೇ ಸುರೇಶ್ ಷಾ ಸದ್ದುಗದ್ದಲ ಮಾಡದೆ ಬೆಂಗಳೂರಿನ ಗಾಂಧಿನಗರದಲ್ಲಿ, 100 ಚದರಡಿ ಜಾಗದಲ್ಲಿ, ಪುಟ್ಟದೊಂದು ಪುಸ್ತಕದ ಮಳಿಗೆ ತೆರೆದರು. ತಮ್ಮ ಆ ಕನಸಿಗೆ ‘ಸಪ್ನ ಬುಕ್ ಹೌಸ್’ ಎಂದು ಹೆಸರಿಟ್ಟರು. ಹೀಗೆ ಚಿಗುರಿದ ಕನಸು ಇಂದು ಬೃಹತ್ ಬೋಧಿ ವೃಕ್ಷವಾಗಿ ಬೆಳೆದಿರುವುದರ ಹಿಂದೆ ಎರಡು ತಲೆಮಾರುಗಳ ಪುಸ್ತಕ ಪ್ರೀತಿ ಇದೆ, ಉದ್ಯಮಶೀಲತೆ ಇದೆ, ಕನ್ನಡ ಕಾಯಕದ ಶ್ರದ್ಧೆ ಇದೆ. ಕಾಲಮಾನಕ್ಕನುಗುಣವಾಗಿ ಮೂರನೆ ತಲೆಮಾರಿನ ಷಾ ಕುಟುಂಬದ ಎಳೆಯರು, ಅಜ್ಜನ ಕೋಲಿದು ಎನ್ನಯ ಕುದುರೆ ಎಂದು ಉಲ್ಲಾಸೋತ್ಸಾಹಗಳಿಂದ ‘ಸಪ್ನ’ಗೆ ಈಗ ಇ-ಬುಕ್ ಆಯಾಮ ಮೂಡಿಸಿ ಮಾಹಿತಿ ತಂತ್ರಜ್ಞಾನಕ್ಕೆ ನಡೆಮಡಿ ಹಾಸಿದ್ದಾರೆ.

ಸಣ್ಣದೊಂದು ಮಳಿಗೆಯಾಗಿ ಐವತ್ತು ವರ್ಷಗಳ ಹಿಂದೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ದಾಂಗುಡಿಯಿಟ್ಟ ಸಪ್ನದ ಬೇರುಗಳು ಈಗ ರಾಜ್ಯದ ದಶ ದಿಕ್ಕುಗಳಿಗೂ ಚಾಚಿಕೊಳ್ಳುತ್ತಿರುವುದಷ್ಟೇ ಅಲ್ಲದೆ ನೆರೆಯ ತಮಿಳುನಾಡಿಗೂ ಹಬ್ಬಿರುವುದು ಕನ್ನಡ ಪುಸ್ತಕೋದ್ಯಮದಲ್ಲೊಂದು ವಿಸ್ಮಯಕಾರಿ ಬೆಳವಣಿಗೆ. ಬೆಂಗಳೂರು ಮಹಾನಗರದ ಎಲ್ಲೆಯೊಳಗೇ ಸದಾಶಿವನಗರ, ಜಯನಗರ, ಇಂದಿರಾನಗರ, ಕೋರಮಂಗಲ, ರೆಸಿಡೆನ್ಸಿ ರೋಡ್, ರಾಯಲ್ ಮೀನಾಕ್ಷಿ ಮಾಲ್, ಎಲಿಮೆಂಟ್ಸ್ ಮಾಲ್, ಎಂ.ಎಸ್.ಆರ್ ಮೆಡಿಕಲ್ ಕಾಲೇಜು-ಹೀಗೆ, ತನ್ನ ನೆಲೆಯನ್ನು ಸ್ಥಳೀಯವಾಗಿ ವಿಸ್ತರಿಸಿಕೊಂಡಿರುವುದಷ್ಟೇ ಅಲ್ಲದೆ ಮೈಸೂರು, ಮಂಗಳೂರು, ಹುಬ್ಬಳ್ಳಿ, ಧಾರವಾಡ, ಕಲಬುರಗಿವರೆಗೆ ಸಾಗಿದೆ ‘ಸಪ್ನ’ ವಿಜಯ ಯಾತ್ರೆ. ನೆರೆಯ ತಮಿಳುನಾಡಿಗೂ ಕೊಯಮತ್ತೂರಿನ ಮೂಲಕ ಪದಾರ್ಪಣ ಮಾಡಿದೆ.

