varthabharthi

ವಿಶೇಷ-ವರದಿಗಳು

ನಿಮಗೆ ಗೊತ್ತಿರಲೇಬೇಕಾದ ಮಾಹಿತಿಗಳು ಇಲ್ಲಿವೆ

ಸಂಕಷ್ಟದ ಸಮಯದಲ್ಲಿ ನಿಮ್ಮ ಬ್ಯಾಂಕ್ ಖಾತೆಯನ್ನು ಕುಟುಂಬ ಸದಸ್ಯರು ನಿರ್ವಹಿಸಬಹುದೇ?

ವಾರ್ತಾ ಭಾರತಿ : 29 Oct, 2017

ನಿಮ್ಮ ಮ್ಯೂಚ್ಯುವಲ್ ಫಂಡ್ ಹೂಡಿಕೆಗಳಿಂದ ಹಿಡಿದು ಶೇರುಗಳು, ವಿಮೆಯ ಹಣ, ವೇತನ, ಬಾಡಿಗೆ ಆದಾಯ, ವಿದ್ಯುತ್ ಇತ್ಯಾದಿಗಳ ಬಿಲ್‌ಗಳು, ಇಎಂಐಗಳು....ಹೀಗೆ ನಿಮ್ಮ ಎಲ್ಲ ಗಳಿಕೆಗಳು ಮತ್ತು ವೆಚ್ಚಗಳು ನಿಮ್ಮ ಬ್ಯಾಂಕಿನ ಉಳಿತಾಯ ಖಾತೆಗೆ ಜಮೆಯಾಗುತ್ತವೆ ಮತ್ತು ಅಲ್ಲಿಂದಲೇ ಹೊರಗೆ ಹೋಗುತ್ತವೆ. ಹೀಗಾಗಿ ಉಳಿತಾಯ ಖಾತೆಯನ್ನು ನಿರ್ವಹಿಸಲು ಬ್ಯಾಂಕುಗಳು ಕಠಿಣ ನಿಯಮಗಳನ್ನು ಹೇರಿದ್ದರೆ ಅದರಲ್ಲಿ ಅಚ್ಚರಿಯೇನಿಲ್ಲ. ಇಂತಹ ನಿರ್ಬಂಧಗಳು ಒಳ್ಳೆಯದಾಗಿದ್ದರೂ ಕೆಲವೊಮ್ಮೆ ಇವು ತುಂಬ ಯಾತನೆಯನ್ನು ನೀಡುತ್ತವೆ ಮತ್ತು ಸಮಸ್ಯೆಗಳನ್ನು ಹೆಚ್ಚಿಸುತ್ತವೆ.

ಇದಕ್ಕೊಂದು ಉದಾಹರಣೆ ಇಲ್ಲಿದೆ. ಇತ್ತೀಚಿಗೆ ಮುಂಬೈನ 63ರ ಹರೆಯದ ವೃದ್ಧೆಯೋರ್ವರು ಕೋಮಾ ಸ್ಥಿತಿಯಲ್ಲಿದ್ದ ತನ್ನ ಪತಿಯನ್ನು ಉಳಿಸಿಕೊಳ್ಳಲು ಒದ್ದಾಡುತ್ತಿದ್ದರು. ಪತಿಯ ಬ್ಯಾಂಕ್ ಖಾತೆಯಲ್ಲಿ ಸಾಕಷ್ಟು ಹಣವಿದ್ದರೂ ಚಿಕಿತ್ಸೆಗಾಗಿ ಅದನ್ನು ತೆಗೆಯಲು ಸಾಧ್ಯವಿರಲಿಲ್ಲ. ಪತಿಯ ಬಳಿ ಎಟಿಎಂ ಕಾರ್ಡ್ ಇದ್ದರೂ ಅದರ ಪಿನ್ ಅನ್ನು ಅವರು ಪತ್ನಿಗೆ ಅಥವಾ ಕುಟುಂಬದ ಇತರ ಸದಸ್ಯರಿಗೆ ತಿಳಿಸಿರಲಿಲ್ಲ. ಇಂತಹ ಸಂಕಷ್ಟದ ಸಮಯಗಳಲ್ಲಿ ಖಾತೆದಾರ ರೋಗಿಗೆ ನೆರವಾಗುವ ಯಾವುದೇ ನಿಯಮವಿಲ್ಲದ್ದರಿಂದ ಆ ವೃದ್ಧೆ ತನ್ನ ಪತಿಯ ಗಾರ್ಡಿಯನ್ ಆಗಿ ನೇಮಕಗೊಳ್ಳಲು ಅಂತಿಮವಾಗಿ ಬಾಂಬೆ ಉಚ್ಚ ನ್ಯಾಯಾಲಯದ ಮೊರೆ ಹೋಗಬೇಕಾಗಿ ಬಂದಿತ್ತು.

