varthabharthi

ಸಿನಿಮಾ

ಚಿತ್ರ ವಿಮರ್ಶೆ

ಬೈಗುಳದ ಅರ್ಚನೆಯೇ ಟೈಗರ್ ನ ಘರ್ಜನೆ

ವಾರ್ತಾ ಭಾರತಿ : 30 Oct, 2017
ಶಶಿಕರ ಪಾತೂರು

ಚಿತ್ರ: ಟೈಗರ್ ಗಲ್ಲಿ

ತಾರಾಗಣ: ನೀನಾಸಂ ಸತೀಶ್, ರೋಶಿನಿ, ಭಾವನಾ ರಾವ್

ನಿರ್ದೇಶನ: ರವಿ ಶ್ರೀವತ್ಸ

ನಿರ್ಮಾಣ: ಯೋಗೇಶ್ ಕುಮಾರ್

'ಕಾಂಡೋಮ್ ತೂತಾದರೆ ಜನ್ಮ, ಪೊಲೀಸ್ ಇಲಾಖೆಗೆ ತೂತು ಬಿದ್ರೆ ಮಾರಣ ಹೋಮ!' ಇದು ನಾಯಕನ ಬಾಯಿಯಿಂದ ಉದುರುವ ನುಡಿಮುತ್ತು. ನಾಯಕನೇ ಇಂಥ ಮಾತುಗಳನ್ನು ಆಡಬಹುದಾದರೆ ಖಳನಾಯಕ ಎಂಥ ಮಾತುಗಳನ್ನಾಡಬಹುದು? ಖಳ ಎಂದಷ್ಟೇ ಅಲ್ಲ, ಅಸಭ್ಯ ಸಂಭಾಷಣೆಗಳ ವಿಚಾರದಲ್ಲಿ ಮಹಿಳಾ ಪಾತ್ರಗಳೂ ಹಿಂದೆ ಬೀಳುವುದಿಲ್ಲ. ನಾಯಕನ ತಾಯಿಯಂತೂ ಈ ವಿಚಾರದಲ್ಲಿ ನಿಜಕ್ಕೂ ಅಮ್ಮನೇ! ಹಾಗಾದರೆ ಪ್ರೇಕ್ಷಕರ ಪಾಡೇನು? ಚಿತ್ರ ಪೂರ್ತಿ ನೋಡಲು ತಾಳ್ಮೆಯಿರದ ಪ್ರೇಕ್ಷಕರು ಕೂಡ ಬೈದುಕೊಂಡೇ ಹೊರಗೆ ಬರುತ್ತಾರೆ!

ಮುಖ್ಯಮಂತ್ರಿ ಮತ್ತು ಆತನ ಪುತ್ರನಿಗೆ ಹಾಲು ಮಾರುವ ಸಾಮಾನ್ಯ ಮಹಿಳೆ ಮತ್ತು ಆಕೆಯ ಪುತ್ರನೊಂದಿಗೆ ನಡೆಯುವ ಹೋರಾಟ ಚಿತ್ರದ ಮುಖ್ಯ ಕತೆ. ಆದರೆ ಈ ಹೋರಾಟ ಎನ್ನುವುದು ಬೈಗುಳ, ಹೊಡೆದಾಟ ಮತ್ತು ಕೊಲೆಗಳಿಗೆ ಮಾತ್ರ ಸೀಮಿತವಾಗಿರುವುದು ದುರಂತ. ಹಾಲು ಮಾರುವ ಯುವಕ ವಿಷ್ಣುವೇ ಕತೆಯ ನಾಯಕ. ಮುಖ್ಯಮಂತ್ರಿ ಮತ್ತು ರೌಡಿ ಜಯರಾಜ್ ಕಡೆಯಿಂದ ಆತನ ಹತ್ಯೆಯಾಗುತ್ತದೆ. ನಾಯಕನ ಹತ್ಯೆಯ ಬಳಿಕ ಕತೆ ಹೇಗೆ ಮುಂದುವರಿಸುತ್ತಾರೆ ಎನ್ನುವ ಕುತೂಹಲ ಬಹಳ ಹೊತ್ತು ಉಳಿಯುವುದಿಲ್ಲ. ದೆಹಲಿಯಲ್ಲಿದ್ದ ವಿಷ್ಣುವಿನ ಸಹೋದರ ಶಿವನ ಆಗಮನವಾಗುತ್ತದೆ. ಹಾಗೆ ಎಲ್ಲ ದ್ವಿಪಾತ್ರದ ನಾಯಕರ ಚಿತ್ರಗಳಲ್ಲಿರುವಂತೆ ಶಿವ ಸಂಹಾರ ರುದ್ರನಾಗಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುತ್ತಾನೆ. ಚಿತ್ರದ ಟ್ರೇಲರ್ ನಲ್ಲಿ ನ್ಯಾಯಾಧೀಶೆಯ ಆಕ್ರೋಶ ನೋಡಿ ಅಚ್ಚರಿ ಪಟ್ಟಿದ್ದವರಿಗೆ ಚಿತ್ರ ಅಂಥ ನೂರು ಅಚ್ಚರಿಗಳಿಂದ ಬೆಚ್ಚಿ ಬೀಳಿಸುತ್ತದೆ. ಪೊಲೀಸ್ ಅಧಿಕಾರಿಗಳು, ನ್ಯಾಯಾಂಗ ವ್ಯವಸ್ಥೆ ‌ಎಲ್ಲವೂ ಫೇಕ್ ಎಂದು ತೋರಿಸುತ್ತಾರೆ. ದೃಶ್ಯಗಳಲ್ಲಿ ಲಾಜಿಕ್ ಇಲ್ಲದಿರಬಹುದು. ಆದರೆ ಕತೆಯಲ್ಲೇ ಲಾಜಿಕ್ ಇಲ್ಲವೆಂದ ಮೇಲೆ ಹೇಗೆ ಎನ್ನುವುದಕ್ಕೆ ನಿರ್ದೇಶಕರೇ ಉತ್ತರಿಸಬೇಕು.