ಪುಸ್ತಕೋದ್ಯಮದ ಪ್ರಗತಿ ಅಕ್ಷರಸ್ಥರನ್ನು ಅವಲಂಬಿಸಿದ್ದು. ನಮ್ಮಲ್ಲಿ ಅಕ್ಷರಸ್ಥರ ಸಂಖೆಯ ಕಡಿಮೆಯೇ. ಈ ಅಕ್ಷರಸ್ಥರಲ್ಲೂ ಇಂಗ್ಲಿಷ್ ವ್ಯಾಮೋಹಿಗಳೇ ಹೆಚ್ಚು. ಹೀಗಿರುವಾಗ ಕನ್ನಡ ಪುಸ್ತಗಳನ್ನು ಕೇಳುವವರು ಯಾರು? ಗ್ರಂಥಾಲಯ ಖರೀದಿ ವ್ಯವಸ್ಥೆಯಲ್ಲಿ ಪುಸ್ತಕ ಮಾರಾಟ ಸಿಕ್ಕ್ಕಿದವನಿಗೆ ಸೀರುಂಡೆ ಎಂಬಂತಾಗಿದೆ. ಗ್ರಂಥಾಲಯ ಇಲಾಖೆಗಳ ಆಧಿಕಾರಿಗಳ ಕೈಬೆಚ್ಚಗೆ ಮಾಡುವ ಶಕ್ತಿಯುಳ್ಳ ಪ್ರಕಾಶಕರ ಬೇಳೆ ಮಾತ್ರ ಬೇಯುತ್ತದೆ ಎನ್ನುವಂತಿದೆ ಈಗಿನ ಕನ್ನಡ ಗ್ರಂಥಾಲಯಗಳಲ್ಲಿನ ಪರಿಸ್ಥಿತಿ. ಕನ್ನಡ ಪುಸ್ತಕಗಳ ಸಗಟು ಖರೀದಿ ನೀತಿ ಹೊಲಬುಗೆಟ್ಟು ಹೋಗಿದೆ. ಸಗಟು ಖರೀದಿ ಯಾವಾಗ ಶುರುವಾಗುತ್ತದೋ ಯಾವಾಗ ಕೊನೆಗೊಳ್ಳುತ್ತದೆಯೋ, ಯಾರಿಗೆ ಅದರ ಲಾಭವೋ....? ಸಗಟು ಖರೀದಿಯನ್ನು ನಂಬಿ ಪುಸ್ತಕಗಳನ್ನು ಪ್ರಕಟಿಸಿದ ಅನೇಕ ಲೇಖಕರು/ಪ್ರಕಾಶಕರದು ಶೋಚನೀಯ ಸ್ಥಿತಿ.

