varthabharthi

ನಿಮ್ಮ ಅಂಕಣ

ಭರವಸೆಗಳ ಭ್ರಮೆಯ ಬಡಕಲು ದೇಶ ಭಾರತ!

ವಾರ್ತಾ ಭಾರತಿ : 31 Oct, 2017
ಮಂಜುನಾಥ ಉಲುವತ್ತಿ ಶೆಟ್ಟರ್

ನಾವು ಸ್ವಾತಂತ್ರ್ಯ ಪಡೆದ ನಂತರದ ವರ್ಷಗಳಲ್ಲಿ ನಮ್ಮ ಬದುಕು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಬದಲಾಗಬೇಕಿತ್ತು. ಬರೀ ಭರವಸೆಗಳಲ್ಲಿಯೇ ಮುಖ ಹುದುಸಿಕೊಂಡು ಇದ್ದಿದ್ದರಲ್ಲಿಯೇ ಸಮಾಧಾನಪಡುತ್ತ, ಬೆತ್ತಲಾಗಿದ್ದರ ಪರಿವೆಯಿಲ್ಲದ ವಿಲಕ್ಷಣ ಸ್ಥಿತಿಗೆ ಜೋತುಬಿದ್ದು ಕಾಲದೂಡುತ್ತಿದ್ದೇವೆ. ನಿರೀಕ್ಷೆಗಳ ತಳಮಳದಲ್ಲಿ ದೇಶದ ಕೋಟಿ ಕೋಟಿ ಮುಗ್ಧರು, ಅವಕಾಶವಂಚಿತರು ತಮ್ಮ ಜೀವಿತದ ಅಮೂಲ್ಯ ಶ್ರಮವ್ಯಯಿಸಿ ಬೆವರನ್ನು ದಾರಿದ್ರ್ಯದ ಬೆಂಕಿಗೆ ಎರಕಹುಯ್ಯುತ್ತ ಬೂದಿಯಾಗುತ್ತಿದ್ದಾರೆ. ಅಂದಿನಿಂದ ಇಂದಿನವರೆಗೆ ನಾಯಕರೆನಿಸಿಕೊಂಡವರ ಭರವಸೆಗಳು ಎಂದೂ ಪರಿಹಾರವಾಗದ ಒಂದು ರೀತಿಯ ಮೋಸಗಳಾಗಿವೆ.

ನಾಯಕರನ್ನು ನಂಬಿ ಬತ್ತಲಾದ ಜನತೆಯ ಬದುಕು ದಿಕ್ಕೇ ತೋಚದಂತಹ ಕೊನೆದಾರಿಗೆ ಬಂದ ಸಹ ಪ್ರಯಾಣಿಗರಂತಾಗಿ ಸಿನಿಕರಾಗಿದ್ದಾರೆ. ನಾವು ನಮ್ಮದೇ ಆದ ವ್ಯವಸ್ಥೆಯನ್ನು ರಚಿಸಿಕೊಂಡ ನಂತರದಲ್ಲಿ ಒಂದು ದೇಶವಾಗಿ ಕಂಡುಕೊಂಡ ಪ್ರಗತಿ ಏನು? ಹೆಚ್ಚು ಜನಸಂಖ್ಯೆಯೇ ಹೊರತು ಸಮಾನವಾಗಿ ಹಂಚಿಕೊಂಡ ಗುಟುಕು ಗಂಜಿಯಲ್ಲ ಎಂಬುದು ಮಾತ್ರ ಮಡುಗಟ್ಟಿದ ಸತ್ಯ. ಹೆಚ್ಚು ಹೆಚ್ಚು ಶ್ರೀಮಂತರಿಂದ ಕೂಡಿದ ಶ್ರೀಮಂತಿಕೆಯ ದೇಶದಲ್ಲಿ ಮಾನ ಮುಚ್ಚಿಕೊಳ್ಳಲು ನಾಲ್ಕು ನೂಲೆಳೆಗಳಿಲ್ಲ. ಆಧುನಿಕತೆಯ ಓಲೈಕೆಯ ಕೊಳ್ಳಬಾಕ ಸೋಗಿನಲ್ಲಿ ನಗರಗಳ ಮೋಜಿನ ಜೀವನಕ್ಕೆ ಬದುಕನ್ನು ತೆರೆದು ದುರಾಸೆಯ ಭ್ರಮೆಯಲ್ಲಿ ತೇಲಿಬಿಟ್ಟು ಆಕಾಶದೆಡೆಗೆ ಮುಖಮಾಡಿ ಕೈಸುಟ್ಟುಕೊಳ್ಳುತ್ತಲೇ ಇರುವ ಕಾಲಘಟ್ಟವಿದು. ಸ್ವಾತಂತ್ರ್ಯ ಗಳಿಸಿಕೊಂಡು 70ವರ್ಷ ಗತಿಸಿದರೂ ಹಳೆಯ ಸಾಮ್ರಾಜ್ಯಶಾಹಿ ಆಡಳಿತ ದಾರುಣತೆಯನ್ನು ಮತ್ತೆ ಮುಂದುವರಿಸಿಕೊಂಡು ಹೋಗುತ್ತಿರುವುದೇ ಒಂದು ಅತ್ಯಂತ ಅಭಿವೃದ್ಧಿ ಸೋಗಿನ ವಿಕಾರ ವಾಸ್ತವ ದ ದಾರುಣ್ಯತೆಯಿದು.

