varthabharthi

ನಿಮ್ಮ ಅಂಕಣ

ಟಿಪ್ಪು: ತಪ್ಪು-ಒಪ್ಪು! ಬಹಿರಂಗವಾಗಿ ಚರ್ಚಿಸೋಣ..

ವಾರ್ತಾ ಭಾರತಿ : 1 Nov, 2017
-ಟಿ.ಗುರುರಾಜ್, ಮೈಸೂರು

ಮಾನ್ಯರೆ,

ಟಿಪ್ಪು ಜಯಂತಿಯ ಬೆನ್ನಲ್ಲಿ ಈ ನೆಲದ ಹಿಂದೂ -ಮುಸ್ಲಿಮರ ನಡುವೆ ದ್ವೇಷ ಹುಟ್ಟಿಸುವ ಕೆಲಸ ಮತ್ತೆ ಆರಂಭವಾಗಿದೆ.ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಧರ್ಮಕ್ಕೆ ಬೆಂಕಿ ಇಡುವ ಹೊಲಸು ಕೆಲಸವನ್ನು ನಡೆಸಲಾಗುತ್ತಿದೆ.

ಸರಿ ಸುಮಾರು ಎರಡೂವರೆ ಶತಮಾನಗಳ ಹಿಂದೆ ಆಳಿ, ಅಳಿದುಹೋದ ರಾಜನನ್ನು, ಸಮಾಧಿಯಿಂದ ಹೊರಗೆಳೆದು ಮತ್ತೆ-ಮತ್ತೆ ಇರಿದಿರಿದು ಕೊಲ್ಲಲಾಗುತ್ತಿದೆ. ಟಿಪ್ಪುಓರ್ವ ರಾಜನಾಗಿದ್ದ ಎಂಬುದಕ್ಕಿಂತ ಹೆಚ್ಚಾಗಿ, ಆತನೂ ಓರ್ವ ಮನುಷ್ಯನಾಗಿದ್ದ ಎನ್ನುವುದನ್ನು ಮರೆಯಲಾಗುತ್ತಿದೆ.

ತಾನು ಹುಟ್ಟಿದ ಧರ್ಮಕ್ಕೆ ಸಹಜವಾಗಿಯೇ ನಿಷ್ಠನಾಗಿದ್ದ ಆ ಸುಲ್ತಾನ, ತನ್ನ ರಾಜ್ಯದಲ್ಲಿದ್ದ ಬಹುಸಂಖ್ಯಾತರ ಧಾರ್ಮಿಕ ಆಚರಣೆ, ಪೂಜಾ ವಿಧಿ ವಿಧಾನಗಳಿಗೆ ಕಟ್ಟು ಹಾಕಿರಲಿಲ್ಲ. ಟಿಪ್ಪುವಿನ ಕಾಲದಲ್ಲಿ ಇಸ್ಲಾಂ ವೈಭವೀಕೃತಗೊಂಡು, ಹಿಂದೂ ಧರ್ಮ ಅವನತಿಗೊಂಡಿರಲಿಲ್ಲ. ಟಿಪ್ಪುತನ್ನ ಧರ್ಮಕ್ಕೆ ನೀಡಿದ ಕೊಡುಗೆಗಳು ಎಲ್ಲಿಯೂ ಉಲ್ಲೇಖಗೊಂಡಿಲ್ಲ.

ಹಾಗಂಥ ಟಿಪ್ಪುತಪ್ಪುಗಳನ್ನೇ ಮಾಡದ, ಮಹಾ ಪುರುಷನೆಂದು ವಾದಿಸುವುದು ನನ್ನ ಉದ್ದೇಶವಲ್ಲ. ಆತನಿಂದ ನಡೆದಿರಬಹುದಾದ ಪ್ರಮಾದಗಳ ಪಟ್ಟಿ ಇದ್ದವರು ಆಧಾರ ಸಮೇತ ನಿರೂಪಿಸಿ, ಹಾಗೆಯೇ ಒಳ್ಳೆಯ ಸಂಗತಿಗಳನ್ನೂ ಸಮಾಜದ ಮುಂದಿಡಿ.