ವಾಚಕರ ಸಂಖ್ಯೆ ಕ್ಷೀಣಿಸುತ್ತಿರುವುದೂ ಸೇರಿದಂತೆ ಹಲವಾರು ಕಾರಣಗಳಿಂದಾಗಿ ಪುಸ್ತಕೋದ್ಯಮ ಇಂದು ಪ್ರಕಟಿಸಿದ ಪುಸ್ತಕಗಳನ್ನು ಮಾರಾಟ ಮಾಡಲಾಗದಂಥ ನಷ್ಟಪರಿಸ್ಥಿತಿಯನ್ನು ಎದುರಿಸುತ್ತದೆ. ಇದು ಕನ್ನಡಕ್ಕಷ್ಟೇ ಸೀಮಿತವಾದ ಪರಿಸ್ಥಿತಿಯಲ್ಲ. ಕ್ರಾಸ್‌ವರ್ಡ್, ಲ್ಯಾಂಡ್ ಮಾರ್ಕ್, ಆಕ್ಸ್ ಫರ್ಡ್‌ನಂಥ ದೇಶದಲ್ಲಿನ ಪ್ರಮುಖ ಪುಸ್ತಕ ಮಳಿಗೆಗಳೂ ಈ ಪರಿಸ್ಥಿತಿಯನ್ನು ಎದುರಿಸಲಾಗದೆ ತಮ್ಮ ಶಾಖೆಗಳನ್ನು ಮುಚ್ಚುತ್ತಿವೆ. ಇಂಥ ಏದುಬ್ಬುಸದ ಪರಿಸ್ಥಿತಿಯಲ್ಲೂ ಗ್ರಾಹಕರನ್ನೇ ನಂಬಿನೆಚ್ಚಿ ಕನ್ನಡ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಸಪ್ನದ ಧೈರ್ಯವನ್ನು ಮೆಚ್ಚಲೇ ಬೇಕು.

ಸಪ್ನ ಬುಕ್ ಹೌಸ್‌ನ ಮರಾಟ ಸಾಮರ್ಥ್ಯ ಮತ್ತು ಪ್ರಕಟಣಾ ಸಾಮರ್ಥ್ಯ ಬೆರಗುಗೊಳಿಸುವಂಥಾದ್ದು. ಸಪ್ನದ ಮಳಿಗೆಗೆ ಹೋಗಿ ಅಲ್ಲಿ ನಿಮ್ಮನ್ನು ಐದೂವರೆ ಲಕ್ಷ ಪುಸ್ತಕಗಳು ಸ್ವಾಗತಿಸುತ್ತವೆ ಎನ್ನುತ್ತಾರೆ ವ್ಯವಸ್ಥಾಪಕರು. ಇವುಗಳ ಪೈಕಿ ಶೇ. ನಲವತ್ತರಷ್ಟು ಪಠ್ಯ ಪುಸ್ತಕಗಳಾದರೆ ಉಳಿದವು ಕಾವ್ಯ, ಕಥಾಸಾಹಿತ್ಯ, ವಿಚಾರ ಸಾಹಿತ್ಯ, ಸಮಾಜ ವಿಜ್ಞಾನ ಮೊದಲಾದ ಪ್ರಕಾರಗಳ ಕೃತಿಗಳು. ಈಚಿನ ದಿನಗಳಲ್ಲಿ ವರ್ಷಕ್ಕೆ ಸರಾಸರಿ 350 ಪುಸ್ತಕಗಳನ್ನು ಪ್ರಕಟಿಸುತ್ತಿರುವ ಸಪ್ನ ಇಲ್ಲಿಯವರೆಗೆ ಪ್ರಕಟಿಸಿರುವ ಕನ್ನಡ ಪುಸ್ತಕಗಳ ಸಂಖ್ಯೆ ಆರು ಸಾವಿರಕ್ಕೂ ಮಿಗಿಲಾದುದು. ಸಪ್ನದ ಸಂತುಷ್ಟ ಗ್ರಾಹಕರ ಯಾದಿ ಯಾರ ಊಹೆಗೂ ಎಟುಕದಷ್ಟು ದೊಡ್ಡದು. ಸಪ್ನ ಓದುಗರ ಬಳಗ ಹತ್ತು ದಶಲಕ್ಷಕ್ಕೂ ಹೆಚ್ಚು ಎನ್ನುತ್ತಾರೆ ವ್ಯವಸ್ಥಾಪಕರು.