 ನಮ್ಮ ದೇಶದ ಸಾಂಸ್ಕೃತಿಕ ಇತಿಹಾಸ ಎಷ್ಟ್ಟು ಪ್ರಾಚೀನವೋ ಅದರ ಬಡತನವು ಅಷ್ಟೇ ಪ್ರಾಚೀನವೆನ್ನುವಂತೆ ಕಡುಬಡತನದಲ್ಲಿ ಇಂದಿನ ಒಟ್ಟು ಭಾರತೀಯರಲ್ಲಿ 100ಕೋಟಿ ಜನರು ಮೂಲಭೂತ ಆವಶ್ಯಕತೆಗಳನ್ನು ಪಡೆದುಕೊಳ್ಳಲು ಇನ್ನೂ ಪರದಾಟ ತಪ್ಪಿಲ್ಲ. ಇಲ್ಲಿ ಕೆಲವರಿಗೆ ಹಸಿವೆನ್ನುವುದೇ ಗೊತ್ತಿಲ್ಲವಾದರೆ ಅಸಂಖ್ಯ ಜನಕೋಟಿಗೆ ಅದನ್ನು ಹೊರತುಪಡಿಸಿ ಬೇರೆ ಏನೂ ಗೊತ್ತೇ ಇಲ್ಲ. ದೈನಂದಿನ ಬದುಕಿನ ಯಾವ ಉನ್ನತ ಅನುಭವಗಳಾಗಲಿ, ಮೌಲ್ಯಗಳಾಗಲಿ ಕನಸಿನ ಲೋಕದ ಕಲ್ಪನೆಗಳಾಗಿ ಸಹ ಕಾಣುವುದಿಲ್ಲ. ತನ್ನ ದೈನಂದಿನ ಬದುಕಿಗೆ ಕನಿಷ್ಠ ಅಗತ್ಯದ ಆಹಾರ ದೊರಕಿಸಿಕೊಳ್ಳಲು ಒಟ್ಟು ದುಡಿತದಲ್ಲಿ ಶೇ.80ರಷ್ಟು ಭಾಗ ವ್ಯಯಿಸಿದರೂ ಸಾಕಾಗದು. ಕೇಂದ್ರ ಯೋಜನಾ ಆಯೋಗದ ದೇಶದಲ್ಲಿನ ಬಡತನದ ಮಿತಿ ನಿಗದಿಗೊಳಿಸಿತ್ತು. ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆ ನಿಗದಿಪಡಿಸಿದ ಬಳಕೆದಾರರ ವೆಚ್ಚದ ಮಾಪಕವನ್ನು ಆಧರಿಸಿ ನಮ್ಮ ದೇಶದಲ್ಲಿ ಬಡತನವನ್ನು ಅಳತೆ ಮಾಡಲಾಗಿತ್ತು.

1979ರಲ್ಲಿ ಅಧ್ಯಯನ ತಂಡವೊಂದು ಸಿದ್ಧಪಡಿಸಿದ ಮಾದರಿ ಸಮೀಕ್ಷೆಯಡಿ ಇದುವರೆಗೆ ಅಧ್ಯಯನ ನಡೆಸಲಾಗಿದೆ. 2011ರಲ್ಲಿ ಸುರೇಶ್ ತೆಂಡುಲ್ಕರ್ ನೇತೃತ್ವದ ಸಮಿತಿ ಬಡತನ ರೇಖೆಯ ವ್ಯಾಖ್ಯೆಯನ್ನು ಬದಲಾಯಿಸಿತು. ಆಹಾರ, ವಿದ್ಯಾಭ್ಯಾಸ, ಆರೋಗ್ಯ, ವಿದ್ಯುತ್ ಮತ್ತು ಸಾರಿಗೆ ಕ್ಷೇತ್ರದಲ್ಲಿ ಪ್ರತೀ ತಿಂಗಳು ಆಗುವ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ನಿಗದಿ ಮಾಡಿತ್ತು. ಅದರ ಪ್ರಕಾರ ಪ್ರತಿದಿನ ರೂ.27.2 ಅನ್ನು ವೆಚ್ಚ ಮಾಡಲು ಸಾಧ್ಯವಿಲ್ಲದ ಗ್ರಾಮೀಣ ಪ್ರದೇಶದ ವ್ಯಕ್ತಿ ಮತ್ತು ರೂ.33.3 ವೆಚ್ಚ ಮಾಡಲು ಸಾಮರ್ಥ್ಯವಿಲ್ಲದ ನಗರ ಪ್ರದೇಶದ ವ್ಯಕ್ತಿ ಬಡತನ ರೇಖೆಗಿಂತ ಕೆಳಗೆ ವಾಸಿಸುವ, ಕೆಳಗಿರುವ ಜನರು ಎಂದು ನಿಗದಿ ಮಾಡಿತ್ತು. ಈ ಅಸಂಬದ್ಧ ಶಿಪಾರಸುಗಳು ಗೊಂದಲವನ್ನುಂಟು ಮಾಡಿ ಇತಿಹಾಸ ಸೇರಿ ಯಥಾಸ್ಥಿತಿಯನ್ನು ಕಾಪಾಡಿದ ಒಂದು ಸಾಧನೆಯ ಸಮಾಧಾನವಷ್ಟೇ.