ಟಿಪ್ಪುಕುರಿತಂತೆ ಹುಟ್ಟಿಸಲಾಗುತ್ತಿರುವ, ಎಬ್ಬಿಸಲಾಗುತ್ತಿರುವ ಎಲ್ಲ ಪ್ರಶ್ನೆಗಳಿಗೆ, ಷಡ್ಯಂತ್ರ ಮತ್ತು ಹುನ್ನಾರಗಳಿಗೆ ಯಾವುದೇ ವೇದಿಕೆಯಲ್ಲಿ ಉತ್ತರ ನೀಡಲು ನಾನು ಸಿದ್ಧನಿದ್ದೇನೆ. ಟಿಪ್ಪುಮಾಡಿದ ಅನ್ಯಾಯಗಳೇನು, ಆತ ಮತಾಂಧನೆ, ಹಿಂದೂ ದ್ರೋಹಿಯೇ, ದೇವಾಲಯಗಳ ಭಂಜಕನೇ, ಕನ್ನಡ ದ್ರೋಹಿಯೇ ಎಂಬೆಲ್ಲ ಸಂಗತಿಗಳು ರಾಜ್ಯದ ಜನರೆದುರು ಬಿಚ್ಚಿಕೊಳ್ಳಲಿ. ಹುದುಗಿಟ್ಟ ಸತ್ಯ ಹೊರಬರಲಿ. ನನ್ನ ಈ ಪ್ರಯತ್ನದ ಹಿಂದಿರುವುದು ಸತ್ಯದ ಹುಡುಕಾಟ ಮಾತ್ರ.

ಈ ನೆಲದ ಮುಸ್ಲಿಮರನ್ನು ಓಲೈಸುವುದಕ್ಕೆ ನಾನು ರಾಜಕಾರಣಿಯಲ್ಲ. ಟಿಪ್ಪುವನ್ನು ಹೊಗಳುವುದರಿಂದ ನನಗೆ ಯಾವ ಕಿರೀಟವೂ ದೊರಕುವುದಿಲ್ಲ; ಅದರ ಅಗತ್ಯವೂ ನನಗಿಲ್ಲ. ಯಾವುದೇ ಧರ್ಮ ಗ್ರಂಥಗಳಿಗಿಂತಲೂ ದೊಡ್ಡದಾದ, ನನ್ನ ದೇಶದ ಸಂವಿಧಾನವೇ ನನಗೆ ಪವಿತ್ರ ಗ್ರಂಥ. ಭರತ ಭೂಮಿಯ ಹಿರಿಮೆಗಿಂತ ಯಾವ ಜಾತಿಯೂ ನನಗೆ ದೊಡ್ಡದಲ್ಲ. ಮತ ಧರ್ಮಕ್ಕಿಂತ ನನಗೆ ಮನುಷ್ಯ ಧರ್ಮವೇ ದೊಡ್ಡದು. ಮನುಷ್ಯ -ಮನುಷ್ಯರ ನಡುವೆ ಒಡಕುಂಟು ಮಾಡುವ ಕೆಟ್ಟ ಕೆಲಸದ ಬದಲು, ಕಟ್ಟಿರುವ ಗೋಡೆಯನ್ನು ಕೆಡವಲು ಆದೀತಾ ಎಂಬುದಷ್ಟೇ ನನ್ನ ಕನಸು.

ಬನ್ನಿ, ಟಿಪ್ಪು: ತಪ್ಪು-ಒಪ್ಪುಗಳ ಬಗ್ಗೆ ಬಹಿರಂಗವಾಗಿ ಚರ್ಚಿಸೋಣ. ಗದ್ದಲ -ಗಲಭೆಗಳಿಗೆ ಆಸ್ಪದ ನೀಡದ ಹಾಗೆ ಕವಿದಿರುವ ಕತ್ತಲೆಗೆ ಬೆಳಕಿನ ಸ್ಪರ್ಶ ನೀಡೋಣ. ಸರಿ-ತಪ್ಪುಗಳೆರಡೂ ಹೊರ ಬರಲಿ,ಯಾರು ಸರಿ, ಯಾವುದು ಸರಿ ಎಂಬುದನ್ನು ಕನ್ನಡಿಗರೇ ನಿರ್ಧರಿಸಲಿ. ಇದು ಬಹಿರಂಗ ಸವಾಲಲ್ಲ; ಮುಕ್ತ ಆಹ್ವಾನ. ಧಾರ್ಮಿಕ ಸಂಘಟನೆಗಳಲ್ಲದ, ರಾಜಕೀಯದಿಂದ ಹೊರತಾದ ಯಾವುದೇ ವೇದಿಕೆಯಲ್ಲಿ ಮಾತು-ಕಥೆ ನಡೆಸಲು ನಾನು ಸಿದ್ಧನಿದ್ದೇನೆ. ಸ್ಥಳ ಮತ್ತು ದಿನವನ್ನು ನಿಗದಿ ಮಾಡಿ, ನಿಮ್ಮ್ಮಾಡನೆ ವಿಚಾರ ವಿನಿಮಯಕ್ಕೆ ನಾನು ತಯಾರಿದ್ದೇನೆ.

 

Comments (Click here to Expand)