ಅಪಾರ ಸಂಖ್ಯೆಯ ಈ ಓದುಗ ನಿಧಿಯನ್ನು ಹೊಂದಿರುವುದರ ಗುಟ್ಟಾದರೂ ಏನು? ಸಂಖ್ಯೆಯೊಂದಿಗೆ ಸತ್ವ, ಸಮೃದ್ಧಿಗಳಿಂದ ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ ‘ಸಪ್ನ’. ವೈವಿಧ್ಯತೆ ಸಪ್ನದಲ್ಲಿ ಎದ್ದುಕಾಣುವ ಪ್ರಧಾನ ಲಕ್ಷಣ. ಶಿಶುಪ್ರಾಸದಿಂದ ಹಿಡಿದು ಸಂಶೋಧನೆ, ಶಾಸ್ತ್ರೀಯ ಸಾಹಿತ್ಯದವರೆಗೆ ನೀವು ಬಯಸುವ ಎಲ್ಲಬಗೆಯ ಸಾಹಿತ್ಯ ಸಪ್ನದ ಒಂದೇ ಸೂರಿನಡಿ ಲಭ್ಯ.-ಇಂಗ್ಲಿಷ್ ಮತ್ತು ಕನ್ನಡ ಎರಡು ಭಾಷೆಗಳಲ್ಲೂ. ಸಪ್ನದ ಕನ್ನಡ ಪ್ರಕಟನೆಗಳ ಯಾದಿಯತ್ತ ಒಮ್ಮೆ ಕಣ್ಣು ಹಾಯಿಸಿದರೆ ಅದರ ಸಾಂಸ್ಕೃತಿಕ ಬಹುತ್ವ ಮತ್ತು ವೈವಿಧ್ಯತೆಗಳು ನಿಮ್ಮ ಗಮನಕ್ಕೆ ಬಾರದೇ ಇರದು. ಕಾವ್ಯ,ಕಥಾಸಾಹಿತ್ಯ, ಜಾನಪದ, ಸಮಾಜ ವಿಜ್ಞಾನ, ಆಧ್ಯಾತ್ಮಿಕ ಸಾಹಿತ್ಯ, ವಿಜ್ಞಾನ-ತಂತ್ರಜ್ಞಾನ, ನಿಘಂಟು,ವಿಶ್ವ ಕೋಶಗಳು, ಕ್ರೀಡೆ-ಹೀಗೆ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಎಲ್ಲ ಸಾಹಿತ್ಯವೂ....
ಸಮಕಾಲೀನ ಸಾಹಿತ್ಯದ ದನಿಗಳಷ್ಟೇ ಅಲ್ಲದೆ ಪ್ರಾಚೀನ-ಅರ್ವಾಚೀನ ಗಳೆರಡನ್ನೂ ಬೆಂಗಳೂರಿನಲ್ಲಿ ಏಕಕಾಲದಲ್ಲಿ ಕಾಣಬಹುದಾದ ಅಪರೂಪದ ಪುಸ್ತಕ ತಾಣವಿದು.