ನಮ್ಮ ದೇಶದಲ್ಲಿನ ಬಡತನದ ಇರುವಿಕೆಗೆ ಕಾರಣವಾದ ರೂಢಿಗತ ಅಜ್ಞಾನ, ಅನಕ್ಷರತೆ, ಕುರುಡು ನಂಬಿಕೆ, ಮೌಢ್ಯ ಇವು ಒಂದರೊಳಗೊಂದು ತೆಕ್ಕೆ ಬಿದ್ದಿರುವ ಸಂಗತಿಗಳಾಗಿವೆ. ಯಾರು ಬಡವರಾಗಿರುತ್ತಾರೋ ಅವರು ಅನಕ್ಷರಸ್ಥರೂ, ಮೂಢರೂ, ಜೀತಗಾರರು ಆಗಿರುತ್ತಾರೆ. ಬಡತನದೊಂದಿಗೆ ಜಾತಿಪದ್ಧತಿ ಕೂಡ ಈ ದೇಶವನ್ನು ಕಾಡುವ ಒಂದು ಶಾಪ. ಸೂಕ್ಷ್ಮ ಸಂವೇದನಾಶೀಲ ಜನರಿಗೆ ಇದು ಒಂದು ರೀತಿಯಲ್ಲಿ ಪರಿಹಾರವಾಗದ ಸಮಸ್ಯೆ ಎಂಬ ಗೊಂದಲ ಕಾಡುತ್ತದೆ. ಕಳೆದ 7 ದಶಕಗಳಲ್ಲಿ ಶೇ.100ಕ್ಕೆ 100ರಷ್ಟು ಸಾಕ್ಷರರಾಗಿಲ್ಲ. ಇದಕ್ಕಾಗಿ ಅಂತಾರಾಷ್ಟ್ರೀಯ ನಿಧಿಯ ನೆರವು ಬಂದರೂ ಸಹ ಸಂಕಲ್ಪಬಾಹಿರವಾದ ಸರಕಾರಗಳು ಹಾಗೂ ಶ್ರದ್ಧೆಯಿಲ್ಲದ ಪೋಷಕರ ಅನಾದರಗಳಿಂದ ಈ ಸಮಸ್ಯೆ ಇನ್ನೂ ಜೀವಂತ. ಇನ್ನ್ನು ಪ್ರಗತಿ ಆಗಿದೆ ಯಾರದು? ಕಾಲೇಜುಗಳು, ವಿಶ್ವವಿದ್ಯಾನಿಲಯಗಳ ಸಂಖ್ಯೆಯು ಬೆಳೆಯುತ್ತಲೇ ಇವೆ.