ಇಂತಹ ಸ್ಥಿತಿಯನ್ನು ಸಾಮಾನ್ಯವಾಗಿ ಯಾರೂ ಬಯಸುವುದಿಲ್ಲ. ಆದ್ದರಿಂದ ಉಳಿತಾಯ ಖಾತೆ ಹೇಗೆ ಕಾರ್ಯ ನಿರ್ವಹಿಸುತ್ತದೆ ಮತ್ತು ನಿಮ್ಮ ಉಳಿತಾಯ ಖಾತೆಯನ್ನು ನಿಮ್ಮ ಕುಟುಂಬ ಸದಸ್ಯರೂ ಯಾವುದೇ ತೊಂದರೆಯಿಲ್ಲದೆ ನಿರ್ವಹಿಸಲು ಸಾಧ್ಯವಾಗುವಂತೆ ಮಾಡುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ.

ಠೇವಣಿ ಖಾತೆಯನ್ನು ಆರಂಭಿಸುವಾಗ ನಾಮಿನಿಯ ಹೆಸರನ್ನು ಉಲ್ಲೇಖಿಸುವುದು ಎಲ್ಲ ರೀತಿಯಿಂದಲೂ ಒಳ್ಳೆಯ ಕ್ರಮವಾಗಿದೆ. ಈ ಸೌಲಭ್ಯ ಎಲ್ಲ ಖಾತೆದಾರರಿಗೂ ಇರುತ್ತದೆ. ಇದರಿಂದ ಖಾತೆದಾರ ನಿಧನನಾದಾಗ ನಾಮಿನಿಯು ಆತನ ಖಾತೆಯಲ್ಲಿನ ಹಣವನ್ನು ಪಡೆದುಕೊಳ್ಳುವುದು ಸುಲಭವಾಗುತ್ತದೆ.

ನಾಮಿನಿ ಕಾನೂನುಬದ್ಧ ಉತ್ತರಾಧಿಕಾರಿಯೇ ಆಗಿರಬೇಕಿಲ್ಲ. ನಾಮಿನಿ ಮತ್ತು ಉತ್ತರಾಧಿಕಾರಿ ವಿಭಿನ್ನ ವ್ಯಕ್ತಿಗಳಾಗಿರಬಹುದು. ನಾಮಿನಿಯಿಲ್ಲದಿದ್ದರೆ ಉತ್ತರಾಧಿಕಾರಿಗಳು ಖಾತೆಯಲ್ಲಿನ ಹಣ ಪಡೆಯಲು ಮತ್ತು ಖಾತೆಯನ್ನು ಅಂತಿಮವಾಗಿ ಇತ್ಯರ್ಥಗೊಳಿಸಲು ಅರ್ಹರಾಗಿರುತ್ತಾರೆ ಎನ್ನುತ್ತಾರೆ ಹಿರಿಯ ಬ್ಯಾಂಕ್ ಅಧಿಕಾರಿಯೋರ್ವರು.

ನಾಮಿನಿಯ ಹೆಸರನ್ನು ಉಲ್ಲೇಖಿಸುವುದರ ಲಾಭವೆಂದರೆ ಖಾತೆದಾರ ಅಥವಾ ಬ್ಯಾಂಕಿನಲ್ಲಿ ಲಾಕರ್ ಹೊಂದಿರುವ ವ್ಯಕ್ತಿಯು ನಿಧನನಾದಾಗ ಖಾತೆಯಲ್ಲಿನ ಹಣ ಅಥವಾ ಲಾಕರ್‌ನಲ್ಲಿರುವ ವಸ್ತುಗಳನ್ನು ನಾಮಿನಿಯು ಪಡೆದುಕೊಳ್ಳಲು ಬ್ಯಾಂಕ್ ಅವಕಾಶ ನೀಡುತ್ತದೆ ಮತ್ತು ಉತ್ತರಾಧಿಕಾರ ಪ್ರಮಾಣಪತ್ರ ಅಥವಾ ಇತರ ಕಾನೂನು ದಾಖಲೆಗಳಿಗಾಗಿ ಒತ್ತಾಯಿಸುವುದಿಲ್ಲ. ಅಲ್ಲದೆ ವ್ಯಕ್ತಿಯು ತನ್ನ ಖಾತೆ ಅಥವಾ ಲಾಕರ್ ಎಲ್ಲಿಯವರೆಗೆ ಸಕ್ರಿಯವಾಗಿರುತ್ತದೆಯೋ ಅಲ್ಲಿಯವರೆಗೆ ಯಾವುದೇ ಸಮಯದಲ್ಲಿ ತನ್ನ ನಾಮಿನಿಯನ್ನು ಬದಲಿಸಬಹುದಾಗಿದೆ.