ಶಿವರಾಮ ಕಾರಂತರ ಎಲ್ಲ ಕೃತಿಗಳು, ಪ್ರೊ.ಕಲಬುರ್ಗಿಯವರ ‘ಮಾರ್ಗ’, ಚಿದಾನಂದ ಮೂರ್ತಿಯವರ ‘ಚಿದಾನಂದ ಸಂಪುಟ’, ಪ್ರೊ. ಜಿ. ವೆಂಕಟಸುಬ್ಬಯ್ಯನವರ ಸಮಗ್ರ ಸಾಹಿತ್ಯ, ಪ್ರೊ.ವೆಂಕಟಾಚಲ ಶಾಸ್ತ್ರಿಗಳ ಶಾಸ್ತ್ರ ಸಾಹಿತ್ಯ, ಡಾ.ದೇಜಗೌ ಅವರ ಸಮಗ್ರ ಸಾಹಿತ್ಯ ಸಂಪುಟಗಳು, ಪ್ರೊ. ನಿಸಾರ್ ಅಹಮದರ ಸಮಗ್ರ ಕಾವ್ಯ ಮತ್ತು ಗದ್ಯ, ಚಂದ್ರಶೇಖರ ಕಂಬಾರ, ಚಂದ್ರಶೇಖರ ಪಾಟೀಲ ಮೊದಲಾದವರ ಕೃತಿಗಳು ಹೀಗೆ ಕನ್ನಡ ಸಾರಸ್ವತ ಲೋಕದ ಒಂದು ವಿರಾಡ್ರೂಪ ದರ್ಶನ ಕೇಂದ್ರ ಸಪ್ನ ಬುಕ್ ಹೌಸ್. ಹಳೆಯ ತಲೆಮಾರಿನ ಈ ಮಹತ್ವದ ಲೇಖಕರುಗಳ ಜೊತೆಗೆ ಇಂದಿನ ಯುವ ಪೀಳಿಗೆಯ ಸಾಹಿತ್ಯದ ಕಲರವವೂ ಜೋರಾಗಿಯೇ ಇಲ್ಲಿ ಕೇಳಿ ಬರುತ್ತಿದೆ. ಇದು ಹೊಸ ತಲೆಮಾರಿನ ಹೊಸ ಸಾಹಿತ್ಯಕ್ಕೆ ಸಪ್ನ ನೀಡುತ್ತಿರುವ ಪ್ರೋತ್ಸಾಹ, ಉತ್ತೇಜನಗಳ ದ್ಯೋತಕ. ವಾಚನಾಭಿರುಚಿ ಮೂಡಿಸುವುದು ಹಾಗೂ ಸಾಹಿತ್ಯದ ಅಧ್ಯಯನದಲ್ಲಿ ಹೆಚ್ಚಿನ ಆಸಕ್ತಿ ಕುದುರಿಸುವ ನಿಟ್ಟಿನಲ್ಲಿ ಸಪ್ನ ಶಾಲಾ ಮಕ್ಕಳಿಗಾಗಿ ಹಲವಾರು ಸ್ಪರ್ಧೆಗಳು, ಉಚಿತ ಪುಸ್ತಗಳ ವಿತರಣೆ, ವಿಚಾರ ಸಂಕಿರಣ ಮೊದಲಾದ ಕಾರ್ಯಕ್ರಮಗಳನ್ನು ವರ್ಷವಿಡೀ ನಡೆಸುತ್ತಿರುವುದು ಸ್ತುತ್ಯಾರ್ಹ.

ಅಂತರ್ಜಾಲದ ಮೂಲಕ ಪುಸ್ತಕಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಸಪ್ನದ ಆನ್ ಲೈನ್ ಪುಸ್ತಕ ಮಾರಾಟ ವ್ಯವಸ್ಥೆ ಇಂದಿನ ಬೇಡಿಕೆಗನುಗುಣವಾಗಿಯೇ ಇದೆ. ಆನ್ ಲೈನ್ ಮೂಲಕ ಕನ್ನಡ ಪುಸ್ತಕಗಳಿಗೆ ಬೇಡಿಕೆ ಹೆಚ್ಚುತ್ತಿದೆ ಎಂಬುದು ಗಮನಾರ್ಹವಾದುದು. ಪುಸ್ತಕಗಳು ಮತ್ತು ಲೇಖನ ಸಾಮಗ್ರಿಗಳನ್ನು ಗ್ರಾಹಕರಿಗೆ ದಕ್ಷತೆಯಿಂದ ತ್ವರಿತ ಗತಿಯಲ್ಲಿ ಪೂರೈಸುವ ಉದ್ದೇಶದಿಂದ ಸಪ್ನ, ‘ಸಪ್ನ ಇಂಕ್’, ‘ಸ್ಟೋರ್-67’, ‘ಸಪ್ನ ಕಿಯಾಸ್ಕ್’ ಮೊದಲಾದ ವ್ಯವಸ್ಥೆಗಳನ್ನು ರೂಪಿಸಿರುವುದು ಎಳೆಯರಲ್ಲಿ ವಾಚನಾಭಿರುಚಿ ಮೂಡಿಸುವುದರಲ್ಲಿ, ಅವರ ಬೇಡಿಕೆಗಳನ್ನು ಪೂರೈಸುವ ನಿಟ್ಟಿನಲ್ಲಿ ಇಟ್ಟಿರುವ ಮತ್ತೊಂದು ಉಪಯುಕ್ತ ಹೆಜ್ಜೆ. ನಗರಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಶಾಲಾ-ಕಾಲೇಜುಗಳು ಮತ್ತು ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಸಪ್ನ ಕಿಯಾಸ್ಕ್‌ಗಳನ್ನು ಸ್ಥಾಪಿಸಲಾಗುತ್ತಿದ್ದು ಈ ಕಿಯಾಸ್ಕ್‌ಗಳಲ್ಲಿ ಎಲೆಕ್ಟ್ರಾನಿಕ್ ಟ್ಯಾಬ್ಲೆಟ್‌ಗಳನ್ನು ಇರಿಸಲಾಗಿದ್ದು ಇವುಗಳಲ್ಲಿ ಸಪ್ನದಲ್ಲಿ ಸಿಗಲಿರುವ ಪುಸ್ತಕಗಳ ಪಟ್ಟಿ ಸುಲಭವಾಗಿ ಲಭ್ಯವಿದ್ದು ಆಸಕ್ತರು ತಮಗೆ ಬೇಕಾದ ಪುಸ್ತಕಗಳನ್ನು ಆಯ್ಕೆಮಾಡಿ ಖರೀದಿಸುವುದು ಸುಲಭ. ‘ಸಪ್ನ’ ಎಕ್ಸ್ ಪ್ರೆಸ್ ಕಂಪ್ಯೂಟರೀಕೃತ ಪಠ್ಯಪುಸ್ತಕ ಮಳಿಗೆ. ಕರ್ನಾಟಕದ ಪ್ರಮುಖ ಎಂಜಿನಿಯರಿಂಗ್ ಹಾಗೂ ಮೆಡಿಕಲ್ ಕಾಲೇಜುಗಳಲ್ಲಿ ಸಪ್ನ ಎಕ್ಸ್‌ಪ್ರೆಸ್ ಸೌಲಭ್ಯ ಕಲ್ಪಿಸಲಾಗಿದೆ.

ಪುಸ್ತಕ ಕಾಶಿ ಎಂದೇ ಜನಪ್ರಿಯಗೊಂಡಿರುವ ಸಪ್ನ ಬುಕ್ ಹೌಸ್ ಪ್ರಕಟಣೋದ್ಯಮದ ಹಲವಾರು ಪ್ರಶಸ್ತಿಪುರಸ್ಕಾಗಳಿಗೂ ಭಾಜನವಾಗಿದೆ. ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಶಸ್ತಿಗಳಲ್ಲದೆ ಭಾರತೀಯ ಪುಸ್ತಕ ಪ್ರಕಾಶಕರ ಒಕ್ಕೂಟದ ‘ಬೆಸ್ಟ್ ಬುಕ್ ಸೆಲ್ಲರ್’ (2008) ಮತ್ತು ‘ಡಿಸ್ಟಿಂಗ್ವಿಷ್ಡ್ ಬುಕ್ ಸೆಲ್ಲರ್’ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಖ್ಯಾತಿ ಸಪ್ನದ್ದು. ಲಿಮ್ಕಾ ಬುಕ್ ಆಫ್ ರೆಕಾರ್ಡ್ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಭಾರತದ ಅತಿದೊಡ್ಡ ಪುಸ್ತಕ ಭಂಡಾರವೆಂಬ ಸ್ಥಾನವನ್ನು ಗಳಿಸಿರುವುದು ಮತ್ತೊಂದು ಹೆಮ್ಮೆಯ ಗರಿ.