ಹಾಗಾದರೆ ಚಿತ್ರ ಯಾರಿಗೂ ಇಷ್ಟವಾಗುವುದಿಲ್ಲವೇ ಎನ್ನುವ ಸಂದೇಹ ಮೂಡಬಹುದು. ಫೇಸ್‌ಬುಕ್‌ ಜಗಳವನ್ನು ಇಷ್ಟಪಡುವವರು ಖಂಡಿತವಾಗಿ ನೋಡಬೇಕಾದ ಚಿತ್ರ ಇದು! ಯಾಕೆಂದರೆ ಅಲ್ಲಿ ಸಾಮಾನ್ಯವಾಗಿ ಯಾವುದೇ ಪಕ್ಷ ಅಥವಾ ವ್ಯಕ್ತಿಯ ವಿಚಾರದಲ್ಲಿ ಜಗಳ ಆರಂಭವಾದರೆ ಕೊನೆಗೆ ಅಮ್ಮನ್, ಅಕ್ಕನ್ ಎಂಬ ಮಾತುಗಳಿಂದ ಸೊಂಟದ ಕೆಳಗಿನ ಕಮೆಂಟ್ ಗಳೇ ತುಂಬಿಕೊಂಡಿರುವುದನ್ನು ಕಾಣಬಹುದಾಗಿದೆ. ಬಹುಶಃ ಚಿತ್ರಕ್ಕೆ ಸಂಭಾಷಣೆ ಬರೆದವರು ಅವುಗಳಿಂದಲೇ ಸ್ಫೂರ್ತಿ ಪಡೆದಿರಬೇಕು. ಅಂಥ ಕಮೆಂಟ್ ಗಳನ್ನು ತಾರೆಯರ ಬಾಯಲ್ಲಿ ಕೇಳಲು ಉತ್ಸಾಹ ಇರುವವರು ನೋಡಲೇಬೇಕಾದ ಚಿತ್ರ ಇದು.

ನಾಯಕನಾಗಿ ಸತೀಶ್ ಗೆ ಇದು ಹೊಡೆದಾಟದ ಚಿತ್ರ ಎನ್ನುವುದಕ್ಕಿಂತ ಹೊಡೆತ ನೀಡುವಂಥ ಚಿತ್ರ ಎನ್ನಬೇಕು. ಅವರ ಕಂಠದಲ್ಲಿನ ಗಡಸುತನವನ್ನು ಹೊರತುಪಡಿಸಿ ಪೂರ್ತಿ ಚಿತ್ರದಲ್ಲಿ ಮೆಚ್ಚುವಂಥ ಯಾವುದೇ ಅಂಶವಿಲ್ಲ ಎನ್ನಬಹುದು. ನಾಯಕಿಯಾಗಿ ರೋಶಿನಿ  ಇರುವ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಭಾವನೆಗಳಿಗೆ ಕೊಳ್ಳಿಯಿಡುವಂಥ ಪಾತ್ರದಲ್ಲಿ ಭಾವನಾ ರಾವ್ ನಟಿಸಿದ್ದಾರೆ. ಮುಖ್ಯಮಂತ್ರಿ ಪಾತ್ರದಲ್ಲಿನ ಗಿರಿರಾಜ್ ರನ್ನು ಹೊರತು ಪಡಿಸಿ ಎಲ್ಲರೂ ಅಬ್ಬರಿಸುವಿಕೆಯಲ್ಲೇ ಕಳೆದುಹೋಗಿದ್ದಾರೆ. ನಿರ್ಮಾಪಕ ಯೋಗೇಶ್ ಖಳನಾಗಿ ಪ್ರಥಮ ‌ಚಿತ್ರದಲ್ಲಿ ಭರವಸೆ ಮೂಡಿಸಿದ್ದಾರೆ. ಪಾತ್ರಗಳಾಗಿ ಒಂಬತ್ತು ಮಂದಿ ನಿರ್ದೇಶಕರಿದ್ದರೂ, ಚಿತ್ರ ಇಷ್ಟು ಕಳಪೆಯಾಗಿ ಬಂದಿರುವುದು ದುರಂತ. ಬೈಗುಳ ಪ್ರಿಯರು ನೋಡಿ ಬಯ್ಯಬಹುದಾದ ಚಿತ್ರ. ಟೈಗರ್ ಗಲ್ಲಿ ಚಿತ್ರದ ಭಾಷೆ ಅರ್ಥವಾದರೆ ಟೈಗರ್ ಕೂಡ ಗಲ್ಲಿ ಬಿಟ್ಟು ಕಾಡಿಗೆ ಓಡಿ ಹೋಗುವುದು ಖಚಿತ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)