ಆದರೆ ನೆನಪಿರಲಿ. ಖಾತೆದಾರ ನಿಧನನಾದಾಗ ಮಾತ್ರ ಬ್ಯಾಂಕ್ ಆತನ ಖಾತೆಯಲ್ಲಿಯ ಹಣವನ್ನು ನಾಮಿನಿಗೆ ನೀಡುತ್ತದೆಯೇ ಹೊರತು ಖಾತೆದಾರ ತೀವ್ರ ಅನಾರೋಗ ಪೀಡಿತನಾಗಿ ಕೃತಕ ಉಸಿರಾಟ ಯಂತ್ರ ಅಳವಡಿಸಲ್ಪಟ್ಟ ಅಥವಾ ಕೋಮಾದಲ್ಲಿರುವ ಸಂದರ್ಭದಲ್ಲಿ ಜಪ್ಪಯ್ಯ ಎಂದರೂ ನಾಮಿನಿಗೆ ಖಾತೆಯನ್ನು ನಿರ್ವಹಿಸುವ ಅಧಿಕಾರವನ್ನು ನೀಡುವುದಿಲ್ಲ.

ಇಂತಹ ಸಂಭಾವ್ಯ ಸಂಕಷ್ಟದ ಸಮಯಗಳನ್ನು ಎದುರಿಸಲು ಜಂಟಿ ಉಳಿತಾಯ ಖಾತೆಯನ್ನು ತೆರೆಯುವುದು ಉತ್ತಮ ಉಪಾಯವಾಗುತ್ತದೆ.

ಜಂಟಿ ಉಳಿತಾಯ ಖಾತೆ ಪತಿ ಮತ್ತು ಪತ್ನಿಯ ಹೆಸರುಗಳಲ್ಲಿ ಅಥವಾ ಒಂದೇ ಕುಟುಂಬದ ಇಬ್ಬರು ಸದಸ್ಯರ ಹೆಸರಿನಲ್ಲಿರಬಹುದು. ಖಾತೆಯನ್ನು ತೆರೆಯುವಾಗ ‘ಇಬ್ಬರಲ್ಲಿ ಯಾರಾದರೊಬ್ಬರು ಅಥವಾ ಬದುಕುಳಿದವರು’ಎನ್ನುವ ಅವಕಾಶವನ್ನು ಆಯ್ಕೆ ಮಾಡಿಕೊಂಡರೆ ಇಬ್ಬರೂ ಖಾತೆಯನ್ನು ನಿರ್ವಹಿಸಬಹುದು. ಇಲ್ಲಿ ಇಬ್ಬರದೂ ಸಹಿಯ ಅಗತ್ಯವಿರುವುದಿಲ್ಲ. ಮೇಲೆ ಹೇಳಿದ ಸಂಕಷ್ಟದ ಸಂದರ್ಭಗಳಲ್ಲಿ ಇಂತಹ ಖಾತೆ ತುಂಬ ಉಪಯೋಗಕ್ಕೆ ಬರುತ್ತದೆ.

‘ಮೊದಲನೆಯವರು ಅಥವಾ ಬದುಕುಳಿದವರು’ ಎಂಬ ಅವಕಾಶವನ್ನು ಆಯ್ಕೆ ಮಾಡಿಕೊಂಡಾಗ ಇಬ್ಬರೂ ಜೀವಂತವಿರುವವರೆಗೂ ಮೊದಲ ಖಾತೆದಾರನೇ ಖಾತೆಯನ್ನು ನಿರ್ವಹಿಸುತ್ತಾನೆ. ಠೇವಣಿಯನ್ನು ಅವಧಿಗೆ ಮುನ್ನವೇ ವಾಪಸ್ ಮಾಡುವುದಿದ್ದರೆ ಇಬ್ಬರದೂ ಸಹಿಗಳನ್ನು ಪಡೆದುಕೊಳ್ಳಲಾಗುತ್ತದೆ. ಮೊದಲ ಖಾತೆದಾರ ನಿಧನ ಹೊಂದಿದರೆ ಎರಡನೇ ಖಾತೆದಾರನಿಗೆ ಖಾತೆಯನ್ನು ನಿರ್ವಹಿಸುವ ಅಧಿಕಾರ ದೊರೆಯುತ್ತದೆ.