ಸಪ್ನದ ಈ ಎಲ್ಲ ಯಶಸ್ಸಿನ ಹಿಂದೆ ಅದರ ರೂವಾರಿ ಸುರೇಶ್ ಷಾ ಅವರ ದೂರದೃಷ್ಟಿಯ ಯೋಜನೆಗಳು ಮತ್ತು ಅವರ ಕರ್ತೃತ್ವ ಶಕ್ತಿಯ ಛಾಪು ಢಾಳವಾಗಿ ಕಾಣುತ್ತದೆ. ಅಂತೆಯೇ ಸಪ್ನವನ್ನು ಏಷ್ಯಾದಲ್ಲೇ ಅತೀ ದೊಡ್ಡ ಪುಸ್ತಕ ಮಳಿಗೆಯಾಗಿ ಬೆಳೆಸುವುದರಲ್ಲಿ ಹಾಗೂ ಆಧುನೀಕರಣಗೊಳಿಸುವುದರಲ್ಲಿ ಎರಡನೆಯ ತಲೆಮಾರಿನ ನಿತಿನ್ ಷಾ, ದೀಪಕ್ ಷಾ ಮತ್ತು ಪರೇಶ್ ಷಾ ಅವರ ಉದ್ಯಮಶೀಲತೆ ಮತ್ತು ಕಾಲದ ಬೇಡಿಕೆಗಳಿಗೆ ಸ್ಪಂದಿಸುವ ವ್ಯವಹಾರ ಕುಶಲತೆಗಳ ಪಾತ್ರವೂ ಹಿರಿದಾದುದು.ಮೂರನೆಯ ತಲೆಮಾರಿನ ನಿಜೇಶ್ ಷಾ ಈಗ ಆನ್‌ಲೈನ್ ಮತ್ತಿತರ ಸಪ್ನ ವಿದ್ಯುನ್ಮಾನ ಜಾಲ ನಿರ್ಮಿಸುವುದರಲ್ಲಿ ನಿರತರು. ಅಂತೆಯೇ ಸಪ್ನ ಬುಕ್ ಹೌಸ್‌ನ ಕನ್ನಡ ವಿಭಾಗದ ಜೀವ ತಂತುವಿನಂತಿರುವ ದೊಡ್ಡೆಗೌಡರ ಕನ್ನಡ ಪ್ರೀತಿ ಹಾಗೂ ಪುಸ್ತಗಳ ಅಂತ:ಸತ್ವ,ಮುದ್ರಣ ವಿನ್ಯಾಸಗಳ ಸೊಗಸು ಇತ್ಯಾದಿ ಗುಣಪ್ರಮಾಣಗಳಲ್ಲಿ ತೋರುವ ಮುತುವರ್ಜಿ ಮತ್ತು ಕಾರ್ಯಕ್ಷಮತೆಗಳು ಉಲ್ಲೇಖನಾರ್ಹವಾದದ್ದು.

ಐವತ್ತನೆಯ ಹುಟ್ಟು ಹಬ್ಬದ ಅಂಗವಾಗಿ ಸಪ್ನ ವರ್ಷವಿಡೀ ಪುಸ್ತಕ ಪರಿಚಾರಿಕೆಯ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನವೆಂಬರ್ 1, ಕನ್ನಡ ರಾಜ್ಯೋತ್ಸವ ದಿನದಂದು ನಾಡಿನ ಗಣ್ಯ ಸಾಹಿತಿಗಳ ಐವತ್ತು ಪುಸ್ತಕಗಳ ಲೋಕಾರ್ಪಣೆಯೊಂದಿಗೆ ಸಪ್ನ ಸುವರ್ಣೋತ್ಸವ ಆಚರಣೆ ಪ್ರಾರಂಭವಾಗಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)