varthabharthi

ನಿಮ್ಮ ಅಂಕಣ

ಚಾಲಕರ ನಿರ್ಲಕ್ಷಕ್ಕೆ ಕೊನೆಯಿಲ್ಲವೇ?

ವಾರ್ತಾ ಭಾರತಿ : 31 Oct, 2017
-ರಿಯಾಝ್ ಅಹ್ಮದ್, ರೋಣ

ಮಾನ್ಯರೆ,

ಮೊನ್ನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಮಾಚನಹಳ್ಳಿ ಗೇಟ್ ಬಳಿ ಮದುವೆ ದಿಬ್ಬಣ ಹೊರಟಿದ್ದ ಗೂಡ್ಸ್ಸ್ ಟೆಂಪೊ ಅಪಘಾತಕ್ಕೀಡಾಗಿ 9 ಜನರ ಬಲಿ ತೆಗೆದುಕೊಂಡಿದ್ದು ಆಘಾತಕಾರಿ ಸುದ್ದಿಯಾಗಿದೆ. ಚಾಲಕನ ಒಂದು ಕ್ಷಣದ ನಿರ್ಲಕ್ಷಕ್ಕೆ ಎಷ್ಟ್ಟೊಂದು ಅಮಾಯಕ ಜೀವಗಳು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತವೆ ಎಂಬುದಕ್ಕೆ ಇದೊಂದು ಚಿಕ್ಕ ಉದಾಹರಣೆಯಾಗಿದೆ. ಇಂದು ಚಾಲನಾ ಪರವಾನಿಗೆ ಇಲ್ಲದೆ ಅದೆಷ್ಟೋ ಚಾಲಕರು ಗೂಡ್ಸ್ ಟೆಂಪೊ, ಟ್ರ್ಯಾಕ್ಟರ್‌ಗಳನ್ನು ಚಲಾಯಿಸುವವರು ನಮ್ಮ ನಡುವೆ ಇದ್ದಾರೆ, ಬೆಂಗಳೂರಿನಂತಹ ಮಹಾನಗರಗಳಲ್ಲಿ ಸಂಚಾರ ಪೊಲೀಸರು ಇವರನ್ನು ತಡೆದು ನಿಲ್ಲಿಸುವಂತೆ ಚಿಕ್ಕ ನಗರಗಳಲ್ಲಿ ಇಂತಹವರನ್ನು ಯಾರೂ ಕೇಳುವವರಿರುವುದಿಲ್ಲ. ಹೀಗಾಗಿ ತಮ್ಮ ವಾಹನಗಳಲ್ಲಿ ಕುರಿಗಳಂತೆ ಜನರನ್ನು ತುಂಬಿಕೊಂಡು ವಾಹನಗಳನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸುತ್ತಾರೆ, ಒಂದು ಕೈಯಲ್ಲಿ ಸ್ಟೇರಿಂಗ್ ಇದ್ದರೆ ಇನ್ನೊಂದು ಕೈಯಲ್ಲಿ ಗುಟ್ಕಾ ತಂಬಾಕಿನ ಪ್ಯಾಕೆಟ್‌ಗಳನ್ನು ಹರಿದು ತಿನ್ನಲು ಸರ್ಕಸ್ ಮಾಡುವುದಲ್ಲದೆ, ವಾಹನಗಳಲ್ಲಿ ಜೋರಾಗಿ ಹಾಡುಗಳನ್ನು ಹಾಕುತ್ತಾ ವಾಹನ ಚಲಾಯಿಸುತ್ತಾರೆ. ಇಂತಹ ಸಂದರ್ಭದಲ್ಲಿ ಅನೇಕ ಬಾರಿ ಇವರ ಹಿಂದೆ ಬರುವ ವಾಹನ ಸವಾರರು ನಿರಂತರ ಹಾರ್ನ್ ಬಾರಿಸುತ್ತ್ತಾ ಇವರ ಗಮನ ಸೆಳೆಯಬೇಕಾಗುತ್ತದೆ. ಅಲ್ಲದೆ ಕುಡುಕ ಚಾಲಕರು ಇವರಲ್ಲಿ ಸಾಮಾನ್ಯ. ಒಟ್ಟಾರೆ ಕಾನೂನು ವ್ಯವಸ್ಥೆಯ ಸಡಿಲತೆಯಿಂದಾಗಿ ಚಾಲಕರ ನಿರ್ಲಕ್ಷದ ಚಾಲನೆಗೆ ಇನ್ನೂ ಎಷ್ಟೊಂದು ಅಮಾಯಕ ಜೀವಗಳು ತಮ್ಮ ಪ್ರಾಣ ಕಳೆದುಕೊಳ್ಳಬೇಕಾಗುವುದೋ ಆ ದೇವರೇ ಬಲ್ಲ. ಇನ್ನಾದರೂ ನಮ್ಮ ವ್ಯವಸ್ಥೆ ಎಚ್ಚೆತ್ತುಕೊಂಡು ಇಂತಹ ಕಾನೂನು ಉಲ್ಲಂಘಿಸುವವರನ್ನು ನಿಯಂತ್ರಿಸಬೇಕು. ಇಲ್ಲದಿದ್ದರೆ ಬರುವ ದಿನಗಳಲ್ಲಿ ಭಾರೀ ಬೆಲೆ ತೆರಬೇಕಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)