ಆದರೆ ನಮ್ಮ ಒಟ್ಟು ಜನರ ಪೈಕಿ ಶೇ.70ರಷ್ಟು ರೈತರು, ಕಾರ್ಮಿಕ, ಅವಕಾಶವಂಚಿತರ ಸಾಕ್ಷರತೆಯ ಸಂಖ್ಯೆ ಶೇ.38ನ್ನೂ ದಾಟಿಲ್ಲ. ನಮ್ಮ ದೇಶದ 56 ಲಕ್ಷ ಹಳ್ಳಿಗಳಲ್ಲಿ ರೈತರ, ಕೂಲಿಕಾರರ ವಾಸ್ತವ ಇನ್ನೂ ದಾರುಣಸ್ಥಿತಿಯಲ್ಲಿಯೇ ಇದೆ. ಜಾಗತೀಕರಣದ ಪ್ರಭಾವ ಹೆಚ್ಚಾಗಿ ನಿರಂತರ ಏರುತ್ತಿರುವ ಬೆಲೆಗೆ ಅವಶ್ಯಕ ದಿನಸಿ ಕೊಂಡುಕೊಳ್ಳುವುದು ದುಸ್ತರವಾಗಿದೆ. ದೇಶವನ್ನು ಇಲ್ಲಿಯವರೆಗೆ ಆಳಿದವರು ಕೊಟ್ಟ ಭರವಸೆಗಳು ದಾರಿದ್ರ್ಯದ ಪರಮಾವಧಿಯಲ್ಲಿ ಬೆಂದ ಜನರಿಗೆ ಎಲ್ಲಿಲ್ಲದ ಭ್ರಮೆ ಹಿಡಿಸಿದ ನಂಬಿಕೆಗಳಾಗಿವೆ. ಈ ನಂಬಿಕೆಗಳು ಮೋಸಗಳಾಗಿ ತಂತ್ರಗಳಾಗುವ ತಾರ್ಕಿಕ ಕೊನೆ ಗೊತ್ತಿಲ್ಲದ ಕಾರಣ ಮತ್ತೆ ದಾರಿದ್ರ್ಯದ ಅಜ್ಞಾನದಲ್ಲೇ ಜೀವನ ತಳ್ಳುವಂಥ ಸ್ಥಿತಿ ನಿರ್ಮಾಣವಾಗಿರುವುದು ಮಾತ್ರ ಸತ್ಯ. ‘ಉಳುವವನಿಗೆ ಭೂಮಿ’ ಎಂಬುದು ಸಮಾಜವಾದ ಸಿದ್ಧಾಂತದಿಂದ ಪುಸ್ತಕದಾಚೆ ಇನ್ನೂ ಹೊರಬಾರದ ಒಂದು ಒಳ್ಳೆಯ ಮಾತು.

ಸ್ವಾತಂತ್ರಾ ನಂತರದಲ್ಲಿ ಕೃಷಿಯೋಗ್ಯ ಭೂಮಿಯು ಶೇ.1ರಷ್ಟು ಸಹ ಭೂ-ಸುಧಾರಣೆ ಕಾಯ್ದೆಯಿಂದ ಉಳುವವರಿಗೆ ದೊರಕಿಲ್ಲ ಎಂದು ಕೃಷಿತಜ್ಞ ಡೇವಿಡ್ ಸೆಲ್‌ಬೋರ್ನ್‌ ಅವರು 40 ವರ್ಷಗಳ ಹಿಂದೆ ಹೇಳಿರುವುದು ಸತ್ಯ ಸಂಗತಿಯಾಗಿದೆ. ಭಾರತದಲ್ಲಿ 400 ದಶಲಕ್ಷ ಎಕರೆ ಕೃಷಿಯೋಗ್ಯ ಭೂಮಿ ಇದ್ದು ಅದರಲ್ಲಿ 60 ದಶಲಕ್ಷ ಎಕರೆ ಭೂಮಿ ಭೂ-ಮಾಲಕರ ಹೆಚ್ಚುವರಿ ಭೂಮಿಯಾಗಿದೆ. ಇದರ ಕೆಲವೇ ಭಾಗಾಂಶ ಮಾತ್ರ ಸ್ವಾತಂತ್ರಾ ನಂತರದ ವರ್ಷಗಳಲ್ಲಿ ಹಂಚಲ್ಪಟ್ಟಿದೆ. ಇಂದು ಕೃಷಿಕರ ಪರಿಕರ ಎಷ್ಟೇ ಹಳೆಯದಾಗಿದ್ದರೂ ರಾಷ್ಟ್ರದ ರಾಷ್ಟ್ರೀಯ ಆದಾಯಕ್ಕೆ ಅವರ ಕೊಡುಗೆ ಮೂರರಲ್ಲಿ ಎರಡಂಶ ಎನ್ನುವುದು ಇಲ್ಲಿ ಗಮನಾರ್ಹ. ಆಹಾರಧಾನ್ಯ ಉತ್ಪಾದನೆಯಲ್ಲಿ ಇಂದು ಸ್ವಾವಲಂಬನೆ ಸಾಧಿಸಿದ್ದರೂ ವ್ಯಾಪಕ ಬಡತನ, ಹಸಿವು, ಅನಕ್ಷರತೆ, ನಿರುದ್ಯೋಗಗಳು ಇನ್ನೂ ಹೆಚ್ಚಾಗುತ್ತಲಿವೆಯೇ ಹೊರತು ಕಡಿಮೆಯಾಗುತ್ತಿಲ್ಲವಲ್ಲ ಎಂಬುದೇ ಯಕ್ಷಪ್ರಶ್ನೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)