  ಅಂದ ಹಾಗೆ ಜಂಟಿ ಖಾತೆಯಿಂದ ಅನುಕೂಲ ಮತ್ತು ಅನಾನುಕೂಲ ಎರಡೂ ಇವೆ. ಇಬ್ಬರೂ ಖಾತೆದಾರರು ತಮಗೆ ಅಗತ್ಯವಿದ್ದಾಗ ಖಾತೆಯಿಂಂದ ಹಣವನ್ನು ತೆಗೆಯಬಹುದು ಎನ್ನುವುದು ಅತ್ಯಂತ ದೊಡ್ಡ ಅನುಕೂಲವಾಗಿದೆ. ಜಂಟಿ ಖಾತೆದಾರರು ದಂಪತಿಯಾಗಿದ್ದರೆ ತಮ್ಮ ಹಣಕಾಸಿನ ಮೇಲೆ ಕಣ್ಣಿಡುವುದು ಸುಲಭವಾಗುತ್ತದೆ. ಇನ್ನೊಂದು ಅನುಕೂಲವೆಂದರೆ ನೀವು ‘ಬದುಕುಳಿದವರು’ ಎಂಬ ಆಯ್ಕೆಯನನ್ನು ಮಾಡಿಕೊಂಡು ನಾಮಿನಿಯನ್ನು ನೇಮಿಸಿದ್ದರೆ ನಿಧನದ ಸಂದರ್ಭದಲ್ಲಿ ಬ್ಯಾಂಕ್ ಬದುಕುಳಿದಿರುವ ಜಂಟಿ ಖಾತೆದಾರನಿಗೆ ಹಣವನ್ನು ನೀಡುತ್ತದೆಯೇ ಹೊರತು ನಾಮಿನಿಗಲ್ಲ. ಇಬ್ಬರೂ ಖಾತೆದಾರರು ನಿಧನ ಹೊಂದಿದ್ದರೆ ಮಾತ್ರ ನಾಮಿನಿಗೆ ಖಾತೆಯಲ್ಲಿರುವ ಹಣದ ಮೇಲೆ ಅಧಿಕಾರ ದೊರೆಯುತ್ತದೆ.

ಜಂಟಿ ಖಾತೆಯ ಅತ್ಯಂತ ದೊಡ್ಡ ಅನಾನುಕೂಲವೆಂದರೆ ಅದು ನಿಮ್ಮ ಹಣಕಾಸಿನ ಕುರಿತಂತೆ ನಿಮ್ಮಲ್ಲಿ ಸ್ವಾತಂತ್ರದ ಭಾವನೆಯನ್ನು ಮೂಡಿಸುವುದಿಲ್ಲ.

 ಆರ್‌ಬಿಐ ನಿಯಮಗಳಂತೆ ಸಹಿ ಮಾಡಲು ಸಾಧ್ಯವಿಲ್ಲದ ಅಥವಾ ಖುದ್ದಾಗಿ ಬ್ಯಾಂಕಿಗೆ ತೆರಳಲು ಸಾಧ್ಯವಿಲ್ಲದ ಅನಾರೋಗ್ಯ ಸ್ಥಿತಿಯಲ್ಲಿರುವ ವ್ಯಕ್ತಿಯು ತನ್ನ ಖಾತೆಯಲ್ಲಿನ ಹಣವನ್ನು ತೆಗೆಯಲು ಚೆಕ್ ಅಥವಾ ವಿತ್‌ಡ್ರಾವಲ್ ಸ್ಲಿಪ್‌ನ ಮೇಲೆ ತನ್ನ ಹೆಬ್ಬೆಟ್ಟು ಮುದ್ರೆಯನ್ನು ಒತ್ತಬಹುದು. ಇದನ್ನು ಬ್ಯಾಂಕಿಗೆ ಗೊತ್ತಿರುವ ಇಬ್ಬರು ಸಾಕ್ಷಿಗಳು ಗುರುತಿಸಬೇಕಾಗುತ್ತದೆ ಮತ್ತು ಈ ಪೈಕಿ ಓರ್ವರು ಬ್ಯಾಂಕಿನ ಅಧಿಕಾರಿಯಾಗಿರಬೇಕು.

ಸಂಕಷ್ಟದ ಸಮಯದಲ್ಲಿ ಮೊದಲೇ ಮಾಡಿಸಿಟ್ಟ ಪವರ್ ಆಫ್ ಅಟಾರ್ನಿಯೂ ನೆರವಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)